ಬಾಪು ಖಂಡಾರೆ ಅವರು ದನ-ಕರು ಹಾಗೂ ಕುರಿಗಳ ಕೊರಳಿಗೆ ಕಟ್ಟುವ ಗಂಟೆ ಅಥವಾ ಹುರಿಗೆಜ್ಜೆಗಳ ಮಾರಾಟ ಮಾಡುತ್ತಾರೆ, ಜೊತೆಗೆ ಪ್ರಾಣಿಗಳ ಸಾಕಣೆ ಮತ್ತು ಕೃಷಿಯಲ್ಲಿ ಬಳಸುವ ಹಗ್ಗಗಳು ಮತ್ತು ಉಂಗುರಗಳಂತಹ ಪರಿಕರಗಳನ್ನು ಮಾರಾಟ ಮಾಡುತ್ತಾರೆ. ಸಾಂಗ್ಲಿ ಜಿಲ್ಲೆಯ ಅಟ್ಪಾಡಿ ಮತ್ತು ಜಟ್ ತಾಲೂಕಿನಿಂದ ಹಿಡಿದು ಸತಾರಾ ಜಿಲ್ಲೆಯ ಮ್ಹಸ್ವಾಡ್ ಮತ್ತು ಖಟವ್ ತಾಲೂಕುಗಳಿಗೆ ಹಾಗೂ ಹತ್ತಿರದ ಕೆಲವು ಊರುಗಳ ವಿವಿಧ ವಾರದ ಸಂತೆಗಳಲ್ಲಿ ಈ ವಸ್ತುಗಳನ್ನು ಮಾರಾಟ ಮಾಡಲು ಪ್ರಯಾಸಪಡುತ್ತಿದ್ದಾರೆ. ಆದರೆ ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಬರಗಾಲದಿಂದ ಜಾನುವಾರುಗಳಿಗೆ ನೀರು ಮತ್ತು ಮೇವು ಕೊರತೆಯಾಗಿದೆ. ಜಾನುವಾರು ಮತ್ತು ಮೇಕೆಗಳ ವ್ಯಾಪಾರ ಕಡಿಮೆಯಾಗಿದೆ. ಇದು ಖಂಡಾರೆ ಅವರ ಮಾರಾಟದ ಮೇಲೂ ತೀವ್ರ ಪರಿಣಾಮ ಬೀರಿದೆ.
ಈ ವಸ್ತುಗಳ ತಯಾರಿಕೆಯಲ್ಲಿ ಸಾಂಪ್ರದಾಯಿಕವಾಗಿ ತೊಡಗಿಸಿಕೊಂಡಿರುವ ಪರಿಶಿಷ್ಟ ಜಾತಿಯ, ಧೋರ್ ಸಮುದಾಯದ, 30ರ ಹರೆಯದ ಖಂಡಾರೆ ಅವರನ್ನು ಮಾಸ್ವಾದ್ ಪಟ್ಟಣದಲ್ಲಿ ಬುಧವಾರದ ಮೇಕೆ ಸಂತೆಯಲ್ಲಿ ನಾವು ಭೇಟಿಯಾದೆವು. ಅವರು ಸುಮಾರು 35 ಕಿಲೋಮೀಟರ್ ದೂರದ ಅಟ್ಪಾಡಿ ಗ್ರಾಮದಿಂದ ಬಂದಿದ್ದರು. ಬೆಳ್ಳಿಗ್ಗೆ 10:30 ಆಗಿತ್ತು, ಮತ್ತು ಮಾರುಕಟ್ಟೆ ಮುಚ್ಚುವ ಹಂತದಲ್ಲಿತ್ತು. ಜನರು ಷೇರ್ ಆಟೋ ಮತ್ತು ಜೀಪ್‌ಗಳಲ್ಲಿ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದರು. ಮಾಂಸದ ವ್ಯಾಪಾರಿಗಳು ತಮ್ಮ ವ್ಯಾನ್‌ಗಳಲ್ಲಿ ಕುರಿಗಳನ್ನು ತುಂಬುತ್ತಿದ್ದರು ಮತ್ತು ಕೆಲವು ಮಾರಾಟಗಾರರು ಕೊನೆಯ ಕ್ಷಣದ ಗ್ರಾಹಕರಿಗಾಗಿ ಆಶಾದಾಯಕ ಭಾವದೊಂದಿಗೆ ಸುತ್ತಾಡುತ್ತಿದ್ದರು.
ಖಂಢಾರೆ ಅವರು ಪ್ರಯಾಣಿಸುವ ಟೆಂಪೋದಲ್ಲೇ ತನ್ನ ಅಂಗಡಿಯನ್ನು ಸಹ ತೆರೆದಿದ್ದಾರೆ. ಪ್ರಯಾಣಿಸುವಾಗ ಟೆಂಪೋದ ಹಿಂದಿನ ಡೋರ್ ತೆಗೆದಿಟ್ಟು ಅವರು ವಿವಿಧ ಪರಿಕರಗಳು ಮತ್ತು ಜಾನುವಾರುಗಳ ಆಭರಣಗಳನ್ನು ಪ್ರದರ್ಶಿಸುತ್ತಾರೆ - ಒಂದು ದಾವೆ (ಪ್ರಾಣಿಗಳನ್ನು ಕೊಟ್ಟಿಗೆಯಲ್ಲಿ ಕಟ್ಟಲು ಅಥವಾ ಅವುಗಳನ್ನು ಮೇಯಿಸಲು ಬಳಸುವ ಹಗ್ಗ), ಕಸ್ರಾ (ಎತ್ತುಗಳನ್ನು ಎತ್ತಿನ ಬಂಡಿಗೆ ಕಟ್ಟಲು ಬಳಸುವ ಹಗ್ಗ), ಗೋಫಾನ್ (ಬೆಳೆಗಳನ್ನು ತಿನ್ನುವ ಪಕ್ಷಿಗಳನ್ನು ಹೆದರಿಸಲು ಬಳಸಲಾಗುವ ಕಲ್ಲಿನ ಸಣ್ಣ ಪಾಕೆಟ್ ಹೊಂದಿರುವ ಜೋಲಿ), ಮಸ್ಕಿ (ಪ್ರಾಣಿಗಳು ಬೆಳೆಯನ್ನು ತಿನ್ನದಹಾಗೆ ಬಾಯಿಯನ್ನು ಮುಚ್ಚಲು ಬಳಸಲಾಗುತ್ತದೆ), ಘುಂಗುರ್-ಮಾಲ್ (ಮೇಕೆಯ ಕೊರಳಿಗೆ ಕಟ್ಟುವ ಸಣ್ಣ ಗಂಟೆಗಳು), ಕಂದ (ಸಣ್ಣ ಗಂಟೆಗಳೊಂದಿಗೆ ಉಣ್ಣೆಯ ಚೆಂಡುಗಳ ಹಾರ), ಮತ್ತು ಮೋರ್ಖಿ (ಮೂಗಿಗೆ ಬಳಸುವ ಗಂಟು ಹಾಕಿದ ಹಗ್ಗ- ಮೂಗುದಾರ).
“ನಾನು ಪ್ರಯಾಣಕ್ಕಾಗಿ 400 ರೂಪಾಯಿಗಳನ್ನು ಖರ್ಚು ಮಾಡಿದ್ದೇನೆ ಮತ್ತು 350 ಗಳಿಸಲಷ್ಟೇ ಸಾಧ್ಯವಾಗಿದೆ, ಅದು ಕೂಡ ಸಗಟು ವ್ಯಾಪಾರಿಗಳಿಂದ. ಈ ವಸ್ತುಗಳಿಗೆ ಒಬ್ಬ ವ್ಯಕ್ತಿಯೂ ಬಂದಿಲ್ಲ,” ಎಂದು ಖಂಡಾರೆ ಹೇಳಿದರು, ಅವರ ಖಾಲಿ ಮರದ ನಗದು ಪೆಟ್ಟಿಗೆಯನ್ನು ನಮಗೆ ತೋರಿಸಿದರು. “ಈ ಮಾರುಕಟ್ಟೆಯನ್ನು ಈಗ ಮುಚ್ಚಲಾಗಿದೆ. ಈ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕೇವಲ ಮೇಕೆ ಮಾಂಸವಷ್ಟೇ ಮಾರಾಟವಾಗುತ್ತದೆ. ಈ ಗಂಟೆ, ಹಾರಗಳಲ್ಲಿ ಕೆಲವನ್ನಾದರೂ ಹತ್ತಿರದ ಇತರ ವಾರದ ಸಂತೆಗಳಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತದೆಯೇ ನೋಡಬೇಕು ಎನ್ನುತ್ತಾ ಅವರು ಖರೀದಿದಾರರಿಗೆ ಎದುರುನೋಡತೊಡಗಿದರು.
ಕವರ್ ಫೋಟೋ : ಬಿನೈಫರ್ ಭರುಚಾ
ಅನುವಾದ: ಏಕತಾ ಹರ್ತಿ ಹಿರಿಯೂರು