ನಾಗರಾಜ್ ಬಂಡನ್ ತಮ್ಮ ಮನೆಯಿಂದ ಹೊಮ್ಮುತ್ತಿದ್ದ ರಾಗಿ ಕಳಿಯ ಪರಿಮಳವನ್ನು ನೆನಪಿಸಿಕೊಳ್ಳುತ್ತಿದ್ದರು. ಸಣ್ಣ ಹುಡುಗನಿದ್ದ ಸಮಯದಲ್ಲಿ ಅವರು ದಿನವೂ ಆ ಪರಿಮಳವನ್ನು ಎದುರುನೋಡುತ್ತಿದ್ದರು.
ಐದು ದಶಕಗಳ ಹಿಂದಿನ ರಾಗಿ ಕಳಿ (ರಾಗಿ ಮುದ್ದೆ) ಗೆ ಈಗಿನ ರಾಗಿ ಮುದ್ದೆ ಹೋಲಿಕೆಯಲ್ಲ. “ಈಗ ನಾವು ಬೆಳೆಯುವ ರಾಗಿ ಮೊದಲಿನಷ್ಟು ವಾಸನೆ ಅಥವಾ ರುಚಿಯನ್ನು ಹೊಂದಿರುವುದಿಲ್ಲ” ಮತ್ತು ಈಗೀಗ ರಾಗಿ ಕಳಿಯನ್ನು ಇಲ್ಲಿನ ಮನೆಗಳಲ್ಲಿ ದಿನವೂ ಬೇಯಿಸುವುದಿಲ್ಲ.
ನಾಗರಾಜ್ ಇರುಳ ಸಮುದಾಯದವರು (ತಮಿಳುನಾಡಿನಲ್ಲಿ ಪರಿಶಿಷ್ಟ ಪಂಗಡದಡಿಯಲ್ಲಿ ಸೇರಿಸಲಾಗಿದೆ) ಮತ್ತು ನೀಲಗಿರಿಯ ಬೊಕ್ಕಪುರಂ ಎನ್ನುವ ಕುಗ್ರಾಮದ ನಿವಾಸಿ. ಅವರು ತಮ್ಮ ಪೋಷಕರು ಬೆಳೆಯುವ ರಾಗಿ, ಚೋಳಂ (ಜೋಳ), ಕಾಂಬೂ (ಸಜ್ಜೆ) ಮತ್ತು ಸಾಮೈ (ಸಾಮೆ ಅಕ್ಕಿ) ಮುಂತಾದ ಇತರ ಸಿರಿಧಾನ್ಯಗಳನ್ನು ನೋಡುತ್ತಾ ಬೆಳೆದವರು. ಆಗ ಬೆಳೆದಿದ್ದರಲ್ಲಿ ಒಂದಷ್ಟನ್ನು ಮನೆಗೆ ಇಟ್ಟುಕೊಂಡು ಉಳಿದಿದ್ದನ್ನು ಮಾರುಕಟ್ಟೆಯಲ್ಲಿ ಮಾರಲಾಗುತ್ತಿತ್ತು.
ನಾಗರಾಜ್ ದೊಡ್ಡವರಾದಂತೆ ಜಮೀನು ಅವರ ವಶಕ್ಕೆ ಬಂತು. ಆದರೆ ಅವರು ಬೇಸಾಯ ಆರಂಭಿಸಿದಂತೆ ತಂದೆಯ ಕಾಲದಲ್ಲಿ ಸಿಗುತ್ತಿದ್ದ ಇಳುವರಿ ಈಗ ಸಿಗುತ್ತಿಲ್ಲವೆನ್ನುವುದು ಅವರ ಗಮನಕ್ಕೆ ಬಂತು. “ಈಗ ನಮಗೆ ತಿನ್ನಲು ಸಾಕಾಗುವಷ್ಟೇ [ರಾಗಿ] ಸಿಗುತ್ತದೆ. ಕೆಲವೊಮ್ಮೆ ಅದೂ ಸಿಗುವುದಿಲ್ಲ” ಎಂದು ಅವರು ಪರಿಗೆ ತಿಳಿಸಿದರು. ಅವರು ತಮ್ಮ ಎರಡು ಎಕರೆ ಭೂಮಿಯಲ್ಲಿ ಬೀನ್ಸ್ ಮತ್ತು ಬದನೆಕಾಯಿಯಂತಹ ತರಕಾರಿಗಳ ಜೊತೆಗೆ ರಾಗಿ ಬೆಳೆಯುವುದನ್ನು ಸಹ ಮುಂದುವರಿಸಿದ್ದಾರೆ.
ಈ ಪ್ರದೇಶದ ಇತರ ರೈತರಿಗೂ ಈ ಬದಲಾವಣೆ ಗಮನಕ್ಕೆ ಬಂದಿದೆ. ಮಾರಿ (ತನ್ನ ಮೊದಲ ಹೆಸರಿಸಿಂದಲೇ ಗುರುತಿಸಿಕೊಳ್ಳುತ್ತಾರೆ) ತಮ್ಮ ತಂದೆ 10-20 ಚೀಲಗಳಷ್ಟು ರಾಗಿ ಇಳುವರಿ ಪಡೆಯುತ್ತಿದ್ದುದಾಗಿ ಹೇಳುತ್ತಾರೆ. ಆದರೆ ಈಗ ಈ 45 ವರ್ಷದ ರೈತ ಬೆಳೆಯೊಂದಕ್ಕೆ ಕೇವಲ 2-3 ಚೀಲಗಳಷ್ಟು ರಾಗಿಯ ಇಳುವರಿ ಪಡೆಯುತ್ತಿದ್ದಾರೆ. ಇವರ ಬಳಿಯೂ ಎರಡು ಎಕರೆ ಜಮೀನಿದೆ.
ನಾಗರಾಜ್ ಮತ್ತು ಮಾರಿ ಅವರ ಅನುಭವಗಳು ನೀಲಗಿರಿಯಲ್ಲಿ ರಾಗಿ ಕೃಷಿಯು 1948-49ರಲ್ಲಿ 1,369 ಹೆಕ್ಟೇರಿನಿಂದ 1998-99ರಲ್ಲಿ 86 ಹೆಕ್ಟೇರಿಗೆ ಕುಸಿದಿದೆ ಎಂದು ಹೇಳುವ ಅಧಿಕೃತ ಅಂಕಿಅಂಶಗಳಲ್ಲಿ ಪ್ರತಿಫಲಿಸುತ್ತವೆ.
ಕಳೆದ ಜನಗಣತಿ (2011) ಪ್ರಕಾರ ಜಿಲ್ಲೆಯಲ್ಲಿ ಕೇವಲ ಒಂದು ಹೆಕ್ಟೇರ್ ಪ್ರದೇಶದಲ್ಲಷ್ಟೇ ರಾಗಿಯನ್ನು ಬೆಳೆಯಲಾಗುತ್ತಿದೆ.











