ಮರಾಠಾವಾಡಾದ ಓಸ್ಮನಾಬಾದ್ ಜಿಲ್ಲೆಯ ಹಳ್ಳಿ ತಾಕ್ವಿಕಿಯಲ್ಲಿ ಬೆಳಗಾಯಿತು ಎಂದರೆ ಗಡಿಗೆಗಳದ್ದೇ ಸದ್ದು. ಸಮೀಪದಲ್ಲಿ ನೀರು ಸಿಗುವ ತಾಣಕ್ಕೆ ಹಳ್ಳಿಗರೆಲ್ಲಾ ಸಾಗುವ ಹೊತ್ತದು. ಎಲ್ಲಾ ಓಣಿಗಳಲ್ಲೂ ನೀರು ಬೇಕಿರುವವರ ಸಾಲುಗಳು, ಅವರ ಪಾತ್ರೆಗಳು-ಗಡಿಗೆಗಳು. ಈ ರೀತಿ ನೆರೆದವರಲ್ಲಿ 60 ದಾಟಿದವರೂ ಇದ್ದಾರೆ, ಐದು ವರ್ಷದ ಮಕ್ಕಳೂ ಇದ್ದಾರೆ.

ಪೃಥ್ವೀರಾಜ್ ಶಿರ್ಸಾತ್, 14, ಮತ್ತು ಆದೇಶ್ ಶಿರ್ಸಾತ್, 13, ಕೂಡ ಈ ಸರತಿ ಸಾಲಿನಲ್ಲಿದ್ದಾರೆ. ಅವರ ಮನೆಯ ಎದುರಿರುವ ಶಿಕ್ಷಕರೊಬ್ಬರ ಮನೆಯಲ್ಲಿರುವ ಕೊಳವೆಬಾವಿಯನ್ನು ಅವರು ವಾರಕ್ಕೆ ಎರಡು-ಮೂರು ಸಾರಿ ಊರವರಿಗೆಂದು ತೆರೆದುಕೊಡುತ್ತಾರೆ. ಬೇಸಿಗೆ ರಜೆಯಾದುದರಿಂದ ಶಾಲೆಯ ನೆಪ ಹೇಳಿ ನೀರು ತರುವುದನ್ನು ತಪ್ಪಿಸಿ ಕುಳಿತುಕೊಳ್ಳುವಂತಿರಲಿಲ್ಲ ಈ ಹುಡುಗರಿಗೆ. “ಇಲ್ಲಿ ಶಿಕ್ಷಕರ ಮನೆಯಲ್ಲಿ ನೀರು ಸಿಗದಿದ್ದರೆ, ನಾವು ಇನ್ನೊಂದು ಕಿಲೋಮೀಟರ್ ದೂರ ಹೋಗಬೇಕಾಗುತ್ತದೆ,“ ಎನ್ನುವ ಪೃಥ್ವೀರಾಜ್, ತನ್ನ ಸೋದರಸಂಬಂಧಿಗೆ ಹತ್ತು ಗಡಿಗೆ ತುಂಬಿಸಲು ಎರಡು ತಾಸು ತಾಗುತ್ತದೆ ಆದರೆ ತಾನು ಒಂದೂವರೆ ಗಂಟೆಯಲ್ಲೇ ಹದಿನೈದು ಗಡಿಗೆ ತುಂಬಿಸಿಕೊಳ್ಳುವೆ ಎಂದು ಛೇಡಿಸುತ್ತಾನೆ. “ನೀನು ಸೈಕಲ್ ತಗೊಂಡು ಹೋಗಲು ಬಿಡುವುದಿಲ್ಲವಲ್ಲಾ” ಎಂದು ಈ ಮಾತಿಗೆ ನಸುನಗುತ್ತಾ ಪ್ರತಿಕ್ರಿಯಿಸುತ್ತಾನೆ ಆದೇಶ್.

ಇಲ್ಲಿಂದ ಸ್ವಲ್ಪ ದೂರದಲ್ಲಿರುವ 40 ವರ್ಷ ಪ್ರಾಯದ ಛಾಯಾ ಸೂರ್ಯವಂಶಿಗೆ ಈ ಬಿರುಬಿಸಿಲಿನಲ್ಲಿ ಹೊಲದ ನಡುವೆ ದೂರಕ್ಕೆ ನಡೆದು ಹೋಗುವ ಬಗ್ಗೆ ಆತಂಕವಿದೆ. ಅವರಿಗಿರುವ ಅತ್ಯಂತ ಹತ್ತಿರದ ನೀರಿನ ಮೂಲ ಎಂದರೆ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಕೊಳವೆ ಬಾವಿ. ಆಕೆಯ ಪತಿ ಹೊಲದಲ್ಲಿ ಕೆಲಸ ಮಾಡಿದರೆ, ಮನೆಗೆ ಅಗತ್ಯವಿರುವಷ್ಟು ನೀರು ಸಂಗ್ರಹಿಸಿ ತರುವುದು ಆಕೆಯ ಜವಾಬ್ದಾರಿ. “ನಮ್ಮ ಆರು ಜನರ ಕುಟುಂಬಕ್ಕೆ ದಿನಕ್ಕೆ 15 ಗಡಿಗೆ ನೀರಾದರೂ ಬೇಕಾಗುತ್ತದೆ,” ಎನ್ನುವ ಆಕೆ, ತಲೆಯ ಮೇಲೆ ಗಡಿಗೆ ಹೊತ್ತು, ಬಲಕೈನಲ್ಲಿ ಅದನ್ನು ಆಧರಿಸಿಕೊಂಡು ಸಾಗುತ್ತಿದ್ದಾರೆ. ಇನ್ನೊಂದು ಕೈ ಆಕೆಯ ಸೊಂಟಕ್ಕೆ ಬಲ ನೀಡಿ ಆಧರಿಸುತ್ತಿದೆ. “ನಾನು ಒಮ್ಮೆಗೆ ಎರಡು ಗಡಿಗೆ ಮಾತ್ರ ಹೊರಬಲ್ಲೆ. ಹಾಗಾಗಿ ದಿನಕ್ಕೆ 7-8 ಬಾರಿಯಾದರೂ ನೀರಿನ ಟ್ರಿಪ್ ಮಾಡಬೇಕಾಗುತ್ತದೆ. ಪ್ರತೀ ಬಾರಿ ಹೋಗಿ ಬರುವುದಕ್ಕೆ 30 ನಿಮಿಷ ತಗಲುತ್ತದೆ. ಕಳೆದ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಪರಿಸ್ಥಿತಿಯು ಸ್ವಲ್ಪ ವಾಸಿ (2016 ರ ಮಳೆ ಪ್ರಮಾಣದಿಂದಾಗಿ).” ಎನ್ನುತ್ತಾರೆ ಆಕೆ.


Brothers sitting at the entrance of their house

ಶಾಲೆಗೆ ಬೇಸಗೆ ರಜೆ ಇರುವುದರಿಂದ ಪೃಥ್ವೀರಾಜ್ (ಎಡ) ಮತ್ತು ಆದೇಶ್ ಶಿರ್ಸಾತ್ ಬೆಳಗ್ಗಿನ ವೇಳೆ ಕುಟುಂಬಕ್ಕೆ ನೀರು ಸಂಗ್ರಹಿಸಿ ತಂದುಕೊಡುತ್ತಿದ್ದಾರೆ


ಬೇಸಗೆಯಲ್ಲಿ ತಾಕ್ವಿಕಿ ಗ್ರಾಮದ ಅಂದಾಜು 4000 ನಿವಾಸಿಗಳ ಪರಿಸ್ಥಿತಿ ಇದು. ನೀರಿಗಾಗಿ ದೈನಂದಿನ ಶ್ರಮ, ಅದನ್ನು ತರುವುದಕ್ಕೆ ತಗಲುವ ಸಮಯ ಹಾಗೂ ಪ್ರಯತ್ನಗಳ ಅಗಾಧತೆಯ ಕಾರಣದಿಂದಾಗಿ ಮಹಾರಾಷ್ಟ್ರದ ಬರ ಪೀಡಿತ ಪ್ರದೇಶಗಳಲ್ಲಿ ಹಳ್ಳಿಗರು ಕೊಳವೆಬಾವಿಗಳ ಮೇಲೆ ತೀರಾ ಅವಲಂಬಿತರಾಗುತ್ತಿದ್ದಾರೆ.

ಇಲ್ಲಿ ಸ್ವಂತ ನೀರಿನ ಮೂಲವನ್ನು ಹೊಂದಿರುವುದೆಂದರೆ ಬದುಕು ಸುಲಭವಾಗುವುದು ಮಾತ್ರವಲ್ಲದೆ ಊರಲ್ಲಿ ಪ್ರತಿಷ್ಠೆ, ಅಧಿಕಾರಗಳೂ ಕೂಡ ಹೆಚ್ಚಿದಂತೆ. ತಾಕ್ವಿಕಿ ಗ್ರಾಮದಲ್ಲಿ ಆ ಕೊಳವೆಬಾವಿ ಇರುವ ಶಿಕ್ಷಕ ತಲೆಯೆತ್ತಿ ಗರ್ವದಿಂದ ನಡೆಯುತ್ತಾರೆ. ಆವಶ್ಯಕತೆ ಇರುವ ಬೇರೆಯವರಿಗೆ ತನ್ನ ಮನೆಯ ಕೊಳವೆಬಾವಿಯನ್ನು ತೆರೆದುಕೊಡುತ್ತಿರುವ ಅವರ ಉದಾರತೆಯನ್ನು ಊರಿಗೆ ಊರೇ ಕೊಂಡಾಡುತ್ತಿದೆ.

ಇನ್ನು ಈ ರೀತಿ ಉದಾರರಲ್ಲದವರು, ನೀರಿನ ಕೊರತೆಯನ್ನೇ ವ್ಯವಹಾರ ಮಾಡಿಕೊಂಡು ನೀರಿನ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದ್ದಾರೆ. “ನಾನು ಪ್ರತೀ 15 ಲೀಟರಿಗೆ ಎರಡು ರೂಪಾಯಿ ಪಾವತಿಸುತ್ತಿದ್ದೇನೆ” ಎನ್ನುತ್ತಾರೆ ಛಾಯಾ.  ಹೀಗೆ ಆಕೆ ಮತ್ತು ತಾಕ್ವಿಕಿ ಗ್ರಾಮದ ಹಲವರು ಊರಿನಲ್ಲಿ ಸರಿಯಾದ ಜಾಗದಲ್ಲಿ ಕೊಳವೆಬಾವಿ ತೆಗೆದು ಗೆದ್ದ ಅದೃಷ್ಟವಂತರಿಂದ ನೀರನ್ನು ಖರೀದಿಸಿ ತರುತ್ತಾರೆ.


Pots parked outside the teachers house

ತಾಕ್ವಿಕಿ ಹಳ್ಳಿಯಲ್ಲಿ ವಾರಕ್ಕೆ ಕೆಲವು ಬಾರಿ ತನ್ನ ಕೊಳವೆ ಬಾವಿಯನ್ನು ಸಾರ್ವಜನಿಕರಿಗಾಗಿ ಒದಗಿಸಿಕೊಡುವ ಶಿಕ್ಷಕರೊಬ್ಬರ ಮನೆಯ ಎದುರು ಕೇಸರಿ ಬಣ್ಣದ ನೀರಿನ ಗಡಿಗೆಗಳ ಸರತಿ ಸಾಲು


ಮರಾಠಾವಾಡಾದ ಕೃಷಿ ಸಂಕಟಗಳಿರುವ ಪ್ರದೇಶಗಳಲ್ಲಿ ಹಲವಾರು ಮಂದಿ ರೈತರು ನೀರಿಗಾಗಿ ಕೊಳವೆಬಾವಿ ಹೊಡೆಸುವ ಯತ್ನದಲ್ಲಿ ದಿವಾಳಿಯೆದ್ದಿದ್ದಾರೆ. ಅಸಲಿಗೆ ಕೊಳವೆಬಾವಿ ಕೊರೆಸುವುದು ಎಂದರೆ ಸ್ವಲ್ಪ ಕಿರಿಕಿರಿಯ ವ್ಯವಹಾರ. ಅದಕ್ಕೆ ಸುಮಾರು ಒಂದು ಲಕ್ಷ ರೂಪಾಯಿಗಳ ಖರ್ಚಿದೆ; ಆದರೆ ಫಲಿತಾಂಶ ಖಚಿತವಿರುವುದಿಲ್ಲ. ರೈತ ಕೊಳವೆಬಾವಿ ಕೊರೆಯಲು ತೋರಿಸಿದ ಜಾಗವು ಒಣಕಲಾಗಿದ್ದು ಅಲ್ಲಿ ನೀರು ಸಿಗದಿದ್ದರೆ ಹಾಕಿದ ಹಣ ವ್ಯರ್ಥ. ಹೀಗಾಗಿ ನೀರು ಸಿಗುವ ಯಶಸ್ವಿ ಕೊಳವೆಬಾವಿಯನ್ನು ತೋಡುವ ಕನಸು ವಿಫಲ ಕೊಳವೆಬಾವಿಗಳ ಕಟುವಾಸ್ತವದ ಎದುರು ಸುಲಭವಾಗಿ ಮುರುಟಿಹೋಗುವುದು ಸಹಜ.

ದತ್ತುಸಿಂಗ್ ಬಾಯಸ್, 60, ಕಳೆದ ಮೂರು ವರ್ಷಗಳಲ್ಲಿ ತನ್ನ ಎಂಟೆಕರೆ ಹೊಲದಲ್ಲಿ ಎಂಟು ಕಡೆ ಕೊಳವೆಬಾವಿ ಕೊರೆಸಿದ್ದಾರೆ. ಅವುಗಳಲ್ಲಿ ಸದ್ಯ ಒಂದು ಮಾತ್ರ  ಬಳಸಬಹುದಾದ ಸ್ಥಿತಿಯಲ್ಲಿದೆ. ಅದರಲ್ಲವರಗೆ ದಿನಕ್ಕೆ ಸುಮಾರು ನೂರು ಲೀಟರ್ ನೀರು ಸಿಗುತ್ತದಂತೆ. “ನನಗೆ ನನ್ನ ಹೊಲ, ಜಾನುವಾರುಗಳನ್ನು ಸಾಕಲು ಹೀಗೆ ಮಾಡದೆ ಬೇರೆ ದಾರಿ ಇರಲಿಲ್ಲ. ಕಳೆದ ವರ್ಷ ನೀರಿನ ಕೊರತೆ ಇದ್ದುದರಿಂದ ನಾನು ನಮ್ಮಲ್ಲಿದ್ದ ಎಂಟು ಕೋಣಗಳಲ್ಲಿ ಮೂರನ್ನು ಮಾರಬೇಕಾಯಿತು.” ಎಂದು ಹೇಳುತ್ತಾರೆ ತಮ್ಮ ತೊಗರಿ ಮತ್ತು ಸೋಯಾಬೀನ್ ಹೊಲದಲ್ಲಿ ನಿಂತು ನಮ್ಮೊಂದಿಗೆ ಮಾತಾಡುತ್ತಿರುವ ದತ್ತುಸಿಂಗ್.

ನೀರಿನ ಹುಡುಕಾಟದಲ್ಲಿ ದತ್ತುಸಿಂಗ್ ಖಾಸಗಿ ಲೇವಾದೇವಿಗಾರರಲ್ಲಿ ಮೂರು ಲಕ್ಷ  ರೂಪಾಯಿಗಳ ಸಾಲ ಮಾಡಿದ್ದಾರೆ. “ಬಡ್ಡಿದರಗಳು ಪ್ರತಿದಿನ ಏರುತ್ತಲೇ ಇವೆ” ಎನ್ನುವ ದತ್ತುಸಿಂಗ್ ರವರ ಇಬ್ಬರು ಮಕ್ಕಳು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೆ, ಹೆಣ್ಣುಮಕ್ಕಳಿಬ್ಬರು ಮದುವೆಯಾಗಿ ಹೋಗಿದ್ದಾರೆ. “ನಾನು ಹಳ್ಳಿಯಲ್ಲಿ ಮರದ ಕೆಲಸವನ್ನೂ ಮಾಡುತ್ತೇನೆ. ಇದರಿಂದಾಗಿ ದಿನಕ್ಕೆ ಸರಾಸರಿ 500 ರೂಪಾಯಿಗಳ ಆದಾಯವು ಸಾಧ್ಯವಾಗುತ್ತದೆ. ಹೀಗಾಗಿ ಸಂಕಟದ ಮಧ್ಯವೂ ಉಸಿರು ಹಿಡಿದುಕೊಂಡು ಹೇಗೋ ಬದುಕುತ್ತಿದ್ದೇವೆ” ಎನ್ನುತ್ತಾರವರು.


Portrait of Bayas

"ನೀರಿಗಾಗಿ ಹಾತೊರೆಯುತ್ತಿರುವಾಗ ನೀವು ಕೊರೆಸುತ್ತಲೇ ಹೋಗುತ್ತೀರಿ’’, ಎಂಟು ಕೊಳವೆಬಾವಿಗಳನ್ನು ಕೊರೆಸಿ ಮೂರು ಲಕ್ಷ ರೂಪಾಯಿಗಳ ಸಾಲದ ಮೊತ್ತವು ಹೇಗೆ ಜಮೆಯಾಯಿತೆಂದು ವಿವರಿಸುತ್ತಿದ್ದಾರೆ ದತ್ತುಸಿಂಗ್ ಬಾಯಸ್


ಮರಾಠಾವಾಡಾದಲ್ಲಿ ಪ್ರತೀ ವರ್ಷ ನೈಸರ್ಗಿಕ ನೀರಿನ ಮೂಲಗಳು ಬತ್ತತೊಡಗುವ ವೇಳೆಗೆ, ಹೊಲ ಮತ್ತು ಜಾನುವಾರಗಳನ್ನು ಸಾಕುವುದು ಕಷ್ಟವಾಗತೊಡಗಿದಾಗ, ಅಂದರೆ ಸುಮಾರಿಗೆ ಜೂನ್ ಮಾಸದ 3-4 ತಿಂಗಳ ಮೊದಲು ಕೊಳವೆಬಾವಿಗಳನ್ನು ಕೊರೆಸುತ್ತಾರೆ. ಅಸಲಿಗೆ ಮರಾಠಾವಾಡಾದಲ್ಲಿ ನದಿಮೂಲವಿಲ್ಲವಾದ್ದರಿಂದ ರೈತರಿಗೆ ಕೊಳವೆಬಾವಿಗಳನ್ನು ಬಿಟ್ಟು ಬೇರೆ ಹೆಚ್ಚು ಆಯ್ಕೆಗಳಿಲ್ಲ. ಈ ಕೊರತೆಗೆ ಹವಾಮಾನ ವೈಪರೀತ್ಯಗಳು, ಸರ್ಕಾರಿ ನೀತಿಗಳೂ ಕೂಡ ತಮ್ಮ ಕೊಡುಗೆಗಳನ್ನು ನೀಡುತ್ತಿವೆ. ಸರಕಾರವು ನೀರಿನ ಹೆಚ್ಚು ಅಗತ್ಯವಿರುವ ಕಬ್ಬಿನ ಬೆಳೆಯನ್ನು ಪ್ರೋತ್ಸಾಹಿಸುತ್ತಿರುವುದರಿಂದಾಗಿ, ಮರಾಠಾವಾಡದ ರೈತರು ಕೇವಲ ಕುಡಿಯುವ ನೀರಿನ ಉದ್ದೇಶ ಪೂರೈಸುವಷ್ಟು ಮಾತ್ರ ಲಭ್ಯವಿರುವ ಕೊಳವೆಬಾವಿಗಳ ನೀರನ್ನೇ ನೀರಾವರಿಗೂ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಅಂತರ್ಜಲವನ್ನು ಹೊರತೆಗೆಯಲು ಸುಸೂತ್ರ ನಿಯಮಗಳಿಲ್ಲದಿರುವ ಕಾರಣ, ಕೊಳವೆಬಾವಿಗಳು ಎಲ್ಲೆಂದರಲ್ಲಿ ಹಬ್ಬುತ್ತಿವೆ. ಕೊಳವೆಬಾವಿಗಳ ವಿಚಾರಕ್ಕೆ ಬಂದರೆ ಮರಾಠಾವಾಡದಲ್ಲಿರುವುದು ಎರಡೇ ನಿಯಮಗಳು. ಆದರೆ ಆ ನಿಯಮಗಳನ್ನೂ ಗಾಳಿಗೆ ತೂರಲಾಗುತ್ತಿದೆ. ಆ ನಿಯಮಗಳೆಂದರೆ 200 ಅಡಿಗಿಂತ ಹೆಚ್ಚು ಆಳದ ಕೊಳವೆಬಾವಿ ಕೊರೆಯಬಾರದು ಮತ್ತು ಸಾರ್ವಜನಿಕ ಜಲಮೂಲಗಳಿರುವ ಸ್ಥಳದ ಸಮೀಪದಲ್ಲಿ (ಸುಮಾರು 500 ಮೀಟರುಗಳ ಪರಿಧಿಯಲ್ಲಿ) ಕೊಳವೆ ಬಾವಿ ತೆರೆಯಬಾರದು ಎಂಬುದು. ಆದರೆ ರೈತರು ಇಲ್ಲಿ 1000 ಅಡಿಗಳ ಆಳದ ಕೊಳವೆ ಬಾವಿಗಳನ್ನೂ ಕೊರೆಸುತ್ತಿದ್ದಾರೆ. ಬಾಯಸ್ ಅವರ ಎಂಟು ಕೊಳವೆಬಾವಿಗಳಲ್ಲಿ ನಾಲ್ಕು 400 ಅಡಿ ಆಳದವು. “ನೀವು ನೀರಿಗಾಗಿ ಹಾತೊರೆಯುತ್ತಿರುವಾಗ ಆಳ ಲೆಕ್ಕಹಾಕುತ್ತಾ ಕೂರುವುದಾಕ್ಕುವುದಿಲ್ಲ. ಆಗ  ನೀವು ಕೊರೆಸುತ್ತಲೇ ಹೋಗುತ್ತೀರಿ.” ಎನ್ನುತ್ತಾರವರು. ಇದರಿಂದಾಗಿ ನೆಲದ ಅಂತರ್ಜಲ ಮಟ್ಟಕ್ಕೆ ತೀವ್ರ ಹಾನಿಯಾಗುವುದಲ್ಲದೆ ಮತ್ತೆ ಅವುಗಳು ತುಂಬಲು ವರ್ಷಗಟ್ಟಲೆ ಸಮಯವನ್ನು ಹಿಡಿಯುತ್ತದೆ. ಈ ಎಲ್ಲಾ ಪ್ರಕ್ರಿಯೆಗಳಿಂದಾಗಿ ಈ ಪ್ರದೇಶಗಳಿಗಾಗುತ್ತಿರುವ ನಷ್ಟಗಳು ಅಷ್ಟಿಷ್ಟಲ್ಲ.

ಕಳೆದ ಮಳೆಗಾಲದಲ್ಲಿ 120 ಶೇಕಡಾ ಹೆಚ್ಚು ಮಳೆ ಬಿದ್ದಿದ್ದರೂ, ಮರಾಠಾವಾಡದ 76 ತಾಲೂಕುಗಳ ಪೈಕಿ 56 ರಲ್ಲಿ ಅಂತರ್ಜಲ ಪೂರಣವು ಕಳೆದ ಐದು ವರ್ಷಗಳ ಅಂತರ್ಜಲ ಪೂರಣದ ಪ್ರಮಾಣಕ್ಕೆ ಹೋಲಿಸಿದರೆ ಕಡಿಮೆಯಾಗಿದೆ ಎಂದು ರಾಜ್ಯದ ಅಂತರ್ಜಲ ಸಮೀಕ್ಷೆ ಹಾಗೂ ಇಲಾಖಾ ಏಜನ್ಸಿಗಳ ಅಂಕಿಅಂಶಗಳು ಹೇಳುತ್ತಿವೆ. ಬೀಡ್ (11 ರಲ್ಲಿ 2 ತಾಲೂಕುಗಳು) ಮತ್ತು ಲಾತೂರು (10 ರಲ್ಲಿ 4 ತಾಲೂಕುಗಳು) ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಆರು ಜಿಲ್ಲೆಗಳಲ್ಲಿ ಪರಿಸ್ಥಿತಿಯು ಗಂಡಾಂತರಕಾರಿಯಾಗಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ: ಓಸ್ಮನಾಬಾದಿನ 8 ರಲ್ಲಿ 5, ಔರಂಗಾಬಾದಿನ ಎಲ್ಲಾ 9 ಮತ್ತು ನಾಂದೇಡ್ ನ ಎಲ್ಲಾ 16 ತಾಲೂಕುಗಳಲ್ಲಿ ಅಂತರ್ಜಲದ ಮಟ್ಟ ಕುಸಿದಿದೆ.


Man carrying pots on a bicycle

ಮರಾಠಾವಾಡದಲ್ಲಿ ನೀರಿನ ಪರಿಸ್ಥಿತಿ ಹದಗೆಟ್ಟಿರುವುದರಿಂದಾಗಿ ಜನ ನೀರು ಸಂಗ್ರಹಿಸಲು ದೂರದೂರದ ಪ್ರದೇಶಗಳಿಗೆ ಧಾವಿಸಬೇಕಾಗುತ್ತದೆ


ಇಷ್ಟೆಲ್ಲಾ ಆದರೂ ಕುಟುಂಬವೊಂದು ಎಷ್ಟು ಕೊಳವೆಬಾವಿಗಳನ್ನು ಹೊಂದಬಹುದೆಂಬ ಬಗ್ಗೆ ಇಲ್ಲಿ ಮಿತಿಗಳಿಲ್ಲ. ತಮ್ಮ ಜಿಲ್ಲೆಗಳಲ್ಲಿ ಒಟ್ಟು ಎಷ್ಟು ಕೊಳವೆಬಾವಿಗಳಿವೆ ಎಂಬ ಚಿತ್ರಣವು ಇಲ್ಲಿನ ಜಿಲ್ಲಾಡಳಿತಗಳ ಬಳಿಯಲ್ಲಿಲ್ಲ. ಕೊಳವೆಬಾವಿಗಳನ್ನು ಎಷ್ಟು ಆಳದ ತನಕ ಕೊರೆಯಲಾಗುತ್ತದೆ ಎಂಬುದನ್ನು ಗ್ರಾಮ ಪಂಚಾಯತುಗಳು ಲೆಕ್ಕವಿಡುವುದಲ್ಲದೆ ಈ ಬಗ್ಗೆ ಕಟ್ಟುನಿಟ್ಟಿನ ನಿಯಂತ್ರಣವೂ ಇರಬೇಕು. ಆದರೆ ಇಲ್ಲಿ ಈ ಕೆಲಸಗಳಾಗುತ್ತಿಲ್ಲ ಎನ್ನುತ್ತಾರೆ ಓಸ್ಮನಾಬಾದಿನ ಇನ್-ಚಾರ್ಜ್ ಜಿಲ್ಲಾಧಿಕಾರಿ (ಎಪ್ರಿಲ್ ನಲ್ಲಿ) ಸುನಿಲ್ ಯಾದವ್. ಅದೇನೇ ಆದರೂ ಅಂತಿಮವಾಗಿ ಇದರ ಮೇಲುಸ್ತುವಾರಿಯ ಹೊಣೆ ಇರುವುದು ಜಿಲ್ಲಾಧಿಕಾರಿಗಳು ಮತ್ತು ಸರಕಾರದ ಮೇಲೆ ಎಂಬುದನ್ನು ಮರೆಯುವಂತಿಲ್ಲ.

ಸೋಜಿಗದ ಸಂಗತಿಯೆಂದರೆ ಎಷ್ಟು ಜನ ಕೊಳವೆಬಾವಿ ಕೊರೆಸುವ ಏಜಂಟರಿದ್ದಾರೆ ಎಂಬುದೂ ಜಿಲ್ಲಾಡಳಿತಗಳಿಗೆ ಅರಿವಿಲ್ಲ. ಏಕೆಂದು ಕೇಳಿದರೆ ಅವರು ನೋಂದಾಯಿಸಿಕೊಂಡಿಲ್ಲ ಎಂಬ ಉತ್ತರವು ಬರುತ್ತದೆ. ಓಸ್ಮನಾಬಾದಿನಲ್ಲಿ ಅಡ್ಡಾಡಿದರೆ ನಿಮಗೆ ಪ್ರತೀ ಮೂರು ನಿಮಿಷಕ್ಕೊಂದು ಕೊಳವೆಬಾವಿ ಏಜಂಟರ ಅಂಗಡಿ ಸಿಗುವುದು ಸಾಮಾನ್ಯ. ರೈತರಿಗೆ ಕೊಳವೆಬಾವಿ ಕೊರೆಸಲು ಸಹಾಯ ಮಾಡುವವರೇ ಇವರು.

ಕಳೆದ ಎಪ್ರಿಲ್ ಸೀಸನ್ನಿನಲ್ಲಿ ತಾನು ರೈತರಿಗೆ 30 ಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆಸಲು ನೆರವಾಗಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ ತಾಕ್ವಿಕಿ ಗ್ರಾಮದ ಹೊರವಲಯದಲ್ಲಿರುವ ಏಜಂಟ್ ದಯಾನಂದ್ ಧಾಗೆ. “ರೈತರು ನಮ್ಮನ್ನು ಸಂಪರ್ಕಿಸಿದಾಗ ಅವರಿಗೆ ಅಗತ್ಯವಿರುವ ಪರಿಕರಗಳು ಮತ್ತು ಲಾರಿಯ ಮೇಲೆ ಹೇರಿರುವ ಕೊಳವೆಬಾವಿ ರಿಗ್ಗನ್ನು ಒದಗಿಸುವುದು ನಮ್ಮ ಜವಾಬ್ದಾರಿ. ಹಣವು ರೈತರಿಂದ ನಗದಿನ ರೂಪದಲ್ಲಿ ಸಂದಾಯವಾಗುತ್ತದೆ. ಲಾರಿ ಬಾಡಿಗೆ ಮತ್ತು ಇತರ ಖರ್ಚುಗಳನ್ನು ಲಾರಿಗಳ ಮಾಲೀಕರೊಂದಿಗೆ ನಾವು ತಿಂಗಳಿಗೊಮ್ಮೆ ಚುಕ್ತಾ ಮಾಡಿಕೊಳ್ಳುತ್ತೇವೆ” ಎನ್ನುತ್ತಾರವರು.

ಹೆಚ್ಚಿನ ರಿಗ್ ಮಾಲಕರು ತಮಿಳುನಾಡು ಮತ್ತು ಆಂಧ್ರ ಮೂಲದವರಾಗಿದ್ದು ಮಹಾರಾಷ್ಟ್ರದಲ್ಲಿ ಸ್ಥಳೀಯ ಏಜಂಟರುಗಳ ಮುಖಾಂತರ ವ್ಯವಹರಿಸುತ್ತಾರೆ. ಅಂದಹಾಗೆ ಇಂತಹ ಎಷ್ಟು ಟ್ರಕ್ ಗಳು ಮರಾಠವಾಡಾ ಪ್ರದೇಶದಲ್ಲಿ ಓಡಾಡುತ್ತಿವೆ ಎಂಬ ಲೆಕ್ಕವನ್ನು ಯಾರೂ ಇಟ್ಟಿಲ್ಲ.

ಈ ಸಂಪೂರ್ಣ ಆರ್ಥಿಕತೆಯು ಅನಿಯಂತ್ರಿತವಾಗಿದ್ದು, ಸೇವಾತೆರಿಗೆಗಳು  ಅನ್ವಯವಾಗುತ್ತಿಲ್ಲ. ಮಾಲಕರಿಗೆ ಅಥವಾ ಏಜಂಟರಿಗೆ ಏನಾದರೂ ಸರ್ಕಾರಿ ಒಪ್ಪಿಗೆ ಬೇಕೇ ಅಥವಾ ಅವರಿಗೆ ಈ ವ್ಯವಹಾರಗಳನ್ನು ನಡೆಸಲು ಏನಾದರೂ ನಿಯಮಾವಳಿಗಳಿವೆಯೇ ಎಂದು ಕೇಳಿದರೆ, ಜಿಲ್ಲಾಧಿಕಾರಿಯವರಲ್ಲಾಗಲೀ, ಅಂತರ್ಜಲ ಇಲಾಖೆಯ ಅಧಿಕಾರಿಯವರಲ್ಲಾಗಲೀ ಸ್ಪಷ್ಟ ಉತ್ತರಗಳಿಲ್ಲ.

ಕೊಳವೆಬಾವಿಗಳ ನಿಯಂತ್ರಣಕ್ಕೆ ಯಾವುದೇ ನಿಯಮಗಳನ್ನು ಮಾಡದಿರುವುದರ ಮೂಲಕ, ತೆರೆದ ಮಾರುಕಟ್ಟೆಯಲ್ಲಿ ವ್ಯವಹರಿಸುತ್ತಿರುವ ಲಾಬಿಗಳಿಗೆ ಸರ್ಕಾರ ಬಹಿರಂಗವಾಗಿಯೇ ಅಭಯಹಸ್ತವನ್ನು ನೀಡಿದಂತಾಗಿದೆ. “ಇವೆಲ್ಲವನ್ನೂ ಕಂಡೂ ಕಾಣದಂತೆ ಸುಮ್ಮನಿರುವ ಸರ್ಕಾರವು, ಕೊಳವೆಬಾವಿಗಳ ಮಾರುಕಟ್ಟೆಗಳು ಬೆಳೆಯಲು ಸಹಾಯ ಮಾಡುತ್ತಿದೆ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲಿಚ್ಛಿಸದ ಓಸ್ಮನಾಬಾದ್ ಜಿಲ್ಲಾ ಮಂಡಳಿಯ ಅಧಿಕಾರಿಯೊಬ್ಬರು. ಈ ನಿಟ್ಟಿನಲ್ಲಿ ಯಾವುದೇ ನೀತಿ-ನಿಯಮಾವಳಿಗಳು ಇಲ್ಲದಿರುವುದರಿಂದ ನೀರಿನ ಅಭಾವದ ಹೆಸರಿನಲ್ಲಿ ಹಣ ಪೀಕುವವರಿಗೆ ಅನುಕೂಲ ಆದಂತಾಗಿದೆ ಎಂಬುದು ಇವರ ಅಭಿಪ್ರಾಯ.


A kid with a pot in Takwiki

ನೀರಿಗಾಗಿನ ಹತಾಶೆ: ತಾಕ್ವಿಕಿ ಗ್ರಾಮದಲ್ಲಿ ಐದು ವರ್ಷದ ಪುಟ್ಟ ಮಕ್ಕಳೂ ಕೂಡ ನೀರಿಗಾಗಿ ಸರತಿಸಾಲು ನಿಲ್ಲುತ್ತಿದ್ದಾರೆ


ಅದೇ ವೇಳೆ, ತಾಕ್ವಿಕಿ ಹಳ್ಳಿಯಲ್ಲಿ ಬಾಯಸ್ ಹಣ ಉಳಿಸಲು ಅವಧಿ ಮೀರಿ ದುಡಿಯುತ್ತಿದ್ದಾರೆ. ಅವರಿಗೆ ಮೂರು ಲಕ್ಷ ಸಾಲ ಇದೆ. ಅಲ್ಲದೇ ಬೇಸಾಯದ ಸೀಸನ್ ಬಂದಿರುವುದರಿಂದ ಕೃಷಿ ಕೆಲಸ ಆರಂಭಿಸಲು ದುಡ್ಡು ಬೇಕು. ಆದರೆ ಆತ ಹಣ ಉಳಿಸುತ್ತಿರುವುದು ಅದಕ್ಕಲ್ಲವಂತೆ. “ಮತ್ತೊಂದು ಕೊಳವೆಬಾವಿ ಕೊರೆಸುವ ಉದ್ದೇಶವಿದೆಯಾ?” ಎಂಬ ನನ್ನ ಕುತೂಹಲದ ಪ್ರಶ್ನೆಯು ಅರ್ಥಹೀನವಾದದ್ದಲ್ಲ ಎಂಬುದನ್ನು ತಿಳಿಯಲು ಹೆಚ್ಚಿನ ಸಮಯವೇನೂ ನನಗೆ ಬೇಕಾಗಲಿಲ್ಲ.

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : Rajaram Tallur

Rajaram Tallur is a freelance journalist and a translator by profession. He has over 25 years of work experience in print and web media. Healthcare, science and developmental journalism are among his areas of interest.

Other stories by Rajaram Tallur