ಕೆಕುವೆ-ಉ ಸಣ್ಣ ಹುಡುಗಿಯಾಗಿದ್ದ ಕಾಲದಲ್ಲಿ ತನ್ನ ತಾಯಿ ಮತ್ತು ಅಜ್ಜಿ ತುರುಚೆ ಗಿಡ ಅಥವಾ ಥೆವೊ ಗಿಡದ ಕಾಂಡವನ್ನು ಬಳಸಿ ನೇಯ್ಗೆ ಮಾಡುವುದನ್ನು ನೋಡುತ್ತಿದ್ದರು. ಆ ವೇಳೆ ಅವರು ತಮ್ಮ ತಾಯಿ ಅರ್ಧ ಮುಗಿಸಿ ಇಟ್ಟ ತುಣುಕೊಂದನ್ನು ಕೈಗೆತ್ತಿಕೊಂಡು ಕೆಲಸ ಕಲಿಯುತ್ತಿದ್ದರು. ಆದರೆ ಇದನ್ನು ಅವರು ಯಾರಿಗೂ ಕಾಣದಂತೆ ಮಾಡಬೇಕಿತ್ತು. ಯಾಕೆಂದರೆ ಅವರ ಅಮ್ಮ ಅವರಿಗೆ ಅದನ್ನು ಮುಟ್ಟಬಾರದು ಎಂದು ಕಟ್ಟುನಿಟ್ಟಾಗಿ ಆದೇಶ ಮಾಡಿರುತ್ತಿದ್ದರು. ಹೀಗೆ ಕೆಕುವೆ -ಉ ನಾಗಾ ಸಮುದಾಯ ಬಳಸುವ ಸಾಂಪ್ರದಾಯಿಕ ಶಾಲಿನ ನೇಯ್ಗೆಯ ಕೌಶಲವನ್ನು ಗುಟ್ಟಾಗಿ ಕಲಿತರು.
ಇಂದು ಅವರೋರ್ವ ನಿಪುಣ ನೇಕಾರ ಮಹಿಳೆಯಾಗಿದ್ದು, ತಮ್ಮ ಬೇಸಾಯದ ಕೆಲಸ ಹಾಗೂ ಮನೆಗೆಲಸಗಳ ನಡುವೆ ಬಿಡುವು ಮಾಡಿಕೊಂಡು ಈ ನೇಯ್ಗೆಯ ಕೆಲಸವನ್ನು ಮಾಡುತ್ತಾರೆ. “ಅನ್ನಕ್ಕೆ ನೀರಿಟ್ಟು ಅದು ಬಿಸಿಯಾಗುವ ತನಕ, ಅಥವಾ ಮಕ್ಕಳನ್ನು ಯಾರಾದರೂ ಹೊರಗೆ ಕರೆದುಕೊಂಡು ಹೋದಾಗ ನಾವು ಒಂದಷ್ಟು ನೇಯ್ಗೆಯ ಕೆಲಸ ಮಾಡಲು ಪ್ರಯತ್ನಿಸುತ್ತೇವೆ” ನೇಯ್ಗೆಯ ಉದ್ದವನ್ನು ಬೆರಳಿನಲ್ಲಿ ತೋರಿಸುತ್ತಾ ಅವರು ಹೇಳುತ್ತಾರೆ.
ಕೆಕುವೆ-ಉ ತನ್ನ ನೆರೆಯವರಾದ ವೆಹುಸೆಲೆ ಮತ್ತು ಎಜಿಹಿಲು ಚೋಟ್ಸೊ ಅವರೊಂದಿಗೆ ರುಕಿಜೋ ಕಾಲೋನಿಯಲ್ಲಿರುವ ತನ್ನ ತಗಡಿನ ಛಾವಣಿಯ ಮನೆಯಲ್ಲಿ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು. ಕೆಕುವೆ-ಉ ಅವರ ಅಂದಾಜಿನ ಪ್ರಕಾರ, ನಾಗಾಲ್ಯಾಂಡ್ ರಾಜ್ಯದ ಫೆಕ್ ಜಿಲ್ಲೆಯ ಫುಟ್ಸೆರೊ ಗ್ರಾಮದ 266 ಕುಟುಂಬಗಳಲ್ಲಿ ಸರಿಸುಮಾರು 11 ಪ್ರತಿಶತದಷ್ಟು ಜನರು ನೇಯ್ಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಹೆಚ್ಚಾಗಿ ಚಖೆಸಾಂಗ್ ಸಮುದಾಯದ (ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿದೆ) ಕುಝಾಮಿ ಉಪ-ಗುಂಪಿನ ಮಹಿಳೆಯರು ಅಭ್ಯಾಸ ಮಾಡುತ್ತಾರೆ. “ನಮ್ಮ ಗಂಡಂದಿರು ನಮಗೆ ಸಹಾಯ ಮಾಡುತ್ತಾರೆ. ಅವರು ಅಡುಗೆಯನ್ನೂ ಮಾಡಬಲ್ಲರು, ಆದರೆ ಅವರು ನಮ್ಮಂತೆ ಅಡುಗೆಯಲ್ಲಿ “ತಜ್ಞರಲ್ಲ. ನಾವು ಅಡುಗೆ, ಕೃಷಿ ಎಲ್ಲವನ್ನೂ ಮಾಡಿಕೊಂಡು ನಡುವೆ ಈ ನೇಯ್ಗೆ ಮತ್ತು ಇತರ ಕೆಲಸಗಳನ್ನು ಮಾಡಬೇಕು.”




















