ಸುಶೀಲಾ ಅವರ ಐದು ಸದಸ್ಯರ ಕುಟುಂಬವು ತಮ್ಮ ಪುಟ್ಟ ಮನೆಯೆದುರಿನ ಜಗಲಿಯ ಮೇಲೆ ಕುಳಿತು, ಅವರು ತನ್ನ 'ಸಂಬಳ'ದೊಂದಿಗೆ ಮನೆಗೆ ಬರುವುದನ್ನು ಕಾಯುತ್ತಿತ್ತು. ಅದು ಅವರು ಎರಡು ಮನೆಗಳಲ್ಲಿ ಮನೆಗೆಲಸಗಾರರಾಗಿ ದುಡಿದು ಗಳಿಸುವ 5,000 ರೂಪಾಯಿಗಳು. ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿದ್ಯಾಪೀಠ ಬ್ಲಾಕ್ ಬಳಿಯ ಅಮರಾ ಎನ್ನುವ ಕುಗ್ರಾಮದಲ್ಲಿರುವ ತನ್ನ ಮನೆಗೆ 45 ವರ್ಷದ ಸುಶೀಲಾ ಕಾಲಿಡುವಾಗ ಮಧ್ಯಾಹ್ನ 2 ಗಂಟೆಯಾಗಿತ್ತು.

"ಎರಡು ಮನೆಗಳಲ್ಲಿ ಪಾತ್ರೆ ತೊಳೆಯುವುದು ಮತ್ತು ನೆಲ ಒರೆಸುವುದರ ಮೂಲಕ ಅಮ್ಮ 5,000 ರೂಪಾಯಿಗಳನ್ನು ಗಳಿಸುತ್ತಾರೆ" ಎಂದು ಅವರ 24 ವರ್ಷದ ಮಗ ವಿನೋದ್ ಕುಮಾರ್ ಭಾರತಿ ಹೇಳುತ್ತಾರೆ. "ಅವಳಿಗೆ ಪ್ರತಿ ತಿಂಗಳ ಮೊದಲನೇ ತಾರೀಕಿನಂದು ಅಂದರೆ ಇಂದು ಸಂಬಳ ಸಿಗುತ್ತದೆ. ಅಪ್ಪ ವೈರಿಂಗ್ ಮಾಡುತ್ತಾರೆ, ಕೆಲಸ ಸಿಕ್ಕ ಅದೃಷ್ಟದ ದಿನಗಳಲ್ಲಿ ಎಲೆಕ್ಟ್ರಿಷಿಯನ್ ಒಬ್ಬರಿಗೆ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಇಲ್ಲದಿದ್ದರೆ ನಮಗೆ ಸ್ಥಿರವಾದ ಆದಾಯದ ಮೂಲವಿಲ್ಲ. ನಾನು ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತೇನೆ. ನಾವು ಒಟ್ಟಾಗಿ ತಿಂಗಳಿಗೆ 10-12,000 ರೂಪಾಯಿಗಳನ್ನು ಗಳಿಸುತ್ತೇವೆ. ಹಾಗಾದರೆ ಬಜೆಟ್‌ ಮೂಲಕ ಘೋಷಿಸಲಾಗಿರುವ 12 ಲಕ್ಷ ರೂಪಾಯಿ ತೆರಿಗೆ ವಿನಾಯಿತಿ ಮಿತಿಗೂ ನಮಗೂ ಏನು ಸಂಬಂಧ?

"ನಾವು ಕೆಲವು ವರ್ಷಗಳ ಹಿಂದೆ ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005) ಅಡಿಯಲ್ಲಿ ಕೆಲಸ ಮಾಡುತ್ತಿದ್ದೆವು. ಆದರೆ ಈಗ ಅವರು ಕೆಲಸವಿಲ್ಲ ಎಂದು ಹೇಳುತ್ತಾರೆ." ಸುಶೀಲಾ ಅವರು 2021ರವರೆಗಿನ ನಮೂದುಗಳನ್ನು ಹೊಂದಿರುವ ತಮ್ಮ ಕಾರ್ಡನ್ನು ನಮಗೆ ತೋರಿಸಿದರು, ಅದು ಕೆಲಸದ ವಿವರಗಳು ಡಿಜಿಟಲೈಸ್‌ ಆಗುವ ಮೊದಲಿನ ಕಾರ್ಡು. ಇದು ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ.

PHOTO • Jigyasa Mishra
PHOTO • Jigyasa Mishra

ಎಡ: ಸುಶೀಲಾ ತನ್ನ ಮಗ ವಿನೋದ್ ಕುಮಾರ್ ಭಾರತಿಯೊಂದಿಗೆ. ಬಲ: ಪೂಜಾ ಉತ್ತರ ಪ್ರದೇಶದ ಅಮರಚಕ್ ಗ್ರಾಮದವರು ಮತ್ತು ಸುಶೀಲ ಅವರ ಗಂಡನ ಕುಟುಂಬದವರು. " ನಾನು ಸರ್ಕಾರವನ್ನು ಅವಲಂಬಿ ಸಿದ್ದರೆ ನಮಗೆ ದಿನಕ್ಕೆ ಎರಡು ಹೊತ್ತಿನ ಊಟ ಸಹ ಸಿಗುತ್ತಿರಲಿಲ್ಲ" ಎಂದು ಪೂಜಾ ಹೇಳುತ್ತಾರೆ

PHOTO • Jigyasa Mishra

ಸುಶೀಲಾ ತನ್ನ ಮನರೇಗಾ ಕಾ ರ್ಡಿನ ಜೊತೆ. 2021 ನಂತರ ಅವರಿಗೆ ಯೋಜನೆಯಡಿ ಯಾವುದೇ ಕೆಲಸ ಸಿಕ್ಕಿ ಲ್ಲ

ಸುಶೀಲಾ ಅವರ ಪತಿ 50 ವರ್ಷದ ಸತ್ರು, ಕಳೆದ ಎರಡು ವರ್ಷಗಳಲ್ಲಿ ಮನರೇಗಾ ಯೋಜನೆಯಡಿ ಕೇವಲ 30 ದಿನಗಳ ಕೆಲಸ ಸಿಕ್ಕಿದೆ ಎಂದು ಹೇಳುತ್ತಾರೆ. "ನಾವು ಪ್ರಧಾನ್ ಅವರ ಬಳಿ ಹೆಚ್ಚು ಕೆಲಸ ನೀಡುವಂತೆ ವಿನಂತಿಸಿದಾಗ, ಅವರು ಬ್ಲಾಕ್ ಕಚೇರಿಗೆ ಹೋಗಿ ಕೇಳುವಂತೆ ಹೇಳಿದರು" ಎಂದು ಅವರು ಹೇಳುತ್ತಾರೆ.

ಸುಶೀಲಾ ಅಮರಚಕ್ ಗ್ರಾಮದಲ್ಲಿರುವ ತನ್ನ ಮನೆಯನ್ನು ಸತ್ರು ಅವರ ಇಬ್ಬರು ಸಹೋದರರ ಕುಟುಂಬಗಳೊಂದಿಗೆ ಹಂಚಿಕೊಂಡಿದ್ದಾರೆ. ಒಟ್ಟಾರೆಯಾಗಿ, 12 ಜನರ ಅವಿಭಕ್ತ ಕುಟುಂಬವು ಈ ಸೂರಿನಡಿ ವಾಸಿಸುತ್ತಿದೆ.

“2023ರಲ್ಲಿ ನರೇಗಾ ಯೋಜನೆಯಡಿ ಮಾಡಿದ 35 ದಿನಗಳ ಸಂಬಳ ಇನ್ನೂ ಬಂದಿಲ್ಲ” ಎಂದು ಆ ಸಹೋದರರಲ್ಲಿ ಒಬ್ಬರ ವಿಧವೆ 42 ವರ್ಷದ ಪೂಜಾ ಹೇಳುತ್ತಾರೆ. "ನನ್ನ ಪತಿ ಕಳೆದ ತಿಂಗಳು ನಿಧನರಾದರು, ಮತ್ತು ಯಾವುದೇ ಹಣಕಾಸಿನ ಸಹಾಯವಿಲ್ಲದೆ ನನಗೆ ಮೂವರು ಚಿಕ್ಕ ಗಂಡು ಮಕ್ಕಳನ್ನು ನೋಡಿಕೊಳ್ಳಬೇಕಾಗಿದೆ" ಎಂದು ಅವರು ಹೇಳುತ್ತಾರೆ. "ಶುಕರ್ ಹೈ ಆಸ್ಪಾಸ್ ಕಾಲೋನಿ ಮೇ ಘರ್ ಕಾ ಕಾಮ್ ಮಿಲ್ ಜಾತಾ ಹೈ [ದೇವರ ದಯೆಯಿಂದ ಹೇಗೋ ಮನೆಯ ಆಸುಪಾಸಿನಲ್ಲೇ ಮನೆಗೆಲಸ ಸಿಗುತ್ತಿದೆ]” ಎಂದು ಅವರು ಮಾತು ಮುಗಿಸಿದರು. "ವರ್ನಾ ಸರ್ಕಾರ್ ಕೆ ಭರೋಸ್ ತೋ ಹಮ್ ದೋ ವಕ್ತ್ ಕಾ ಖಾನಾ ಭೀ ನಹೀ ಖಾ ಪಾತೇ [ಸರ್ಕಾರವನ್ನು ನಂಬಿ ಕುಳಿತಿದ್ದರೆ ನಾವು ಎರಡು ಹೊತ್ತಿನ ಊಟಕ್ಕೂ ಪರದಾಡಬೇಕಿತ್ತು].”

ಅನುವಾದ: ಶಂಕರ. ಎನ್. ಕೆಂಚನೂರು

Jigyasa Mishra

Jigyasa Mishra is an independent journalist based in Chitrakoot, Uttar Pradesh.

Other stories by Jigyasa Mishra

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru