"ನಾವು ತಲೆಮಾರುಗಳಿಂದ ಕೇವಲ ಎರಡು ಕೆಲಸಗಳನ್ನು ಮಾಡುತ್ತಿದ್ದೇವೆ - ದೋಣಿ ನಡೆಸುವುದು ಮತ್ತು ಮೀನುಗಾರಿಕೆ. ಉ [ನಿರು]ದ್ಯೋಗದ ಪ್ರರಿಸ್ಥಿತಿಯನ್ನು ಗಮನಿಸಿದರೆ, ನನ್ನ ಮಕ್ಕಳು ಸಹ ಇದನ್ನು ಮುಂದುವರಿಸಬೇಕಾಗುತ್ತದೆ ಎನ್ನಿಸುತ್ತದೆ" ಎಂದು ವಿಕ್ರಮಾದಿತ್ಯ ನಿಷಾದ್ ಹೇಳುತ್ತಾರೆ. ಅವರು ಕಳೆದ 20 ವರ್ಷಗಳಿಂದ ಗಂಗಾ ನದಿಯ ಒಂದು ಘಾಟ್ (ದಡ) ದಿಂದ ಮತ್ತೊಂದು ದಡಕ್ಕೆ ವಾರಣಾಸಿಯ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರನ್ನು ಸಾಗಿಸುತ್ತಿದ್ದಾರೆ.

ಗಂಗೆಯು ಹರಿಯುವ ಒಂದು ಸಾವಿರ ಕಿಲೋಮೀಟರಿಗೂ ಹೆಚ್ಚು ಪ್ರದೇಶದಲ್ಲಿ ನಿರುದ್ಯೋಗವು ಕಳೆದ ಐದು ವರ್ಷಗಳಿಂದ ಸುಮಾರು 50 ಪ್ರತಿಶತದಲ್ಲೇ ನಿಂತಿದೆ ಎಂದು ಇಂಡಿಯಾ ಎಂಪ್ಲಾಯ್ಮೆಂಟ್ ರಿಪೋರ್ಟ್ 2024 ಹೇಳುತ್ತದೆ.

"ಮೋದಿಜೀ 'ವೋಕಲ್ ಫಾರ್ ಲೋಕಲ್' ಮತ್ತು 'ವಿರಾಸತ್ ಹಿ ವಿಕಾಸ್ [ಪರಂಪರೆಯೇ ಅಭಿವೃದ್ಧಿ]' ಗಾಗಿ ಪ್ರಚಾರ ಮಾಡುತ್ತಿದ್ದಾರೆ. ದಯವಿಟ್ಟು ಹೇಳಿ ಆ ವಿರಾಸತ್ [ಪರಂಪರೆ] ಯಾರಿಗಾಗಿ? ಇದು ನಾವು, ಕಾಶಿ [ವಾರಣಾಸಿ] ಜನರಿಗಾಗಿಯೋ ಅಥವಾ ಹೊರಗಿನವರಿಗಾಗಿಯೋ?" ಎಂದು ಅವರು ಕೇಳುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಮೂರನೇ ಬಾರಿಗೆ ಆಯ್ಕೆಯಾದರು ಮತ್ತು ಅವರ ಪ್ರಚಾರ ನಮಗೆ ಸಾಕಾಗಿದೆ ಎಂದ ಈ ಅಂಬಿಗ, "ನಾವು ಅಭಿವೃದ್ಧಿಯನ್ನು ನೋಡಬೇಕು" ಎಂದು ಹೇಳಿದರು.

ವೀಕ್ಷಿಸಿ: ವಾರಣಾಸಿಯ ಅಂಬಿಗ

ʼದಯವಿಟ್ಟು ಹೇಳಿ ಆ ವಿರಾಸತ್ [ಪರಂಪರೆ] ಯಾರಿಗಾಗಿ? ಇದು ನಾವು, ಕಾಶಿ [ವಾರಣಾಸಿ] ಜನರಿಗಾಗಿಯೋ ಅಥವಾ ಹೊರಗಿನವರಿಗಾಗಿಯೋ?ʼ ಎಂದು ಅಂಬಿಗ ವಿಕ್ರಮಾದಿತ್ಯ ನಿಷಾದ್ ಕೇಳುತ್ತಾರೆ

2023ರ ಜನವರಿಯಲ್ಲಿ ಮೋದಿ ಪ್ರಾರಂಭಿಸಿದ ರಿವರ್‌ ಕ್ರೂಶ್‌ ವ್ಯವಸ್ತೆ ತಮ್ಮಂತಹ ಅಂಬಿಗರ ಉದ್ಯೋಗವನ್ನು ಕಸಿದುಕೊಂಡಿವೆ ಎಂದು ನಿಷಾದ್ ಹೇಳುತ್ತಾರೆ. "ಅಭಿವೃದ್ಧಿಯ ಹೆಸರಿನಲ್ಲಿ, ಅವರು [ಮೋದಿ] ಸ್ಥಳೀಯರ ಅಭಿವೃದ್ಧಿ ಮತ್ತು ಪರಂಪರೆಯನ್ನು ಕಸಿದುಕೊಂಡು ಹೊರಗಿನವರಿಗೆ ನೀಡುತ್ತಾರೆ" ಎಂದು ಅವರು ದೊಡ್ಡ ಮೂಲಸೌಕರ್ಯ ಯೋಜನೆಗಳಡಿ ಕೆಲಸಕ್ಕೆ ಬಂದ ಸ್ಥಳೀಯರಲ್ಲದವರ ಬಗ್ಗೆ ಮಾತನಾಡುತ್ತಾ ಹೇಳುತ್ತಾರೆ. ಈ ರಾಜ್ಯದ ಸರಾಸರಿ ಕಾರ್ಮಿಕನೊಬ್ಬ ತಿಂಗಳಿಗೆ 10,000 ರೂ.ಗಿಂತ ಸ್ವಲ್ಪ ಹೆಚ್ಚು ಗಳಿಸುವ ಸಾಧ್ಯತೆಯಿದೆ, ಇದು ದೇಶದ ಯಾವುದೇ ರಾಜ್ಯಕ್ಕಿಂತ ಕಡಿಮೆ.

ಹಿಂದೂಗಳು ಪವಿತ್ರವೆಂದು ಭಾವಿಸುವ ಈ ನದಿಯ ನೀರು ಮಲಿನಗೊಂಡಿರುವುದು ಇನ್ನೊಂದು ಸಮಸ್ಯೆ ಎನ್ನುತ್ತಾರೆ 40 ವರ್ಷದ ಈ ಅಂಬಿಗ. “ಅವರು ಗಂಗಾ ನದಿಯ ನೀರು ಈಗ ಸ್ವಚ್ಛಗೊಂಡಿದೆ ಎನ್ನುತ್ತಾರೆ. ಆದರೆ ಈ ಹಿಂದೆ ನಾವು ನದಿಗೆ ನಾಣ್ಯವನ್ನು ಎಸೆದರೆ ನೀರಿನ ಪಾರದರ್ಶಕತೆಯಿಂದಾಗಿ ಅದು ಕೆಳಗೆ ಹೋಗವವರೆಗೂ ಕಾಣುತ್ತಿತ್ತು. ಮತ್ತೆ ನಾವು ನದಿಗೆ ಹಾರಿ ಎತ್ತಿಕೊಂಡು ಬರಬಹುದಿತ್ತು. ಆದರೆ ಇಂದು ಯಾರಾದರೂ ನದಿಗೆ ಬಿದ್ದರೆ ಅವರ ಹೆಣ ತೆಗೆಯಲು ದಿನಗಟ್ಟಲೆ ಹುಡುಕಬೇಕಾಗುತ್ತದೆ” ಎಂದು ಅವರು ಹೇಳುತ್ತಾರೆ.

PHOTO • Jigyasa Mishra
PHOTO • Jigyasa Mishra

ಎಡಕ್ಕೆ : ಪ್ರಧಾನಿ ಮೋದಿ ಉದ್ಘಾಟಿಸಿದ ಕ್ರೂಸ್ (ವಿಹಾರ ನೌಕೆ) ಗಳಲ್ಲಿ ಒಂದಾದ ಅಲಕನಂದಾ , ದಡದಲ್ಲಿ ನಿಂತಿದೆ . ಬಲ : ನದಿಗೆ ಪ್ರಾರ್ಥನೆ ಸಲ್ಲಿಸುತ್ತಿರುವ ಹಿಂದೂ ಭಕ್ತರು

PHOTO • Jigyasa Mishra
PHOTO • Jigyasa Mishra

ಹಿಂದೂಗಳು ನದಿಯನ್ನು ಪವಿತ್ರವೆಂದು ಪರಿಗಣಿಸಿದರೂ , ಇತ್ತೀಚಿನ ವರ್ಷಗಳಲ್ಲಿ , ಮಾಲಿನ್ಯದ ಮಟ್ಟ ಹೆಚ್ಚಾಗಿದೆ . ಅಸ್ಸಿ ಘಾಟ್ ಬಳಿ ಗಂಗಾ ನದಿಗೆ ( ಬಲಕ್ಕೆ ) ಒಳಚರಂಡಿಗಳು ಸೇರಿ ಕೊಳ್ಳುತ್ತವೆ

ಮಾಲಿನ್ಯವನ್ನು ಕಡಿಮೆ ಮಾಡಿ ಸಂರಕ್ಷಣೆಯನ್ನು ಹೆಚ್ಚಿಸಲು ಮತ್ತು ಗಂಗಾ ನದಿಯನ್ನು ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರವು ಜೂನ್ 2014 ರಲ್ಲಿ 20,000 ಕೋಟಿ ರೂ.ಗಳ ಬಜೆಟ್ ವೆಚ್ಚದೊಂದಿಗೆ ನಮಾಮಿ ಗಂಗೆ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಆದರೂ, 2017ರ ವರದಿಯೊಂದು ನದಿಯ ಮೂಲದ ಬಳಿ ಮತ್ತು ವಾರಣಾಸಿಯಿಂದ ನೂರಾರು ಕಿಲೋಮೀಟರ್ ಮೇಲ್ಭಾಗದಲ್ಲಿರುವ ಹೃಷಿಕೇಶದಲ್ಲಿ ನೀರಿನ ಗುಣಮಟ್ಟ ಸೂಚ್ಯಂಕ (ಡಬ್ಲ್ಯುಕ್ಯೂಐ) ತುಂಬಾ ಕಳಪೆಯಾಗಿದೆ ಎಂದು ಹೇಳುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಕಟಿಸಿದ ಡಬ್ಲ್ಯುಕ್ಯೂಐ ಅಂಕಿಅಂಶಗಳು ಇದನ್ನು 'ಆತಂಕಕಾರಿ' ಎಂದು ಕರೆಯುತ್ತವೆ.

"ಆ ಕ್ರೂಸ್ ವಾರಣಾಸಿಯ ಪರಂಪರೆಯಾಗಲು ಹೇಗೆ ಸಾಧ್ಯ? ನಮ್ಮ ದೋಣಿಗಳು ಪರಂಪರೆಯ ಮುಖ, ವಾರಣಾಸಿಯ ಗುರುತು" ಎಂದು ಅವರು ತಮ್ಮ ದೋಣಿಯಲ್ಲಿ ಕುಳಿತು ಪ್ರವಾಸಿಗರಿಗಾಗಿ ಕಾಯುತ್ತಾ ಪರಿಗೆ ಹೇಳಿದರು. "ಅವರು ಅನೇಕ ಪ್ರಾಚೀನ ದೇವಾಲಯಗಳನ್ನು ಒಡೆದು ವಿಶ್ವನಾಥ ಮಂದಿರ ಕಾರಿಡಾರ್ ಮಾಡಿದರು. ಈ ಹಿಂದೆ ಯಾತ್ರಾರ್ಥಿಗಳು ವಾರಣಾಸಿಗೆ ಭೇಟಿ ನೀಡಿದಾಗ, ಅವರು 'ಬಾಬಾ ವಿಶ್ವನಾಥ'ಕ್ಕೆ ಹೋಗಬೇಕು ಎಂದು ಹೇಳುತ್ತಿದ್ದರು. ಈಗ ಅವರು 'ಕಾರಿಡಾರ್'ಗೆ ಹೋಗಬೇಕು ಎಂದು ಹೇಳುತ್ತಾರೆ" ಎಂದು ತನ್ನಂತಹ ನಿವಾಸಿಗಳ ಮೇಲೆ ಹೇರಲಾದ ಸಾಂಸ್ಕೃತಿಕ ಬದಲಾವಣೆಗಳ ಬಗ್ಗೆ ಸ್ಪಷ್ಟವಾಗಿ ಅಸಮಾಧಾನಗೊಂಡಿರುವ ನಿಷಾದ್ ಹೇಳುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Jigyasa Mishra

Jigyasa Mishra is an independent journalist based in Chitrakoot, Uttar Pradesh.

Other stories by Jigyasa Mishra
Editor : PARI Desk

PARI Desk is the nerve centre of our editorial work. The team works with reporters, researchers, photographers, filmmakers and translators located across the country. The Desk supports and manages the production and publication of text, video, audio and research reports published by PARI.

Other stories by PARI Desk
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru