ಪ್ರತಿ ವರ್ಷ, ಯುವಜನರು ನಮ್ಮಲ್ಲಿ ತರಬೇತಿ ಕೋರಿ ಪರಿಗೆ ಬರೆಯುತ್ತಾರೆ. ಈ ವರ್ಷ ನಾವು ದಾಖಲೆ ಸಂಖ್ಯೆಯ ಇಂಟರ್ನಿಗಳನ್ನು ಹೊಂದಿದ್ದೇವೆ - ದೇಶಾದ್ಯಂತ ಮತ್ತು ವಿವಿಧ ವಿಭಾಗಗಳಲ್ಲಿನ ವಿದ್ಯಾರ್ಥಿಗಳು ಸ್ಥಾನ ಕೋರಿ ನಮ್ಮನ್ನು ತಲುಪಿದರು. ಮುಂಬೈಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್, ಬೆಂಗಳೂರಿನ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ, ಸೋನೆಪತ್ನ ಅಶೋಕ ವಿಶ್ವವಿದ್ಯಾಲಯ, ಪುಣೆಯ ಫ್ಲೇಮ್ ವಿಶ್ವವಿದ್ಯಾಲಯ, ರಾಜಸ್ಥಾನದ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಇನ್ನೂ ಅನೇಕ ವಿಶ್ವವಿದ್ಯಾಲಯಗಳಿಂದ ಅವರು ಬಂದಿದ್ದರು.
ನಮ್ಮ ಇಂಟರ್ನ್ಶಿಪ್ ಕಾರ್ಯಕ್ರಮವು ವರ್ಷದಿಂದ ವರ್ಷಕ್ಕೆ ಹೊಸಬಗೆಯಲ್ಲಿ ರೂಪುಗೊಳ್ಳುತ್ತಾ ಬಂದಿದೆ. ಇದು ತನ್ನ ಗಾತ್ರ ಮತ್ತು ವ್ಯಾಪ್ತಿ ಎರಡರಲ್ಲೂ ಬೆಳೆಯುತ್ತಿದೆ. ಇದು ತನ್ನೊಳಗೆ ಹೊಸ ಪ್ರಶ್ನೆಗಳು ಮತ್ತು ಕಾರ್ಯಗಳನ್ನು ಸೇರಿಸಿಕೊಳ್ಳುತ್ತಿದೆ. ಇದೆಲ್ಲದರ ನಡುವೆಯೂ ನಮ್ಮ ಕಾಲದ ಸಮಸ್ಯೆಗಳನ್ನು ಅನ್ವೇಷಿಸುವ ಮತ್ತು ಯುವಕರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ – ಅಸಮಾನತೆ ಮತ್ತು ಅಂಚಿನಲ್ಲಿರುವ ಜನರ ಕುರಿತ ಕಾಳಜಿ ಮುಂತಾದ ವಿಷಯಗಳ ಕುರಿತಾದ ನಮ್ಮ ಉದ್ದೇಶವು ಬದಲಾಗದೆ ಉಳಿದಿವೆ.
ಪರಿ ಇಂಟರ್ನಿಗಳು ಈ ನಿಟ್ಟಿನಲ್ಲಿ ಸ್ವತಃ ಅವರೇ ಕ್ಷೇತ್ರಕ್ಕೆ ಇಳಿದು ಜನರನ್ನು ತಲುಪಬೇಕು. ಈ ನಿಟ್ಟಿನಲ್ಲಿ ಅವರು ಸಂಶೋಧನೆ, ಸಂದರ್ಶನ, ಬರವಣಿಗೆ, ಪರಿಶೀಲನೆ, ಛಾಯಾಗ್ರಹಣ, ಚಿತ್ರೀಕರಣ ಮತ್ತು ಗ್ರಾಮೀಣ ಮತ್ತು ಅಂಚಿನಲ್ಲಿರುವ ಸಮುದಾಯಗಳ ಕಥೆಗಳನ್ನು ಚಿತ್ರಿಸುವುದನ್ನು ಮಾಡಿದ್ದಾರೆ. ಮತ್ತು ಅವರು ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಅರುಣಾಚಲ ಪ್ರದೇಶ, ತಮಿಳುನಾಡು, ಒಡಿಶಾ, ಮಹಾರಾಷ್ಟ್ರ, ಕೇರಳ, ಜಮ್ಮು ಮತ್ತು ಕಾಶ್ಮೀರದಿಂದ ತಮ್ಮ ಕೆಲಸವನ್ನು ಕಳುಹಿಸಿದ್ದಾರೆ.
ಅವರು ಲೈಬ್ರರಿ ವರದಿಗಳು, ಚಲನಚಿತ್ರಗಳು ಮತ್ತು ವೀಡಿಯೊಗಳು, ಸಾಮಾಜಿಕ ಮಾಧ್ಯಮ ಪೋಸ್ಟುಗಳಿಗೆ ಸಂಬಂಧಿಸಿದ ವಿಷಯಗಳಲ್ಲೂ ಕೆಲಸ ಮಾಡುತ್ತಾರೆ ಮತ್ತು ಅಗತ್ಯವಿದ್ದರೆ ಅನುವಾದದಲ್ಲಿ ಕೂಡಾ ಸಹಾಯ ಮಾಡುತ್ತಾರೆ.
ಲಿಂಗ ತಾರತಮ್ಯವು ಅನೇಕ ವಿದ್ಯಾರ್ಥಿಗಳು ತಮ್ಮ ವರದಿಗಾರಿಕೆಯ ಮೂಲಕ ಸಂಶೋಧಿಸಲು ಮತ್ತು ಎತ್ತಿ ತೋರಿಸಲು ಬಯಸಿದ ಕ್ಷೇತ್ರವಾಗಿತ್ತು, ಮತ್ತು ಅವರು ಅದನ್ನು ಮಾಡಿದ್ದು ಹೀಗೆ:
ಇಂಟರ್ನ್ ಅಧ್ಯೆತಾ ಮಿಶ್ರಾ ಅವರು ಶೌಚಾಲಯ ವಿರಾಮವಿಲ್ಲದೆ ದುಡಿಯುವ ಪಶ್ಚಿಮ ಬಂಗಾಳದ ಚಹಾ ತೋಟಗಳ ಕೆಲಸಗಾರ ಮಹಿಳೆಯರ ಜೀವನದಲ್ಲಿ ಮತ್ತು ಅವರ ಲಿಂಗದಿಂದಾಗಿ ಅವರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ನೇರವಾಗಿ ಕಂಡು ಬರೆದರು. ಆಗ ಜಾದವ್ಪುರ ವಿಶ್ವವಿದ್ಯಾಲಯದಲ್ಲಿ ತುಲನಾತ್ಮಕ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಅಧ್ಯೆತಾ, ಎಸ್ಟೇಟ್ ಮತ್ತು ಕಾರ್ಮಿಕರ ಗುರುತುಗಳ ಬಗ್ಗೆ ಎಚ್ಚರಿಕೆಯಿಂದ ಕೆಲಸ ಮಾಡಬೇಕಿತ್ತು, ಏಕೆಂದರೆ ಆ ಮಹಿಳೆಯರ ಗುರುತು ಬಹಿರಂಗವಾದರೆ ಅವರ ಕೆಲಸಕ್ಕೆ ಕುತ್ತು ಬರುವ ಸಾಧ್ಯತೆಯಿತ್ತು.
![](/media/images/04a-3-AM-Toiling_away_without_a_toilet_bre.max-1400x1120.jpg)
![Left: Priya who performs a duet dance with her husband in orchestra events travels from Kolkata for a show.](/media/images/06a-IMG_20221212_140820-DS-Dancing_to_abus.max-1400x1120.jpg)
ಎಡ: ಪಶ್ಚಿಮ ಬಂಗಾಳದಲ್ಲಿ ಮಹಿಳಾ ಚಹಾ ತೋಟದ ಕಾರ್ಮಿಕರು ಶೌಚಾಲಯ ಸೌಲಭ್ಯ ಲಭ್ಯವಿಲ್ಲದ ಕಾರಣ ಎಂತಹ ಅಪಾಯಕಾರಿ ಪ್ರದೇಶದಲ್ಲಿ ಶೌಚಕ್ಕೆ ಹೋಗುತ್ತಾರೆ ಎನ್ನುವುದರ ಕುರಿತು ಆಧ್ಯೆತಾ ಮಿಶ್ರಾ ಮಾಡಿದ ವರದಿ. ಬಲ: ಬಿಹಾರದ ಆರ್ಕೆಸ್ಟ್ರಾ ಕಾರ್ಯಕ್ರಮಗಳಲ್ಲಿ ನೃತ್ಯಗಾರ್ತಿಯರಾಗಿ ಕೆಲಸ ಮಾಡುವ ಯುವತಿಯರು ಎದುರಿಸುತ್ತಿರುವ ಕಿರುಕುಳದ ಬಗ್ಗೆ ದಿಪ್ಶಿಕಾ ಸಿಂಗ್ ಬರೆದಿದ್ದಾರೆ, ಈ ಮಹಿಳೆಯರಿಗೆ ಬೇರೆ ಜೀವನೋಪಾಯದ ಆಯ್ಕೆಗಳಿಲ್ಲ
ಅಜೀಂ ಪ್ರೇಮ್ಜಿ ವಿಶ್ವವಿದ್ಯಾನಿಲಯದ ಡೆವಲಪ್ಮೆಂಟ್ ಸ್ಟಡೀಸ್ನ ಎಂಎ ಮಟ್ಟದ ವಿದ್ಯಾರ್ಥಿನಿ ದೀಪಶಿಖಾ ಸಿಂಗ್ ಬಿಹಾರದಲ್ಲಿದ್ದಾಗ ನಮ್ಮ ಇಂಟರ್ನ್ ಆಗಿ ಕೆಲಸ ಮಾಡಿದರು. ಆಗ ಅವರು ಗ್ರಾಮೀಣ ಪ್ರದೇಶಗಳಲ್ಲಿ ನರ್ತಕಿಯಾರಾಗಿ ಕೆಲಸ ಮಾಡುವ ಹುಡುಗಿಯರ ಬಗ್ಗೆ ಕರುಳು ಹಿಂಡುವ ಈ ವರದಿಯನ್ನು ಮಾಡಿದರು: ಬಿಹಾರ: ಬದುಕಿನ ಅನಿವಾರ್ಯತೆ ಮತ್ತು ಅಶ್ಲೀಲ ಹಾಡುಗಳ ನಡುವೆ ನಲುಗುವ ಯುವತಿಯರು . “ಪರಿಯಿಂದ ನಾನು ಪಡೆದ ಬೆಂಬಲ ಮತ್ತು ಅಮೂಲ್ಯವಾದ ಸಲಹೆಯು ನನ್ನ ವರದಿಯ ಗುಣಮಟ್ಟವನ್ನು ಸುಧಾರಿಸಿದೆ ಮಾತ್ರವಲ್ಲದೆ ಬರಹಗಾರಳಾಗಿ ನನಗೆ ಹೆಚ್ಚಿನ ವಿಶ್ವಾಸವನ್ನು ನೀಡಿತು. ಪರಿಯ ವೇದಿಕೆಯಲ್ಲಿ ನನ್ನ ಬರಹ ಪ್ರಕಟವಾಗುವುದು ಕನಸು ನನಸಾದಂತೆ... ಈ ಅನುಭವ ನನಗೆ ಹೇಳಬೇಕಾದ ಕಥೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡುವಂತೆ ಪ್ರೇರೇಪಿಸಿದೆ.
ವರ್ಷದ ಕೊನೆಯಲ್ಲಿ, ಇಂಟರ್ನ್ ಕುಹೂ ಬಜಾಜ್ ಮಧ್ಯಪ್ರದೇಶದ ದಮೋಹ್ ಪಟ್ಟಣದಿಂದ ಸರಣಿ ಸಂದರ್ಶನಗಳನ್ನು ನಡೆಸಿದರು. "ಇದು ನಿಜವಾದ ಪತ್ರಿಕೋದ್ಯಮದಲ್ಲಿ ನನ್ನ ಮೊದಲ ಅನುಭವ... ಈ ಅನುಭವದಿಂದ ನಾನು ಬಹಳಷ್ಟು ಕಲಿತಿದ್ದೇನೆ ಮತ್ತು ಪ್ರತಿ ಕಥೆಯನ್ನು ವರದಿ ಮಾಡಲು ಎಷ್ಟು ಶ್ರಮ ಬೇಕಾಗುತ್ತದೆ ಎಂಬುದನ್ನು ಅರಿತುಕೊಂಡಿದ್ದೇನೆ" ಎಂದು ಅಶೋಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹೇಳುತ್ತಾರೆ, ಅವರ ವರದಿಯು ಬೀಡಿ ಕಟ್ಟಲು ಬರುವ ಮಹಿಳೆಯರ ಕಠಿಣ ಪರಿಶ್ರಮ ಮತ್ತು ಶೋಷಣೆಯ ನಿಗೂಢ ಚಿತ್ರವನ್ನು ಚಿತ್ರಿಸುತ್ತದೆ.
![](/media/images/05-img-8803-KB-In_Damoh_rolling_beedis_is_.max-1400x1120.jpg)
![Renuka travels on his bicycle (left) delivering post. He refers to a hand drawn map of the villages above his desk (right)](/media/images/03a-IMG03-HM-In-Deverayapatna-youve-got-ma.max-1400x1120.jpg)
ಎಡ: ಕುಹೂ ಬಜಾಜ್ ವರದಿಯು ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ಮಹಿಳಾ ಬೀಡಿ ಕಾರ್ಮಿಕರ ಜೀವನೋಪಾಯದ ಮೇಲೆ ಬೆಳಕು ಚೆಲ್ಲುತ್ತದೆ. ಬಲ: ನಮ್ಮ ಕಿರಿಯ ವರದಿಗಾರರಾದ ಹನಿ ಮಂಜುನಾಥ್, ತುಮಕೂರು ಜಿಲ್ಲೆಯ ತಮ್ಮ ಹಳ್ಳಿಯ ಗ್ರಾಮೀಣ ಪೋಸ್ಟ್ ಮ್ಯಾನ್ ರೇಣುಕಾ ಪ್ರಸಾದ್ ಬಗ್ಗೆ ಬರೆಯುತ್ತಾರೆ
ಈ ವರ್ಷದ ನಮ್ಮ ಕಿರಿಯ ವರದಿಗಾರ್ತಿಯೆಂದರೆ ಅದು 10ನೇ ತರಗತಿ ವಿದ್ಯಾರ್ಥಿನಿ ಹನಿ ಮಂಜುನಾಥ್, ತನ್ನ ಗ್ರಾಮವಾದ ದೇವರಾಯಪಟ್ಟಣದ ಪೋಸ್ಟ್ ಮ್ಯಾನ್ ಬಗ್ಗೆ ಆಕೆ ಬರೆದಿದ್ದಾರೆ: ದೇವರಾಯ ಪಟ್ಟಣ: ಕಾಗದ ಬಂದಿದೆ ನಿಮಗೆ! ಪತ್ರಗಳನ್ನು ತಲುಪಿಸುವ ಕೆಲಸದ ನೆನಪು ಗ್ರಾಮೀಣ ಅಂಚೆ ನೌಕರರ ಉದ್ಯೋಗಗಳ ಕಠೋರ ವಾಸ್ತವಗಳೊಂದಿಗೆ ಕೌಶಲ್ಯದಿಂದ ಬೆರೆತಿದೆ - ಬಿಸಿಲು ಮತ್ತು ಮಳೆಯಲ್ಲಿ ದಿನವಿಡೀ ಕೆಲಸ ಮಾಡಿದ ನಂತರವೂ ಅವರಿಗೆ ಪಿಂಚಣಿ ಸಿಗುತ್ತಿಲ್ಲ.
ಪರಿಯಲ್ಲಿ ತರಬೇತಿ ಪಡೆಯಲು [email protected] ವಿಳಾಸಕ್ಕೆ ಬರೆಯಿರಿ
ನಾವು ಮಾಡುತ್ತಿರುವ ಕೆಲಸಗಳು ನಿಮ್ಮಲ್ಲಿ ಆಸಕ್ತಿಯನ್ನು ಹುಟ್ಟಿಸಿದ್ದಲ್ಲಿ ಮತ್ತು ನೀವೂ ಪರಿಯೊಡನೆ ಕೈ ಜೋಡಿಸಲು ಬಯಸಿದಲ್ಲಿ, ದಯವಿಟ್ಟು mailto:[email protected] ಮೂಲಕ ನಮ್ಮನ್ನು ಸಂಪರ್ಕಿಸಿ. ಫ್ರೀಲಾನ್ಸ್ ಮತ್ತು ಸ್ವತಂತ್ರ ಬರಹಗಾರರು, ವರದಿಗಾರರು, ಛಾಯಾಗ್ರಾಹಕರು, ಚಲನಚಿತ್ರ ತಯಾರಕರು, ಅನುವಾದಕರು, ಸಂಪಾದಕರು, ಚಿತ್ರಕಾರರು ಮತ್ತು ಸಂಶೋಧಕರನ್ನು ನಮ್ಮೊಂದಿಗೆ ಕೆಲಸ ಮಾಡಲು ನಾವು ಸ್ವಾಗತಿಸುತ್ತೇವೆ.
ಪರಿ ಒಂದು ಲಾಭೋದ್ದೇಶ ರಹಿತ ಸಂಸ್ಥೆಯಾಗಿದ್ದು, ಇದು ನಮ್ಮ ಬಹುಭಾಷಾ ಆನ್ಲೈನ್ ಜರ್ನಲ್ ಮತ್ತು ಆರ್ಕೈವ್ ಕೆಲಸಗಳನ್ನು ಮೆಚ್ಚುವ ಜನರ ದೇಣಿಗೆಗಳನ್ನು ಅವಲಂಬಿಸಿ ಮುಂದುವರೆಯುತ್ತಿದೆ. ನೀವು ಪರಿಗೆ ಕೊಡುಗೆ ನೀಡಲು ಬಯಸಿದರೆ ದಯವಿಟ್ಟು DONATE ಬಟನ್ ಕ್ಲಿಕ್ ಮಾಡಿ.
ಅನುವಾದ: ಶಂಕರ. ಎನ್. ಕೆಂಚನೂರು