“ಒಮ್ಮೆ ಈ ವೃತ್ತಿಯು ಕಣ್ಮರೆಯಾದರೆ, ನನಗೆ ಬೇರೆ ರಾಜ್ಯಕ್ಕೆ ಹೋಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ" ಎಂದು ಅಸ್ಸಾಂನ ದರ್ರಾಂಗ್ ಜಿಲ್ಲೆಯ ನಾ-ಮತಿ ಗ್ರಾಮದ ಬಿದಿರಿನ ಬುಟ್ಟಿ ತಯಾರಕರಾದ ಮಜೀದಾ ಬೇಗಂ ಹೇಳುತ್ತಾರೆ.
ಈ 25 ವರ್ಷದ ಕುಶಲಕರ್ಮಿ ಒಂಟಿ ತಾಯಿಯಾಗಿದ್ದು, ತನ್ನ 10 ವರ್ಷದ ಮಗ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ದಿನಗೂಲಿ ಕಾರ್ಮಿಕರಾಗಿ ದುಡಿದು ಪೋಷಿಸುತ್ತಿದ್ದಾರೆ. "ದಿನಕ್ಕೆ 40 ಖಾಸಾಗಳನ್ನು [ಬುಟ್ಟಿಗಳನ್ನು] ತಯಾರಿಸಬಲ್ಲೆ, ಆದರೆ ಈಗ ಕೇವಲ 20 ಖಾಸಾಗಳನ್ನು ಮಾತ್ರ ನೇಯುತ್ತೇನೆ" ಎಂದು ಅವರು ಸ್ಥಳೀಯ ಮಿಯಾ ಉಪಭಾಷೆಯಲ್ಲಿ ಹೇಳುತ್ತಾರೆ. ಮಜೀದಾ ಅವರು ತಾನು ನೇಯ್ಗೆ ಮಾಡುವ ಪ್ರತಿ 20 ಬುಟ್ಟಿಗಳಿಗೆ 160 ರೂ.ಗಳನ್ನು ಗಳಿಸುತ್ತಾರೆ. ಇದು ನಿಗದಿತ ಉದ್ಯೋಗಕ್ಕಾಗಿ ರಾಜ್ಯ ನಿಗದಿಪಡಿಸಿರುವ ಕನಿಷ್ಠ ವೇತನ 241.92 ರೂಪಾಯಿಗಳಿಗಿಂತ ಕಡಿಮೆ (2016ರ ಕನಿಷ್ಠ ವೇತನ ಕಾಯ್ದೆ, 1948ರ ವರದಿ).
ಬಿದಿರು ಬೆಲೆಯೇರಿಕೆ ಮತ್ತು ಇಲ್ಲಿನ ತರಕಾರಿ ಮಂಡಿಗಳಲ್ಲಿ ಬುಟ್ಟಿಗಳಿಗೆ ಬೇಡಿಕೆ ಕುಸಿಯುತ್ತಿರುವುದು ಬಿದಿರಿನ ಬುಟ್ಟಿಗಳ ಮಾರಾಟದಿಂದ ಬರುವ ಆದಾಯದ ಮೇಲೆ ಪರಿಣಾಮ ಬೀರಿದೆ. ದರ್ರಾಂಗ್ ಅಸ್ಸಾಂನ ಎರಡು ದೊಡ್ಡ ಮಂಡಿಗಳನ್ನು ಹೊಂದಿದೆ: ಬೆಚಿಮರಿ ಮತ್ತು ಬಲುಗಾಂವ್. ಕೃಷಿ ಉತ್ಪನ್ನಗಳನ್ನು ಅತ್ತ ಈಶಾನ್ಯ ಭಾಗಗಳಿಗೆ ಮತ್ತು ಇತ್ತ ದೆಹಲಿಯವರೆಗೆ ಸರಬರಾಜು ಮಾಡಲಾಗುತ್ತದೆ.
ಮಜೀದಾ ಅವರ ಗುಳೇ ಹೋಗಬೇಕಾಗಿ ಬರುವ ಆತಂಕ ಸುಮ್ಮನೆ ಹುಟ್ಟಿದ್ದಲ್ಲ. ಇಲ್ಲಿನ ಸುಮಾರು 80ರಿಂದ 100 ಕುಟುಂಬಗಳು ಈಗಾಗಲೇ "ಉತ್ತಮ ಕೆಲಸ"ವನ್ನು ಹುಡುಕಿಕೊಂಡು ದೂರದ ಊರುಗಳಿಗೆ ಹೋಗಿವೆ ಎಂದು ಸ್ಥಳೀಯ ಮದರಸಾದ ಬಳಿಯ ವಾರ್ಡ್ ಎ ಸುತ್ತಲೂ ತೋರಿಸುತ್ತಾ 39 ವರ್ಷದ ಹನೀಫ್ ಅಲಿ ಹೇಳುತ್ತಾರೆ. ಒಂದು ಕಾಲದಲ್ಲಿ ಈ ಊರಿನ ಸರಿಸುಮಾರು 150 ಕುಟುಂಬಗಳು ಬಿದಿರಿನ ಕೆಲಸ ಮಾಡುತ್ತಿದ್ದವು. ಆದರೆ ಈಗ, ಆ ಕುಶಲಕರ್ಮಿಗಳು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕೇರಳ ಮತ್ತು ಕರ್ನಾಟಕದಂತಹ ಇತರ ರಾಜ್ಯಗಳಿಗೆ ವಲಸೆ ಹೋಗಿರುವುದರಿಂದ ಅನೇಕ ಮನೆಗಳು ಖಾಲಿಯಾಗಿವೆ.














