ಬಜೆಟ್ ಕುರಿತು ತಿಳಿದುಕೊಳ್ಳುವುದು ಪುರುಷರಿಗೆ ಸಂಬಂಧಿಸಿದ ವ್ಯವಹಾರ ಎನ್ನುವುದು ಅಂಜನಾ ದೇವಿಯವರ ನಂಬಿಕೆ.
“ಮರದ್ ಲೋಗ್ ಹೀ ಜಾನತಾ ಹೈ ಇ ಸಬ್, ಲೇಕಿನ್ ಡೋ ತೋ ನಹೀ ಹೈ ಘರ್ ಪರ್ [ಇದೆಲ್ಲ ಗಂಡಸರಿಗೆ ಮಾತ್ರ ಗೊತ್ತಿರುವ ವ್ಯವಹಾರ, ಆದರೆ ನನ್ನ ಗಂಡ ಮನೆಯಲ್ಲಿಲ್ಲ” ಎಂದು ಅವರು ಹೇಳಿದರು. ಬಜೆಟ್ ತನಗೆ ಸಂಬಂಧಿಸಿದ ವಿಷಯವಲ್ಲ ಎನ್ನುವ ಅವರು ಮನೆಯ ಬಜೆಟನ್ನು ಪೂರ್ತಿಯಾಗಿ ತಾನೇ ನಿರ್ವಹಿಸುತ್ತಾರೆ. ಅಂಜನಾ ಅವರು ಚಮಾರ್ ಜಾತಿಗೆ ಸೇರಿದವರು. ಈ ಸಮುದಾಯವನ್ನು ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಡಿ ಪಟ್ಟಿ ಮಾಡಲಾಗಿದೆ.
ಬಜೆಟ್ ಅನ್ನು “ಬಜಟ್” ಎಂದು ಕರೆಯುವ ಅವರು ಹೊಸ ಘೋಷಣೆಗಳ ಕುರಿತು ನೆನಪಿಸಿಕೊಳ್ಳಲು ಪ್ರಯತ್ನಿಸಿದರು. “ಓ ಸಬ್ ತಾ ಹಮ್ ನಹೀ ಸುನೆ ಹೈ [ನಾನು ಅದರ ಬಗ್ಗೆ ಕೇಳಿಲ್ಲ]. ಆದರೆ, ಬಿಹಾರದ ವೈಶಾಲಿ ಜಿಲ್ಲೆಯ ಸೋಂಧೋ ರಟ್ಟಿ ಗ್ರಾಮದ ಈ ದಲಿತ ನಿವಾಸಿ ಹೇಳುತ್ತಾರೆ: "ಇ ಸಬ್ [ಬಜೆಟ್] ಪೈಸಾ ವಾಲಾ ಲೋಗ್ ಕೆ ಲಿಯೆ ಹೈ [ಇದೆಲ್ಲ ಶ್ರೀಮಂತರಿಗಾಗಿ ಅಷ್ಟೇ]."
ಅಂಜನಾ ಅವರ ಗಂಡ, 80 ವರ್ಷದ ಶಂಭುರಾಮ್ - ನಾವು ಭೇಟಿಗೆಂದು ಹೋಗಿದ್ದ ಸಂದರ್ಭದಲ್ಲಿ ಭಜನೆಗೆಂದು ಹೊರಗೆ ಹೋಗಿದ್ದರು – ರೇಡಿಯೋ ರಿಪೇರಿ ಕೆಲಸ ಮಾಡುತ್ತಾರೆ. ಆದರೆ ಇದಕ್ಕೆ ಗಿರಾಕಿಗಳು ಕಡಿಮೆ. ವಾರಕ್ಕೆ 300-400 ರೂಪಾಯಿಗಳನ್ನು ಗಳಿಸುತ್ತೇವೆ" ಎಂದು ಅವರು ಹೇಳುತ್ತಾರೆ. ಅಂದರೆ ವಾರ್ಷಿಕ ಸರಾಸರಿ 16,500 ರೂ. ಅಥವಾ ಈಗ ತೆರಿಗೆ ಮಿತಿ ವಿಧಿಸಿರುವ 12 ಲಕ್ಷ ರೂಪಾಯಿಗಳ ಕೇವಲ 1.37 ಪ್ರತಿಶತ. ಈಗ ಮಿತಿಯನ್ನು ಹೆಚ್ಚಿಸಿರುವ ಕುರಿತು ಹೇಳಿದರೆ ಅವರು ನಗುತ್ತಾರೆ. “ಕೆಲವೊಮ್ಮೆ ವಾರಕ್ಕೆ 100 ರೂಪಾಯಿ ಕೂಡಾ ಸಂಪಾದನೆಯಾಗುವುದಿಲ್ಲ. ಇದು ಮೊಬೈಲ್ ಫೋನ್ ಗಳ ಯುಗ. ಈಗಿನ ದಿನಗಳಲ್ಲಿ ಯಾರೂ ರೇಡಿಯೋ ಕೇಳುವುದಿಲ್ಲ" ಎಂದು ಅವರು ದೂರುತ್ತಾರೆ.
75 ವರ್ಷದ ಅಂಜನಾ 1.4 ಬಿಲಿಯನ್ ಭಾರತೀಯ ಜನಸಂಖ್ಯೆಯ ಒಂದು ಭಾಗವಾಗಿದ್ದಾರೆ, ಬಜೆಟ್ ಈ ಜನರ 'ಆಕಾಂಕ್ಷೆಗಳನ್ನು' ಪೂರೈಸಿದೆ ಎಂದು ಪ್ರಧಾನಿ ಮೋದಿ ನಂಬಿದ್ದಾರೆ. ಆದರೆ ಹೊಸದೆಹಲಿಯ ಅಧಿಕಾರದ ಪಡಸಾಲೆಯಿಂದ 1,100 ಕಿಲೋಮೀಟರ್ ದೂರದಲ್ಲಿ ಬದುಕುತ್ತಿರುವ ಅಂಜನಾದೇವಿ ಈ ಮಾತನ್ನು ಪ್ರತಿಧ್ವನಿಸುವುದಿಲ್ಲ.
ಅದು ಶಾಂತ ಚಳಿಗಾಲದ ಮಧ್ಯಾಹ್ನದ ಹೊತ್ತು. ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಅವರಿಗೆ ಬಹುಶಃ ಬಜೆಟ್ ಕುರಿತು ತಿಳಿದೇ ಇಲ್ಲ. ಅಥವಾ ಅದು ನಮಗೆ ಸಂಬಂಧಿಸಿದ್ದಲ್ಲ ಎನ್ನುವ ನಂಬಿಕೆಯಲ್ಲಿ ಅವರಿದ್ದಿರಬಹುದು.
ಅಂಜನಾ ಅವರಿಗೆ ಬಜೆಟ್ ಕುರಿತು ಯಾವ ನಿರೀಕ್ಷೆಯೂ ಇಲ್ಲ. “ಸರ್ಕಾರ್ ಕ್ಯಾ ದೇಗಾ! ಕಮಾಯೇಂಗೆ ತೋ ಖಾಯೇಂಗೆ, ನಹೀ ಕಮಾಯೇಂಗೆ ತೋ ಭೂಖ್ಲೇ ರಹೆಂಗೇ, [ಸರ್ಕಾರ ಏನು ಕೊಡುತ್ತದೆ! ದುಡಿದರೆ ತಿನ್ನಬಹುದು ಇಲ್ಲದಿದ್ದರೆ ಉಪವಾಸ ಮಲಗಬೇಕು].”
ಈ ಗ್ರಾಮದ 150 ಚಮಾರ್ ಕುಟುಂಬಗಳಲ್ಲಿ ಸುಮಾರು 90 ಪ್ರತಿಶತದಷ್ಟು ಜನರು ಭೂರಹಿತರು. ಮುಖ್ಯವಾಗಿ ಋತುಮಾನಕ್ಕನುಗುಣವಾಗಿ ವಲಸೆ ಹೋಗುವ ದಿನಗೂಲಿ ಕಾರ್ಮಿಕರು. ಅವರು ಎಂದಿಗೂ ಯಾವುದೇ ತೆರಿಗೆ ವ್ಯಾಪ್ತಿಯಲ್ಲಿ ಬರುವವರಲ್ಲ.
ಅಂಜನಾ ದೇವಿಯವರಿಗೆ ತಿಂಗಳಿಗೆ ಐದು ಕಿಲೋಗ್ರಾಂಗಳಷ್ಟು ಆಹಾರ ಧಾನ್ಯ ಉಚಿತವಾಗಿ ಸಿಗುತ್ತದೆ, ಆದರೆ ಅವರು ನಿಯಮಿತ ಆದಾಯವನ್ನು ಬಯಸುತ್ತಾರೆ. "ನನ್ನ ಪತಿಗೆ ತುಂಬಾ ವಯಸ್ಸಾಗಿದೆ.ಅವರಿಗೆ ಕೆಲಸ ಮಾಡಲು ಸಾಧ್ಯವಿಲ್ಲ. ಬದುಕಲು ನಮಗೆ ಸರ್ಕಾರದಿಂದ ಸ್ವಲ್ಪ ನಿಯಮಿತ ಆದಾಯ ಬೇಕು."
ಅನುವಾದ: ಶಂಕರ. ಎನ್. ಕೆಂಚನೂರು