ಮೀರಟ್‌ನ ಕೇರಂ ಬೋರ್ಡ್ ಕಾರ್ಖಾನಾದಲ್ಲಿ (ಕಾರ್ಖಾನೆ) ಐದು ಮಂದಿ ಕಾರಿಗಾರರು 40 ಬೋರ್ಡುಗಳ ಬ್ಯಾಚ್ ಒಂದನ್ನು ಸಿದ್ಧಪಡಿಸಲು ದಿನಕ್ಕೆ ಎಂಟು ಗಂಟೆಗಳಂತೆ ಸತತ ಐದು ದಿನಗಳವರೆಗೆ ಕೆಲಸ ಮಾಡುತ್ತಾರೆ. ಈ ವರ್ಕ್‌ಶಾಪಿನ ಪ್ರತಿಯೊಬ್ಬ ಕುಶಲಕರ್ಮಿಗೂ ಸ್ಟ್ರೈಕರ್ ಮತ್ತು ಕಾಯಿನ್‌ಗಳನ್ನು ಕೇರಂ ಬೋರ್ಡಿನ ಚೌಕಟ್ಟಿನ ನಡುವೆ ವೇಗವಾಗಿ ಚಲಿಸುವಂತೆ ಮಾಡಲು ಏನು ಮಾಡಬೇಕು ಎನ್ನುವುದು ತಿಳಿದಿದೆ. ಇದು ಗರಿಷ್ಠ ನಾಲ್ಕು ಆಟಗಾರರು ಆಡಬಹುದಾದ ಆಟವಾಗಿದೆ - ಆದರೆ ಇಲ್ಲಿ ಒಂದೆಡೆ ಐದು ಕುಶಲಕರ್ಮಿಗಳು ಕೆಲಸ ಮಾಡುತ್ತಿದ್ದಾರೆ. ಅವರು ಕೇರಂ ಕ್ರೀಡೆಯನ್ನು ಸಾಧ್ಯವಾಗಿಸಲು ಸಹಾಯ ಮಾಡುತ್ತಾರೆ, ಆದರೆ ಅದನ್ನು ಎಂದಿಗೂ ಸ್ವತಃ ಆಡಿದವರಲ್ಲ.

"ನಾನು 1981ರಿಂದ ಕೇರಂ ಬೋರ್ಡುಗಳನ್ನು ತಯಾರಿಸುತ್ತಿದ್ದೇನೆ, ಆದರೆ ಎಂದಿಗೂ ಬೋರ್ಡ್ ಖರೀದಿಸಿದವನಲ್ಲ ಅಥವಾ ಕೇರಂ ಆಡಿದವನಲ್ಲ. ಅದಕ್ಕೆಲ್ಲ ಸಮಯ ಎಲ್ಲಿದೆ?" ಎಂದು 62 ವರ್ಷದ ಮದನ್ ಪಾಲ್ ಕೇಳುತ್ತಾರೆ. ನಾವು ಹರಟೆ ಹೊಡೆಯುತ್ತಿರುವಾಗಲೂ, ಅವರು ಮತ್ತು ಅವರ ಜೊತೆಗಾರರು ನಿಖರವಾಗಿ 2,400 ದಂಡಗಳನ್ನು ಅಥವಾ ಕತ್ತರಿಸಿದ ಬಬೂಲ್ ಮರದ ತುಂಡುಗಳನ್ನು ಜೋಡಿಸುತ್ತಿದ್ದರು. ಇವು ಪ್ರತಿಯೊಂದೂ 32 ಅಥವಾ 36 ಇಂಚುಗಳಷ್ಟು ಉದ್ದವಿರುತ್ತವೆ ಮತ್ತು ಕಾರ್ಮಿಕರು ಅವುಗಳನ್ನು ಕಾರ್ಖಾನಾದ ಹೊರಗಿನ ಗೋಡೆಯ ಉದ್ದಕ್ಕೂ ಗಲ್ಲಿಯಲ್ಲಿ (ಓಣಿ) ಜೋಡಿಸುತ್ತಾರೆ.

"ಬೆಳಗ್ಗೆ 8:45ಕ್ಕೆ ಇಲ್ಲಿಗೆ ತಲುಪುತ್ತೇನೆ. ಒಂಬತ್ತು ಗಂಟೆಗೆ ಕೆಲಸ ಶುರು ಮಾಡುತ್ತೇವೆ. ಮನೆಗೆ ತಲುಪುವ ಹೊತ್ತಿಗೆ ಸಂಜೆ 7-7:30 ಆಗಿರುತ್ತದೆ" ಎಂದು ಮದನ್ ಪಾಲ್ ಹೇಳುತ್ತಾರೆ. ಅವರ ಕೇರಂ ಬೋರ್ಡ್ ಕಾರ್ಖಾನಾ ಇರುವುದು ಉತ್ತರ ಪ್ರದೇಶ ರಾಜ್ಯದ ಮೀರತ್ ನಗರದ ಸೂರಜ್ ಕುಂಡ್ ಸ್ಪೋರ್ಟ್ಸ್ ಕಾಲೋನಿಯಲ್ಲಿ.

ಮದನ್ ಪಾಲ್‌ ಅವರು ಮೀರತ್ ಜಿಲ್ಲೆಯ ಪುಟ್ಟಾ ಗ್ರಾಮದಲ್ಲಿರುವ ತನ್ನ ಮನೆಯಿಂದ ವಾರದಲ್ಲಿ ಆರು ದಿನ ಬೆಳಗ್ಗೆ ಏಳು ಗಂಟೆಗೆ ತನ್ನ ಮನೆಯಿಂದ ಸೈಕಲ್ಲಿನಲ್ಲಿ ಹೊರಟು 16 ಕಿಲೋಮೀಟರ್ ಪ್ರಯಾಣಿಸುತ್ತಾರೆ.

ಛೋಟಾ ಹಾಥಿಯಲ್ಲಿರುವ (ಅಕ್ಷರಶಃ ಅರ್ಥ ಸಣ್ಣ ಆನೆ - ಮಿನಿ ಟೆಂಪೊ ಟ್ರಕ್) ಇಬ್ಬರು ಸಾಗಣೆದಾರರು ಮೀರತ್ ನಗರದ ತಾರಾಪುರಿ ಮತ್ತು ಇಸ್ಲಾಮಾಬಾದ್ ಪ್ರದೇಶಗಳಲ್ಲಿನ ಮರಗೆಲಸದ ಗಿರಣಿಗಳಿಂದ ಕತ್ತರಿಸಿದ ಮರದ ತುಂಡುಗಳನ್ನು ಇಲ್ಲಿಗೆ ತಲುಪಿಸಿದ್ದಾರೆ.

"ಈ ತುಂಡುಗಳನ್ನು ಕೇರಂ ಬೋರ್ಡಿನ ಹೊರ ಚೌಕಟ್ಟನ್ನು ತಯಾರಿಸಲು ಬಳಸಲಾಗುತ್ತದೆ ಆದರೆ ಮೊದಲು ಅವುಗಳನ್ನು ನಾಲ್ಕರಿಂದ ಆರು ತಿಂಗಳವರೆಗೆ ಬಯಲಿನಲ್ಲಿ ಒಣಗಲು ಇಡಬೇಕು. ಮರವನ್ನು ಗಾಳಿ ಮತ್ತು ಬಿಸಿಲಿನಲ್ಲಿ ಒಣಗಿಸುವುದರಿಂದ ಅದು ತೇವಾಂಶ ಮುಕ್ತವಾಗುತ್ತದೆ, ಅವುಗಳನ್ನು ನೇರವಾಗಿರಿಸುತ್ತದೆ ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯುತ್ತದೆ" ಎಂದು ಮದನ್ ವಿವರಿಸುತ್ತಾರೆ.

PHOTO • Shruti Sharma
PHOTO • Shruti Sharma

ಎಡ: ಕರಣ್ ಪ್ರತಿ ದಂಡವನ್ನು ಪರಿಶೀಲಿಸಿ ಹಾನಿಗೊಳಗಾದವುಗಳನ್ನು ಬೇರ್ಪಡಿಸಿ ಹಿಂದಿರುಗಿಸುತ್ತಾರೆ. ಬಲ: ಮದನ್ (ಬಿಳಿ ಶರ್ಟ್) ಮತ್ತು ಕರಣ್ (ನೀಲಿ ಶರ್ಟ್) ಕಾರ್ಖಾನಾದ ಹೊರಗಿನ ಓಣಿಯಲ್ಲಿ 2,400 ದಂಡಗಳನ್ನು ಜೋಡಿಸುತ್ತಿದ್ದಾರೆ

ಕಳೆದ 10 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿರುವ 32 ವರ್ಷದ ಕರಣ್ (ಅವರು ಮೊದಲ ಹೆಸರಿನಿಂದ ಮಾತ್ರವೇ ಗುರುತಿಸಿಕೊಳ್ಳುತ್ತಾರೆ) ಮೊದಲಿಗೆ ಪ್ರತಿ ದಂಡವನ್ನು ಪರಿಶೀಲಿಸುತ್ತಾರೆ. ನಂತರ ಅವುಗಳಲ್ಲಿ ಹಾನಿಗೊಳಗಾದವುಗಳನ್ನು ಪ್ರತ್ಯೇಕಿಸಿ ಇಡುತ್ತಾರೆ. ನಂತರ ಅವುಗಳನ್ನು ವ್ಯಾಪಾರಿಗೆ ಹಿಂದಿರುಗಿಸಲಾಗುತ್ತದೆ. "ಒಣಗಿದ ನಂತರ, ಪ್ರತಿ ದಂಡಾದ ಒಳಭಾಗದಲ್ಲಿ ಒಂದು ಸ್ಟೆಪ್ ಅಥವಾ ಮೆಟ್ಟಿಲನ್ನು ಕತ್ತರಿಸಲು ಮತ್ತು ಅದರ ತುದಿಗಳನ್ನು ಚೂಪು ಮಾಡಲು ಅವುಗಳನ್ನು ಆರಾ ಮಷೀನ್ ವಾಲೆ [ಮರಗೆಲಸದ ಮಿಲ್ ಮಾಲೀಕರಿಗೆ] ಕಳುಹಿಸುತ್ತೇವೆ" ಎಂದು ಅವರು ಹೇಳುತ್ತಾರೆ.

"ಎರಡನೇ ಹಂತದಲ್ಲಿ ಬೋರ್ಡಿನ ಮೇಲ್ಮೈ ತಯಾರಿಸಲಾಗುತ್ತದೆ. ಇದು ಫ್ರೇಮಿನಿಂದ ಸುಮಾರು ಎರಡು ಸೆಂಟಿಮೀಟರಿನಷ್ಟು ಕೆಳಗಿರುತ್ತದೆ. ಇದು ಬೋರ್ಡಿನ ಒಳ ಆವರಣವನ್ನು ರೂಪಿಸುತ್ತದೆ. ಇದನ್ನು ಪ್ಲೈ ಬೋರ್ಡ್‌ ಬಳಸಿ ತಯಾರಾಗುತ್ತದೆ” ಎಂದು ವಿವರಿಸುತ್ತಾರೆ. "ಬೋರ್ಡ್ ತಯಾರಿಸುವುದು ಕಷ್ಟವಲ್ಲ, ಆದರೆ ಬಿಲ್ಲೆಗಳು ಬೋರ್ಡಿನ ಮೇಲ್ಮೈಯಲ್ಲಿ ತೇಲುವಂತೆ ಮಾಡುವುದು ಸುಲಭವಲ್ಲ" ಎಂದು ಅವರು ಹೇಳುತ್ತಾರೆ.

"ಆಟದ ಮೇಲ್ಮೈಯ ಪ್ರಮಾಣಿತ ಗಾತ್ರವು 29 x 29 ಇಂಚುಗಳು, ಮತ್ತು ಫ್ರೇಮ್‌ ಸೇರಿ, ಬೋರ್ಡ್ ಸುಮಾರು 32 x 32 ಇಂಚುಗಳಷ್ಟಿರುತ್ತದೆ" ಎಂದು ಈ ಕಾರ್ಖಾನಾದ ಮಾಲೀಕ 67 ವರ್ಷದ ಸುನಿಲ್ ಶರ್ಮಾ ಹೇಳುತ್ತಾರೆ. "ಇವುಗಳನ್ನು ಅಧಿಕೃತ ಸ್ಪರ್ಧೆಗಳಿಗೆ ಬಳಸಲಾಗುತ್ತದೆ. ಆದರೆ ನಾವು ಬೇಡಿಕೆಗಳು ಮತ್ತು ಗಾತ್ರಗಳ ಆಧಾರದ ಮೇಲೆ ಬೋರ್ಡುಗಳನ್ನು ತಯಾರಿಸುತ್ತೇವೆ, ಅದು ಹೆಚ್ಚಾಗಿ ಮಕ್ಕಳು ಬಳಸುವ 20 x 20 ಇಂಚುಗಳಿಂದ ಹಿಡಿದು 48 x 48 ಇಂಚುಗಳವರೆಗೆ ಇರುತ್ತದೆ. ಕೇರಂ ಬೋರ್ಡ್ ತಯಾರಿಸಲು ನಾಲ್ಕು ಮುಖ್ಯ ವಿಷಯಗಳು ಬೇಕಾಗುತ್ತವೆ" ಎಂದು ಅವರು ವಿವರಿಸುತ್ತಾರೆ. "ಬಬೂಲ್ ಮರದ ಚೌಕಟ್ಟು; ಬೋರ್ಡಿನ ಮೇಲ್ಮೈಗಾಗಿ ಪ್ಲೈಬೋರ್ಡ್; ಪ್ಲೈಬೋರ್ಡನ್ನು ಹಿಡಿದಿಡುವ ತೇಗ ಅಥವಾ ನೀಲಗಿರಿ ಮರದ [ಚಕ್ಡಿ] ಬೆನ್ನಿನ ಬೆಂಬಲ [ಚಕ್ಡಿ]; ಮತ್ತು ಉಣ್ಣೆಯ ಕಾಯಿನ್ ಪಾಕೆಟುಗಳು. ಇವುಗಳಲ್ಲಿ ಪ್ರತಿಯೊಂದನ್ನು ಸ್ಥಳೀಯವಾಗಿ ತರಿಸಲಾಗುತ್ತದೆ" ಎಂದು ಅವರು ಹೇಳುತ್ತಾರೆ. ಆದರೆ, ಅವರ ಕೆಲವು ಪೂರೈಕೆದಾರರು ತಮ್ಮ ವಸ್ತುಗಳನ್ನು ಇತರ ರಾಜ್ಯಗಳಿಂದ ತರಿಸುತ್ತಾರೆ.

"1987ರಲ್ಲಿ, ಗಂಗಾ ವೀರ್ ಮತ್ತು ಸರ್ದಾರ್ ಜಿತೇಂದರ್ ಸಿಂಗ್ ಎಂಬ ಇಬ್ಬರು ಪರಿಣಿತ ಕೇರಂ ತಯಾರಕರು ನನಗೆ ಈ ಕರಕುಶಲತೆಯ ಸೂಕ್ಷ್ಮತೆಯನ್ನು ಕಲಿಸಿದರು. ಅದಕ್ಕೂ ಮೊದಲು ನಾವು ಬ್ಯಾಡ್ಮಿಂಟನ್ ರಾಕೆಟ್ ಮತ್ತು ಕ್ರಿಕೆಟ್ ಬ್ಯಾಟುಗಳನ್ನು ತಯಾರಿಸುತ್ತಿದ್ದೆವು" ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಶರ್ಮಾ ನಮ್ಮೊಂದಿಗೆ ಮಾತನಾಡುತ್ತಾ ತಮ್ಮ ಕಾರ್ಖಾನೆಯ ಒಂದು ಬದಿಯಲ್ಲಿದ್ದ ಕಚೇರಿಯಿಂದ ಕೆಲಸಗಾರರು ಕೆಲಸ ಮಾಡುತ್ತಿದ್ದ ಇನ್ನೊಂದು ಕಡೆಗೆ ನಡೆಯತೊಡಗಿದರು. ಅಲ್ಲಿ ಕುಶಲಕರ್ಮಿಗಳು ದಂಡಾಗಳನ್ನು ಜೋಡಿಸಿಡುತ್ತಿದ್ದರು. “ನಾವು ಒಮ್ಮೆಗೆ 30-40ರ ಸಂಖ್ಯೆಯಲ್ಲಿ ಬೋರ್ಡುಗಳನ್ನು ತಯಾರಿಸುತ್ತೇವೆ. ಇದಕ್ಕೆ 4-5 ದಿನ ಬೇಕಾಗುತ್ತದೆ. ಪ್ರಸ್ತುತ ದೆಹಲಿಯ ವ್ಯಾಪಾರಿಯೊಬ್ಬರಿಂದ ಎಕ್ಸ್‌ಪೋರ್ಟ್‌ ಗುಣಮಟ್ಟದ 240 ಬೋರ್ಡುಗಳಿಗೆ ಬೇಡಿಕೆ ಬಂದಿದೆ. ಅದರಲ್ಲಿ ಸುಮಾರು 160 ಬೋರ್ಡುಗಳನ್ನು ಈಗಾಗಲೇ ತಯಾರಿಸಿ ಪ್ಯಾಕ್‌ ಮಾಡಿದ್ದೇವೆ” ಎಂದು ಅವರು ಹೇಳಿದರು.

PHOTO • Shruti Sharma
PHOTO • Shruti Sharma

ಎಡ: ಕಾರ್ಖಾನೆಯ ಮಾಲೀಕರಾದ ಸುನಿಲ್ ಶರ್ಮಾ, ಸಿದ್ಧಪಡಿಸಿದ ಕೇರಂ ಬೋರ್ಡಿನೊಂದಿಗೆ. ಬಲ: ಉತ್ಪಾದನೆಯ ವಿವಿಧ ಹಂತಗಳಲ್ಲಿನ ಕೇರಂ ಬೋರ್ಡುಗಳು

2022ರಿಂದ, ಭಾರತದ ಕೇರಂ ಬೋರ್ಡುಗಳನ್ನು ವಿಶ್ವದಾದ್ಯಂತ 75 ದೇಶಗಳು ಮತ್ತು ಪ್ರದೇಶಗಳಿಗೆ ರಫ್ತು ಮಾಡಲಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಫ್ತು ಆಮದು ದತ್ತಾಂಶ ಬ್ಯಾಂಕ್ ಪ್ರಕಾರ, ಏಪ್ರಿಲ್ 2022 ಮತ್ತು ಜನವರಿ 2024ರ ನಡುವೆ 39 ಕೋಟಿ ರೂ. ಮೌಲ್ಯದ ರಫ್ತು ವಹಿವಾಟು ನಡೆದಿದೆ. ಯುಎಸ್ಎ, ಸೌದಿ ಅರೇಬಿಯಾ, ಯುಎಇ, ಯುಕೆ, ಕೆನಡಾ, ಆಸ್ಟ್ರೇಲಿಯಾ, ಯೆಮೆನ್, ನೇಪಾಳ, ಬೆಲ್ಜಿಯಂ, ನೆದರ್ಲ್ಯಾಂಡ್ಸ್ ಮತ್ತು ಕತಾರ್ (ಕ್ರಮವಾಗಿ) ದೇಶಗಳಿಂದ ಹೆಚ್ಚಿನ ಆದಾಯ ಬಂದಿದೆ.

ಈ ಸಂಖ್ಯೆಯು ಹಿಂದೂ ಮಹಾಸಾಗರದ ದ್ವೀಪಸಮೂಹಗಳಾದ ಕೊಮೊರೊಸ್ ಮತ್ತು ಮಯೋಟ್ಟೆ, ಪೆಸಿಫಿಕ್ ಮಹಾಸಾಗರದ ಫಿಜಿ ದ್ವೀಪಗಳು ಮತ್ತು ಕೆರಿಬಿಯನ್ ನ ಜಮೈಕಾ ಮತ್ತು ಸೇಂಟ್ ವಿನ್ಸೆಂಟ್ ಸೇರಿದಂತೆ ವಿದೇಶಗಳು ಖರೀದಿಸಿದ ಸುಮಾರು ಒಂದು ಮಿಲಿಯನ್ ಕೇರಂ ಬೋರ್ಡುಗಳಿಂದ ಬಂದಿದೆ.

ಯುಎಇ ಅತಿ ಹೆಚ್ಚು ಕೇರಂ ಬೋರ್ಡ್‌ ಆಮದು ಮಾಡಿಕೊಂಡಿದ್ದು, ನೇಪಾಳ, ಮಲೇಷ್ಯಾ, ಸೌದಿ ಅರೇಬಿಯಾ ಮತ್ತು ಯೆಮೆನ್ ನಂತರದ ಸ್ಥಾನಗಳಲ್ಲಿವೆ.

ದೇಶೀಯ ಮಾರುಕಟ್ಟೆಯ ಕುರಿತು ಯಾವುದೇ ಅಂಕಿ-ಅಂಶಗಳು ಲಭ್ಯವಿಲ್ಲ. ಇದ್ದಿದ್ದರೆ ಖಂಡಿತಾ ಅದೂ ಅದ್ಭುತವಾಗಿರುತ್ತಿತ್ತು.

"ಕೋವಿಡ್ -19 ಸಮಯದಲ್ಲಿ ನಾವು ಹೇರಳವಾದ ದೇಶೀಯ ಬೇಡಿಕೆಗಳನ್ನು ಹೊಂದಿದ್ದೆವು. ಏಕೆಂದರೆ ಆ ಸಮಯದಲ್ಲಿ ಎಲ್ಲರೂ ಮನೆಯಲ್ಲಿ ಲಾಕ್ ಆಗಿದ್ದರು. ಜನರಿಗೆ ತಮ್ಮ ಬೇಸರ ಕಳೆಯಲು ಏನಾದರೂ ಬೇಕಿತ್ತು" ಎಂದು ಸುನಿಲ್ ಶರ್ಮಾ ಹೇಳುತ್ತಾರೆ. "ನಾನು ಗಮನಿಸಿದ ಮತ್ತೊಂದು ಮಾದರಿಯೆಂದರೆ ರಂಜಾನ್ ತಿಂಗಳಿಗೆ ಸ್ವಲ್ಪ ಮುಂಚಿತವಾಗಿ ಕೊಲ್ಲಿ ರಾಷ್ಟ್ರಗಳಿಂದ ಬೇಡಿಕೆಯ ಹೆಚ್ಚಳ" ಎಂದು ಅವರು ಹೇಳುತ್ತಾರೆ.

"ನಾನು ಸಾಕಷ್ಟು ಕೇರಂ ಆಡಿದ್ದೇನೆ. ಇದೊಂದು ಸಮಯ ಕಳೆಯುವ ಆಟವಾಗಿ ಜನಪ್ರಿಯವಾಗಿದೆ" ಎಂದು ಶರ್ಮಾ ಹೇಳುತ್ತಾರೆ. "ಆದರೆ, ಔಪಚಾರಿಕವಾಗಿ ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಂದ್ಯಾವಳಿಗಳು ನಡೆಯುತ್ತವೆ, ಅವು ಇತರ ಪಂದ್ಯಗಳಂತೆ ನೇರ ಪ್ರಸಾರವಾಗುವುದಿಲ್ಲ" ಎಂದು ಅವರು ಹೇಳುತ್ತಾರೆ.

PHOTO • Shruti Sharma

ಕಾರ್ಖಾನೆಯ ಒಳಗೆ ಕೇರಂ ಬೋರ್ಡ್‌ ತಯಾರಿಸುತ್ತಿರುವುದು

'ನಾವು ಒಮ್ಮೆಗೆ 30-40ರ ಸಂಖ್ಯೆಯಲ್ಲಿ ಬೋರ್ಡುಗಳನ್ನು ತಯಾರಿಸುತ್ತೇವೆ. ಇದಕ್ಕೆ 4-5 ದಿನ ಬೇಕಾಗುತ್ತದೆ. ಪ್ರಸ್ತುತ ದೆಹಲಿಯ ವ್ಯಾಪಾರಿಯೊಬ್ಬರಿಂದ ಎಕ್ಸ್‌ಪೋರ್ಟ್‌ ಗುಣಮಟ್ಟದ 240 ಬೋರ್ಡುಗಳಿಗೆ ಬೇಡಿಕೆ ಬಂದಿದೆ. ಅದರಲ್ಲಿ ಸುಮಾರು 160 ಬೋರ್ಡುಗಳನ್ನು ಈಗಾಗಲೇ ತಯಾರಿಸಿ ಪ್ಯಾಕ್‌ ಮಾಡಿದ್ದೇವೆ' ಎನ್ನುತ್ತಾರೆ ಸುನಿಲ್‌ ಶರ್ಮಾ

ಭಾರತದಲ್ಲಿ ಔಪಚಾರಿಕ ಕೇರಂ ಸಂಬಂಧಿತ ಚಟುವಟಿಕೆಗಳನ್ನು ಆಲ್‌ ಇಂಡಿಯಾ ಕೇರಂ ಫೆಡರೇಶನ್ (ಎಐಸಿಎಫ್) ತನ್ನ ಸಂಯೋಜಿತ ರಾಜ್ಯ ಮತ್ತು ಜಿಲ್ಲಾ ಸಂಘಗಳ ಮೂಲಕ ನಿಯಂತ್ರಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ. 1956ರಲ್ಲಿ ಸ್ಥಾಪನೆಯಾದ ಮತ್ತು ಚೆನ್ನೈ ಮೂಲದ ಎಐಸಿಎಫ್, ಅಂತರರಾಷ್ಟ್ರೀಯ ಕೇರಂ ಫೆಡರೇಶನ್ ಮತ್ತು ಏಷ್ಯನ್ ಕೇರಂ ಕಾನ್ಫೆಡರೇಶನ್ ಜೊತೆ ಸಂಯೋಜಿತವಾಗಿದೆ. ಎಐಸಿಎಫ್ ಎಲ್ಲಾ ಅಂತರರಾಷ್ಟ್ರೀಯ ಪಂದ್ಯಾವಳಿಗಳಿಗೆ ಭಾರತೀಯ ತಂಡವನ್ನು ಸಿದ್ಧಪಡಿಸುತ್ತದೆ ಮತ್ತು ನಿಯೋಜಿಸುತ್ತದೆ.

ಜಾಗತಿಕ ಶ್ರೇಯಾಂಕಗಳು ಇತರ ಕ್ರೀಡೆಗಳಂತೆ ಸಾಕಷ್ಟು ವ್ಯವಸ್ಥಿತವಾಗಿ ಮತ್ತು ಸ್ಪಷ್ಟವಾಗಿ ಲಭ್ಯವಿಲ್ಲವಾದರೂ, ಭಾರತವು ಖಂಡಿತವಾಗಿಯೂ ಕೇರಂ ಆಡುವ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತದ ರಶ್ಮಿ ಕುಮಾರಿ ಮಹಿಳಾ ಕೇರಂನಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ. ಚೆನ್ನೈನ 68 ವರ್ಷದ ಎ. ಮರಿಯಾ ಇರುದಯಮ್, ಎರಡು ಬಾರಿ ಪುರುಷರ ವಿಶ್ವ ಕೇರಂ ಚಾಂಪಿಯನ್ ಮತ್ತು ಒಂಬತ್ತು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ಕೇರಂ ಆಟದಲ್ಲಿ ಅರ್ಜುನ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಕ್ರೀಡಾಪಟುವೆಂದರೆ ಅದು ಇರುದಯಂ. ಅವರು ಕಾಲು ಶತಮಾನದ ಹಿಂದೆ - 1996ರಲ್ಲಿ ಈ ಪ್ರಶಸ್ತಿಯನ್ನು ಗಳಿಸಿದರು. ಭಾರತದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿಯನ್ನು ವಾರ್ಷಿಕವಾಗಿ ನೀಡಲಾಗುತ್ತದೆ.

*****

ಕಾರ್ಖಾನೆಯ ನೆಲದ ಮೇಲೆ ಕುಳಿತ ಕರಣ್‌ ನಾಲ್ಕು ದಂಡಾಗಳನ್ನು ಕಾಲಿನ ಕೆಳಗೆ ಚೌಕಾಕಾರದಲ್ಲಿ ಇಟ್ಟುಕೊಳ್ಳುತ್ತಾರೆ. ನಂತರ ಎಂಟು ಹಲ್ಲುಗಳಿರುವ ಬಾಚಣಿಗೆಯಂತಹ (ಇದನ್ನು ಸ್ಥಳೀಯವಾಗಿ ಕಂಘಿ ಎಂದು ಕರೆಯುತ್ತಾರೆ. ಕಂಗಿ ಎಂದರೆ ಬಾಚಣಿಗೆ) ಕಬ್ಬಿಣದ ಹಲ್ಲುಗಳನ್ನು ಮರಗಳನ್ನು ಕೂಡಿಸಿ ಹೊಡೆಯುತ್ತಾರೆ. “ಕೀಲ್‌ ಸೇ ಬೆಹತರ್‌ ಜಾಯಿನ್‌ ಕರ್ತೀ ಹೈ ಕಂಘಿ [ಮೊಳೆಗಳಿಗಿಂತಲೂ ಕಂಘಿ ಚೆನ್ನಾಗಿ ಜಾಯಿಂಟ್‌ ಮಾಡುತ್ತದೆ]” ಎಂದು ಕರಣ್‌ ಹೇಳುತ್ತಾರೆ.

ಫ್ರೇಮ್‌ ಫಿಕ್ಸ್‌ ಮಾಡಿದ ನಂತರ ಅಮರಜೀತ್‌ ಸಿಂಗ್‌ (50) ಅದರ ಮೂಲೆಗಳನ್ನು ರೇತಿ (ಕಬ್ಬಿಣದ ಅರೆ) ಬಳಸಿ ವೃತ್ತಾಕಾರಕ್ಕೆ ಕೊರೆಯುತ್ತಾರೆ. “ಮೊದಲು ನಾನು ಡೈರಿ ವ್ಯವಹಾರದಲ್ಲಿದ್ದೆ. ಆದರೆ ಅದರಲ್ಲಿ ನಷ್ಟವಾದ ಕಾರಣ ಕಳೆದ ಮೂರು ವರ್ಷಗಳ ಕೆಳಗೆ ಕೇರಂ ಬೋರ್ಡ್‌ ತಯಾರಿಸುವ ಕೆಲಸಕ್ಕೆ ಸೇರಿದೆ” ಎಂದು ಅವರು ಹೇಳುತ್ತಾರೆ.

ಸಾ ಮಿಲ್ಲಿನಲ್ಲಿ ಕತ್ತರಿಸಿದ ನಂತರ ಫ್ರೇಮಿನ ಮೇಲ್ಮೈಯಲ್ಲಿ ಉಳಿದಿರುವ ಮರದ ಸಣ್ಣ ಚೂರುಗಳನ್ನುಉಜ್ಜಿ ತೆಗೆಯುತ್ತಾರೆ. ನಂತರ ಅಮರಜೀತ್ ಮರಮ್ಮತ್ ಎಂದು ಕರೆಯಲಾಗುವ (ಚಾಕ್ ಮಿಟ್ಟಿ (ಚಾಕ್ ಪೌಡರ್) ಮತ್ತು ಮೊವಿಕಾಲ್ ಎಂಬ ಮರದ ಅಂಟುಗಳ ಮಿಶ್ರಣ) ಬೀಜ್ ಬಣ್ಣದ ಪೇಸ್ಟ್ ತರಹದ ಮಿಶ್ರಣವನ್ನು ಲೋಹೇ ಕಿ ಪಟ್ಟಿ (ಕಬ್ಬಿಣದ ಪಟ್ಟಿ) ಬಳಸಿ ಫ್ರೇಮಿನ ಮೇಲ್ಮೈಗೆ ಹಚ್ಚುತ್ತಾರೆ.

“ಇದು ಮರದಲ್ಲಿ ಇರುವ ಗುಳಿಗಳನ್ನು ತುಂಬುವುದರ ಜೊತೆಗೆ ಮರವನ್ನು ಸಮತಟ್ಟಾಗಿಸುತ್ತದೆ” ಎನ್ನುವ ಅವರು “ಈ ಪೇಸ್ಟನ್ನು ಬರೂದೆ ಕೀ ಮರಮ್ಮತ್‌ ಎಂದು ಕರೆಯಲಾಗುತ್ತದೆ” ಎನ್ನುವ ಮಾಹಿತಿಯನ್ನೂ ನೀಡಿದರು. ಪೇಸ್ಟ್‌ ಒಣಗಿದ ನಂತರ ಪ್ಲೈವುಡ್‌ ಕೂರಿಸಲು ಮಾಡಲಾದ ಸ್ಥಳದಲ್ಲಿ ಕಪ್ಪು ಮರಾಮ್ಮತ್‌ ಪೇಸ್ಟನ್ನು ಒಂದೆ ಎಳೆ ಹಚ್ಚಲಾಗುತ್ತದೆ.

PHOTO • Shruti Sharma
PHOTO • Shruti Sharma

ಕರಣ್‌ ಕಾಲಿನಡಿ ನಾಲ್ಕು ದಂಡಾಗಳನ್ನು ಇರಿಸಿಕೊಂಡು ಅವುಗಳ ತುದಿಗಳನ್ನು ಜೋಡಿಸಿ ಚೌಕಟ್ಟನ್ನು ನಿರ್ಮಿಸುತ್ತಾರೆ. ನಂತರ ಎಂಟು ಕಂಘಿಗಳನ್ನು (ಕಬ್ಬಿಣದ ಕ್ಲಿಪ್ಪಿನಂತಹವು) ಚೌಕಟ್ಟನ್ನು ಜೋಡಿಸುತ್ತಾರೆ

PHOTO • Shruti Sharma
PHOTO • Shruti Sharma

ಫ್ರೇಮ್ ಸರಿಪಡಿಸಿದ ನಂತರ, ಅಮರಜೀತ್ ಸಿಂಗ್ ರೇತಿ (ಫೈಲ್‌/ಅರೆ) ಬಳಸಿ ಅಂಚುಗಳನ್ನು (ಎಡಕ್ಕೆ) ಉಜ್ಜುತ್ತಾರೆ. ನಂತರ, ಅವರು ಸಮತಟ್ಟಾದ ಕಬ್ಬಿಣದ ಫೈಲ್ ಬಳಸಿ ಫ್ರೇಮಿನ ಮೇಲ್ಮೈಗೆ ಮರಮ್ಮತ್ ಎಂದು ಕರೆಯಲಾಗುವ (ಚಾಕ್ ಮಿಟ್ಟಿ (ಚಾಕ್ ಪೌಡರ್) ಮತ್ತು ಮೊವಿಕಾಲ್ ಎಂಬ ಮರದ ಅಂಟುಗಳ ಮಿಶ್ರಣ) ಹಚ್ಚುತ್ತಾರೆ

ನಂತರ ಬೇಗನೆ ಒಣಗುವ, ನೀರು ನಿರೋಧಕ, ಬ್ಲ್ಯಾಕ್ ಡ್ಯೂಕೊ ಪೇಂಟ್ ಕೋಟ್ ಒಂದನ್ನು ಬೋರ್ಡಿನ ಗಡಿಗಳೊಳಗಿನ ಭಾಗದ ಮೇಲೆ ಹಚ್ಚಲಾಗುತ್ತದೆ ಮತ್ತು ಅದನ್ನು ಒಣಗಿದ ನಂತರ ರೆಗ್ಮಲ್ (ಸ್ಯಾಂಡ್ ಪೇಪರ್) ಬಳಸಿ ನಯಗೊಳಿಸಲಾಗುತ್ತದೆ. "ಪ್ಲೈಬೋರ್ಡ್ ಅಳವಡಿಸಿದ ನಂತರ ಫ್ರೇಮಿನ ಈ ಭಾಗದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ, ಹೀಗಾಗಿ ಅದನ್ನು ಮೊದಲೇ ಸಿದ್ಧಪಡಿಸಬೇಕು" ಎಂದು ಅಮರ್ಜೀತ್ ಹೇಳುತ್ತಾರೆ.

“ನಾವಿಲ್ಲಿ ಐದು ಮಂದಿ ಕಾರಿಗಾರ್‌ಗಳಿದ್ದು ಎಲ್ಲರಿಗೂ ಕೇರಂ ಬೋರ್ಡಿಗೆ ಸಂಬಂಧಿಸಿದ ಎಲ್ಲ ಕೆಲಸಗಳೂ ಬರುತ್ತವೆ” ಎಂದು 55 ವರ್ಷದ ಧರಂ ಪಾಲ್ ಹೇಳುತ್ತಾರೆ. ಅವರು ಕಳೆದ ೩೫ ವರ್ಷಗಳಿಂದ ಈ ಕಾರ್ಖಾನಾದಲ್ಲಿ ಕೆಲಸ ಮಾಡುತ್ತಿದ್ದಾರೆ.

“ಬೇಡಿಕೆ ಯಾವ ಸಂಖ್ಯೆಯಲ್ಲಿ ಬಂದರೂ ನಾವು ಮೊದಲು ಮಾಡುವ ಕೆಲಸವೆಂದರೆ ಪ್ಲೈ ಬೋರ್ಡಿನ ಮೇಲ್ಮೈಯನ್ನು ಸಿದ್ಧಪಡಿಸುವುದು” ಎಂದು ಧರಮ್ ಹೇಳುತ್ತಾರೆ. ಹೀಗೆ ಹೇಳುತ್ತಾ ಅವರು, ಮದನ್‌ ಮತ್ತು ಕರಣ್‌ ಸೇರಿ ಚೌಕಟ್ಟುಗಳಲ್ಲಿ ಕೂರಿಸಲು ತಯಾರಾಗಿರುವ ಪ್ಲೈ ವುಡ್‌ಗಳನ್ನು ಹೊರತಂದರು. ಪ್ಲೈ ಬೋರ್ಡಿನ ರಂಧ್ರಗಳನ್ನು ತುಂಬಲು ವಾಟರ್‌ ಪ್ರೂಫ್‌ ಸೀಲರ್‌ ಬಳಸುತ್ತೇವೆ. ಅದು ಒಣಗಿದ ನಂತರ ಸ್ಯಾಂಡ್‌ ಪೇಪರ್‌ ಬಳಸಿ ಅದರ ಮೇಲ್ಮೈಯನ್ನು ನಯಗೊಳಿಸುತ್ತೇವೆ” ಎಂದು ಅವರು ವಿವರಿಸುತ್ತಾರೆ.

“ಕೇರಂ ಬೋರ್ಡಿನ ಮುಖ್ಯ ಆಕರ್ಷಣೆಯೆಂದರೆ ಅದರ ನಯವಾದ ಮೇಲ್ಮೈ. ಕೇರಂ ಬೋರ್ಡಿನ ಬಿಲ್ಲೆಗಳು ಸರಾಗವಾಗಿ ಅತ್ತಿಂದಿತ್ತ ಚಲಿಸುವಂತಿರಬೇಕು. ಆದರೆ ಪ್ಲೈ ಬೋರ್ಡುಗಳು ಬಹಳ ಒರಟಾಗಿರುತ್ತವೆ” ಎಂದು ಶರ್ಮಾ ಕೇರಂ ಆಡುವ ರೀತಿಯನ್ನು ಅನುಕರಿಸುತ್ತಾ ಹೇಳುತ್ತಾರೆ. “ನಾವು ಮಾವು ಅಥವಾ ಮಕಾಯಿ ಮರವನ್ನು ಕೊಲ್ಕತಾದ ವ್ಯಾಪಾರಿಗಳಿಂದ ಖರೀದಿ ಮಾಡುತ್ತೇವೆ” ಎಂದು ಅವರು ಹೇಳುತ್ತಾರೆ.

"ನಾವು 1987ರಲ್ಲಿ ಈ ಕೆಲಸ ಪ್ರಾರಂಭಿಸಿದ ಸಮಯದಲ್ಲಿ, ಬೋರ್ಡಿನ ಮೇಲ್ಮೈಯಲ್ಲಿನ ಗುರುತುಗಳನ್ನು ಕೈಯಿಂದ ಚಿತ್ರಿಸಲಾಗುತ್ತಿತ್ತು. ಈ ಕೆಲಸವು ಬಹಳ ಸಂಕೀರ್ಣ ಮತ್ತು ಸಮಯ ತೆಗೆದುಕೊಳ್ಳುತ್ತದೆ. ಆ ಸಮಯದಲ್ಲಿ, ಕಲಾವಿದರೊಬ್ಬರು ಕಾರಿಗಾರ್ ತಂಡದ ಪ್ರಮುಖ ಸದಸ್ಯರಾಗಿದ್ದರು" ಎಂದು ಸುನಿಲ್ ನೆನಪಿಸಿಕೊಳ್ಳುತ್ತಾರೆ. "ಆದರೆ ಇಂದು, ನಾವು ಬೋರ್ಡಿನ ಮೇಲ್ಮೈಗಳನ್ನು ಒಂದರ ನಂತರ ಒಂದರಂತೆ ತ್ವರಿತವಾಗಿ ಬರೆಯಬಹುದು" ಎಂದು ಅವರು ಕಾರ್ಖಾನಾದ ಎತ್ತರದ ಗೋಡೆಗಳ ಮೇಲೆ ನೇತಾಡುತ್ತಿರುವ ಚೌಕಾಕಾರದ ಸ್ಕ್ರೀನುಗಳತ್ತ ತೋರಿಸುತ್ತಾ ಹೇಳುತ್ತಾರೆ. ಇದರರ್ಥ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಹೆಚ್ಚಿನ ಕ್ರೀಡಾ ಸಲಕರಣೆಗಳ ಉದ್ಯಮದಂತೆ ಇಲ್ಲಿಯೂ ಕಲಾವಿದ ಕಣ್ಮರೆಯಾಗಿದ್ದಾನೆ.

ಸ್ಕ್ರೀನ್ ಪ್ರಿಂಟಿಂಗ್ ಎಂಬುದು ಸ್ಟೆನ್ಸಿಲಿಂಗ್ ತಂತ್ರವಾಗಿದ್ದು, ಇದು ಬಣ್ಣಗಳನ್ನು ಅತ್ತಿತ್ತ ಹಾದುಹೋಗದಂತೆ ತಡೆಯುತ್ತದೆ ಮತ್ತು ಅಗತ್ಯವಿರುವವುಗಳ ಮೂಲಕ ಹಾದುಹೋಗುವಂತೆ ಮಾಡುತ್ತದೆ. "ನಾವು ಪ್ರತಿ ಮೇಲ್ಮೈಯಲ್ಲಿ ಎರಡು ಸ್ಕ್ರೀನ್‌ಗಳನ್ನು ಬಳಸುತ್ತೇವೆ. ಮೊದಲನೆಯದು ಕೆಂಪು ಗುರುತುಗಳಿಗೆ, ಮತ್ತು ಎರಡನೆಯದು ಕಪ್ಪು ಗುರುತುಗಳಿಗೆ" ಎಂದು ಧರಂ ಪಾಲ್ ಹೇಳುತ್ತಾರೆ. ಪ್ರಸ್ತುತ 240 ಕೇರಂ ಬೋರ್ಡುಗಳ ಬೇಡಿಕೆಗೆ ಅಗತ್ಯವಿರುವ ಎಲ್ಲಾ ಪ್ಲೈಬೋರ್ಡುಗಳ ಮೇಲೆ ಗುರುತುಗಳನ್ನು ಈಗಾಗಲೇ ಮಾಡಲಾಗಿದೆ.

PHOTO • Shruti Sharma
PHOTO • Shruti Sharma

ಎಡ: ಧರಮ್, ಮದನ್ ಮತ್ತು ಕರಣ್ ಈಗಾಗಲೇ ಸ್ಕ್ರೀನ್‌ ಪ್ರಿಂಟ್‌ ಮಾಡಲಾಗಿರುವ ಪ್ಲೈಬೋರ್ಡ್ ಮೇಲ್ಮೈಗಳನ್ನು ಹೊರತರುತ್ತಿದ್ದಾರೆ, ಅವುಗಳನ್ನು ಚೌಕಟ್ಟುಗಳ ಮೇಲೆ ಅಳವಡಿಸಲಾಗುವುದು. ಬಲ: ಕೇರಂ ಬೋರ್ಡಿನ ವಿವಿಧ ಗಾತ್ರಗಳಿಗೆ ತಕ್ಕ ಸ್ಕ್ರೀನುಗಳು

PHOTO • Shruti Sharma
PHOTO • Shruti Sharma

ಎಡ: ಕಾರ್ಮಿಕರು ಚಹಾ ಸೇವಿಸುವ ಸ್ಟೀಲ್ ಪಾತ್ರೆ ಮತ್ತು ಲೋಟಗಳು. ಬಲ: ರಾಜೇಂದರ್ ಮತ್ತು ಅಮರ್ಜೀತ್ ಕಾರ್ಖಾನೆಯ ನೆಲದ ಮೇಲೆ ಸ್ವಲ್ಪ ಜಾಗವನ್ನು ತೆರವುಗೊಳಿಸಿ ತೆಳುವಾದ ಕಂಬಳಿಯನ್ನು ಹರಡುತ್ತಾರೆ, ಅದರ ಮೇಲೆ ಅವರು ಊಟದ ವಿರಾಮದ ಸಮಯದಲ್ಲಿ 12-15 ನಿಮಿಷಗಳ ಕಾಲ ಮಲಗುತ್ತಾರೆ

ನಾವು ಮಾತನಾಡುತ್ತಾ ಮಧ್ಯಾಹ್ನ 1 ಗಂಟೆಯಾಗಿತ್ತು, ಮತ್ತು ಇದು ಇಲ್ಲಿನ ಕೆಲಸಗಾರರ ಊಟದ ಸಮಯ. "ಒಂದು ಗಂಟೆಯ ವಿರಾಮ ಇರುತ್ತದೆ, ಆದರೆ ಅವರು ಮಧ್ಯಾಹ್ನ 1.30ಕ್ಕೆ ಕೆಲಸಕ್ಕೆ ಮರಳುತ್ತಾರೆ, ಬೇಗ ಕೆಲಸ ಶುರು ಮಾಡಿದರೆ ಸಂಜೆ 5.30ರ ವೇಳೆಗೆ ಅರ್ಧ ಗಂಟೆ ಬೇಗನೆ ಹೊರಡಬಹುದು" ಎಂದು ಮಾಲೀಕ ಸುನಿಲ್ ಶರ್ಮಾ ಹೇಳುತ್ತಾರೆ.

ಕಾರ್ಮಿಕರು ಕಟ್ಟಿ ತಂದ ಊಟವನ್ನು ತೆಗೆದುಕೊಂಡು ಕಾರ್ಖಾನಾ ಆವರಣದ ಹಿತ್ತಲಿನಲ್ಲಿ, ಒಣಗಿದ ಮರದ ತುಂಡುಗಳ ನಡುವೆ, ದುರ್ವಾಸನೆಯುಕ್ತ ತೆರೆದ ಮತ್ತು ಹರಿಯುವ ನಾಲಾ (ಚರಂಡಿ) ಅಂಚಿನಲ್ಲಿ ಪಟಪಟನೆ ತಿನ್ನುತ್ತಾರೆ. 50 ವರ್ಷದ ರಾಜೇಂದರ್ ಕುಮಾರ್ ಮತ್ತು ಅಮರ್ಜೀತ್ ಅವರು ಕಾರ್ಖಾನಾ ನೆಲದ ಮೇಲೆ ಸ್ವಲ್ಪ ಜಾಗವನ್ನು ತೆರವುಗೊಳಿಸಿ ತೆಳುವಾದ ಕಂಬಳಿಯನ್ನು ಹರಡಿ ಅದರ ಮೇಲೆ 12-15 ನಿಮಿಷಗಳ ಕಾಲ ಮಲಗಿದರು. ಆದರೆ ಅವರು ಕಣ್ಣು ಮುಚ್ಚುವ ಮೊದಲೇ ಏಳುವ ಸಮಯ ಬಂದಿರುತ್ತದೆ.

“ಬಸ್‌ ಪೀಠ್‌ ಸೀದಾ ಕರ್ನಿ ಥೀ [ಸ್ವಲ್ಪ ಬೆನ್ನು ನೆಟ್ಟಗೆ ಮಾಡಬೇಕಿತ್ತು ಅಷ್ಟೇ]” ಎಂದು ಅಮರಜೀತ್‌ ಹೇಳುತ್ತಾರೆ. ಎದ್ದ ನಂತರ ಸ್ಟೀಲ್‌ ಕೆಟಲ್ಲಿನಲ್ಲಿದ್ದ ಹತ್ತಿರದ ಟೀ ಅಂಗಡಿಯಿಂದ ತಂದ ಚಹಾವನ್ನು ತಮ್ಮ ಸ್ಟೀಲ್‌ ಲೋಟಗಳಿಗೆ ಸುರಿದುಕೊಂಡು ಕುಡಿಯುತ್ತಾರೆ. ಅದಾದ ತಕ್ಷಣವೇ ಮತ್ತೆ ಕೆಲಸ ಶುರು.

ಈಗ ಈಗಾಗಲೇ ಸಿದ್ಧವಾಗಿರುವ ಪ್ಲೈ ಬೋರ್ಡುಗಳ ಬೆನ್ನಿಗೆ ಚಕ್ಡಿ ಅಂಟಿಸುವ ಸಮಯ. “ಚಕ್ಡಿ ಎಂದರೆ ಪ್ಲೈ ಬೋರ್ಡಿನ ಬೆನ್ನಿಗೆ ಆಧಾರವಾಗಿ ಕೊಡುವ ಮರದ ತುಂಡು” ಎಂದು 20 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿರುವ ರಾಜೇಂದರ್ ವಿವರಿಸುತ್ತಾರೆ. "ತೇಗ ಅಥವಾ ನೀಲಗಿರಿ ಮರದ ತೆಳುವಾದ ಪಟ್ಟಿಗಳನ್ನು ಮೊಳೆ ಹೊಡೆದು ಅಂಟಿಸುವ ಮೂಲಕ ಇದನ್ನು ತಯಾರಿಸಲಾಗುತ್ತದೆ, ಇದು ಲಂಬ ಮತ್ತು ಸಮತಲ ರೇಖೆಗಳನ್ನು ವಿಭಜಿಸುವ ಮಾದರಿಯನ್ನು ರೂಪಿಸುತ್ತದೆ.

“ಇಸ್‌ ಕಾಮ್‌ ಕೇ ಪೆಹಲೇ ಮೇ ದೀವಾರ್‌ ಪುಟಾಯಿ ಕರ್ತಾ ಥಾ [ಇದಕ್ಕೂ ಮೊದಲು ನಾನು ಗೋಡೆಗಳಿಗೆ ಸುಣ್ಣ ಬಳಿಯುವ ಕೆಲಸ ಮಾಡುತ್ತಿದ್ದೆ” ಎಂದು ಅವರು ಹೇಳಿದರು.

“ನಾವು ಕೇಸರ್‌ ಗಂಜ್‌ ಮೆಹತಾಬ್ ಸಿನೆಮಾ ಪ್ರದೇಶದ ಮುಸ್ಲಿಂ ಕುಶಲಕರ್ಮಿಗಳಿಂದ ಚಕ್ಡಿಗಳನ್ನು ಖರೀದಿಸುತ್ತೇವೆ. ಮೀರತ್ ಪ್ರದೇಶದಲ್ಲಿ ಚಕ್ಡಿಯನ್ನಷ್ಟೇ ತಯಾರಿಸುವ ಮರಗೆಲಸಗಾರರಿದ್ದಾರೆ" ಎಂದು ಸುನಿಲ್ ಶರ್ಮಾ ಹೇಳುತ್ತಾರೆ.

PHOTO • Shruti Sharma
PHOTO • Shruti Sharma

ಎಡಕ್ಕೆ: ರಾಜೇಂದರ್ ಮತ್ತು ಮದನ್ ದಪ್ಪದ ಪೇಂಟ್ ಬ್ರಷ್ ಬಳಸಿ 40 ಚಕ್ಡಿಗಳಿಗೆ ಫೆವಿಕಾಲ್ ಹಚ್ಚುತ್ತಾರೆ. ಬಲ: ಚಕ್ಡಿಯ ನಂತರ ಚಕ್ಡಿಯನ್ನು ಎತ್ತಿಕೊಂಡು ಅವುಗಳನ್ನು ಮುದ್ರಿತ ಪ್ಲೈಬೋರ್ಡುಗಳ ಹಿಂಬದಿಗೆ ಅಂಟಿಸುವ ಜವಾಬ್ದಾರಿಯನ್ನು ಕರಣ್ ವಹಿಸಿಕೊಂಡಿದ್ದಾರೆ

ರಾಜೇಂದರ್ ಸ್ವಲ್ಪ ಸಮಯದ ಹಿಂದೆ ತಾನು ಮಲಗಿದ್ದ ಸ್ಥಳದಲ್ಲಿಯೇ ಮದನ್ ಎದುರು ಕುಳಿತಿದ್ದಾರೆ. ಅವರಿಬ್ಬರ ನಡುವೆ 40 ಚಕ್ಡಿಗಳ ರಾಶಿಯಿದೆ, ಅದರ ಮೇಲೆ ಅವರು ಪೇಂಟ್‌ ಬ್ರಷ್ ಬಳಸಿ ಒಂದರ ನಂತರ ಒಂದರಂತೆ ಫೆವಿಕಾಲ್ ಹಚ್ಚುತ್ತಾರೆ. ಅತ್ಯಂತ ಕಿರಿಯ ಕಾರಿಗಾರ್ ಆಗಿರುವುದರಿಂದ ಹೆಚ್ಚು ಚುರುಕಾಗಿರುವ ಕರಣ್, ಚಕ್ಡಿ ನಂತರ ಚಕ್ಡಿಯನ್ನು ಎತ್ತಿಕೊಂಡು ಅವುಗಳನ್ನು ಪ್ಲೈ ಬೋರ್ಡಿಗೆ ಅಂಟಿಸುವ ಕಾರ್ಯದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

"ನಾವು ಸಾಮಾನ್ಯವಾಗಿ ಕೆಲಸದ ದಿನದ ಕೊನೆಯಲ್ಲಿ ಚಕ್ಡಿ ಚಿಪ್ಕಾನಾ ಮಾಡುತ್ತೇವೆ. ಪ್ಲೈ ಬೋರ್ಡುಗಳನ್ನು ಒಂದರ ಮೇಲೆ ಒಂದನ್ನು ಇರಿಸುತ್ತೇನೆ. ನಂತರ ರಾತ್ರಿ ಹೋಗುವ ಮೊದಲು ಅದರ ಮೇಲೆ ಭಾರದ ವಸ್ತುವನ್ನು ಇಟ್ಟು ಹೋಗುತ್ತೇವೆ. ಬೆಳಗಿನ ಹೊತ್ತಿಗೆ ಅವು ಚೆನ್ನಾಗಿ ಅಂಟಿಕೊಂಡಿರುತ್ತವೆ"ಎಂದು ಕರಣ್ ವಿವರಿಸುತ್ತಾರೆ.

ಸಂಜೆ 5:15ರ ಹೊತ್ತಿಗೆ ಕೆಲಸಗಾರರು ತಮ್ಮ ಕೆಲಸಗಳನ್ನು ಮುಗಿಸುವ ಆತುರದಲ್ಲಿದ್ದರು. "ನಾಳೆ ಬೆಳಿಗ್ಗೆ, ನಾವು ಚೌಕಟ್ಟುಗಳ ಮೇಲಿನ ಪ್ಲೈಬೋರ್ಡುಗಳನ್ನು ಸರಿಪಡಿಸುತ್ತೇವೆ" ಎಂದು ಕರಣ್ ಹೇಳುತ್ತಾರೆ. "ನನ್ನ ತಂದೆ ಕೂಡ ಮತ್ತೊಂದು ಕಾರ್ಖಾನಾದಲ್ಲಿ ಕ್ರೀಡಾ ಸರಕುಗಳ ಕುಶಲಕರ್ಮಿಯಾಗಿದ್ದರು. ಅವರು ಕ್ರಿಕೆಟ್ ಬ್ಯಾಟ್ ಮತ್ತು ಸ್ಟಂಪ್ ತಯಾರಿಸುತ್ತಿದ್ದರು" ಎಂದು ಅವರು ಹೇಳುತ್ತಾರೆ.

*****

ಮರುದಿನ ಬೆಳಿಗ್ಗೆ 9 ಗಂಟೆಗೆ ಕೆಲಸ ಪ್ರಾರಂಭವಾಯಿತು. ಚಹಾ ಸೇವಿಸಿದ ನಂತರ, ರಾಜೇಂದರ್, ಮದನ್, ಕರಣ್ ಮತ್ತು ಧರಮ್ ಕಾರ್ಖಾನಾದೊಳಗೆ ತಮ್ಮ ಟೇಬಲ್ಲುಗಳ ಪಕ್ಕದಲ್ಲಿ ನಿಂತು ತಮ್ಮ ಕೆಲಸಗಳನ್ನು ಆರಂಭಿಸಿದರು. ಅಮರಜೀತ್ ಹೊರಗಿನ ಗಲ್ಲಿಯಲ್ಲಿ ಚೌಕಟ್ಟಿನ ಅಂಚುಗಳನ್ನು ತುಂಬುವ ಕೆಲಸದಲ್ಲಿ ತೊಡಗಿದರು.

ಕರಣ್ ಮತ್ತು ಧರಮ್ ಒಟ್ಟಾಗಿ ಪ್ಲೈಬೋರ್ಡ್-ಚಕ್ಡಿ ಸಂಯೋಜನೆಗಳನ್ನು ಜೋಡಿಸಿ, ಫೈಲ್ ಮಾಡಿ ಮತ್ತು ಬಣ್ಣ ಹಚ್ಚಿ ಚೌಕಟ್ಟುಗಳ ಮೇಲೆ ಒಂದೊಂದಾಗಿ ಜೋಡಿಸುವ ಮೂಲಕ ಕೆಲಸ ಪ್ರಾರಂಭಿಸುತ್ತಾರೆ. ಅವರಲ್ಲಿ ಪ್ರತಿಯೊಬ್ಬರೂ ಬೋರ್ಡಿನ ಆಯಾ ಬದಿಗಳಲ್ಲಿ ಚಕ್ಡಿಯ ಮೇಲೆ ಮೊದಲೇ ನಿರ್ಧರಿಸಿದ ಸ್ಥಳಗಳಲ್ಲಿ ಮೊಳೆಗಳನ್ನು ಹೊಡೆಯುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

“ಒಂದು ಬೋರ್ಡನ್ನು ಚೌಕಟ್ಟಿಗೆ ಅಳವಡಿಸಲು ನಾಲ್ಕು ಡಜನ್ ಸಣ್ಣ ಮೊಳೆಗಳು ಬೇಕಾಗುತ್ತವೆ" ಎಂದು ಧರಮ್ ಹೇಳುತ್ತಾರೆ. ಆಶ್ಚರ್ಯಕರ ಸಂಗತಿಯೆಂದರೆ, ಕೇವಲ ಇಬ್ಬರು ಕಾರ್ಮಿಕರು ಸುಮಾರು 140 ಸೆಕೆಂಡುಗಳಲ್ಲಿ ಆ 48 ಮೊಳೆಗಳನ್ನು ಸುತ್ತಿಗೆ ಬಳಸಿ ಹೊಡೆಯುತ್ತಾರೆ. ಹೊಡೆದ ನಂತರ ಅದನ್ನು ಎದುರಿನ ಪಿಲ್ಲರ್‌ ಒಂದಕ್ಕೆ ನೇತುಹಾಕುತ್ತಾರೆ.

PHOTO • Shruti Sharma
PHOTO • Shruti Sharma

ಕರಣ್ ಮತ್ತು ಧರಮ್ ಜೋಡಿ ಪ್ಲೈಬೋರ್ಡ್ ಮತ್ತು ಚಕ್ಡಿಗಳನ್ನು ಬಣ್ಣ ಹಚ್ಚಿ, ಫೈಲ್‌ ಮಾಡಿದ ಚೌಕಟ್ಟಿನ ಮೇಲೆ ಜೋಡಿಸುತ್ತಾರೆ

ಇಂದು, ಮದನ್ ಕೇರಂ ಬೋರ್ಡಿನ ನಾಲ್ಕು ಅಂಚುಗಳಲ್ಲಿ ಬಿಲ್ಲೆ ಬಂದು ಬೀಳುವ ಭಾಗವನ್ನು ಕತ್ತರಿಸುವ (ಕಾಯಿನ್‌ ಪಾಕೆಟ್‌ ಕಟ್ಟಿಂಗ್) ಉಸ್ತುವಾರಿಯನ್ನು ಹೊಂದಿದ್ದಾರೆ. ಪಾಕೆಟ್ ಕಟ್ಟರ್ ವ್ಯಾಸವನ್ನು ನಾಲ್ಕು ಸೆಂಟಿಮೀಟರ್ ಅಳತೆಗೆ ಹೊಂದಿಸಲಾಗಿದೆ, ಇದನ್ನು ಶಾಲೆ ರೇಖಾಗಣಿತದಲ್ಲಿನ ದಿಕ್ಸೂಚಿಯ ತಂತ್ರ ಬಳಸಿ ಮಾಡಲಾಗುತ್ತದೆ.

"ನನ್ನ ಕುಟುಂಬದಲ್ಲಿ ಕ್ರೀಡಾ ಸರಕುಗಳ ಕೆಲಸ ಮಾಡುವವ ನಾನು ಮಾತ್ರ. ನನಗೆ ಮೂವರು ಗಂಡು ಮಕ್ಕಳಿದ್ದಾರೆ. ಒಬ್ಬ ಅಂಗಡಿ ನಡೆಸುತ್ತಿದ್ದಾನೆ, ಒಬ್ಬ ಟೈಲರ್ ಮತ್ತು ಇನ್ನೊಬ್ಬ ಚಾಲಕ" ಎಂದು ಮದನ್ ಹೇಳುತ್ತಾರೆ, ಅವರು ಕಟ್ಟರ್‌ನ ಬ್ಲೇಡುಗಳನ್ನು ಒತ್ತಲು ಮತ್ತು ಅದರ ಹ್ಯಾಂಡಲನ್ನು ಏಕಕಾಲದಲ್ಲಿ ತಿರುಗಿಸಲು ಬೋರ್ಡ್ ಮೇಲೆ ಬಾಗುತ್ತಾ ನಮ್ಮೊಡನೆ ಮಾತನಾಡುತ್ತಿದ್ದರು. ಅವರು ನಾಲ್ಕು ಪಾಕೆಟುಳನ್ನು ಕತ್ತರಿಸಲು ಕೇವಲ 55 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತಾರೆ. ಇದರಲ್ಲಿ ಆರರಿಂದ ಎಂಟು ಕಿಲೋಗ್ರಾಂಗಳಷ್ಟು ತೂಕದ ಬೋರ್ಡನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಎತ್ತಲು, ತಿರುಗಿಸಲು ಮತ್ತು ಜೋಡಿಸಲು ಬೇಕಾಗುವ ಸಮಯವನ್ನು ಸೇರಿಸಲಾಗಿಲ್ಲ.

ಪಾಕೆಟ್‌ ಕಟ್ಟಿಂಗ್‌ ಮುಗಿದ ನಂತರ ಅವರು ಆ ಬೋರ್ಡನ್ನು ರಾಜೇಂದರ್ ಅವರ ಮೇಜಿನ ಪಕ್ಕದಲ್ಲಿ ಇಡುತ್ತಾರೆ, ಅವರು ಅವುಗಳನ್ನು ಒಂದೊಂದಾಗಿ ತೆಗೆದುಕೊಂಡು ಎರಡನೇ ಬಾರಿಗೆ ಲೋಹೆ ಕಿ ಪಟ್ಟಿ ಬಳಸಿ ಫ್ರೇಮ್ ಮೇಲೆ ಮರಮ್ಮತ್ ಪೇಸ್ಟಿನ ಒಂದು ಪದರವನ್ನು ಹಚ್ಚುತ್ತಾರೆ. ಮರಮ್ಮತ್ ಹಚ್ಚಲು ಬೋರ್ಡ್ ಕಡೆಗೆ ನೋಡುತ್ತಾ, ನನ್ನ ಗಮನವನ್ನು ಬೋರ್ಡಿನ ಮೇಲ್ಮೈಯತ್ತ ಸೆಳೆದು, "ನೋಡಿ, ಬೋರ್ಡ್ ನನ್ನ ಬೆರಳುಗಳನ್ನು ಕನ್ನಡಿಯಂತೆ ಪ್ರತಿಫಲಿಸುತ್ತಿದೆ" ಎಂದರು.

"ಈ ಹಂತದಲ್ಲಿ ಬೋರ್ಡ್ ಸಿದ್ಧವಾಗಿರುವಂತೆ ಕಾಣುತ್ತದೆ, ಆದರೆ ಅದು ಸಿದ್ಧವಾಗಿ ಆಟಕ್ಕೆ ಬಳಸುವಂತಾಗಲು ಇನ್ನೂ ಸಾಕಷ್ಟು ಕೆಲಸ ಬಾಕಿಯಿದೆ" ಎಂದು ಮಾಲೀಕ ಶರ್ಮಾ ಹೇಳುತ್ತಾರೆ. "ಇಂದು ನಮ್ಮ ಗುರಿ ಎಲ್ಲಾ 40 ಚೌಕಟ್ಟುಗಳಿಗೆ ಒಂದು ಪದರ ಮರಮ್ಮತ್‌ ಹಚ್ಚಿ ಮುಗಿಸುವುದು. ನಾಳೆ ಬೆಳಗ್ಗೆ ಚೌಕಟ್ಟುಗಳ ಅಂತಿಮ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತೇವೆ" ಎಂದು ಅವರು ಹೇಳಿದರು.

PHOTO • Shruti Sharma
PHOTO • Shruti Sharma

ಮದನ್ ಕೇರಂ ಬೋರ್ಡಿನ ನಾಲ್ಕು ಅಂಚುಗಳಲ್ಲಿ ಬಿಲ್ಲೆ ಬಂದು ಬೀಳುವ ಭಾಗವನ್ನು ಕತ್ತರಿಸುವ (ಕಾಯಿನ್‌ ಪಾಕೆಟ್‌ ಕಟ್ಟಿಂಗ್) ಉಸ್ತುವಾರಿಯನ್ನು ಹೊಂದಿದ್ದಾರೆ. ಪಾಕೆಟ್ ಕಟ್ಟರ್ ತ್ರಿಜ್ಯವನ್ನು ನಾಲ್ಕು ಸೆಂಟಿಮೀಟರ್ ಅಳತೆಗೆ ಹೊಂದಿಸಲಾಗಿದೆ

PHOTO • Shruti Sharma
PHOTO • Shruti Sharma

ಎಡ: ನಂತರ ರಾಜೇಂದರ್‌ ಸಮತಟ್ಟಾದ ಕಬ್ಬಿಣದ ಫೈಲ್‌ ಬಳಸಿ ಒಂದು ಎಳೆ ಬರೂದೆ ಕಾ ಮರಮ್ಮತ್‌ ಹಚ್ಚುತ್ತಾರೆ. ʼನೋಡಿ ಬೋರ್ಡಿನಲ್ಲಿ ನನ್ನ ಬೆರಳು ಪ್ರತಿಫಲಿಸುತ್ತಿದೆʼ ಎಂದು ಅವರು ಹೇಳುತ್ತಾರೆ. ಬಲ ಮರುದಿನ ಕಾರ್ಖಾನೆಯ ಎಲ್ಲ ಕೆಲಸಗಾರರು ತಮ್ಮ ಕೆಲಸವನ್ನು ಕಾರ್ಖಾನೆಯ ಹೊರಭಾಗಕ್ಕೆ ಸ್ಥಳಾಂತರಿಸುತ್ತಾರೆ

ಮರುದಿನ ಬೆಳಗ್ಗೆ ಐವರು ಕೆಲಸಗಾರರಲ್ಲಿ ನಾಲ್ವರು ತಮ್ಮ ಮೇಜು ಮತ್ತು ಕೆಲಸದೊಂದಿಗೆ ಹೊರಗಿನ ಗಲ್ಲಿಗೆ ಸ್ಥಳಾಂತರಗೊಂಡರು. ಮದನ್‌ ಒಳಗೇ ಉಳಿದರು. “ಇಲ್ಲಿನ ಎಲ್ಲರೂ ಎಲ್ಲಾ ಕೆಲಸಗಳನ್ನು ಮಾಡುವುದರಿಂದಾಗಿ ಇಲ್ಲಿ ಪೀಸ್‌ ವರ್ಕ್‌ ಎನ್ನುವ ಪರಿಕಲ್ಪನೆಯಿಲ್ಲ.  ಇಲ್ಲಿನ ಕೆಲಸಗಾರರಿಗೆ ಅವರ ಕೌಶಲಕ್ಕೆ ಅನುಗುಣವಾಗಿ ಸಂಬಳ ನೀಡಲಾಗುತ್ತದೆ” ಎಂದು ಶರ್ಮಾ ಹೇಳುತ್ತಾರೆ.

ಆ ಕೌಶಲ ನಿರ್ದಿಷ್ಟ ಸಂಬಳ ಎಷ್ಟೆನ್ನುವುದನ್ನು ಕಂಡುಹಿಡಿಯಲು ಪರಿಗೆ ಸಾಧ್ಯವಾಗಲಿಲ್ಲ. ಕ್ರೀಡಾ ಸಲಕರಣೆಗಳ ಉದ್ಯಮವು ಅಂಕಿಅಂಶಗಳೊಂದಿಗೆ ಮುಂದೆ ಬರುತ್ತಿಲ್ಲ. ಆದರೆ ಈ ನುರಿತ ಕುಶಲಕರ್ಮಿಗಳು ಮಾಡಬಹುದಾದ ಸಣ್ಣ ದೋಷವೂ ಉತ್ಪನ್ನವನ್ನು ಹಾಳು ಮಾಡುವ ಸಾಧ್ಯತೆಯಿರುತ್ತದೆ. ಇದು ಬಹಳ ಸೂಕ್ಷ್ಮತೆಯನ್ನು ಬೇಡುವ ಕೆಲಸವೆನ್ನುವುದರ ಬಗ್ಗೆ ಅನುಮಾನವಿಲ್ಲ.  ಇವರು ಸಾಮಾನ್ಯವಾಗಿ ತಿಂಗಳಿಗೆ 13,000 ರೂಪಾಯಿಗಳಿಗಿಂತ ಹೆಚ್ಚು ಸಂಪಾದಿಸುವ ಹಾಗೆ ಕಾಣುತ್ತಿಲ್ಲ. ಈ ಉದ್ಯಮದಲ್ಲಿನ ಹೆಚ್ಚಿನ ನುರಿತ ಕಾರ್ಮಿಕರು ಉತ್ತರಪ್ರದೇಶ ಕನಿಷ್ಠ ತಿಂಗಳ ವೇತನವಾದ ಸುಮಾರು 12,661 ರೂ.ಗಿಂತ ಕಡಿಮೆ ಗಳಿಸುತ್ತಾರೆ. ಮತ್ತು ಈ ವಲಯದ ಕೆಲವು ಕೌಶಲರಹಿತ ಕಾರ್ಮಿಕರಿಗೆ ಅದಕ್ಕಿಂತಲೂ ಕಡಿಮೆ ಗಳಿಸುತ್ತಿರುವ ಸಾಧ್ಯತೆಯಿದೆ.

ಧರಮ್ ಮತ್ತು ಕರಣ್ ಗಲ್ಲಿಯ ಕೊನೆಯ ತುದಿಯಲ್ಲಿದ್ದರು. "ನಾವು ಚೌಕಟ್ಟಿನ ಮೇಲೆ ಮೂರು ಸುತ್ತು ಬರೂದೆ ಕಿ ಮರಮ್ಮತ್ ಹಚ್ಚುತ್ತಿದ್ದೇವೆ ಮತ್ತು ನಂತರ ಅದನ್ನು ಸ್ಯಾಂಡ್ ಪೇಪರ್‌ ಬಳಸಿ ಅದನ್ನು ನಯಗೊಳಿಸುತ್ತೇವೆ" ಎಂದು ಧರಮ್ ಹೇಳುತ್ತಾರೆ, "ನನ್ನ ಕೈಯಲ್ಲಿ ಇದುವರೆಗೆ ಎಷ್ಟು ಬೋರ್ಡುಗಳು ತಯಾರಾಗಿವೆ ಎನ್ನುವುದನ್ನು ಎಣಿಸಲು ಸಾಧ್ಯವಿಲ್ಲ. ಲೇಕಿನ್ ಖೇಲ್ನೆ ಕಾ ಕಭಿ ಶೌಕ್ ಹಿ ನಹೀ ಹುವಾ [ಆದರೆ ನನಗೆ ಎಂದಿಗೂ ಆಡುವ ಆಸೆ ಬಂದಿಲ್ಲ]. ಅನೇಕ ವರ್ಷಗಳ ಹಿಂದೆ ಬಾವುಜಿ [ಸುನಿಲ್ ಶರ್ಮಾ] ಊಟದ ಸಮಯದಲ್ಲಿ ಆಡುವಾಗ ಕೆಲವು ಬಿಲ್ಲೆಗಳನ್ನು ನೋಡಿದ್ದೆ."

ಮೊದಲ ಟೇಬಲ್ಲಿನಲ್ಲಿರುವ ರಾಜೇಂದರ್, ಧರಮ್ ಮತ್ತು ಕರಣ್ ನಯಗೊಳಿಸಿದ ಚೌಕಟ್ಟುಗಳ ಮೇಲೆ ಅಸ್ತರ್ (ಮೂಲ ಲೇಪನ) ಹಚ್ಚುತ್ತಿದ್ದಾರೆ. "ಇದು ಮರಮ್ಮತ್, ಇದು ಕಪ್ಪು ಬಣ್ಣ ಮತ್ತು ಸರೆಸ್‌ನ ಮಿಶ್ರಣ. ಸರೆಸ್ ಕಾರಣದಿಂದಾಗಿ ಈ ಕೋಟ್ ಚೌಕಟ್ಟಿಗೆ ಅಂಟಿಕೊಳ್ಳುತ್ತದೆ" ಎಂದು ಅವರು ಹೇಳುತ್ತಾರೆ. ಸರೆಸ್‌ ಎನ್ನುವುದು ನೈಸರ್ಗಿಕ ಅಂಟು, ಇದನ್ನು ಕಸಾಯಿಖಾನೆಗಳು ಮತ್ತು ಚರ್ಮದ ಕಾರ್ಖಾನೆಗಳಲ್ಲಿನ ಜಾನುವಾರುಗಳ ತಿನ್ನಲಾಗದ ಭಾಗಗಳನ್ನು ಸಂಸ್ಕರಿಸುವ ಮೂಲಕ ತಯಾರಿಸಲಾಗುತ್ತದೆ.

ಅಸ್ತರ್ ಲಗಾನ ಮುಗಿದ ನಂತರ, ಅಮರಜೀತ್ ರೆಗ್ಮಲ್ ಬಳಸಿ ಚೌಕಟ್ಟುಗಳನ್ನು ಮತ್ತೊಮ್ಮೆ ನಯಗೊಳಿಸುತ್ತಾರೆ. "ನಾವು ಮತ್ತೆ ಚೌಕಟ್ಟುಗಳ ಮೇಲೆ ಕಪ್ಪು ಡ್ಯೂಕೊ ಬಣ್ಣವನ್ನು ಹಚ್ಚುತ್ತೇವೆ ಮತ್ತು ಅದು ಒಣಗಿದ ನಂತರ, ಅವುಗಳನ್ನು ಸುಂದ್ರಾ ಬಳಸಿಅಲಂಕರಿಸಲಾಗುತ್ತದೆ" ಎಂದು ಅಮರಜೀತ್ ಹೇಳುತ್ತಾರೆ. ಸುಂದ್ರಾ ಎಂಬುದು ಮರದ ರಾಳವಾಗಿದ್ದು, ಇದು ವಾರ್ನಿಷ್ ಆಗಿ ಕಾರ್ಯನಿರ್ವಹಿಸುತ್ತದೆ.

PHOTO • Shruti Sharma
PHOTO • Shruti Sharma

ಎಡ: ಮೊದಲ ಟೇಬಲ್ಲಿನಲ್ಲಿರುವ ರಾಜೇಂದರ್, ಧರಮ್ ಮತ್ತು ಕರಣ್ ನಯಗೊಳಿಸಿದ ಚೌಕಟ್ಟುಗಳ ಮೇಲೆ ಅಸ್ತರ್ (ಮೂಲ ಲೇಪನ) ಹಚ್ಚುತ್ತಿದ್ದಾರೆ. ಬಲ: ಇದರ ನಂತರ, ಅಮರಜೀತ್ ಮತ್ತೆ ಸ್ಯಾಂಡ್ ಪೇಪರ್ ಬಳಸಿ ಚೌಕಟ್ಟುಗಳನ್ನು ನಯಗೊಳಿಸುತ್ತಾರೆ ಮತ್ತು ಅವುಗಳ ಮೇಲೆ ಡ್ಯೂಕೊ ಪೇಂಟಿನ ಮತ್ತೊಂದು ಪದರವನ್ನು ಹಚ್ಚುತ್ತಾರೆ

PHOTO • Shruti Sharma
PHOTO • Shruti Sharma

ಎಡ: ಪೇಂಟ್ ಮಾಡಿದ ಚೌಕಟ್ಟುಗಳು ಬಿಸಿಲಿನಲ್ಲಿ ಒಣಗಿದ ನಂತರ, ಮದನ್ ಪ್ಲೈಬೋರ್ಡ್ ಚಕ್ಡಿ ಬದಿಯಲ್ಲಿ ಉಣ್ಣೆಯ ಕಾಯಿನ್ ಪಾಕೆಟ್‌ಗಳನ್ನು ಜೋಡಿಸುತ್ತಾರೆ. ಅವರು ನಾಲ್ಕು ಕತ್ತರಿಸಿದ ವೃತ್ತಗಳ ನಾಲ್ಕು ಬದಿಗಳಲ್ಲಿ ನಾಲ್ಕು ಗೋಲ್ಡನ್ ಬುಲೆಟಿನ್ ಬೋರ್ಡ್ ಪಿನ್‌ಗಳಲ್ಲಿ ಅರ್ಧದಷ್ಟನ್ನು ಮಾತ್ರ ಸುತ್ತುತ್ತಾರೆ, ಮತ್ತು ಉಣ್ಣೆಯ ಪಾಕೆಟ್‌ಗಳನ್ನು ವಿಸ್ತರಿಸಿ, ಹೊಲಿಗೆಗಳ ನಡುವಿನ ರಂಧ್ರಗಳನ್ನು ಪಿನ್ನುಗಳ ಮೇಲೆ ಸರಿಪಡಿಸುತ್ತಾರೆ ಮತ್ತು ನಂತರ ಅವುಗಳನ್ನು ಸಂಪೂರ್ಣವಾಗಿ ಸುತ್ತುತ್ತಾರೆ. ಬಲ: ಧರಮ್ ಒಂದು ಅಂತಿಮ ಸುತ್ತಿನ ತಪಾಸಣೆಯನ್ನು ನಡೆಸಿ, ಬೋರ್ಡುಗಳನ್ನು ಸಣ್ಣ ಹತ್ತಿ ಬಟ್ಟೆಯಿಂದ ಒರೆಸುತ್ತಾರೆ

ಕೇರಂ ಬೋರ್ಡುಗಳು ಬಿಸಿಲಿಗೆ ಒಣಗುತ್ತಿದ್ದಂತೆ ಒಂದೊಂದನ್ನಾಗಿ ತಂದು ಮದನ್‌ ಬೋರ್ಡಿನ ಅಡಿ ಭಾಗದಲ್ಲಿ ಚಕ್ಡಿಯ ಪಕ್ಕದಲ್ಲಿ ಉಣ್ಣೆಯ ಪಾಕೆಟ್‌ಗಳನ್ನು ಹಾಕಲು ತಯಾರಾಗುತ್ತಾರೆ. ಅವರು ಬೋರ್ಡ್‌ ಅಡಿಯಲ್ಲಿನ ನಾಲ್ಕು ವೃತ್ತಗಳ ಸುತ್ತ ನಾಲ್ಕು ಗೋಲ್ಡನ್‌ ಬುಲೆಟಿನ್‌ ಬಳಸಿ ಅರ್ಧ ವೃತ್ತಕ್ಕೆ ಪಾಕೆಟ್‌ ಹೊಡೆಯುತ್ತಾರೆ. ಪಾಕೆಟ್‌ ಹೊಲಿಗೆಯ ನಡುವಿನಲ್ಲಿ ಪಿನ್ನುಗಳನ್ನು ಸುತ್ತಿಗೆಯ ಸಹಾಯದಿಂದ ಒಳಗೆ ತಳ್ಳುತ್ತಾರೆ.

"ಮಾಲ್ಯಾನ ಫಟಕ್ ಮತ್ತು ತೇಜಗರ್ಹಿ ಪ್ರದೇಶಗಳಲ್ಲಿನ ಮಹಿಳೆಯರು ತಮ್ಮ ಮನೆಗಳಲ್ಲೇ ಬಿಲ್ಲೆ ಬಂದು ಬಳಸುವ ಉಣ್ಣೆಯ ಪಾಕೆಟ್ಟುಗಳನ್ನು ನೇಯುತ್ತಾರೆ" ಎಂದು ಶರ್ಮಾ ಹೇಳುತ್ತಾರೆ. "12 ಡಜನ್ ಬೆಲೆ - 144 ಪಾಕೆಟ್ - ನೂರು ರೂಪಾಯಿಗಳು" ಎಂದು ಅವರು ಹೇಳುತ್ತಾರೆ. ಅಂದರೆ, ಮಹಿಳೆಯರಿಗೆ ಪ್ರತಿ ಪಾಕೆಟ್‌ ನೇಯಲು 69 ಪೈಸೆ ನೀಡಲಾಗುತ್ತದೆ.

ಕೇರಂ ಬೋರ್ಡುಗಳು ಈಗ ಸಂಪೂರ್ಣವಾಗಿ ಸಿದ್ಧವಾಗಿವೆ. ಧರಮ್ ಒಂದು ಸಣ್ಣ ಹತ್ತಿ ಬಟ್ಟೆಯಿಂದ ಬೋರ್ಡುಗಳನ್ನು ಒರೆಸುವ ಮೂಲಕ ಅಂತಿಮ ಸುತ್ತಿನ ತಪಾಸಣೆ ನಡೆಸುತ್ತಾರೆ. ಅಮರಜೀತ್ ಒಂದೊಂದಾಗಿ ಬೋರ್ಡುಗಳನ್ನು ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡುತ್ತಾರೆ. "ಪ್ಲಾಸ್ಟಿಕ್ ಚೀಲದೊಳಗೆ ಕೇರಂ ಬಿಲ್ಲೆಗಳು ಮತ್ತು ಕೇರಂ ಪುಡಿಯ ಪೆಟ್ಟಿಗೆಯನ್ನು ಸಹ ಇರಿಸುತ್ತೇವೆ" ಎಂದು ಸುನಿಲ್ ಶರ್ಮಾ ಹೇಳುತ್ತಾರೆ. "ಬರೋಡಾದಿಂದ ಬಿಲ್ಲೆಗಳನ್ನು ತರಿಸುತ್ತೇವೆ, ಮತ್ತು ಪುಡಿ ಸ್ಥಳೀಯವಾಗಿ ಲಭ್ಯವಿದೆ."

ಆಡಲು ಸಿದ್ಧವಿರುವ ಬೋರ್ಡುಗಳನ್ನು ನಂತರ ರಟ್ಟಿನ ಪೆಟ್ಟಿಗೆಗಳಲ್ಲಿ ಒಂದರ ಮೇಲೆ ಒಂದರಂತೆ ಇರಿಸಲಾಗುತ್ತದೆ. ಮರುದಿನ ಕೆಲಸಕ್ಕೆ ಬರುವ ಕಾರಿಗಾರ್‌ಗಳು ಈ ಬೇಡಿಕೆಯ ರಾಶಿಯ ಬಾಕಿಯಿರುವ ಇನ್ನೂ 40 ತಯಾರಿಸುವ ಕೆಲಸವನ್ನು ಆರಂಭಿಸುತ್ತಾರೆ. ಇದು ಐದು ದಿನಗಳ ತನಕ ಮುಂದುವರೆಯುತ್ತದೆ. ಅದರ ನಂತರ ಆ ಬೋರ್ಡುಗಳನ್ನು ದೆಹಲಿಗೆ ಪಾರ್ಸೆಲ್ ಮಾಡಲಾಗುತ್ತದೆ ಮತ್ತು ಅಲ್ಲಿಂದ ಅವುಗಳನ್ನು ವಿದೇಶಕ್ಕೆ ರವಾನಿಸಲಾಗುತ್ತದೆ. ಅಲ್ಲಿ ಈ ಕಾರ್ಮಿಕರು ಎಂದು ಆಡದ, ಆನಂದಿಸದ ಆಟವನ್ನು ಆಡಿ ಆನಂದಿಸಲಾಗುತ್ತದೆ.

ಈ ವರದಿಗೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ಫೆಲೋಶಿಪ್ ಸಹಾಯವನ್ನು ಪಡೆಯಲಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Shruti Sharma

Shruti Sharma is a MMF-PARI fellow (2022-23). She is working towards a PhD on the social history of sports goods manufacturing in India, at the Centre for Studies in Social Sciences, Calcutta.

Other stories by Shruti Sharma

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru