ನೆಲದ ಮೇಲೆ ಕುಳಿತ ನಿಶಾ ಒಮ್ಮೆ ಗಾಳಿ ಬೀಸಿಕೊಳ್ಳುತ್ತಾರೆ. ಜೂನ್‌ ತಿಂಗಳ ಬಿಸಿಲು ಸೆಕೆಯನ್ನು ಹೆಚ್ಚಿಸುತ್ತಿದ್ದರೆ ಅಲ್ಲೇ ಇದ್ದ ತಂಬಾಕು ಮತ್ತು ಒಣ ಎಲೆಯ ವಾಸನೆ ಗಾಳಿಯನ್ನು ಗಾಢಗೊಳಿಸುತ್ತಿದ್ದವು. “ಈ ವಾರ ಇಷ್ಟೇ ಬೀಡಿ ಕಟ್ಟಲು ಸಾಧ್ಯವಾಗಿದ್ದು” ಎನ್ನುತ್ತಾ ತಲಾ 17 ಬೀಡಿಗಳಿರುವ ಕಟ್ಟುಗಳಲ್ಲಿದ್ದ ಸುಮಾರು 700 ಬೀಡಿಗಳತ್ತ ಬೆರಳು ತೋರಿಸಿದರು. “ಇಷ್ಟಕ್ಕೆ ಬಹುಶಃ 100 ರೂಪಾಯಿ ಸಿಗುವುದು ಕೂಡಾ ಅನುಮಾನ” ಎಂದು ಈ 32 ವರ್ಷ ಪ್ರಾಯದ ಬೀಡಿ ಕಾರ್ಮಿಕ ಮಹಿಳೆ ಹೇಳುತ್ತಾರೆ. ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ಕೊಟಟಾಲಾದಲ್ಲಿ ಒಂದು ಸಾವಿರ ಬೀಡಿಗಳಿಗೆ 150 ರೂಪಾಯಿ ಸಿಗುತ್ತದೆ.

ಪ್ರತಿ ಬುಧವಾರ ಮತ್ತು ಶುಕ್ರವಾರ, ಬೀಡಿ ಕಟ್ಟುವವರು ತಾವು ಕಟ್ಟಿದ ಬೀಡಿಗಳನ್ನು ಒಪ್ಪಿಸಲು ಮತ್ತು ಮುಂದಿನ ಸುತ್ತಿಗೆ ಕಚ್ಚಾ ವಸ್ತುಗಳನ್ನು ಪಡೆಯಲು ಈ ಕಾರ್ಖಾನೆಗಳಿಗೆ ಬರುತ್ತಾರೆ. ಬಹುತೇಕ ಈ ಬೀಡಿ ಕಾರ್ಖಾನೆಗಳು ದಮೋ ಪಟ್ಟಣದ ಹೊರವಲಯದಲ್ಲಿವೆ. ಕಾರ್ಖಾನೆಗಳು ಠೇಕೇದಾರರನ್ನು (ಗುತ್ತಿಗೆದಾರರು) ನೇಮಿಸಿಕೊಂಡಿರುತ್ತವೆ, ಅವರು ಬೀಡಿ ಕಾರ್ಮಿಕರಿಗೆ, ಮುಖ್ಯವಾಗಿ ಮಹಿಳೆಯರಿಗೆ ಕೆಲಸವನ್ನು ಗುತ್ತಿಗೆ ನೀಡುತ್ತಾರೆ.

ಈ ಮಹಿಳೆಯರು ತಾವು ತಂದ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ವಾರವಿಡೀ ತೆಂದು ಎಲೆಯನ್ನು ಮಡಚಿ ಅದರಲ್ಲಿ ತಂಬಾಕಿನ ಪುಡಿಯನ್ನು ತುಂಬಿ ದಾರದಿಂದ ಕಟ್ಟುವ ಮೂಲಕ ಬೀಡಿ ತಯಾರಿಸುತ್ತಾರೆ. ನಂತರ ಅವುಗಳನ್ನು ಕಟ್ಟಾಗಳನ್ನಾಗಿ (ಕಟ್ಟು) ಕಟ್ಟುತ್ತಾರೆ. ಅವರು ಈ ಕೆಲಸಕ್ಕೂ ಮೊದಲು ತಮ್ಮ ಮನೆಗೆಲಸಗಳನ್ನು ಮುಗಿಸಿಕೊಂಡಿರುತ್ತಾರೆ. ಇವರಲ್ಲಿ ಹೆಚ್ಚಿನ ಕುಟುಂಬಗಳ ಸರಾಸರಿ ಆದಾಯ 20,000 ರೂ. ಅದರಲ್ಲೇ 8-10 ಜನರ ಕುಟುಂಬ ನಡೆಯಬೇಕಿರುತ್ತದೆ. ಅವರಲ್ಲಿ ಹೆಚ್ಚಿನ ಮಹಿಳೆಯರು ಕೃಷಿ ಕಾರ್ಮಿಕರು ಮತ್ತು ಕೆಲವರು ಸಣ್ಣ ಹಿಡುವಳಿಗಳನ್ನು ಹೊಂದಿದ್ದಾರೆ.

“ಒಣಗಿದ ತೆಂಡು ಎಲೆಗಳನ್ನು ಅವುಗಳಲ್ಲಿನ ದಂಟು ಹೊರಬರುವ ತನಕ ನೀರಿನಲ್ಲಿ ನೆನೆಸಿಡಬೇಕು. ನಂತರ, ಎಲೆಗಳನ್ನು ಫರ್ಮಾ [ಕಬ್ಬಿಣದ ಸ್ಟೆನ್ಸಿಲ್] ಬಳಸಿ ಸಣ್ಣ ಆಯತಾಕಾರದಲ್ಲಿ ಕತ್ತರಿಸಲಾಗುತ್ತದೆ. ನಂತರ ಅದನ್ನು ಸುರುಳಿ ಮಾಡಿ ಅದರೊಳಗೆ ಜರ್ದಾ [ಪರಿಮಳಯುಕ್ತ ತಂಬಾಕು] ಸುರಿದು ನಂತರ ಕಟ್ಟಲಾಗುತ್ತದೆ” ಎಂದು ನಿಶಾ ವಿವರಿಸುತ್ತಾರೆ. ಪ್ರತಿ ಬೀಡಿಯನ್ನು ಬಣ್ಣದ ದಾರದಿಂದ ಕಟ್ಟಬೇಕು, ಈ ದಾರವು ಬ್ರಾಂಡ್ ಸೂಚಕವಾಗಿಯೂ ಕಾರ್ಯನಿರ್ವಹಿಸುತ್ತದೆ, ಒಂದು ಬೀಡಿ ಕಂಪನಿಯನ್ನು ಇನ್ನೊಂದರಿಂದ ಪ್ರತ್ಯೇಕಿಸುತ್ತದೆ.

ನಂತರ ಆ ಬೀಡಿಗಳನ್ನು ಬೀಡಿ ʼಕಾರ್ಖಾನೆಗೆʼ ತರಲಾಗುತ್ತದೆ. ಒಂದು ಬೀಡಿ ಕಾರ್ಖಾನೆಯೆನ್ನುವುದು ಬೀಡಿ ತಯಾರಿಸುವ ಬ್ರಾಂಡ್ ನ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಘಟಕ ಮತ್ತು ಉಗ್ರಾಣವಾಗಿ ಕೆಲಸ ಮಾಡುತ್ತದೆ. ಬೀಡಿ ಕಟ್ಟುವವರು ತಾವು ಕಟ್ಟಿದ ಬೀಡಿಯನ್ನು ಗುತ್ತಿಗೆದಾರರಿಗೆ ನೀಡುತ್ತಾರೆ. ಅವರು ಈ ಕಾರ್ಮಿಕರಿಗೆ ಕೂಲಿಯನ್ನು ನೀಡಿ ಬೀಡಿಯನ್ನು ಕಾರ್ಖಾನೆಗೆ ತಲುಪಿಸುತ್ತಾರೆ. ಕಾರ್ಖಾನೆಯೊಳಗೆ, ಬೀಡಿಗಳನ್ನು ವಿಂಗಡಿಸಿ, ಹುರಿದು, ಪ್ಯಾಕ್ ಮಾಡಿ ಸಂಗ್ರಹಿಸಲಾಗುತ್ತದೆ.

PHOTO • Priti David
PHOTO • Kuhuo Bajaj

ಚಿಂದ್ವಾರಾ ಮತ್ತು ಇತರ ಪ್ರದೇಶಗಳಲ್ಲಿನ ಕಾಡುಗಳು ತೆಂದು ಮರಗಳ ಬಾಹುಳ್ಯವನ್ನು ಹೊಂದಿರುವುದರಿಂದಾಗಿ ಈ ಪ್ರದೇಶವು ತೆಂದು ಎಲೆಗಳ ಸಮೃದ್ಧ ಮೂಲವಾಗಿದೆ – ಇದು ಬೀಡಿಗಳ ಉತ್ಪಾದನೆಯಲ್ಲಿ ಒಂದು ನಿರ್ಣಾಯಕ ಅಂಶವಾಗಿದೆ - ಇದನ್ನು ತಂಬಾಕಿಗೆ ಹೊದಿಕೆಯಾಗಿ ಬಳಸಲಾಗುತ್ತದೆ. ಬಲ: ಮನೆಕೆಲಸಗಳ ನಡುವೆ ನಿಶಾ ಬೀಡಿ ಕಟ್ಟುತ್ತಾರೆ

ಬೀಡಿ ಕಾರ್ಮಿಕರಲ್ಲಿ ಹೆಚ್ಚಿನವರು ಮುಸ್ಲಿಮರು, ಆದರೆ ಇತರ ಸಮುದಾಯಗಳ ಮಹಿಳೆಯರು ಸಹ ಈ ಜೀವನೋಪಾಯದಲ್ಲಿ ತೊಡಗಿಸಿಕೊಂಡಿದ್ದಾರೆ.

ದಮೋ ಪಟ್ಟಣದಲ್ಲಿರುವ ಸರಿಸುಮಾರು 25 ಬೀಡಿ ಕಾರ್ಖಾನೆಗಳಿವೆ. ಮಧ್ಯಪ್ರದೇಶದ ಸುತ್ತಮುತ್ತಲಿನ ಜಿಲ್ಲೆಗಳ ಹಲವಾರು ತೆಂಡು ಕಾಡುಗಳಿಗೆ ಹತ್ತಿರದಲ್ಲಿರುವುದರಿಂದ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಬೀಡಿ ಕಾರ್ಖಾನೆಗಳಿವೆ. ತೆಂಡು ಮರಗಳು ಇಲ್ಲಿನ ಶೇಕಡಾ 31ರಷ್ಟು ಅರಣ್ಯ ಪ್ರದೇಶವನ್ನು ವ್ಯಾಪಿಸಿವೆ. ಸಿಯೋನಿ, ಮಾಂಡ್ಲಾ, ಸೆಹೋರ್, ರೈಸನ್, ಸಾಗರ್, ಜಬಲ್ಪುರ್, ಕಟ್ನಿ ಮತ್ತು ಛಿಂದ್ವಾರಾಗಳು ತೆಂಡು ಎಲೆಗಳ ಸಮೃದ್ಧ ಮೂಲಗಳಾಗಿವೆ. ಈ ಎಲೆ ಬೀಡಿಗಳ ಉತ್ಪಾದನೆಯಲ್ಲಿ ಒಂದು ನಿರ್ಣಾಯಕ ಅಂಶವಾಗಿದೆ. ಇದನ್ನು ತಂಬಾಕು ಸುತ್ತಲು ಬಳಸಲಾಗುತ್ತದೆ.

*****

ಒಂದು ಶುಕ್ರವಾರದ ಮಧ್ಯಾಹ್ನ ಸುಮಾರು ಆರು ಮಹಿಳೆಯರು ಗಾಢ ಬಣ್ಣದ ಸಲ್ವಾರ್‌ ಕಮೀಜ್‌ ಧರಿಸಿ ತಮ್ಮ ಬೀಡಿ ಲೆಕ್ಕ ಕೊಡಲು ಕಾಯುತ್ತಿದ್ದರು. ಅವರೆಲ್ಲ ಠೇಕೆದಾರ್‌ ಜತೆ ಎತ್ತರದ ದನಿಯಲ್ಲಿ ನಡೆಸುತ್ತಿದ್ದ ಮಾತುಕತೆಯ ಗದ್ದಲದ ನಡುವೆಯೂ ಹತ್ತಿರದ ಮಸೀದಿಯಿಂದ ತೇಲಿ ಬರುತ್ತಿದ್ದ ಶುಕ್ರವಾರದ ಪ್ರಾರ್ಥನೆಯ ಸದ್ದನ್ನು ಕೇಳಬಹುದಿತ್ತು. ಮಹಿಳೆಯರು ತಮ್ಮ ವಾರದ ಶ್ರಮವನ್ನು ತಸ್ಲಾ ಎನ್ನುವ ಕಬ್ಬಿಣದ ಬಾಣಲೆಯಂತಹ ಪಾತ್ರೆಯಲ್ಲಿ ತುಂಬಿಕೊಂಡು ಬಂದಿದ್ದರು.

ಅಂದು ನಡೆದ ಬೀಡಿ ಲೆಕ್ಕದ ಕುರಿತು ಅಮೀನಾ (ಹೆಸರು ಬದಲಾಯಿಸಲಾಗಿದೆ) ಅಸಮಾಧಾನ ಹೊಂದಿದ್ದರು. “ಇನ್ನೂ ಹೆಚ್ಚು [ಬೀಡಿ] ಇದ್ದವು, ಆದರೆ ಠೇಕೆದಾರ ಬೀಡಿಗಳನ್ನು ವಿಂಗಡಿಸುವಾಗ ಅವನ್ನೆಲ್ಲ ರಿಜೆಕ್ಟ್‌ ಮಾಡಿದ್ದಾನೆ” ಎಂದು ದೂರಿದರು. ಮಹಿಳೆಯರು ತಮ್ಮನ್ನು ಬೀಡಿ ಮಜ್ದೂರ್ (ಕಾರ್ಮಿಕರು) ಎಂದು ಕರೆದುಕೊಳ್ಳುತ್ತಾರೆ ಮತ್ತು 1,000 ಬೀಡಿಗಳಿಗೆ 150 ರೂ.ಗಳ ಬೆಲೆಯು ತಮ್ಮ ಶ್ರಮಕ್ಕೆ ತಕ್ಕಂತೆ ನ್ಯಾಯಯುತ ಬೆಲೆಯಲ್ಲ ಎಂದು ಅವರು ಹೇಳುತ್ತಾರೆ.

“ನಾನು ಇದರ ಬದಲು ಹೊಲಿಗೆ ಕೆಲಸ ಮಾಡುವ ಕುರಿತು ಯೋಚಿಸುತ್ತಿದ್ದೇನೆ. ಅದರಲ್ಲಿ ಇದಕ್ಕಿಂತ ಹೆಚ್ಚು ಸಂಪಾದನೆಯಿದೆ” ಎನ್ನುತ್ತಾರೆ ಜಾನು. ಇವರು ದಮೋ ಪಟ್ಟಣದ ಮಾಜಿ ಬೀಡಿ ಕಾರ್ಮಿಕರು. ಅವರು ತಮ್ಮ 14ನೇ ವಯಸ್ಸಿನಲ್ಲಿ ಬೀಡಿ ಕಟ್ಟುವ ಕೆಲಸವನ್ನು ಆರಂಭಿಸಿದ್ದರು. “ಆಗೆಲ್ಲ ನನಗೆ ಅಷ್ಟೆಲ್ಲ ಕೌಶಲವಾಗಲೀ, ಆಯ್ಕೆಯಾಗಲೀ ಇದ್ದಿರಲಿಲ್ಲ” ಎನ್ನುತ್ತಾರವರು.

PHOTO • Kuhuo Bajaj

ಪರಿಮಳಯುಕ್ತ ತಂಬಾಕು, ಜರ್ದಾವನ್ನು (ಎಡ)  ತೆಂದು ಎಲೆಗಳಲ್ಲಿಟ್ಟು ಸುತ್ತಿ ಬೀಡಿ ತಯಾರಿಸಲಾಗುತ್ತದೆ (ಬಲ)

ಗಂಟೆಗಳ ಕಾಲ ಕುಳಿತು ಬೀಡಿ ಕಟ್ಟುವುದರಿಂದ ಕಾರ್ಮಿಕರಿಗೆ ತೀವ್ರ ಬೆನ್ನು ನೋವು ಮತ್ತು ಕುತ್ತಿಗೆ ನೋವಿನ ಸಮಸ್ಯೆ ಎದುರಾಗುತ್ತದೆ. ಜೊತೆಗೆ ತೋಳುಗಳು ಮರಗಟ್ಟಿದಂತೆ ಆಗುವುದರಿಂದಾಗಿ ಅವರಿಗೆ ಮನೆಗೆಲಸ ಮಾಡುವುದಕ್ಕೂ ಕಷ್ಟವಾಗುತ್ತದೆ. ಈ ಮಹಿಳೆಯರಿಗೆ ಈ ವಿಷಯದಲ್ಲಿ ಯಾವುದೇ ಪರಿಹಾರ ಅಥವಾ ವೈದ್ಯಕೀಯ ನೆರವು ದೊರೆಯುವದಿಲ್ಲ. ಕಾರ್ಖಾನೆ ಮಾಲಿಕರು ಈ ಮಹಿಳೆಯರ ಸಮಸ್ಯೆಗಳನ್ನು ತಳ್ಳಿಹಾಕುತ್ತಾರೆ. ಅವರಿಗೆ ಇದರಲ್ಲಿ ಶ್ರಮವೇ ಇಲ್ಲವೆನ್ನುವಂತೆ ಮಾತನಾಡುತ್ತಾರೆ. ಅದರಲ್ಲಿ ಈ ವರದಿಗಾರರೊಡನೆ ಮಾತನಾಡಿದ ಮಾಲಿಕನೊಬ್ಬ ”ಮಹಿಳೆಯರು ಸುಮ್ಮನೆ ಮನೆಯಲ್ಲಿ ಕುಳಿತು ಬೀಡಿ ಕಟ್ಟುತ್ತಾರೆ” ಎಂದು ಅದರಲ್ಲೇನು ಕಷ್ಟವಿದೆ ಎನ್ನುವಂತೆ ಮಾತನಾಡಿದರು.

"ಅವರು ವಾರಕ್ಕೆ 500 ರೂಪಾಯಿಗಳವರೆಗೆ ಸಂಪಾದಿಸಬಹುದು" ಎಂದು ಅವರು ಹೇಳಿದರು ಮತ್ತು ಮನೆಯ ಖರ್ಚುಗಳನ್ನು ಪೂರೈಸಲು ಇದೊಂದು ಒಳ್ಳೆಯ ಕೆಲಸ ಎನ್ನುವುದು ಅವರ ಅಭಿಪ್ರಾಯ. ಆದಾಗ್ಯೂ, ವಾರಕ್ಕೆ 500 ರೂ.ಗಳ ಅವರ ಅಂದಾಜಿನ ಪ್ರಕಾರ, ಒಬ್ಬ ಕಾರ್ಮಿಕನು ಸುಮಾರು 4,000 ಬೀಡಿಗಳನ್ನು ತಯಾರಿಸಬೇಕಾಗುತ್ತದೆ - ಪ್ರಸ್ತುತ ಅವರು ತಿಂಗಳಿಗೆ ನಿರ್ವಹಿಸುತ್ತಿದ್ದಾರೆ.

ನಮ್ಮೊಂದಿಗೆ ಮಾತನಾಡಿದ ಪ್ರತಿಯೊಬ್ಬರೂ ದೈಹಿಕ ಒತ್ತಡ ಮತ್ತು ನೋವಿನ ಕುರಿತು ದೂರು ಹೇಳಿದರು. ಒದ್ದೆ ಎಲೆಗಳನ್ನು ನಿರಂತರ ಸುತ್ತುವುದು ಮತ್ತು ನಿರಂತರ ತಂಬಾಕಿನ ಸಂಪರ್ಕವು ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ. “ಹಾತ್‌ ಐಸೇ ಕಟೇ ರೆಹತೇ ಹೈ, ನಿಶಾನ್‌ ತಕ್‌ ಪಡ್‌ ಜಾತೇ ಹೈ [ನನ್ನ ಕೈ ತುಂಬಾ ಗಾಯಗಳಿವೆ, ಕೆಲವೊಮ್ಮೆ ಗಾಯದ ಕಲೆ ಹೋಗುವುದೇ ಇಲ್ಲ] ಎಂದು ಹೇಳಿದ ಮಹಿಳೆಯ ಕೈಗಳ ತುಂಬಾ ಕಳೆದ 10 ವರ್ಷಗಳ ಕೆಲಸದಿಂದ ಉಂಟಾದ ಗಾಯ ಮತ್ತು ಅದರ ಕಲೆಗಳ ಸಾಕ್ಷಿ ಕಾಣುತ್ತಿತ್ತು.

“ರಾತ್ರಿ ಮಲಗುವ ಮೊದಲು ಕೈಗಳಿಗೆ ಬೊರೋಲಿನ್‌ ಹಚ್ಚಿಕೊಳ್ಳುತ್ತೇನೆ [ಮುಲಾಮು], ಇಲ್ಲದಿದ್ದರೆ ತಂಬಾಕು ಮತ್ತು ಒದ್ದೆ ಎಲೆಗಳ ಪ್ರಭಾವ ನನ್ನ ಕೈಯಲ್ಲಿನ ಚರ್ಮ ಕಿತ್ತು ಬರುವಂತೆ ಮಾಡುತ್ತವೆ” ಎನ್ನುತ್ತಾರೆ ಸೀಮಾ (ಹೆಸರು ಬದಲಾಯಿಸಲಾಗಿದೆ) ಎನ್ನುವ ಕಾರ್ಮಿಕ ಮಹಿಳೆ. “ನಾನು ತಂಬಾಕು ಸೇವಿಸುವುದಿಲ್ಲ, ಆದರೆ ಅದರ ವಾಸನೆಗೇ ಕೆಮ್ಮು ಬರುತ್ತಿತ್ತು” ಎಂದು 40 ವರ್ಷ ವಯಸ್ಸಿನ ಅವರು ಹೇಳುತ್ತಾರೆ. ಇದೇ ಕಾರಣಕ್ಕಾಗಿ 10 ವರ್ಷಗಳ ಹಿಂದೆ ಬೀಡಿ ಕಟ್ಟುವುದನ್ನು ಬಿಟ್ಟ ಅವರು ಈಗ ದಮೋ ಪಟ್ಟಣದಲ್ಲಿ ಮೆನಗೆಲಸ ಮಾಡುವ ಮೂಲಕ ತಿಂಗಳಿಗೆ 4,000 ರೂಪಾಯಿಗಳನ್ನು ಸಂಪಾದಿಸುತ್ತಿದ್ದಾರೆ.

ರಜಿಯಾ (ಹೆಸರು ಬದಲಾಯಿಸಲಾಗಿದೆ), ಅವರಿಗೆ ತಾನು ಯಾವಾಗ ಕೆಲಸ ಆರಂಭಿಸಿದೆ ಎನ್ನುವುದು ನೆನಪಿಲ್ಲದಷ್ಟು ವರ್ಷಗಳಿಂದ ಬೀಡಿ ಕಟ್ಟುತ್ತಿದ್ದಾರೆ. ತೆಂದು ಎಲೆಗಳನ್ನು ತೂಕ ಮಾಡುತ್ತಿರುವ ಠೇಕೇದಾರ್ ಒಬ್ಬನನ್ನು ಅವರು ಗದರಿಸುತ್ತಾರೆ: "ಇದೆಂತಹ ಎಲೆ ಕೊಡ್ತಿದ್ದೀರಿ? ಇವುಗಳನ್ನು ಬಳಸಿ ನಾವು ಹೇಗೆ ಒಳ್ಳೆಯ ಬೀಡಿ ಕಟ್ಟುವುದು? ಆಮೇಲೆ ನಾವು ಲೆಕ್ಕ ಕೊಡಲು ಬಂದಾಗ ಅವುಗಳನ್ನು ನೀವು ತಿರಸ್ಕರಿಸಿ ಬಿಡ್ತೀರಿ."

PHOTO • Kuhuo Bajaj

ಬುಧವಾರ ಮತ್ತು ಶುಕ್ರವಾರ, ಬೀಡಿ ಕಾರ್ಮಿಕರು ಕಚ್ಚಾ ವಸ್ತುಗಳನ್ನು ಸಂಗ್ರಹಿಸಲು ಕಾರ್ಖಾನೆಗೆ ಬರುತ್ತಾರೆ: ತೆಂದು ಎಲೆಗಳು ಮತ್ತು ಜರ್ದಾ

ಈ ಕೆಲಸದಲ್ಲಿ ಮಳೆಗಾಲದಲ್ಲಿ ಸಮಸ್ಯೆಗಳು ಇನ್ನೂ ಹೆಚ್ಚು, “ಜೋ ವೋ ಬಾರೀಶ್‌ ಕೇ 4 ಮಹೀನೆ ಲಗ್ತೆ ತೇ, ಮಾನೋ ಪೂರಿ ಬೀಡಿ ಕಚ್ರೇ ಮೇ ಜಾತಿ ತೀ. [ಮಳೆಗಲಾದಲ್ಲಿ ನಾಲ್ಕು ತಿಂಗಳು ಬೀಡಿಗಳೆಲ್ಲ ಕಸದ ಜೊತೆ ಹೋಗುತ್ತಿದ್ದಂತೆ ಭಾಸವಾಗುತ್ತಿತ್ತು]. ಒದ್ದೆಯಾದ ತೆಂದು ಎಲೆಯಲ್ಲಿ ಕಟ್ಟಿದ ಬೀಡಿಯೊಳಗಿನ ತಂಬಾಕು ಸರಿಯಾಗಿ ಒಣಗದೆ ಮುದ್ದೆಯಾಗುತ್ತಿತ್ತು. ಅದರಿಂದಾಗಿ ಇಡೀ ಕಟ್ಟು ಹಾಳಾಗುತ್ತಿತ್ತು. “ಆ ಸಮಯದಲ್ಲಿ [ಮಳೆಗಾಲದಲ್ಲಿ] ನಮ್ಮ ಬಟ್ಟೆ ಒಣಗಿಸುವುದೇ ಕಷ್ಟ, ಅಂತಹದ್ದರಲ್ಲಿ ಈ ಬೀಡಿಯನ್ನು ಸಹ ಒಣಗಿಸಬೇಕು.”

ಠೇಕೆದಾರನೊಬ್ಬ ಬೀಡಿಯನ್ನು ತಿರಸ್ಕರಿಸಿದರೆ ಅದರಿಂದ ಬೀಡಿ ಕಟ್ಟಿದವರ ಶ್ರಮವಷ್ಟೇ ವ್ಯರ್ಥವಾಗುವುದಿಲ್ಲ, ಅದರ ಜೊತೆಗೆ ತಿರಸ್ಕೃತ ಬೀಡಿಗೆ ಬಳಕೆಯಾದ ಕಚ್ಚಾ ವಸ್ತುವಿನ ಹಣವನ್ನೂ ಬೀಡಿ ಕಾರ್ಮಿಕರ ಬಟವಾಡೆಯಿಂದ ಕಡಿತಗೊಳಿಸಲಾಗುತ್ತದೆ. “ಖೂಬ್‌ ಲಂಬೀ ಲೈನ್‌ ಲಗ್ತೀ ತೀ ಗಿನ್ವಾಯಿ ಕೇ ದಿನ್‌. ಜೈಸೆ ತೈಸೆ ನಂಬರ್‌ ಆತಾ ಥಾ, ತೋ ತಬ್‌ ಬೀಡಿ ತೋ ನಿಕಾಲ ದೇತೆ ತೇ [ಬೀಡಿ ಲೆಕ್ಕ ಕೊಡುವ ದಿನ ಉದ್ದದ ಕ್ಯೂ ಇರುತ್ತಿತ್ತು. ಕೊನೆಗೂ ನಮ್ಮ ಸರದಿ ಬಂದಾಗ ಠೇಕೆದಾರ ಕೊಂಢು ಹೋದ ಬೀಡಿಯಲ್ಲಿ ಅರ್ಧವನ್ನು ತಿರಸ್ಕರಿಸುತ್ತಿದ್ದ” ಎಂದು ಜಾನು ಅಂದಿನ ದಿನಗಳ ಆತಂಕ ಮತ್ತು ಕಾಯುವಿಕೆಯನ್ನು ನೆನಪಿಸಿಕೊಂಡು ಹೇಳುತ್ತಾರೆ.

ಉದ್ದ, ದಪ್ಪ, ಎಲೆಗಳ ಗುಣಮಟ್ಟ ಮತ್ತು ಕಟ್ಟುವಿಕೆಯಂತಹ ಹಲವಾರು ಮಾನದಂಡಗಳ ಆಧಾರದ ಮೇಲೆ ಬೀಡಿಗಳನ್ನು ತಿರಸ್ಕರಿಸಲಾಗುತ್ತದೆ. "ಸುತ್ತುವಾಗ ಎಲೆಗಳು ಒಡೆದು ಸ್ವಲ್ಪ ಹರಿದುಹೋದರೆ, ಅಥವಾ ದಾರವನ್ನು ಸಡಿಲವಾಗಿ ಕಟ್ಟಿದರೆ, ಬೀಡಿಗಳು ತಿರಸ್ಕೃತವಾಗುತ್ತವೆ" ಎಂದು 60 ವರ್ಷದ ಓರ್ವ ಬೀಡಿ ಮಜ್ದೂರ್ ಹೇಳುತ್ತಾರೆ. ತಿರಸ್ಕೃತ ಬೀಡಿಗಳನ್ನು ಠೇಕೆದಾರರೇ ಇರಿಸಿಕೊಂಡು ಅವುಗಳನ್ನು ಅಗ್ಗದ ಬೆಲೆಗೆ ಮಾರುತ್ತಾರೆ. “ಆದರೆ ಅದಕ್ಕೆ ನಮಗೆ ಯಾವುದೇ ಬಟವಾಡೆ ಸಿಗುತ್ತಿರಲಿಲ್ಲ. ಜೊತೆಗೆ ತಿರಸ್ಕೃತಗೊಂಡ ಬೀಡಿಯನ್ನೂ ಮರಳಿಸುತ್ತಿರಲಿಲ್ಲ.”

*****

ಕೇಂದ್ರ ಸರ್ಕಾರವು 1977ರಲ್ಲಿ ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ಕಾಯ್ದೆ, 1976ರ ಅಡಿಯಲ್ಲಿ ಬೀಡಿ ತಯಾರಿಕೆಯಲ್ಲಿ ತೊಡಗಿರುವ ಎಲ್ಲರಿಗೂ ಬೀಡಿ ಕಾರ್ಡುಗಳನ್ನು ನೀಡಲು ಪ್ರಾರಂಭಿಸಿತು. ಬೀಡಿ ಕಾರ್ಮಿಕರನ್ನು ಗುರುತಿಸುವುದು ಬೀಡಿ ಕಾರ್ಡುಗಳ ಮುಖ್ಯ ಉದ್ದೇಶವಾಗಿದ್ದರೂ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ಹೆರಿಗೆ ಪ್ರಯೋಜನಗಳು, ಮೃತರ ಅಂತಿಮ ವಿಧಿಗಳಿಗೆ ನಗದು, ಕಣ್ಣಿನ ತಪಾಸಣೆ ಮತ್ತು ಕನ್ನಡಕ, ಬೀಡಿ ತಯಾರಕರ ಶಾಲೆಗೆ ಹೋಗುವ ಮಕ್ಕಳಿಗೆ ವಿದ್ಯಾರ್ಥಿವೇತನ, ಶಾಲಾ ಸಮವಸ್ತ್ರ ಅನುದಾನ ಮುಂತಾದ ಹಲವಾರು ಸರ್ಕಾರಿ ಯೋಜನೆಗಳನ್ನು ಪಡೆಯಲು ಇದು ಅನುವು ಮಾಡಿಕೊಡುತ್ತದೆ. ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗದ ಷರತ್ತುಗಳು) ಕಾಯ್ದೆ, 1966 ಈ ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಹೆಚ್ಚಾಗಿ, ಬೀಡಿ ಕಾರ್ಮಿಕರು ನಿರ್ದಿಷ್ಟ ಔಷಧಾಲಯಗಳಿಂದ ಉಚಿತ ಅಥವಾ ಸಬ್ಸಿಡಿ ಔಷಧಿಗಳನ್ನು ಪಡೆಯಲು ಕಾರ್ಡ್ ಗಳನ್ನು ಬಳಸುತ್ತಾರೆ.

“ಜ್ಯಾದಾ ಕುಚ್‌ ನಹೀ ಲೀಕಿನ್‌ ಬದನ್‌ ದರ್ದ್‌, ಬುಖಾರ್‌ ಕೀ ದವಾಯಿತೋ ಮಿಲ್‌ ಜಾತಿ ಹೈ [ಹಚ್ಚೇನೂ ಅಲ್ಲದಿದ್ದರೂ ಜ್ವರ, ಮೈಕೈ ನೋವಿನ ಮಾತ್ರೆಗಳು ಸಿಗುತ್ತವೆ]” ಎಂದು ದಮೋ ಪಟ್ಟಣದ ಖುಷ್ಬೂ ರಾಜ್ (30) ಹೇಳುತ್ತಾರೆ. ಅವರು 11 ವರ್ಷಗಳಿಂದ ಬೀಡಿ ಕಟ್ಟುತ್ತಿದ್ದರು ಆದರೆ ಇತ್ತೀಚೆಗೆ ದಮೋ ನಗರದ ಸಣ್ಣ ಬಳೆ ಅಂಗಡಿಯಲ್ಲಿ ಮಾರಾಟ ಸಹಾಯಕರಾಗಿ ಕೆಲಸ ಮಾಡಲಾರಂಭಿಸಿದ್ದಾರೆ.

PHOTO • Kuhuo Bajaj

ಬೀಡಿ ಕಾರ್ಡ್ ಕಾರ್ಮಿಕರನ್ನು ಗುರುತಿಸುತ್ತದೆ

ಈ ಕಾರ್ಡ್‌ ಅನೇಕ ಪ್ರಯೋಜನಗಳನ್ನು ಹೊಂದಿದೆ, ಆದರೆ ಹೆಚ್ಚಿನ ಬೀಡಿ ಕಾರ್ಮಿಕರು ಇದನ್ನು ಉಚಿತ ಅಥವಾ ಸಬ್ಸಿಡಿ ಔಷಧಿಗಳನ್ನು ಪಡೆಯಲು ಬಳಸುತ್ತಾರೆ. ಈ ಕಾರ್ಡ್‌ ಪಡೆಯುವ ಪ್ರಕ್ರಿಯೆಯಲ್ಲೂ ಶೋಷಣೆ ಅಡಗಿದೆ

ಕಾರ್ಡನ್ನು ಪಡೆಯಲು “ಅಧಿಕಾರಿಗಳ ಎದುರು ಬೀಡಿ ಕಟ್ಟಿ ತೋರಿಸಬೇಕು” ಎನ್ನುತ್ತಾರೆ ಖಷ್ಬೂ. “ಸರ್ಕಾರಿ ಆಫೀಸರ್‌ ದೇಖ್ತೇ ಹೂ ಕೀ ಸಹಿ ಮೇ ಬೀಡಿ ಬನ್ತಿ ಹೇ ಯಾ ಸಿರ್ಫ್‌ ಐಸೇಹೀ ಕಾರ್ಡ್‌ ಬನ್ವಾ ರಹೇ ಹೇ [ಸರ್ಕಾರಿ ಅಧಿಕಾರಿಗಳು ನಾವು ನಿಜವಾಗಿಯೂ ಬೀಡಿ ಕಟ್ಟುವವರೋ ಅಥವಾ ಸುಮ್ಮನೆ ಕಾರ್ಡ್‌ ಮಾಡಿಸಿಕೊಳ್ಳುತ್ತಿದ್ದೇವೆಯೋ ಎನ್ನುವುದನ್ನು ಪರೀಕ್ಷಿಸಲು ಹೀಗೆ ಮಾಡಲಾಗುತ್ತದೆ]” ಎಂದು ಅವರು ವಿವರಿಸುತ್ತಾರೆ.

“ಕಾರ್ಡ್‌ ಮಾಡಿಸಿದರೆ ಅದಕ್ಕೆ ನಮ್ಮ ಬಟವಾಡೆಯಿಂದ ಹಣ ಕಡಿತ ಮಾಡಿಕೊಳ್ಳುತ್ತಾರೆ” ಎಂದು ತನ್ನ ಹಿಂದಿನ ಹಳ್ಳಿಯಲ್ಲಿ ಕಾರ್ಡ್‌ ಹೊಂದಿದ್ದ ಮಹಿಳೆಯೊಬ್ಬರು ಇದರಲ್ಲಿನ ವಂಚನೆಯತ್ತ ಬೆರಳು ತೋರಿಸುತ್ತಾರೆ. ಆದರೆ ಮಾಲೀಕರು ಕಾರ್ಮಿಕರಿಂದ ಹಣವನ್ನು ಕಡಿತಗೊಳಿಸಿ ಅದನ್ನು ನಿಧಿಗೆ ಬಳಸುತ್ತಾರೆ ಎಂದು ಅವರು ಹೇಳಿದರು. 1976ರ ಕಾಯ್ದೆಯಡಿ ಸರ್ಕಾರವು ಈ ನಿಧಿಗೆ ಸಮಾನ ಮೊತ್ತವನ್ನು ನೀಡುತ್ತದೆ. ಕಾರ್ಮಿಕರು ಈ ಹಣವನ್ನು ಉಲ್ಲೇಖಿಸಿದ ಕೆಲವು ಯೋಜನೆಗಳ ಅಡಿಯಲ್ಲಿ ಹಿಂಪಡೆಯಬಹುದು ಅಥವಾ ಅವರು ಬೀಡಿ ತಯಾರಿಸುವುದನ್ನು ನಿಲ್ಲಿಸಿದ ನಂತರ ಸಂಪೂರ್ಣ ಠೇವಣಿಯನ್ನು ಮರಳಿ ಪಡೆಯಬಹುದು.

ಎರಡು ತಿಂಗಳ ಹಿಂದೆ ಬೀಡಿ ಕಟ್ಟುವುದನ್ನು ನಿಲ್ಲಿಸಿದ ಖುಷ್ಬೂ ಅವರಿಗೆ 3,000 ರೂ. ದೊರಕಿತು. ಕೆಲವು ಕಾರ್ಮಿಕರಿಗೆ, ಈ ನಿಧಿ ವ್ಯವಸ್ಥೆಯು ಪ್ರಯೋಜನಕಾರಿ ಎಂದು ತೋರುತ್ತದೆ, ಆದರೆ ಇನ್ನೂ ಅನೇಕರಿಗೆ, ತಮ್ಮ ಶ್ರಮಕ್ಕೆ ಕಡಿಮೆ ವೇತನ ಸಿಗುತ್ತಿದೆ ಎನ್ನುವ ಅಭಿಪ್ರಾಯವಿದೆ. ಇದಲ್ಲದೆ, ಭವಿಷ್ಯದಲ್ಲಿ ನಿಧಿಯ ಹಣವನ್ನು ಅವರಿಗೆ ಹಿಂದಿರುಗಿಸಲಾಗುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ.

ಬೀಡಿ ಕಾರ್ಡ್ ಪ್ರಯೋಜನಕಾರಿಯಾಗಿ ಎಂದು ತೋರಿದರೂ, ಅದನ್ನು ತಯಾರಿಸುವ ಪ್ರಕ್ರಿಯೆ ವಿಷಯದಲ್ಲಿ ಯಾವುದೇ ಮೇಲ್ವಿಚಾರಣೆಯಿಲ್ಲ ಮತ್ತು ಕೆಲವರ ಪಾಲಿಗೆ ಅದು ಶೋಷಕವಾಗಿ ಪರಿಣಮಿಸಬಹುದು. ಮಹಿಳೆಯೊಬ್ಬರು ಸ್ಥಳೀಯ ಕೇಂದ್ರದಲ್ಲಿ ಬೀಡಿ ಕಾರ್ಡ್ ಪಡೆಯಲು ಹೋಗಿದ್ದಾಗ ಅಲ್ಲಿನ ಸಾಹಬ್ (ಅಧಿಕಾರಿ) ನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. "ಅವರು ನನ್ನ ಮೇಲೆ ದೃಷ್ಟಿ ಹಾಯಿಸಿ ಮರುದಿನ ಬರುವಂತೆ ಹೇಳಿದರು. ಮರುದಿನ ನಾನು ಅಲ್ಲಿಗೆ ಹೋದಾಗ, ನನ್ನ ತಮ್ಮನನ್ನು ನನ್ನೊಂದಿಗೆ ಕರೆದೊಯ್ದೆ. ಅವರು ಏಕೆ ತಮ್ಮನನ್ನು ಕರೆದುಕೊಂಡು ಬಂದೆ ಎಂದು ನನ್ನನ್ನು ಕೇಳಿದರು, [ಅವರು] ನಾನು ಒಬ್ಬಂಟಿಯಾಗಿ ಬರಬೇಕಾಗಿತ್ತು ಎಂದು ಹೇಳಿದರು" ಎಂದು ಅವರು ಹೇಳುತ್ತಾರೆ.

ಅವರು ಕಾರ್ಡ್‌ ತೆಗೆದುಕೊಳ್ಳಲು ನಿರಾಕರಿಸಿದಾಗ ಅಧಿಕಾರಿಯು ಆಕೆಯನ್ನು ಪೀಡಿಸಿದ್ದಲ್ಲದೆ ದುರುಗುಟ್ಟಿ ನೋಡಿದ್ದ. “ಒಮ್ಮೆ ನಾನು ಅದೇ ದಾರಿಯಾಗಿ ಹೋಗುತ್ತಿರುವಾಗ ನನ್ನನ್ನು ಕರೆದು ಒಂದಷ್ಟು ರಂಪ ಮಾಡಿದ್ದ” ಎಂದು ಅವರು ನೆನಪಿಸಿಕೊಳ್ಳುತ್ತಾರೆ. “ನಾನು ನೀನು ಭಾವಿಸಿದಂತಹ ಹೆಣ್ಣಲ್ಲ, ನಿನ್ನ ಉದ್ದೇಶಗಳಿಗೆ ನಾನು ಸಹಕರಿಸುವುದಿಲ್ಲ. ಇನ್ನೊಮ್ಮೆ ಹೀಗೆ ಮಾಡಿದರೆ ಇಲ್ಲಿಂದ ವರ್ಗಾವಣೆ ಮಾಡಿಸುತ್ತೇನೆ ಎಂದು ಬೆದರಿಸಿದೆ” ಎಂದು ಆ ಮಹಿಳೆ ಹೇಳಿದರು. “ಬಹುತ್‌ ಹಿಮ್ಮ ಲಗೀ ಥೀ ತಬ್‌ [ಸಾಕಷ್ಟು ಧೈರ್ಯ ಬೇಕಾಗಿತ್ತು ಇಷ್ಟು ಹೇಳಲು]” ಎಂದು ಅವರು ಹೇಳುತ್ತಾರೆ. “ವರ್ಗಾವಣೆಗೂ ಮೊದಲು ಅವನು ಇನ್ನೂ 2-3 ಹೆಂಗಸರ ಜೊತೆ ಇದೇ ರೀತಿ ವರ್ತಿಸಿದ್ದ.”

*****

PHOTO • Kuhuo Bajaj
PHOTO • Kuhuo Bajaj

ಎಡ: ಕಟ್ಟಿದ ಬೀಡಿಗಳು ಪ್ಯಾಕ್ ಆಗಿ ಮಾರಾಟಕ್ಕೆ ಹೊರಡಲು ಸಿದ್ಧವಾಗಿವೆ. ಬಲ: ಮಾಜಿ ಕಾರ್ಮಿಕರಾದ ಅನಿತಾ (ಎಡ) ಮತ್ತು ಜೈನವತಿ (ಬಲ) ಬೀಡಿ ಕಟ್ಟುವ ಕೆಲಸದಲ್ಲಿ ತಾವು ಕಂಡ ಅನುಭವಗಳ ಬಗ್ಗೆ ಮಾತನಾಡುತ್ತಾರೆ

ಮಹಿಳೆಯರು ತಮ್ಮ ಬೀಡಿಯ ಲೆಕ್ಕ ಕೊಡಲು ಇಲ್ಲಿಗೆ ಬಂದಾಗ, ತಮ್ಮ ಸರದಿ ಬರುವ ತನಕ ತಮಗಿರುವ ಬೆನ್ನು ನೋವು ಮತ್ತು ಕೈ ನೋವುಗಳನ್ನು ಮರೆತು ತಮಾಷೆ, ನಗುವಿನೊಂದಿಗೆ ಹೊತ್ತು ಕಳೆಯುತ್ತಾರೆ. ವಾರಕ್ಕೆರಡರಂತೆ ನಡೆಯುವ ಈ ಭೇಟಿಗಳು ಅವರಲ್ಲಿ ಸಮುದಾಯದ ಪ್ರಜ್ಞೆಯನ್ನು ಮೂಡಿಸುತ್ತವೆ.

“ಇಲ್ಲಿಗೆ ಬಂದಾಗ ಇದೆಲ್ಲಾ ತಮಾಷೆಗಳು ನಡೆಯುತ್ತಿರುತ್ತವೆ. ಇದರಿಂದ ಮನಸ್ಸಿಗೆ ಒಂತರಾ ಸಂತೋಷ ಹಾಗೂ ನೆಮ್ಮದಿ ದೊರೆಯುತ್ತದೆ. ಕನಿಷ್ಟ ಈ ನೆಪದಲ್ಲಾದರೂ ನಾನು ಮನೆಯಿಂದ ಹೊರಬರಬಹುದು” ಎಂದು ಮಹಿಳೆಯೊಬ್ಬರು ಈ ವರದಿಗಾರರಿಗೆ ತಿಳಿಸಿದರು.

ಇತ್ತೀಚಿನ ಕುಟುಂಬದಲ್ಲಿ ಆಗುಹೋಗುಗಳ ಬಗ್ಗೆ ಗಾಸಿಪ್, ಅವರ ಮಕ್ಕಳು ಅಥವಾ ಮೊಮ್ಮಕ್ಕಳ ವರ್ತನೆಗಳು ಮತ್ತು ಪರಸ್ಪರರ ಆರೋಗ್ಯದ ಬಗೆಗಿನ ಚಿಂತೆಗಳನ್ನು ಇಲ್ಲಿ ಹಂಚಿಕೊಳ್ಳಲಾಗುತ್ತದೆ. ಉದಾಹರಣೆಗೆ, ಸೀಮಾ ತನ್ನ ನಾಲ್ಕು ವರ್ಷದ ಮೊಮ್ಮಗ ತನ್ನ ತಾಯಿ ಬೆಳಿಗ್ಗೆ ಜಾನುವಾರುಗಳಿಗೆ ಹಾಲು ಕರೆಯುತ್ತಿದ್ದಾಗ ಉಪದ್ರವ ನೀಡಿದ್ದಕ್ಕೆ ಹಸು ಕಾಲಿನಿಂದ ಹೇಗೆ ಒದೆಯಿತು ಎಂಬುದನ್ನು ವಿವರಿಸಿದರೆ. ಇನ್ನೊಬ್ಬರು ನಗುತ್ತಾ ನಂತರ ತನ್ನ ನೆರೆಮನೆಯವರೊಬ್ಬರ ಮಗಳ ಮದುವೆಗೆ ಸಂಬಂಧಿಸಿದ ಇತ್ತೀಚಿನ ಸುದ್ದಿಯನ್ನು ಹಂಚಿಕೊಂಡರು.

ಅದರೆ ಮನೆಗೆ ಹೊರಡುವ ಹೊತ್ತಿಗೆ ಅವರಲ್ಲಿ ಆ ಸಂತೋಷ ಹಾಗೂ ಸಮಾಧಾನ ಉಳಿದಿರುವುದಿಲ್ಲ. ಅವೆಲ್ಲವನ್ನೂ ಕಡಿಮೆ ಮೊತ್ತದ ಬಟವಾಡೆ ಕಿತ್ತುಕೊಳ್ಳುತ್ತದೆ. ಸೀಮಿತ ಆದಾಯದಲ್ಲಿ ಮನೆ ನಡೆಸಬೇಕಾದ ನೋವಿನ ಮುಂದೆ ಯಾವ ಸಂತಸವೂ ಉಳಿಯುವುದಿಲ್ಲ. ಪ್ರತಿವಾರ ನಾಲ್ಕು ಕಾಸು ದುಡಿಯಲು ಅವರು ತಮ್ಮ ಆರೋಗ್ಯ ಮತ್ತು ದುಡಿಮೆ ಎರಡನ್ನೂ ಬಲಿ ಕೊಡಬೇಕು. ಆ ನಿಟ್ಟಿನಲ್ಲಿ ನೋಡಿದಾಗ ಈ ಸಂಪಾದನೆ ತೀರಾ ಅನ್ಯಾಯವಾಗಿ ತೋರುತ್ತದೆ.

“ಬೆನ್ನು, ಕೈ, ತೋಳುಗಳು ಎಲ್ಲವೂ ನೋಯುತ್ತಿದ್ದವು. ದಿನಾ ಬೀಡಿ ಕಟ್ಟುವುದರಿಂದ ಬೆರಳುಗಳು ತೆಳುವಾಗಿ ಗಡ್ಡೆ ಕಟ್ಟಿಕೊಂಡಿರುತ್ತಿದ್ದವು.” ಎಂದು ಸೀಮಾ ತಮ್ಮ ಕೆಲಸದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಇದೆಲ್ಲ ಸಂಕಟ ಮತ್ತು ಚಿಂತೆಗಳ ನಡುವೆಯೂ ಮಧ್ಯಪ್ರದೇಶದ ಬೀಡಿ ಕಟ್ಟುವ ಮಹಿಳೆಯರು ಅತ್ಯಂತ ಕಡಿಮೆ ಸಂಬಳಸ ನಡುವೆಯೂ ಇದೇ ಕೆಲಸ ಮುಂದುವರೆಸುತ್ತಿದ್ದಾರೆ. ಅನಿತಾ ಅವರು ಹೇಳುವಂತೆ “ಅಬ್‌ ಕ್ಯಾ ಕರೇ, ಸಬ್ಕಿ ಅಪ್ನಿ ಮಜ್ಬೂರಿ ಹೋತಿ ಹೈ [ಏನು ಮಾಡಲು ಸಾಧ್ಯ? ಎಲ್ಲರಿಗೂ ಅವರದ್ದೇ ಆದ ಕಷ್ಟಗಳಿರುತ್ತವೆ].”

ಈ ವರದಿಯಲ್ಲಿನ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ

ಅನುವಾದ: ಶಂಕರ. ಎನ್. ಕೆಂಚನೂರು

Student Reporter : Kuhuo Bajaj

Kuhuo Bajaj is an undergraduate student of Economics, Finance and International Relations at Ashoka University. She is keen to cover stories on rural India.

Other stories by Kuhuo Bajaj
Editor : PARI Desk

PARI Desk is the nerve centre of our editorial work. The team works with reporters, researchers, photographers, filmmakers and translators located across the country. The Desk supports and manages the production and publication of text, video, audio and research reports published by PARI.

Other stories by PARI Desk
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru