ಯೋ ನ್ಹಾ ನ್ ತಮಸೋ ಮತ್ ಸಮ್ಜೋ, ಪುರ್ಖಾ ಕಿ ಅಮರ್ ನಿಸಾನಿ ಚೆ!
ನ್ಹಾನ್ ಹಬ್ಬವನ್ನು‌ ತಮಾಷೆ ಎಂದು ಭಾವಿಸಬೇಡಿ; ಅದು ನಮ್ಮ ಪೂರ್ವಜರ ಪರಂಪರೆ

ಈ ಮಾತುಗಳೊಂದಿಗೆ, ಕೋಟಾದ ಸಂಗೋಡ್ ಗ್ರಾಮದ ದಿವಂಗತ ಕವಿ ಸೂರಜ್ಮಲ್ ವಿಜಯ್ ಅವರು ಆಗ್ನೇಯ ರಾಜಸ್ಥಾನದ ಹಡೋತಿ ಪ್ರದೇಶದಲ್ಲಿ ಆಚರಿಸಲಾಗುವ ನ್ಹಾನ್ಹಬ್ಬವನ್ನು ಆಯೋಜಿಸಿದ್ದಾರೆ.

ಎಷ್ಟು ಕೋಟಿ ಖರ್ಚು ಮಾಡಿದರೂ ಯಾವ ಸರ್ಕಾರಕ್ಕೂ ಇಂತಹ ಕಾರ್ಯಕ್ರಮ ಆಯೋಜಿಸಲು ಸಾಧ್ಯವಿಲ್ಲ ಎಂದು ಆ ಗ್ರಾಮದಲ್ಲಿ ವಾಸಿಸುವ ಆಭರಣ ವ್ಯಾಪಾರಿ ರಾಮಬಾಬು ಸೋನಿಯವರು ಹೇಳುತ್ತಾರೆ. "ನಮ್ಮ ಹಳ್ಳಿಯ ಜನ ತಮ್ಮ ಸ್ವಂತ ಇಚ್ಛೆಯಿಂದ ತಮ್ಮದೇ ಸಂಸ್ಕೃತಿಗಾಗಿ ಸಂಘಟಿಸುವ ರೀತಿಯಲ್ಲಿ ಸರ್ಕಾರಕ್ಕೆ ಮಾಡಲು ಸಾಧ್ಯವಿಲ್ಲ,” ಎಂದು ಅವರು ಹೇಳುತ್ತಾರೆ. 15 ನೇ ಶತಮಾನದಲ್ಲಿ ಈ ಪ್ರದೇಶದಲ್ಲಿ ಜೀವಿಸಿದ್ದರು ಎಂದು ನಂಬಲಾಗಿರುವ ಜಾನಪದ ನಾಯಕ ಸಂಗ ಗುರ್ಜರ್ ಅವರ ಗೌರವಾರ್ಥವಾಗಿ ಈ ಗ್ರಾಮವು ಹೋಳಿಯ ನಂತರ ಐದು ದಿನಗಳ ಕಾಲ ಈ ಹಬ್ಬವನ್ನು ಆಚರಿಸುತ್ತದೆ.

‌ʼನ್ಹಾನ್' ಅಂದರೆ 'ಸ್ನಾನ ಮಾಡುವುದು' ಎಂದು ಅರ್ಥ, ಇದು  ಸಾಮೂಹಿಕ ಶುದ್ಧೀಕರಣವನ್ನು ಸಂಕೇತಿಸುತ್ತದೆ. ಈ ಹಬ್ಬಕ್ಕೂ ಹೋಳಿಗೂ ಸಂಬಂಧ ಇದೆ. ಇದನ್ನು ಸಂಪೂರ್ಣವಾಗಿ ಸಂಗೋಡಿನ ಜನರು ನಡೆಸುತ್ತಾರೆ. ತಮ್ಮ ದೈನಂದಿನ ಕೆಲಸ-ಕಾರ್ಯಗಳನ್ನು ಬಿಟ್ಟು, ಮೇಕಪ್‌ ಮಾಡಿಕೊಂಡು, ಹಬ್ಬದ ಬಟ್ಟೆಗಳನ್ನು ತೊಟ್ಟು ವಿಶಿಷ್ಟ ಪಾತ್ರಗಳಾಗಿ ಬದಲಾಗುತ್ತಾರೆ.

ಕೋಟಾದ ಸಂಗೋಡ್ ಗ್ರಾಮದ ನ್ಹಾನ್ಆಚರಣೆಯ ವಿಡಿಯೋ ವೀಕ್ಷಿಸಿ

"ಸುಮಾರು 400-500 ವರ್ಷಗಳ ಹಿಂದೆ, ಮೊಘಲ್ ಚಕ್ರವರ್ತಿ ಷಹಜಹಾನ್ ಆಳುತ್ತಿದ್ದಾಗ ಸಂಗೋಡಿನಲ್ಲಿ ವಿಜಯವರ್ಗೀಯ 'ಮಹಾಜನ' ‌ ಎನ್ನುವ ವ್ಯಕ್ತಿಯಿದ್ದರು. ಅವರು ಷಹಜಹಾನ್‌ ಬಳಿ ಕೆಲಸ ಮಾಡುತ್ತಿದ್ದರು. ಅವರು ನಿವೃತ್ತರಾದ ಮೇಲೆ ಇಲ್ಲಿ ನ್ಹಾನ್ಹಬ್ಬ ಆಚರಿಸಲು ಚಕ್ರವರ್ತಿಯ ಅನುಮತಿಯನ್ನು ಕೇಳಿದರು. ಅಲ್ಲಿಂದ  ಸಂಗೋಡಿನಲ್ಲಿ ಹಬ್ಬ ಶುರುವಾಯಿತು,” ಎಂದು ರಾಮ್‌ಬಾಬು ಸೋನಿ ಹೇಳುತ್ತಾರೆ.

ಕಲಾವಿದರ ನೃತ್ಯ, ಜಾದು- ಚಮತ್ಕಾರಗಳನ್ನು ನೋಡಲು ಆಸುಪಾಸಿನ  ಹಳ್ಳಿಗಳಿಂದ ಸಾವಿರಾರು ಜನರು ಸಂಗೋಡಿಗೆ ಬರುತ್ತಾರೆ. ಈ ಆಚರಣೆಯು ಬ್ರಹ್ಮಣಿ ದೇವಿಯ ಪೂಜೆಯೊಂದಿಗೆ ಪ್ರಾರಂಭವಾಗುತ್ತದೆ. ಪೂಜೆಯ ನಂತರ ಘೋಗ್ರಿ (ಬೇಯಿಸಿದ ಧಾನ್ಯಗಳು) ಯನ್ನು ಪ್ರಸಾದವಾಗಿ ನೀಡುತ್ತಾರೆ.

"ಜಾದು ಪ್ರದರ್ಶನ ನಡೆಯಲಿದೆ, ಕತ್ತಿಗಳನ್ನು ನುಂಗವಂತಹ ಅನೇಕ ಕಸರತ್ತುಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಇಲ್ಲೊಬ್ಬ ಮನುಷ್ಯ ಸಣ್ಣ ಕಾಗದದ ತುಂಡುಗಳನ್ನು ನುಂಗಿ, ಬಾಯಿಯಿಂದ 50 ಅಡಿ ಉದ್ದದ ಕಾಗದದ ಪಿಂಡಿಯನ್ನು ಹೊರತೆಗೆಯುತ್ತಾನೆ," ಎಂದು ಪ್ರದರ್ಶಕರಲ್ಲಿ ಒಬ್ಬರಾದ ಸತ್ಯನಾರಾಯಣ ಮಾಲಿಯುವರು ಜೋರಾಗಿ ಘೋಷಿಸುತ್ತಾರೆ.

PHOTO • Sarvesh Singh Hada
PHOTO • Sarvesh Singh Hada

ಎಡ: ಕಳೆದ 60 ವರ್ಷಗಳಿಂದ ರಾಮ್‌ಬಾಬು ಸೋನಿಯವರ (ಮಧ್ಯದಲ್ಲಿ ಕುಳಿತಿರುವ) ಕುಟುಂಬವು ನ್ಹಾನ್ಆಚರಣೆಯಲ್ಲಿ ಬಾದ್‌ಶಾ ಪಾತ್ರವನ್ನು ನಿರ್ವಹಿಸಿಕೊಂಡು ಬರುತ್ತಿದೆ. ಬಲ: ದೈಹಿಕ ಕಸರತ್ತು ಪ್ರದರ್ಶನವನ್ನು ವೀಕ್ಷಿಸಲು ಸಂಗೋಡ್‌ನ ಬಜಾರ್‌ನಲ್ಲಿರುವ ಲುಹಾರೋ ಕಾ ಚೌಕ್‌ನಲ್ಲಿ ಸೇರಿರುವ ಜನಸಂದಣಿ

ಹಬ್ಬದ ದಿನಗಳ ಕೊನೆಯಲ್ಲಿ ಬಾದ್‌ಶಾ ಕಿ ಸವಾರಿಯಲ್ಲಿ ಸಾಮಾನ್ಯ ಮನುಷ್ಯನೊಬ್ಬ ಒಂದು ದಿನಕ್ಕೆ ರಾಜನಾಗಿ ಪಟ್ಟಾಭಿಷೇಕ ಮಾಡಿಕೊಳ್ಳುತ್ತಾನೆ, ಅವನ ರಾಜ ಪರಿವಾರದ ಮೆರವಣಿಗೆ ಹಳ್ಳಿಯ ಬೀದಿ ಬೀದಿಗಳಲ್ಲಿ ನಡೆಯುತ್ತದೆ. ಕಳೆದ 60 ವರ್ಷಗಳಿಂದ ರಾಮ್‌ಬಾಬು ಅವರ ಕುಟುಂಬವೇ ರಾಜನ ಪಾತ್ರವನ್ನು ಮಾಡಿಕೊಂಡು ಬರುತ್ತಿದೆ. "ನನ್ನ ತಂದೆ 25 ವರ್ಷಗಳ ಕಾಲ ಈ ಪಾತ್ರವನ್ನು ಮಾಡಿದ್ದರು, ನಾನು ಕಳೆದ 35 ವರ್ಷಗಳಿಂದ ಈ ಪರಂಪರೆಯನ್ನು ಮುಂದುವರೆಸಿದ್ದೇನೆ. ಸಿನೇಮಾದಲ್ಲಿ ನಾಯಕ ನಟನ ಪಾತ್ರ ಎಷ್ಟು ಮುಖ್ಯವೋ, ಇಲ್ಲಿ ರಾಜನ ಪಾತ್ರವೂ ಅಷ್ಟೇ ಮುಖ್ಯ ಆಕರ್ಷಣೆ. ಇದೂ ಕೂಡ ಒಂದು ಸಿನೇಮಾವೇ.” ಎಂದು ಅವರು ಹೇಳುತ್ತಾರೆ.

ಆ ದಿನ, ಪಾತ್ರವನ್ನು ಮಾಡಿದವರಿಗೆ ಅದಕ್ಕೆ ಸಲ್ಲಬೇಕಾದ  ಗೌರವವನ್ನೂ ನೀಡಲಾಗುತ್ತದೆ.

"ಹೌದು, ಪ್ರತಿ ವರ್ಷ  ಒಂದು ದಿನ ಮಾತ್ರ. ಇವತ್ತು ಮಾತ್ರ ಅವರು ಒಂದು ದಿನದ ರಾಜನಾಗುತ್ತಾರೆ," ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡವರೊಬ್ಬರು ಹೇಳುತ್ತಾರೆ.

ಕನ್ನಡ ಅನುವಾದ: ಚರಣ್‌ ಐವರ್ನಾಡು

Sarvesh Singh Hada

Sarvesh Singh Hada is an experimental filmmaker from Rajasthan with a deep interest in researching and documenting the folk traditions of his native Hadoti region.

Other stories by Sarvesh Singh Hada
Text Editor : Swadesha Sharma

Swadesha Sharma is a researcher and Content Editor at the People's Archive of Rural India. She also works with volunteers to curate resources for the PARI Library.

Other stories by Swadesha Sharma
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad