“ನನ್ನ ಬಳಿ ಯಾವತ್ತೂ ಸಾಕಷ್ಟು ಹಣವಿರುವುದಿಲ್ಲ” ಎನ್ನುವ ಬಬಿತಾ ಮಿತ್ರಾ ಕುಟುಂಬದ ಬಜೆಟ್ ಯೋಜಿಸುವ ಕುರಿತು ನಮ್ಮೊಂದಿಗೆ ಮಾತನಾಡುತ್ತಿದ್ದರು. “ಆಹಾರಕ್ಕೆಂದು ಎತ್ತಿಟ್ಟುಕೊಂಡ ಹಣವನ್ನು ಔಷಧಿಗಳಿಗೆ ಬಳಸುತ್ತೇನೆ. ಮಕ್ಕಳ ಓದಿಗೆಂದು ಎತ್ತಿಟ್ಟ ಹಣವನ್ನು ರೇಷನ್ ಖರೀದಿಸಲು ಬಳಸಬೇಕಾಗುತ್ತದೆ. ಇದೆಲ್ಲ ಸಾಲದೆನ್ನುವಂತೆ ಪ್ರತಿ ತಿಂಗಳು ನನ್ನ ಮಾಲಕರಿಂದ ಸಾಲ ಮಾಡಬೇಕಾಗುತ್ತದೆ…”
ಕೋಲ್ಕತಾದ ಕಾಳಿಕಾಪುರ ಪ್ರದೇಶದ ಎರಡು ಕುಟುಂಬಗಳ ಮನೆಯಲ್ಲಿ ದುಡಿಯುವ ಈ 37 ವರ್ಷದ ಮನೆಕೆಲಸಗಾರ್ತಿ, ಆ ಮೂಲಕ ವರ್ಷಕ್ಕೆ ಕೇವಲ 1 ಲಕ್ಷ ರೂಪಾಯಿಗಳಷ್ಟನ್ನು ಗಳಿಸುತ್ತಾರೆ. ವರು ತಾನು 10 ವರ್ಷದ ಬಾಲಕಿಯಿದ್ದ ಸಮಯದಲ್ಲಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಅಸನ್ನಗರದಿಂದ ನಗರಕ್ಕೆ ವಲಸೆ ಬಂದರು. "ನನ್ನ ಹೆತ್ತವರಿಗೆ ಮೂರು ಮಕ್ಕಳನ್ನು ಸಾಕಲು ಸಾಧ್ಯವಾಗಲಿಲ್ಲ. ಹೀಗಾಗಿ, ಮೂಲತಃ ನಮ್ಮ ಊರಿನ ಕುಟುಂಬದವರ ಮನೆಗೆಲಸಕ್ಕೆಂದು ನನ್ನನ್ನು ಕೋಲ್ಕತ್ತಾ ನಗರಕ್ಕೆ ಕಳುಹಿಸಲಾಯಿತು."
ಅಂದಿನಿಂದ ಬಬಿತಾ ಹಲವಾರು ಮನೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಕೋಲ್ಕತಾ ನಗರಕ್ಕೆ ಬಂದ ಇಷ್ಟು ವರ್ಷಗಳಲ್ಲಿ 27 ಕೇಂದ್ರ ಬಜೆಟ್ಟುಗಳು ಮಂಡಿಸಲ್ಪಟ್ಟಿವೆ. ಆದರೆ ಇವು ಅವರ ಮೇಲೆ ಅಥವಾ ಭಾರತದಲ್ಲಿ ಅಧಿಕೃತವಾಗಿ ಗುರುತಿಸಲ್ಪಟ್ಟ 4.2 ದಶಲಕ್ಷಕ್ಕೂ ಹೆಚ್ಚು ಮನೆಕೆಲಸಗಾರರ ಮೇಲೆ ಬೀರಿರುವ ಪರಿಣಾಮ ಕನಿಷ್ಠ. ಸ್ವತಂತ್ರ ಗಣತಿಗಳು ಈ ಕೆಲಸಗಾರರ ನಿಜವಾದ ಸಂಖ್ಯೆ 50 ಮಿಲಿಯನ್ ಮೀರಬಹುದು ಎಂದು ಹೇಳುತ್ತವೆ.
2017ರಲ್ಲಿ ಬಬಿತಾ ದಕ್ಷಿಣ 24 ಪರಗಣದ ಉಚ್ಛೇಪೋಟಾ ಪಂಚಾಯತ್ ವ್ಯಾಪತಿಯ ಭಾಗಬನ್ಪುರ ಪ್ರದೇಶದಲ್ಲಿ ವಾಸಿಸುವ ಬದುಕಿನ ನಾಲಕ್ನೇ ದಶಕದ ಕೊನೆಯಲ್ಲಿದ್ದ ಅಮಲ್ ಮಿತ್ರಾ ಎಂಬ ವ್ಯಕ್ತಿಯನ್ನು ವಿವಾಹವಾದರು. ಕಾರ್ಖಾನೆಯಲ್ಲಿ ಕೂಲಿ ಕಾರ್ಮಿಕನಾಗಿದ್ದ ಆ ವ್ಯಕ್ತಿ ಕುಟುಂಬವನ್ನು ನಡೆಸಲು ಅಷ್ಟಾಗಿ ಕೈಜೋಡಿಸದ ಕಾರಣ ಬಬಿತಾರ ಜವಾಬ್ದಾರಿಗಳು ದ್ವಿಗುಣಗೊಂಡವು. 5 ಮತ್ತು 6 ವರ್ಷದ ಇಬ್ಬರು ಗಂಡು ಮಕ್ಕಳು, 20 ರ ಹರೆಯದ ಮಲಮಗಳು, ಅತ್ತೆ, ಬಬಿತಾ ಮತ್ತು ಅಮಲ್ ಸೇರಿದಂತೆ ಆರು ಜನರ ಕುಟುಂಬವನ್ನು ಬಬಿತಾರ ಸಂಪಾದನೆ ಸಲಹುತ್ತಿದೆ.
ನಾಲ್ಕನೇ ತರಗತಿಗೆ ಶಾಲೆಯಿಂದ ಹೊರಬಿದ್ದ ಬಬಿತಾರಿಗೆ ನಿರ್ಮಲಾ ಸೀತಾರಾಮನ್ 2025-26 ರ ಸಾಲಿನಲ್ಲಿ ಘೋಷಿಸಿರುವ ಮಹಿಳಾ ನೇತೃತ್ವದ ಬೆಳವಣಿಗೆಯ ಪರಿಕಲ್ಪನೆ ಅಥವಾ ʼಜೆಂಡರ್ ಬಜೆಟಿಂಗ್ʼ ಕುರಿತು ಸ್ವಲ್ಪವೇ ತಿಳಿದಿದೆ. ಆದರೆ ಬಬಿತಾರ ಬದುಕಿನ ಅನುಭವಗಳು ಈ ಜ್ಞಾನಗಳನ್ನು ಮೀರಿದ್ದು. “ಕಷ್ಟದ ಸಮಯದಲ್ಲಿ ಮಹಿಳೆಯರ ಕೈ ಹಿಡಿಯಲು ಯಾವುದೇ ಸಹಾಯವಿಲ್ಲದಿರುವಾಗ, ಮಹಿಳೆಯರ ಪರ ಎಂದು ಕರೆದುಕೊಳ್ಳುವ ಬಜೆಟ್ಟಿನಿಂದ ಏನು ಪ್ರಯೋಜನ?” ಎಂದು ಕೇಳುವ ಅವರಲ್ಲಿ ಕೋವಿಡ್ - 19 ಸಮಯದಲ್ಲಿ ಅನುಭವಿಸಿದ ಸಂಕಷ್ಟಗಳ ಗಾಯ ಮನಸ್ಸಿನಲ್ಲಿ ಹಸಿಯಾಗಿಯೇ ಇದೆ.
![](/media/images/02a-IMG20250203132847-SK-Sarkar_makes_such.max-1400x1120.jpg)
![](/media/images/02b-IMG20250203133738-SK-Sarkar_makes_such.max-1400x1120.jpg)
ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅನುಭವಿಸಿದ ಭಯಾನಕ ಸಮಯವನ್ನು ನೆನಪಿಸಿಕೊಂಡಾಗ ಬಬಿತಾ ಮಿತ್ರಾರ ಕಣ್ಣುಗಳು ತುಂಬಿ ತುಳುಕುತ್ತವೆ. ಸರ್ಕಾರದ ಹೆಚ್ಚಿನ ಸಹಾಯವಿಲ್ಲದೆ ತನ್ನ ಗರ್ಭಧಾರಣೆಯ ಕೊನೆಯ ತ್ರೈಮಾಸಿಕದಲ್ಲಿ, ಮತ್ತು ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ (ಐಸಿಡಿಎಸ್) ಅಡಿಯಲ್ಲಿ ಪೌಷ್ಠಿಕಾಂಶ ಮತ್ತು ಪ್ರೋಟೀನ್ ಪೂರಕಗಳ ಅನುಪಸ್ಥಿತಿಯಲ್ಲಿ ಅವರು ವಿಟಮಿನ್ ಕೊರತೆಗಳನ್ನು ಎದುರಿಸಿದರು, ಅದರ ಚಿಹ್ನೆಗಳು ಈಗಲೂ ದೇಹದಲ್ಲಿ ಗೋಚರಿಸುತ್ತವೆ
![](/media/images/03a-IMG20250203132920-SK-Sarkar_makes_such.max-1400x1120.jpg)
![](/media/images/03c-IMG20250203132155-SK-Sarkar_makes_such.max-1400x1120.jpg)
ಶಾಲೆಗೆ ಹೋಗುವ ಇಬ್ಬರು ಚಿಕ್ಕ ಹುಡುಗರ ತಾಯಿಯಾದ ಅವರು ಕೋಲ್ಕತ್ತಾದ ಎರಡು ಮನೆಗಳಲ್ಲಿ ಮನೆಗೆಲಸ ಮಾಡುವ ಮೂಲಕ ಗಳಿಸುವ ಸಣ್ಣ ಆದಾಯದೊಂದಿಗೆ ಬದುಕು ನಡೆಸಲು ಹೆಣಗಾಡುತ್ತಿದ್ದಾರೆ. ಕಷ್ಟದಲ್ಲಿದ್ದಾಗ ಸಹಾಯಕ್ಕೆ ಬಾರದೆ ಸರ್ಕಾರವು ತನ್ನದು ಮಹಿಳಾ ಕೇಂದ್ರಿತ ಬಜೆಟ್ ಎಂದು ಬೀಗುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಅವರು ಹೇಳುತ್ತಾರೆ
"ಒಟಾ ಅಮರ್ ಜಿಬನೇರ್ ಸಬ್ಚೇ ಖರಾಪ್ ಸಮಯ್. ಪೀಟ್ ತಖನ್ ದ್ವಿತಿಯೋ ಸಂತಾನ್, ಪ್ರಥಮ್ ಜಾನ್ ತಖಾನೊ ಅಮರ್ ದೂಧ್ ಖಾಯ್.. ಶರೀರ್ ಕೋನೊ ಜೋರ್ ಚಿಲೋ ನಾ. [ಅದು ನನ್ನ ಬದುಕಿನ ಅತ್ಯಂತ ಕೆಟ್ಟ ಕಾಲ. ಆಗ ನಾನು ಎರಡನೇ ಮಗುವಿನ ಬಸುರಿಯಾಗಿದ್ದೆ. ಜೊತೆಗೆ ಮೊದಲ ಮಗುವಿಗೆ ಹಾಲು ಕುಡಿಸುತ್ತಿದ್ದೆ. ನನ್ನ ದೇಹದಲ್ಲಿ ತ್ರಾಣವೇ ಇದ್ದಿರಲಿಲ್ಲ." ಅದನ್ನು ನೆನಪಿಸಿಕೊಳ್ಳುವಾಗ ಅವರು ಈಗಲೂ ಬಿಕ್ಕಳಿಸುತ್ತಾರೆ. “ಆ ಸಮಯದಲ್ಲಿ ನನ್ನ ಜೀವ ಅದು ಹೇಗೆ ಉಳಿಯಿತೋ ಗೊತ್ತಿಲ್ಲ.”
“ಸಮಾಜಸೇವಾ ಸಂಸ್ಥೆಗಳು ಮತ್ತು ಕೆಲವು ದಯಾಪರ ಜನರು ಹಂಚುತ್ತಿದ್ದ ಪಡಿತರ ಪಡೆಯುವ ಸಲುವಾಗಿ ಬಸುರಿನ ಕೊನೆಯ ತಿಂಗಳುಗಳಲ್ಲಿ ದೊಡ್ಡ ಹೊಟ್ಟೆ ಹೊತ್ತುಕೊಂಡು ಮೈಲುಗಟ್ಟಲೆ ನಡೆಯುತ್ತಿದ್ದೆ. ಅಲ್ಲಿ ಹೋದ ನಂತರ ಮತ್ತೆ ಆ ಉದ್ದನೆಯ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾಗುತ್ತಿತ್ತು” ಎಂದು ಅವರು ಹೇಳುತ್ತಾರೆ.
"[ಪಿಡಿಎಸ್ ಅಡಿಯಲ್ಲಿ] ಕೇವಲ 5 ಕಿಲೋಗ್ರಾಂಗಳಷ್ಟು ಉಚಿತ ಅಕ್ಕಿಯನ್ನು ನೀಡುವ ಮೂಲಕ ಸರ್ಕಾರವು ಕೈತೊಳೆದುಕೊಂಡಿತು. ಗರ್ಭಿಣಿಯರಿಗೆ ಸಿಗಬೇಕಾದ ಔಷಧಿಗಳು ಮತ್ತು ಆಹಾರ [ಪೌಷ್ಟಿಕಾಂಶ ಮತ್ತು ಪ್ರೋಟೀನ್ ಪೂರಕಗಳು] ಸಹ ನನಗೆ ಸಿಗಲಿಲ್ಲ" ಎಂದು ಅವರು ಹೇಳುತ್ತಾರೆ. ಕೊರೋನಾ ಪಿಡುಗಿನ ಸಮಯದಲ್ಲಿ ಉಂಟಾದ ಅಪೌಷ್ಟಿಕತೆಯಿಂದ ಬಂದಿದ್ದ ರಕ್ತಹೀನತೆ ಮತ್ತು ಕ್ಯಾಲ್ಸಿಯಂ ಕೊರತೆಯ ಚಿಹ್ನೆಗಳು ಈಗಲೂ ಕೈ ಮತ್ತು ಕಾಲುಗಳಲ್ಲಿ ಕಾಣುತ್ತಿದ್ದವು.
“ತನ್ನ ಹೆತ್ತವರಿಂದ ಅಥವಾ ಗಂಡನ ಕುಟುಂಬದಿಂದ ಯಾವುದೇ ಸಹಾಯ ದೊರಕದಿರುವ ಬಡ ಮಹಿಳೆಗೆ ಸರ್ಕಾರವಾದರೂ ಸಹಾಯ ಮಾಡಬೇಕು” ಎಂದ ಅವರು ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿರುವುದರ ಕುರಿತು ಮಾತನಾಡಿದರು. “ಹಾಗಾದರೆ ನಮ್ಮಂತಹ ಜನರ ಕತೆಯೇನು? ನಾವು ಖರೀದಿಸುವ ಪ್ರತಿಯೊಂದು ವಸ್ತುವಿಗೂ ತೆರಿಗೆ ಪಾವತಿಸುವುದಿಲ್ಲವೇ? ಸರ್ಕಾರ ದೊಡ್ಡ ದೊಡ್ಡ ಮಾತನಾಡುತ್ತದೆ, ಆದರೆ ಅದಕ್ಕೆ ಹಣ ಬರುವುದೇ ನಾವು ಖರೀದಿಸುವ ವಸ್ತುಗಳಿಗೆ ಪಾವತಿಸುವ ಖಜನಾ [ತೆರಿಗೆಯಿಂದ] ಮೂಲಕ” ಎನ್ನುತ್ತಾ ತಾನು ಕೆಲಸ ಮಾಡುವ ಮನೆಯ ಬಾಲ್ಕನಿಯಲ್ಲಿ ಒಣಗುತ್ತಿದ್ದ ಮಾಲಕರ ಬಟ್ಟೆಯನ್ನು ತೆಗೆಯಲು ಹೊರಟರು.
ಮತ್ತು ಮಾತು ಮುಗಿಸುತ್ತಾ ಅವರು, “ಸರ್ಕಾರ ನಮಗೆ ಸೇರಿದ್ದನ್ನು ನಮಗೆ ಕೊಟ್ಟು, ನಂತರ ತಾನು ಏನೋ ದೊಡ್ಡದಾಗಿ ಕೊಟ್ಟ ಹಾಗೆ ಗದ್ದಲ ಮಾಡುತ್ತದೆ” ಎಂದರು.
ಅನುವಾದ: ಶಂಕರ. ಎನ್. ಕೆಂಚನೂರು