ಅಂಬಾಪಾನಿ ಗ್ರಾಮದ ಜನರು ಒಬ್ಬ ಅಥವಾ ಇಬ್ಬರು ಸಂಸದರಿಗೆ ಆತಿಥ್ಯ ನೀಡುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ತಮ್ಮ ಮನೆಯ ಬೀಸುಕಲ್ಲಿನಿಂದ ತಾಜಾ ಹಿಟ್ಟು ಬೀಸಿ ತಯಾರಿಸಿದ ಜೋಳದ ಭಕ್ರಿ ಹಾಗೂ ಮಕ್ಕಳು ಆಡಲು ಹೋದಾಗ ಕಿತ್ತು ತಂದ ಚರೋಲಿ ಹಣ್ಣುಗಳನ್ನು ಅವರಿಗೆ ನೀಡಿ ಉಪಚರಿಸುವ ದಿನಕ್ಕಾಗಿ ಈ ಊರಿನ ಜನರು ಕಾಯುತ್ತಿದ್ದಾರೆ.
ಜನರು ಬಿದಿರು ಮತ್ತು ಸಗಣಿ ಬೆರೆಸಿ ತಮ್ಮ ಮನೆಗಳನ್ನು ನಿರ್ಮಿಸಿ ಐದು ದಶಕಗಳು ಕಳೆದಿವೆ. ಕಳೆದ ಐದು ದಶಕಗಳಲ್ಲಿ ಇಲ್ಲಿಗೆ ಒಬ್ಬ ರಾಜಕೀಯ ಪ್ರತಿನಿಧಿಯೂಭೇಟಿ ನೀಡಿಲ್ಲ. ಸತ್ಪುರದ ಕಲ್ಲಿನ ಇಳಿಜಾರುಗಳ ನಡುವೆ ಹರಡಿರುವ ಈ ಊರು ಮೋಟಾರು ರಸ್ತೆಯಿಂದ 13 ಕಿಲೋಮೀಟರ್ ಎತ್ತರದಲ್ಲಿದೆ.
818 (ಜನಗಣತಿ 2011) ಜನಸಂಖ್ಯೆಯನ್ನು ಹೊಂದಿರುವ ಅಂಬಾಪಾನಿಗೆ ರಸ್ತೆ ಸಂಪರ್ಕವಿಲ್ಲ, ವಿದ್ಯುತ್ ಮಾರ್ಗವಿಲ್ಲ, ಹರಿಯುವ ನೀರಿನ ವ್ಯವಸ್ಥೆಯಿಲ್ಲ, ಮೊಬೈಲ್ ಫೋನ್ ನೆಟ್ವರ್ಕ್ ಇಲ್ಲ, ನ್ಯಾಯಬೆಲೆ ಅಂಗಡಿಯಿಲ್ಲ, ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ ಮತ್ತು ಅಂಗನವಾಡಿ ಕೇಂದ್ರವಿಲ್ಲ. ನಿವಾಸಿಗಳೆಲ್ಲರೂ ಪವಾರರಾಗಿದ್ದು, ಅವರನ್ನು ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳಡಿ ಪಟ್ಟಿ ಮಾಡಲಾಗಿದೆ. 120 ಕುಟುಂಬಗಳಲ್ಲಿ ಹೆಚ್ಚಿನವು ತಮ್ಮ ವಂಶಾವಳಿಯನ್ನು ಮಧ್ಯಪ್ರದೇಶದಲ್ಲಿ ಬೇರುಗಳನ್ನು ಹೊಂದಿರುವ ನಾಲ್ಕು ಅಥವಾ ಐದು ದೊಡ್ಡ ಕುಲಗಳೊಂದಿಗೆ ಗುರುತಿಸಿಕೊಳ್ಳುತ್ತವೆ, ಇದು ಉತ್ತರಕ್ಕೆ ಕೇವಲ 30 ಕಿ.ಮೀ ದೂರದಲ್ಲಿದೆ.
ನೆಟ್ವರ್ಕ್ ಸಿಗದ ಈ ಊರಿನಲ್ಲಿ ಫೋನ್ ಅಥವಾ ಟಿವಿ ಕೂಡಾ ಇಲ್ಲ. ಪ್ರಧಾನಿ ಮೋದಿಯವರ ಮಂಗಳಸೂತ್ರದ ಕುರಿತಾದ ಎಚ್ಚರಿಕೆಯಿಂದ ಹಿಡಿದು ಕಾಂಗ್ರೆಸ್ ಪಕ್ಷದ ಸಂವಿಧಾನ ರಕ್ಷಣೆಯ ವಿಷಯದ ತನಕ 2024ರ ಲೋಕಸಭಾ ಚುನಾವಣೆಯ ಪ್ರಚಾರದ ಕುರಿತಾದ ವಿಷಯಗಳು ಅಂಬಾಪಾನಿ ಮತದಾರರನ್ನು ತಲುಪಿಲ್ಲ.
ಚುನಾವಣೆಯಲ್ಲಿ ತಮ್ಮನ್ನು ಆಕರ್ಷಿಸಬಹುದಾದ ಆಶ್ವಾಸನೆಯೆಂದರೆ “ಬಹುಶಃ ರಸ್ತೆ” ಎಂದು ಉಂಗ್ಯಾ ಗುರ್ಜಾ ಪವಾರ ಹೇಳುತ್ತಾರೆ. 56 ವರ್ಷದ ಅವರು ಈ ಕುಗ್ರಾಮದ ಮೂಲ ನಿವಾಸಿಗಳ ವಂಶಗಳಲ್ಲಿ ಒಂದಕ್ಕೆ ಸೇರಿದವರು. ಸುಮಾರು ಒಂದು ದಶಕದ ಹಿಂದೆ ಅವರು ಒಂದಷ್ಟು ಹಣವುಳಿಸಿ ಉಕ್ಕಿನ ಅಲ್ಮೇರಾವೊಂದನ್ನು ಖರೀದಿಸಿದರು. 75 ಕೇಜಿ ತೂಕದ ಆ ಅಲ್ಮೆರಾವನ್ನು ನಾಲ್ವರು ಗಂಡಸರು “ಸ್ಟ್ರೆಚರ್ ರೀತಿಯಲ್ಲಿ ಹಿಡಿದು” ಎತ್ತರದಲ್ಲಿರುವ ಮನೆಗೆ ಸಾಗಿಸಿದ್ದರು.
ಇಲ್ಲಿಂದ 13 ಕಿ,ಮೀ. ದೂರದಲ್ಲಿರುವ ಮೊಹ್ರಾಲೆ ಮಾರುಕಟ್ಟೆಗೆ ಕೃಷಿ ಉತ್ಪನ್ನಗಳನ್ನು ದ್ವಿಚಕ್ರ ವಾಹನಗಳಲ್ಲಿ ಸಾಗಿಸಲಾಗುತ್ತದೆ. ಒಂದು ಬಾರಿಗೆ ಇಳಿಜಾರು ಹಾದಿ ಒಂದೊಂದು ಕ್ವಿಂಟಾಲ್ ಧಾನ್ಯಗಳನ್ನು ಸಾಗಿಲಾಗುತ್ತದೆ. ಈ ದಾರಿಯು ಕಡಿದಾಗಿದ್ದು ಹಲವು ಏರು ತಗ್ಗುಗಳಿಂದ ಕೂಡಿದೆ. ಜೊತೆಗೆ ಕಡಿದಾದ ತಿರುವುಗಳು ಸಡಿಲ ಜಲ್ಲಿಕಲ್ಲು, ಹಾಗೂ ಸಣ್ಣ ಜರಿಗಳು ಮತ್ತು ಕೆಲವೊಮ್ಮೆ ಇಲ್ಲಿ ಕರಡಿಗಳು ಸಹ ಎದುರಾಗುತ್ತವೆ.
“ಆದರೆ ರಸ್ತೆಯ ಆಗಮನ ಮರ ಕಡಿಯುವಿಕೆಯನ್ನು ಹೆಚ್ಚಿಸುವ ಸಾಧ್ಯತೆಯ ಕುರಿತಾಗಿಯೂ ಯೋಚಿಸಬೇಕಾಗುತ್ತದೆ” ಎಂದು ಉಂಗ್ಯಾ ಹೇಳುತ್ತಾರೆ.



















