ಗೋಕುಲ್ ಹಗಲು ರಾತ್ರಿ ಬೆಂಕಿಯೆದುರು ದುಡಿಯುತ್ತಾರೆ. ಅವರು ಕಬ್ಬಿಣವನ್ನು ಕೆಂಪಗೆ ಕಾಯಿಸಿ, ಬಡಿದು ಅದಕ್ಕೆ ರೂಪರೇಖೆಯನ್ನು ನೀಡುತ್ತಾರೆ. ಬೆಂಕಿಯಿಂದ ಹೊರಡುವ ಕಿಡಿಗಳು ಅವರ ಬಟ್ಟೆ ಮತ್ತು ಶೂಗಳ ಮೇಲೆ ರಂಧ್ರವನ್ನು ಉಂಟುಮಾಡಿವೆ. ಅವರ ಕೈಗಳ ಮೇಲಿನ ಸುಟ್ಟಗಾಯಗಳು ಭಾರತದ ಆರ್ಥಿಕತೆಯ ಚಕ್ರಗಳನ್ನು ಚಲಿಸುವಂತೆ ಮಾಡುವಲ್ಲಿ ಅವರ ಕಠಿಣ ಪರಿಶ್ರಮದ ಪಾಲಿರುವುದಕ್ಕೆ ಸಾಕ್ಷಿ ಹೇಳುತ್ತಿದ್ದವು.
ಬಜೆಟ್ ಕುರಿತು ಅವರನ್ನು ಕೇಳಿದಾಗ, ಅವರು ಮರಳಿ “ಕ್ಯಾ ಹುಂದಾ ಹೈ [ಹಾಗಂದ್ರೆ ಏನು]?” ಎಂದು ಕೇಳಿದರು.
2025ರ ಬಜೆಟ್ ಮಂಡಿಸಿ ಆಗಷ್ಟೇ 48 ಗಂಟೆಗಳು ಕಳೆದಿರಬಹುದು. ಅದರ ಕುರಿತಾದ ಸುದ್ದಿಗಳು ದೇಶಾದ್ಯಂತ ಮಿಂಚಿನಂತೆ ಹರಡುತ್ತಿತ್ತು. ಆದರೆ ಬಗ್ರಿಯಾ ಸಮುದಾಯದ ಅಲೆಮಾರಿ ಕಮ್ಮಾರ ಗೋಕುಲ್ ಪಾಲಿಗೆ ಇದು ಯಾವ ಬದಲಾವಣೆಯನ್ನೂ ತಂದಿರಲಿಲ್ಲ.
"ನೋಡಿ, ಯಾರೂ ನಮಗಾಗಿ ಏನನ್ನೂ ಮಾಡಿಲ್ಲ. ಸುಮಾರು 700-800 ವರ್ಷಗಳು ಇದೇ ರೀತಿ ಕಳೆದಿವೆ. ನಮ್ಮ ತಲೆಮಾರುಗಳು ಪಂಜಾಬಿನ ಮಣ್ಣಿನಲ್ಲಿ ಹೂತುಹೋಗಿವೆ. ಯಾರೂ ನಮಗೆ ಏನನ್ನೂ ನೀಡಿಲ್ಲ" ಎಂದು ನಲವತ್ತರ ಹರೆಯದ ಈ ಕಮ್ಮಾರ ಹೇಳುತ್ತಾರೆ.
ಪಂಜಾಬ್ ರಾಜ್ಯದ ಮೊಹಾಲಿ ಜಿಲ್ಲೆಯ ಮೌಲಿ ಬೈದ್ವಾನ್ ಗ್ರಾಮದಲ್ಲಿನ ತಾತ್ಕಾಲಿಕ ಗುಡಿಸಲಿನಲ್ಲಿ ಗೋಕುಲ್ ತನ್ನ ಕೆಲಸ ಮಾಡುತ್ತಿದ್ದರು. ಇಲ್ಲಿ ಅವರು ರಾಜಸ್ಥಾನದ ಚಿತ್ತೋರಗಢದಲ್ಲಿ ಮೂಲವನ್ನು ಹೊಂದಿರುವ ಆದಿವಾಸಿ ಸಮುದಾಯದ ಜನರೊಂದಿಗೆ ವಾಸಿಸುತ್ತಿದ್ದಾರೆ.
“ಸರ್ಕಾರ ನಮಗೆ ಏನು ನೀಡಬಲ್ಲದು?” ಎಂದು ಅವರು ಕೇಳುತ್ತಾರೆ. ಸರ್ಕಾರ ಅವರಿಗೆ ಏನನ್ನೂ ನೀಡದಿರಬಹುದು. ಆದರೆ ಅವರು ತಾನು ಖರೀದಿಸುವ ಪ್ರತಿ ತುಂಡು ಕಬ್ಬಿಣಕ್ಕೆ ಖಂಡಿತವಾಗಿಯೂ ಶೇಕಡಾ 18ರಷ್ಟು ತೆರಿಗೆ ಪಾವತಿಸುತ್ತಾರೆ. ಜೊತೆಗೆ ಕಬ್ಬಿಣವನ್ನು ಕಾಯಿಸುವ ಕಲ್ಲಿದ್ದಲಿಗೆ ಶೇಕಡಾ 5ರಷ್ಟು ತೆರಿಗೆ ಪಾವತಿಸುತ್ತಾರೆ. ತಮ್ಮ ಉಪಕರಣಗಳಿಗೆ - ಸುತ್ತಿಗೆ ಮತ್ತು ಕುಡಗೋಲು - ಮತ್ತು ಅವರು ತಿನ್ನುವ ಆಹಾರದ ಪ್ರತಿಯೊಂದು ಕಣಕ್ಕೂ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು