“ಈ ವರ್ಷದ ಬಜೆಟ್ ನಮ್ಮ ಬದುಕಿಗೆ ಸಂಬಂಧಿಸಿದಂತೆ ಯಾವುದೇ ಒಳಿತು ಮಾಡುವುದಿಲ್ಲ. ಈ ಬೆಜೆಟ್ ಮುಖ್ಯವಾಗಿ ಮಧ್ಯಮ ವರ್ಗಕ್ಕೆ, ವಿಶೇಷವಾಗಿ ಸಂಬಳ ಪಡೆಯುವ ವ್ಯಕ್ತಿಗಳಿಗೆ ಸಂಬಂಧಿಸಿದ್ದು ಎನ್ನಿಸುತ್ತದೆ” ಎಂದು ಗೀತಾ ವಳಚಲ್ ಹೇಳುತ್ತಾರೆ.
ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ) ವರ್ಗದಡಿ ಪಟ್ಟಿ ಮಾಡಲಾಗಿರುವ ಕಾಡರ್ ಸಮುದಾಯದ ಸದಸ್ಯರಾದ 36 ವರ್ಷದ ಗೀತಾ ಕೇರಳದ ತ್ರಿಶೂರ್ ಜಿಲ್ಲೆಯ ಉದ್ದೇಶಿತ ಅಥಿರಪ್ಪಲ್ಲಿ ಜಲವಿದ್ಯುತ್ ಯೋಜನೆಯ ಜಲಾನಯನ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
ಈ ಅಣೆಕಟ್ಟು ಚಾಲಕುಡಿ ನದಿ ಜಲಾನಯನ ಪ್ರದೇಶದಲ್ಲಿದೆ ಮತ್ತು ಇದು ನಾಲ್ಕನೇ ಬಾರಿಗೆ ಅವರ ಸಮುದಾಯವನ್ನು ಒಕ್ಕಲೆಬ್ಬಿಸುತ್ತಿದೆ. "ದೇಶಾದ್ಯಂತ ದೊಡ್ಡ ಪ್ರಮಾಣದ ಮೂಲಸೌಕರ್ಯ ಯೋಜನೆಗಳಿಂದಾಗಿ ನಾವು ಗಮನಾರ್ಹ ಒಕ್ಕಲೆಬ್ಬಿಸುವಿಕೆಯನ್ನು ಎದುರಿಸುತ್ತಿದ್ದೇವೆ. ಇದಲ್ಲದೆ, ನಮ್ಮ ಭೂಮಿ, ಅರಣ್ಯ ಮತ್ತು ಸಂಪನ್ಮೂಲಗಳನ್ನು ಕಾರ್ಪೊರೇಟ್ ಸಂಸ್ಥೆಗಳು ಸ್ವಾಧೀನಪಡಿಸಿಕೊಳ್ಳುತ್ತಿರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ" ಎಂದು ಅಣೆಕಟ್ಟಿನ ವಿರುದ್ಧದ ಜನಾಂದೋಲನದ ಮುಖವಾಗಿ ಮಾರ್ಪಟ್ಟಿರುವ ಗೀತಾ ಹೇಳುತ್ತಾರೆ.
"ಕಾಡುಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳಿಗೆ, ಹವಾಗುಣ ಬದಲಾವಣೆಯು ಹಿಂದೆಂದೂ ಕಂಡಿರದ ಸವಾಲುಗಳನ್ನು ಸೃಷ್ಟಿಸುತ್ತದೆ. ನಾವು ಪ್ರತಿಕೂಲ ವಾತಾವರಣ, ಅವನತಿ ಹೊಂದಿದ ಕಾಡುಗಳು ಮತ್ತು ಸೀಮಿತ ಜೀವನೋಪಾಯದ ಆಯ್ಕೆಗಳ ನಡುವೆ ಬದುಕುತ್ತಿದ್ದೇವೆ" ಎಂದು ಕೇರಳದ ಏಕೈಕ ಮಹಿಳಾ ಬುಡಕಟ್ಟು ಮುಖ್ಯಸ್ಥೆಯಾದ ಗೀತಾ ಹೇಳುತ್ತಾರೆ.
![](/media/images/02a-IMG008-2-KAS-Cosmetic_changes_for_Adiv.max-1400x1120.jpg)
![](/media/images/02b-IMG015-1-KAS-Cosmetic_changes_for_Adiv.max-1400x1120.jpg)
ಎಡ: ಗೀತಾ ತನ್ನ ವಿದ್ಯಾರ್ಥಿಗಳೊಂದಿಗೆ. ಬಲ: ಗೀತಾ ಕೇರಳದ ತ್ರಿಶೂರ್ ಜಿಲ್ಲೆಯ ಉದ್ದೇಶಿತ ಅಥಿರಪ್ಪಲ್ಲಿ ಜಲವಿದ್ಯುತ್ ಯೋಜನೆಯ ಜಲಾನಯನ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ
ಕಾಡಾರ್ ಸಮುದಾಯದ ಇತರರಂತೆ, ಗೀತಾ ಅವರ ಪೂರ್ವಜರು ಸಹ ಅರಣ್ಯವಾಸಿಗಳಾಗಿದ್ದರು, ಅವರು 1905ರಲ್ಲಿ ಬ್ರಿಟಿಷರು ಕೊಚ್ಚಿ ಬಂದರಿಗೆ ಮರಗಳನ್ನು ಸ್ಥಳಾಂತರಿಸಿ ಅಲ್ಲಿಂದ ಅವುಗಳನ್ನು ಗ್ರೇಟ್ ಬ್ರಿಟನ್‌ಗೆ ಸಾಗಿಸಲು ಈ ಪ್ರದೇಶವನ್ನು ಸಂಪರ್ಕಿಸುವ ಟ್ರಾಮ್ ವೇ ನಿರ್ಮಿಸಿದ ಸಂದರ್ಭದಲ್ಲಿ ಪರಂಬಿಕುಲಂ ಹುಲಿ ಮೀಸಲು ಪ್ರದೇಶವನ್ನು ತೊರೆಯಬೇಕಾಯಿತು.
ಗೀತಾ ಅವರ ಕುಟುಂಬವು ಪೆರಿಂಗಲಕುತು ಮತ್ತು ನಂತರ ಶೋಲಯಾರ್ ಅರಣ್ಯಕ್ಕೆ ಸ್ಥಳಾಂತರಗೊಂಡಿತು, ಅಲ್ಲಿಂದ ಅವರು ಈಗ ಮತ್ತೆ ಸ್ಥಳಾಂತರಗೊಳ್ಳಲಿದ್ದಾರೆ.
ಬುಡಕಟ್ಟು ಕಲ್ಯಾಣಕ್ಕಾಗಿ ಅನುದಾನದಲ್ಲಿ ಹೆಚ್ಚಳವಾಗಿರುವುದನ್ನು ಬಜೆಟ್ ತೋರಿಸಿದರೂ, "ಅನುದಾನದ ಹಂಚಿಕೆಗಳು ಮುಖ್ಯವಾಗಿ ಮಾದರಿ ವಸತಿ ಶಾಲೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಂಪರ್ಕಕ್ಕೆ ಆದ್ಯತೆ ನೀಡುತ್ತವೆ, ಇದು ಮೇಲ್ನೋಟದ ಪರಿಣಾಮಗಳನ್ನು ಮಾತ್ರ ಬೀರುತ್ತದೆ. ಕೃಷಿ ಭೂಮಿ, ಅರಣ್ಯಗಳು, ಜಲ ಸಂಪನ್ಮೂಲಗಳು ಮತ್ತು ಜೀವನೋಪಾಯವನ್ನು ಕಸಿದುಕೊಳ್ಳಲ್ಪಟ್ಟ ದುರ್ಬಲ ಬುಡಕಟ್ಟು ಸಮುದಾಯಗಳ ಪಾಲಿಗೆ ರಸ್ತೆಗಳು ಮತ್ತು ಮೂಲಸೌಕರ್ಯಗಳ ಸುಧಾರಣೆಗಳು ಅರ್ಥಹೀನವಾಗುತ್ತವೆ.
ವಯನಾಡ್ ಜಿಲ್ಲೆಯ ಮುಂಡಕೈ ಮತ್ತು ಚೂರಲ್ಮಾಲಾ ಭೂಕುಸಿತ ಸಂತ್ರಸ್ತರಿಗೆ ಬಜೆಟ್ಟಿನಲ್ಲಿ ಸಾಕಷ್ಟು ಬೆಂಬಲ ಮೀಸಲಿಡಬಹುದು ಎನ್ನುವ ನಿರೀಕ್ಷೆಯಲ್ಲಿ ಕೇರಳದ ಅನೇಕ ಜನರಿದ್ದರು. "ಇಡೀ ದಕ್ಷಿಣ ಭಾರತವನ್ನು ಕಡೆಗಣಿಸಿರುವಂತೆ ಕಾಣುತ್ತದೆ."
ಚಿತ್ರಗಳ ನ್ನು ಕೇರಳ ಮ್ಯೂಸಿಯಂ , ಮಾಧವನ್ ನಾಯರ್ ಫೌಂಡೇಶನ್ , ಕೊಚ್ಚಿಯ ಜನಲ್ ಆರ್ಕೈವ್ ಸಂಸ್ಥೆಯ ಅನುಮತಿಯಡಿಯಲ್ಲಿ ಬಳಸಲಾ ಗಿದೆ .
ಅನುವಾದ: ಶಂಕರ. ಎನ್. ಕೆಂಚನೂರು