“ನನ್ನ ಶ್ವಾಸಕೋಶ ಕಲ್ಲಿನಂತಾಗಿದೆ. ನನಗೆ ನಾಡೆಯಲು ಸಾಧ್ಯವಾಗುತ್ತಿಲ್ಲ” ಎನ್ನುತ್ತಾರೆ ಮಾಣಿಕ್ ಸರ್ದಾರ್.
55 ವರ್ಷದ ಈ ವರ್ಷದ ವ್ಯಕ್ತಿಗೆ 2022ರ ನವೆಂಬರ್ ತಿಂಗಳಿನಲ್ಲಿ ಸಿಲಿಕೋಸಿಸ್ ಇರುವುದು ಪತ್ತೆಯಾಯಿತು. ಇದೊಂದು ಗುಣಪಡಿಸಲಾಗದ ಶ್ವಾಸಕೋಶದ ಕಾಯಿಲೆ. “ನಾನೀಗ ಮುಂಬರು ಚುನಾವಣೆಗಳ ಕುರಿತು ಯೋಚಿಸುವ ಸ್ಥಿತಿಯಲ್ಲಿಲ್ಲ. ನನಗೆ ನನ್ನ ಕುಟುಂಬದ್ದೇ ಚಿಂತೆಯಾಗಿದೆ” ಎಂದು ಅವರು ಹೇಳುತ್ತಾರೆ.
ನಬಾ ಕುಮಾರ್ ಮಂಡಲ್ ಕೂಡ ಸಿಲಿಕೋಸಿಸ್ ರೋಗಿ. ಅವರು ಹೇಳುತ್ತಾರೆ, "ಚುನಾವಣೆಗಳೆಂದರೆ ಸುಳ್ಳು ಭರವಸೆಗಳಷ್ಟೇ. ಮತಾದಾನವೆನ್ನುವುದು ನಮ್ಮ ಪಾಲಿಕೆ ಒಂದು ವಾಡಿಕೆಯ ಕೆಲಸವಾಗಿ ಹೋಗಿದೆ. ಯಾರು ಅಧಿಕಾರಕ್ಕೆ ಬಂದರೂ, ನಮ್ಮ ಬದುಕಿನಲ್ಲಿ ಯಾವ ವ್ಯತ್ಯಾಸವು ಕಾಣುವುದಿಲ್ಲ" ಎಂದು ಅವರು ಹೇಳಿದರು.
ಮಾಣಿಕ್ ಮತ್ತು ನಬಾ ಇಬ್ಬರೂ ಪಶ್ಚಿಮ ಬಂಗಾಳದ ಮಿನಾಖಾನ್ ಬ್ಲಾಕ್ ಜುಪ್ಖಾಲಿ ಗ್ರಾಮದ ನಿವಾಸಿಗಳು. ಇಲ್ಲಿ 2024ರ ಸಾರ್ವತ್ರಿಕ ಚುನಾವಣೆಯ ಕೊನೆಯ ಹಂತದಲ್ಲಿ ಜೂನ್ 1ರಂದು ಮತದಾನ ನಡೆಯಲಿದೆ.
ಇಬ್ಬರೂ ಒಂದು ಅಥವಾ ಒಂದೂವರೆ ವರ್ಷಗಳ ಕಾಲ ನಿರಂತರವಾಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಸಿಲಿಕಾ ಧೂಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಅನಾರೋಗ್ಯದಿಂದ ಬಳಲುತ್ತಿರುವ ಅವರು ವೇತನ ನಷ್ಟಕ್ಕೂ ಒಳಗಾಗಿದ್ದಾರೆ. ಇಂತಹ ಹೆಚ್ಚಿನ ದೊಡ್ಡ ಉತ್ಪಾದನೆಯ ಕಾರ್ಖಾನೆಗಳು ಕಾರ್ಖಾನೆಗಳ ನಿರ್ದೇಶನಾಲಯದಲ್ಲಿ ನೋಂದಾಯಿಸಲ್ಪಟ್ಟಿರುವುದಿಲ್ಲ. ಅಲ್ಲದೆ ಈ ಕಾರ್ಖಾನೆಗಳು ನೇಮಕಾತಿ ಪತ್ರ ಅಥವಾ ಗುರುತಿನ ಚೀಟಿಗಳನ್ನು ನೀಡದ ಕಾರಣ ಅವರಿಗೆ ಪರಿಹಾರ ಸಹ ಸಿಗುವುದಿಲ್ಲ. ಇಂತಹ ಅನೇಕ ಕಾರ್ಖಾನೆಗಳು ವಾಸ್ತವದಲ್ಲಿ ಕಾನೂನುಬಾಹಿರ ಅಥವಾ ಅರೆ-ಕಾನೂನುಬದ್ಧ. ಇವುಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ನೋಂದಣಿಯೂ ಆಗಿರುವುದಿಲ್ಲ.


!['ನಾನು ನಿದ್ರೆಯಲ್ಲೂ [ಸಿಲಿಕಾ] ಧೂಳು ಉಸಿರಾಡಿದ್ದೆ'](/_next/image?url=https%3A%2F%2Fproduction.ruralindiaonline.org%2Fuploads%2F01_DSC_9867_RM_I_inhaled_silica_dust_even_in_my_sleep_3ad67620cc.jpg&w=1080&q=75)











