ಇನ್ನೇನು ಫಗುನ್‌ ತಿಂಗಳು ಬರುವುದರಲ್ಲಿತ್ತು. ಒಂದು ಆಲಸಿ ಭಾನುವಾರದ ದಿನ ಬೆಳಗಿನ ಹೊತ್ತು ಸುರೇಂದ್ರನಗರ ಜಿಲ್ಲೆಯ ಖಾರಗೋಡಾ ಸ್ಟೇಷನ್‌ ಬಳಿಯ ಕಾಲುವೆಯಲ್ಲಿ ಸೂರ್ಯ ಮುಖ ತೊಳೆದುಕೊಳ್ಳುತ್ತಿದ್ದ. ಕಾಲುವೆಗೆ ಅಡ್ಡಲಾಗಿ ಇಡಲಾಗಿದ್ದ ಒಂದು ತಾತ್ಕಾಲಿಕ ತಡೆ ನೀರು ಮುಂದಕ್ಕೆ ಹರಿಯದಂತೆ ತಡೆಯುತ್ತಿತ್ತು. ನಿಂತ ನೀರು ಅಲ್ಲೇ ಒಂದು ಸಣ್ಣ ಕೆರೆಯನ್ನು ಸೃಷ್ಟಿಸಿತ್ತು. ಆ ತಡೆಯಿಂದ ಬೀಳುತ್ತಿದ್ದ ನೀರಿನ ಸದ್ದು ಅಲ್ಲಿ ಧ್ಯಾನ ಮಾಡುತ್ತಾ ಕುಳಿತ ಮಕ್ಕಳಿಗಿಂತ ಜೋರಾಗಿ ಸದ್ದು ಮಾಡುತ್ತಾ ಹರಿಯುತ್ತಿತ್ತು. ಏಳು ಜನ ಹುಡುಗರು ಗಾಳಿ ಇಲ್ಲದ ಕಾರಣ ಅಲುಗಾಡದ ಸಣ್ಣ ಮರಗಳಂತೆ ಸ್ಥಿರವಾಗಿ ಸಾಲಾಗಿ ಕುಳಿತಿದ್ದರು. ಅವರು ಅಲ್ಲಿ ಮೀನು ಹಿಡಿಯುವಲ್ಲಿ ನಿರತರಾಗಿದ್ದರು. ಗಾಳದ ಹಗ್ಗ ಅಲುಗಾಡುತ್ತಿದ್ದಂತೆ ಹುಡುಗ ಗಾಳವನ್ನು ಮೇಲಕ್ಕೆತ್ತುತ್ತಾನೆ. ಕೆಲವು ನಿಮಿಷ ಫಡಫಡಿಸಿದ ಮೀನು ನಂತರ ಸಾಯುತ್ತದೆ.

ಅಲ್ಲಿಂದ ಸ್ವಲ್ಪ ದೂರದಲ್ಲಿ ಅಕ್ಷಯ್‌ ದರೋದರ, ಮಹೇಶ್‌ ಸಿಪಾರಾ ಮಾತನಾಡುತ್ತುಅ, ಕೂಗುತ್ತಾ, ಕಚ್ಚಾಡುತ್ತಾ ಆಣೆ ಮಾಡುತ್ತಾ ಹ್ಯಾಕ್‌ ಸಾ ಬ್ಲೇಡ್‌ ಒಂದನ್ನು ಬಳಸಿ ಮೀನನ್ನು ಮೀನನ್ನು ಕ್ಲೀನ್‌ ಮಾಡಿ ನಂತರ ಕತ್ತರಿಸತೊಡಗಿದರು. ಮಹೇಶನಿಗೆ ಸುಮಾರು 15 ವರ್ಷ. ಉಳಿದ ಆರು ಜನ ಇನ್ನೂ ಸ್ವಲ್ಪ ಚಿಕ್ಕವರು. ಮೀನು ಹಿಡಿಯುವ ಆಟ ಮುಗಿದಿತ್ತು. ಇದೀಗ ಆಟವಾಡುತ್ತಾ, ಮಾತನಾಡುತ್ತಾ ಸಂತಸ ಅನುಭವಿಸುವ ಸಮಯ. ಅಷ್ಟು ಹೊತ್ತಿಗೆ ಮೀನು ಸ್ವಚ್ಛಗೊಳಿಸುವ ಕೆಲಸ ಮುಗಿದಿತ್ತು. ಇದೀಗ ಸಾಮೂಹಿಕವಾಗಿ ಮೀನಿನ ಅಡುಗೆ ಮಾಡುವ ಸಮಯ. ಅಡುಗೆ ಮುಗಿದ ನಂತರ ಮೀನನ್ನು ಹಂಚಿಕೊಂಡು ತಿಂದು ಸಂಭ್ರಮಪಡುವ ಘಳಿಗೆಯೂ ಬಂದಿತು.

ಸ್ವಲ್ಪ ಸಮಯದ ನಂತರ ಅದೇ ಕೊಳಕ್ಕೆ ಜಿಗಿದ ಹುಡುಗರು ಕಲಕಲವೆಬ್ಬಿಸುತ್ತಾ ಈಜುತ್ತಾರೆ. ನಂತರ ಮೇಲೆ ಬಂದು ಅಲ್ಲಿದ್ದ ತೆಳು ಹುಲ್ಲಿನ ಸ್ಥಳದಲ್ಲಿ ನಿಂತು ತಮ್ಮ ಮೈ ಒಣಗಿಸಿಕೊಂಡರು. ಈ ಏಳು ಹುಡುಗರಲ್ಲಿ ಮೂವರು ಚುಮವಾಲಿಯಾ ಡಿನೋಟಿಫೈಡ್ ಅಲೆಮಾರಿ ಬುಡಕಟ್ಟು ಜನಾಂಗಕ್ಕೆ ಸೇರಿದವರು, ಇಬ್ಬರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾದರೆ ಇನ್ನಿಬ್ಬರು ಇತರ ಸಮುದಾಯಗಳಿಗೆ ಸೇರಿದವರು. ಸ್ನಾನ ಮುಗಿದ ನಂತರ ಈ ಏಳೂ ಜನರು ಪ್ರಸ್ಪರ ಛೇಡಿಸುತ್ತಾ, ಮಾತನಾಡುತ್ತಾ ಅಲ್ಲೇ ಓಡಾಡತೊಡಗಿದರು. ಅವರ ಬಳಿಗೆ ಹೋದ ನಾನು ಮೌನ ಮುರಿಯುವ ಸಲುವಾಗಿ ಅವರ ಬಳಿ “ಹೋಯ್‌ ನೀವೆಲ್ಲ ಎಷ್ಟನೇ ಕ್ಲಾಸಿನಲ್ಲಿ ಓದುತ್ತಿದ್ದೀರಿ?” ಎಂದು ಕೇಳಿದೆ.

ಇನ್ನೂ ಬಟ್ಟೆ ಹಾಕಿಕೊಂಡಿರದೆ ನಗುತ್ತಾ ನಿಂತಿದ್ದ ಪವನ್‌, ನಗುತ್ತಾ, “ಆ ಮೆಸಿಯೋ ನವಾಮು ಭಾಣಾ, ಆನ್‌ ಆ ವಿಲಾಸಿಯೋ ಛಟ್ಠು ಭಾಣಾ. ಬಿಜ್ಜು ಕೋಯ್‌ ನಾಥ್‌ ಬಾಣಾಟುಮು ವೈ ನಾಥ್‌ ಭಾಣಾತೋ [ಇವನು ಮಹೇಶಿಯೋ (ಮಹೇಶ್)‌ ಒಂಬತ್ತನೇ ತರಗತಿ, ಮತ್ತು ವಿಲಾಸಿಯೋ (ವಿಲಾಸ್)‌ ಆರನೇ ತರಗತಿ. ಉಳಿದ ಯಾರೂ ಶಾಲೆಗೆ ಹೋಗುತ್ತಿಲ್ಲ. ನಾನೂ ಕೂಡಾ].” ಅವನು ಮಾತನಾಡುತ್ತಾ ಒಂದು ಚೀಲದಿಂದ ಅಡಿಕೆ ಹೊರತೆಗದು ಅದನ್ನು ಚೂರು ಮಾಡಿದ. ನಂತರ ಅದಕ್ಕೆ ಸುಣ್ಣವನ್ನು ಬೆರೆಸುತ್ತಲೇ ನನ್ನೊಂದಿಗೆ ಮಾತನಾಡಿದ. ಅದನ್ನು ಚೆನ್ನಾಗಿ ಪುಡಿ ಮಾಡಿ, ಅದರಲ್ಲೇ ಒಂದು ಚಿಟಿಕೆಯನ್ನು ತನ್ನ ತುಟಿಗಳ ನಡುವೆ ಇಟ್ಟುಕೊಂಡು, ಉಳಿದಿದ್ದನ್ನು ಗೆಳೆಯರಿಗೆ ನೀಡಿದ. ಕೆಂಪು ರಸವನ್ನು ನೀರಿಗೆ ಉಗಿದು ಪವನ್‌ ಮಾತು ಮುಂದುವರೆಸಿದ, “ನೋ ಮಜಾ ಆವೇ. ಬೆನ್‌ ಮಾರ್ತಾತಾ. [ಓದುವುದರಲ್ಲಿ ಏನೂ ಮಜಾ ಇಲ್ಲ. ಟೀಚರ್‌ ಹೊಡೆಯುತ್ತಿದ್ದರು.” ಅವನು ಮಾತು ಮುಗಿಸುತ್ತಿದ್ದ ಹಾಗೆ ನನ್ನೊಳಗೆ ಒಂದು ಮೌನ ನೆಲೆಸಿತು.

PHOTO • Umesh Solanki

ಶಾರುಖ್ ( ಎಡ ) ಮತ್ತು ಸೋಹಿಲ್ ಮೀನು ಹಿಡಿಯುವುದರಲ್ಲಿ ಮಗ್ನರಾಗಿದ್ದಾರೆ

PHOTO • Umesh Solanki

ಮಹೇಶ್ ಮತ್ತು ಅಕ್ಷಯ್ ಮೀನುಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ

PHOTO • Umesh Solanki

ಸಿಕ್ಕ ಕಲ್ಲುಗಳನ್ನಿಟ್ಟು ಹೂಡಲಾದ ಒಲೆ. ಕೃಷ್ಣ ಅಕೇಶಿಯಾ ಗಿಡದ ಸೌದೆಗಳನ್ನು ಒಲೆಗೆ ಹಾಕಿ ಪ್ಲಾಸ್ಟಿಕ್‌ ಕವರ್‌ ಸಹಾಯದೊಂದಿಗೆ ಸೌದೆಗೆ ಬೆಂಕಿ ಹಚ್ಚುತ್ತಾನೆ

PHOTO • Umesh Solanki

ಅಕ್ಷಯ್ ಮತ್ತು ವಿಶಾಲ್ , ಪವನ್ ಕುತೂಹಲದಿಂದ ಕಾಯುತ್ತಿರುವಾಗ , ಕೃಷ್ಣ ಬಾಣಲೆಯಲ್ಲಿ ಎಣ್ಣೆಯನ್ನು ಸುರಿ ಯುತ್ತಿದ್ದಾನೆ

PHOTO • Umesh Solanki

ಆ ಹುಡುಗರಲ್ಲೇ ಒಬ್ಬ ತಂದ ಬಾಣಲೆಗೆ ಈಗ ಮೀನುಗಳನ್ನು ಹಾಕಲಾಗುತ್ತದೆ. ಸೋಹಿಲ್‌ ಎಣ್ಣೆ, ಮೆಣಸಿನ ಪುಡಿ, ಅರಿಶಿನ ತಂದಿದ್ದರೆ, ವಿಶಾಲ್‌ ಎಣ್ಣೆ ಮತ್ತು ಉಪ್ಪನ್ನು ತಂದಿದ್ದ

PHOTO • Umesh Solanki

ಕೃಷ್ಣ ತನ್ನ ಊಟಕ್ಕಾಗಿ ಕಾಯುತ್ತಿರುವುದು

PHOTO • Umesh Solanki

ಅಡುಗೆಯ ಆಟ ಮುಂದಕ್ಕೆ ಸಾಗುತ್ತಿದೆ. ಹುಡುಗರು ಉತ್ಸಾಹದ ಬುಗ್ಗೆಯಾಗಿದ್ದಾರೆ

PHOTO • Umesh Solanki

ತಾವೇ ಕಟ್ಟಿದ್ದ ಟಾರ್ಪಾಲಿನ್‌ ಕವರ್‌ ಅಡಿಯಲ್ಲಿನ ನೆರಳಿನಲ್ಲಿ ಕುಳಿತು ಹುಡುಗರು ತಾವೇ ತಯಾರಿಸಿದ ಮೀನಿನೊಂದಿಗೆ ಮನೆಯಿಂದ ತಂದಿದ್ದ ರೊಟ್ಟಿಯನ್ನು ಸವಿದು ಆನಂದಿಸಿದರು

PHOTO • Umesh Solanki

ಒಂದು ಕಡೆ ಮಸಾಲೆಭರಿತ ಮೀನು ಸಾರು ಇನ್ನೊಂದೆಡೆ ಮಧ್ಯಾಹ್ನದ ಉರಿಬಿಸಿಲು

PHOTO • Umesh Solanki

ಬಿಸಿಲು ಮತ್ತು ಬೆವರು ಈಜಿಗೆ ಆಹ್ವಾನಿಸುತ್ತವೆ

PHOTO • Umesh Solanki

ʼ ಬನ್ನಿ, ಈಜೋಣʼ ಎನ್ನುತ್ತಾ ಮಹೇಶ ನೀರಿಗೆ ಜಿಗಿಯುತ್ತಿದ್ದಾನೆ

PHOTO • Umesh Solanki

ಶಾಲೆಯಲ್ಲಿ ಟೀಚರ್‌ ಹೊಡೆಯುತ್ತಾರೆನ್ನುವ ಕಾರಣಕ್ಕೆ ಏಳು ಹುಡುಗರಲ್ಲಿ ಐವರು ಶಾಲೆಗೆ ಹೋಗುತ್ತಿಲ್ಲ

PHOTO • Umesh Solanki

ಅವರು ಈಜಬೇಕೆನಿಸಿದಾಗ ಈಜುತ್ತಾರೆ, ಆದರೆ ಉಳಿದ ಸಮಯ ಪೂರ್ತಿ ಆಡುತ್ತಾ ಬದುಕು ಕಲಿಸಿದ್ದನ್ನು ಕಲಿಯುತ್ತಾರೆ

ಅನುವಾದ: ಶಂಕರ. ಎನ್. ಕೆಂಚನೂರು

Umesh Solanki

Umesh Solanki is an Ahmedabad-based photographer, reporter, documentary filmmaker, novelist and poet. He has three published collections of poetry, one novel-in-verse, a novel and a collection of creative non-fiction to his credit.

Other stories by Umesh Solanki
Editor : Pratishtha Pandya

Pratishtha Pandya is a Senior Editor at PARI where she leads PARI's creative writing section. She is also a member of the PARIBhasha team and translates and edits stories in Gujarati. Pratishtha is a published poet working in Gujarati and English.

Other stories by Pratishtha Pandya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru