ಅದು ಮಾರ್ಚ್ ತಿಂಗಳ ಬಿಸಿಲಿನ ಒಂದು ಮಧ್ಯಾಹ್ನ ಮತ್ತು ಔರಾಪಾನಿ ಗ್ರಾಮದ ಹಿರಿಯರು ಸಣ್ಣ ಬಿಳಿ ಬಣ್ಣದ ಚರ್ಚಿನಲ್ಲಿ ಸೇರಿದ್ದರು. ಆದರೆ ಅವರ್ಯಾರೂ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುವ ಸಲುವಾಗಿ ಇಲ್ಲಿಗೆ ಬಂದಿರಲಿಲ್ಲ.
ನೆಲದ ಮೇಲೆ ವೃತ್ತಾಕಾರದಲ್ಲಿ ಕುಳಿತಿರುವ ಗುಂಪು ಒಂದು ಪ್ರಮುಖ ವಿಷಯವನ್ನು ಚರ್ಚಿಸುತ್ತಿದ್ದರು - ಅವರು ಅಧಿಕ ಅಥವಾ ಕಡಿಮೆ ದೀರ್ಘಕಾಲದ ರಕ್ತದೊತ್ತಡದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ, ಅವರೆಲ್ಲ ತಿಂಗಳಿಗೊಮ್ಮೆ ಭೇಟಿಯಾಗಿ ತಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುತ್ತಾರೆ ಮತ್ತು ತಮ್ಮ ಔಷಧಿಗಳನ್ನು ಪಡೆಯಲು ಕಾಯುವ ಸಂದರ್ಭದಲ್ಲಿ ವಿವಿಧ ವಿಷಯಗಳ ಬಗ್ಗೆ ಮಾತಾನಾಡಿಕೊಳ್ಳುತ್ತಾರೆ.
“ಇಲ್ಲಿನ ಸಭೆಗಳಿಗೆ ಬರುವುದೆಂದರೆ ನನಗೆ ಇಷ್ಟ. ಏಕೆಂದರೆ ಇಲ್ಲಿ ಬಂದು ನಾನು ನನ್ನ ಚಿಂತೆಗಳನ್ನು ಹಂಚಿಕೊಳ್ಳುತ್ತೇನೆ” ಎಂದು ರೂಪಿ ಬಾಯಿ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ರಪಿ ಬಘೇಲ್ ಹೇಳುತ್ತಾರೆ. 53 ವರ್ಷದ ಅವರು ಕಳೆದು ಐದು ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದಾರೆ. ಬೈಗಾ ಬುಡಕಟ್ಟು ಜನಾಂಗಕ್ಕೆ ಸೇರಿದ ಅವರು ಜೀವನಾಧಾರಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದು, ತಮ್ಮ ಆದಾಯಕ್ಕೆ ಪೂರಕವಾಗಿ ಕಾಡಿನಿಂದ ಸೌದೆ, ಮಹುವಾದಂತಹ ಎನ್‌ಟಿಎಪ್‌ಟಿ ಕಾಡುತ್ಪತ್ತಿಯನ್ನೂ ಸಂಗ್ರಹಿಸುತ್ತಾರೆ. ಬೈಗಾ ಸಮುದಾಯವನ್ನು ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ (ಪಿಜಿವಿಟಿ) ಗುಂಪುಗಳಡಿ ಪಟ್ಟಿ ಮಾಡಲಾಗಿದೆ. ಔರಾಪಾನಿ ಗ್ರಾಮದಲ್ಲಿ ಹೆಚ್ಚಿನವರು ಬೈಗಾ ಸಮುದಾಯಕ್ಕೆ ಸೇರಿದವರು.
ಬಿಲಾಸಪುರ ಜಿಲ್ಲೆಯ ಕೋಟಾ ಬ್ಲಾಕಿನಲ್ಲಿರುವ ಈ ಊರು ಛತ್ತೀಸಗಢದ ಅಚಾನಕ್ಮಾರ್-ಅಮರಕಂಟಕ ಜೀವವಲಯ ಮೀಸಲು ಅರಣ್ಯದ (ಎಎಬಿಆರ್) ಹತ್ತಿರದಲ್ಲಿದೆ. “ನಾನು ಕಾಡಿನಿಂದ ಬಿದಿರು ತಂದು ಜಾಡೂ (ಪೊರಕೆ) ತಯಾರಿಸಿ ಮಾರುತ್ತಿದ್ದೆ. ಆದರೆ ಈಗ ಹೆಚ್ಚು ನಡೆಯಲು ಸಾಧ್ಯವಿಲ್ಲದ ಕಾರಣ ಮನೆಯಲ್ಲೇ ಇರುತ್ತೇನೆ” ಎನ್ನುತ್ತಾಅಧಿಕ ರಕ್ತದೊತ್ತಡದಿಂದಾಗಿ ಉಂಟಾಗುವ ಬಳಲಿಕೆಯು ತನ್ನ ಮೇಲೆ ಬೀರಿರುವ ಪರಿಣಾಮವನ್ನು ಪುಲ್ಸರಿ ಲಕ್ಡಾ ವಿವರಿಸುತ್ತಾರೆ. ಬದುಕಿನ ಆರನೇ ದಶಕದಲ್ಲಿರುವ ಅವರು ಈಗ ಮನೆಯಲ್ಲಿಯೇ ಇದ್ದು ತಮ್ಮ ಆಡುಗಳನ್ನು ನೋಡಿಕೊಳ್ಳುತ್ತಾರೆ ಮತ್ತು ಹಗಲಿನಲ್ಲಿ ಹಸುವಿನ ಸಗಣಿಯನ್ನು ಸಂಗ್ರಹಿಸುತ್ತಾರೆ. ಬೈಗಾ ಸಮುದಾಯದ ಬಹುತೇಕ ಜನರು ಜೀವನೋಪಾಯ್ಕಕಾಗಿ ಕಾಡನ್ನೇ ಅವಲಂಬಿಸಿದ್ದಾರೆ.








