ಮೋಹನ್‌ಲಾಲ್ ಲೋಹರ್ ಅವರಿಗೆ ನೆನಪಿರುವಂತೆ ಅವರು ಸುತ್ತಿಗೆಯ ಬಡಿತದ ಸದ್ದಿನ ಮಾಧುರ್ಯಕ್ಕೆ ಮಾರುಹೋಗುತ್ತಿದ್ದರು. ಲಯಬದ್ಧವಾದ ಈ ನಾದವನ್ನು ಕೇಳುತ್ತಾ, ಅವುಗಳನ್ನು ತಯಾರಿಸುವುದು ತಮ್ಮ ಜೀವನದ ಭಾಗವಾಗುತ್ತದೆ ಎಂದು ಅವರು ಭಾವಿಸಿದ್ದರು.

ಮೋಹನ್‌ಲಾಲ್ ಅವರು ಹುಟ್ಟಿದ್ದು ರಾಜಸ್ಥಾನದ ಬಾರ್ಮರ್ ಜಿಲ್ಲೆಯ ನಂದ್ ಗ್ರಾಮದ ಲೋಹರ್‌ಗಳ (ಕಮ್ಮಾರರ) ಕುಟುಂಬವೊಂದರಲ್ಲಿ. ಎಂಟು ವರ್ಷದವರಾಗಿದ್ದಾಗ ತಮ್ಮ ತಂದೆ ದಿವಂಗತ ಭವ್ರಾರಾಮ್ ಲೋಹರ್ ಅವರಿಗೆ ಸುತ್ತಿಗೆಗಳು ಮತ್ತು ಇತರ ಸಲಕರಣೆಗಳನ್ನು ಕೊಟ್ಟು ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. "ನಾನು ಯಾವತ್ತೂ ಶಾಲೆಯ ಮುಖ ನೋಡಿಲ್ಲ, ಈ ಸಲಕರಣೆಗಳೊಂದಿಗೆ ಆಟವಾಡುತ್ತಿದ್ದೆ," ಎಂದು ಅವರು ಹೇಳುತ್ತಾರೆ.

ಇವರ ಕುಟುಂಬವು ಗಡುಲಿಯಾ ಲೋಹರ್ ಸಮುದಾಯಕ್ಕೆ ಸೇರಿದ್ದು, ರಾಜಸ್ಥಾನದಲ್ಲಿ ಇವರನ್ನು ಇತರ ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದೆ. ಇವರು ಮಾರ್ವಾಡಿ ಮತ್ತು ಹಿಂದಿ ಮಾತನಾಡುತ್ತಾರೆ. ಐದು ದಶಕಗಳ ಹಿಂದೆ, ಅಂದರೆ 1980 ರ ದಶಕದ ಆರಂಭದಲ್ಲಿ ಹೆಚ್ಚಿನ ಕೆಲಸಕ್ಕಾಗಿ ಜೈಸಲ್ಮೇರ್‌ಗೆ ಬಂದಾಗ ಮೋಹನ್‌ಲಾಲ್ ಅವರು ಹದಿಹರೆಯ ಪ್ರಾಯದ ಯುವಕರಾಗಿದ್ದರು. ಅಂದಿನಿಂದ ಅವರು ಅಲ್ಯೂಮಿನಿಯಂ, ಬೆಳ್ಳಿ, ಉಕ್ಕು ಮತ್ತು ಹಿತ್ತಾಳೆ ಮೊದಲಾದ ಲೋಹಗಳಿಂದ ಮೋರ್ಚಾಂಗ್‌ಗಳನ್ನು ತಯಾರಿಸಲಾರಂಭಿಸಿದರು.

"ಕೇವಲ ಲೋಹಾ [ಕಬ್ಬಿಣದ] ತುಂಡನ್ನು ಮುಟ್ಟಿ ನೋಡಿಯೇ ಅದು ಚೆನ್ನಾಗಿ ಸದ್ದು ಮಾಡುತ್ತದೆಯೇ, ಇಲ್ಲವೇ ಎಂದು ಹೇಳಬಲ್ಲೆ," ಎಂದು ಮೋಹನ್‌ಲಾಲ್ ಹೇಳುತ್ತಾರೆ. ಇವರು ತಮ್ಮ ಬದುಕಿನ 20,000 ಗಂಟೆಗಳಿಗೂ ಹೆಚ್ಚು ಕಾಲವನ್ನು ಕಾದು ಕೆಂಪಾದ ಕಬ್ಬಿಣವನ್ನು ಸುತ್ತಿಗೆಯಿಂದ ಬಡಿದು ಸಂಗೀತವಾದ್ಯ ಮೋರ್ಚಾಂಗ್‌ಗಳನ್ನು ತಯಾರಿಸುವುದರಲ್ಲಿ ಕಳೆದಿದ್ದಾರೆ. ಇದು ಜೈಸಲ್ಮೇರ್‌ನ ಮರಳುಗಾಡಿನಾದ್ಯಂತ ತನ್ನ ಸ್ವರವನ್ನು ಹಬ್ಬಿಸಿದೆ.

"ಮೋರ್ಚಾಂಗ್ ಮಾಡುವುದು ಕಷ್ಟದ ಕೆಲಸ," ಎಂದು 65 ವರ್ಷ ವಯಸ್ಸಿನ ಇವರು ಹೇಳುತ್ತಾರೆ. ಇವರಿಗೆ ಇಲ್ಲಿಯವರೆಗೆ ತಾವು ಎಷ್ಟು ಮೋರ್ಚಾಂಗ್‌ಗಳನ್ನು ತಯಾರಿಸಿದ್ದಾರೆಂಬುದು ನೆನಪಿಲ್ಲ ಎಂದು ಹೇಳುತ್ತಾರೆ: "ಗಿಂಟಿ ಸೆ ಬಹರ್ ಹೈ ವೋಹ್ [ಅದಕ್ಕೆ ಯಾವುದೇ ಲೆಕ್ಕವಿಲ್ಲ]."

ಮೋರ್ಚಾಂಗ್ (ಮೋರ್ಸಿಂಗ್ ಎಂದೂ ಕರೆಯುತ್ತಾರೆ) ಸರಿಸುಮಾರು 10 ಇಂಚು ಉದ್ದ ಮತ್ತು ಎರಡು ಸಮಾನಾಂತರ ಫೋರ್ಕ್‌ಗಳೊಂದಿಗೆ ಲೋಹದ ಕುದುರೆಯ ಲಾಳಾಕಾರದ ಉಂಗುರವನ್ನು ಹೊಂದಿದೆ. ಅವುಗಳ ನಡುವೆ ಲೋಹದ ನಾಲಗೆಯೊಂದು ಇದ್ದು, ಇದನ್ನು ಟ್ರಿಗ್ಗರ್ ಎಂದು ಕರೆಯಲಾಗುತ್ತದೆ. ಇದರ ಒಂದು ತುದಿಯನ್ನು ಫಿಕ್ಸ್‌ ಮಾಡಲಾಗಿದೆ. ವಾದ್ಯವನ್ನು ನುಡಿಸುವವರು ತಮ್ಮ ಮುಂಭಾಗದ ಹಲ್ಲುಗಳಿಂದ ಅದನ್ನು ಹಿಡಿದುಕೊಳ್ಳುತ್ತಾ, ಅದರ ಮೂಲಕ ಉಸಿರಾಡುತ್ತಾರೆ. ಒಂದು ಕೈಯಿಂದ ಮೋರ್ಚಾಂಗ್‌ನ ಟ್ರಿಗ್ಗರನ್ನು ನುಡಿಸುತ್ತಾರೆ; ಮತ್ತೊಂದು ಕೈಯಿಂದ ಕಬ್ಬಿಣದ ರಿಮ್ ಮೇಲೆ ಹಿಡಿತವನ್ನು ಕಾಯ್ದುಕೊಳ್ಳುತ್ತಾರೆ.

Mohanlal Lohar is a skillful instrument maker as well as a renowned morchang player who has spent over five decades mastering the craft. Morchang is a percussion instrument heard across Jaisalmer’s sand dunes
PHOTO • Sanket Jain
Mohanlal Lohar is a skillful instrument maker as well as a renowned morchang player who has spent over five decades mastering the craft. Morchang is a percussion instrument heard across Jaisalmer’s sand dunes
PHOTO • Sanket Jain

ಮೋಹನ್‌ಲಾಲ್ ಲೋಹರ್ ಅವರು ಕೌಶಲ್ಯಪೂರ್ಣ ಸಂಗೀತ ವಾದ್ಯ ತಯಾರಕರು ಮತ್ತು ಪ್ರಸಿದ್ಧ ಮೋರ್ಚಾಂಗ್ ವಾದಕರು. ಅವರು ಈ ಕರಕುಶಲತೆಯನ್ನು ಕರಗತ ಮಾಡಿಕೊಳ್ಳುವುದರಲ್ಲಿಯೇ ಐದು ದಶಕಗಳ ಜೀವಿತಾವಧಿಯನ್ನು ಕಳೆದಿದ್ದಾರೆ. ಮೋರ್ಚಾಂಗ್ ಎಂಬುದು ಜೈಸಲ್ಮೇರ್‌ನ ಮರಳುಗಾಡಿನಾದ್ಯಂತ ಸ್ವರಹೊಮ್ಮಿಸುವ ಒಂದು ಸಂಗೀತವಾದ್ಯ

ಇದು ಸುಮಾರು 1,500 ವರ್ಷಗಳಷ್ಟು ಹಳೆಯದಾದ ಪುರಾತನ ವಾದ್ಯ. "ಜಾನುವಾರುಗಳನ್ನು ಮೇಯಿಸುವಾಗ ಕುರುಬರು ಮೋರ್ಚಾಂಗನ್ನು ನುಡಿಸುತ್ತಾರೆ," ಎಂದು ಮೋಹನ್ ಲಾಲ್ ಹೇಳುತ್ತಾರೆ. ಸಂಗೀತ ಮತ್ತು ವಾದ್ಯವು ಈ ಕುರುಬರೊಂದಿಗೆ ಪ್ರಯಾಣಿಸಿತು. ಅವರು ಅದನ್ನು ನುಡಿಸುತ್ತಾ ದೂರ ದೂರದ ಪ್ರದೇಶಗಳಿಗೆ ಹೋದಂತೆ ಅದರ ಖ್ಯಾತಿಯೂ ಹರಡಿತು. ಹೀಗೆ ಇದು ರಾಜಸ್ಥಾನದಾದ್ಯಂತ, ವಿಶೇಷವಾಗಿ ಜೈಸಲ್ಮೇರ್ ಮತ್ತು ಜೋಧ್‌ಪುರ ಜಿಲ್ಲೆಗಳಲ್ಲಿ ಜನಪ್ರಿಯತೆಯನ್ನು ಪಡೆಯಿತು.

ಸದ್ಯ ಅರವತ್ತರ ಹರೆಯದಲ್ಲಿರುವ ಮೋಹನ್‌ಲಾಲ್‌ ಅವರು ಮೋರ್ಚಾಂಗ್ ತಯಾರಿಸಲು ಸುಮಾರು ಎಂಟು ಗಂಟೆಗಳನ್ನು ತೆಗೆದುಕೊಳ್ಳುತ್ತಾರೆ. ಹಿಂದೆಲ್ಲಾ ಅವರು ಒಂದು ದಿನಕ್ಕೆ ಎರಡು ವಾದ್ಯಗಳನ್ನು ತಯಾರಿಸುತ್ತಿದ್ದರು. "ನಾನು ದಿನಕ್ಕೆ ಒಂದು ಮೋರ್ಚಾಂಗ್ ಅನ್ನು ಮಾತ್ರ ತಯಾರಿಸುತ್ತೇನೆ. ಏಕೆಂದರೆ ನಾನು ಅದರ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ನನ್ನ ಮೋರ್ಚಾಂಗ್‌ಗಳು ಈಗ ಜಗತ್ಪ್ರಸಿದ್ಧಯನ್ನು ಪಡೆದಿವೆ," ಎಂದು ಅವರು ಹೇಳುತ್ತಾರೆ. ಪ್ರವಾಸಿಗಳಿಗೆ ಮಾರಲೆಂದು ಅವರ ಅಚ್ಚುಮೆಚ್ಚಿನ ಸಣ್ಣದಾದ ಚಿಕಣಿ ಮೋರ್ಚಾಂಗ್ ಲಾಕೆಟ್‌ಗಳನ್ನು ತಯಾರಿಸುವ ಕೌಶಲ್ಯವನ್ನೂ ಇವರು ಕರಗತ ಮಾಡಿಕೊಂಡಿದ್ದಾರೆ.

ಸರಿಯಾದ ರೀತಿಯ ಲೋಹವನ್ನು (ಕಬ್ಬಿಣ) ಆರಿಸುವುದು ದೊಡ್ಡ ಕೆಲಸ, "ಎಲ್ಲಾ ಲೋಹದಿಂದಲೂ ಒಳ್ಳೆಯ ಮೋರ್ಚಾಂಗ್ ತಯಾರಿಸಲು ಸಾಧ್ಯವಿಲ್ಲ," ಎಂದು ಅವರು ಹೇಳುತ್ತಾರೆ. ಅತ್ಯುತ್ತಮವಾದ ಕಬ್ಬಿಣವನ್ನು ಆರಿಸುವ ಕೌಶಲ್ಯವನ್ನು ಪಡೆಯಲು ಅವರು ಒಂದು ದಶಕಕ್ಕೂ ಹೆಚ್ಚು ಕಾಲವನ್ನು ತೆಗೆದುಕೊಂಡರು. ಅವರು ಜೈಸಲ್ಮೇರ್‌ನಿಂದ ಒಂದು ಕೆಜಿಗೆ 100 ರುಪಾಯಿ ಕೊಟ್ಟು ಕಬ್ಬಿಣವನ್ನು ಖರೀದಿಸುತ್ತಾರೆ. ಒಂದು ಮೋರ್ಚಾಂಗ್ 150 ಗ್ರಾಂಗಿಂತ ಹೆಚ್ಚು ತೂಗುವುದಿಲ್ಲ. ವಾದಕರಿಗೆ ಹಗುರವಾದ ವಾದ್ಯವೇ ಬೇಕು.

ಮೋಹನ್‌ಲಾಲ್ ಅವರ ಕುಟುಂಬದವರು ಮಾರ್ವಾಡಿ ಭಾಷೆಯಲ್ಲಿ ಧಮನ್ ಎಂದು ಕರೆಯುವ ಸಾಂಪ್ರದಾಯಿಕ ಕುಲುಮೆಯನ್ನು ಬಳಸುತ್ತಾರೆ. "ಜೈಸಲ್ಮೇರ್ ನಗರದಲ್ಲಿ ಈ ರೀತಿಯ ಕುಲುಮೆಯನ್ನು ನಿಮಗೆ ನೋಡಲು ಸಾಧ್ಯವಿಲ್ಲ. ಹೆಚ್ಚುಕಮ್ಮಿ 100 ವರ್ಷ ಹಳೆಯದಾದ ಇದು ಇನ್ನೂ ಚೆನ್ನಾಗಿ ಕೆಲಸ ಮಾಡುತ್ತದೆ," ಎಂದು ಅವರು ಹೇಳುತ್ತಾರೆ.

Mohanlal’s family uses a traditional blacksmith forge called dhaman (left) to shape metals . The dhaman is 'at least 100 years old and works perfectly,' he says. With rising temperature, the forge produces a lot of smoke (right), which causes breathing and coughing problems, says Mohanlal
PHOTO • Sanket Jain
Mohanlal’s family uses a traditional blacksmith forge called dhaman (left) to shape metals . The dhaman is 'at least 100 years old and works perfectly,' he says. With rising temperature, the forge produces a lot of smoke (right), which causes breathing and coughing problems, says Mohanlal
PHOTO • Sanket Jain

ಮೋಹನ್‌ಲಾಲ್ ಅವರ ಕುಟುಂಬವು ಲೋಹಗಳನ್ನು ಕಾಯಿಸಲು ಧಮನ್ (ಎಡ) ಎಂದು ಕರೆಯುವ ಸಾಂಪ್ರದಾಯಿಕ ಕಮ್ಮಾರ ಕುಲುಮೆಯನ್ನು ಬಳಸುತ್ತದೆ. ಈ ಧಮನ್ 'ಹೆಚ್ಚುಕಮ್ಮಿ 100 ವರ್ಷ ಹಳೆಯದಾಗಿದ್ದು, ಇನ್ನೂ ಚೆನ್ನಾಗಿ ಕೆಲಸ ಮಾಡುತ್ತದೆ,' ಎಂದು ಅವರು ಹೇಳುತ್ತಾರೆ. ಬಿಸಿ ಹೆಚ್ಚಿದಂತೆ ಈ ಕುಲುಮೆಯಿಂದ ತುಂಬಾ ಹೊಗೆ (ಬಲ) ಬರುತ್ತದೆ, ಇದರಿಂದ ಉಸಿರಾಟದ ತೊಂದರೆ ಮತ್ತು ಕೆಮ್ಮಿನ ಸಮಸ್ಯೆಗಳು ಬರುತ್ತದೆ ಎಂದು ಮೋಹನ್ ಲಾಲ್ ಹೇಳುತ್ತಾರೆ

Heating the iron in a forge is challenging as it can cause severe burns, says Mohanlal. Kaluji (right), Mohanlal’s son-in-law, helping him hammer the red-hot iron
PHOTO • Sanket Jain
Heating the iron in a forge is challenging as it can cause severe burns, says Mohanlal. Kaluji (right), Mohanlal’s son-in-law, helping him hammer the red-hot iron
PHOTO • Sanket Jain

ಕಬ್ಬಿಣವನ್ನು ಕುಲುಮೆಯಲ್ಲಿ ಬಿಸಿ ಮಾಡುವುದು ಒಂದು ಸವಾಲು, ಏಕೆಂದರೆ ಇದರಿಂದ ಸುಟ್ಟಗಾಯಗಳಾಗಬಹುದು ಎಂದು ಮೋಹನ್‌ಲಾಲ್ ಹೇಳುತ್ತಾರೆ. (ಬಲ) ಕಾದು ಕೆಂಪಾದ ಕಬ್ಬಿಣವನ್ನು ಸುತ್ತಿಗೆಯಿಂದ ಹೊಡೆಯಲು ಸಹಾಯ ಮಾಡುತ್ತಿರುವ ಮೋಹನ್‌ಲಾಲ್‌ರ ಅಳಿಯ ಕಲುಜಿ

ಇವರು ಗಾಳಿಯನ್ನು ಪಂಪ್ ಮಾಡಲು ಆಡಿನ ಚರ್ಮದಿಂದ ಮಾಡಿದ ಎರಡು ಚೀಲಗಳನ್ನು ಬಳಸುತ್ತಾರೆ. ಈ ಗಾಳಿಯು ಹಾದುಹೋಗುವ ಮರದ ತುಂಡನ್ನು ರೋಹಿಡಾ ಮರದಿಂದ (ಟೆಕೊಮೆಲ್ಲಾ ಉಂಡುಲಾಟಾ) ಮಾಡಲಾಗಿದೆ. ಕಬ್ಬಿಣವನ್ನು ಏಕಕಾಲದಲ್ಲಿ ಬಿಸಿಮಾಡಲು ಕನಿಷ್ಠ ಮೂರು ಗಂಟೆಗಳ ಕಾಲ ನಿರಂತರವಾಗಿ ಗಾಳಿ ಹಾಕಬೇಕು. ಇದು ಆಯಾಸ ತರಿಸುವ ಕೆಲಸ. ದೈಹಿಕವಾಗಿ ಗಾಳಿಯನ್ನು ಪಂಪ್ ಮಾಡುವುದರಿಂದ ತೀವ್ರವಾದ ಭುಜ ಮತ್ತು ಬೆನ್ನು ನೋವು ಬರುತ್ತದೆ. ಸರಿಯಾಗಿ ಗಾಳಿಯಾಡದೆ ಇರುವುದರಿಂದ ಉಸಿರಾಟದ ತೊಂದರೆ ಮತ್ತು ಅತಿಯಾದ ಬೆವರು ಬರುತ್ತದೆ.

ಮೋಹನ್‌ಲಾಲ್ ಅವರ ಪತ್ನಿ ಗಿಗಿದೇವಿ ಅವರು ಆಗಾಗ ಗಾಳಿ ಹಾಕಿ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ವಯಸ್ಸಾದ ಕಾರಣ ಅವರೂ ಆ ಕೆಲಸ ನಿಲ್ಲಿಸಿದರು. "ಇಡೀ ಮೋರ್ಚಾಂಗ್ ತಯಾರಿಕೆಯಲ್ಲಿ ಮಹಿಳೆಯರು ಮಾಡಬಹುದಾದ ಒಂದೇ ಒಂದು ಕೆಲಸ ಎಂದರೆ ಇದು. ಉಳಿದೆಲ್ಲವನ್ನೂ ಹಿಂದಿನಿಂದಲೂ ಪುರುಷರು ಮಾಡುತ್ತಾ ಬಂದಿದ್ದಾರೆ,” ಎನ್ನುತ್ತಾರೆ 60ರ ಹರೆಯದ ಗಿಗಿದೇವಿ. ಲೋಹರ್‌ ಕುಟುಂಬದ ಆರನೇ ತಲೆಮಾರಾದ ಇವರ ಮಕ್ಕಳು ರಣಮಲ್ ಮತ್ತು ಹರಿಶಂಕರ್ ಕೂಡ ಮೋರ್ಚಾಂಗ್‌ಗಳನ್ನು ತಯಾರಿಸುತ್ತಾರೆ.

ಗಾಳಿ ಹಾಕುತ್ತಿದ್ದಂತೆ ಮೋಹನ್‌ಲಾಲ್ ಅವರು ಸಂಡಸಿಯನ್ನು (ಕಮ್ಮಾರ ಚಿಮುಟ) ಬಳಸಿ ಕೆಂಪು ಕೆಂಪಾದ ಬಿಸಿ ಕಬ್ಬಿಣವನ್ನು ತೆಗೆದುಕೊಂಡು, ಅದನ್ನು ಆರಾನ್‌ ಎಂದು ಕರೆಯುವ ಎತ್ತರದ ಕಬ್ಬಿಣದ ತುಂಡಿನ ಮೇಲೆ ಇಡುತ್ತಾರೆ. ತಕ್ಷಣ ತಮ್ಮ ಬಲಗೈಯಲ್ಲಿ ಸುತ್ತಿಗೆಯನ್ನು ತೆಗೆದುಕೊಂಡು, ಎಡಗೈಯಿಂದ ಜಾಗ್ರತೆಯಿಂದ ಕಬ್ಬಿಣದ ತುಂಡನ್ನು ಹಿಡಿದುಕೊಳ್ಳುತ್ತಾರೆ. ಮತ್ತೊಬ್ಬ ಲೋಹರ್ ಕಬ್ಬಿಣದ ತುಂಡಿನ ಮೇಲೆ ಬಡಿಯಲು ಐದು ಕೆಜಿಯ ಸುತ್ತಿಗೆಯನ್ನು ಕೈಗೆತ್ತಿಕೊಂಡು, ಇಬ್ಬರೂ ಜೊತೆಯಾಗಿ ಸುತ್ತಿಗೆಗಳಿಂದ ಬಡಿಯುತ್ತಾರೆ.

ಇಬ್ಬರೂ ಲೋಹರ್‌ಗಳು ಒಬ್ಬರಾದ ನಂತರ ಒಬ್ಬರು ಲಯಬದ್ಧವಾಗಿ ಸುತ್ತಿಗೆಯಿಂದ ಹೊಡೆಯುತ್ತಾರೆ. "ಢೋಲಾಕಿಯಿಂದ ಬರುವ ಟ್ಯೂನ್‌ನಂತೆ ಶಬ್ದ ಬರುತ್ತದೆ ಮತ್ತು ಈ ನಾದವೇ ಮೋರ್ಚಾಂಗ್‌ಗಳನ್ನು ತಯಾರಿಸುವುದರಲ್ಲಿ ಪ್ರೀತಿ ಹುಟ್ಟುವಂತೆ ಮಾಡಿದ್ದು," ಎಂದು ಮೋಹನ್‌ಲಾಲ್ ಅವರು ಹೇಳುತ್ತಾರೆ.

Some of the tools Mohanlal uses to make a morchang: ( from left to right) ghan, hathoda, sandasi, chini, loriya, and khurpi . 'It is tough to make a morchang ,' says the 65-year-old and adds that he can’t recall how many morchangs he’s made to date: ' g inti se bahar hain woh [there is no count to it]'
PHOTO • Sanket Jain
Some of the tools Mohanlal uses to make a morchang: ( from left to right) ghan, hathoda, sandasi, chini, loriya, and khurpi . 'It is tough to make a morchang ,' says the 65-year-old and adds that he can’t recall how many morchangs he’s made to date: ' g inti se bahar hain woh [there is no count to it]'
PHOTO • Sanket Jain

ಮೋರ್ಚಾಂಗ್ ತಯಾರಿಸಲು ಮೋಹನ್ ಲಾಲ್ ಅವರು ಬಳಸುವ ಕೆಲವು ಸಲಕರಣೆಗಳೆಂದರೆ: (ಎಡದಿಂದ ಬಲಕ್ಕೆ) ಘಾನ್, ಹಠೋಡ, ಸಂಡಸಿ, ಚಿನಿ, ಲೋರಿಯಾ ಮತ್ತು ಖುರ್ಪಿ. 'ಮೋರ್ಚಾಂಗ್ ತಯಾರಿಸುವುದು ಕಷ್ಟದ ಕೆಲಸ,' ಎಂದು 65 ವರ್ಷ ವಯಸ್ಸಿನ ಇವರು ಹೇಳುತ್ತಾರೆ ಮತ್ತು ಇಲ್ಲಿಯವರೆಗೆ ಎಷ್ಟು ಮೋರ್ಚಾಂಗ್‌ಗಳನ್ನು ತಯಾರಿಸಿದ್ದಾರೆ ಎಂದು ನೆನಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ: 'ಗಿಂಟಿ ಸೆ ಬಹರ್ ಹೈ ವೋಹ್ [ಇದಕ್ಕೆ ಯಾವುದೇ ಲೆಕ್ಕ ಇಲ್ಲ]'

Left: Ranmal, Mohanlal's elder son and a sixth generation lohar, playing the instrument . 'Many people have started using machines for hammering, but we do it using our bare hands even today,' he says.
PHOTO • Sanket Jain
Right: Besides morchangs , Mohanlal has taught himself to craft alghoza, shehnai, murli, sarangi, harmonium and flute
PHOTO • Sanket Jain

ಎಡ: ಮೋಹನ್‌ಲಾಲ್‌ರ ಹಿರಿಯ ಮಗ, ಲೋಹರ್‌ ಕುಟುಂಬದ ಆರನೇ ತಲೆಮಾರಿನ ರಣಮಲ್ ಕೂಡ ವಾದ್ಯವನ್ನು ನುಡಿಸುತ್ತಾರೆ. 'ಹಲವು ಜನ ಸುತ್ತಿಗೆಯಿಂದ ಬಡಿಯಲು ಯಂತ್ರಗಳನ್ನು ಬಳಸಲು ಆರಂಭಿಸಿದ್ದಾರೆ, ಆದರೆ ನಾವು ಮಾತ್ರ ಇಂದಿಗೂ ನಮ್ಮ ಕೈಯಿಂದಲೇ ಅದನ್ನು ಮಾಡುತ್ತಿದ್ದೇವೆ,' ಎಂದು ಅವರು ಹೇಳುತ್ತಾರೆ. ಬಲ: ಇವರಿಗೆ ಮೋಹನ್‌ಲಾಲ್ ಅವರು ಮೋರ್ಚಾಂಗ್‌ಗಳ ಜೊತೆಗೆ ಅಲ್ಗೋಜಾ, ಶೆಹನಾಯಿ, ಮುರಳಿ, ಸಾರಂಗಿ, ಹಾರ್ಮೋನಿಯಂ ಮತ್ತು ಕೊಳಲುಗಳನ್ನು ತಯಾರಿಸಲು ಸ್ವತಃ ಕಲಿಸಿದ್ದಾರೆ

ಈ 'ಸಂಗೀತವನ್ನು' ಸುಮಾರು ಮೂರು ಗಂಟೆಗಳ ಕಾಲ ನುಡಿಸಲಾಗುತ್ತದೆ. ಇದರಿಂದ ಇವರ ಕೈಗಳು ಊದಿಕೊಳ್ಳುತ್ತವೆ. ಈ ಕುಶಲಕರ್ಮಿ ಮೂರು ಗಂಟೆಗಳಲ್ಲಿ 10,000 ಬಾರಿ ಸುತ್ತಿಗೆಯನ್ನು ಎತ್ತಬೇಕು ಮತ್ತು ಒಂದು ಸಣ್ಣ ತಪ್ಪಾದರೂ ಬೆರಳುಗಳಿಗೆ ಗಾಯವಾಗಬಹುದು. "ಈ ಹಿಂದೆ ನನ್ನ ಉಗುರುಗಳು ಮುರಿದಿದ್ದವು. ಇಂತಹ ಕೆಲಸದಲ್ಲಿ ಗಾಯಗಳಾಗುವುದು ಸರ್ವೇಸಾಮಾನ್ಯ,” ಎಂದು ಮೋಹನ್ ಲಾಲ್ ಅವರು ನೋವು ತುಂಬಿದ ನಗುವಿನಿಂದ ಹೇಳುತ್ತಾರೆ. ಗಾಯಗಳು ಮಾತ್ರವಲ್ಲ, ಚರ್ಮಕ್ಕೆ ಸುಟ್ಟಗಾಯಗಳಾಗುವುದೂ ಸಾಮಾನ್ಯ. "ಹಲವು ಜನ ಬಡಿಯಲು ಯಂತ್ರಗಳನ್ನು ಬಳಸಲು ಆರಂಭಿಸಿದ್ದಾರೆ, ಆದರೆ ನಾವು ಮಾತ್ರ ಇಂದಿಗೂ ನಮ್ಮ ಕೈಯಿಂದಲೇ ಅದನ್ನು ಮಾಡುತ್ತಿದ್ದೇವೆ," ಎಂದು ಮೋಹನ್‌ಲಾಲ್ ಅವರ ಹಿರಿಯ ಮಗ ರಣಮಲ್ ಹೇಳುತ್ತಾರೆ.

ಸುತ್ತಿಗೆಯಿಂದ ಬಡಿಯುವ ಕೆಲಸದ ನಂತರ ಮೋರ್ಚಾಂಗ್ ಅನ್ನು ರಚಿಸುವ ಅತ್ಯಂತ ಕಷ್ಟಕರವಾದ ಪ್ರಕ್ರಿಯೆ ಬರುತ್ತದೆ - ಬಿಸಿಯಾದ ಕಬ್ಬಿಣಕ್ಕೆ ಎಚ್ಚರಿಕೆಯಿಂದ ರೂಪ ನೀಡುವುದು. ಈ ಪ್ರಕ್ರಿಯೆ ಇನ್ನೂ ಎರಡು ಗಂಟೆಗಳ ಕಾಲ ನಡೆಯುತ್ತದೆ. ಈ ಸಮಯದಲ್ಲಿ ಅವರು ಸಂಕೀರ್ಣವಾದ ವಿನ್ಯಾಸಗಳನ್ನು ರೂಪಿಸುತ್ತಾರೆ. ಎರಡು ಗಂಟೆಗಳ ಕಾಲ ಮೇಲ್ಮೈಯನ್ನು ಉಜ್ಜಿ ನುಣುಪುಗೊಳಿಸುವ ಮೊದಲು ಉಪಕರಣವನ್ನು ಒಂದು ಗಂಟೆ ಅಥವಾ ಎರಡು ಗಂಟೆಗಳ ಕಾಲ ತಣ್ಣಗಾಗಲು ಬಿಡಲಾಗುತ್ತದೆ. "ಉಜ್ಜುವ ಕೆಲಸ ಒಂದು ಮ್ಯಾಜಿಕ್‌ನಂತೆ, ಏಕೆಂದರೆ ಇದರಿಂದ ಮೋರ್ಚಾಂಗ್ ನುಣುಪಾದ ಕನ್ನಡಿಯಂತೆ ಹೊಳೆಯುತ್ತದೆ," ಎಂದು ರಣಮಲ್ ಅವರು ಹೇಳುತ್ತಾರೆ.

ಪ್ರತಿ ತಿಂಗಳು ಮೋಹನ್‌ಲಾಲ್ ಅವರ ಕುಟುಂಬಕ್ಕೆ ಕನಿಷ್ಠ 10 ಮೋರ್ಚಾಂಗ್‌ಗಳನ್ನು ತಯಾರಿಸುವ ಆರ್ಡರ್‌ಗಳು ಸಿಗುತ್ತವೆ. ಅದು ಪ್ರತೀ ಪೀಸು 1,200 ರಿಂದ 1,500 ರುಪಾಯಿಗೆ ಮಾರಾಟವಾಗುತ್ತದೆ. ಚಳಿಗಾಲದಲ್ಲಿ ಪ್ರವಾಸಿಗರು ಬರುವುದು ಹೆಚ್ಚಾದಂತೆ ಬಂದಾಗ ಈ ಸಂಖ್ಯೆಯೂ ದ್ವಿಗುಣವಾಗುತ್ತದೆ. "ಅನೇಕ ಪ್ರವಾಸಿಗರು ಇಮೇಲ್ ಮೂಲಕವೂ ಆರ್ಡರ್ ಕೊಡುತ್ತಾರೆ," ಎಂದು ರಣಮಲ್ ಹೇಳುತ್ತಾರೆ. ಫ್ರಾನ್ಸ್, ಜರ್ಮನಿ, ಜಪಾನ್, ಅಮೇರಿಕಾ, ಆಸ್ಟ್ರೇಲಿಯಾ, ಇಟಲಿ ಮತ್ತು ಬೇರೆ ಹಲವಾರು ದೇಶಗಳಿಂದಲೂ ಆರ್ಡರ್‌ಗಳು ಬರುತ್ತವೆ. ಮೋಹನ್‌ಲಾಲ್ ಮತ್ತು ಅವರ ಮಗ ರಾಜಸ್ಥಾನದಾದ್ಯಂತ ನಡೆಯುವ ಬೇರೆಬೇರೆ ಸಾಂಸ್ಕೃತಿಕ ಉತ್ಸವಗಳಿಗೆ ಹೋಗಿ ಮಾರಾಟ ಮಾಡುವುದರ ಜೊತೆಗೆ ಪ್ರದರ್ಶನವನ್ನೂ ನೀಡುತ್ತಾರೆ.

'ಒಬ್ಬ ಇಡೀ ದಿನ ಕೆಲಸ ಮಾಡಬೇಕು, ನಂತರ ಗ್ರಾಹಕರು ಸಿಕ್ಕಿದರೆ ಕೇವಲ 300 ರಿಂದ 400 ರೂಪಾಯಿಗಳನ್ನು ಸಂಪಾದಿಸುತ್ತಾನೆ. ಇದು ಒಪ್ಪುವಂತದ್ದಲ್ಲ,' ಎನ್ನುತ್ತಾರೆ ಮೋಹನ್ ಲಾಲ್

ವಿಡಿಯೋ ನೋಡಿ: ಜೈಸಲ್ಮೇರ್‌ನ ಮೋರ್ಚಾಂಗ್ ತಯಾರಕ

ಮೋಹನ್‌ಲಾಲ್ ಅವರು ತಮ್ಮ ಮಕ್ಕಳು ಈ ಕಲೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂಬ ಕೃತಜ್ಞತಾ ಭಾವವನ್ನು ಹೊಂದಿದ್ದರೂ, ಜೈಸಲ್ಮೇರ್‌ನಲ್ಲಿ ಮಾತ್ರ ಕೈಯಿಂದ ಮೋರ್ಚಾಂಗ್ ತಯಾರಿಸುವ ಕುಶಲಕರ್ಮಿಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದೆ. "ಈ [ಉತ್ತಮ] ಗುಣಮಟ್ಟದ ಮೋರ್ಚಾಂಗ್‌ಗೂ ಜನ ಸಾವಿರ ರೂಪಾಯಿಗಳನ್ನು ಕೊಡಲು ಮುಂದೆ ಬರುವುದಿಲ್ಲ," ಎಂದು ಅವರು ಹೇಳುತ್ತಾರೆ. ಮೋರ್ಚಾಂಗ್‌ಗಳನ್ನು ತಯಾರಿಸಲು ಸಾಕಷ್ಟು ತಾಳ್ಮೆ ಮತ್ತು ಕಠಿಣ ಪರಿಶ್ರಮದ ಅಗತ್ಯವಿದೆ, ಇದಕ್ಕೆ ಅನೇಕರು ಸಿದ್ಧರಿಲ್ಲ. “ಒಬ್ಬ ಇಡೀ ದಿನ ಕೆಲಸ ಮಾಡಬೇಕು, ನಂತರ ಗ್ರಾಹಕರು ಸಿಕ್ಕಿದರೆ ಕೇವಲ 300 ರಿಂದ 400 ರೂಪಾಯಿಗಳನ್ನು ಸಂಪಾದಿಸುತ್ತಾನೆ. ಇದು ಒಪ್ಪುವಂತದ್ದಲ್ಲ,” ಎಂದು ಅವರು ಹೇಳುತ್ತಾರೆ.

ಅನೇಕ ಲೋಹರ್‌ಗಳು ಹೊಗೆಯಿಂದಾಗಿ ತಮಗೆ ದೃಷ್ಟಿದೋಷ ಬರುತ್ತಿದೆ ಎಂದು ಹೇಳುತ್ತಾರೆ. "ಕುಲುಮೆಯಿಂದ ತುಂಬಾ ಹೊಗೆ ಬರುತ್ತದೆ, ಇದು ಸಾಮಾನ್ಯವಾಗಿ ನೇರ ಕಣ್ಣು ಮತ್ತು ಮೂಗಿಗೆ ಹೋಗುತ್ತದೆ, ಇದರಿಂದ ಕೆಮ್ಮು ಬರುತ್ತದೆ,” ಎಂದು ರಣಮಲ್ ಹೇಳುತ್ತಾರೆ. "ನಾವು ಮೈ ಸುಡುವ ಬಿಸಿಯಲ್ಲಿ ಕುಲುಮೆಯ ಬಳಿ ಕುಳಿತುಕೊಳ್ಳಬೇಕು, ಇದರಿಂದ ಉಸಿರುಗಟ್ಟಿದಂತಾಗುತ್ತದೆ," ಎನ್ನುತ್ತಾರೆ ಅವರು. ಇವರ ಮಾತುಗಳನ್ನು ಆಲಿಸಿದ ಮೋಹನ್‌ಲಾಲ್ ಅವರು ತಮ್ಮ ಮಗನಿಗೆ, "ನೀವು ಹೀಗೆ ಗಾಯಗಳ ಕಡೆ ಗಮನ ಕೊಟ್ಟರೆ, ಹೇಗೆ ಕಲಿಯುತ್ತೀರಿ?" ಎಂದು ಪ್ರಶ್ನಿಸುತ್ತಾರೆ.

ಮೋಹನ್‌ಲಾಲ್ ಅವರು ಮೋರ್ಚಾಂಗ್‌ಗಳ ಜೊತೆಗೆ ಅಲ್ಗೋಜಾ (ಮರದಿಂದ ತಯಾರಿಸಿದ ಈ ಜೋಡಿ ವಾಯುಸಂಗೀತ ವಾದ್ಯವನ್ನು ಡಬಲ್ ಕೊಳಲು ಎಂದೂ ಕರೆಯುತ್ತಾರೆ), ಶೆಹನಾಯಿ, ಮುರಳಿ, ಸಾರಂಗಿ, ಹಾರ್ಮೋನಿಯಂ ಮತ್ತು ಕೊಳಲುಗಳನ್ನು ತಯಾರಿಸುವುದನ್ನು ಸ್ವತಃ ಕಲಿತುಕೊಂಡರು. "ನನಗೆ ಸಂಗೀತ ವಾದ್ಯಗಳನ್ನು ನುಡಿಸುವುದೆಂದರೆ ಇಷ್ಟ, ಆದ್ದರಿಂದ ನಾನು ಈ ವಾದ್ಯಗಳನ್ನು ತಯಾರಿಸುವುದನ್ನು ಕಲಿತೆ," ಎನ್ನುವ ಇವರು ಇವುಗಳಲ್ಲಿ ಹೆಚ್ಚಿನ ವಾದ್ಯಗಳನ್ನು ಲೋಹದ ಪೆಟ್ಟಿಗೆಯೊಂದರಲ್ಲಿ ಎಚ್ಚರಿಕೆಯಿಂದ ತೆಗೆದಿಟ್ಟಿದ್ದಾರೆ. “ಯೇ ಮೇರಾ ಖಜಾನಾ ಹೇ [ಇದು ನನ್ನ ಸಂಪತ್ತು],” ಎಂದು ಅವರು ನಗುತ್ತಾ ಹೇಳುತ್ತಾರೆ.

ಈ ಕಥೆ ಸಂಕೇತ್ ಜೈನ್ ಅವರ ಗ್ರಾಮೀಣ ಕುಶಲಕರ್ಮಿಗಳ ಸರಣಿ ವರದಿಯ ಭಾಗವಾಗಿದ್ದು, ಮೃಣಾಲಿನಿ ಮುಖರ್ಜಿ ಪ್ರತಿಷ್ಠಾನದ ಅಡಿಯಲ್ಲಿ ತಯಾರಿಸಲಾಗಿದೆ.

ಅನುವಾದ: ಚರಣ್‌ ಐವರ್ನಾಡು

Sanket Jain

Sanket Jain is a journalist based in Kolhapur, Maharashtra. He is a 2022 PARI Senior Fellow and a 2019 PARI Fellow.

Other stories by Sanket Jain
Editor : Siddhita Sonavane

Siddhita Sonavane is Content Editor at the People's Archive of Rural India. She completed her master's degree from SNDT Women's University, Mumbai, in 2022 and is a visiting faculty at their Department of English.

Other stories by Siddhita Sonavane
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad