“ನನಗೆ ಈಗಷ್ಟೇ ಮಡಿವಾಳ ಹಕ್ಕಿಯ ಕೂಗು ಕೇಳಿಸಿತು.”
ಮೀಕಾ ರೈ ಉತ್ಸಾಹದಲ್ಲಿದ್ದರು. ಅವರು ಅವುಗಳ ಕೂಗನ್ನು ಸುಮಧುರ ಚಿಲಿಪಿಲಿಯ ಸರಣಿ ಎಂದು ಕರೆಯುತ್ತಾರೆ.
ಆದರೆ ಅವರ ಉತ್ಸಾಹದಲ್ಲಿ ಈ ಸಣ್ಣ ಕಪ್ಪು, ಬಿಳಿ ಮತ್ತು ಹಳದಿ ರೆಕ್ಕೆಗಳ ಹಕ್ಕಿಗಳ ಕುರಿತು ಚಿಂತೆಯ ಗೆರೆಯೂ ಇತ್ತು. “ಸಾಮಾನ್ಯವಾಗಿ ಇವು ಕೆಳ ಹಂತದಲ್ಲಿ ಕಂಡುಬರುತ್ತಿದ್ದವು [900 ಮೀಟರ್], ಆದರೆ ಇತ್ತೀಚೆ ಅವುಗಳ ಸದ್ದನ್ನು ನಾನು ಇಲ್ಲಿ [2,000 ಮೀಟರ್ ಎತ್ತರದಲ್ಲಿ] ಕೇಳುತ್ತಿದ್ದೇನೆ” ಎಂದು ಅರುಣಾಚಲ ಪ್ರದೇಶದ ಈಗಲ್ ನೆಸ್ಟ್ ವನ್ಯಜೀವಿ ಅಭಯಾರಣ್ಯದಲ್ಲಿ ಕಳೆದ ದಶಕದಿಂದ ಪಕ್ಷಿಗಳನ್ನು ಗಮನಿಸುತ್ತಿರುವ 30 ವರ್ಷದ ಕ್ಷೇತ್ರ ಸಿಬ್ಬಂದಿಯಾದ ಅವರು ಹೇಳುತ್ತಾರೆ.
ಸ್ಥಳೀಯರಾದ ಮೀಕಾ ಅವರು ಕಳೆದ 10 ವರ್ಷಗಳಿಂದ ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆಯ ಉಷ್ಣವಲಯದ ಮಾಂಟೆನ್ (ಪರ್ವತ) ಕಾಡುಗಳಲ್ಲಿ ಪಕ್ಷಿ ಪ್ರಭೇದಗಳನ್ನು ಅಧ್ಯಯನ ಮಾಡುತ್ತಿರುವ ವಿಜ್ಞಾನಿಗಳು, ಸಂಶೋಧಕರು ಮತ್ತು ಕ್ಷೇತ್ರ ಸಿಬ್ಬಂದಿಯ ತಂಡದ ಭಾಗವಾಗಿದ್ದಾರೆ.
ಬಾಲದ ಮೇಲೆ ಬಿಳಿ ಗೆರೆಗಳನ್ನು ಹೊಂದಿರುವ ಗಾಢ ನೀಲಿ ಮತ್ತು ಕಪ್ಪು ಬಣ್ಣದ ಹಕ್ಕಿಯನ್ನು ಹಿಡಿದಿರುವ ಡಾ.ಉಮೇಶ್ ಶ್ರೀನಿವಾಸನ್, "ಇದು ಬಿಳಿ ಬಾಲದ ರಾಬಿನ್. ಇದರ ಗರಿಷ್ಠ ಮಿತಿ 1,800 ಮೀಟರ್ ಆಗಿತ್ತು, ಆದರೆ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಇದು 2,000 ಮೀಟರ್ ಎತ್ತರದಲ್ಲಿ ಕಂಡುಬಂದಿದೆ” ಎನ್ನುತ್ತಾರೆ
ಪಕ್ಷಿವಿಜ್ಞಾನಿಯಾಗಿರುವ ಶ್ರೀನಿವಾಸನ್ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ ಮತ್ತು ಅರುಣಾಚಲ ಪ್ರದೇಶದಲ್ಲಿ ಕೆಲಸ ಮಾಡುವ ತಂಡದ ಮುಖ್ಯಸ್ಥರಾಗಿದ್ದಾರೆ. "ಕಳೆದ 12 ವರ್ಷಗಳಿಂದ, ಪೂರ್ವ ಹಿಮಾಲಯದಲ್ಲಿನ ಪಕ್ಷಿ ಪ್ರಭೇದಗಳು ತಮ್ಮ ವ್ಯಾಪ್ತಿಯನ್ನು ಬದಲಾಯಿಸುತ್ತಿವೆ" ಎಂದು ಶ್ರೀನಿವಾಸನ್ ಹೇಳುತ್ತಾರೆ.






























