ಆನೆಯು ತನ್ನ ಫಂದಿಯನ್ನು (ಹಿರಿಯ ತರಬೇತುದಾರ) ಯಾವತ್ತಿಗೂ ಮರೆಯುವುದಿಲ್ಲ ಎಂದು ಶರತ್ ಮೋರನ್ ಹೇಳುತ್ತಾರೆ. ಇವರು 90ಕ್ಕೂ ಹೆಚ್ಚು ಆನೆಗಳಿಗೆ ತರಬೇತಿ ನೀಡಿ ಪಳಗಿಸಿದ್ದಾರೆ. ಈ ದಪ್ಪ ಚರ್ಮದ ಪ್ರಾಣಿಯ ಇಡೀ ಜೀವಿತಾವಧಿಯಲ್ಲಿ, ತಾನು ದಟ್ಟವಾದ ಕಾಡಿನಲ್ಲಿ ಇತರ ಕಾಡು ಆನೆಗಳ ಹಿಂಡಿನ ನಡುವೆ ಇದ್ದರೂ ಕೂಡ ತನ್ನ ಫಂದಿಯನ್ನು ಕಂಡ ಕೂಡಲೇ ಓಡೋಡಿ ಬರುತ್ತದೆ ಎಂದು ಅವರು ಹೇಳುತ್ತಾರೆ.
ತಾತ್ಕಾಲಿಕ ತರಬೇತಿ ಶಿಬಿರ ಪಿಲ್ಖಾನಾದಲ್ಲಿ ನವಜಾತ ಹಸುಳೆ ಆನೆಮರಿಗೆ ಸ್ವಲ್ಪ ಸ್ವಲ್ವವೇ ನಿಧಾನವಾಗಿ ಮಾನವ ಸ್ಪರ್ಶದ ಅನುಭವವನ್ನು ನೀಡಲಾಗುತ್ತದೆ. ದಿನನಿತ್ಯ ಅನೆಯನ್ನು ಸ್ಪರ್ಶಿಸಲಾಗುತ್ತದೆ. "ತರಬೇತಿ ಸಮಯದಲ್ಲಿ ಅವುಗಳಿಗೆ ಆಗುವ ಸಣ್ಣ ನೋವು ಕೂಡ ಅವಕ್ಕೆ ತುಂಬಾ ದೊಡ್ಡದು," ಎಂದು ಶರತ್ ಹೇಳುತ್ತಾರೆ.
ದಿನದಿಂದ ದಿನಕ್ಕೆ ಆ ಮರಿ ಆನೆಯ ಸುತ್ತ ಹೆಚ್ಚೆಚ್ಚು ಜನರನ್ನು ಸೇರಿಸಿ ಅದಕ್ಕೆ ಕಿರಿಕಿರಿಯಾಗದೇ ಇರುವ ಮಟ್ಟಕ್ಕೆ ಬೆಳಸಲಾಗುತ್ತದೆ.
ಶರತ್ ಮತ್ತು ಇತರರು ತರಬೇತಿ ನೀಡುವ ಸಮಯದಲ್ಲಿ ಆನೆ ಹಾಗೂ ಮಾವುತರ ಸ್ನೇಹದ ಕಥೆಯನ್ನು ಹೇಳುವ ಹಾಡುಗಳನ್ನು ಹಾಡುತ್ತಾರೆ.





