ಟಕ್-ಟಕ್‌-ಟಕ್!

ಕೊಡವಟಿಪುಡಿಯ ಟಾರ್ಪಲಿನ್‌ನಿಂದ ಮಾಡಿದ ಗುಡಿಸಲಿನಿಂದ ಈ ಲಯಬದ್ಧ ಶಬ್ಧ ಕೇಳಿ ಬರುತ್ತಿದೆ. ಮುಳಂಪಕ ಭದ್ರರಾಜು ಅವರು ಚೆಕ್ಕ ಸುತ್ತಿ ಬಳಸಿ ಮಡಕೆಗೆ ಬಡಿಯುತ್ತಿದ್ದಾರೆ. ಮಡಕೆಗೆ ಪರಿಪೂರ್ಣ ಆಕಾರ ನೀಡಲು ಈ ಮರದ ಸುತ್ತಿಗೆಯನ್ನು ಬಳಸುತ್ತಾರೆ.

“ದಪ್ಪನೆಯ ಈ ಚೆಕ್ಕ ಸುತ್ತಿಯನ್ನು ಮಡಕೆಯ ಕೆಳಭಾಗವನ್ನು ಮುಚ್ಚಲು ಬಳಸುತ್ತೇವೆ .ಹೀಗೆ ಆಗಾಗ ಮಾಡುತ್ತಿದ್ದರೆ ಇದರ ಕೆಳಭಾಗ ಹೆಚ್ಚು ಮೃದುವಾಗುತ್ತದೆ. ಸಣ್ಣ ಚೆಕ್ಕ ಸುತ್ತಿಯನ್ನು ಇಡೀ ಮಡಕೆಯನ್ನು ನಯಗೊಳಿಸುವುದಕ್ಕೆ ಬಳಸುತ್ತೇವೆ,” ಎಂದು 70 ವರ್ಷದ ಭದ್ರರಾಜು ವಿವರಿಸುತ್ತಾರೆ. ಅವರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಸುತ್ತಿಗೆಗಳನ್ನು ಬದಲಾಯಿಸುತ್ತಾರೆ.

ತೆಳ್ಳಗಿನ ಮತು ಸಣ್ಣಗಾತ್ರದ ಸುತ್ತಿಗೆಯನ್ನು ತಾಳೆ ಮರದ ಕೊಂಬೆಗಳಿಂದ (ಬೊರಾಸಸ್ ಫ್ಲಾಬೆಲಿಫರ್) ಮತ್ತು ದಪ್ಪದ ಸುತ್ತಿಗೆಯನ್ನು ಅರ್ಜುನ ಮರದಿಂದ (ಟರ್ಮಿನಾಲಿಯಾ ಅರ್ಜುನ) ತಯಾರಿಸಲಾಗುತ್ತದೆ ಎಂದು ಅವರು ಹೇಳುತ್ತಾರೆ. ಅವರು ತೆಳ್ಳಗಿನ ಚೆಕ್ಕ ಸುತ್ತಿಗೆಯನ್ನು ಬಳಸುವಾಗ ಬಡಿತದ ಶಬ್ದ ಮೆತ್ತಗಿರುತ್ತದೆ.

20 ಇಂಚು ವ್ಯಾಸದ ದೊಡ್ಡ ಮಡಕೆಯನ್ನು ಮಾಡಲು ಅವರು ಸುಮಾರು 15 ನಿಮಿಷ ತೆಗೆದುಕೊಳ್ಳುತ್ತಾರೆ. ಮಡಕೆಯ ಯಾವುದಾದರೂ ಒಂದು ಬದಿ ಒಡೆದು ಹೋದರೆ, ತಕ್ಷಣ ಜೇಡಿಮಣ್ಣನ್ನು ಅಂಟಿಸಿ, ಬಡಿದು ಸರಿಪಡಿಸುತ್ತಾರೆ.

Mulampaka Bhadraraju uses a chekka sutti (left) to smoothen the pot.
PHOTO • Ashaz Mohammed
The bowl of ash (right) helps ensure his hand doesn't stick to the wet pot
PHOTO • Ashaz Mohammed

ಮುಳಂಪಕ ಭದ್ರರಾಜು ಅವರು ಮಡಕೆಯನ್ನು ನಯ ಮಾಡಲು ಚೆಕ್ಕ ಸುತ್ತಿಗೆ (ಎಡ) ಬಳಸುತ್ತಾರೆ. ಬಟ್ಟಲಿನಲ್ಲಿರುವ ಬೂದಿ (ಬಲ) ಒದ್ದೆ ಮಡಕೆಯ ಮೇಲೆ ಅವರ ಕೈ ಅಂಟದಂತೆ ಮಾಡುತ್ತದೆ

ಭದ್ರರಾಜು ಅವರು ತಮ್ಮ 15 ವರ್ಷ ಪ್ರಾಯದಲ್ಲಿ ಕುಂಬಾರಿಕೆ ವೃತ್ತಿ ಆರಂಭಿಸಿದರು. ಅನಕಾಪಲ್ಲಿ ಜಿಲ್ಲೆಯ ಕೊಡವಟಿಪುಡಿ ಎಂಬ ಹಳ್ಳಿಯಲ್ಲಿ ವಾಸಿಸುವ ಇವರು, ಇಲ್ಲೇ ಕೆಲಸ ಮಾಡುತ್ತಾರೆ. ಇವರು ಆಂಧ್ರಪ್ರದೇಶದಲ್ಲಿ ಇತರ ಹಿಂದುಳಿದ ಜಾತಿ (ಒಬಿಸಿ) ಎಂದು ಪರಿಗಣಿಸಲ್ಪಟ್ಟಿರುವ ಕುಮ್ಮಾರ (ಕುಂಬಾರ) ಸಮುದಾಯಕ್ಕೆ ಸೇರಿದವರು.

15 ವರ್ಷಗಳ ಹಿಂದೆ ತಾವು ಖರೀದಿಸಿದ ಜಮೀನಿನಲ್ಲಿ ಇರುವ ಕೆರೆಯೊಂದರಿಂದ ಈ ಏಳನೇ ತಲೆಮಾರಿನ ಕುಂಬಾರ ಮಣ್ಣನ್ನು ತೆಗೆಯುತ್ತಾರೆ. ಅವರು ಈ ಅರ್ಧ ಎಕರೆ ಭೂಮಿಯನ್ನು 1,50,000 ರುಪಾಯಿ ಕೊಟ್ಟು ಖರೀದಿಸಿದ್ದರು. ಆದರೂ ವರ್ಷಕ್ಕಾಗುವಷ್ಟು 400 ಕೆಜಿ ಎರ್ರಾ ಮಿಟ್ಟಿಯನ್ನು (ಕೆಂಪು ಜೇಡಿಮಣ್ಣು)  1,000 ರುಪಾಯಿ ಕೊಟ್ಟು ಖರೀದಿಸುತ್ತಾರೆ. ಇದನ್ನು ಪಕ್ಕದ ಹಳ್ಳಿ ಕೋಟೌರಾಟ್ಲಾದಲ್ಲಿರುವ ಮರಳು, ಮಣ್ಣು ಮತ್ತು ಜಲ್ಲಿ ಸರಬರಾಜು ಮಾಡುವವರು ಇವರ ಮನೆಗೆ ತಂದು ಹಾಕುತ್ತಾರೆ.

ತೆಂಗಿನ ಗರಿಗಳನ್ನು ಬಳಸಿ ಮತ್ತು ಟಾರ್ಪಾಲಿನ್‌ನಿಂದ ಮೇಲ್ಛಾವಣಿ ಮಾಡಿ ತಮ್ಮ ಜಮೀನಿನಲ್ಲಿ ಎರಡು ಗುಡಿಸಲುಗಳನ್ನು ಕಟ್ಟಿಕೊಂಡಿದ್ದಾರೆ. ಇದರಿಂದ ಮಳೆಗಾಲದಲ್ಲಿ ಇವರ ಕೆಲಸಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ವರ್ಷಪೂರ್ತಿ ಕೆಲಸ ಮಾಡಲು ಸುಲಭವಾಗುತ್ತದೆ. ಮಡಕೆಗಳನ್ನು ಮಾಡಲು ಮತ್ತು ಆಕಾರ ನೀಡಲು ಒಂದು ಗುಡಿಸಲನ್ನು ಬಳಸಿದರೆ, ಇನ್ನೊಂದು ಸಣ್ಣ ಗುಡಿಸಲಿನಲ್ಲಿ ಅವುಗಳನ್ನು ಸುಡುತ್ತಾರೆ. "200-300 ಮಡಕೆಗಳಿದ್ದಾಗ, ನಾವು ಅವುಗಳನ್ನು [ಕಟ್ಟಿಗೆಗಳ ಮೇಲೆ ಇಟ್ಟು] ಸುಡುತ್ತೇವೆ," ಎಂದು ಅವರು ಹೇಳುತ್ತಾರೆ. ಈ ಕಟ್ಟಿಗೆಗಳನ್ನು ಹತ್ತಿರದ ಮೈದಾನದಿಂದ ಸಂಗ್ರಹಿಸಲಾಗುತ್ತದೆ. "ಅವು [ಮಡಕೆಗಳು] ಗುಡಿಸಲಿನಲ್ಲಿಯೇ ಒಣಗುತ್ತವೆ," ಎಂದು ಭದ್ರರಾಜು ಹೇಳುತ್ತಾರೆ.

