ಸುಪಾರಿ ಪುತೆಲ್ ಅವರಿಗೆ ಕಳೆದ ಒಂದು ದಶಕದಲ್ಲಿ ತಾನು ಆಸ್ಪತ್ರೆಗಳಲ್ಲಿ ಎಷ್ಟು ಸಮಯವನ್ನು ಕಳೆದೆನೆನ್ನುವುದು ನಿಖರವಾಗಿ ನೆನಪಿಲ್ಲ.

ಇಷ್ಟು ದೀರ್ಘ ವರ್ಷಗಳ ಕಾಲ ಅವರು ತನ್ನ ಅನಾರೋಗ್ಯದಿಂದ ಬಳಲುತ್ತಿದ್ದ 17 ವರ್ಷದ ಮಗನ ಚಿಕಿತ್ಸೆಗಾಗಿ ಒಡಿಶಾ ಮತ್ತು ಛತ್ತೀಸಗಢದ ಆಸ್ಪತ್ರೆಗಳಿಗೆ ಅಲೆಯುತ್ತಿದ್ದರು. ಅದರ ನಂತರ ಕೆಲವು ದಿನಗಳ ಕಾಲ ತನ್ನ ಪತಿ ಸುರೇಶ್ವರ್‌ ಅವರ ಚಿಕಿತ್ಸೆಗೆಗಾಗಿ ಮುಂಬೈಗೂ ಪ್ರಯಾಣ ಬೆಳೆಸಿದರು.

ಆದರೆ ಇಬ್ಬರೂ 2019ರಲ್ಲಿ ನಾಲ್ಕು ತಿಂಗಳ ಆಸುಪಾಸಿನಲ್ಲಿ ತೀರಿಕೊಳ್ಳುವುದರೊಂದಿಗೆ ಸುಪಾರಿಯವರನ್ನು ದುಃಖದ ಆಳ ಕಡಲಿನಲ್ಲಿ ನೂಕಿದರು.

ಅವರ ಪತಿ ಸುರೇಶ್ವರ ಅವರಿಗೆ ಕೇವಲ 44 ವರ್ಷವಾಗಿತ್ತು. ಸೆಪ್ಟೆಂಬರ್ 2019ರಲ್ಲಿ, ಅವರು ಮತ್ತು ಸುಪಾರಿ ಒಡಿಶಾದ ಬಾಲಂಗೀರ್ ಜಿಲ್ಲೆಯ ತಮ್ಮ ಮನೆಯಿಂದ ಸುಮಾರು 1,400 ಕಿ.ಮೀ. ದೂರದ ಮುಂಬೈಗೆ ವಲಸೆ ಬಂದಿದ್ದರು. ಅಲ್ಲಿ ಸ್ಥಳೀಯ ಕಾರ್ಮಿಕರ ದಲ್ಲಾಳಿಯೊಬ್ಬರು ದಂಪತಿಗಳನ್ನು ನಿರ್ಮಾಣ ಸ್ಥಳದಲ್ಲಿ ಕೆಲಸಕ್ಕಾಗಿ ನೇಮಿಸಿಕೊಂಡರು. "ನಾವು ನಮ್ಮ ಸಾಲಗಳನ್ನು ತೀರಿಸಲು ಮತ್ತು ನಮ್ಮ ಮನೆ [ನಿರ್ಮಾಣವನ್ನು] ಪೂರ್ಣಗೊಳಿಸಲು ಸ್ವಲ್ಪ ಹಣವನ್ನು ಸಂಪಾದಿಸುವ ಸಲುವಾಗಿ ಹೋಗಿದ್ದೆವು" ಎಂದು ಸುಪಾರಿ ಹೇಳಿದರು. ಇಬ್ಬರಿಗೂ ಸೇರಿ ದಿನವೊಂದಕ್ಕೆ 600 ರೂಪಾಯಿಗಳ ಕೂಲಿ ದೊರೆಯುತ್ತಿತ್ತು.

"ಒಂದು ಸಂಜೆ, ಮುಂಬೈನ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿ ನನ್ನ ಪತಿಗೆ ತೀವ್ರ ಜ್ವರ ಬಂತು" ಎಂದ 43 ವರ್ಷದ ಸುಪಾರಿ, ತುರೆಕೆಲಾ ಬ್ಲಾಕ್‌ನ 933 ಜನರ ಹಳ್ಳಿಯಾದ ಹಿಯಾಲ್‌ನಲ್ಲಿರುವ ತನ್ನ ಕಚ್ಚಾ ಮನೆಯ ಮುಂದೆ ನೆಲದ ಮೇಲೆ ಕುಳಿತು, ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದರು. ಅವರು ಮತ್ತು ಅವರ ಕುಟುಂಬ ಮಾಲಿ ಜಾತಿಗೆ ಸೇರಿದವರಾಗಿದ್ದು ಇದು ಇತರೇ ಹಿಂದುಳಿದ ಜಾತಿಗಳ (ಒಬಿಸಿ) ಪಟ್ಟಿಯಲ್ಲಿ ಬರುತ್ತದೆ.

ಸುರೇಶ್ವರ ಅವರನ್ನು ಉತ್ತರ-ಕೇಂದ್ರ ಮುಂಬೈಯಲ್ಲಿನ ಸಿಯಾನ್‌ನ ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆಗೆ ಸೇರಿಸುವ ಮೊದಲು, ಸುಪಾರಿ ಮತ್ತು ನಿರ್ಮಾಣ ಸ್ಥಳದ ಸೂಪರ್‌ವೈಸರ್‌ ಆಟೋರಿಕ್ಷಾಗಳು ಮತ್ತು ಆಂಬ್ಯುಲೆನ್ಸ್ ಮೂಲಕ ನಗರದ ಪರಿಧಿಯಲ್ಲಿರುವ ಮೂರು ಆಸ್ಪತ್ರೆಗಳಿಗೆ ಅಲೆದಾಡಿದ್ದರು.

"ಪ್ರತಿ ಆಸ್ಪತ್ರೆಯವರೂ ನಮ್ಮನ್ನು ಮತ್ತೊಂದು ಆಸ್ಪತ್ರೆಗೆ ಕಳುಹಿಸುತ್ತಿದ್ದರು, ಏಕೆಂದರೆ [ಆ ಸಮಯದಲ್ಲಿ] ನಮ್ಮ ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳು ನಮ್ಮೊಂದಿಗಿದ್ದಿರಲಿಲ್ಲ" ಎಂದು ಸುಪಾರಿ ಹೇಳಿದರು. "ಅವರಿಗೆ ಕಾಮಾಲೆ [ರೋಗಲಕ್ಷಣ] ಇತ್ತು. ಅವರ ದೇಹದ ಸೊಂಟದಿಂದ ಕೆಳಭಾಗ ಪಾರ್ಶ್ವವಾಯುವಿಗೆ ಒಳಗಾಯಿತು,  ಆ ಸಮಯದಲ್ಲಿ ನಾನು ಅವರ ಪಾದಗಳನ್ನು ತಿಕ್ಕುತ್ತಿದ್ದೆ,” ಎಂದು ಅವರು ಹೇಳುತ್ತಾರೆ, ಆದರೆ ಆಕೆಗೆ ಅವರಿಗಿದ್ದಿದ್ದು ಯಾವ ರೋಗವೆಂದು ಸರಿಯಾಗಿ ತಿಳಿದಿರಲಿಲ್ಲ. ಮರುದಿನ, ಸುರೇಶ್ವರ ಅವರು 6 ನವೆಂಬರ್ 2019ರಂದು ಆಸ್ಪತ್ರೆಯಲ್ಲಿ ನಿಧನರಾದರು.

Supari Putel in front of her mud house and the family's incomplete house (right) under the Pradhan Mantri Awaas Yojana: 'This house cost me my husband'
PHOTO • Anil Sharma
Supari Putel in front of her mud house and the family's incomplete house (right) under the Pradhan Mantri Awaas Yojana: 'This house cost me my husband'
PHOTO • Anil Sharma

ಸುಪಾರಿ ಪುತೆಲ್ ಅವರ ಮಣ್ಣಿನ ಮನೆಯ ಮುಂದೆ ಮತ್ತು (ಬಲ) ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಕುಟುಂಬಕ್ಕೆ ಸೇರಿದ ಅರೆ-ನಿರ್ಮಿತ ಮನೆ: 'ಈ ಮನೆ ನನ್ನ ಗಂಡನ ಜೀವವನ್ನು ಬಲಿ ತೆಗೆದುಕೊಂಡಿತು '

"ನಮ್ಮ ಸೂಪರ್‌ವೈಸರ್‌ ಊರಿಗೆ ಶವ ಸಾಗಿಸಲು ಬಹಳ ಹಣ ಖರ್ಚಾಗುವುದರಿಂದಾಗಿ ಮುಂಬೈಯಲ್ಲೇ ಅಂತ್ಯಕ್ರಿಯೆ ನಡೆಸುವಂತೆ ಸಲಹೆ ನೀಡಿದರು. ಕೊನೆಗೆ ನಾನೂ ಅದಕ್ಕೆ ಒಪ್ಪಿಕೊಂಡೆ" ಎಂದು ಸುಪಾರಿ ಹೇಳುತ್ತಾರೆ. "ಅಂತ್ಯಕ್ರಿಯೆಯ ಖರ್ಚುಗಳನ್ನು ಸೂಪರ್‌ವೈಸರ್‌ ಅವರೇ ವಹಿಸಿಕೊಂಡರು. ನಂತರ ನನ್ನ ಬಾಕಿ ಸಂಬಳದೊಡನೆ ಊರಿಗೆ ಕಳುಹಿಸಿದರು. ಆ ದಿನ ನನ್ನ ಒಂದು ಕೈಯಲ್ಲಿ ಗಂಡನ ಡೆತ್‌ ಸರ್ಟಿಫಿಕೇಟ್‌, ಇನ್ನೊಂದು ಕೈಯಲ್ಲಿ ಅಸ್ತಿಯಿತ್ತು," ಎಂದು ನೆನಪಿಸಿಕೊಳ್ಳುತ್ತಾರೆ ಪುತೇಲ್.‌ ತನ್ನ ಕೈಗೆ ಸಿಕ್ಕಿದ ಸಂಬಳದ ಹಣ 6000 ರೂಪಾಯಿಗಳಲ್ಲಿ ತನ್ನ ಮತ್ತು ಬಾಲಂಗೀರ್‌ನ ಕಾರ್ಲಬಹಲಿ ಗ್ರಾಮದಿಂದ ತನ್ನನ್ನು ಊರಿಗೆ ಕರೆದೊಯ್ಯಲು ಬಂದಿದ್ದ ಅಣ್ಣನ ರೈಲು ಟಿಕೇಟಿಗಾಗಿ ಒಂದಷ್ಟು ಹಣವನ್ನು ವ್ಯಯಿಸಿದ್ದರು.

ಕೆಲಸಕ್ಕೆಂದು ಮುಂಬಯಿಗೆ ತೆರಳುವ ಮೊದಲು ಸುಪಾರಿ ಮತ್ತು ಸುರೇಶ್ವರ ದಂಪತಿ ತಮ್ಮ ಸ್ವಂತ ಊರಾದ ಬಾಲಬೀರ್‌ನ ಕಾಂತಬಂಜಿ ಪಟ್ಟಣ ಅಥವಾ ಛತ್ತೀಸ್‌ಗಢದ ರಾಯ್‌ಪುರದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರಿಗೆ ದಿನಗೂಲಿಯಾಗಿ ಒಬ್ಬರಿಗೆ 150 ರೂಪಾಯಿ ಸಿಗುತ್ತಿತ್ತು. (ಒಡಿಶಾ ಸರ್ಕಾರದ ಜುಲೈ 2020ರ ಅಧಿಸೂಚನೆಯು ಈ "ಕೌಶಲ್ಯರಹಿತ" ವರ್ಗದ ಕಾರ್ಮಿಕರಿಗೆ ಕನಿಷ್ಠ ವೇತನವನ್ನು 303.40 ರೂ.ಗೆ ನಿಗದಿಪಡಿಸಿದೆ). ಸುರೇಶ್ವರ ಮತ್ತು ಅವರ ಆರು ಮಂದಿ ಸಹೋದರರು ತಮ್ಮ ಭೂಮಿಯನ್ನು ಪಾಲು ಮಾಡಿಕೊಂಡಿದ್ದರು. (ಸುಪಾರಿಯವರಿಗೆ ಅವರ ಬಳಿ ಎಷ್ಟು ಭೂಮಿಯಿತ್ತೆಂದು ಹೇಳುವುದು ಸಾಧ್ಯವಾಗಲಿಲ್ಲ.) ಆದರೆ ಆ ಪ್ರದೇಶದಲ್ಲಿ ನೀರಿನ ಕೊರತೆಯಿರುವ ಕಾರಣ ಅವರು ಕೃಷಿ ಮಾಡುತ್ತಿರಲಿಲ್ಲ.

2016 ಮತ್ತು 2018ರ ನಡುವೆ ಇಟ್ಟಿಗೆ ಗೂಡುಗಳಲ್ಲಿನ ಕೆಲಸಕ್ಕಾಗಿ ಎರಡು ಬಾರಿ ಮದ್ರಾಸ್‌ಗೆ ಹೋಗಿದ್ದಾಗಿ ಸುಪಾರಿ ಹೇಳುತ್ತಾರೆ. “ನನ್ನ ಮಕ್ಕಳು ಬೆಳೆಯುತ್ತಿದ್ದರು ಹಾಗೂ ಬಿದ್ಯಾಧರ್ ಅನಾರೋಗ್ಯಕ್ಕೆ ಒಳಗಾಗಿದ್ದ ಕಾರಣ ನಮಗೆ ಹಣದ ಅಗತ್ಯವಿತ್ತು. ಅವನು 10 ವರ್ಷಗಳ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ."

ಬಿದ್ಯಾಧರ್‌ ಸುಪಾರಿ ದಂಪತಿಗಳ ಮೂರು ಮಕ್ಕಳಲ್ಲಿ ಮಧ್ಯದವನು. ಅವರ ಹಿರಿಯ ಮಗಳು 22 ವರ್ಷದ ಜನನಿ ಮತ್ತು ಕಿರಿಯ ಮಗ, 15 ವರ್ಷದ ಧನುಧರ್. ಅವರ 71 ವರ್ಷದ ಅತ್ತೆ ಸುಫುಲ್ ಕೂಡ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಸುಫುಲ್‌ ಅವರ ಪತಿ ಲುಕನಾಥ್ ಪುತೆಲ್ (ಅವರು ಈಗ ಬದುಕಿಲ್ಲ) ಅವರೊಡನೆ ಕೃಷಿ ಕೆಲಸಗಳನ್ನು ಮಾಡುತ್ತಿದ್ದರು. ಪ್ರಸ್ತುತ ವೃದ್ಧಾಪ್ಯ ವೇತನದ ಸಹಾಯದಿಂದ ಜೀವನ ನಡೆಸುತ್ತಿದ್ದಾರೆ. ಹಿರಿಯ ಮಗಳು ಜನನಿ ನುವಾಪಾಡಾ ಜಿಲ್ಲೆಯ ಸಿಕುವಾನ್ ಗ್ರಾಮದಲ್ಲಿರುವ ಕುಟುಂಬವೊಂದಕ್ಕೆ ವಿವಾಹವಾಗಿದ್ದು, 10ನೇ ತರಗತಿಯ ವಿದ್ಯಾರ್ಥಿ ಧನುಧರ್ ತನ್ನ ಅಣ್ಣನ ಮರಣದ ನಂತರ ಪೋಷಕರು ಮುಂಬೈ ತೆರಳಿದ ಕಾರಣ ಅಕ್ಕನ ಮನೆಯಲ್ಲಿ ಇರತೊಡಗಿದನು.

ತನ್ನ ಮಗನಿಗೆ ಅವನ 17 ವರ್ಷದ ಪ್ರಾಯದಲ್ಲಿ ಯಾವ ರೀತಿಯ ಕ್ಯಾನ್ಸರ್‌ ಕಾಡಿತೆಂದು ಸುಪಾರಿಯವರಿಗೆ ತಿಳಿದಿಲ್ಲ. ಬಿದ್ಯಾಧರ್ 10 ವರ್ಷಗಳಿಂದ ಈ ಕಾಯಿಲೆಯೊಂದಿಗೆ ಹೋರಾಡುತ್ತಿದ್ದ, ಕುಟುಂಬವು ಅವನಿಗೆ ಚಿಕಿತ್ಸೆ ಕೊಡಿಸಲೆಂದು ಹಲವು ಆಸ್ಪತ್ರೆಗಳನ್ನು ಎಡತಾಕಿತು. "ನಾವು [ಸಂಬಲ್ಪುರ ಜಿಲ್ಲೆಯ] ಬುರ್ಲಾ ಆಸ್ಪತ್ರೆಗೆ ಮೂರು ವರ್ಷ, ಮೂರು ವರ್ಷ ಬಾಲಂಗೀರ್ ಆಸ್ಪತ್ರೆಗೆ ಮತ್ತು ರಾಮಕೃಷ್ಣ ಆಸ್ಪತ್ರೆಗೆ ಹೋಗಿದ್ದೆವು" ಎಂದು ಅವರು ಹೇಳುತ್ತಾರೆ. ಕೊನೆಯದಾಗಿ ಹೋಗಿದ್ದು ಸುಪಾರಿಯವರ ಊರಿನಿಂದ 190 ಕಿ.ಮೀ ದೂರದಲ್ಲಿರುವ ರಾಯ್‌ಪುರದ ಖಾಸಗಿ ಆಸ್ಪತ್ರೆಗೆ. ಅಲ್ಲಿಗೆ ಹೋಗಲು, ಅವರು ಹಿಯಾಲ್‌ಗೆ ಹತ್ತಿರದ ರೈಲ್ವೆ ನಿಲ್ದಾಣವಾದ ಕಾಂತಬಂಜಿಯಿಂದ ರೈಲು ಹಿಡಿಯುತ್ತಿದ್ದರು.

ಮಗನ ಚಿಕಿತ್ಸೆಯ ಸಂದರ್ಭದಲ್ಲಿ, ಕುಟುಂಬವು ಸ್ನೇಹಿತರು, ಸಂಬಂಧಿಕರು ಮತ್ತು ಸ್ಥಳೀಯ ಲೇವಾದೇವಿದಾರರಿಂದ ಬಿದ್ಯಾಧರನ ಚಿಕಿತ್ಸೆಗಾಗಿ ಹಣವನ್ನು ಸಾಲ ಪಡೆಯಬೇಕಾಯಿತು. ತನ್ನ ಮಗನ ಚಿಕಿತ್ಸೆಗಾಗಿ 50,000 ರೂಗಳನ್ನು ಸಂಗ್ರಹಿಸಲು ಸುಪಾರಿ ಕಾಂತಬಂಜಿಯ ಅಂಗಡಿಯೊಂದರಲ್ಲಿ ಮಗಳು ಜನನಿಯ ಆಭರಣವನ್ನು ಅಡಮಾನ ಇಟ್ಟಿದ್ದರು.

Suphul Putel (left), still grieving too, is somehow convinced that Supari, her daughter-in-law, is not being truthful about how Sureswara died: 'My son talked to me on the phone and he seemed to be well...'
PHOTO • Anil Sharma
Suphul Putel (left), still grieving too, is somehow convinced that Supari, her daughter-in-law, is not being truthful about how Sureswara died: 'My son talked to me on the phone and he seemed to be well...'
PHOTO • Anil Sharma

ಸುಫುಲ್ ಪುತೆಲ್ (ಎಡ) ಈಗಲೂ ಮಗನ ನೆನಪಿನಲ್ಲಿ ದುಃಖಿಸುತ್ತಾರೆ, ಮತ್ತು ಸುರೇಶ್ವರ ಹೇಗೆ ಮರಣಹೊಂದಿದರೆನ್ನುವುದರ ಕುರಿತು ಅವರ ಸೊಸೆ ಸುಪಾರಿ ಸತ್ಯವನ್ನು ಹೇಳಿಲ್ಲವೆನ್ನುವುದು ಅವರ ನಂಬಿಕೆ: 'ನನ್ನ ಮಗ ನನ್ನೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದ ಆಗ ಅವನು ಚೆನ್ನಾಗಿಯೇ ಇದ್ದ …"

ಸಾಲ ಹೆಚ್ಚಾದಾಗ ತೀರಿಸಲೇಬೇಕಾದ ಒತ್ತಡದಲ್ಲಿದ್ದ ದಂಪತಿ ಮಾರ್ಚ್ 2019ರಲ್ಲಿ ಮುಂಬೈಗೆ ತೆರಳಿದರು. ಆದರೆ ಅದೇ ವರ್ಷದ ಜೂನ್‌ನಲ್ಲಿ, ಅವರ ಮಗನ ಆರೋಗ್ಯದ ಸ್ಥಿತಿ ಹದಗೆಡಲು ಪ್ರಾರಂಭಿಸಿದಾಗ, ಸುಪಾರಿ ತಕ್ಷಣ ಹಿಯಾಲ್‌ಗೆ ಮರಳಿದರು, ಮತ್ತು ಸುರೇಶ್ವರ ಕೂಡ ಜುಲೈನಲ್ಲಿ ಊರಿಗೆ ಬಂದರು. "ಅವನು ಹಲವಾರು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮತ್ತು ಅಂತಿಮವಾಗಿ [ಜುಲೈನಲ್ಲಿ] ರಥಯಾತ್ರೆಯ ಸಮಯದಲ್ಲಿ ಸಾವನ್ನಪ್ಪಿದ" ಎಂದು ಸುಪಾರಿ ನೆನಪಿಸಿಕೊಳ್ಳುತ್ತಾರೆ.

ಬಿದ್ಯಾಧರನ ಮರಣದ ನಂತರ ಕೆಲವೇ ದಿನಗಳಲ್ಲಿ, ಕುಟುಂಬಕ್ಕೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ಮನೆಯೊಂದು ಮಂಜೂರಾಯಿತು. ಹೊಸ ಮನೆಯನ್ನು ನಿರ್ಮಿಸಲು ಅವರಿಗೆ ಹಲವು ಕಂತುಗಳಲ್ಲಿ 120,000 ರೂಪಾಯಿಗಳು ಬರುವುದಿತ್ತು. ಆದರೆ ಸುಪಾರಿ ಮತ್ತು ಸುರೇಶ್ವರ ತಮ್ಮ ಮಗನ ಚಿಕಿತ್ಸೆಗಾಗಿ ಮಾಡಿದ್ದ ಸಾಲವನ್ನು ತೀರಿಸಲೇಬೇಕಾದ ಅನಿವಾರ್ಯತೆ ಎದುರಾಗಿದ್ದರಿಂದ ಬಂದಿದ್ದ ಹಣದಲ್ಲಿ ಒಂದು ಕಂತನ್ನು ಸಾಲಕ್ಕೆ ನೀಡಬೇಕಾಯಿತು. ಇದರಿಂದಾಗಿ ಮನೆಯ ನಿರ್ಮಾಣ ಅಪೂರ್ಣವಾಗಿದೆ. "ನನಗೆ ಒಟ್ಟು ಮೂರು ಕಂತಿನಲ್ಲಿ ಹಣ ಸಿಕ್ಕಿದೆ, ಮೊದಲನೆಯದು 20,000 ರೂ., ಎರಡನೆಯದು 35,000 ರೂ. ಮತ್ತು ಮೂರನೆಯದು 45,000 ರೂ. ಅದರಲ್ಲಿ ಮೊದಲ ಎರಡು ಕಂತಿನ ಹಣವನ್ನು ಮನೆ ಕಟ್ಟಲು ಬೇಕಾಗುವ ಸಿಮೆಂಟ್‌ ಮತ್ತು ಕಲ್ಲಿನಂತಹ ಕಚ್ಚಾ ವಸ್ತುಗಳ ಖರೀದಿಗೆ ಬಳಸಿಕೊಂಡಿದ್ದೆವು, ಆದರೆ ಕೊನೆಯ ಕಂತಿನಲ್ಲಿ ಸಿಕ್ಕ ಹಣ ಮಗನ ಚಿಕಿತ್ಸೆಗಾಗಿ ಖರ್ಚಾಯಿತು" ಎಂದು ಸುಪಾರಿ ಹೇಳುತ್ತಾರೆ.

ಆಗಸ್ಟ್ 2019ರಲ್ಲಿ, ತುರೆಕೆಲಾದ ಬ್ಲಾಕ್ ಡೆವಲಪ್‌ಮೆಂಟ್ ಆಫೀಸ್‌ನ ಅಧಿಕಾರಿಗಳು ಮನೆಯ ಪರಿಶೀಲನೆಗೆಂದು ಬಂದಾಗ ಮನೆ ಅರೆ-ನಿರ್ಮಿತ ಪರಿಸ್ಥಿತಿಯಲ್ಲಿರುವುದನ್ನು ಕಂಡು ದಂಪತಿಗಳನ್ನು ತರಾಟೆಗೆ ತೆಗೆದುಕೊಂಡರು. "ಅವರು ನಮಗೆ ಮನೆಯನ್ನು ಪೂರ್ಣಗೊಳಿಸಬೇಕೆಂದೂ, ಇಲ್ಲವಾದಲ್ಲಿ ನಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಮತ್ತು ಕೊನೆಯ ಕಂತಿನ ಹಣ ಸಿಗುವುದಿಲ್ಲವೆಂದು ಹೇಳಿದರು," ಎಂದು ಸುಪಾರಿ ಹೇಳುತ್ತಾರೆ.

"ನನ್ನ ಮಗ ತೀರಿಕೊಂಡು ಸುಮಾರು ಒಂದು ತಿಂಗಳಷ್ಟೇ ಆಗಿತ್ತು, ನಾವು ನಾವು ಮತ್ತೆ ಮುಂಬೈಗೆ ವಲಸೆ ಹೋಗಬೇಕಾಯಿತು [ಸೆಪ್ಟೆಂಬರ್ 2019 ರಲ್ಲಿ] ಈ ಮೂಲಕವಾದರೂ ಒಂದಿಷ್ಟು ಹಣ ಸಂಪಾದಿಸಿ ಈ ಮನೆಯನ್ನು ಪೂರ್ಣಗೊಳಿಸುವುದು ನಮ್ಮ ಉದ್ದೇಶವಾಗಿತ್ತು." ಎಂದು ಸುಪಾರಿ ತನ್ನ ಅರೆ-ನಿರ್ಮಿತ ಮನೆಯನ್ನು ತೋರಿಸುತ್ತಾ ಹೇಳಿದರು. ಸುಮಾರು 20 ಮೀಟರ್‌ ದೂರದಲ್ಲಿದ್ದ ಆ ಮನೆಗೆ ಇನ್ನೂ ಛಾವಣಿ ಹೊದೆಸಲಾಗಿರಲಿಲ್ಲ, ಕಿಟಕಿ ಬಾಗಿಲುಗಳಿರಲಿಲ್ಲ ಮತ್ತು ಗಾರೆಯನ್ನೂ ಮಾಡಿರಲಿಲ್ಲ. "ಈ ಮನೆ ನನ್ನ ಗಂಡನನ್ನು ಕೊಂದಿತು" ಎಂದು ಅವರು ನಿಟ್ಟುಸಿರು ಬಿಡುತ್ತಾರೆ.

ಸುಪಾರಿಯವರ ಅತ್ತೆ ಸುಪುಲ್‌ ಈಗಲೂ ಮಗನ ಸಾವಿನ ದುಃಖದಲ್ಲಿದ್ದಾರೆ, ಸುರೇಶ್ವರ ಹೇಗೆ ತೀರಿಕೊಂಡರೆನ್ನುವ ವಿಷಯದಲ್ಲಿ ಸೊಸೆ ತನ್ನ ಬಳಿ ಸತ್ಯವನ್ನು ಹೇಳಿಲ್ಲವೆನ್ನುವುದು ಅವರ ನಂಬಿಕೆ. "ನನ್ನ ಮಗ ನನ್ನೊಡನೆ ಫೋನಿನಲ್ಲಿ ಚೆನ್ನಾಗಿಯೇ ಮಾತನಾಡಿದ್ದ, ಅವನು ಆರಾಮಾಗಿಯೇ ಇದ್ದ. ಇದ್ದಕ್ಕಿದ್ದಂತೆ ತೀರಿಕೊಂಡ ಎನ್ನುವುದನ್ನು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ" ಎಂದು ಅವರು ಹೇಳುತ್ತಾರೆ. ಕೆಲಸದ ಸ್ಥಳದಲ್ಲಿ ಏನೋ ಅವಘಡ ಸಂಭವಿಸಿ ತನ್ನ ಮಗ ಸತ್ತಿದ್ದಾನೆ ಆದರೆ ಸುಪಾರಿ ತನ್ನ ಮೇಲೆ ಆರೋಪಗಳು ಬರಬಾರದೆಂದು ನಿಜವನ್ನು ಮುಚ್ಚಿಡುತ್ತಿದ್ದಾರೆನ್ನುವುದು ಸುಫುಲ್‌ ಅಭಿಪ್ರಾಯ. ಆದರೆ ಸುಪಾರಿ ಇದನ್ನು ಸಂಪೂರ್ಣವಾಗಿ ನಿರಾಕರಿಸುತ್ತಾ, "ಆಕೆ ಏನೇ ತಪ್ಪಾದರೂ ಅದಕ್ಕೆ ನನ್ನನ್ನು ಗುರಿಯಾಗಿಸಿ ದೂಷಿಸುತ್ತಿರುತ್ತಾರೆ. ಅವರು ಹೇಳುವಂತಹದ್ದು ಏನೂ ನಡೆದಿಲ್ಲ" ಎನ್ನುತ್ತಾರೆ.

After losing his father and brother, Dhanudhar (left), her youngest son, says Supari, has lost interest in studying
PHOTO • Anil Sharma
After losing his father and brother, Dhanudhar (left), her youngest son, says Supari, has lost interest in studying

ತಂದೆ ಮತ್ತು ಅಣ್ಣನನ್ನು ಕಳೆದುಕೊಂಡ ನಂತರ, ಅವರ ಕಿರಿಯ ಮಗ ಧನುಧರ್ (ಎಡ), ಓದಿನಲ್ಲಿ ಆಸಕ್ತಿ ಕಳೆದುಕೊಂಡಿದ್ದಾನೆಂದು ಸುಪಾರಿ ಹೇಳುತ್ತಾರೆ

2019ರ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಕುಟುಂಬ ಕ್ಷೇಮ ಯೋಜನೆಯಡಿ ಈ ಕುಟುಂಬಕ್ಕೆ 20,000 ರೂಗಳ ಪರಿಹಾರ ದೊರಕಿತು. ಈ ಯೋಜನೆಯಡಿ ಕುಟುಂಬದ ಪ್ರಮುಖ ದುಡಿಮೆಗಾರ ತೀರಿಕೊಂಡ ಸಂದರ್ಭದಲ್ಲಿ ಆರ್ಥಿಕ ನೆರವು ನೀಡಲಾಗುತ್ತದೆ. "ಈ ಹಣವನ್ನು ನಾನು ನನ್ನ ಗಂಡನ ದಾಸ ಕಾರ್ಯಕ್ರಮಕ್ಕಾಗಿ (ಮರಣ ನಂತರದ ಧಾರ್ಮಿಕ ಕಾರ್ಯಕ್ರಮ) ಸಂಬಂಧಿಕರಿಂದ ಪಡೆದ ಸಾಲವನ್ನು ತೀರಿಸಲು ನಾನು ಈ ಹಣವನ್ನು ಬಳಸಿದೆ" ಎಂದು ಸುಪಾರಿ ಹೇಳುತ್ತಾರೆ. ಅವರು 2019ರ ಡಿಸೆಂಬರ್‌ನಿಂದ ವಿಧವಾ ವೇತನವಾಗಿ ಪ್ರತಿ ತಿಂಗಳು 500 ರೂಪಾಯಿಗಳನ್ನು ಪಡೆಯುತ್ತಿದ್ದಾರೆ.

ಕಟ್ಟಡ ನಿರ್ಮಾಣ ಕಾರ್ಮಿನಾಗಿ, ಸುರೇಶ್ವರ ಕುಟುಂಬವು ಒಡಿಶಾದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ  'ಆಕಸ್ಮಿಕ ಸಾವಿನ' ಸಂದರ್ಭದಲ್ಲಿ ನೀಡಲಾಗುವ 200,000 ರೂ.ಗಳ ಪರಿಹಾರ ಯೋಜನೆಯ ಪ್ರಯೋಜನವ ದೊರಕಬೇಕಿತ್ತು. ಸುರೇಶ್ವರ ತಮ್ಮ ಹೆಸರನ್ನು ಜಿಲ್ಲಾ ಕಾರ್ಮಿಕ ಕಚೇರಿಯಲ್ಲಿ ನೋಂದಾಯಿಸದ ಕಾರಣ ಕುಟುಂಬವು ಈ ಮೊತ್ತವನ್ನು ಪಡೆಯಲು ಅರ್ಹರಾಗಿಲ್ಲ. "ನಮಗೆ ಒಂದಿಷ್ಟು ಹಣ ಸಹಾಯ ದೊರೆತರೂ ಅದು ದೊಡ್ಡ ಸಹಾಯವಾಗುತ್ತದೆ" ಎಂದು ಸುಪಾರಿ ಹೇಳುತ್ತಾರೆ. ಅವರ ಮನೆಯ ಕೆಲಸ ಅರ್ಧದಲ್ಲೇ ನಿಂತಿದ್ದು, ಸಂಬಂಧಿಕರಿಂದ ಪಡೆದ ಕನಿಷ್ಟ ಇಪ್ಪತ್ತು ಸಾವಿರ ರೂಪಾಯಿಗಳ ಸಾಲ ಹಲವು ಕಾಲದಿಂದ ಬಾಕಿಯಿದೆ.

ಪ್ರಸ್ತುತ ಸುಪಾರಿ ಮನೆಯ ಏಕೈಕ ಹಣ ಗಳಿಸುವ ಸದಸ್ಯರಾಗಿದ್ದಾರೆ. ಹಿಯಾಲ್ ಮತ್ತು ಸುತ್ತಮುತ್ತಲ ಊರುಗಳಲ್ಲಿ ಕೆಲಸ ಮಾಡುವ ಮೂಲಕ ಅವರು ದಿನಕ್ಕೆ 150 ರೂಪಾಯಿ ಗಳಿಸುತ್ತಾರೆ. "ನನಗೆ ಕೆಲಸ ನಿಯಮಿತವಾಗಿ ದೊರೆಯುವುದಿಲ್ಲ. ಕೆಲವೊಮ್ಮೆ ಕೆಲಸವಿಲ್ಲದ ದಿನಗಳಲ್ಲಿ ನಾವೆಲ್ಲರೂ ಉಪವಾಸವಿರಬೇಕಾಗುತ್ತದೆ." ಎಂದು ಅವರು ಹೇಳುತ್ತಾರೆ. ಧನುಧರ್‌ ತನ್ನ ಅಕ್ಕನ ಊರಿನಿಂದ ಮನೆಗೆ ಮರಳಿದ್ದಾನೆ. "ನನ್ನ ಮಗ ಓದುತ್ತಿಲ್ಲ, ಅವನು ಓದಿನಲ್ಲಿ ಆಸಕ್ತಿ ಕಳೆದುಕೊಂಡಿದ್ದಾನೆ" ಎಂದು ಸುಪಾರಿ ಹೇಳುತ್ತಾರೆ. "ಅವನೆ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾನೆ, ಈ ವರ್ಷ [ಏಪ್ರಿಲ್ 2021ರಲ್ಲಿ] ಬೋರ್ಡ್ ಪರೀಕ್ಷೆಯನ್ನು ತೆಗೆದುಕೊಳ್ಳುವುದಿಲ್ಲ."

ಮನೆಯಿನ್ನೂ ಅಪೂರ್ಣವಾಗಿದ್ದು, ಅರೆ ನಿರ್ಮಿತ ಗೋಡೆಗಳು ಹಾಗೂ ನೆಲದಲ್ಲಿ ಹುಲ್ಲು ಮತ್ತು ಗಿಡಗಳು ಬೆಳೆಯುತ್ತಿವೆ. ಅದನ್ನು ಪೂರ್ತಿಗೊಳಿಸಲು ಹಣ ಹೊಂದಿಸುವುದು ಹೇಗೆಂದು ತಿಳಿಯದೆ ಸುಪಾರಿ ಕಂಗಾಲಾಗಿದ್ದಾರೆ. "ತಾರಸಿ ಹಾಕಿಸದಿದ್ದರೆ ಮಳೆಗಾಲದಲ್ಲಿ ಮನೆಗೆ [ಇನ್ನಷ್ಟು] ಹಾನಿಯಾಗುತ್ತದೆ. ಕಳೆದ ವರ್ಷದ ಮಳೆಗೆ ಈಗಾಗಲೇ ಸಾಕಷ್ಟು ಹಾನಿಗೊಳಗಾಗಿದೆ. ಆದರೆ ನನ್ನ ಬಳಿ ಹಣವಿಲ್ಲದೆ ನಾನಾದರೂ ಏನು ಮಾಡಲು ಸಾಧ್ಯ?"

ಟಿಪ್ಪಣಿ: ಸ್ಥಳೀಯ ಪತ್ರಿಕೆಯಿಂದ ಸುರೇಶ್ವರರ ಸಾವಿನ ಬಗ್ಗೆ ತಿಳಿದು, ಈ ವರದಿಗಾರ ಮತ್ತು ಸ್ನೇಹಿತ ಹಿಯಾಲ್ ಗ್ರಾಮಕ್ಕೆ ಭೇಟಿ ನೀಡಿದರು. ಅವರು ಕುಟುಂಬದ ಪರಿಸ್ಥಿತಿಯನ್ನು ಕಾಂತಬಂಜಿಯ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಬಿ.ಪಿ.ಶರ್ಮಾ ಅವರೊಂದಿಗೆ ಚರ್ಚಿಸಿದಾಗ, ಅವರು ಆರ್ಥಿಕ ಸಹಾಯವನ್ನು ಕೋರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ದುಃಖಿತ ಕುಟುಂಬಕ್ಕೆ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ಹಣಕಾಸಿನ ನೆರವು ನೀಡುವಂತೆ ಕಲೆಕ್ಟರ್ ತುರೆಕೆಲಾದ ಬ್ಲಾಕ್ ಅಭಿವೃದ್ಧಿ ಅಧಿಕಾರಿಗೆ ನಿರ್ದೇಶನ ನೀಡಿದರು. ನಂತರ ಸುಪಾರಿಯವರ ಬ್ಯಾಂಕ್‌ ಖಾತೆಗೆ 20,000 ರೂಪಾಯಿ ಜಮೆಯಾಗಿದೆ ಮತ್ತು ಅವರಿಗೆ ವಿಧವಾ ಪಿಂಚಣಿ ಕಾರ್ಡನ್ನು ನೀಡಲಾಗಿದೆ.

ಅನುವಾದ: ಶಂಕರ ಎನ್. ಕೆಂಚನೂರು

Anil Sharma

Anil Sharma is a lawyer based in Kantabanji town, Odisha, and former Fellow, Prime Minister’s Rural Development Fellows Scheme, Ministry of Rural Development, Government of India.

Other stories by Anil Sharma
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru