37 ವರ್ಷದ ಗನಿ ಸಾಮಾ ಗುಜರಾತಿನ ನಾಲ್ ಸರೋವರ ಮತ್ತು ಪಕ್ಷಿಧಾಮದಲ್ಲಿ ಅಂಬಿಗನಾಗಿ ಗುರುತಿಸಿಕೊಂಡಿದ್ದಾರೆ. ಅಹಮದಾಬಾದ್ ಜಿಲ್ಲೆಯ ವಿರಾಮಗಾಮ್ ತೆಹಸಿಲ್ ಪ್ರದೇಶದಲ್ಲಿರುವ ಈ ಈ 120 ಚದರ ಕಿಲೋಮೀಟರ್ ವ್ಯಾಪ್ತಿಯ ಸರೋವರವು ಮಧ್ಯ ಏಷ್ಯಾದ ಹಾರು ಹಾದಿ ಮೂಲಕ, ಆರ್ಕ್ಟಿಕ್ ಮಹಾಸಾಗರದಿಂದ ಹಿಂದೂ ಮಹಾಸಾಗರಕ್ಕೆ ಬರುವ ಅನೇಕ ವಲಸೆ ಹಕ್ಕಿಗಳನ್ನು ಆಕರ್ಷಿಸುತ್ತದೆ.
"ನಾನು 350ಕ್ಕೂ ಹೆಚ್ಚು ಜಾತಿಯ ಹಕ್ಕಿಗಳನ್ನು ಗುರುತಿಸಬಲ್ಲೆ" ಎಂದು ಅವರು ಹೇಳುತ್ತಾರೆ, ಇದರಲ್ಲಿ ನಾ; ಸರೋವರಕ್ಕೆ ಬರುವ ವಲಸೆ ಹಕ್ಕಿಗಳು ಸಹ ಸೇರಿವೆ. "ಈ ಹಿಂದೆ, ಸುಮಾರು 240 ಜಾತಿಯ ಪಕ್ಷಿಗಳನ್ನು ಇಲ್ಲಿ ಗುರುತಿಸಲಾಗುತ್ತಿತ್ತು, ಈಗ ಈ ಸಂಖ್ಯೆ 315ಕ್ಕಿಂತ ಹೆಚ್ಚಾಗಿದೆ."
ಗನಿ ಈ ಸರೋವರದ ಸುತ್ತಮುತ್ತಲಿನಲ್ಲೇ ತನ್ನ ಬಾಲ್ಯವನ್ನು ಕಳೆದಿದ್ದಾರೆ. "ನನ್ನ ತಂದೆ ಮತ್ತು ನನ್ನ ಅಜ್ಜ ಈ ಪಕ್ಷಿಗಳ ರಕ್ಷಣೆಗೆ ಅರಣ್ಯ ಇಲಾಖೆಗೆ ಸಹಾಯ ಮಾಡುತ್ತಿದ್ದರು. ಅವರಿಬ್ಬರೂ ಅರಣ್ಯ ಇಲಾಖೆಯಲ್ಲಿ ಅಂಬಿಗರಾಗಿ ಕೆಲಸ ಮಾಡುತ್ತಿದ್ದರು. ಈಗ ನಾನೂ ಅದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ" ಎಂದು ಅವರು ಹೇಳುತ್ತಾರೆ. "1997ರಲ್ಲಿ ಈ ಕೆಲಸಕ್ಕೆ ಸೇರಿಕೊಂಡ ಮೊದಲಿನಲ್ಲಿ, ಒಮ್ಮೊಮ್ಮೆ ಕೆಲಸ ಸಿಕ್ಕರೆ ಕೆಲವೊಮ್ಮೆ ಏನೂ ಇರುತ್ತಿರಲಿಲ್ಲ" ಎಂದು ಅವರು ನೆನಪಿಸಿಕೊಳ್ಳುತ್ತಾರೆ.
2004ರಲ್ಲಿ ಅರಣ್ಯ ಇಲಾಖೆಯು ಅವರನ್ನು ಗಸ್ತು ತಿರುಗಲು ಮತ್ತು ಪಕ್ಷಿಗಳನ್ನು ರಕ್ಷಿಸಲು ಅಂಬಿಗನನ್ನಾಗಿ ನೇಮಿಸಿಕೊಂಡ ನಂತರ ಅವರ ಬದುಕಿನ ದಿನಗಳು ಬದಲಾದವು ಮತ್ತು "ನಾನು ಈಗ ತಿಂಗಳಿಗೆ ಸುಮಾರು 19,000 ರೂಪಾಯಿಗಳನ್ನು ಸಂಪಾದಿಸುತ್ತೇನೆ."