ತಮ್ಮ ಉಳಿತಾಯದ ಹಣದಿಂದ ಈ ಜಮೀನು ಖರೀದಿಸಿದ್ದಾರೆ. “ಅವರು [ಸ್ಥಳೀಯ ಬ್ಯಾಂಕ್‌ಗಳು] ನಂಗೆ ಸಾಲ ಕೊಡಲಿಲ್ಲ. ತುಂಬಾ ಸರ್ತಿ ಕೇಳಿದೆ, ಆದರೆ ಯಾರೂ ನನಗೆ ಸಾಲ ಕೊಡಲಿಲ್ಲ,” ಎಂದು ಭದ್ರರಾಜು ಹೇಳುತ್ತಾರೆ. ಅವರಿಗೆ ನಿಶ್ಚಿತ ಆದಾಯ ಇಲ್ಲದೇ ಇರುವುದರಿಂದ ಖಾಸಗಿಯಾಗಿ ಸಾಲ ಕೊಡುವವರ ಜೊತೆ ವ್ಯವಹಾರ ಮಾಡಲು ಇಷ್ಟವಿಲ್ಲ. ಅವರು ಪ್ರತಿ 10 ಮಡಕೆಗಳನ್ನು ತಯಾರಿಸುವಾಗ ಒಂದೆರಡು ಒಡೆದು ಹೋಗುತ್ತವೆ. ಎಲ್ಲಾ ಮಡಕೆಗಳು ಪೂರ್ತಿಯಾಗಿ ಒಣಗುವುದಿಲ್ಲ, ಒಣಗಿಸುವಾಗ ಮಡಕೆಗಳ ಒಂದು ಭಾಗ ಒಡೆಯುತ್ತದೆ," ಎಂದು ಗುಡಿಸಲಿನ ಮೂಲೆಯಲ್ಲಿ ಬಿದ್ದಿರುವ ಹತ್ತಾರು ಬಿರುಕು ಬಿಟ್ಟ ಮಡಕೆಗಳನ್ನು ತೋರಿಸುತ್ತಾ ಹೇಳುತ್ತಾರೆ.

The master potter can finish shaping about 20-30 pots a day
PHOTO • Ashaz Mohammed
The master potter can finish shaping about 20-30 pots a day
PHOTO • Ashaz Mohammed

ನುರಿತ ಕುಂಬಾರರಾಗಿರುವ ಇವರು ದಿನಕ್ಕೆ 20-30 ಮಡಿಕೆಗಳನ್ನು ಮಾಡುತ್ತಾರೆ

ಆರಂಭದಿಂದ ಕೊನೆಯ ವರೆಗೆ ಮಡಕೆಗಳನ್ನು ತಯಾರಿಸುವ ಇಡೀ ಪ್ರಕ್ರಿಯೆಯನ್ನು ಮುಗಿಸಲು ಅವರಿಗೆ ಸುಮಾರು ಒಂದು ತಿಂಗಳು ಬೇಕಾಗುತ್ತದೆ; ಅವರು ದಿನಕ್ಕೆ ಸುಮಾರು 10 ಗಂಟೆ ಕೆಲಸ ಮಾಡುತ್ತಾರೆ. "ನನ್ನ ಹೆಂಡತಿ ಕೈಜೋಡಿಸಿದರೆ, ದಿನಕ್ಕೆ 20-30 ಮಡಕೆಗಳನ್ನು [ಮಾಡಿ] ಮುಗಿಸಬಹುದು," ಎಂದು ಹೇಳುತ್ತಾ ಮಡಿಕೆಗೆ ಬಡಿಯುವ ಕೆಲಸವನ್ನು ಮುಂದುವರೆಸುತ್ತಾರೆ. ಮಧ್ಯೆ ನಿಲ್ಲಿಸಿ ಏನಾದರೊಂದು ವಿಚಾರವನ್ನು ಎತ್ತಿಕೊಂಡು ಮಾತನಾಡುತ್ತಾರೆ. ತಿಂಗಳ ಕೊನೆಯಲ್ಲಿ ಸುಮಾರು 200-300 ಮಡಕೆಗಳು ತಯಾರಾಗುತ್ತವೆ.

ಆರು ಮಂದಿ ಸದಸ್ಯರಿರುವ ಇವರ ಕುಟುಂಬಕ್ಕೆ ಈ ವೃತ್ತಿಯೇ ಏಕೈಕ ಆದಾಯದ ಮೂಲ. ಅವರ ಮನೆಯಲ್ಲಿ ಮೂರು ಹೆಣ್ಣುಮಕ್ಕಳು, ಒಬ್ಬ ಮಗ ಮತ್ತು ಹೆಂಡತಿ ಇದ್ದಾರೆ. ಇವರು ಹೇಳುವಂತೆ, "ಇದು ಮಾತ್ರ," ಅವರ ಮನೆಯ ವೆಚ್ಚಗಳು ಮತ್ತು ಮಕ್ಕಳ ಮದುವೆಗಳಿಗೆ ಬೇಕಾದ ಹಣ ಕೊಡುತ್ತದೆ.

ಭದ್ರರಾಜು ಅವರು ತಾವು ತಯಾರಿಸಿದ ಮಡಕೆಗಳನ್ನು ವಿಶಾಖಪಟ್ಟಣಂ ಮತ್ತು ರಾಜಮಂಡ್ರಿಯ ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಈ ವ್ಯಾಪಾರಿಗಳೇ ಪ್ರತಿ ವಾರ ಹಳ್ಳಿಗೆ ಬಂದು ಸುಮಾರು 30 ಕುಂಬಾರರಿಂದ ಖರೀದಿಸಿ ತೆಗೆದುಕೊಂಡು ಹೋಗುತ್ತಾರೆ. ಮಡಕೆಗಳನ್ನು ಬೇರೆ ಬೇರೆ ಉದ್ದೇಶಗಳಿಗೆ ಮಾರುಕಟ್ಟೆಯಲ್ಲಿ ಮಾರಲಾಗುತ್ತದೆ: "ಅಡುಗೆ ಮಾಡಲು, ಕರುಗಳಿಗೆ ಬಾಯಾರಿಕೆ ಕುಡಿಸಲು, ಅವರವರ ಅಗತ್ಯಗಳಿಗೆ ತಕ್ಕಂತೆ ಮಾರಲಾಗುತ್ತದೆ," ಎಂದು ಕುಂಬಾರ ಭದ್ರರಾಜು ಹೇಳುತ್ತಾರೆ.

"ವಿಶಾಖಪಟ್ಟಣದ ಸಗಟು ವ್ಯಾಪಾರಿಗಳು ಒಂದು ಮಡಕೆಗೆ 100 ರೂಪಾಯಿ ಕೊಟ್ಟು ಖರೀದಿಸುತ್ತಾರೆ, ಆದರೆ ರಾಜಮಂಡ್ರಿಯ ಸಗಟು ವ್ಯಾಪಾರಿಗಳು ಪ್ರತಿ ಮಡಕೆಯನ್ನು 120 ರೂಪಾಯಿಗಳಿಗೆ ಖರೀದಿಸುತ್ತಾರೆ. ಎಲ್ಲವೂ ಸರಿಯಾಗಿ ಆದರೆ, ನಾನು [ಒಂದು ತಿಂಗಳಲ್ಲಿ] 30,000 ರೂಪಾಯಿಗಳನ್ನು ಮಾಡಬಹುದು," ಎಂದು ಭದ್ರರಾಜು ಹೇಳುತ್ತಾರೆ.

ಭದ್ರರಾಜು ಅವರು ಹತ್ತು ವರ್ಷಗಳ ಹಿಂದೆ ಗೋವಾದಲ್ಲಿ ಕಲಾಕೃತಿಗಳನ್ನು ಮತ್ತು ಕರಕುಶಲ ವಸ್ತುಗಳನ್ನು ಮಾರುವ ಅಂಗಡಿಯೊಂದರಲ್ಲಿ ಕುಂಬಾರರಾಗಿ ಕೆಲಸ ಮಾಡುತ್ತಿದ್ದರು. "ಬೇರೆ ರಾಜ್ಯಗಳ ಹಲವಾರು ಜನರು ಅಲ್ಲಿದ್ದರು, ಎಲ್ಲರೂ ಬೇರೆ ಬೇರೆ ಕರಕುಶಲ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು," ಎಂದು ಅವರು ಹೇಳುತ್ತಾರೆ. ಅಲ್ಲಿ ಅವರಿಗೆ ಪ್ರತಿ ಮಡಕೆಗೆ 200-250 ರುಪಾಯಿ ಸಿಗುತ್ತಿತ್ತು. "ಆದರೆ ಅಲ್ಲಿನ ಊಟ ನನಗೆ ಸರಿಹೊಂದಲಿಲ್ಲ, ಆದ್ದರಿಂದ ನಾನು ಆರು ತಿಂಗಳ ಬಳಿಕ ಅಲ್ಲಿಂದ ಹೊರಟು ಬಂದೆ," ಎಂದು ಅವರು ಹೇಳುತ್ತಾರೆ.

Manepalli switched to a electric wheel five years ago
PHOTO • Ashaz Mohammed

ಐದು ವರ್ಷಗಳ ಹಿಂದೆ ಮನೆಪಲ್ಲಿಯವರು ವಿದ್ಯುತ್ ಚಾಲಿತ ಚಕ್ರ ಬಳಸಲು ಆರಂಭಿಸಿದರು

‘ಕಳೆದ ಆರೇಳು ವರ್ಷಗಳಿಂದ ನನ್ನ ಹೊಟ್ಟೆಯಲ್ಲಿ ಹುಣ್ಣಾಗುತ್ತಿದೆ,’ ಎನ್ನುತ್ತಾರೆ ಮನೆಪಲ್ಲಿ. ಹಸ್ತಚಾಲಿತ ಚಕ್ರವನ್ನು ತಿರುಗಿಸುವಾಗ ಅವರಿಗೆ ನೋವಾಗುತ್ತದೆ. ಯಂತ್ರಚಾಲಿತ ಚಕ್ರ ಬಳಸಿದರೆ ನೋವಾಗುವುದಿಲ್ಲ. ಕುಂಬಾರ ಸಮುದಾಯಕ್ಕೆ ಸೇರಿದ 46ರ ಹರೆಯದ ಇವರು ತಮ್ಮ ಯವ್ವನದಿಂದಲೂ ಈ ಕೆಲಸ ಮಾಡುತ್ತಿದ್ದಾರೆ

ಕುಂಬಾರ ಕಾಮೇಶ್ವರರಾವ್ ಮನೆಪಲ್ಲಿ ಅವರ ಮನೆ ಕೆಲವೇ ಮೀಟರ್ ದೂರದಲ್ಲಿದೆ. ಇಲ್ಲಿ ಕೇಳಿಬರುತ್ತಿದ್ದ ಚೆಕ್ಕ ಸುತ್ತಿಗೆಯ ಶಬ್ದ ನಿಂತು ಹೋಗಿ ಯಂತ್ರಚಾಲಿತ ಚಕ್ರದ ಮೆಲುವಾದ ಶಬ್ದ ಕೇಳಿಬರುತ್ತಿದೆ. ಈಗ ಈ ಚಕ್ರದ ಮೇಲೆಯೇ ಮಡಕೆಯನ್ನು ತಯಾರಿಸಲಾಗುತ್ತಿದೆ.

ಗ್ರಾಮದಲ್ಲಿರುವ ಎಲ್ಲಾ ಕುಂಬಾರರು ಯಂತ್ರಚಾಲಿತ ಚಕ್ರಗಳನ್ನು ಬಳಸುತ್ತಿದ್ದಾರೆ. ಭದ್ರರಾಜು ಮಾತ್ರ ಇನ್ನೂ ಕೈಯಿಂದಲೇ ಚಕ್ರ ತಿರುಗಿಸುತ್ತಿದ್ದಾರೆ. ಅವರಿಗೆ ಯಂತ್ರ ಚಾಲಿತ ಚಕ್ರವನ್ನು ಬಳಸುವುದರಲ್ಲಿ ಆಸಕ್ತಿಯಿಲ್ಲ. "ನಾನು 15 ವರ್ಷ ಪ್ರಾಯದಿಂದಲೂ ಈ ಕೆಲಸವನ್ನು ಮಾಡುತ್ತಿದ್ದೇನೆ," ಎಂದು ಹೆಚ್ಚಿನ ಕಾಲವನ್ನು ದುಡಿಮೆಯಲ್ಲಿಯೇ ಕಳೆದ ಬಗ್ಗೆ ಹೇಳುತ್ತಾರೆ. ಯಂತ್ರ-ಚಾಲಿತ ಚಕ್ರಗಳನ್ನು ಸಣ್ಣ ಮಡಕೆಗಳನ್ನು ಮಾಡಲು ತಯಾರಿಸಲಾಗಿದೆ. ಇದನ್ನು ಬಳಸಿ ಭದ್ರರಾಜು ತಯಾರಿಸುವ ಸಾಂಪ್ರದಾಯಿಕ 10-ಲೀಟರ್‌ ಮಡಕೆಯನ್ನು ಮಾಡಲು ಸಾಧ್ಯವಿಲ್ಲ.

ಐದು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಶಸ್ತ್ರಚಿಕಿತ್ಸೆಯಾದ ಮೇಲೆ ಮನೆಪಲ್ಲಿಯವರು ಇತರ ಅನೇಕ ಹಿರಿಯ ಕುಂಬಾರರಂತೆ ಯಂತ್ರಚಾಲಿತ ಚಕ್ರವನ್ನು ಬಳಸಲು ಶುರುಮಾಡಿದರು. "ಕಳೆದ 6-7 ವರ್ಷಗಳಿಂದ ನನ್ನ ಹೊಟ್ಟೆಯಲ್ಲಿ ಹುಣ್ಣಾಗಿದೆ,” ಎಂದು ಅವರು ಹೇಳುತ್ತಾರೆ. ಕೈಯಲ್ಲಿ ಚಕ್ರವನ್ನು ತಿರುಗಿಸುವಾಗ ಅವರಿಗೆ ನೋವು ಉಂಟಾಗುತ್ತದೆ. ಯಂತ್ರಚಾಲಿತ ಚಕ್ರ ಬಳಸಿದ ಮೇಲೆ ನೋವು ಇಲ್ಲವಾಗಿದೆ.

“12,000 ರೂಪಾಯಿ ಕೊಟ್ಟು ಯಂತ್ರಚಾಲಿತ ಕುಂಬಾರ ಚಕ್ರವನ್ನು ಖರೀದಿಸಿದೆ. ಅದು ಹಾಳಾದ ಮೇಲೆ, ನಾನು ಖಾದಿ ಗ್ರಾಮೀಣ ಸೊಸೈಟಿಯಿಂದ ಇನ್ನೊಂದು ಚಕ್ರವನ್ನು ಉಚಿತವಾಗಿ ಪಡೆದೆ. ನಾನು ಈಗ ಅದರಲ್ಲೇ ಮಡಕೆಗಳನ್ನು ಮಾಡುತ್ತೇನೆ.”

Left: Manepalli’s batch of pots being baked.
PHOTO • Ashaz Mohammed
Right: He holds up a clay bottle he recently finished baking
PHOTO • Ashaz Mohammed

ಎಡ: ಬೆಂಕಿಯಲ್ಲಿ  ಸುಡುತ್ತಿರುವ ಮನೆಪಲ್ಲಿಯವರ ಮಡಕೆಗಳು. ಬಲ:ಇತ್ತೀಚೆಗಷ್ಟೇ ಸುಡಲ್ಪಟ್ಟ ಮಣ್ಣಿನ ಬಾಟಲಿಯೊಂದಿಗೆ ಮನೆಪಲ್ಲಿ

“ಸಾದಾ [ಸಣ್ಣ] ಮಡಕೆಯ ಬೆಲೆ 5 [ರೂಪಾಯಿಗಳು]. ಅದರ ಮೇಲೆ ಡಿಸೈನ್ ಮಾಡಿದರೆ 20 ರುಪಾಯಿಯಾಗುತ್ತದೆ,” ಎನ್ನುವ ಅವರು, ಇವುಗಳನ್ನು ಅಲಂಕಾರಕ್ಕೆ ಮಾತ್ರ ಬಳಸುತ್ತಾರೆ ಎನ್ನುತ್ತಾರೆ. ಕುಮ್ಮಾರ ಸಮುದಾಯದವರಾದ 46ರ ಹರೆಯದ ಇವರು ಯವ್ವನದ ದಿನಗಳಿಂದಲೂ ತಮ್ಮ ತಂದೆಯೊಂದಿಗೆ ಈ ಕೆಲಸ ಮಾಡುತ್ತಿದ್ದಾರೆ. 15 ವರ್ಷಗಳ ಹಿಂದೆ ಅವರ ತಂದೆ ತೀರಿಕೊಂಡ ನಂತರ ಒಂಟಿಯಾಗಿ ಈ ವೃತ್ತಿಯನ್ನು ಮುಂದುವರಿಸಿದ್ದಾರೆ.

ಮನೆಪಲ್ಲಿಯವರೇ ಆರು ಮಂದಿಯಿರುವ ಕುಟುಂಬದಲ್ಲಿ ಆದಾಯ ತರುವ ಏಕೈಕ ಸದಸ್ಯ, ಇವರ ಮನೆಯಲ್ಲಿ ಮೂವರು ಮಕ್ಕಳು, ಹೆಂಡತಿ ಮತ್ತು ತಾಯಿ ಇದ್ದಾರೆ. “ನಾನು ಪ್ರತಿದಿನ ಕೆಲಸ ಮಾಡಿದರೆ, 10,000 [ತಿಂಗಳಿಗೆ ರೂಪಾಯಿ] ಗಳಿಸುತ್ತೇನೆ. ಮಡಕೆಗಳನ್ನು ಸುಡಲು ಬೇಕಾದ ಇದ್ದಿಲನ್ನು ಸುಮಾರು 2,000 ರುಪಾಯಿ ಕೊಟ್ಟು ತರುತ್ತೇನೆ. ಆಮೇಲೆ ನನ್ನ ಬಳಿ ಉಳಿಯುವುದು ಕೇವಲ 8,000 ರೂಪಾಯಿ ಮಾತ್ರ,” ಎಂದು ಅವರು ಹೇಳುತ್ತಾರೆ.

ಅನುಭವಿ ಕುಂಬಾರರಾದ ಇವರ ಆರೋಗ್ಯ ಹದಗೆಟ್ಟ ಕಾರಣ ಇವರಿಗೆ  ನಿರಂತರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಒಮ್ಮೊಮ್ಮೆ ಕೆಲಸವನ್ನೇ ಮಾಡುವುದಿಲ್ಲ. ಬೇರೆ ಏನಾದರೂ ಕೆಲಸ ಮಾಡುತ್ತೀರಾ ಎಂದು ಕೇಳಿದಾಗ, "ನಾನು ಬೇರೆ ಏನು ಮಾಡಬಹುದು? ಇದು ನನ್ನ ಕೈಯಲ್ಲಿರುವ ಒಂದೇ ಒಂದು ಉದ್ಯೋಗ" ಎಂದು ಹೇಳುತ್ತಾರೆ.

ಅನುವಾದಕರು: ಚರಣ್‌ ಐವರ್ನಾಡು

Student Reporter : Ashaz Mohammed

Ashaz Mohammed is a student of Ashoka University and wrote this story during an internship with PARI in 2023

Other stories by Ashaz Mohammed
Editor : Sanviti Iyer

Sanviti Iyer is Assistant Editor at the People's Archive of Rural India. She also works with students to help them document and report issues on rural India.

Other stories by Sanviti Iyer
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad