ಬುಧಾ ನೇಪಾಳದಿಂದ ಇಲ್ಲಿಗೆ ವಲಸೆ ಬಂದಿದ್ದಾನೆ. ಕಳೆದ ಒಂದೂವರೆ ವರ್ಷಗಳಿಂದ ಬಿಹಾರ ಷರೀಫ್ನ ಮದರಸಾ ಅಜೀಜಿಯಾದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಗಲಭೆ ನಿಲ್ಲಿಸುವಂತೆ ಕೇಳಿದಾಗ, ಅವರು ನನ್ನ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. "ನಾಲಾ ನೇಪಾಳಿ, ಭಾಗೋ ಯಂಹಾ ಸೇ, ನಹೀ ತೊ ಮಾರ್ ದೇಂಗೆ [ನೇಪಾಳಿಯವನೇ ಸುಮ್ನೆ ಓಡಿ ಹೋಗು ಇಲ್ಲಿಂದ ಇಲ್ಲದಿದ್ದರೆ ಕೊಂದು ಹಾಕುತ್ತೇವೆ]" ಎಂದು ಹೊಡೆದರು.
ಮಾರ್ಚ್ 31, 2023ರಂದು ನಗರದಲ್ಲಿ ನಡೆದ ರಾಮನವಮಿ ಮೆರವಣಿಗೆಯಲ್ಲಿ ಗಲಭೆಕೋರರು ಇಸ್ಲಾಂ ಧರ್ಮವನ್ನು ಕಲಿಸುವ ಮತ್ತು ಗ್ರಂಥಾಲಯವನ್ನು ಹೊಂದಿದ್ದ ಮದರಸಾಕ್ಕೆ ಬೆಂಕಿ ಹಚ್ಚಿದ ಘಟನೆಯನ್ನು ಅವರು ವಿವರಿಸುತ್ತಾರೆ.
"ಲೈಬ್ರರಿಯಲ್ಲಿ ಏನೂ ಉಳಿದಿಲ್ಲ" ಎಂದು ಬುಧಾ ಹೇಳುತ್ತಾರೆ. “ಈಗ ಅವರಿಗೆ ಭದ್ರತಾ ಸಿಬ್ಬಂದಿ ಅಗತ್ಯವಿಲ್ಲ. ನಾನು ನಿರುದ್ಯೋಗಿಯಾಗಿದ್ದೇನೆ."
ಪರಿ 2023ರ ಏಪ್ರಿಲ್ನಲ್ಲಿ ಮದರಸಾಕ್ಕೆ ಭೇಟಿ ನೀಡಿತ್ತು. ಗಲಭೆಕೋರರು ಈ ಮದರಸಾ ಮಾತ್ರವಲ್ಲದೆ ಬಿಹಾರದ ನಳಂದ ಜಿಲ್ಲೆಯ ಪ್ರಧಾನ ಕಛೇರಿಯಾದ ಬಿಹಾರಶರೀಫ್ ಗ್ರಾಮದ ಅನೇಕ ಪೂಜಾ ಸ್ಥಳಗಳ ಮೇಲೆ ದಾಳಿ ಮಾಡಿದ್ದರು. ಆರಂಭದಲ್ಲಿ ನಗರದಲ್ಲಿ ಸೆಕ್ಷನ್ 144 ಅಡಿಯಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಅದರ ನಂತರ ಇಂಟರ್ನೆಟ್ ಸ್ಥಗಿತಗೊಳಿಸಲಾಯಿತು. ಒಂದು ವಾರದ ನಂತರ ಎರಡನ್ನೂ ಹಿಂಪಡೆಯಲಾಯಿತು.
ಅದೇ ಮದರಸಾದಿಂದ ತೇರ್ಗಡೆಯಾದ ಸಯೀದ್ ಜಮಾಲ್ ಅಲ್ಲಿ ನಿಶ್ಚೇಷ್ಟಿತನಾಗಿ ನಡೆಯುತ್ತಿದ್ದರು. "ಈ ಲೈಬ್ರರಿಯಲ್ಲಿ ಹಲವು ಪುಸ್ತಕಗಳಿದ್ದವು, ಆದರೆ ನನಗೆ ಅವೆಲ್ಲವನ್ನೂ ಓದಲಾಗಲಿಲ್ಲ" ಎಂದು ಅವರು ಹೇಳುತ್ತಾರೆ. 1970ರಲ್ಲಿ, ಅವರು ಮೂರನೇ ತರಗತಿಯಲ್ಲಿದ್ದಾಗ ಈ ಮದರಸಾವನ್ನು ಪ್ರವೇಶಿಸಿದರು ಮತ್ತು ಅಲಿಮ್ (ಪದವಿ) ಪಡೆದರು.
“ಏನಾದರೂ ಉಳಿದಿದೆಯೇ ಎಂದು ನೋಡಲು ಬಂದಿದ್ದೇನೆ” ಎಂದು ಹಸನ್ ಹೇಳುತ್ತಾರೆ.