“ಸಂಜೆ ಹೊತ್ತು ಎಲ್ಲಾ ಪ್ರಾಣಿಗಳು ಇಲ್ಲಿಗೆ ಬಂದು ವಿಶ್ರಾಂತಿ ಪಡೆಯುತ್ತವೆ. ಇದು ಬಾರ್ಗಟ್ [ಆಲದ] ಮರ."

ಸುರೇಶ ಧುರ್ವೆ ಅವರು ತಾವು ಕೆಲಸ ಮಾಡುತ್ತಿರುವ ಪೋಸ್ಟರ್ ಗಾತ್ರದ ಕಾಗದದ ಮೇಲೆ ನಾಚೂಕಾದ ಬಣ್ಣದ ಗೆರೆಗಳನ್ನು ಎಳೆಯುತ್ತಾ ಮಾತನಾಡುತ್ತಿದ್ದರು. "ಇದು ಆಲದ ಮರ, ಹೆಚ್ಚಿನ ಪಕ್ಷಿಗಳು ಇಲ್ಲಿ ಬಂದು ಇದರ ಮೇಲೆ ಕುಳಿತುಕೊಳ್ಳುತ್ತವೆ," ಎಂದು ಅವರು ಪರಿಗೆ ಹೇಳುತ್ತಾ, ಸ್ವಾಗತ ಕೋರುತ್ತಿರುವ ದೊಡ್ಡದಾದ ಮರದ ಚಿತ್ರಕ್ಕೆ ಹೆಚ್ಚಿನ ಕೊಂಬೆಗಳನ್ನು ಬಿಡಿಸುತ್ತಿದ್ದರು.

49 ವರ್ಷ ಪ್ರಾಯದ ಈ ಗೊಂಡ ಕಲಾಕಾರರು ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ತಮ್ಮ ಮನೆಯ ನೆಲದ ಮೇಲೆ ಕುಳಿತುಕೊಂಡಿದ್ದಾರೆ. ಬೆಳಕು ಮರದ ಕೊಂಬೆಗಳ ನಡುವೆ ಹರಿಯುತ್ತಾ ಬಾಗಿಲು ಮತ್ತು ಕಿಟಕಿಗಳ ಮೂಲಕ ಮೇಲಿನ ಮಹಡಿಯಲ್ಲಿರುವ ಕೋಣೆಯ ಒಳಗೆ ಬರುತ್ತಿತ್ತು. ಅವರು ತಮ್ಮ ಪಕ್ಕದಲ್ಲೇ ನೆಲದ ಮೇಲೆ ಇಟ್ಟಿರುವ ಹಸಿರು ಬಣ್ಣದ ಸಣ್ಣ ಸೀಸೆಯ ಒಳಗೆ ಕುಂಚವನ್ನು ಅದ್ದುತ್ತಿದ್ದರು. “ಹಿಂದೆಲ್ಲಾ ನಾವು ಬಿದಿರಿನ ಕೋಲುಗಳನ್ನು [ಕುಂಚಗಳಾಗಿ] ಮತ್ತು ಘಿಲೇರಿ ಕೆ ಬಾಲ್ [ಅಳಿಲಿನ ಕೂದಲು] ಗಳನ್ನು  ಬಳಸುತ್ತಿದ್ದೆವು. ಇದನ್ನು [ಅಳಿಲಿನ ಕೂದಲು] ಈಗ ನಿಷೇಧಿಸಲಾಗಿದೆ, ಅದೂ ಒಳ್ಳೆಯದೇ. ಹಾಗಾಗಿ ಈಗ ನಾವು ಪ್ಲಾಸ್ಟಿಕ್ ಬ್ರಷ್‌ಗಳನ್ನು ಬಳಸುತ್ತೇವೆ,” ಎಂದು ಅವರು ಹೇಳುತ್ತಾರೆ.

ಅವರು ಬಿಡಿಸುವ ಚಿತ್ರಗಳು ಕಥೆಗಳನ್ನು ಹೇಳುತ್ತವೆ ಎಂದು ಸುರೇಶ್ ಹೇಳುತ್ತಾರೆ. “ನಾನು ಪೇಂಟಿಂಗ್ ಮಾಡುವಾಗ ಏನು ಬಿಡಿಸಬೇಕೆಂಬ ಬಗ್ಗೆ ಸಾಕಷ್ಟು ಸಮಯದ ವರೆಗೆ ಯೋಚಿಸಬೇಕು. ಈಗ ದೀಪಾವಳಿ ಬರುತ್ತಿದೆ ಅಂತ ಅಂದುಕೊಳ್ಳೋಣ, ಆಗ ನಾನು ಹಬ್ಬಕ್ಕೆ ಪ್ರಮುಖವಾಗಿ ಬೇಕಾದ  ಹಸುಗಳು ಮತ್ತು ದೀಪಗಳಂತಹ ಎಲ್ಲಾ ವಿಷಯಗಳ ಬಗ್ಗೆ ಯೋಚಿಸಬೇಕಾಗುತ್ತದೆ,” ಎಂದು ಅವರು ಹೇಳುತ್ತಾರೆ. ಗೊಂಡ ಸಮುದಾಯದ ವರ್ಣಚಿತ್ರಕಾರರು ಜೀವಿಗಳು, ಕಾಡುಗಳು, ಆಕಾಶ, ದಂತಕಥೆಗಳು ಮತ್ತು ಜಾನಪದ ಕಥೆಗಳು, ಕೃಷಿ ಹಾಗೂ ಸಾಮಾಜಿಕ ಬದುಕನ್ನು ತಮ್ಮ ಕಲೆಯಲ್ಲಿ ಚಿತ್ರಿಸುತ್ತಾರೆ.

ಭೋಪಾಲ್‌ಗೆ ಬಂದ ಜಂಗರ್ ಸಿಂಗ್ ಶ್ಯಾಮ್ ಅವರು ಮೊದಲು ಬಟ್ಟೆಯ ಮೇಲೆ, ಆ ನಂತರ ಕ್ಯಾನ್ವಾಸ್ ಮತ್ತು ಕಾಗದದ ಮೇಲೆ ಚಿತ್ರ ಬಿಡಿಸಲು ಆರಂಭಿಸಿದರು. ಗೊಂಡ್ ಕಲಾವಿದರು ತಮ್ಮ ಕೃತಿಗಳಲ್ಲಿ ಜೀವಂತ ಜೀವಿಗಳು, ಕಾಡು ಮತ್ತು ಆಕಾಶ, ದಂತಕಥೆಗಳು ಮತ್ತು ಜಾನಪದ ಕಥೆಗಳಿಗೆ ಮರುಜೀವ ನೀಡುತ್ತಾರೆ

ವಿಡಿಯೋ ವೀಕ್ಷಿಸಿ: ಗೊಂಡ ಕಲೆ: ನೆಲದ ಕಥೆಗಳು

ಸುರೇಶ್ ಅವರು ಜನಿಸಿದ್ದು ಪಟಂಗಢ್ ಮಾಲ್‌ನಲ್ಲಿ. ಭೋಪಾಲ್‌ನ ಎಲ್ಲಾ ಗೊಂಡ ಕಲೆಗಾರರು ಅವರ ವಂಶಾವಳಿಯನ್ನು ಈ ಹಳ್ಳಿಯಿಂದಲೇ ಗುರುತಿಸುತ್ತಾರೆ. ಈ ಪ್ರದೇಶ ನರ್ಮದಾ ನದಿಯ ದಕ್ಷಿಣ ದಿಕ್ಕಿನಲ್ಲಿದೆ, ಮತ್ತು ಇದರ ಸುತ್ತ ಅಮರಕಂಟಕ್-ಅಚಾನಕ್ಮಾರ್ ಹುಲಿ ಸಂರಕ್ಷಿತ ಅರಣ್ಯವಿದೆ. ಇದಲ್ಲದೇ, ಈ ಪ್ರದೇಶ ಕಾಡು ಪ್ರಾಣಿಗಳು, ಬೇರೆ ಬೇರೆ ಜಾತಿಯ ಮರಗಳು, ಹೂವುಗಳು, ಪಕ್ಷಿಗಳು ಮತ್ತು ಕೀಟಗಳಿಂದ ತುಂಬಿದೆ. ಇವೆಲ್ಲವನ್ನೂ ನಾವು ಗೊಂಡ ವರ್ಣಚಿತ್ರಗಳಲ್ಲಿ ನೋಡಬಹುದು.

"ನಾವು ಕಾಡಿನಲ್ಲಿ ಸಿಗುತ್ತಿದ್ದ ವಸ್ತುಗಳಿಂದಲೇ ಬಣ್ಣಗಳನ್ನು ತಯಾರಿಸುತ್ತಿದ್ದೆವು. ಸೀಮೆಲ್ [ಕೆಂಪುಬೂರಗ] ಮರದ ಹಸಿರು ಎಲೆಗಳು, ಕರಿಗಲ್ಲುಗಳು, ಹೂವುಗಳು, ಕೆಮ್ಮಣ್ಣು ಇತ್ಯಾದಿಗಳಿಂದ ಬಣ್ಣ ತಯಾರಿಸುತ್ತಿದ್ದೆವು. ನಾವು ಅದನ್ನು ಗೊಂದ್ [ಅಂಟು] ನೊಂದಿಗೆ ಬೆರೆಸುತ್ತೇವೆ,” ಎಂದು ಅವರು ನೆನಪಿಸಿಕೊಳ್ಳುತ್ತಾರೆ. “ಈಗ ನಾವು ಅಕ್ರಿಲಿಕ್ ಬಣ್ಣ ಬಳಸುತ್ತೇವೆ. ಆ ನೈಸರ್ಗಿಕ ಬಣ್ಣಗಳನ್ನು ಬಳಸುವುದರಿಂದ ನಮ್ಮ ಕೆಲಸಕ್ಕೆ ಒಳ್ಳೆಯ ಬೆಲೆ ಸಿಗುತ್ತದೆ ಎಂದು ಜನ ಹೇಳುತ್ತಾರೆ, ಆದರೆ ನಾವು ಅದನ್ನು ಎಲ್ಲಿಂದ ತರುವುದು? ಕಾಡುಗಳೂ ಕಡಿಮೆಯಾಗುತ್ತಿವೆ,” ಎಂದು ಅವರು ಹೇಳುತ್ತಾರೆ.

ಈ ಗೊಂಡ ಚಿತ್ರಕಲೆಯು ಹಳ್ಳಿಯ ಬುಡಕಟ್ಟು ಮನೆಗಳಲ್ಲಿ ಬಿಡಿಸಲಾಗುತ್ತಿದ್ದ ಭಿತ್ತಿ ಚಿತ್ರಕಲೆಯಾಗಿತ್ತು, ಇದನ್ನು ಹಬ್ಬಗಳು ಮತ್ತು ಮದುವೆಗಳ ಸಂದರ್ಭದಲ್ಲಿ ಚಿತ್ರಿಸಲಾಗುತ್ತದೆ. 1970ರ ದಶಕದಲ್ಲಿ ರಾಜ್ಯ ರಾಜಧಾನಿ ಭೋಪಾಲ್‌ಗೆ ಬಂದ ಪ್ರಸಿದ್ಧ ಗೊಂಡ ಕಲಾವಿದ ಜಂಗರ್ ಸಿಂಗ್ ಶ್ಯಾಮ್ ಅವರು ಮೊದಲು ಬಟ್ಟೆಯ ಮೇಲೆ, ನಂತರ ಕ್ಯಾನ್ವಾಸ್ ಹಾಗೂ ಕಾಗದದ ಮೇಲೆ ಈ ಚಿತ್ರಗಳನ್ನು ಬಿಡಿಸಲು ಆರಂಭಿಸಿದರು. ಕಾಗದ ಮತ್ತು ಕ್ಯಾನ್ವಾಸ್‌ನಲ್ಲಿ ಈ ಕಲೆಗೆ ಹೊಸ ಸ್ವರೂಪವನ್ನು ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ದಿವಂಗತ ಜಂಗರ್ ಸಿಂಗ್ ಶ್ಯಾಮ್ ಅವರಿಗೆ 1986ರಲ್ಲಿ ರಾಜ್ಯದ ಅತ್ಯುನ್ನತ ನಾಗರಿಕ ಗೌರವವಾದ ಶಿಕ್ಕರ್ ಸಮ್ಮಾನ್ ನೀಡಲಾಯಿತು.

ಆದರೆ ಏಪ್ರಿಲ್ 2023 ರಲ್ಲಿ, ಈ ಗೊಂಡ ಕಲೆಗೆ ಕೊನೆಗೂ ಜಿಯೋಗ್ರಾಫಿಕಲ್‌ ಇಂಡಿಕೇಶನ್ (ಜಿಐ ಟ್ಯಾಗ್) ಮಾನ್ಯತೆ ಸಿಕ್ಕಿದಾಗ, ಜಂಗರ್ ಅವರ ಸಮುದಾಯಕ್ಕೆ ಸೇರಿದ ಕಲಾಕಾರರನ್ನು ಕಡೆಗಣಿಸಲಾಯಿತು. ಈ ಜಿಐಯನ್ನು ಭೋಪಾಲ್ ಯುವ ಪರ್ಯಾವರಣ್ ಶಿಕ್ಷಣ್ ಏವಂ ಸಮಾಜಿಕ್ ಸಂಸ್ಥಾನ್ ಮತ್ತು ತೇಜಸ್ವನಿ ಮೇಕಲಸುತ ಮಹಾಸಂಘ ಗೋರಪಖ್‌ಪುರ ಸಮಿತಿಗೆ ನೀಡಲಾಯಿತು. ಇದರಿಂದಾಗಿ ಭೋಪಾಲ್‌ನ ಕಲಾಕಾರರು, ಅವರ ಕುಟುಂಬಗಳು ಮತ್ತು ಜಂಗರ್ ಸಿಂಗ್ ಅವರ ಅನುಯಾಯಿಗಳು ಅಸಮಾಧಾನಗೊಂಡರು. ದಿವಂಗತ ಜಂಗರ್‌ ಸಿಂಗ್‌ ಅವರ ಮಗ ಮಯಾಂಕ್ ಕುಮಾರ್ ಶ್ಯಾಮ್, “ಜಿಐ ಅರ್ಜಿದಾರರ ಹೆಸರುಗಳ ಜೊತೆ ಜಂಗರ್ ಸಿಂಗ್ ಅವರ ಹೆಸರು ಸಹ ಇರಬೇಕೆಂದು ನಾವು ಬಯಸುತ್ತೇವೆ. ಅವರಿಲ್ಲದ ಗೊಂಡ ಕಲೆಯನ್ನು ಊಹಿಸಲೂ ಸಾಧ್ಯವಿಲ್ಲ,” ಎಂದು ಹೇಳುತ್ತಾರೆ.

PHOTO • Priti David
PHOTO • Priti David

ಎಡ: ಗೊಂಡ ಕಲೆಗೆ ಏಪ್ರಿಲ್ 2023ರಲ್ಲಿ ನೀಡಲಾದ ಜಿಯಾಗ್ರಾಫಿಕಲ್‌ ಇಂಡಿಕೇಟರ್‌ನ ಪ್ರಮಾಣಪತ್ರ. ಬಲ: ಭೋಪಾಲ್ ಕಲಾಕಾರರಾದ ನಂಕುಶಿಯಾ ಶ್ಯಾಮ್, ಸುರೇಶ್ ಧುರ್ವೆ, ಸುಭಾಷ್ ವಯಂ, ಸುಖನಂದಿ ವ್ಯಾಮ್, ಹೀರಮನ್ ಉರ್ವೇತಿ, ಮಯಾಂಕ್ ಶ್ಯಾಮ್ ತಮ್ಮನ್ನು ಕಡೆಗಣಿಸಲಾಗಿದ ಎನ್ನುತ್ತಾರೆ

ಜಿಐ ಟ್ಯಾಗ್‌ ಸಿಗುವಂತೆ ಮಾಡುವಲ್ಲಿ ಒತ್ತಡ ಹೇರಿದ ದಿಂಡೋರಿ ಜಿಲ್ಲಾಧಿಕಾರಿ ವಿಕಾಸ್ ಮಿಶ್ರಾ ಅವರು ಫೋನಿನ ಮೂಲಕ ಈ ಬಗ್ಗೆ ತಕ್ಷಣವೇ ಪ್ರತಿಕ್ರಿಯಿಸಿ, “ಜಿಐ ಟ್ಯಾಗ್ ಎಲ್ಲಾ ಗೊಂಡ ಕಲಾಕಾರರಿಗೆ ಸೇರಿದ್ದು. ನೀವು ವಾಸಿಸುವ ಪ್ರದೇಶವನ್ನು ಆಧರಿಸಿ ನಾವು ತಾರತಮ್ಯ ಮಾಡುತ್ತಿಲ್ಲ. ಭೋಪಾಲ್‌ನ ಕಲಾಕಾರರು ತಮ್ಮ ಕಲೆಯನ್ನು 'ಗೊಂಡ್' ಎಂದು ಕರೆಯಬಹುದು, ಏಕೆಂದರೆ ಅವರೆಲ್ಲರೂ ಇಲ್ಲಿನವರೇ. ಅವರೆಲ್ಲಾ ಒಂದೇ ಜನ,” ಎಂದು ಹೇಳಿದರು.

ಜನವರಿ 2024ರಲ್ಲಿ, ಜಂಗರ್ ಅವರ ಅನುಯಾಯಿಗಳ ಭೋಪಾಲ್‌ನ ಸಂಘಟನೆ - ಜಂಗರ್ ಸಂವರ್ಧನ್ ಸಮಿತಿಯು ಈ ಬಗ್ಗೆ ಚೆನ್ನೈನಲ್ಲಿರುವ ಜಿಐ ಕಚೇರಿಗೆ ಪತ್ರವೊಂದನ್ನು ಬರೆದು ಅವರ ಹೆಸರನ್ನೂ ಅರ್ಜಿದಾರರಾಗಿ ಸೇರಿಸುವಂತೆ ಕೇಳಿಕೊಂಡಿತ್ತು, ಆದರೆ ಈ ವರದಿ ಪ್ರಕಟಿಸುವವರೆಗೂ ಏನೂ ಬದಲಾವಣೆಯಾಗಿಲ್ಲ.

*****

ಕುಟುಂಬದ ಕಿರಿಯ ಸದಸ್ಯ ಮತ್ತು ಏಕೈಕ ಹುಡುಗನಾಗಿರುವ ಸುರೇಶ್ ಅವರು ಪಟಂಗಢದಲ್ಲಿ ಬೆಳೆದವರು. ಬೇರೆ ಬೇರೆ ಮೆಟೀರಿಯಲ್‌ಗಳಲ್ಲಿ ಕೆಲಸ ಮಾಡಬಲ್ಲ ನುರಿತ ಕುಶಲಕರ್ಮಿಯಾದ ಇವರಿಗೆ ಇವರ ತಂದೆಯೇ ತರಬೇತಿ ನೀಡಿದರು. "ಅವರಿಗೆ ಠಾಕೂರ್ ದೇವ್ ಪ್ರತಿಮೆಗಳನ್ನು ಮಾಡಲು ಬರುತ್ತಿತ್ತು, ಬಾಗಿಲುಗಳ ಮೇಲೆ ನರ್ತಕರ ಅಲಂಕಾರಿಕ ಕೆತ್ತನೆಗಳನ್ನು ಮಾಡುತ್ತಿದ್ದರು. ಅವರಿಗೆ ಇದನ್ನು ಯಾರು ಕಲಿಸಿದರು ಎಂಬುದು ನನಗೆ ಗೊತ್ತಿಲ್ಲ, ಆದರೆ ಅವರಿಗೆ ಕಲ್ಲಿನ ಕೆಲಸದಿಂದ ಮರಗೆಲಸದವರೆಗೆ ಬೇರೆ ಬೇರೆ ಕೆಲಸಗಳನ್ನು ಮಾಡಲು ಬರುತ್ತಿತ್ತು,” ಎಂದು ಸುರೇಶ್‌ ಹೇಳುತ್ತಾರೆ.

ಚಿಕ್ಕ ಮಗುವಾಗಿದ್ದಾಗ, ಅವರು ತಮ್ಮ ತಂದೆಯೊಂದಿಗೆ ತಿರುಗಾಡುತ್ತಿದ್ದರು, ಅವರು ನೋಡು ನೋಡುತ್ತಿದ್ದಂತೆ ಆ ಕೌಶಲ್ಯಗಳನ್ನು ಸುರೇಶ್‌ ಕೈಗೆತ್ತಿಕೊಂಡರು. “ಮಿಟ್ಟಿ ಕಾ ಕಾಮ್ ಹೋತಾ ಥಾ [ನಾವು ಹಬ್ಬಗಳ ಸಂದರ್ಭದಲ್ಲಿ ಮಣ್ಣಿನ ವಿಗ್ರಹಗಳನ್ನು ಮಾಡುತ್ತಿದ್ದೆವು]. ನನ್ನ ತಂದೆ ಊರಿನವರಿಗಾಗಿ ಮರದ ಕೆಲಸ ಮಾಡುತ್ತಿದ್ದರು. ಆದರೆ ಇದು ಅವರ ಶೌಕ್ [ಹವ್ಯಾಸ] ಆಗಿತ್ತು, ಹಾಗಾಗಿ ಅವರು ಈ ಕೆಲಸಕ್ಕೆ ಹಣ ತೆಗೆದುಕೊಳ್ಳುತ್ತಿರಲಿಲ್ಲ. ಹೆಚ್ಚೆಂದರೆ ಅವರು ಸ್ವಲ್ಪ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು - ಆಗ ಧಾನ್ಯವೇ ಹಣವಾಗಿತ್ತು. ಆದ್ದರಿಂದ ಸುಮಾರು ಅರ್ಧ ಅಥವಾ ಒಂದು ಪಸೇರಿ [ಐದು ಕಿಲೋ] ಗೋಧಿ ಅಥವಾ ಅಕ್ಕಿಯನ್ನು ಪಗಾರವಾಗಿ ತೆಗೆದುಕೊಳ್ಳುತ್ತಿದ್ದರು,” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

PHOTO • Priti David
PHOTO • Priti David

ಸುರೇಶ್ (ಎಡ) ಅವರು ಜನಿಸಿರುವ ಪಟಂಗಾರ್ ಮಾಲ್‌ ಹಳ್ಳಿಯ ಮೂಲಕ ಭೋಪಾಲ್‌ನ ಎಲ್ಲಾ ಗೊಂಡ ಕಲಾಕಾರರು ತಮ್ಮ ವಂಶಾವಳಿಯನ್ನು ಗುರುತಿಸುತ್ತಾರೆ. ಈ ಪ್ರದೇಶವು ನರ್ಮದಾ ನದಿಯ ದಕ್ಷಿಣದಲ್ಲಿದ್ದು, ಅಮರಕಂಟಕ್-ಅಚಾನಕ್ಮಾರ್ ಹುಲಿ ಸಂರಕ್ಷಿತ ಅರಣ್ಯದಿಂದ ಸುತ್ತುವರಿದಿದೆ. ಇದಲ್ಲದೇ, ಈ ಪ್ರದೇಶ ಕಾಡು ಪ್ರಾಣಿಗಳು, ಬೇರೆ ಬೇರೆ ಜಾತಿಯ ಮರಗಳು, ಹೂವುಗಳು, ಪಕ್ಷಿಗಳು ಮತ್ತು ಕೀಟಗಳಿಂದ ತುಂಬಿದೆ. ಇವೆಲ್ಲವನ್ನೂ ನಾವು ಗೊಂಡ ವರ್ಣಚಿತ್ರಗಳಲ್ಲಿ ನೋಡಬಹುದು (ಬಲ)

ಇವರ ಕುಟುಂಬವು ಮಳೆಯಾಶ್ರಿತ ಜಮೀನಿನ ಒಂದು ಸಣ್ಣ ಭೂಮಿಯನ್ನು ಮಾತ್ರ ಹೊಂದಿತ್ತು. ಅವರು ಅದರಲ್ಲಿ ತಮ್ಮ ಮನೆ ಬಳಕೆಗಾಗಿ ಭತ್ತ, ಗೋಧಿ ಮತ್ತು ಕಡ್ಲೆಯನ್ನು ಬೆಳೆಯುತ್ತಿದ್ದರು. ಬೇರೆಯವರ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸುರೇಶ್, "ನಾನು ಬೇರೆ ಯಾರದೋ ಹೊಲ ಅಥವಾ ಜಮೀನಿನಲ್ಲಿ ಒಂದು ದಿನ ಕೆಲಸ ಮಾಡಿದರೆ 2 ವರೆ ರುಪಾಯಿ ಸಿಗುತ್ತಿತ್ತು, ಆದರೆ ಆ ಕೆಲಸ ಪ್ರತಿದಿನ ಸಿಗುತ್ತಿರಲಿಲ್ಲ,” ಎಂದು ಹೇಳುತ್ತಾರೆ.

1986 ರಲ್ಲಿ ಇವರು 10 ವರ್ಷ ಪ್ರಾಯದ ಚಿಕ್ಕ ಹುಡುಗನಾಗಿದ್ದಾಗಲೇ ಅನಾಥನಾದರು. "ನಾನು ಸಂಪೂರ್ಣವಾಗಿ ಒಬ್ಬಂಟಿಯಾಗಿದ್ದೆ," ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಅವರ ಅಕ್ಕಂದಿರೆಲ್ಲರೂ ಮದುವೆಯಾಗಿದ್ದರು, ಆದ್ದರಿಂದ ಅವರು ತಮ್ಮನ್ನು ತಾವೇ ನೋಡಿಕೊಳ್ಳಬೇಕಾಗಿತ್ತು. “ಒಂದು ದಿನ ಹಳ್ಳಿಯ ಗೋಡೆಗಳ ಮೇಲೆ ಚಿತ್ರಿಸಲಾಗಿದ್ದ ನನ್ನ ಕಲೆಯನ್ನು ನೋಡಿದ ಜಂಗರ್‌ ಅವರ ತಾಯಿ, ನನ್ನನ್ನು [ಭೋಪಾಲ್‌ಗೆ] ಏಕೆ ಕರೆದುಕೊಂಡು ಹೋಗಬಾರದು ಎಂದು ಯೋಚಿಸಿದರು. ʼಇವನು ಏನನ್ನಾದರೂ ಕಲಿಯಬಹುದು,ʼ ಎಂದು ಅವರು ಹೇಳಿದ್ದರು,” ಎಂದು ಸುರೇಶ್ ಹೇಳುತ್ತಾರೆ. ಅವರು ಪೂರ್ವ ಮಧ್ಯಪ್ರದೇಶದಿಂದ 600 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ರಾಜಧಾನಿಗೆ ಪ್ರಯಾಣ ಬೆಳೆಸಿದರು.

ಜಂಗರ್ ಸಿಂಗ್ ಆಗ ಭೋಪಾಲ್‌ನ ಭಾರತ್ ಭವನದಲ್ಲಿ ಕೆಲಸ ಮಾಡುತ್ತಿದ್ದರು. "ಜಂಗರ್ ಜೀ, ನಾನು ಅವರನ್ನು 'ಭಯ್ಯಾ' ಎಂದು ಕರೆಯುತ್ತಿದ್ದೆ. ಅವರು ನನ್ನ ಗುರು. ಅವರು ನನಗೆ ಕೆಲಸ ಕೊಟ್ಟರು. ನಾನು ಮೊದಲೆಲ್ಲಾ ಕ್ಯಾನ್ವಾಸ್‌ನಲ್ಲಿ ಕೆಲಸ ಮಾಡುತ್ತಿರಲಿಲ್ಲ, ಗೋಡೆಗಳ ಮೇಲೆ ಮಾತ್ರ ಕೆಲಸ ಮಾಡಿದ್ದೆ. ಕಲ್ಲುಗಳು ಮತ್ತು ಇತರ ವಸ್ತುಗಳನ್ನು ನಿರಂತರವಾಗಿ ಉಜ್ಜಿ [ಜಿಘಿಸ್ ಘಿಸ್ ಕೆ] ಸರಿಯಾದ ಬಣ್ಣವನ್ನು ತಯಾರಿಸುವುದು ನನ್ನ ಆರಂಭದ ಕೆಲಸವಾಗಿತ್ತು,” ಎಂದು ಸುರೇಶ್‌ ನೆನಪಿಸಿಕೊಳ್ಳುತ್ತಾರೆ.

ಇದೆಲ್ಲಾ ನಾಲ್ಕು ದಶಕಗಳ ಹಿಂದಿನ ಮಾತು. ಆವತ್ತಿನಿಂದ, ಸುರೇಶ್ ಅವರ ತಮ್ಮ ಸಿಗ್ನೇಚರ್ ವಿನ್ಯಾಸವನ್ನು - 'ಸೀದಿ ಪೀಡಿ' ರಚಿಸಿದರು. "ನನ್ನ ಎಲ್ಲಾ ಕೆಲಸಗಳಲ್ಲಿ ನೀವು ಇದನ್ನು ನೋಡುತ್ತೀರಿ. ಈ ಪೇಂಟಿಂಗ್‌ನಲ್ಲಿರುವ ಕಥೆಯನ್ನು ನಾನು ನಿಮಗೆ ತೋರಿಸುತ್ತೇನೆ …” ಎಂದು ಅವರು ಹೇಳಿದರು.

ಅನುವಾದ: ಚರಣ್‌ ಐವರ್ನಾಡು

Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Editor : Vishaka George

Vishaka George is Senior Editor at PARI. She reports on livelihoods and environmental issues. Vishaka heads PARI's Social Media functions and works in the Education team to take PARI's stories into the classroom and get students to document issues around them.

Other stories by Vishaka George
Video Editor : Sinchita Parbat

Sinchita Parbat is a Senior Video Editor at the People’s Archive of Rural India, and a freelance photographer and documentary filmmaker. Her earlier stories were under the byline Sinchita Maji.

Other stories by Sinchita Parbat
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad