ತಮ್ಮ ಚಾಚಿದ ಅಂಗೈ ಮೇಲೆ ತೆಂಗಿನಕಾಯಿ ಹಿಡಿದುಕೊಂಡಿದ್ದ ಪೂಜಾರಿ ಆಂಜನೇಯಲು ಮುದ್ದಲಾಪುರದಲ್ಲಿನ ತೋಟದ ಮೂಲಕ ನಡೆಯತೊಡಗಿದರು. ಅವರು ತನ್ನ ಕೈಯಲ್ಲಿದ್ದ ತೆಂಗಿನಕಾಯಿ ತಿರುಗುವುದು, ಬಾಗುವುದು ಅಥವಾ ಬೀಳುವುದನ್ನು ಮಾಡುವುದನ್ನು ಕಾಯುತ್ತಿದ್ದರು. ನಂತರ ತೆಂಗು ಯಾವುದೋ ಒಂದನ್ನು ಮಾಡಿತು. ಅವರು ಅಲ್ಲೊಂದು ಗುಣಿಸು ಚಿನ್ಹೆ ಹಾಕಿ ಇಲ್ಲಿ ನೀವು ನೀರನ್ನು ಕಾಣಬಹುದು. ಈ ನಿಖರವಾದ ಸ್ಥಳದಲ್ಲಿ ಕೊಳವೆಬಾವಿಯನ್ನು ಕೊರೆಸಿದರೆ ನೀವು ನೋಡುತ್ತೀರಿ" ಎಂದು ಭರವಸೆ ನೀಡಿದರು. ಇದು ನಡೆದಿದ್ದು ಅನಂತಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ.

ಕೇವಲ ಒಂದು ಹಳ್ಳಿಯ ದೂರದಲ್ಲಿ, ರಾಯುಲು ಧೋಮತಿಮ್ಮನ್ನ ಮತ್ತೊಂದು ಹೊಲದಲ್ಲಿ ಬಾಗಿ ನಡೆಯುತಿದ್ದರು. ಅವರ ಕೈಯಲ್ಲಿದ್ದ ಕವೆಗೋಲು ಅವರಿಗೆ ನೀರಿನ ದಾರಿಯನ್ನು ತೋರುತ್ತಿತ್ತು. “ಕವೆಗೋಲು ಮೇಲ್ಭಾಗಕ್ಕೆ ತಿರುಗಿದ ಸ್ಥಳದಲ್ಲಿ ನೀರಿರುತ್ತದೆ” ಎಂದು ಅವರು ಹೇಳುತ್ತಾರೆ.  “ಇದರಲ್ಲಿ ಶೇಕಡಾ 90ರಷ್ಟು ಯಶಸ್ಸು ಸಿಗುತ್ತದೆ” ಎಂದು ಅವರು ತಮ್ಮ ತಂತ್ರದ ಕುರಿತು ವಿವರಿಸಿದರು.

ಅನಂತಪುರದ ಇನ್ನೊಂದು ಮಂಡಲದ ಚಂದ್ರಶೇಖರ್ ರೆಡ್ಡಿ ಯುಗಾಂತರಗಳಿಂದ ದಾರ್ಶನಿಕರನ್ನು ಗೊಂದಲಕ್ಕೀಡು ಮಾಡಿದ ಪ್ರಶ್ನೆಯೊಂದಿಗೆ ಸೆಣಸಾಡುತ್ತಿದ್ದಾರೆ. ಸಾವಿನ ನಂತರ ಬದುಕಿದೆಯೇ ಎನ್ನುವುದು ಆ ಪ್ರಶ್ನೆ, ರೆಡ್ಡಿಯವರ ಪ್ರಕಾರ ಅವರಿಗೆ ಇದಕ್ಕೆ ಉತ್ತರ ತಿಳಿದಿದೆ. "ನೀರೇ ಜೀವನ" ಎನ್ನುವ ಅವರು ಸ್ಮಶಾನದಲ್ಲಿ ನಾಲ್ಕು ಕೊಳವೆಬಾವಿಗಳನ್ನು ಕೊರೆಸಿದ್ದಾರೆ. ಅದರ ಜೊತೆಗೆ ಅವರ ಹೊಲದಲ್ಲೂ 32 ಕೊಳವೆಬಾವಿಗಳಿವೆ. ಅವರು ತಮ್ಮ ನೀರಿನ ಮೂಲವನ್ನು ಜಂಬುಲದಿನ್ನ ಗ್ರಾಮದ ಉದ್ದಕ್ಕೂ 8 ಕಿಲೋಮೀಟರ್ ಉದ್ದದ ಪೈಪ್‌ಲೈನ್‌ ಬಳಸಿ ಸಂಪರ್ಕಗೊಳಿಸಿದ್ದಾರೆ.

ಮೂಢನಂಬಿಕೆ, ಮಾಂತ್ರಿಕತೆ, ದೇವರು, ಸರ್ಕಾರ, ತಂತ್ರಜ್ಞಾನ ಮತ್ತು ತೆಂಗಿನಕಾಯಿ ಇವೆಲ್ಲವೂ ಅನಂತಪುರದಲ್ಲಿ ಇಲ್ಲಿನ ಜನರ ನೀರು ಹುಡುಕುವ ಹತಾಶ ಪ್ರಯತ್ನದಲ್ಲಿ ಭಾಗಿಯಾಗಿವೆ. ಇವುಗಳೆಲ್ಲದ ಸಂಯೋಜಿತ ಯಶಸ್ಸಿನ ಅಷ್ಟೇನೂ ಉತ್ತಮವಿಲ್ಲ. ಆದರೆ ಪೂಜಾರಿ ಆಂಜನೇಯುಲು ಹೇಳುವುದೇ ಬೇರೆ.

ಸಭ್ಯ ಮತ್ತು ಸೌಮ್ಯ ವ್ಯಕ್ತಿತ್ವದ ನಡವಳಿಕೆಯ ಈ ವ್ಯಕ್ತಿ ತನ್ನ ತಂತ್ರ ಎಂದಿಗೂ ವಿಫಲವಾಗುವುದಿಲ್ಲ ಎನ್ನುತ್ತಾರೆ. ಅವರ ಪ್ರಕಾರ ಅವರಿಗೆ ಈ ಕೌಶಲ ದೇವರ ವರ. “ಜನರು ತಪ್ಪು ಸಮಯದಲ್ಲಿ ಈ ವಿದ್ಯೆಯನ್ನು ಪ್ರಯೋಗಿಸುವಂತೆ ಒತ್ತಾಯಿಸಿದಾಗ ಮಾತ್ರ ಈ ತಂತ್ರ ವಿಫಲವಾಗುತ್ತದೆ” ಎಂದು ಅವರು ಹೇಳುತ್ತಾರೆ. (ಈ ದೇವರ ವರ ಪಡೆದ ಮನುಷ್ಯ ಗಂಟೆಗೆ 300 ರೂಪಾಯಿ ಶುಲ್ಕ ವಿಧಿಸುತ್ತಾನೆ). ನಂತರ ನಮ್ಮ ಕೈಯಲ್ಲಿ ತೆಂಗಿನಕಾಯಿ ಹಿಡಿದು ಹೊಲದ ಉದ್ದಕ್ಕೂ ಕರೆದೊಯ್ದರು.

PHOTO • P. Sainath
PHOTO • P. Sainath

ಅನಂತಪುರದ ಮುದ್ದಲಪುರಂನ ಹೊಲಗಳಲ್ಲಿ ಕೊಳವೆಬಾವಿ ಕೊರೆಯಲು ಜಾಗ ಗುರುತಿಸಲು ಪೂಜಾರಿ ಆಂಜನೇಯಲು ತೆಂಗಿನಕಾಯಿಯನ್ನು ಬಳಸುತ್ತಾರೆ

PHOTO • P. Sainath
PHOTO • P. Sainath

ರಾಯುಲು ಧೋಮತಿಮ್ಮನ ರಾಯಲಪ್ಪದೊಡ್ಡಿಯ ಜಲವನ್ನು ಕಂಡು ಹಿಡಿಯುವ ದೈವಿಕ ಶಕ್ತಿಯುಳ್ಳ ವ್ಯಕ್ತಿ. ಅವರು ತಮ್ಮ ತನ್ನ ಕೆಲಸದಲ್ಲಿ ಇದುವರೆಗೆ '90 ಪ್ರತಿಶತ ಯಶಸ್ಸು' ಪಡೆದಿರುವುದಾಗಿ ಹೇಳುತ್ತಾರೆ

ಎಲ್ಲ ತಂತ್ರಗಳ ಕುರಿತಾಗಿಯೂ ಸಂದೇಹಗಳು ಇದ್ದೇ ಇರುತ್ತವೆ. ಈ ವಿಧಾನವನ್ನು ಪ್ರಯತ್ನಿಸಿ ಹಣ ವ್ಯರ್ಥಮಾಡಿಕೊಂಡ ಈ ಅತೃಪ್ತ ರೈತ ಅವರಲ್ಲಿ ಒಬ್ಬರು. ಅವರು ನೋವಿನಿಂದ ಹೇಳುವಂತೆ “ನೀರು ಸಿಕ್ಕಿದ್ದು f@#%*ing* ತೆಂಗಿನಕಾಯಿಯ ಒಳಗೆ ಮಾತ್ರ.”

ಈ ನಡುವೆ ರಾಯುಲು ಅವರ ಕೈಯಲ್ಲಿದ್ದ ಕವೆಗೋಲು ಮೇಲಕ್ಕೆ ಮುಖ ಮಾಡಿತ್ತು. ಅವರು ನೀರಿನ ಇರುವನ್ನು ಕಂಡುಹಿಡಿದಿದ್ದಾರೆ. ಅವರ ಒಂದು ಬದಿಗೆ ಒಂದು ಕೆರೆಯಿದ್ದರೆ ಇನ್ನೊಂದು ಬದಿಗೆ ಕೆಲಸ ಮಾಡುತ್ತಿರುವ ಕೊಳವೆಬಾಯಿತ್ತು. ರಾಯುಲು ತಾನು ದೇವರನ್ನು ನಂಬುವುದಿಲ್ಲ ಎನ್ನುವುದಾಗಿ ಹೇಳುತ್ತಾರೆ. “ನನ್ನ ಈ ಕೌಶಲ ನನ್ನನ್ನು ಕೋರ್ಟಿನ ಕಟಕಟೆಯಲ್ಲಿ ನಿಲ್ಲುವಂತೆ ಮಾಡಲಿಕ್ಕಿಲ್ಲ ಅಲ್ಲವೆ?” ಎಂದು ಒಮ್ಮೆ ಖಾತರಿಪಡಿಸಿಕೊಂಡರು. ಅವರು ನಮ್ಮಿಂದ ಖಾತರಿಯಾದ ಭರವಸೆಯನ್ನು ಬಯಸುತ್ತಿದ್ದರು. ವಾಸ್ತವದಲ್ಲಿ ಅವರ ಸರಾಸರಿ ಯಶಸ್ಸು ಸರ್ಕಾರದ ಜಲ ಶೋಧಕರಿಗಿಂತಲೂ ಕಳಪೆಯಾಗಿರು ಸಾಧ್ಯವಿರಲಿಲ್ಲ.

ಅಂತರ್ಜಲ ಇಲಾಖೆಯ ಭೂವಿಜ್ಞಾನಿಗಳ ದಾಖಲೆ ಇದನ್ನು ಖಾತರಿಪಡಿಸುತ್ತದೆ. ಕೆಲವೊಮ್ಮೆ ನೋಡಿದರೆ ಈ ಕಚೇರಿಯ ಹೊರಗಿನ ಜಲ ಶೋಧಕರಿಗೆ ಒಂದಷ್ಟು ಹಣ ಕೊಡುವುದೇ ವಾಸಿ ಎನ್ನಿಸುತ್ತದೆ. ಜೊತೆಗೆ ನಿಮಗೆ ಒಂದು “ತಜ್ಞ” ಎನ್ನುವ ತಲೆಬರಹವೊಂದಿದ್ದರೆ ಇನ್ನಷ್ಟು ಗಿರಾಕಿಗಳೂ ಸಿಗಬಲ್ಲರು. ನಾವು ಹೋದ ಆರು ಜಿಲ್ಲೆಗಳಲ್ಲಿನ ತಜ್ಞರು ಗುರುತಿಸಿದ ಕೊಳವೆಬಾವಿ ಪಾಯಿಂಟುಗಳು ವಿಫಲವಾಗಿದ್ದವು. ಅಲ್ಲಿ ಕೊಳವೆಬಾವಿಗಳನ್ನು 400 ಅಡಿಗಳಷ್ಟು ಆಳಕ್ಕೆ ಕೊರೆದರೂ ನೀರು ಸಿಕ್ಕಿರಲಿಲ್ಲ. ಹೀಗಾಗಿ ಇಲ್ಲಿ ಪೂಜಾರಿ ಮತ್ತು ರಾಯುಲು ಅವರಂತಹ ದೈವಿಕ ಜಲ ಶೋಧಕರ ಸಂಖ್ಯೆ ಬೆಳೆಯುತ್ತಿದೆ.

ಈ ದೈವಿಕ ವ್ಯಾಪಾರದಲ್ಲಿರುವ ಎಲ್ಲರೂ ತಮ್ಮದೇ ಆದ ಅಸಾಂಪ್ರದಾಯಿಕ ವಿಧಾನಗಳನ್ನು ಹೊಂದಿದ್ದಾರೆ. ಮತ್ತು ಅವು ರಾಜ್ಯದ ಉದ್ದಗಲಕ್ಕೂ ವ್ಯಾಪಿಸಿವೆ. ಅವುಗಳಲ್ಲಿ ಕೆಲವು ತಂತ್ರಗಳನ್ನು ನಲ್ಗೊಂಡದ ದಿ ಹಿಂದೂ ಯುವ ವರದಿಗಾರ ಎಸ್. ರಾಮು ಪಟ್ಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ನಿಯಮವೊಂದು ಈ ಕೆಲಸ ಮಾಡುವವರು 'ಒ' ಪಾಸಿಟಿವ್ ರಕ್ತದ ಗುಂಪಿಗೆ ಸೇರಿದವನಾಗಿರಬೇಕು ಎಂದು ಹೇಳುತ್ತದೆ. ಇನ್ನೊಬ್ಬ ವ್ಯಕ್ತಿ ಹಾವಿನ ಹುತ್ತಗಳ ಅಡಿ ನೀರನ್ನು ಹುಡುಕುತ್ತಾರೆ. ಅನಂತಪುರ ಕೂಡಾ ನೀರಿನ ವಿಷಯದಲ್ಲಿ ತನ್ನದೇ ಆದ ವಿಲಕ್ಷಣತೆಯನ್ನು ಹೊಂದಿದೆ.

ಆದರೆ ಇದೆಲ್ಲದರ ನಡುವೆ ಸತತ ನಾಲ್ಕು ಬೆಳೆ ವೈಫಲ್ಯಗಳನ್ನು ಕಂಡ ಈ ಜಿಲ್ಲೆಯಲ್ಲಿ ಬದುಕುಳಿಯಲು ರೈತರ ಹೋರಾಟ ಚಾಲ್ತಿಯಲ್ಲಿದೆ. ರೆಡ್ಡಿಯವರು ಸ್ಮಶಾನದಲ್ಲಿ ಕೊರೆಯಿಸಿರುವ ಕೊಳವೆಬಾವಿಗಳು ಸಹ ಅವರು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ನೀರನ್ನು ನೀಡುತ್ತಿವೆ. ಒಟ್ಟಾರೆಯಾಗಿ, ಈ ಗ್ರಾಮಾಧಿಕಾರಿ (ವಿಒ) ನೀರಿನ ಹುಡುಕಾಟಕ್ಕಾಗಿ ಒಂದು ಮಿಲಿಯನ್ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಅವರ ಸಾಲ ತಿಂಗಳಿನಿಂದ ತಿಂಗಳಿಗೆ ಬೆಳೆಯುತ್ತಿದೆ. “ನಾನು ಕಳೆದ ವಾರ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿದ್ದೆ” ಎಂದು ಅವರು ಹೇಳುತ್ತಾರೆ. “ಇದನ್ನು ಹೀಗೇ ಬಿಡಲು ಸಾಧ್ಯವಿಲ್ಲ. ನಮಗೆ ಒಂದಷ್ಟು ನೀರು ಬೇಕು.”

PHOTO • P. Sainath
PHOTO • P. Sainath

ಚಂದ್ರಶೇಖರ್ ರೆಡ್ಡಿ ಸ್ಮಶಾನದಲ್ಲಿ ನಾಲ್ಕು ಕೊಳವೆಬಾವಿಗಳನ್ನು ಕೊರೆಸಿದ್ದಾರೆ. ಅವರ ಹೊಲಗಳಲ್ಲಿ 32 ಕೊಳವೆ ಬಾವಿಗಳಿವೆ. ಮತ್ತು ಅವರು ತಮ್ಮ ಜಂಬುಲದಿನ್ನೆ ಗ್ರಾಮದಾದ್ಯಂತ ಹರಡಿದ ನೀರಿನ ಮೂಲಗಳನ್ನು 8 ಕಿಲೋಮೀಟರ್ ಉದ್ದದ ಪೈಪ್‌ ಲೈನ್‌ ಬಳಸಿ ಪರಸ್ಪರ ಸಂಪರ್ಕಕ್ಕೆ ತಂದಿದ್ದಾರೆ

ರೈತರ ನಿರಂತರ ಆತ್ಮಹತ್ಯೆಗಳು ಮತ್ತು ತೀವ್ರಗೊಳ್ಳುತ್ತಿರುವ ಕೃಷಿ ಬಿಕ್ಕಟ್ಟಿನ ಮಧ್ಯೆ ಸಂಕಷ್ಟಗಳನ್ನು ಎದುರಿಸಲು ಆಂಧ್ರಪ್ರದೇಶದ ವೈ.ಎಸ್.ರಾಜಶೇಖರ ರೆಡ್ಡಿ ಸರ್ಕಾರವು ಸಹಾಯವಾಣಿಯನ್ನು ಸ್ಥಾಪಿಸಿತು. ರೈತರ ಆತ್ಮಹತ್ಯೆಗಳಿಂದ ಇತರ ರಾಜ್ಯಗಳಿಗಿಂತ ಹೆಚ್ಚು ಹಾನಿಗೊಳಗಾದ ರಾಜ್ಯದಲ್ಲಿ, ಅನಂತಪುರ ಜಿಲ್ಲೆಯು ಗರಿಷ್ಠ ಸಂಖ್ಯೆಯ ಆತ್ಮಹತ್ಯೆಯನ್ನು ಕಂಡಿದೆ. ಇಲ್ಲಿ, ಕಳೆದ ಏಳು ವರ್ಷಗಳಲ್ಲಿ, 'ಅಧಿಕೃತ' ಎಣಿಕೆಯಲ್ಲಿ 500ಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಮತ್ತು ಇತರ ಸ್ವತಂತ್ರ ಅಂದಾಜುಗಳ ಪ್ರಕಾರ ಈ ಸಂಖ್ಯೆಯ ಅನೇಕ ಪಟ್ಟುಗಳಷ್ಟು ಹೆಚ್ಚಿದೆ.

ಸಹಾಯವಾಣಿ ರೆಡ್ಡಿಯವರ ಕರೆಯನ್ನು ಸ್ಪಷ್ಟ ಎಚ್ಚರಿಕೆ ಸಂಕೇತವಾಗಿ ಪರಿಗಣಿಸಬೇಕು. ಅವರು ಬಹಳ ದುರ್ಬಲ ಸ್ಥಿತಿಯಲ್ಲಿದ್ದಾರೆ.ಅಪಾಯ ವಲಯದಲ್ಲಿರುವ ಅವರು ನೀರಿನ ಕನಸು ಕಾಣುತ್ತಾ ಸಾಲದ ಹೊಳೆಯಲ್ಲಿ ಮುಳುಗುತ್ತಿದ್ದಾರೆ. ಅವರ ದೊಡ್ಡ ಮೊತ್ತದ ಹೂಡಿಕೆಯನ್ನು ನುಂಗಿರುವ ತೋಟ ಈಗ ಶಿಥಿಲಾವಸ್ಥೆಯಲ್ಲಿದೆ. ಅತ್ತ ಅವರು ತೋಡಿಸಿದ ಕೊಳವೆಬಾವಿಗಳೂ ಅದೇ ಅವಸ್ಥೆಯಲ್ಲಿವೆ.

ಇಂತಹ ಬಿಕ್ಕಟ್ಟನ್ನು ಬಳಸಿಕೊಳ್ಳಲು ಅತ್ಯಂತ ಶ್ರೀಮಂತರು ಹಿಂದೆ ಬಿದ್ದಿಲ್ಲ. ಇಲ್ಲಿ ಖಾಸಗಿ ನೀರಿನ ಮಾರುಕಟ್ಟೆಗಳು ತ್ವರಿತವಾಗಿ ಹೊರಹೊಮ್ಮಿವೆ. ತಮ್ಮ ಕೊಳವೆಬಾವಿಗಳು ಮತ್ತು ಪಂಪ್ ಮೂಲಕ ಪಡೆದ ನೀರನ್ನು ಇವರು ನೀರನ್ನು ಮಾರಾಟ ಮಾಡುವ ಮೂಲಕ ಹೆಚ್ಚಿನ ಹಣವನ್ನು ಗಳಿಸಿ ಈಗ ಅವರು ʼನೀರಿನ ಪ್ರಭುಗಳಾಗಿʼ ಮಾರ್ಪಟ್ಟಿದ್ದಾರೆ.

ಹತಾಶ ರೈತರು ತಮ್ಮ ಹೊಲಗಳಿಗೆ ಎಕರೆಗೆ 7,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ವೆಚ್ಚದಲ್ಲಿ "ತೇವಗೊಳಿಸುವಿಕೆಯನ್ನು" ಖರೀದಿಸಬಹುದು. ಎಂದರೆ ನೀರನ್ನು ಹೊಂದಿರುವ ನೆರೆಹೊರೆಯವರಿಂದ ನೀವು ಟ್ಯಾಂಕರ್‌ ಮೂಲಕ ನೀರು ಖರೀದಿಸಿ ನಿಮ್ಮ ಹೊಲಗಳನ್ನು ಒದ್ದೆಯಾಗಿಸಬಹುದು.

ಇಂತಹ ಸಂದರ್ಭದಲ್ಲಿ ಹಣವು ಸಮುದಾಯವನ್ನು ಮೀರಿ ನಿಲ್ಲುತ್ತದೆ. “ಇದೆಲ್ಲದರಿಂದ ಒಂದು ಎಕರೆ ಬೆಳೆಗೆ ತಗಲು ಖರ್ಚನ್ನು ನೀವು ಊಹಿಸಬಲ್ಲಿರಾ?" ಎಂದು ರೆಡ್ಡಿ ಕೇಳುತ್ತಾರೆ. ಹೆದ್ದಾರಿಗಳಲ್ಲಿ ಅಲೆದಾಡುವ ಸರ್ವವ್ಯಾಪಿ ಬೋರ್ ವೆಲ್ ಕೊರೆಯುವ ಯಂತ್ರಗಳ ಜೊತೆಗೆ ಪವಾಡಗಳನ್ನು ಮಾಡುತ್ತಾರೆ. ಈ ಪ್ರದೇಶದಲ್ಲಿ ಕುಡಿಯುವ ನೀರಿಗೂ ದೊಡ್ಡ ಸಮಸ್ಯೆಯಾಗಿದೆ. ಹಿಂದೂಪುರ ಪಟ್ಟಣದ 1.5 ಲಕ್ಷ ನಿವಾಸಿಗಳು ಕುಡಿಯುವ ನೀರಿಗಾಗಿ ವರ್ಷಕ್ಕೆ ಅಂದಾಜು 80 ಮಿಲಿಯನ್ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಸ್ಥಳೀಯ ವಾಟರ್ ಲಾರ್ಡ್ ಒಬ್ಬರು ಪುರಸಭೆ ಕಚೇರಿಯ ಸುತ್ತಲೂ ದೊಡ್ಡ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

PHOTO • P. Sainath

ಕೊಳವೆ ಬಾವಿ ಕೊರೆಯುವ ಯಂತ್ರಗಳು ಹೆದ್ದಾರಿಗುಂಟ ಸುತ್ತುತ್ತಿರುತ್ತವೆ

ಮೂಢನಂಬಿಕೆ, ಮಾಂತ್ರಿಕತೆ, ದೇವರು, ಸರ್ಕಾರ, ತಂತ್ರಜ್ಞಾನ ಮತ್ತು ತೆಂಗಿನಕಾಯಿ ಇವೆಲ್ಲವೂ ಅನಂತಪುರದ ಹತಾಶ ಹುಡುಕಾಟದಲ್ಲಿ ಭಾಗಿಯಾಗಿವೆ. ಆದರೆ ಇವುಗಳೆಲ್ಲದರ ಭಾಗವಹಿಸುವಿಕೆ ಅಷ್ಟೇನೂ ಪ್ರಭಾವಶಾಲಿಯಾಗಿಲ್ಲ

ಅಂತಿಮವಾಗಿ, ಮಳೆಗಾಲ ಪ್ರಾರಂಭವಾದಂತೆ ತೋರುತ್ತದೆ. ನಾಲ್ಕು ದಿನಗಳ ತುಂತುರು ಮಳೆಗೆ ಬಿತ್ತನೆ ಮುಂದುವರಿಯುತ್ತದೆ. ಇದರರ್ಥ ಭರವಸೆಯ ಮರಳುವಿಕೆ ಮತ್ತು ಆತ್ಮಹತ್ಯೆಗಳು ಕಡಿಮೆಯಾಗುವುದು. ಆದರೆ, ಸಮಸ್ಯೆ ಇನ್ನೂ ಮುಗಿದಿರುವುದಿಲ್ಲ. ಉತ್ತಮ ಬೆಳೆಯನ್ನು ಬಹಳವಾಗಿ ಸ್ವಾಗತಿಸಲಾಗುತ್ತದೆ, ಆದರೆ ಅದು ಇತರ ಸಮಸ್ಯೆಗಳನ್ನು ಮೇಲ್ಮೈಗೆ ತರುತ್ತದೆ.

"ವಿಚಿತ್ರವೆಂದರೆ, ಉತ್ತಮ ಇಳುವರಿ ಹೊಸ ಆತ್ಮಹತ್ಯೆಗಳಿಗೆ ಕಾರಣವಾಗಬಹುದು" ಎಂದು ಅನಂತಪುರದ ಗ್ರಾಮೀಣಾಭಿವೃದ್ಧಿ ಟ್ರಸ್ಟಿನ ಪರಿಸರ ವಿಜ್ಞಾನ ಕೇಂದ್ರದ ನಿರ್ದೇಶಕ ಮಲ್ಲಾ ರೆಡ್ಡಿ ಹೇಳುತ್ತಾರೆ. "ಒಬ್ಬ ರೈತ ಅದರಿಂದ ಕನಿಷ್ಠ 1 ಲಕ್ಷ ರೂ.ಗಳನ್ನು ಗಳಿಸಬಹುದು. ಆದರೆ ವರ್ಷಗಳ ಬೆಳೆ ವೈಫಲ್ಯದ ನಂತರ ಅವರು 5 ಲಕ್ಷದಿಂದ 6 ಲಕ್ಷ ರೂ.ಗಳ ಸಾಲವನ್ನು ತೀರಿಬೇಕಿರುತ್ತದೆ. ಈ ಬಿಕ್ಕಟ್ಟು ಅನೇಕ ಮದುವೆಗಳನ್ನು ವಿಳಂಬಗೊಳಿಸಿದೆ. ಅವುಗಳನ್ನು ಅವರು ಈಗ ನಿರ್ವಹಿಸಬೇಕಾಗುತ್ತದೆ.

“ಜೊತೆಗೆ ಭಯಂಕರವಾದ ಹೊಸ ಒಳಸುರಿ ವೆಚ್ಚಗಳನ್ನು ಎದುರಿಸಬೇಕಾಗುತ್ತದೆ. ಈ ಎಲ್ಲಾ ಬದ್ಧತೆಗಳನ್ನು ರೈತ ಹೇಗೆ ಪೂರೈಸುತ್ತಾನೆ? ಮುಂದಿನ ಕೆಲವು ತಿಂಗಳುಗಳಲ್ಲಿ ಸಾಲಗಾರರಿಂದ ಒತ್ತಡವು ಅಗಾಧವಾಗಿರುತ್ತದೆ. ಮತ್ತು ಸಾಲದ ಮುಂದೂಡಿಕೆ ಶಾಶ್ವತವಾಗಿ ಉಳಿಯುವುದಿಲ್ಲ."

ಇಲ್ಲಿನ ರೈತರ ಪಾಲಿಗೆ ಸಮಸ್ಯೆಗಳೆನ್ನುವುದು ಹನಿ ಮಳೆಯಾಗಿ ಸುರಿಯುವುದಿಲ್ಲ. ಅದು ಭೋರ್ಗರೆದು ಸುರಿಯುತ್ತದೆ. ಮತ್ತೆ ಇತ್ತ ಈ ಜನರು ನೀರಿನ ಕನಸು ಕಾಣುತ್ತಾ ಸಾಲದಲ್ಲಿ ಮುಳುಗುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru