ಪಂಜಾಬಿ ಪಿಂಡ್‌ ಎನ್ನುವ ಊರಿನವರಾದ ಸಿಂಗ್‌ ಅವರ ಪಾಲಿಗೆ ಟ್ರಾವೆಲ್‌ ಏಜೆಂಟ್‌ ನೆನಪು ಈಗಲೂ ದುಃಸ್ವಪ್ನದಂತೆ ಕಾಡುತ್ತದೆ.

ಆ ದಲ್ಲಾಳಿಗೆ (ಏಜೆಂಟ್)‌ ಹಣ ನೀಡುವ ಸಲುವಾಗಿ ಸಿಂಗ್‌ (ಹೆಸರು ಬದಲಾಯಿಸಲಾಗಿದೆ) ತಮ್ಮ ಒಂದು ಕೃಷಿ ಭೂಮಿಯನ್ನು ಮಾರಿದ್ದರು. ಈ ಹಣಕ್ಕೆ ಪ್ರತಿಯಾಗಿ ಆ ದಲ್ಲಾಳಿ ಜಿತೇಂದರ್ ಸಿಂಗ್‌ ಅವರನ್ನು “ಏಕ್‌ ನಂಬರ್‌ [ಕಾನೂನು ಪ್ರಕಾರವಾಗಿ]” ಸರ್ಬಿಯಾ ಮೂಲಕ ಪೋರ್ಚುಗಲ್‌ ಕಳುಹಿಸುವುದಾಗಿ ಭರವಸೆ ನೀಡಿದ್ದ.”

ಆದರೆ ತನಗೆ ಜಿತೇಂದರ್ ಮೋಸ ಮಾಡಿ ಮಾನವ ಕಳ್ಳಸಾಗಣೆಯ ಮೂಲಕ ಅಂತರರಾಷ್ಟ್ರೀಯ ಗಡಿಗಳನ್ನು ದಾಟಿಸಿದ್ದಾನೆ ಎನ್ನುವುದು ಅರಿವಿಗೆ ಬಂತು. ಆಘಾತ ಮತ್ತು ದಿಗ್ಭ್ರಮೆಗೆ ಒಳಗಾಗಿದ್ದ ಸಿಂಗ್‌ ಅವರಿಗೆ ತನ್ನ ಪರಿಸ್ಥಿತಿಯ ಕುರಿತು ಕುಟುಂಬಕ್ಕೂ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ.

ಯೂರೋಪ್‌ ಖಂಡದಲ್ಲಿನ ಹಲವು ದಟ್ಟವಾದ ಕಾಡು, ಪರ್ವತಗಳನ್ನು ಹತ್ತಿಳಿಯುತ್ತಾ ಅವರು ಮತ್ತು ಅವರ ಜತೆಯಲ್ಲಿದ್ದ ಇತರ ವಲಸಿಗರು ಮಳೆಗಾಲದ ಕೊಚ್ಚೆಗುಂಡಿಯ ನೀರು ಮತ್ತು ಬ್ರೆಡ್‌ ತಿಂದು ಜೀವ ಉಳಿಸಿಕೊಂಡಿದ್ದರು. ಅವರಿಗೆ ಬ್ರೆಡ್‌ ಕಂಡರೆ ಆಗುತ್ತಿರಲಿಲ್ಲ.

ಮೇರೆ ಫಾದರ್‌ ಸಾಬ್‌ ಹಾರ್ಟ್‌ ಪೇಷನ್‌ ಆ. ಇನ್ನಾ ಟೆನ್ಷನ್‌ ಓಹ್‌ ಲೇಹ್‌ ನಿ ಸಕ್ತೆ, ನಾಲೆ ಘರ್‌ ಮೇ ಜಾ ನಹೀ ಸಕ್ದಾ ಕ್ಯೂಂ ಕೇ ಮೇ ಸಾರಾ ಕುಚ್‌ ದಾ ತೇ ಲಾಕೆ ಆಯಾ ಸಿ [ನನ್ನ ತಂದೆಗೆ ಹೃದಯದ ಸಮಸ್ಯೆಯಿದೆ. ಅವರು ಆಘಾತಕಾರಿ ಸುದ್ದಿಗಳನ್ನು ತಡೆಯಲಾರರು. ಮನೆಯಲ್ಲಿದ್ದ ಎಲ್ಲವನ್ನೂ ಮಾರಿದ್ದ ಕಾರಣ ನಾನು ಊರಿಗೂ ಬರುವಂತಿರಲಿಲ್ಲ” ಎಂದು ಪೋರ್ಚುಗಲ್‌ ದೇಶದಲ್ಲಿ ತಾನು ಇತರ ಐದು ಜನರೊಂದಿಗೆ ಹಂಚಿಕೊಂಡಿದ್ದ ಕೋಣೆಯಲ್ಲಿ ಕುಳಿತು ನಮ್ಮೊಂದಿಗೆ ತನ್ನ ಅನುಭವವನ್ನು ಹಂಚಿಕೊಂಡರು. ಪಂಜಾಬಿ ಭಾಷೆ ಮಾತನಾಡುವ ಸಿಂಗ್‌ ಅವರಿಗೆ 25 ವರ್ಷ.

ಹಲವು ವರ್ಷಗಳಿಂದ, ಪೋರ್ಚುಗಲ್ ದಕ್ಷಿಣ ಏಷ್ಯಾದ ದೇಶಗಳಾದ ಭಾರತ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾದ ಕಾರ್ಮಿಕರ ನೆಚ್ಚಿನ ತಾಣವಾಗಿ ಹೊರಹೊಮ್ಮಿದೆ.

PHOTO • Karan Dhiman

ಸೆರ್ಬಿಯಾ ಮೂಲಕ ಪೋರ್ಚುಗಲ್ ದೇಶಕ್ಕೆ ಸುರಕ್ಷಿತವಾಗಿ ತಲುಪಲು ಬೇಕಾಗುವ ' ಕಾನೂನು ದಾಖಲೆಗಳನ್ನು ' ಖರೀದಿಸಲು ಸಿಂಗ್ ತಮ್ಮ ಕುಟುಂಬದ ಒಂದು ಎಕರೆ ಕೃಷಿ ಭೂಮಿಯನ್ನು ಮಾರಾಟ ಮಾಡಿದರು

ಸಿಂಗ್‌ ಈ ಹಿಂದೆ ಭಾರತೀಯ ಸೇನೆ ಸೇರುವ ಕನಸು ಕಂಡಿದ್ದರು. ಆ ನಿಟ್ಟಿನಲ್ಲಿ ಮಾಡಿದ ಕೆಲವು ಪ್ರಯತ್ನಗಳು ವಿಫಲವಾದ ಕಾರಣ ಅವರು ವಿದೇಶಕ್ಕೆ ಹೋಗಿ ದುಡಿಯುವ ಆಲೋಚನೆ ಮಾಡಿದರು. ಸುಲಭ ವಲಸೆ ನೀತಿಗಳ ಕಾರಣಕ್ಕಾಗಿ ಅವರು ಪೋರ್ಚುಗಲ್‌ ದೇಶಕ್ಕೆ ಹೋಗುವುದಾಗಿ ನಿರ್ಧರಿಸಿದರು. ಪೋರ್ಚುಗಲ್‌ ದೇಶವು ಸುಲಭ ವಸತಿ ನೀತಿಗಳನ್ನು ಹೊಂದಿರುವುದರಿಂದಾಗಿ ಅವರು ಆ ದೇಶಕ್ಕೆ ಹೋಗಲು ಉದ್ದೇಶಿಸಿದ್ದರು. ಯುರೋಪಿನ ಈ ದೇಶದಲ್ಲಿ ತಮ್ಮ ಊರಿನಿಂದ ಯಶಸ್ವಿಯಾಗಿ ವಲಸೆ ಬಂದ ಅನೇಕರು ಈಗಾಗಲೇ ಇದ್ದರು. ಅವರು ಹೇಳಿದ ಕತೆಗಳೇ ಅವರಿಗೆ ಭರವಸೆಯನ್ನು ನೀಡಿದ್ದವು. ಮುಂದೆ ಅದೇ ಊರಿನ ವ್ಯಕ್ತಿಯೊಬ್ಬರು ದಲ್ಲಾಳಿ ಜಿತೇಂದ್ರನ ಕುರಿತು ಮಾಹಿತಿ ನೀಡಿದರು.

ಜತಿಂದರ್, ʼನಾನು 12 ಲಕ್ಷ ರೂಪಾಯಿಗಳಿಗೆ (ಸರಿಸುಮಾರು 13,000 ಯುರೋಗಳು) ನಿಮ್ಮನ್ನು ಕಾನೂನುಬದ್ಧವಾಗಿ ಪೋರ್ಚುಗಲ್‌ ದೇಶ ತಲುಪಲು ವ್ಯವಸ್ಥೆ ಮಾಡಬಲ್ಲೆʼ ಎಂದಿದ್ದ. ನಾನು ಅವನ ಮಾತಿಗೆ ಒಪ್ಪಿದ್ದೆ. ಜೊತೆಗೆ ಎಲ್ಲವೂ ಕಾನೂನು ಪ್ರಕಾರವೇ ಇರಬೇಕು ಎಂದು ಒತ್ತಿ ಹೇಳಿದ್ದೆ” ಎಂದು ಸಿಂಗ್ ಹೇಳುತ್ತಾರೆ.

ಆದರೆ ಈ ದಲ್ಲಾಳಿ ಹಣ ಪಡೆಯುವ ಸಂದರ್ಭದಲ್ಲಿ ಬ್ಯಾಂಕ್‌ ಮೂಲಕ ಪಡೆಯಲು ನಿರಾಕರಿಸಿ “ಬೇರೆ ದಾರಿಯನ್ನು” ಬಳಸುವಂತೆ ಒತ್ತಾಯಿಸಿದ. ಈ ಬಗ್ಗೆ ಸಿಂಗ್‌ ಪ್ರತಿರೋಧ ವ್ಯಕ್ತಪಡಿಸಿದಾಗ ‌ಜತಿಂದರ್ ತಾನು ಹೇಳಿದಂತೆ ಕೇಳುವಂತೆ ಅವರ ಮೇಲೆ ಒತ್ತಡ ಹೇರಿದ. ವಿದೇಶಕ್ಕೆ ಹೋಗಲು ಉತ್ಸುಕರಾಗಿದ್ದ ಸಿಂಗ್‌ ಮೊದಲ ಕಂತಿನ 4 ಲಕ್ಷ ರೂಪಾಯಿಗಳನ್ನು (4,383 ಯುರೋಗಳು) ಪೆಟ್ರೋಲ್‌ ಬಂಕ್‌ ಒಂದರಲ್ಲಿ ಮತ್ತು ಎರಡನೇ ಕಂತಿನ ಹಣವನ್ನು ಲಕ್ಷ ರೂ.ಗಳನ್ನು (1,095 ಯುರೋಗಳು) ಅಂಗಡಿಯೊಂದರಲ್ಲಿ ಕೈ ಬದಲಾಯಿಸಿದರು.

ಸಿಂಗ್‌ 2021ರ ಅಕ್ಟೋಬರ್‌ ತಿಂಗಳಿನಲ್ಲಿ ದೆಹಲಿಗೆ ತೆರಳಿದರು. ಯೋಜನೆ ಪ್ರಕಾರ ಅವರು ಅಲ್ಲಿಂದ ಬೆಲಗ್ರೇಡ್‌ ತಲುಪಿ ಮತ್ತೆ ಅಲ್ಲಿಂದ ಪೋರ್ಚುಗಲ್‌ ಸೇರಬೇಕಿತ್ತು. ಅದು ಅವರ ಮೊದಲ ವಿಮಾನ ಪ್ರಯಾಣವಾಗಿತ್ತು. ಆದರೆ ಕೋವಿಡ್ -19 ನಿರ್ಬಂಧಗಳಿಂದಾಗಿ ಭಾರತದಿಂದ ಸೆರ್ಬಿಯಾ ದೇಶಕ್ಕೆ ಹೋಗುವ ವಿಮಾನಗಳು ಕಾರ್ಯಾಚರಣೆ ನಿಲ್ಲಿಸಿದ್ದ ಕಾರಣ ಸಂಸ್ಥೆ ಅವರ ಪ್ರಯಾಣಕ್ಕೆ ಅನುಮತಿ ನೀಡಲಿಲ್ಲ. ಈ ವಿಷಯವನ್ನು ದಲ್ಲಾಳಿ ಅವರಿಂದ ಮರೆಮಾಚಿದ್ದ. ಅವರು ನಂತರ ದುಬಾಯಿಗೆ ಟಿಕೆಟ್‌ ಬುಕ್‌ ಮಾಡಿ ಅಲ್ಲಿಂದ ಬೆಲಗ್ರೇಡ್‌ ಪ್ರಯಾಣಿಸಿದರು.

“ಬೆಲಗ್ರೇಡ್‌ ವಿಮಾನ ನಿಲ್ದಾಣದಲ್ಲಿ ನಮ್ಮನ್ನು ಎದುರುಗೊಂಡ ದಲ್ಲಾಳಿ ಸೆರ್ಬಿಯನ್‌ ಪೊಲೀಸ್‌ ಒಳ್ಳೆಯವರಲ್ಲ, ಅವರಿಗೆ ಭಾರತೀಯರನ್ನು ಕಂಡರಾಗದು ಎಂದು ಹೇಳಿ ನಮ್ಮ ಪಾಸ್‌ಪೋರ್ಟ್‌ಗಳನ್ನು ಕಸಿದುಕೊಂಡ. ಆ ಹೊತ್ತಿಗೆ ನಾವು ಹೆದರಿ ಹೋಗಿದ್ದೆವು” ಎಂದು ಪಾಸ್‌ಪೋರ್ಟ್‌ ಕಳೆದುಕೊಂಡ ಸಿಂಗ್‌ ಹೇಳುತ್ತಾರೆ.

ಸಿಂಗ್‌ ಅವರು “ಡೂ ನಂಬರ್”‌ ಎನ್ನುವ ಪದವನ್ನು ಕಾನೂನುಬಾಹಿರ ಪ್ರಯಾಣದ ಕುರಿತು ವಿವರಿಸಲು ಬಳಸುತ್ತಿದ್ದರು. ಸರ್ಬಿಯಾದ ರಾಜಧಾನಿ ಬೆಲಗ್ರೇಡಿನಿಂದ ಗ್ರೀಸ್‌ ದೇಶದ ಥಿವಾ ಎನ್ನುವಲ್ಲಿಗೆ ಇದೇ ಮಾದರಿಯಲ್ಲಿ ಪ್ರಯಾಣಿಸಲಾಯಿತು. ಅವರೊಂದಿಗಿದ್ದ ಡಾಂಕರ್‌ಗಳು (ಕಳ್ಳಸಾಗಣೆದಾರರು) ಗ್ರೀಸ್‌ ದೇಶದ ಮೂಲಕ ಪೋರ್ಚುಗಲ್‌ ತಲುಪಿಸುವುದಾಗಿ ಭರವಸೆ ನೀಡಿದ್ದರು.

ಆದರೆ ಥಿವಾ ತಲುಪುತ್ತಿದ್ದಂತೆ ದಲ್ಲಾಳಿ ತನ್ನ ಮಾತಿನಿಂದ ಹಿಂದಕ್ಕೆ ಸರಿದು ತನ್ನಿಂದ ಪೋರ್ಚುಗಲ್‌ ತಲುಪಿಸಲು ಸಾಧ್ಯವಿಲ್ಲವೆಂದು ಕೈ ಎತ್ತಿದ.

“ಜತಿಂದರ್, ʼನಾನು ನಿನ್ನಿಂದ ಏಳು ಲಕ್ಷ ಪಡೆದಿದ್ದೆ. ನನ್ನ ಕೆಲಸ ಮುಗಿಯಿತು. ನಿನ್ನನ್ನು ಗ್ರೀಸ್‌ ದೇಶದಿಂದ ಹೊರಗೆ ಕರೆಸಲು ಸಾಧ್ಯವಿಲ್ಲ ಎಂದು ಹೇಳಿದ್ದ” ಎಂದು ಸಿಂಗ್‌ ಅಳು ಮತ್ತು ಆತಂಕದ ದನಿಯಲ್ಲಿ ಹೇಳುತ್ತಾರೆ.

PHOTO • Pari Saikia

ಅನೇಕ ಯುವಕರು ಮತ್ತು ಮಹಿಳೆಯರಿಗೆ ಸುರಕ್ಷಿತವಾಗಿ ಕಳುಹಿಸುವ ಭರವಸೆ ನೀಡಿ ಅವರನ್ನು ಡಾಂಕರ್‌ಗಳ (ಮಾನವ ಕಳ್ಳಸಾಗಣೆದಾರರು) ಕೈಗೆ ಒಪ್ಪಿಸಲಾಗುತ್ತದೆ

ಗ್ರೀಸ್‌ ದೇಶಕ್ಕೆ ಬಂದ ಎರಡು ತಿಂಗಳ ನಂತರ 2022ರ ಮಾರ್ಚ್‌ ತಿಂಗಳಿನಲ್ಲಿ ಸಿಂಗ್‌ ಅವರಿಗೆ ಬಹಳ ಪ್ರಯತ್ನದ ನಂತರ ಸರ್ಬಿಯನ್‌ ಕಳ್ಳಸಾಗಣೆದಾರನ ಬಳಿಯಿದ್ದ ಅವರ ಪಾಸ್‌ಪೋರ್ಟ್‌ ಮರಳಿ ಸಿಕ್ಕಿತು. ಅಲ್ಲಿ ಅವರು ಈರುಳ್ಳಿ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿನ ಕೆಲಸಗಾರರು ಸಿಂಗ್‌ ಅವರಿಗೆ ದೇಶವನ್ನು ತೊರೆಯುಂತೆ ಸಲಹೆ ನೀಡಿದರು. ಇನ್ನೂ ಹೆಚ್ಚುಕಾಲ ಉಳಿದರೆ ಗಡೀಪಾರು ಮಾಡುವ ಸಾಧ್ಯತೆಯಿದೆ ಎಂದೂ ಅವರು ಹೇಳಿದರು.

ಹೀಗೆ ಪಂಜಾಬಿನ ಈ ಯುವಕ ಮತ್ತೊಮ್ಮೆ ಜೀವವನ್ನು ಕಳ್ಳಸಾಗಣೆದಾರರ ಬಳಿ ಒತ್ತೆಯಿಡಲು ತೀರ್ಮಾನಿಸಿದರು. “ನಾನು ಗ್ರೀಸ್‌ ಬಿಡಲು [ಮಾನಸಿಕವಾಗಿ] ಸಿದ್ಧನಾಗಿದ್ದೆ. ಇದೇ ಕೊನೆಯ ಬಾರಿಗೆ ನನ್ನ ಬದುಕನ್ನು ಪಣವಿಡಲು ತೀರ್ಮಾನಿಸಿದೆ.”

ಅವರು ಗ್ರೀಸ್‌ ದೇಶದಲ್ಲಿ ಹೊಸ ದಲ್ಲಾಳಿಯೊಬ್ಬನನ್ನು ಪರಿಚಯ ಮಾಡಿಕೊಂಡರು. ಅವನು ಅವರನ್ನು 800 ಯುರೋಗಳಿಗೆ ಸೆರ್ಬಿಯಾಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡಿದ. ಈರುಳ್ಳಿ ಹೊಲದಲ್ಲಿ ಮೂರು ತಿಂಗಳು ದುಡಿದು ಉಳಿಸಿದ್ದ ಹಣವನ್ನು ಆ ದಲ್ಲಾಳಿಗೆ ನೀಡಿದರು.

ಈ ಬಾರಿ ಪ್ರಯಾಣ ಆರಂಭಿಸುವ ಮೊದಲು ಸಿಂಗ್‌ ತಮ್ಮದೇ ಆದ ಒಂದಷ್ಟು ಹುಡುಕಾಟಗಳನ್ನು ನಡೆಸಿದರು. ಗ್ರೀಸ್‌ ದೇಶದಿಂದ ಸರ್ಬಿಯಾಕ್ಕೆ ಹಿಂದಿರುಗಿ ಅಲ್ಲಿಂದ ಹಂಗೇರಿ, ಅಲ್ಲಿಂದ ಆಸ್ಟ್ರಿಯಾ ತಲುಪಿ ನಂತರ ಪೋರ್ಚುಗಲ್‌ ಸೇರಿಕೊಳ್ಳಲು ತೀರ್ಮಾನಿಸಿದರು. ಗ್ರೀಸ್‌ ದೇಶದಿಂದ ಸರ್ಬಿಯಾಕ್ಕೆ ಹೋಗುವುದು ಅಪಾಯಕಾರಿ, ಅಲ್ಲಿ ಸಿಕ್ಕಿಬಿದ್ದರೆ “ಬರೀ ಒಳ ಉಡುಪಿನಲ್ಲಿ ಟರ್ಕಿ ದೇಶಕ್ಕೆ ಗಡಿಪಾರು ಮಾಡಲಾಗುತ್ತದೆ” ಎಂದು ಅವರಿಗೆ ಅಲ್ಲಿನವರು ಎಚ್ಚರಿಕೆ ನೀಡಿದ್ದರು.

*****

2022ರ ಜನವರಿಯಲ್ಲಿ ಆರು ಹಗಲು ಮತ್ತು ಆರು ರಾತ್ರಿ ನಡೆದು ಸಿಂಗ್‌ ಸೆರ್ಬಿಯಾ ತಲುಪಿಕೊಂಡರು. ಅಲ್ಲಿ ತಲುಪಿದ ನಂತರ ಸರ್ಬಿಯಾದ ರಾಜಧಾನಿ ಬೆಲಗ್ರೇಡ್‌ ನಗರದಲ್ಲಿನ ನಿರಾಶ್ರಿತರ ನೆಲೆಗಳನ್ನು ಹುಡುಕಿದರು. ಸೆರ್ಬಿಯಾ-ರೊಮೇನಿಯಾ ಗಡಿಯ ಬಳಿಯ ಕಿಕಿಂದಾ ಶಿಬಿರ ಮತ್ತು ಸೆರ್ಬಿಯಾ-ಹಂಗೇರಿ ಗಡಿಯ ಬಳಿಯ ಸುಬೊಟಿಕಾ ಶಿಬಿರ ಅವರ ಗಮನಕ್ಕೆ ಬಂದವು. ಈ ಶಿಬಿರಗಳು ಲಾಭದಾಯಕ ಮಾನವ ಕಳ್ಳಸಾಗಣೆ ಕಾರ್ಯಾಚರಣೆಯನ್ನು ನಿರ್ವಹಿಸುವ ಕಳ್ಳಸಾಗಣೆದಾರರಿಗೆ ಆಶ್ರಯ ತಾಣಗಳು ಎಂದು ಅವರು ಹೇಳುತ್ತಾರೆ.

"ಅಲ್ಲಿ [ಕಿಕಿಂದಾ ಶಿಬಿರದಲ್ಲಿ] ಇಬ್ಬರಲ್ಲಿ ಒಬ್ಬ ವ್ಯಕ್ತಿ ಕಳ್ಳಸಾಗಣೆದಾರನಾಗಿರುತ್ತಾನೆ. ಅವರು 'ನಾನು ನಿಮ್ಮನ್ನು ಅಲ್ಲಿಗೆ ಕರೆದೊಯ್ಯುತ್ತೇನೆ, ಆದರೆ ಅದಕ್ಕೆ ಇಷ್ಟು ವೆಚ್ಚವಾಗುತ್ತದೆ' ಎಂದು ವ್ಯವಹಾರ ಕುದುರಿಸುತ್ತಾರೆ, ಎಂದು ಆಸ್ಟ್ರಿಯಾ ತಲುಪಲು ಸಹಾಯ ಮಾಡಲು ಸಿದ್ಧನಿದ್ದ ಕಳ್ಳಸಾಗಣೆದಾರನನ್ನು ಅಲ್ಲಿ ಹುಡುಕಿಕೊಂಡ ಸಿಂಗ್ ಹೇಳುತ್ತಾರೆ.

ಕಿಕಿಂದದಲ್ಲಿನ (ಭಾರತೀಯ ಕಳ್ಳಸಾಗಣೆದಾರ) ಜಲಂಧರ್‌ ಮಗರದಲ್ಲಿ “ಗ್ಯಾರಂಟಿಯಾಗಿ” ಒಬ್ಬರನ್ನು ಇರಿಸುವಂತೆ ಸೂಚಿಸಿದ. ಇಲ್ಲಿ ಗ್ಯಾರಂಟಿ ಎಂದರೆ ವಲಸೆ ಹೋಗುವವರು ಮತ್ತು ಕಳ್ಳಸಾಗಣೆದಾರರ ನಡುವಿನ ವ್ಯಕ್ತಿ. ಇವನ ಬಳಿ ಹಣವನ್ನು ಇಬ್ಬರ ಪರವಾಗಿ ಇರಿಸಲಾಗುತ್ತದೆ. ವ್ಯಕ್ತಿಯನ್ನು ಸಾಗಣೆದಾರ ನಿಗದಿತ ಸ್ಥಳಕ್ಕೆ ತಲುಪಿಸಿದ ನಂತರ ಗ್ಯಾರಂಟಿ ವ್ಯಕ್ತಿ ಹಣವನ್ನು ಸಾಗಣೆದಾರನಿಗೆ ತಲುಪಿಸುತ್ತಾರೆ,

PHOTO • Karan Dhiman

ಕಾನೂನುಬಾಹಿರ ವಲಸೆಯಲ್ಲಿನ ಅಪಾಯಗಳನ್ನು ಯುವಜನರಿಗೆ ತಿಳಿಸುವ ಸಲುವಾಗಿ ಸಿಂಗ್‌ ತಮ್ಮ ಕತೆಯನ್ನು ಹೇಳಿಕೊಳ್ಳಲು ತೀರ್ಮಾನಿಸಿದರು

ಸಿಂಗ್ ತಮ್ಮ ಕುಟುಂಬದ ಸದಸ್ಯರ ಮೂಲಕ 3 ಲಕ್ಷ ರೂ.ಗಳ (3,302 ಯುರೋ) ಗ್ಯಾರಂಟಿಯನ್ನು ವ್ಯವಸ್ಥೆ ಮಾಡಿದ ನಂತರ ಕಳ್ಳಸಾಗಣೆದಾರರ ಸೂಚನೆಯ ಮೇರೆಗೆ ಹಂಗೇರಿಯನ್ ಗಡಿಗೆ ತೆರಳಿದರು. ಅಫ್ಘಾನಿಸ್ತಾನದ ಕೆಲವು ಡಾಂಕರ್‌ಗಳು ಅವರನ್ನು ಅಲ್ಲಿ ಭೇಟಿಯಾದರಯ. ಮಧ್ಯರಾತ್ರಿಯಲ್ಲಿ, ಅವರು 12 ಅಡಿ ಎತ್ತರದ ಎರಡು ಮುಳ್ಳು ಬೇಲಿಗಳನ್ನು ದಾಟಿದರು. ಅವರೊಂದಿಗಿದ್ದ ಡಾಂಕರ್‌ ಅವರನ್ನು ಕಾಡಿನ ದಾರಿಯ ಮೂಲಕ ನಾಲ್ಕು ಗಂಟೆ ನಡೆಸಿದನು. ನಂತರ ಅವರನ್ನು ಗಡಿ ಪೊಲೀಸರು ವಶಕ್ಕೆ ಪಡೆದರು.

"ಅವರು [ಹಂಗೇರಿಯನ್ ಪೊಲೀಸರು] ನಮ್ಮನ್ನು ಮಂಡಿಯೂರಿ ನಿಲ್ಲುವಂತೆ ಮಾಡಿ ನಮ್ಮ ರಾಷ್ಟ್ರೀಯತೆಗಳ ಬಗ್ಗೆ ಕೇಳಿದರು. ಅವರು ಡಾಂಕರ್‌ಗೆ ಬಹಳವಾಗಿ ಹೊಡೆದರು. ಅದರ ನಂತರ, ನಮ್ಮನ್ನು [ವಲಸಿಗರನ್ನು] ಮತ್ತೆ ಸೆರ್ಬಿಯಾಕ್ಕೆ ಸಾಗಿಸಲಾಯಿತು" ಎಂದು ಸಿಂಗ್ ನೆನಪಿಸಿಕೊಳ್ಳುತ್ತಾರೆ.

ಕಳ್ಳಸಾಗಣೆದಾರನು ಸುಬೋಟಿಕಾ ಶಿಬಿರಕ್ಕೆ ಹೋಗುವಂತೆ ಸಿಂಗ್ ಅವರಿಗೆ ಸೂಚಿಸಿದನು, ಅಲ್ಲಿ ಹೊಸ ಡಾಂಕರ್ ಅವರಿಗಾಗಿ ಕಾಯುತ್ತಿದ್ದ. ಮರುದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರು ಹಂಗೇರಿಯನ್ ಗಡಿಗೆ ಮರಳಿದರು, ಅಲ್ಲಿ ಈಗಾಗಲೇ 22 ಜನರು ಗಡಿ ದಾಟಲು ಕಾಯುತ್ತಿದ್ದರು ಆದರೆ ಅಂತಿಮವಾಗಿ ಸಿಂಗ್ ಸೇರಿದಂತೆ ಏಳು ಜನರು ಮಾತ್ರವೇ ಗಡಿ ದಾಟಿದರು.

ನಂತರ ಡಾಂಕರ್‌ ಜೊತೆ ಕಾಡಿನ ಮೂಲಕ ಮೂರು ಗಂಟೆಗಳ ಕಾಲ ನಡೆದರು. “ಸಂಜೆ 5 ಗಂಟೆಯ ಹೊತ್ತಿಗೆ ಒಂದು ನೀರಿಲ್ಲದೆ ಒಣಗಿದ್ದ ದೊಡ್ಡ ಗುಂಡಿ ಕಾಣಿಸಿತು, ಡಾಂಕರ್‌ ನಮ್ಮನ್ನು ಆ ಗುಂಡಿಯಲ್ಲಿ ಎಲೆಗಳನ್ನು ಮುಚ್ಚಿಕೊಂಡು ಮಲಗಲು ತಿಳಿಸಿದ.“ ಕೆಲವು ಗಂಟೆಗಳ ನಂತರ ಅವರು ಮತ್ತೆ ನಡೆಯತೊಡಗಿದರು. ಕೊನೆಗೆ ಅವರನ್ನು ವ್ಯಾನ್‌ ಒಂದರಲ್ಲಿ ಹತ್ತಿಸಿಕೊಂಡು ಆಸ್ಟ್ರಿಯಾ ಗಡಿ ಬಳಿ ಇಳಿಸಲಾಯಿತು. ಅಲ್ಲಿಂದ ಮುಂದೆ “ಗಾಳಿ ಯಂತ್ರಗಳನ್ನು ಅನುಸರಿಸಿ ನಡೆಯಿರಿ. ಅಲ್ಲಿ ಮುಂದೆ ನಿಮಗೆ ಆಸ್ಟ್ರಿಯಾ ಸಿಗುತ್ತದೆ” ಎಂದು ಹೇಳಲಾಯಿತು.

ತಾವು ಇರುವ ತಾವು ಯಾವುದೆನ್ನುವುದರ ಸ್ಪಷ್ಟ ಅರಿವಿಲ್ಲದೆ ಜೊತೆಗೆ ಆಹಾರ ಮತ್ತು ನೀರೂ ಇಲ್ಲದೆ ಸಿಂಗ್‌ ಮತ್ತು ಅವರ ಸಹ ವಲಸೆಗಾರರು ರಾತ್ರಿಯಿಡೀ ನಡೆದರು. ಮರುದಿನ ಬೆಳಗ್ಗೆ ಅವರು ಒಂದು ಆಸ್ಟ್ರಿಯಾ ಮಿಲಿಟರಿ ಪೋಸ್ಟ್‌ ನೋಡಿದರು. ಸಿಂಗ್ ಆಸ್ಟ್ರಿಯಾದ ಪಡೆಗಳನ್ನು ನೋಡಿದ ತಕ್ಷಣ ಅವರೆದುರು ಶರಣಾಗಲೆಂದು ಹೊರಟರು. ಇದಕ್ಕೆ ಕಾರಣವೆಂದರೆ, “ಈ ದೇಶವು ನಿರಾಶ್ರಿತರನ್ನು ಸ್ವಾಗತಿಸುತ್ತದೆ ಎಂದು ಡಾಂಕರ್‌ ಹೇಳಿದ್ದ” ಎಂದು ಅವರು ಹೇಳುತ್ತಾರೆ,

“ಅವರು ನಮ್ಮನ್ನು ಕೋವಿಡ್‌ - 19 ಪರೀಕ್ಷೆಗೆ ಒಳಪಡಿಸಿ ನಂತರ ನಿರಾಶ್ರಿತರ ಶಿಬಿರಕ್ಕೆ ಕಳುಹಿಸಿದರು. ಅಲ್ಲಿ ಅವರು ನಮ್ಮ ಹೇಳಿಕೆಯನ್ನು ತೆಗೆದುಕೊಂಡು ನಮ್ಮ ಬೆರಳಚ್ಚುಗಳನ್ನು ದಾಖಲಿಸಿದರು. ಅದರ ನಂತರ, ನಮಗೆ ಆರು ತಿಂಗಳ ಮಾನ್ಯತೆಯೊಂದಿಗೆ ನಿರಾಶ್ರಿತರ ಕಾರ್ಡುಳನ್ನು ನೀಡಲಾಯಿತು" ಎಂದು ಸಿಂಗ್ ಹೇಳುತ್ತಾರೆ.

ಆರು ತಿಂಗಳ ಕಾಲ ಈ ಪಂಜಾಬಿ ವಲಸಿಗ ಪತ್ರಿಕೆ ವ್ಯಾಪಾರಿಯಾಗಿ ಕೆಲಸ ಮಾಡಿದರು. ಮತ್ತು ಆ ಮೂಲಕ ಸುಮಾರು 1,000 ಯುರೋ ಉಳಿಸುವಲ್ಲಿ ಯಶಸ್ವಿಯಾಗಿದ್ದರು. ಅವರ ವಾಸ್ತವ್ಯದ ಅವಧಿ ಮುಗಿದ ಕೂಡಲೇ ಶಿಬಿರದ ಅಧಿಕಾರಿ ಅಲ್ಲಿಂದ ಹೊರಡುವಂತೆ ತಿಳಿಸಿದರು.

PHOTO • Karan Dhiman

ಪೋರ್ಚುಗಲ್‌ ದೇಶಕ್ಕೆ ತಲುಪಿದ ನಂತರವೇ ಅವರು ತಮ್ಮ ತಾಯಿಯ ಸಂದೇಶಗಳು ಮತ್ತು ಫೋನ್‌ ಕರೆಗಳಿಗೆ ಪ್ರತಿಕ್ರಿಯೆ ನೀಡಲಾರಂಭಿಸಿದ್ದ

ನಂತರ ನಾನು ಸ್ಪೇನ್ ದೇಶದ ವೆಲೆನ್ಸಿಯಾ ನಗರಕ್ಕೆ ನೇರ ವಿಮಾನವನ್ನು ಕಾಯ್ದಿರಿಸಿದೆ (ಷೆಂಗೆನ್ ಪ್ರದೇಶಗಳೊಳಗಿನ ವಿಮಾನಗಳಲ್ಲಿ ದಾಖಲೆಗಳನ್ನು ವಿರಳವಾಗಿ ಪರಿಶೀಲಿಸಲಾಗುತ್ತದೆ), ಮತ್ತು ಅಲ್ಲಿಂದ ಬಾರ್ಸಿಲೋನಾ ನಗರಕ್ಕೆ ರೈಲು ಹತ್ತಿದೆ, ಅಲ್ಲಿದ್ದ ಸ್ನೇಹಿತನ ಸ್ಥಳದಲ್ಲಿ ಒಂದು ರಾತ್ರಿ ಕಳೆದೆ. ನನ್ನ ಬಳಿ ಯಾವುದೇ ದಾಖಲೆಗಳು ಅಥವಾ ನನ್ನ ಪಾಸ್ಪೋರ್ಟ್ ಇಲ್ಲದ ಕಾರಣ ನನ್ನ ಸ್ನೇಹಿತನೇ ನನಗೆ ಪೋರ್ಚುಗಲ್ ದೇಶದ ಬಸ್ ಟಿಕೆಟ್ ಕಾಯ್ದಿರಿಸಿದರು. ಈ ಬಾರಿ, ಅವರು ಸಿಕ್ಕಿಬಿದ್ದರೆ ಭಾರತಕ್ಕೆ ಗಡೀಪಾರಾಗಲು ಬಯಸದ ಕಾರಣ ಗ್ರೀಸ್‌ ದೇಶದ ಸ್ನೇಹಿತನ ಬಳಿಯೇ ತಮ್ಮ ಪಾಸ್ಪೋರ್ಟ್ ಇಟ್ಟು ಹೋಗಲು ಅವರು ತೀರ್ಮಾನಿಸಿದರು.

*****

ಕೊನೆಗೂ ಸಿಂಗ್‌ 2023ರ ಫೆಬ್ರವರಿ 15ರಂದು ತಮ್ಮ ಕನಸಿನ ಗಮ್ಯಸ್ಥಾನವಾದ ಪೋರ್ಚುಗಲ್‌ ದೇಶವನ್ನು ತಲುಪಿದರು. ಇಲ್ಲಿಗೆ ತಲುಪಲು ಅವರಿಗೆ ಹಿಡಿಸಿದ್ದರು ಒಟ್ಟಾರೆ 500 ದಿನಗಳು.

ಪೋರ್ಚುಗಲ್‌ ದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅನೇಕ ವಲಸಿಗರು "ಮಾನ್ಯ ನಿವಾಸಿ ದಾಖಲೆಗಳನ್ನು ಹೊಂದಿಲ್ಲ, ಆದರೆ ಈ ಕುರಿತು ಅಧಿಕೃತ ಅಂಕಿಅಂಶಗಳು ಲಭ್ಯವಿಲ್ಲ" ಎಂದು ಒಪ್ಪಿಕೊಳ್ಳುತ್ತದೆ . ಪೋರ್ಚುಗಲ್ ವಲಸೆ ನಿಯಮಗಳನ್ನು ಸಡಿಲಿಸಿದ್ದರಿಂದ ಇತ್ತೀಚಿನ ವರ್ಷಗಳಲ್ಲಿ ಇಲ್ಲಿನ ಭಾರತೀಯರ ಸಂಖ್ಯೆಯಲ್ಲಿ (ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದಿಂದ) ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಅದು ಹೇಳಿದೆ.

“ಯೆಹಾ ಡಾಕ್ಯುಮೆಂಟ್ಸ್‌ ಬನ್‌ ಜಾತೇ ಹೈ, ಆದ್ಮಿ ಪಕ್ಕಾ ಹೋ ಜಾತಾ ಹೈ. ಫಿರ್‌ ಆನ್ನಿ ಫ್ಯಾಮಿಲಿ ಬುಲಾ ಸಕ್ತಾ ಹೈ [ಇಲ್ಲಿ ದಾಖಲೆಗಳನ್ನು ಮಾಡಿಸಿಕೊಳ್ಳಬಹುದು. ಇಲ್ಲಿನ ಕಾಯಂ ನಾಗರಿಕತೆಯನ್ನು ಪಡೆಯಬಹುದು. ನಂತರ ಕುಟುಂಬವನ್ನೂ ಕರೆಯಿಸಿಕೊಳ್ಳಬಹುದು]” ಎನ್ನುತ್ತಾರೆ ಸಿಂಗ್.‌

2022ರಲ್ಲಿ, 35,000ಕ್ಕೂ ಹೆಚ್ಚು ಭಾರತೀಯರಿಗೆ ಪೋರ್ಚುಗಲ್‌ ದೇಶದ ಶಾಶ್ವತ ನಾಗರಿಕತೆಯನ್ನು ನೀಡಲಾಗಿದೆ ಎಂದು ವಿದೇಶಿಯರು ಮತ್ತು ಗಡಿ ಸೇವೆ (ಎಸ್ಇಎಫ್) ಅಂಕಿ ಅಂಶಗಳು ಹೇಳುತ್ತವೆ.  ಅದೇ ವರ್ಷ, ಸರಿಸುಮಾರು 229 ಭಾರತೀಯರು ಆಶ್ರಯ ಕೋರಿದ್ದರು.

ಸಿಂಗ್‌ ಅವರಂತಹ ಯುವಕರು ವಲಸೆ ಹೋಗುವ ಹತಾಶೆಯ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣವೆಂದರೆ ಅವರಿಗೆ ತಮ್ಮ ದೇಶದಲ್ಲೇ ಕೆಲಸ ಸಿಗದಿರುವುದು. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಹೊರತಂದ ಇಂಡಿಯಾ ಎಂಪ್ಲಾಯ್ಮೆಂಟ್‌ ರಿಪೋರ್ಟ್‌ 2024 , “ಸಮಂಜಸ ಮಟ್ಟದ ತೀವ್ರ ಬೆಳವಣಿಗೆಯ ನಡುವೆಯೂ ಉತ್ಪಾದಕ ಉದ್ಯೋಗಾವಕಾಶಗಳಲ್ಲಿ ನಿರೀಕ್ಷಿತ ವಿಸ್ತರಣೆ ಕಂಡುಬಂದಿಲ್ಲ" ಎಂದು ಹೇಳುತ್ತದೆ.

ಸಿಂಗ್‌ ತನ್ನ ವಲಸೆಯ ಕತೆಯನ್ನು ವಿವರಿಸುತ್ತಿರುವ ವಿಡಿಯೋ ನೋಡಿ

ನೀರು ಮತ್ತು ಆಹಾರವಿಲ್ಲದೆ ರಾತ್ರಿಯಿಡೀ ನಡೆದ ನಂತರ ಆಸ್ಟ್ರಿಯಾ ಮಿಲಿಟರಿ ಪೋಸ್ಟ್‌ ಕಾಣಿಸಿತು. ʼಆ ದೇಶ ನಿರಾಶ್ರಿತರನ್ನು ಸ್ವಾಗತಿಸುತ್ತದೆʼ ಎನ್ನುವ ಕಾರಣಕ್ಕಾಗಿ ಸಿಂಗ್‌ ಅಲ್ಲಿ ಶರಣಾದರು

ಪೋರ್ಚುಗಲ್‌ ನಾಗರಿಕತೆ ಪಡೆಯಲು ಅಲ್ಲಿ ಐದು ವರ್ಷಗಳ ಕಾಲ ಕಾನೂನುಬದ್ಧವಾಗಿ ತಂಗಿದ್ದರೆ ಸಾಕು. ಇದು ಯುರೋಪ್‌ ಖಂಡದಲ್ಲೇ ಅತ್ಯಂತ ಕಡಿಮೆ ಅವಧಿ. ಸಾಮಾನ್ಯವಾಗಿ ಕೃಷಿ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಭಾರತದ ಗ್ರಾಮೀಣ ಜನರು ಈ ದೇಶಕ್ಕೆ ವಲಸೆ ಹೋಗುವ ಗುರಿಯನ್ನು ಹೊಂದಿರುತ್ತಾರೆ. ವಿಶೇಷವಾಗಿ ಪಂಜಾಬ್‌ ರಾಜ್ಯದ ಯುವಕರು ಎನ್ನುತ್ತಾರೆ ಪ್ರೊಫೆಸರ್ ಭಸ್ವತಿ ಸರ್ಕಾರ್. ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸೆಂಟರ್ ಫಾರ್ ಯುರೋಪಿಯನ್ ಸ್ಟಡೀಸ್‌ ಸಂಸ್ಥೆಯಲ್ಲಿ ಜೀನ್ ಮೊನೆಟ್ ಚೇರ್ ಆಗಿದ್ದಾರೆ. "ಅಲ್ಲಿನ ಶ್ರೀಮಂತ ಗೋವಾ ಮತ್ತು ಗುಜರಾತಿ ಸಮುದಾಯವನ್ನು ಹೊರತುಪಡಿಸಿ, ಅನೇಕ ಪಂಜಾಬಿಗಳು ನಿರ್ಮಾಣ ಮತ್ತು ಕೃಷಿ ಕ್ಷೇತ್ರದಲ್ಲಿ ತೋಟಗಳಲ್ಲಿ ಕಡಿಮೆ ಕೌಶಲ ಬೇಡುವ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಾರೆ" ಎಂದು ಅವರು ಹೇಳುತ್ತಾರೆ.

ಟೆಂಪರರಿ ರೆಸಿಡೆನ್ಸಿ ಕಾರ್ಡ್ (ಟಿಆರ್ ಸಿ) ಎಂದೂ ಕರೆಯಲ್ಪಡುವ ಪೋರ್ಚುಗಲ್ ನಿವಾಸ ಪರವಾನಗಿಯ ದೊಡ್ಡ ಪ್ರಯೋಜನವೆಂದರೆ ಇದರ ಮೂಲಕ ವೀಸಾ ಇಲ್ಲದೆ 100 ಕ್ಕೂ ಹೆಚ್ಚು ಷೆಂಗೆನ್ ದೇಶಗಳನ್ನು ಪ್ರವೇಶಿಸಬಹುದು. ಆದರೆ ಈಗ ವಿಷಯಗಳು ಬದಲಾಗುತ್ತಿವೆ - ಜೂನ್ 3, 2024ರಂದು ಪೋರ್ಚುಗಲ್ ದೇಶದ ಸೆಂಟರ್-ರೈಟ್ ಡೆಮಾಕ್ರಟಿಕ್ ಅಲೈಯನ್ಸ್ (ಎಡಿ) ನ ಲೂಯಿಸ್ ಮಾಂಟೆನೆಗ್ರೊ ದಾಖಲೆರಹಿತ ವಲಸಿಗರಿಗೆ ವಲಸೆ ನಿಯಮಗಳನ್ನು ಬಿಗಿಗೊಳಿಸಿ ಆದೇಶ ಹೊರಡಿಸಿದರು.

ಈ ಹೊಸ ಕಾನೂನಿನ ಪ್ರಕಾರ, ಪೋರ್ಚುಗಲ್ ದೇಶದಲ್ಲಿ ನೆಲೆಸಲು ಬಯಸುವ ಯಾವುದೇ ವಿದೇಶಿ ನಿವಾಸಿ ಈಗ ಇಲ್ಲಿಗೆ ಪ್ರಯಾಣಿಸುವ ಮೊದಲು ಕೆಲಸದ ಪರವಾನಗಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದು ಭಾರತದಿಂದ, ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದಿಂದ ಬರುವ ವಲಸಿಗರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ನಿರೀಕ್ಷೆಯಿದೆ.

ಇತರ ಯುರೋಪಿಯನ್ ದೇಶಗಳು ಸಹ ವಲಸೆಯ ಬಗ್ಗೆ ತಮ್ಮ ನಿಲುವನ್ನು ಕಠಿಣಗೊಳಿಸುತ್ತಿವೆ. ಆದರೆ ಅಂತಹ ನಿಯಮಗಳು ಮಹತ್ವಾಕಾಂಕ್ಷಿ ಅನಿಯಮಿತ ವಲಸಿಗರನ್ನು ತಡೆಯುವುದಿಲ್ಲ ಎಂದು ಪ್ರೊಫೆಸರ್ ಸರ್ಕಾರ್ ಹೇಳುತ್ತಾರೆ. "ಅವಕಾಶಗಳನ್ನು ಸೃಷ್ಟಿಸುವುದು, ಮೂಲ ದೇಶಗಳಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವುದರಿಂದ ಅವರಿಗೆ ಸಹಾಯ ಮಾಡಬಹುದು" ಎಂದು ಅವರು ಹೇಳುತ್ತಾರೆ.

ಪೋರ್ಚುಗಲ್ ದೇಶದ ಎಐಎಂಎ (ಏಜೆನ್ಸಿ ಫಾರ್ ಇಂಟಿಗ್ರೇಷನ್, ಮೈಗ್ರೇಷನ್ಸ್ ಅಂಡ್ ಅಸಿಲಮ್) ನಲ್ಲಿ 4,10,000 ಪ್ರಕರಣಗಳು ಬಾಕಿ ಉಳಿದಿವೆ. ವಲಸಿಗ ಸಮುದಾಯದ ದೀರ್ಘಕಾಲದ ವಿನಂತಿಯನ್ನು ಮನ್ನಿಸಲು ವಲಸಿಗ ದಾಖಲೆಗಳು ಮತ್ತು ವೀಸಾಗಳನ್ನು ಮತ್ತೊಂದು ವರ್ಷ ವಿಸ್ತರಿಸಲಾಗಿದೆ - ಜೂನ್, 2025ರವರೆಗೆ.

2021ರಲ್ಲಿ, ಭಾರತ ಮತ್ತು ಪೋರ್ಚುಗಲ್ 'ಕಾನೂನು ಮಾರ್ಗಗಳ ಮೂಲಕ ಭಾರತೀಯ ಕಾರ್ಮಿಕರನ್ನು ಕಳುಹಿಸುವ ಮತ್ತು ಸ್ವೀಕರಿಸುವುದನ್ನು' ಔಪಚಾರಿಕಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದವು. ಭಾರತ ಸರ್ಕಾರವು ಇಟಲಿ, ಜರ್ಮನಿ, ಆಸ್ಟ್ರಿಯಾ, ಫ್ರಾನ್ಸ್, ಫಿನ್ಲ್ಯಾಂಡ್ ರೀತಿಯ ಹಲವಾರು ಯುರೋಪಿಯನ್ ದೇಶಗಳೊಂದಿಗೆ ವಲಸೆ ಮತ್ತು ಪ್ರಯಾಣ ಒಪ್ಪಂದಗಳಿಗೆ ಸಹಿ ಹಾಕಿದೆ, ಆದರೆ ಜನರು ಈ ನಿರ್ಧಾರಗಳನ್ನು ತೆಗೆದುಕೊಳ್ಳುವ ಆಧಾರದ ಮೇಲೆ, ಕಡಿಮೆ ಶಿಕ್ಷಣ ಅಥವಾ ಮಾಹಿತಿ ಇದೆ.

ಈ ಪತ್ರಕರ್ತರು ಪ್ರತಿಕ್ರಿಯೆಗಳಿಗಾಗಿ ಭಾರತ ಮತ್ತು ಪೋರ್ಚುಗೀಸ್ ಸರ್ಕಾರಗಳನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅನೇಕ ವಿಚಾರಣೆಗಳ ಹೊರತಾಗಿಯೂ ಎರಡೂ ದೇಶಗಳು ಪ್ರತಿಕ್ರಿಯಿಸಲಿಲ್ಲ.

PHOTO • Pari Saikia

ಸಿಂಗ್ ಅವರಂತಹ ಯುವಕರು ಭಾರತದಲ್ಲಿ ಉದ್ಯೋಗ ಸಿಗದೆ ವಲಸೆ ಹೋಗುವ ಅನಿವಾರ್ಯತೆಗೆ ಒಳಗಾಗಿದ್ದಾರೆ

*****

ಸಿಂಗ್ ತನ್ನ 'ಕನಸಿನ' ಗಮ್ಯಸ್ಥಾನವನ್ನು ತಲುಪಿದಾಗ ಅವರು ಗಮನಿಸಿದ ಮೊದಲ ವಿಷಯವೆಂದರೆ ಪೋರ್ಚುಗಲ್ ದೇಶದಲ್ಲಿನ ಉದ್ಯೋಗಾವಕಾಶಗಳ ಕೊರತೆ, ಇದು ರೆಸಿಡೆನ್ಸಿ ಪರವಾನಗಿ ಪಡೆಯುವ ಸವಾಲನ್ನು ಇನ್ನಷ್ಟು ಕಠಿಣವಾಗಿಸಿತು. ತನ್ನ ಯುರೋಪಿಯನ್ ಯೋಜನೆಯನ್ನು ರೂಪಿಸುವಾಗ ಅವರಿಗೆ ಇದ್ಯಾವುದೂ ತಿಳಿದಿರಲಿಲ್ಲ.

ಅವರು ಪರಿಯೊಂದಿಗೆ ಮಾತನಾಡುತ್ತಾ, "ನಾನು ಮೊದಲು ಪೋರ್ಚುಗಲ್ ದೇಶಕ್ಕೆ ಬಂದಿಳಿದಾಗ ತುಂಬಾ ಖುಷಿಯಾಗಿತ್ತು. ನಂತರ, ಇಲ್ಲಿ ಉದ್ಯೋಗಾವಕಾಶಗಳು ವಿರಳವಾಗಿವೆ ಮತ್ತು ಇಲ್ಲಿ ಅನೇಕ ಏಷ್ಯನ್ನರು ವಾಸಿಸುತ್ತಿರುವುದರಿಂದ ಕೆಲಸದ ಸಂಭವನೀಯತೆ ಶೂನ್ಯ ಎನ್ನುವುದು ಅರಿವಿಗೆ ಬಂತು. ಕೆಲಸಗಳು ಇಲ್ಲಿ ಬಹಳ ವಿರಳ.”

ಸಿಂಗ್ ಸ್ಥಳೀಯರ ವಲಸಿಗ ವಿರೋಧಿ ಭಾವನೆಯ ಕುರಿತಾಗಿಯೂ. "ಅವರು ಇಲ್ಲಿಗೆ ವಲಸಿಗರು ಬರುವುದನ್ನು ಇಷ್ಟಪಡುವುದಿಲ್ಲ, ಆದರೂ ನಾವು ಕೃಷಿ ಮತ್ತು ನಿರ್ಮಾಣ ಸ್ಥಳಗಳಲ್ಲಿ ಕಷ್ಟಪಟ್ಟು ದುಡಿಯಲು ಬಯಸುತ್ತೇವೆ." ಭಾರತೀಯರು ಶ್ರಮದಾಯಕ ಕೆಲಸಗಳನ್ನು ಮಾಡುತ್ತಾರೆ, ಇದನ್ನು ಸರ್ಕಾರ್ "3 ಡಿ ವರ್ಕ್ಸ್ –‌ ಡರ್ಟಿ, ಡೇಂಜರಸ್‌, ಡಿಮೀನಿಂಗ್ (ಕೊಳಕು, ಅಪಾಯಕಾರಿ, ಕೀಳುಮಟ್ಟದ), ಇವುಗಳನ್ನು ಸ್ಥಳೀಯರು ಮಾಡಲು ಬಯಸುವುದಿಲ್ಲ" ಎಂದು ಕರೆಯುತ್ತಾರೆ. ವಲಸಿಗರು ತಮ್ಮ ಅನಿಶ್ಚಿತ ಕಾನೂನು ಸ್ಥಾನಮಾನದಿಂದಾಗಿ, ನಿಗದಿತ ಕಾನೂನಾತ್ಮಕ ವೇತನಕ್ಕಿಂತ ಕಡಿಮೆ ವೇತನಕ್ಕೆ ಕೆಲಸ ಮಾಡಲು ಸಿದ್ಧರಿದ್ದಾರೆ.

ಆ ಉದ್ಯೋಗಗಳನ್ನು ಹುಡುಕುತ್ತಿರುವ ವ್ಯಕ್ತಿಯಾಗಿ, ಸಿಂಗ್ ಇತರ ವಿಷಯಗಳತ್ತಲೂ ಗಮನ ಸೆಳೆಯುತ್ತಾರೆ. ಉಕ್ಕಿನ ಕಾರ್ಖಾನೆಯ ಎಲ್ಲಾ ಐದು ಶಾಖೆಗಳಲ್ಲಿ, ಸೂಚನಾ ಫಲಕಗಳನ್ನು ಪೋರ್ಚುಗೀಸ್ ಭಾಷೆಯಲ್ಲಿ ಬರೆದಿರಲಾಗುತ್ತದೆ. ಅದರ ಜೊತೆಗೆ ಪಂಜಾಬಿ ಭಾಷೆಯಲ್ಲಿಯೂ ಬರೆದಿರಲಾಗುತ್ತದೆ. "ಒಪ್ಪಂದ ಪತ್ರಗಳು ಸಹ ಪಂಜಾಬಿ ಅನುವಾದದೊಂದಿಗೆ ಬರುತ್ತವೆ. ಇದರ ಹೊರತಾಗಿಯೂ, ನಾವು ಅವರನ್ನು ನೇರವಾಗಿ ಸಂಪರ್ಕಿಸಿದರೆ, ಅವರ ಪ್ರತಿಕ್ರಿಯೆ, ʼಕೆಲಸ ಖಾಲಿಯಿಲ್ಲ' ಎನ್ನುವುದಾಗಿರುತ್ತದೆ” ಎಂದು ಸಿಂಗ್ ಹೇಳುತ್ತಾರೆ.

PHOTO • Karan Dhiman

ಪೋರ್ಚುಗಲ್‌ ದೇಶದಲ್ಲಿ ಹೆಚ್ಚುತ್ತಿರುವ ಭಾವನೆಯ ನಡುವೆಯೂ ತನಗೆ ಒಳ್ಳೆಯ ಭೂಮಾಲಿಕ ಸಿಕ್ಕಿರುವುದು ತನ್ನ ಅದೃಷ್ಟ ಎಂದು ಹೇಳುತ್ತಾರೆ

ದಾಖಲೆರಹಿತ ವಲಸಿಗರಾಗಿ, ನಿರ್ಮಾಣ ಸ್ಥಳದಲ್ಲಿ ಕೆಲಸ ಪಡೆಯಲು ಅವರಿಗೆ ಏಳು ತಿಂಗಳು ಬೇಕಾಯಿತು.

"ಕಂಪನಿಗಳು ಗುತ್ತಿಗೆ ಪತ್ರಗಳ ಜೊತೆಗೆ ರಾಜೀನಾಮೆ ಪತ್ರಗಳಿಗೆ ಮುಂಚಿತವಾಗಿ ಸಹಿ ಮಾಡುವಂತೆ ಉದ್ಯೋಗಿಗಳನ್ನು ಕೇಳುತ್ತಿವೆ. ತಿಂಗಳಿಗೆ 920 ಯುರೋಗಳ ಕನಿಷ್ಠ ವೇತನವನ್ನು ಪಡೆಯುತ್ತಿದ್ದರೂ, ತಮ್ಮನ್ನು ಯಾವಾಗ ವಜಾಗೊಳಿಸಲಾಗುತ್ತದೆ ಎನ್ನುವುದು ಉದ್ಯೋಗಿಗಳಿಗೆ ತಿಳಿದಿರುವುದಿಲ್ಲ" ಎಂದು ರಾಜೀನಾಮೆ ಪತ್ರಕ್ಕೆ ಸಹಿ ಹಾಕಿರುವ ಸಿಂಗ್ ಹೇಳುತ್ತಾರೆ. ಅವರು ನಿವಾಸಿ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದಾರೆ ಮತ್ತು ತಮಗೆ ಅಲ್ಲಿನ ಕಾನೂನುಬದ್ಧ ನಾಗರಿಕತೆ ಸಿಗುವ ಭರವಸೆಯನ್ನು ಹೊಂದಿದ್ದಾರೆ.

“ಬಸ್‌ ಹುಣ್‌ ತಾನ್‌ ಅಹ್ಹಿ ಆಹ್‌ ಕಿ, ಘರ್‌ ಬನ್‌ ಜಾಯೇ, ಸಿಸ್ಟರ್‌ ದಾ ವ್ಯಾಹ್‌ ಹೋ ಜೇ, ತೆ ಫೇರ್‌ ಇತ್ತೆ ಅಪ್ನೇ ಡಾಕ್ಯುಮೆಂಟ್ಸ್‌ ಬನಾಕೆ ಫ್ಯಾಮಿಲಿ ನು ವಿ ಬುಲಾ ಜಾಯೇ [ಸದ್ಯಕ್ಕೆ ನನ್ನ ಕನಸೆಂದರೆ ಪಂಜಾಬಿನಲ್ಲಿ ಮನೆ ಕಟ್ಟುವುದು, ಸಹೋದರಿಗೆ ಮದುವೆ ಮಾಡುವುದು, ಮತ್ತು ನನ್ನ ದಾಖಲೆಗಳನ್ನು ಕಾನೂನುಬದ್ಧಗೊಳಿಸಿಕೊಳ್ಳುವುದು. ಇಷ್ಟಾದರೆ ನಾನು ಇಲ್ಲಿಗೆ ನನ್ನ ಸಂಸಾರವನ್ನು ಕರೆತರಬಹುದು]” ಎಂದು ಸಿಂಗ್‌ 2023ರ ನವೆಂಬರ್‌ ತಿಂಗಳಿನಲ್ಲಿ ಹೇಳಿದ್ದರು.

ಸಿಂಗ್ 2024ರಲ್ಲಿ ಊರಿಗೆ ಹಣವನ್ನು ಕಳುಹಿಸಲು ಪ್ರಾರಂಭಿಸಿದ್ದಾರೆ ಮತ್ತು ಪ್ರಸ್ತುತ ಊರಿನಲ್ಲಿ ಮನೆಯನ್ನು ನಿರ್ಮಿಸುತ್ತಿರುವ ತಮ್ಮ ಹೆತ್ತವರೊಂದಿಗೆ ಸಂಪರ್ಕದಲ್ಲಿದ್ದಾರೆ. ಪೋರ್ಚುಗಲ್ ದೇಶದಲ್ಲಿನ ಅವರ ಕೆಲಸವು ಮನೆ ನಿರ್ಮಾಣಕ್ಕೆ ಗಮನಾರ್ಹ ಮೊತ್ತವನ್ನು ನೀಡಿದೆ.

ಪೋರ್ಚುಗಲ್‌ ದೇಶದಿಂದ ಹೆಚ್ಚುವರಿ ವರದಿ: ಕರಣ್‌ ಧಿಮಾನ್

ಮಾಡ್ರನ್‌ ಸ್ಲೇವರಿ ಗ್ರ್ಯಾಂಟ್ ಅನ್‌ವೇಲ್ಡ್ ಕಾರ್ಯಕ್ರಮದ ಅಡಿಯಲ್ಲಿ ನೀಡಲಾದ ಪತ್ರಿಕೋದ್ಯಮ ನಿಧಿಯ ಬೆಂಬಲದೊಂದಿಗೆ ಭಾರತ ಮತ್ತು ಪೋರ್ಚುಗಲ್ ನಡುವೆ ಈ ಸಂಶೋಧನೆಯನ್ನು ನಡೆಸಲಾಯಿತು.

ಅನುವಾದ: ಶಂಕರ. ಎನ್. ಕೆಂಚನೂರು

Pari Saikia

Pari Saikia is an independent journalist and documents human trafficking from Southeast Asia and Europe. She is a Journalismfund Europe fellow for 2023, 2022, and 2021.

Other stories by Pari Saikia
Sona Singh

Sona Singh is an independent journalist and researcher from India. She is a Journalismfund Europe fellow for 2022 and 2021.

Other stories by Sona Singh
Ana Curic

Ana Curic is an independent investigative and data journalist from Serbia. She is currently a fellow of Journalismfund Europe.

Other stories by Ana Curic
Photographs : Karan Dhiman

Karan Dhiman is a video journalist and social documentarian from Himachal Pradesh, India. He is interested in documenting social issues, environment and communities.

Other stories by Karan Dhiman
Editor : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Editor : Sarbajaya Bhattacharya

Sarbajaya Bhattacharya is a Senior Assistant Editor at PARI. She is an experienced Bangla translator. Based in Kolkata, she is interested in the history of the city and travel literature.

Other stories by Sarbajaya Bhattacharya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru