ಒನ್-ಟೈಮ್ ಪಾಸ್ ವರ್ಡ್ (ಒಟಿಪಿ) ಕುರಿತು ತಮ್ಮ ಆತಂಕವನ್ನು ವ್ಯಕ್ತಪಡಿಸಿದ ಅನಿಲ್ ಥೋಂಬ್ರೆ, "ಈ ಒಟಿಪಿಗಳ ಬಗ್ಗೆ ನನಗೆ ತುಂಬಾ ಭಯವಿದೆ. ಸಹಾ ಆಕ್ಡೆ ಆಣಿ ಪೈಸಾ ಗಾಯಬ್ [ಆರು ನಂಬರ್ ಬಂತಂದ್ರೆ ದುಡ್ಡು ಪೂರಾ ಮಾಯ]. ಈ ಸಂಭಾಷಣೆಯು ಗದ್ದಲದ ರಾಜ್ಯ ಸಾರಿಗೆ ಬಸ್ ನಿಲ್ದಾಣದಲ್ಲಿ, ಬಸ್ಸುಗಳ ಹಾರ್ನ್ ಗದ್ದಲ, ಮಾರಾಟಗಾರರು ತಮ್ಮ ತಿಂಡಿಗಳು ಮತ್ತು ಬಾಟಲಿ ನೀರನ್ನು ಮಾರಾಟ ಮಾಡುವ ಸದ್ದು ಮತ್ತು ಆಗಮನ ಮತ್ತು ನಿರ್ಗಮನದ ಪ್ರಕಟಣೆಗಳ ನಡುವೆ ನಡೆಯುತ್ತಿತ್ತು. ಅವರ ಬಳಿ ಯಾರೋ ಒಟಿಪಿ ತಿಳಿಸುವಂತೆ ವಿನಂತಿಸಿದಾಗ, ಅವರು ಸಹಾಯಕ್ಕಾಗಿ ನನ್ನ ಕಡೆಗೆ ತಿರುಗಿದರು.
ಅವರು ಅರ್ಥ ಸಂಕಲ್ಪ ಎಂದು ಕರೆಯಲ್ಪಡುವ ಬಜೆಟ್ ಬಗ್ಗೆ ಈಗಾಗಲೇ ತಿಳಿದುಕೊಂಡಿದ್ದಾರೆ. "ಜನವರಿ 31ರಂದು, ಅದರ ಬಗ್ಗೆ ಕೆಲವು ಮಾಹಿತಿಯನ್ನು ರೇಡಿಯೋದಲ್ಲಿ ಪ್ರಸಾರ ಮಾಡಲಾಯಿತು. ಸರ್ಕಾರವು ಪ್ರತಿಯೊಂದು ಇಲಾಖೆಗೂ ಒಂದಷ್ಟು ಅನುದಾನವನ್ನು ನೀಡಿದೆ. ಆ ಬಗ್ಗೆ ನನಗೆ ಮಾಹಿತಿಯಿದೆ. ನನಗೆ ಎಲ್ಲವೂ ಗೊತ್ತಿಲ್ಲದೆ ಇರಬಹುದು ಆದರೆ ರೂಪಾಯಿಗೆ ಹತ್ತು ಪೈಸೆಯಷ್ಟಾದರೂ ಗೊತ್ತು!" ಎಂದು ಅವರು ಅಡ್ಕಿಟ್ಟದಲ್ಲಿ ಅಡಿಕೆ ಕತ್ತರಿಸುತ್ತಾ ಹೇಳಿದರು.
ನಾವು ಅಷ್ಟು ಗದ್ದಲವಿಲ್ಲದ ಸ್ಥಳವನ್ನು ಹುಡುಕುತ್ತಿರುವಾಗ ಥೋಬ್ರೆಯವರ ಕೆಂಪು ಮತ್ತು ಬಿಳಿ ಬಣ್ಣದ ಕೋಲು ನಮ್ಮನ್ನು ನಮ್ಮನ್ನು ಕ್ಯಾಂಟೀನ್ ಕಡೆಗೆ ಕರೆದೊಯ್ಯಿತು. ಅಂದಹಾಗೆ ಥೋಂಬ್ರೆಯವರಿಗೆ ಕಣ್ಣು ಕಾಣುವುದಿಲ್ಲ. ಆದರೆ ಅವರಿಗೆ ಅಲ್ಲಿನ ಪ್ಲಾಟ್ ಫಾರ್ಮ್, ಜನಸಂದಣಿ, ಕ್ಯಾಂಟೀನ್ ಕೌಂಟರ್‌ಗಳು ಮತ್ತು ಮೆಟ್ಟಿಲುಗಳ ಬಗ್ಗೆ ಬಹಳ ಚೆನ್ನಾಗಿ ತಿಳಿದಿದೆ. "ನಾನು ಕೇವಲ ಒಂದು ತಿಂಗಳ ಮಗುವಿದ್ದಾಗ ದಡಾರ ಬಂದು ದೃಷ್ಟಿ ಹೋಯಿತು ಎಂದು ಮನೆಯಲ್ಲಿ ಹೇಳುತ್ತಾರೆ."
![](/media/images/02-1738822924160-MK-Mai-baap_sarkar_forget.max-1400x1120.jpg)
ಬರೂಲ್ ಎನ್ನುವ ಊರಿನವರಾದ ಸಂಗೀತಗಾರ ಅನಿಲ್ ಥೋಂಬ್ರೆ, ಬಜೆಟ್ಟಿನಲ್ಲಿ ವಿಕಲಚೇತನರತ್ತ ಹೆಚ್ಚು ಗಮನಹರಿಸಬೇಕು ಎಂದು ಅಭಿಪ್ರಾಯಪಡುತ್ತಾರೆ
ತುಳಜಾಪುರ ಪಟ್ಟಣದಿಂದ 20 ಕಿಲೋಮೀಟರ್ ದೂರದಲ್ಲಿರುವ ಸುಮಾರು 2,500 ಜನಸಂಖ್ಯೆ ಹೊಂದಿರುವ ಬರುಲ್ ಎಂಬ ಹಳ್ಳಿಯವರಾದ ಥೋಂಬ್ರೆ, ಹಾಡು ಮತ್ತು ಭಕ್ತಿ ಸಂಗೀತಕ್ಕೆ ಮೀಸಲಾಗಿರುವ ಭಜನಿ ಮಂಡಲದ ಒಬ್ಬ ನಿಪುಣ ತಬಲಾ ಮತ್ತು ಪಖ್ವಾಜ್ ವಾದಕ. ಸಂಘಟಕರ ಆರ್ಥಿಕ ಕೊಡುಗೆಗಳು ಅವರ ಮಾಸಿಕ 1,000 ರೂ. ಅಂಗವೈಕಲ್ಯ ಪಿಂಚಣಿಗೆ ಪೂರಕವಾಗಿವೆ. "ಇದನ್ನು ಎಂದಿಗೂ ಸಮಯಕ್ಕೆ ಸರಿಯಾಗಿ ನೀಡಲಾಗುವುದಿಲ್ಲ" ಎಂದು ಅವರು ಹೇಳುತ್ತಾರೆ. ಹೆಚ್ಚುವರಿಯಾಗಿ, ಬ್ಯಾಂಕಿನಿಂದ ಹಣವನ್ನು ಹಿಂಪಡೆಯಲು ಅವರು ತುಳಜಾಪುರಕ್ಕೆ ಪ್ರಯಾಣಿಸಬೇಕು. ಇತ್ತೀಚೆಗೆ, ಅವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಮಂಜೂರಾಗಿದ್ದು, ಶೀಘ್ರದಲ್ಲೇ ಅದರ ಕೆಲಸ ಪ್ರಾರಂಭಿಸಲಿದ್ದಾರೆ. "ಮುಂದುವರಿಯಲು, ನನ್ನ ಬ್ಯಾಂಕ್ ಖಾತೆಗೆ ಮೊದಲ ಕಂತು ಬರಬೇಕು, ಮತ್ತು ಅದಕ್ಕಾಗಿ, ನಾನು KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು" ಎಂದು 55 ವರ್ಷ ವಯಸ್ಸಿನ ಥೋಂಬ್ರೆ ವಿವರಿಸುತ್ತಾರೆ.
ಇಂದು ಅವರು ತುಳಜಾಪುರದಲ್ಲಿನ ಲಾಂಡ್ರಿಯಿಂದ ತಮ್ಮ ಬಟ್ಟೆಗಳನ್ನು ಪಡೆದುಕೊಳ್ಳಲು ಬಂದಿದ್ದರು, ಈ ಸೇವೆಯನ್ನು ಅವರಿಗೆ ಬರುಲ್‌ನ ಸ್ನೇಹಿತರೊಬ್ಬರು ಒದಗಿಸಿದ್ದಾರೆ. "ನಾನು ಒಬ್ಬನೇ ಇರುವುದು ಮತ್ತು ಎಲ್ಲಾ ಮನೆಕೆಲಸಗಳನ್ನು ನಾನೇ ಮಾಡಿಕೊಳ್ಳುತ್ತೇನೆ. ಅಡುಗೆ ನಾನೇ ಮಾಡಿಕೊಳ್ಳುತ್ತೇನೆ ಮತ್ತು ನಲ್ಲಿಯಿಂದ ನೀರು ಹಿಡಿಯುತ್ತೇಬೆ. ಬಟ್ಟೆ ಒಗೆಯಲು ನನಗೆ ಬೇಸರ, ನೋಡಿ!" ಅವರು ಹರ್ಷಚಿತ್ತದಿಂದ ನಗುತ್ತಾ ಹೇಳುತ್ತಾರೆ.
ಥೋಂಬ್ರೆಯವರ ಪ್ರಕಾರ, “ಸರ್ಕಾರವೆನ್ನುವುದು ಮಾಯಿ-ಬಾಪ್ ಇದ್ದಂತೆ, ಅದು ಎಲ್ಲರನ್ನೂ ನೋಡಿಕೊಳ್ಳಬೇಕು. ಆದರೆ ನನ್ನ ಬಳಿ ಕೇಳಿದರೆ ಅದು ಬಜೆಟ್ ಸಮಯದಲ್ಲಿ ಅಂಗವಿಕಲರತ್ತ ಒಂದಷ್ಟು ಹೆಚ್ಚೇ ಗಮನಹರಿಸಬೇಕು.”
2025ರ ಕೇಂದ್ರ ಬಜೆಟ್ ಭಾಷಣದಲ್ಲಿ ಅಂಗವೈಕಲ್ಯ ಅಥವಾ ದಿವ್ಯಾಂಗರ ಅಥವಾ ಅಂಗವಿಕಲ ವ್ಯಕ್ತಿಗಳ ಕುರಿತಾಗಿ ಒಮ್ಮೆಯೂ ಉಲ್ಲೇಖಿಸಿಲ್ಲ ಎನ್ನುವುದು ಥೋಂಬ್ರೆಯವರಿಗೆ ತಿಳಿದಿಲ್ಲ.
ಅನುವಾದ: ಶಂಕರ. ಎನ್. ಕೆಂಚನೂರು