10 ವರ್ಷವೂ ಆಗಿರದ ಎಜಾಝ್, ಯಾಸಿರ್, ಮತ್ತು ಶಮೀಮಾ ಕೆಲವೇ ವರ್ಷಗಳನ್ನಷ್ಟೇ ಶಾಲೆಯಲ್ಲಿ ಕಳೆದಿದ್ದರು. ಪ್ರತಿ ವರ್ಷ ಅವರು ನಾಲ್ಕು ತಿಂಗಳ ಕಾಲ ತಮ್ಮ ಅಲೆಮಾರಿ ಪೋಷಕರೊಡನೆ ತೆರಳುತ್ತಿದ್ದ ಕಾರಣ ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಪ್ರಾಥಮಿಕ ಶಿಕ್ಷಣ ಕಲಿಕೆಯಲ್ಲಿ ಬಹಳ ಹಿಂದೆ ಬೀಳುತ್ತಿದ್ದರು. ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಮಕ್ಕಳಿಗೆ ಬಹಳ ಮುಖ್ಯವಾಗಿರುವ ಮೂಲ ಗಣಿತ, ವಿಜ್ಞಾನ, ಮತ್ತು ಸಮಾಜ ವಿಜ್ಞಾನದ ಪಾಠಗಳನ್ನು ತಪ್ಪಿಸಿಕೊಳ್ಳುವುದರ ಜೊತೆಗೆ ಪದಜ್ಞಾನ ಮತ್ತು ಬರವಣಿಗೆಯ ಕೌಶಲಗಳಲ್ಲೂ ಹಿಂದೆ ಬೀಳುತ್ತಿದ್ದರು.
ಅವರು 10 ವರ್ಷದವರಾಗಿರುವಾಗ ಅವರು ಅದುವರೆಗೆ ಕಳೆದುಕೊಂಡ ತರಗತಿಗಳನ್ನು ಲೆಕ್ಕ ಹಾಕಿದರೆ ಅದು ಒಂದು ಶೈಕ್ಷಣಿಕ ವರ್ಷಕ್ಕೆ ಸಮಾನಾಗಿರುತ್ತದೆ. ಇದು ಮುಂದಿನ ಬೆಂಚಿನ ವಿದ್ಯಾರ್ಥಿಗಳು ಕೂಡ ಸರಿದೂಗಿಸಿಕೊಳ್ಳಲು ಸಾಧ್ಯವಿಲ್ಲದ ಕಲಿಕಾ ನಷ್ಟ.
ಆದರೆ ಪರಿಸ್ಥಿತಿ ಈಗ ಹಾಗಿಲ್ಲ. ಈಗ ಈ ಮಕ್ಕಳ ಜೊತೆ ತಾನೂ ಪಾದ ಬೆಳೆಸುತ್ತಿದ್ದಾರೆ ಅವರ ಸಂಚಾರಿ ಶಿಕ್ಷಕ ಅಲಿ ಮೊಹಮ್ಮದ್. ಈ 25 ವರ್ಷದ ಶಿಕ್ಷಕ ಈಗ ತಮ್ಮ ಸೇವೆಯ ಮೂರನೇ ವರ್ಷವನ್ನು ಕಳೆಯುತ್ತಿದ್ದಾರೆ. ಅಲಿ ಕಾಶ್ಮೀರದ ಲಿಡ್ಡರ್ ಕಣಿವೆಯಲ್ಲಿರುವ ಗುಜ್ಜರ್ ನೆಲೆಯಾದ ಖಲಾನ್ನಲ್ಲಿ ಮಕ್ಕಳಿಗೆ ಕಲಿಸಲು ಬಂದಿದ್ದಾರೆ. ಅವರು ಮುಂದಿನ ನಾಲ್ಕು ಬೇಸಗೆ ತಿಂಗಳುಗಳಲ್ಲಿ (ಜೂನ್ - ಸೆಪ್ಟೆಂಬರ್) ಇಲ್ಲಿದ್ದು, ತಮ್ಮ ಪ್ರಾಣಿಗಳನ್ನು ಮೇಯಿಸಲು ತಂಗಿರುವ ಇಲ್ಲಿನ ಗುಜ್ಜರ್ ಕುಟುಂಬಗಳ ಮಕ್ಕಳಿಗೆ ಪಾಠ ಮಾಡಲಿದ್ದಾರೆ.
“ಬಹುಶಃ ನಾನು ಕೂಡಾ ಶಿಕ್ಷಕಿಯಾಗುತ್ತೇನೆ” ಎನ್ನುತ್ತಾ ನಾಚಿಕೆ ಸ್ವಭಾವದ ಶಮೀಮಾ ಜಾನ್ ತನಗೆ ಸರ್ಕಾರ ಕೊಟ್ಟಿರುವ ನೋಟ್ ಪುಸ್ತಕದಲ್ಲಿ ಮುಖ ಮುಚ್ಚಿಕೊಂಡಳು. ಅಲಿಯವರು ಕೆಲವೊಮ್ಮೆ ತಮ್ಮ ಸ್ವಂತ ಹಣ ಉಪಯೋಗಿಸಿ ಮಕ್ಕಳಿಗೆ ಅಗತ್ಯವಿರುವ ಪಠ್ಯ ಸಾಮಾಗ್ರಿಗಳನ್ನು ತರಿಸಿಕೊಡುತ್ತಾರೆ.












