ಮೊನ್ಪಾ ಸಮುದಾಯದ ಮದುವೆಗಳಲ್ಲಿ ಕರ್ಚುಂಗ್ ಸೋಬಾನೆಯಂತಹ ಹಾಡುಗಳನ್ನು ಹಾಡುತ್ತಾರೆ. ಅದಕ್ಕೆ ಪ್ರತಿಯಾಗಿ ಅವರು ಬೇಯಿಸಿದ ಕುರಿಯ ಒಂದು ಭಾಗವನ್ನು ಪಡೆಯುತ್ತಾರೆ. ಅವರ ಹಾಡುಗಾರಿಕೆಯನ್ನು ಮದುವೆ ಮನೆಗೆ ಗೌರವ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಅವರನ್ನು ಹೆಣ್ಣಿನ ಕಡೆಯವರು ಹಾಡಲು ಆಹ್ವಾನಿಸುತ್ತಾರೆ.
ಮೊನ್ಪಾ ಸಮುದಾಯದಲ್ಲಿ ಗಂಡು ಹೆಣ್ಣು ಮದುವೆಗೆ ಒಪ್ಪಿದ ನಂತರ ಒಟ್ಟು ಎರಡು ದಿನಗಳ ಮದುವೆ ಆಚರಣೆಯನ್ನು ನಡೆಸಲಾಗುತ್ತದೆ. ಈ ಆಚರಣೆಯು ವರನು ಸ್ಥಳೀಯ ಮದ್ಯವಾದ ಆರಾ ಕುಡಿದು ಹೆಣ್ಣಿನ ಮನೆಗೆ ಹೊರಡುವುದರೊಂದಿಗೆ ಆರಂಭವಾಗುತ್ತದೆ. ಅಲ್ಲಿ ಸಂಬಂಧಿಕರೆಲ್ಲ ಸೇರಿ ಕುಣಿದು ಔತಣ ನಡೆಸುತ್ತಾರೆ. ಈ ಸಮಾರಂಭದಲ್ಲೇ ಕರ್ಚುಂಗ್ ತಾನು ಯಾವುದೇ ಪಕ್ಕವಾದ್ಯಗಳಿಲ್ಲ ಪ್ರದರ್ಶನ ನೀಡುತ್ತಾರೆ. ಮರುದಿನ ಮದುವೆ ಗಂಡು ಹೆಣ್ಣಿನೊಂದಿಗೆ ತನ್ನ ಮನೆಗೆ ಬರುತ್ತಾನೆ.
ಕರ್ಚುಂಗ್ ಅವರ ನಿಜವಾದ ಹೆಸರು ರಿಂಚಿನ್ ತಾಶಿ. ಆದರೆ ಊರಿನಲ್ಲಿ ಎಲ್ಲರೂ ಅವರನ್ನು ಕರ್ಚುಂಗ್ ಎನ್ನುವ ಅಡ್ಡ ಹೆಸರಿನಿಂದಲೇ ಗುರುತಿಸುತ್ತಾರೆ. ಅವರು ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆಯ ಚಾಂಗ್ಪಾ ರಸ್ತೆಯಲ್ಲಿ ಸಣ್ಣ ಕಿರಾಣಿ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಅವರು ಕೆಲಸ ಮಾಡುವಾಗ ಹಿನ್ನೆಲೆಯಲ್ಲಿ ರೇಡಿಯೋ ಮೂಲಕ ಹೊರ ಹೊಮ್ಮುವ ಜನಪ್ರಿಯ ಗೀತೆಗಳು ಅವರ ಸಂಗೀತ ಪ್ರೀತಿಯನ್ನು ತೋರಿಸುತ್ತದೆ. ಕರ್ಚುಂಗ್ ಆರಾ ಕುರಿತಾಗಿಯೂ ಹಾಡುತ್ತಾರೆ. “ಅದನ್ನು ನಾನು ಸಾಮಾನ್ಯವಾಗಿ ಕೃಷಿ ಮಾಡುವಾಗ ಅಥವಾ ಸ್ನೇಹಿತರೊಂದಿಗೆ ಮಾತನಾಡುವಾಗ ಹಾಡುತ್ತೇನೆ” ಎಂದು ಹೇಳುತ್ತಾರೆ.
53 ವರ್ಷದ ಅವರು ತಮ್ಮ ಪತ್ನಿ ಪೆಮ್ ಜೊಂಬಾ ಅವರೊಂದಿಗೆ ಇರುತ್ತಾರೆ. ತಾನೇ ಕುಟುಂಬದ ಬಾಸ್ ಎಂದು ಹೇಳುತ್ತಾರೆ. ಆದರೆ ಇಲ್ಲಿನ ಫಲವತ್ತಾದ ಕಣಿವೆಯಲ್ಲಿ ತಮ್ಮ ಸರಿಸುಮಾರು ಒಂದು ಎಕರೆ ಭೂಮಿಯನ್ನು ಕೃಷಿ ಮಾಡುವುದು ಪೆಮ್. "ನಾವು ಭತ್ತ, ಮೆಕ್ಕೆಜೋಳ, ಬದನೆಕಾಯಿ, ಕಹಿ ಬದನೆಕಾಯಿ, ಲೈ ಸಾಗ್ (ಸಾಸಿವೆ ಎಲೆ), ಈರುಳ್ಳಿ ಮತ್ತು ಹೂಕೋಸು ಬೆಳೆಯುತ್ತೇವೆ" ಎಂದು ಅವರು ಹೇಳುತ್ತಾರೆ. ಬೆಳೆದ ಭತ್ತ, ಧಾನ್ಯ ಹಾಗೂ ತರಕಾರಿಗಳನ್ನು ಬಹುತೇಕ ಕುಟುಂಬವೇ ಬಳಸುತ್ತದೆ. ಉಳಿಕೆಯನ್ನು ಅಲ್ಲಿನ ದಿರಾಂಗ್ ಬ್ಲಾಕ್ ಬಳಿಯ ರಾಮ ಕ್ಯಾಂಒ ವಾರದ ಸಂತೆಯಲ್ಲಿ ಮಾರುತ್ತಾರೆ.





