ನೊಸುಮುದ್ದೀನ್ ಅಳುತ್ತಿದ್ದ. ಅವನು ಅಂದು ತನ್ನ ಮನೆಯಿಂದ ಹೆತ್ತವರನ್ನು ಬಿಟ್ಟು 10-12 ಕಿಲೋಮೀಟರ್ ದೂರದಲ್ಲಿ ವಾಸಿಸಲು ಹೊರಡಬೇಕಿತ್ತು. ಏಳು ವರ್ಷದ ಬಾಲಕನೊಬ್ಬನ ಪಾಲಿಗೆ ಇದು ನಿಜಕ್ಕೂ ಕಷ್ಟದ ಕೆಲಸವಾಗಿತ್ತು. “ಅಂದು ಮನೆ ಮತ್ತು ಕುಟುಂಬವನ್ನು ತೊರೆದು ದೂರವಿರುವುದನ್ನು ನೆನೆದು ಬಹಳ ನೋವಾಗಿತ್ತು. ನಾನು ಅಳಲು ಪ್ರಾರಂಭಿಸಿದ್ದೆ,” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಅಂದು ಅವರನ್ನು ರಾಖಲ್ (ಜಾನುವಾರುಗಳ ಆರೈಕೆ) ಕೆಲಸಕ್ಕೆ ಕಳುಹಿಸಲಾಗಿತ್ತು. "ನನ್ನ ಕುಟುಂಬವು ತುಂಬಾ ಬಡತನದಲ್ಲಿತ್ತು, ನನ್ನ ಹೆತ್ತವರಿಗೆ ಬೇರೆ ಆಯ್ಕೆ ಇದ್ದಿರಲಿಲ್ಲ" ಎಂದು ಈಗ 41 ವರ್ಷದ ನೊಸುಮುದ್ದೀನ್ ಶೇಖ್ ಹೇಳುತ್ತಾರೆ. "ನಮಗೆ ಊಟಕ್ಕೆ ಸಾಕಾಗುವಷ್ಟು ಆಹಾವಿರಲಿಲ್ಲ. ನಾವು ಹೊಲದಲ್ಲಿ ಯಾವುದು ಮುಕ್ತವಾಗಿ ಬೆಳೆಯುತ್ತದೆಯೋ ಅದನ್ನೇ ತಿನ್ನುತ್ತಿದ್ದೆವು, ಹೆಚ್ಚಿನ ದಿನಗಳಲ್ಲಿ ಕೇವಲ ಒಂದು ಊಟವನ್ನು ಮಾತ್ರ ಮಾಡಲು ಸಾಧ್ಯವಿತ್ತು. ಆ ದಿನಗಳಲ್ಲಿ ನಮ್ಮ ಹಳ್ಳಿಯಲ್ಲಿ ಕೆಲವೇ ಜನರು ಮಾತ್ರ ಎರಡು ಹೊತ್ತಿನ ಊಟ ಮಾಡುವಷ್ಟು ಶಕ್ತರಾಗಿದ್ದರು.” ಶಿಕ್ಷಣವು ಅವರ  ಕಲ್ಪನೆಗೂ ಮೀರಿದ ವಿಷಯವಾಗಿತ್ತು: “ಆ ಸಮಯದಲ್ಲಿ ನಾನು ಶಾಲೆಗೆ ಹೋಗುವ ಯೋಚನೆ ಮಾಡಲಿಲ್ಲ. ನನ್ನ ಕುಟುಂಬದ ಸ್ಥಿತಿ ತುಂಬಾ ಕೆಟ್ಟದಾಗಿತ್ತು, ನಾವು ಹೇಗೆ ಶಾಲೆಗೆ ಹೋಗಲು ಸಾಧ್ಯ? "

ಆದುದರಿಂದ ಅವರು ಅಸ್ಸಾಂನ (ಅಂದಿನ) ಧುಬ್ರಿ ಜಿಲ್ಲೆಯ ಉರರ್ಭುಯಿ ಗ್ರಾಮದಲ್ಲಿನ ತನ್ನ ಸಾಧಾರಣವಾದ ಹುಲ್ಲಿನ ಗುಡಿಸಲನ್ನು ಬಿಟ್ಟು, ಬಸ್ಸಿನಲ್ಲಿ 3 ರೂಪಾಯಿಯ ಟಿಕೆಟ್ ಪಡೆದು ಮನುಲ್ಲಪಾರ ಗ್ರಾಮಕ್ಕೆ ಹೋಗಿ, 7 ಹಸುಗಳು ಮತ್ತು 12 ಬಿಘಾ ಭೂಮಿ (ಸುಮಾರು 4 ಎಕರೆ) ಹೊಂದಿರುವ ಮಾಲೀಕರ ಬಳಿ ಕೆಲಸಕ್ಕೆ ಸೇರಿದರು . "ರಾಖಲ್‌ ಆಗಿ ಜೀವನವು ಬಹಳ ಕಷ್ಟಕರವಾಗಿತ್ತು. ಆ ವಯಸ್ಸಿನಲ್ಲಿ ನಾನು ಹಲವು ಗಂಟೆಗಳ ಕಾಲ ಕೆಲಸ ಮಾಡಬೇಕಾಗಿತ್ತು. ಕೆಲವೊಮ್ಮೆ ನನಗೆ ಸಾಕಷ್ಟು ಆಹಾರ ನೀಡುತ್ತಿರಲಿಲ್ಲ ಅಥವಾ ಹಳೆಯ ಆಹಾರವನ್ನು ಮಾತ್ರ ನೀಡಲಾಗುತ್ತಿತ್ತು. ನಾನು ಹಸಿವಿನಿಂದ ಅಳುತ್ತಿದ್ದೆ, ”ಎಂದು ನೊಸುಮುದ್ದೀನ್ ನೆನಪಿಸಿಕೊಳ್ಳುತ್ತಾರೆ. "ಆರಂಭದಲ್ಲಿ, ನನಗೆ ಯಾವುದೇ ಸಂಬಳ ನೀಡುತ್ತಿರಲಿಲ್ಲ, ಕೇವಲ ಊಟ ಮತ್ತು ಮಲಗಲು ಜಾಗವನ್ನು ನೀಡಲಾಯಿತು. ನನ್ನ ಉದ್ಯೋಗದಾತ ಪ್ರತಿ ವರ್ಷ 100-120 ಮಾನ್‌ ಅಕ್ಕಿಯನ್ನು ಬೇಸಾಯದಿಂದ ಗಳಿಸುತ್ತಿದ್ದ. ನಾಲ್ಕು ವರ್ಷಗಳ ನಂತರ, ಅವರು ನನಗೆ ಎರಡು ಮಾನ್ ನೀಡಲು ಆರಂಭಿಸಿದರು ” - ಸುಮಾರು 80 ಕಿಲೋ, ಮಾರ್ಚಿಯಿಂದ ನವೆಂಬರ್ ತನಕದ ಕೃಷಿ ಹಂಗಾಮಿನ ಕೊನೆಯಲ್ಲಿ ಕೊಡುತ್ತಿದ್ದರು.

ಕೆಲವು ದಶಕಗಳ ಹಿಂದೆ ಅಸ್ಸಾಂ ಮತ್ತು ಮೇಘಾಲಯದ ಗಡಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬದಲ್ಲಿನ ಚಿಕ್ಕ ಹುಡುಗರನ್ನು ರಖಾಲ್‌ಗಳಾಗಿ ಕೆಲಸ ಮಾಡಲು ಕಳುಹಿಸುವುದು ಸಾಮಾನ್ಯ ಅಭ್ಯಾಸವಾಗಿತ್ತು. ಬಡ ಕುಟುಂಬಗಳ ಮಕ್ಕಳನ್ನು ಅವರ ಪೋಷಕರು ಶ್ರೀಮಂತ ರೈತರಿಗೆ ಜಾನುವಾರು ಪಾಲಕರಾಗಿ 'ಉದ್ಯೋಗ' ಮಾಡಲು 'ನೀಡುತ್ತಾರೆ'. ಈ ವ್ಯವಸ್ಥೆಯನ್ನು ಸ್ಥಳೀಯವಾಗಿ ಪೇಟ್ಭತ್ತಿ ಎಂದು ಕರೆಯಲಾಗುತ್ತಿತ್ತು (ಅಕ್ಷರಶಃ ಅನುವಾದ - 'ಅನ್ನದಿಂದ ಹೊಟ್ಟೆ ತುಂಬಿಸಿಕೊಳ್ಳುವುದು').

Nosumuddin starts preparing crunchy jalebis before dawn. Recalling his days as a cowherd, he says: ‘I would get tired working all day, and at night if not given enough food or given stale food, how would you feel? I felt helpless’
PHOTO • Anjuman Ara Begum

ನೊಸುಮುದ್ದೀನ್ ಮುಂಜಾನೆಗೆ ಮೊದಲು ಗರಿಗರಿಯಾದ ಜಲೇಬಿ ತಯಾರಿಸಲು ಆರಂಭಿಸುತ್ತಾರೆ. ಗೋಪಾಲಕನಾಗಿ ತನ್ನ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಅವರು ಹೇಳುತ್ತಾರೆ: 'ನಾನು ದಿನವಿಡೀ ಕೆಲಸ ಮಾಡಿ ದಣಿದಿರುತ್ತಿದ್ದೆ, ಹೀಗಿರುವಾಗ ರಾತ್ರಿ ಸಾಕಷ್ಟು ಆಹಾರವನ್ನು ಅಥವಾ ಹಳೆಯ ಆಹಾರವನ್ನು ನೀಡದಿದ್ದರೆ, ನಿಮಗೆ ಹೇಗನಿಸುತ್ತದೆ? ಆಗ ನಾನು ಅಸಹಾಯಕನಾಗಿದ್ದೆ '

ನೊಸುಮುದ್ದೀನರ ಇಬ್ಬರು ಕಿರಿಯ ಸಹೋದರರನ್ನೂ ಅವರ ಊರಾದ ಉರಾರ್‌ಬುಯ್‌ನಲ್ಲಿ ರಖಾಲ್‌ಗಳಾಗಿ ಕೆಲಸ ಮಾಡಲು ಕಳುಹಿಸಲಾಯಿತು. ಅವರ ತಂದೆ ಹುಸೇನ್ ಅಲಿ (ಕಳೆದ ತಿಂಗಳು 80ನೇ ತನ್ನ ವಯಸ್ಸಿನಲ್ಲಿ ನಿಧನರಾದರು), ಭೂರಹಿತ ಕೃಷಿಕರಾಗಿದ್ದು, ಅವರು 7-8 ಬಿಘಾ ಗುತ್ತಿಗೆ ಭೂಮಿಯಲ್ಲಿ ಬೆಳೆ ಹಂಚಿಕೆ ಪದ್ಧತಿಯಲ್ಲಿ ಭತ್ತ ಬೆಳೆಯುತ್ತಿದ್ದರು. (ಅವರ ತಾಯಿ ನೊಸಿರಾನ್ ಖಾತುನ್, ಮನೆಕೆಲಸಗಾರ್ತಿಯಾಗಿದ್ದರು, ಅವರು 2018ರಲ್ಲಿ ನಿಧನರಾದರು.)

ನೊಸುಮುದ್ದೀನ್ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ರಾಖಲ್ ಆಗಿ ಅವರ ದಿನವು ಬೇಗನೆ ಆರಂಭವಾಗುತ್ತಿತ್ತು, ಬೆಳಗ್ಗೆ 4 ಗಂಟೆ ಸುಮಾರಿಗೆ “ನಾನು ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಎದ್ದೇಳುತ್ತಿದ್ದೆ," ಎಂದು ಅವರು ಹೇಳುತ್ತಾರೆ. ಅವರು ಒಣಹುಲ್ಲಿನೊಂದಿಗೆ ನೀರು ಮತ್ತು ಖೋಲ್ (ಸಾಸಿವೆ ಗಟ್ಟಿ) ಅನ್ನು ಮೇವಾಗಿ ಬೆರೆಸಿ ಕೊಡಬೇಕಿತ್ತು, ಮತ್ತು ಕೊಟ್ಟಿಗೆ ಸ್ವಚ್ಛಗೊಳಿಸಿ, ಭೂಮಾಲೀಕನ ಸಹೋದರರೊಂದಿಗೆ ಹಸುಗಳನ್ನು ಭತ್ತದ ಗದ್ದೆಗೆ ಮೇಯಲು ಕರೆದೊಯ್ಯುತ್ತಿದ್ದರು. ಅಲ್ಲಿ, ಅವರು ಹುಲ್ಲನ್ನು ಕತ್ತರಿಸುವುದು, ಹಸುಗಳಿಗೆ ನೀರು ಕೊಡುವುದು ಮತ್ತು ಇತರ ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದರು. ಹಗಲಿನ ಊಟವನ್ನು ಗದ್ದೆಗೆ ಕಳುಹಿಸಲಾಗುತ್ತಿತ್ತು. ಕೊಯ್ಲಿನ ಸಮಯದಲ್ಲಿ, ಕೆಲವು ದಿನಗಳಲ್ಲಿ ಅವರು ಸಂಜೆಯವರೆಗೂ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. "ನಾನು ದಿನವಿಡೀ ಕೆಲಸ ಮಾಡಿ ದಣಿದಿರುತ್ತಿದ್ದೆ, ಹೀಗಿರುವಾಗ ರಾತ್ರಿ ಸಾಕಷ್ಟು ಆಹಾರವನ್ನು ಅಥವಾ ಹಳೆಯ ಆಹಾರವನ್ನು ನೀಡದಿದ್ದರೆ, ನಿಮಗೆ ಹೇಗನಿಸುತ್ತದೆ? ಆಗ ನಾನು ಅಸಹಾಯಕನಾಗಿದ್ದೆ''

ಆಗಾಗ, ಹಳೆಯ ಬಟ್ಟೆಗಳಿಂದ ಮಾಡಿದ ದಿಂಬು ಮತ್ತು ದನದ ಕೊಟ್ಟಿಗೆಯ ಮೇಲೆ ಬಿದಿರಿನ ಮಂಚದ ಮೇಲೆ ಒಣಹುಲ್ಲನ್ನು ಹಾಸಿ ಮಲಗಿ ಅಳುತ್ತಾ ರಾತ್ರಿಗಳನ್ನು ಕಳೆಯುತ್ತಿದ್ದರು.

ಪ್ರತಿ 2-3 ತಿಂಗಳಿಗೊಮ್ಮೆ ಅವರ ಊರಿಗೆ ಹೋಗಲು ಅನುಮತಿ ನೀಡಲಾಗುತ್ತಿತ್ತು. "ನಾನು 2-3 ದಿನ ಉಳಿಯಬಹುದಿತ್ತು" ಎಂದು ಅವರು ಹೇಳುತ್ತಾರೆ. “ಮತ್ತೆ ಮನೆಯಿಂದ ಹೊರಡುವಾಗ ದುಃಖ ಉಮ್ಮಳಿಸಿ ಬರುತ್ತಿತ್ತು.”

ನೊಸುಮುದ್ದೀನ್ 15 ವರ್ಷದವರಾಗಿದ್ದಾಗ, ಅವರ ತಂದೆ ಉದ್ಯೋಗದಾತನನ್ನು ಬದಲಾಯಿಸಿದರು. ಈ ಬಾರಿ ಅವರನ್ನು 30-35 ಬಿಘಾ ಭೂಮಿ, ಬಟ್ಟೆ ಅಂಗಡಿ ಮತ್ತು ಇತರ ವ್ಯವಹಾರಗಳನ್ನು ಹೊಂದಿದ್ದ ಮನುಲ್ಲಾಪರ ಎನ್ನುವ ಹಳ್ಳಿಯ ಉದ್ಯಮಿ-ರೈತನೊಬ್ಬನ ಮನೆಗೆ ಕಳುಹಿಸಲಾಯಿತು. “ಇನ್ನೊಂದು ಹೊಸ ಸ್ಥಳಕ್ಕೆ ಹೋದಾಗ ಮತ್ತೆ ಮನೆ ಬಿಟ್ಟು ಬಂದಂತೆನ್ನಿಸಿ ಅಳಲಾರಂಭಿಸಿದೆ. ಸೋಧ ಬೇಪಾರಿ [ಹೊಸ ಉದ್ಯೋಗದಾತ] ನನ್ನನ್ನು ಅವರ ಕುಟುಂಬದ ಸದಸ್ಯರಿಗೆ ಪರಿಚಯಿಸಿದರು ಮತ್ತು ನನಗೆ 2 ರೂಪಾಯಿಗಳನ್ನು ಉಡುಗೊರೆಯಾಗಿ ನೀಡಿದರು. ನಾನು ನಂತರ ಚಾಕೊಲೇಟ್ ಖರೀದಿಸಿದೆ. ಅದು ನನಗೆ ಖುಷಿಕೊಟ್ಟಿತು. ಕೆಲವು ದಿನಗಳ ನಂತರ ನಾನು ಸುಧಾರಿಸಿದೆ ಮತ್ತು ಅವರೊಂದಿಗೆ ಹೊಂದಿಕೊಂಡೆ.

ಮತ್ತೊಮ್ಮೆ, ಊಟ, ಕೊಟ್ಟಿಗೆಯಲ್ಲಿ ಮಲಗಲು ಒಂದು ಸ್ಥಳ ಮತ್ತು ಕೊಯ್ಲಿನ ಅವಧಿಯ ಕೊನೆಯಲ್ಲಿ ಎರಡು ಚೀಲ ಅಕ್ಕಿ, ಜೊತೆಗೆ 400 ರೂಪಾಯಿ ನಗದು, ʼಅವರ ವರ್ಷದ ಸ್ಯಾಲರಿ ಪ್ಯಾಕೇಜ್ʼ ಆಗಿತ್ತು. ಅವರ ದೈನಂದಿನ ಕೆಲಸಗಳಲ್ಲಿ ದನಗಳನ್ನು ಮೇಯಿಸುವುದು ಮತ್ತು ಕೊಟ್ಟಿಗೆಯನ್ನು ಸ್ವಚ್ಛಗೊಳಿಸುವುದು ಸೇರಿತ್ತು. ಆದರೆ ನೊಸುಮುದ್ದೀನರ ಪಾಲಿಗೆ ಇಲ್ಲಿ ಜೀವನ ಸ್ವಲ್ಪ ಉತ್ತಮವಾಯಿತು. ಅವರಿಗೆ ಈಗ 15 ವರ್ಷ ಮತ್ತು ಅವರು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲರು. ಇದಲ್ಲದೆ, ಅವರು ಹೇಳುವಂತೆ ಅವರ ಉದ್ಯೋಗದಾತ ದಯಾಮಯನಾಗಿದ್ದನು.

Two decades ago, marriage opened for him the opportunity to learn from his wife Bali Khatun's family the skill of making sweets
PHOTO • Anjuman Ara Begum
Two decades ago, marriage opened for him the opportunity to learn from his wife Bali Khatun's family the skill of making sweets
PHOTO • Anjuman Ara Begum

ಎರಡು ದಶಕಗಳ ಹಿಂದೆ, ಮದುವೆಯು ಅವರ ಪತ್ನಿ ಬಾಲಿ ಖಾತುನ್ ಕುಟುಂಬದಿಂದ ಸಿಹಿತಿಂಡಿಗಳನ್ನು ಮಾಡುವ ಕೌಶಲ್ಯವನ್ನು ಕಲಿಯುವ ಅವಕಾಶದ ಬಾಗಿಲನ್ನು ತೆರೆಯಿತು

ಇಲ್ಲಿನ ಊಟವು ಬಿಸಿಯಾದ ಅನ್ನ, ತರಕಾರಿಗಳು, ಮೀನು ಅಥವಾ ಮಾಂಸದ ಸಾರುಗಳನ್ನು ಒಳಗೊಂಡಿತ್ತು - ಅವರ ಹಿಂದಿನ ಉದ್ಯೋಗದಾತ ನೀಡುತ್ತಿದ್ದ ಪಂತಭತ್ (ತಂಗಳನ್ನ) ಅಲ್ಲ. “ನಾನು ಅವರೊಂದಿಗೆ ಮಾರುಕಟ್ಟೆಗೆ ಬಂದರೆ, ನನಗೆ ರಸಗುಲ್ಲ ಸವಿಯಲು ಸಿಗುತ್ತಿತ್ತು. ಮತ್ತು ಈದ್ ಗೆ ಹೊಸ ಬಟ್ಟೆ ಕೂಡಾ. ನನ್ನನ್ನು ಅವರ ಸ್ವಂತ ಕುಟುಂಬದ ಸದಸ್ಯನಂತೆ ನೋಡಿಕೊಳ್ಳುತ್ತಿದ್ದರು.”

ಆದರೆ ಅವರ ತಂದೆ ಬೇರೆ ಯೋಜನೆಗಳನ್ನು ಹೊಂದಿದ್ದರು. ನೊಸುಮುದ್ದೀನ್, ಆ ಹೊತ್ತಿಗೆ ಸುಮಾರು 17 ವರ್ಷದವರಾಗಿದ್ದರು, ಎರಡು ವರ್ಷಗಳ ನಂತರ ಇನ್ನೊಂದು ಮನೆಗೆ ಕಳುಹಿಸಲಾಯಿತು, ಈ ಬಾರಿ ಅವರ ಸ್ವಂತ ಗ್ರಾಮವಾದ ಉರಾರ್‌ಬುಯಿಯಲ್ಲೇ ಕೆಲಸ. ಗ್ರಾಮ ಪಂಚಾಯಿತಿಯ ಮುಖ್ಯಸ್ಥರು ಅವರನ್ನು ವಾರ್ಷಿಕ ವೇತನ ರೂ. 1,500 ಮತ್ತು ಕಟಾವು ಅವಧಿಯ ಕೊನೆಯಲ್ಲಿ ಅಕ್ಕಿ ಚೀಲಗಳು.

ಹೀಗೇ ಇನ್ನೊಂದು ವರ್ಷ ಕಳೆಯಿತು

ನನ್ನ ಜೀವನವೆಲ್ಲ ಹೀಗೆಯೇ ಗುಲಾಮನಾಗಿಯೇ ಕಳೆದುಬಿಡುತ್ತೇನೇನೋ ಎನ್ನುವ ಭಯ ಆಗಾಗ ನನ್ನನ್ನು ಕಾಡುತ್ತಿತ್ತು. ಆದರೆ ಬೇರೆ ಆಯ್ಕೆಗಳೂ ಕಾಣುತ್ತಿರಲಿಲ್ಲ” ಎನ್ನುತ್ತಾರೆ ನೊಸುಮುದ್ದೀನ್. ಆದರೂ ಅವರು ತಾನು ಸ್ವಂತ ಕಾಲಿನ ಮೇಲೆ ನಿಲ್ಲುವ ಕನಸು ಕಾಣುವುದನ್ನು ಬಿಟ್ಟಿರಲಿಲ್ಲ. 1990ರ ವೇಳೆಗೆ ತನ್ನ ಹಳ್ಳಿಯಿಂದ ಯುವಕರು ವಲಸೆ ಹೋಗುತ್ತಿರುವುದನ್ನು ಅವರು ಗಮನಿಸಿದ್ದರು - ಈ ಪ್ರದೇಶದಲ್ಲಿ ಸರ್ಕಾರವು ಮೂಲಸೌಕರ್ಯ ಯೋಜನೆಗಳನ್ನು ಮಂಜೂರು ಮಾಡುವುದರೊಂದಿಗೆ ಕೆಲಸದ ಆಯ್ಕೆಗಳು ತೆರೆದುಕೊಳ್ಳುತ್ತಿದ್ದವು. ಚಿಕ್ಕ ಹುಡುಗರು ರಖಾಲ್ ಆಗಿ ಕೆಲಸ ಮಾಡುವುದನ್ನು ಮುಂದುವರೆಸಲು ಬಯಸುತ್ತಿರಲಿಲ್ಲ ಮತ್ತು ತಿಂಗಳಿಗೆ ರೂ. 300-500 ಸಂಬಳಕ್ಕೆ ಪಟ್ಟಣಗಳು ಮತ್ತು ನಗರಗಳಲ್ಲಿನ ಟೀ ಸ್ಟಾಲ್‌ಗಳು ಮತ್ತು ಉಪಾಹಾರ ಗೃಹಗಳಲ್ಲಿ ಕೆಲಸ ಮಾಡುತ್ತಾ, ದೊಡ್ಡ ಮೊತ್ತದ ನಗದಿನೊಡನೆ ಮನೆಗೆ ಮರಳುತ್ತಿದ್ದರು.

ನೊಸುಮುದ್ದೀನ್ ಆ ಹುಡುಗರು ಹೊಚ್ಚ ಹೊಸ ರೇಡಿಯೋಗಳನ್ನು ಕೇಳುತ್ತಿರುವುದನ್ನು ಮತ್ತು ಹೊಳೆಯುವ ಕೈಗಡಿಯಾರಗಳನ್ನು ಧರಿಸುವುದನ್ನು ನೋಡುತ್ತಾ ಪ್ರಕ್ಷುಬ್ಧರಾಗುತ್ತಿದ್ದರು. ಕೆಲವರು ಸೈಕಲ್ ಕೂಡಾ ಖರೀದಿಸಿದ್ದರು. “ಅವರು ಅಮಿತಾಬ್ ಬಚ್ಚನ್ ಮತ್ತು ಮಿಥುನ್  ಚಕ್ರವರ್ತಿಯಂತೆ ಉದ್ದನೆಯ ಪ್ಯಾಂಟ್ ಧರಿಸುತ್ತಿದ್ದರು ಮತ್ತು ಅವರು ಆರೋಗ್ಯವಾಗಿ ಕಾಣುತ್ತಿದ್ದರು” ಎಂದು ಅವರು ನೆನಪಿಸಿಕೊಳ್ಳುತ್ತಾರೆ. “ಅವರು ಏನು ಮಾಡುತ್ತಾರೆ ಮತ್ತು ಇದನ್ನೆಲ್ಲ ಹೇಗೆ ನಿಭಾಯಿಸುತ್ತಾರೆಂಬುದನ್ನು ಕಂಡುಹಿಡಿಯಲು ನಾನು ಅವರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದ. ನಂತರ ನಾನು ಅವರೊಂದಿಗೆ ಹೋಗಲು ನಿರ್ಧರಿಸಿದೆ.

ನೊಸುಮುದ್ದೀನ್ ತನ್ನ ಹಳ್ಳಿಯಿಂದ 80 ಕಿಲೋಮೀಟರ್ ದೂರದಲ್ಲಿರುವ ಮೇಘಾಲಯದ ಬಾಗ್ಮಾರಾ ಪಟ್ಟಣದಲ್ಲಿ ಉದ್ಯೋಗಗಳು ಲಭ್ಯವಿರುವುದರ ಬಗ್ಗೆ ತಿಳಿದುಕೊಂಡರು. ಅವರು ಪ್ರಯಾಣದ ಮಾರ್ಗವನ್ನು ರಹಸ್ಯವಾಗಿ ವಿಚಾರಿಸಿದರು ಮತ್ತು ಯೋಜನೆಯನ್ನು ಮಾಡಿದರು. “ನಾನು ಉದ್ವಿಗ್ನನಾಗಿದ್ದೆ ಆದರೆ ದೃಢಸಂಕಲ್ಪ ಹೊಂದಿದ್ದೆ. ನನ್ನ ಮನೆಯ ಸದಸ್ಯರು ನನ್ನನ್ನು ಹಿಂಬಾಲಿಸಿ ಬಂದು ಮರಳಿ ಕರೆತರಬಹುದು ಎಂದು ಚಿಂತಿಸಿ ನಾನು ಮನೆಯಲ್ಲಿ ಯಾರಿಗೂ ಈ ಕುರಿತು ಮಾಹಿತಿ ನೀಡಿರಲಿಲ್ಲ.”

ಒಂದು ಬೆಳಿಗ್ಗೆ, ಜಾನುವಾರುಗಳನ್ನು ಮೇಯಿಸಲು ಹೊರಬಿಡುವ ಬದಲು, ನೊಸುಮುದ್ದೀನ್ ಓಡಲು ಆರಂಭಿಸಿದರು. “ನಾನು ಹೊರಗೆ ಕೆಲಸ ಮಾಡುವ ಕುರಿತು ಮಾತನಾಡುತ್ತಿದ್ದ ಒಬ್ಬ ಹುಡುಗನೊಂದಿಗೆ ಹೊರಟೆ. ನಾವು ಹಟ್ಸಿಂಗಿಮಾರಿ ಪಟ್ಟಣದ ಬಸ್ ನಿಲ್ದಾಣ ತಲುಪುವವರೆಗೂ ಓಡಿದೆವು. ಅಲ್ಲಿಂದ ಬಾಗ್ಮಾರಾ ತಲುಪಲು ಒಂಬತ್ತು ಗಂಟೆಗಳ ಪ್ರಯಾಣ ಮಾಡಬೇಕಾಯಿತು. “ನಾನು ಏನನ್ನೂ ತಿನ್ನಲಿಲ್ಲ. 17 ರೂಪಾಯಿಯ ಟಿಕೆಟಿಗಾಗುವಷ್ಟು ಹಣವೂ ನನ್ನ ಬಳಿ ಇರಲಿಲ್ಲ. ಬಾಗ್ಮಾರಾ ತಲುಪಿದ ನಂತರ ನಾನು ಅದನ್ನು ನನ್ನ ಹಳ್ಳಿಯ ಇನ್ನೊಬ್ಬ ಹುಡುಗನಿಂದ ಸಾಲ ಪಡೆದಿದ್ದೆ.

ನನ್ನ ಜೀವನವೆಲ್ಲ ಹೀಗೆಯೇ ಗುಲಾಮನಾಗಿಯೇ ಕಳೆದುಬಿಡುತ್ತೇನೇನೋ ಎನ್ನುವ ಭಯ ಆಗಾಗ ನನ್ನನ್ನು ಕಾಡುತ್ತಿತ್ತು. ಆದರೆ ಬೇರೆ ಆಯ್ಕೆಗಳೂ ಕಾಣುತ್ತಿರಲಿಲ್ಲ” ಎನ್ನುತ್ತಾರೆ ನೊಸುಮುದ್ದೀನ್. ಆದರೂ ಅವರು ತಾನು ಸ್ವಂತ ಕಾಲಿನ ಮೇಲೆ ನಿಲ್ಲುವ ಕನಸು ಕಾಣುವುದನ್ನು ಬಿಟ್ಟಿರಲಿಲ್ಲ

ವೀಡಿಯೋ ನೋಡಿ: ಮಾಯೆಯ ಹಾಡು, ಸಿಹಿ ರಸಗುಲ್ಲದ ತುಂಡು

ತನ್ನ ಕನಸಿನ ತಾಣದಲ್ಲಿ, ಖಾಲಿ ಜೇಬು ಮತ್ತು ಖಾಲಿ ಹೊಟ್ಟೆಯೊಂದಿಗೆ, ನೊಸುಮುದ್ದೀನ್ ರೊಮೋನಿ ಚಾ ದುಕಾನ್ (ರೊಮೋನಿಯ ಟೀ ಸ್ಟಾಲ್) ಮುಂದೆ ಬಸ್ಸಿನಿಂದ ಇಳಿದರು. ಹಸಿದ ಕಣ್ಣುಗಳನ್ನು ಹೊಂದಿರುವ ಒಂಟಿ ಹುಡುಗನನ್ನು ನೋಡಿ, ಸ್ಟಾಲ್ ಮಾಲೀಕರು ಅವನಿಗೆ ಒಳಗೆ ಬರುವಂತೆ ಸೂಚಿಸಿದರು. ನೊಸುಮುದ್ದೀನ್ ಅವರಿಗೆ ಆಹಾರ, ತಂಗಲು ಸ್ಥಳ ಮತ್ತು ಪಾತ್ರೆ ತೊಳೆಯುವ-ಕ್ಲೀನರ್ ಆಗಿ ಕೆಲಸ ನೀಡಲಾಯಿತು.

ನೊಸುಮುದ್ದೀನ್‌ ಪಾಲಿಗೆ ಮೊದಲ ರಾತ್ರಿ ಕಣ್ಣೀರಿನ ರಾತ್ರಿಯಾಗಿತ್ತು. ಹಳ್ಳಿಯಲ್ಲಿ ಅವರ ಉದ್ಯೋಗದಾತರ ಬಳಿ ಇನ್ನೂ ಬಾಕಿ ಇರುವ ಅವರ ಸಂಬಳ 1,000 ರೂ. ಆ ಸಮಯದಲ್ಲಿ ಅವರಿಗಿದ್ದ ಏಕೈಕ ಕಾಳಜಿಯಾಗಿತ್ತು. “ಆಗ ನನಗೆ ಬಹಳ ಕೆಡುಕೆನ್ನಿಸಿತು. ನನ್ನ ಕಠಿಣ ಪರಿಶ್ರಮದ ಹೊರತಾಗಿಯೂ ಇಷ್ಟು ದೊಡ್ಡ ಮೊತ್ತ ವ್ಯರ್ಥವಾಯಿತಲ್ಲ ಎನ್ನಿಸಿತು.”

ತಿಂಗಳುಗಳು ಕಳೆದವು. ಅವರು ಚಹಾ ಮತ್ತು ತಟ್ಟೆಗಳನ್ನು ಸ್ವಚ್ಛಗೊಳಿಸಲು ಕಲಿತು, ಮತ್ತು ಅವುಗಳನ್ನು ಮೇಜಿನ ಮೇಲೆ ಜೋಡಿಸುವುದನ್ನು ಕೂಡಾ ಕಲಿತರು. ಮುಂದೆ ಬಿಸಿ ಬಿಸಿ ಚಹಾ ಮಾಡಲು ಕಲಿತರು. ಅವರಿಗೆ ತಿಂಗಳಿಗೆ 500 ರೂ. ಸಂಬಳ ದೊರೆಯುತ್ತಿತ್ತು, ಮತ್ತು ಎಲ್ಲವನ್ನೂ ಉಳಿಸುತ್ತಿದ್ದರು. “ನಾನು 1,500 ರೂಪಾಯಿಗಳನ್ನು ಸಂಗ್ರಹಿಸಿದಾಗ, ನನ್ನ ಹೆತ್ತವರನ್ನು ಭೇಟಿಯಾಗುವ ಸಮಯ ಬಂದಿದೆ ಎಂದು ನನಗೆ ಅನಿಸಿತು. ಆ ಮೊತ್ತವು ಅವರಿಗೆ ಬಹಳಷ್ಟು ಸಹಾಯ ಮಾಡುತ್ತದೆ ಎಂದು ನನಗೆ ತಿಳಿದಿತ್ತು. ಮತ್ತು ನಾನು ಮನೆಗೆ ಭೇಟಿ ನೀಡಲು ತೀರಾ ಕಾತರನಾಗಿದ್ದೆ.”

ಮನೆಗೆ ಹಿಂದಿರುಗಿದ ನಂತರ, ಅವರು ತನ್ನ ಉಳಿತಾಯವನ್ನು  ತಂದೆಗೆ ಒಪ್ಪಿಸಿದರು. ಆ ಹಣದಿಂದ ದೀರ್ಘಕಾಲದ ಕುಟುಂಬದ ಸಾಲವನ್ನು ತೀರಿಸಲಾಯಿತು ಮತ್ತು ಅವರ ಕುಟುಂಬವು ಓಡಿಹೋಗಿದ್ದಕ್ಕಾಗಿ ಅವರನ್ನು ಕ್ಷಮಿಸಿತು ಎಂದು ಅವರು ಹೇಳುತ್ತಾರೆ.

ಒಂದು ತಿಂಗಳ ನಂತರ, ನೊಸುಮುದ್ದೀನ್ ಬಾಗ್ಮಾರಾಕ್ಕೆ ಮರಳಿದರು ಮತ್ತು ತಿಂಗಳಿಗೆ 1,000 ರೂ. ಸಂಬಳಕ್ಕೆ ಮತ್ತೊಂದು ಟೀ ಸ್ಟಾಲ್‌ನಲ್ಲಿ ಪಾತ್ರೆ ತೊಳೆಯುವ-ಸ್ವಚ್ಛಗೊಳಿಸುವ ಕೆಲಸವನ್ನು ಕಂಡುಕೊಂಡರು. ಅವರು ಬೇಗನೆ ಅಲ್ಲಿ ವೇಟರ್‌ ಆಗಿ ಬಡ್ತಿ ಪಡೆದರು, ಮತ್ತು ಅವರು ಚಹಾ, ಸಿಹಿತಿಂಡಿಗಳು ಮತ್ತು ತಿಂಡಿಗಳನ್ನು ನೀಡುತ್ತಿದ್ದರು-ಪುರಿ-ಸಬ್ಜಿ, ಪರಾಠಗಳು, ಸಮೋಸಗಳು, ರಸ್ಮಲೈ, ರಸಗುಲ್ಲಾಗಳು ಮತ್ತು ಇನ್ನಷ್ಟು-ಬೆಳಿಗ್ಗೆ 4ರಿಂದ ರಾತ್ರಿ 8ರವರೆಗೆ ಕೆಲಸ ಮಾಡುತ್ತಿದ್ದರು ಮತ್ತು ಎಲ್ಲಾ ಕೆಲಸಗಾರರು ಹೋಟೆಲಿನಲ್ಲಿಯೇ ತಂಗುತ್ತಿದ್ದರು.

ಅವರು ಸುಮಾರು ನಾಲ್ಕು ವರ್ಷಗಳ ಕಾಲ ಇಲ್ಲಿ ಕೆಲಸ ಮಾಡಿದರು, ಮನೆಗೆ ನಿಯಮಿತವಾಗಿ ಹಣವನ್ನು ಕಳುಹಿಸುತ್ತಿದ್ದರು. ಸುಮಾರು 4,000 ರೂ. ಉಳಿತಾಯ ಮಾಡಿದಾಗ ನೊಸುಮುದ್ದೀನ್ ಮನೆಗೆ ಮರಳಲು ನಿರ್ಧರಿಸಿದರು.

ಅವರು ತನ್ನ ಉಳಿತಾಯದಿಂದ ಒಂದು ಎತ್ತನ್ನು ಖರೀದಿಸಿದರು ಮತ್ತು ಗುತ್ತಿಗೆ ಭೂಮಿಯಲ್ಲಿ ಬೇಸಾಯ ಮಾಡಲು ಪ್ರಾರಂಭಿಸಿದರು. ಅದು ಅವರ ಹಳ್ಳಿಯಲ್ಲಿದ್ದ ಕೆಲಸ ಮಾಡುವ ಏಕೈಕ ಆಯ್ಕೆಯಾಗಿತ್ತು. ಉಳುಮೆ, ಬಿತ್ತನೆ, ಶುಚಿಗೊಳಿಸುವಿಕೆಯ ಕೆಲಸಗಳು ಅವರನ್ನು ದಿನವಿಡೀ ಹೊಲದಲ್ಲಿ ನಿರತವಾಗಿರಿಸಿದ್ದವು.

Nosumuddin usually made rasogollas in the afternoon or evening – and stored them. But his small (and sweet) world abruptly came to a halt with the lockdown
PHOTO • Anjuman Ara Begum
Nosumuddin usually made rasogollas in the afternoon or evening – and stored them. But his small (and sweet) world abruptly came to a halt with the lockdown
PHOTO • Anjuman Ara Begum

ನೊಸುಮುದ್ದೀನ್ ಸಾಮಾನ್ಯವಾಗಿ ರಸಗುಲ್ಲವನ್ನು ಮಧ್ಯಾಹ್ನ ಅಥವಾ ಸಂಜೆಯಲ್ಲಿ ತಯಾರಿಸುತ್ತಾರೆ - ಮತ್ತು ಅವುಗಳನ್ನು ಸಂಗ್ರಹಿಸಿಡುತ್ತಾರೆ. ಆದರೆ ಅವರ ಸಣ್ಣ (ಮತ್ತು ಸಿಹಿ) ಪ್ರಪಂಚವು ಲಾಕ್‌ಡೌನ್‌ನೊಂದಿಗೆ ಇದ್ದಕ್ಕಿದ್ದಂತೆ ಸ್ಥಬ್ಧಗೊಂಡಿತು

ಒಂದು ಮುಂಜಾನೆ, ಹಲೋಯಿ (ಹಲ್ವಾಯಿ, ಸಿಹಿತಿನಿಸು ತಯಾರಿಸುವವರು) ಗುಂಪು ಅವರು ಕೆಲಸ ಮಾಡುತ್ತಿದ್ದ ಹೊಲದ ಮೂಲಕ ಹಾದು ಹೋಗುತ್ತಿತ್ತು. ”ಅವರು ದೊಡ್ಡ ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಏನು ಕೊಂಡೊಯ್ಯುತ್ತಿದ್ದಾರೆಂದು ನಾನು ಕೇಳಿದೆ. ಇದು ರಸಗುಲ್ಲ ಎಂದು ಅವರು ಹೇಳಿದರು. ಇದು ಲಾಭದಾಯಕ ವ್ಯವಹಾರ ಎಂದು ನನಗೆ ತಿಳಿಯಿತು. ರಸಗುಲ್ಲ  ತಯಾರಿಸುತ್ತಿದ್ದ ಟೀ ಸ್ಟಾಲ್‌ನಲ್ಲಿ ಕೆಲಸ ಮಾಡಿಯೂ ಅವುಗಳನ್ನು ಹೇಗೆ ತಯಾರಿಸಬೇಕೆಂದು ಕಲಿತಿಲ್ಲದ ಕುರಿತು ವಿಷಾದವೆನ್ನಿಸಿತು.

ನೊಸುಮುದ್ದೀನ್ ಈಗ ʼಸೆಟಲ್‌ ಆಗಲುʼ ಬಯಸಿದರು. “ನನ್ನ ವಯಸ್ಸಿನ ಹುಡುಗರು [20ರ ದಶಕದ ಆರಂಭದಲ್ಲಿರುವವರು] ಮದುವೆಯಾಗುತ್ತಿದ್ದರು. ಅವರಲ್ಲಿ ಕೆಲವರು ಪ್ರೀತಿಸುತ್ತಿದ್ದರು. ನಾನು ನನಗಾಗಿ ಜೀವನ ಸಂಗಾತಿಯನ್ನು ಹುಡುಕಬೇಕು, ಮನೆಯನ್ನು ನಿರ್ಮಿಸಬೇಕು ಮತ್ತು ಮಕ್ಕಳೊಂದಿಗೆ ಸಂತೋಷದಿಂದ ಬದುಕಬೇಕು ಎಂದು ನಾನು ಭಾವಿಸಿದೆ. ರೈತನ ಹೊಲಗಳಿಗೆ ನೀರುಣಿಸುವ ಕೆಲಸ ಮಾಡುತ್ತಿದ್ದ ಮಹಿಳೆಯ ಅಂದ ಅವರನ್ನು ಸೆಳೆಯಿತು. ಹಚ್ಚ ಹಸಿರಿನ ಭತ್ತದ ಗದ್ದೆಗಳ ನಡುವೆ ಅವಳನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಒಂದು ದಿನ, ಅವಳನ್ನು ಸಮೀಪಿಸಲು ಧೈರ್ಯವನ್ನು ಒಟ್ಟುಗೂಡಿಸಿಕೊಂಡರು. ಆದರೆ ಇದು ವಿನಾಶಕಾರಿ ಪ್ರಯತ್ನವಾಗಿತ್ತು. ಅವಳು ಅಲ್ಲಿಂದ ಓಡಿಹೋಗಿ ಮರುದಿನದಿಂದ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದಳು.

“ನಾನು ಅವಳನ್ನು ಮತ್ತೆ ನೋಡಲು ಕಾಯುತ್ತಿದ್ದೆ ಆದರೆ ಅವಳು ಕಾಣಿಸಲಿಲ್ಲ” ಎಂದು ಅವರು ನೆನಪಿಸಿಕೊಳ್ಳುತ್ತಾರೆ. “ನಂತರ ನಾನು ನನ್ನ ಸೋದರ ಮಾವನೊಂದಿಗೆ ಮಾತನಾಡಿದೆ ಮತ್ತು ಅವರು ನನಗೆ ಹುಡುಗಿಯನ್ನು ಹುಡುಕತೊಡಗಿದರು.” ಅವರ ಮದುವೆಯು ಹತ್ತಿರದ ಹಳ್ಳಿಯಲ್ಲಿರುವ ಹಲೋಯಿಯ ಮಗಳಾದ, ಈಗ ಸುಮಾರು 35ರ ಹರೆಯದ ಆಸುಪಾಸಿನಲ್ಲಿರುವ ಬಾಲಿ ಖಾತುನ್ ಜೊತೆ ಏರ್ಪಾಡಾಗಿತ್ತು. (ನಂತರ, ಅವರ ಮೊದಲ ಕ್ರಶ್ ಅವರ ಹೆಂಡತಿಯ ಚಿಕ್ಕಮ್ಮನಾಗಿದ್ದರು ಎಂದು ಅವರಿಗೆ ತಿಳಿಯಿತು.)

ಸಿಹಿತಿಂಡಿಗಳನ್ನು ತಯಾರಿಸುವ ಕೌಶಲವನ್ನು ಅವರ ಪತ್ನಿಯ ಕುಟುಂಬದಿಂದ ಕಲಿಯುವ ಅವಕಾಶವನ್ನು ಮದುವೆ ಅವರಿಗೆ ತೆರೆಯಿತು. ಅವರ ಮೊದಲ ಸ್ವತಂತ್ರ ಪ್ರಯತ್ನಗಳು ಮೂರು ಲೀಟರ್ ಹಾಲಿನಿಂದ ಪ್ರಾರಂಭವಾದವು - ಅವರು 100 ರಸಗುಲ್ಲಗಳನ್ನು ಮಾಡಿದರು, ಪ್ರತಿಯೊಂದನ್ನು 1 ರೂಪಾಯಿಗೆ ಮಾರಾಟ ಮಾಡಿದರು. ಮನೆ-ಮನೆಗೆ ಹೋಗಿ ಮಾರಾಟ ಮಾಡುವ ಮೂಲಕ 50 ರೂ.ಗಳ ಲಾಭ ಗಳಿಸಿದರು.

ಇದು ಶೀಘ್ರದಲ್ಲೇ ಅವರ ನಿಯಮಿತ ಆದಾಯದ ಮೂಲವಾಯಿತು. ಕಾಲಕ್ರಮೇಣ, ಇದು ಅವರ ಕುಟುಂಬದ ಕೆಲವು ಸಾಲಗಳನ್ನು ಮತ್ತು ಮರುಕಳಿಸುವ ಪ್ರವಾಹ ಅಥವಾ ಬರದಿಂದಾಗಿ ಕೃಷಿಯಲ್ಲಿನ ನಷ್ಟವನ್ನು ತುಂಬಿಕೊಳ್ಳಲು ಅವಕಾಶ ಮಾಡಿಕೊಟ್ಟಿತು.

'I walk to nearby villages to sell, sometimes I walk 20-25 kilometres with a load of about 20-25 kilos of sweets'
PHOTO • Anjuman Ara Begum
'I walk to nearby villages to sell, sometimes I walk 20-25 kilometres with a load of about 20-25 kilos of sweets'
PHOTO • Anjuman Ara Begum

ನಾನು ಮಾರಾಟ ಮಾಡಲು ಹತ್ತಿರದ ಹಳ್ಳಿಗಳಿಗೆ ನಡೆದು ಹೋಗುತ್ತೇನೆ, ಕೆಲವೊಮ್ಮೆ ನಾನು 20-25 ಕಿಲೋ ಸಿಹಿತಿಂಡಿಗಳ ಭಾರ ಹೊತ್ತು 20-25 ಕಿಲೋಮೀಟರ್‌ಗಳಷ್ಟು ನಡೆಯುತ್ತೇನೆ

2005ರಲ್ಲಿ, ಸುಮಾರು 25 ವರ್ಷ ವಯಸ್ಸಿನ ನೊಸುಮುದ್ದೀನ್, ಮೇಘಾಲಯದ ನೈಋತ್ಯ ಗರೋ ಹಿಲ್ಸ್ ಜಿಲ್ಲೆಯ ಗಡಿ ಪಟ್ಟಣವಾದ ಸರಿಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಮಹೇಂದ್ರಗಂಜ್‌ಗೆ ಪ್ರಯಾಣ ಬೆಳೆಸಿದರು. ಸಿಹಿ ವ್ಯಾಪಾರವು ಅಲ್ಲಿ ಚೆನ್ನಾಗಿ ನಡೆಯುತ್ತದೆ ಎಂದು ಅವರು ಕೇಳಿದ್ದರು. ಆದರೆ ಪಟ್ಟಣದಲ್ಲಿ ಅಪರಿಚಿತರಾಗಿ, ಅದು ಸುಲಭವಲ್ಲ. ಆ ದಿನಗಳಲ್ಲಿ, ದರೋಡೆಗಳ ಸರಣಿಯು ಅಭದ್ರತೆಯ ವಾತಾವರಣವನ್ನು ಸೃಷ್ಟಿಸಿತ್ತು. ಜನರು ಜಾಗೃತರಾಗಿದ್ದರು. ನೆಲೆಗೊಳ್ಳಲು ಬಾಡಿಗೆ ಜಾಗವನ್ನು ಹುಡುಕಲು ನೊಸುಮುದ್ದೀನ್ ಗೆ ಮೂರು ತಿಂಗಳು ಬೇಕಾಯಿತು. ಮತ್ತು ಅವರ ಸಿಹಿತಿಂಡಿಗಳಿಗಾಗಿ ಗ್ರಾಹಕರ ನೆಲೆಯನ್ನು ನಿರ್ಮಿಸಲು ಸುಮಾರು ಮೂರು ವರ್ಷಗಳು ಹಿಡಿಸಿದವು.

ಅವರು ಯಾವುದೇ ಬಂಡವಾಳವನ್ನು ಹೊಂದಿರಲಿಲ್ಲ ಮತ್ತು ಎಲ್ಲಾ ವಸ್ತುಗಳನ್ನು ಮುಂಗಡವಾಗಿ ಪಡೆದು ಸಾಲದ ಮೇಲೆ ತನ್ನ ವ್ಯವಹಾರವನ್ನು ಪ್ರಾರಂಭಿಸಿದರು. ಅವರ ಪತ್ನಿ ಬಾಲಿ ಖಾತುನ್ 2015ರಲ್ಲಿ ಮಹೇಂದ್ರಗಂಜ್‌ಗೆ ತೆರಳಿದರು. ಕಾಲಾನಂತರದಲ್ಲಿ, ಅವರಿಗೆ ಮೂವರು ಮಕ್ಕಳಿದ್ದರು - ಅವರ ಮಗಳು ರಾಜಮಿನಾ ಖಾತುನ್ ಅವರಿಗೆ ಈಗ 18, ಮತ್ತು ಪುತ್ರರಾದ ಫೋರಿದುಲ್ ಇಸ್ಲಾಂ ಮತ್ತು ಸೊರಿಫುಲ್ ಇಸ್ಲಾಂ 17 ಮತ್ತು 11, ಇಬ್ಬರೂ ಶಾಲೆಯಲ್ಲಿ ಕಲಿಯುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ, ನೊಸುಮುದ್ದೀನ್ ಸುಮಾರು ತಿಂಗಳಿಗೆ ರೂ. 18,000-20,000 ಸಂಪಾದಿಸುತ್ತಿದ್ದರು. ಕುಟುಂಬದ ವ್ಯಾಪಾರ ವಿಸ್ತರಿಸಿತ್ತು. ರಸಗುಲ್ಲದ ಜೊತೆಯಲ್ಲಿ, ಅವರು ಮತ್ತು ಬಾಲಿ ಖತುನ್ ಸೇರಿ ಜಲೇಬಿಯನ್ನು ಕೂಡಾ ತಯಾರಿಸುತ್ತಾರೆ.

ನೊಸುಮುದ್ದೀನ್ ಕಾಲವನ್ನು ಅವಲಂಬಿಸಿ ವಾರದಲ್ಲಿ 6 ಅಥವಾ 7 ದಿನ ವ್ಯಾಪಾರ ಮಾಡುತ್ತಿದ್ದರು. ಅವರು ಮತ್ತು ಬಾಲಿ ಖತುನ್ ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ರಸಗುಲ್ಲವನ್ನು ತಯಾರಿಸುತ್ತಾರೆ - 100 ರಸಗುಲ್ಲ ತಯಾರಿಸಲು 5 ಲೀಟರ್ ಹಾಲು ಮತ್ತು 2 ಕಿಲೋ ಸಕ್ಕರೆ ಬೇಕಾಗುತ್ತದೆ - ಮತ್ತು ಅವುಗಳನ್ನು ತಯಾರಿಸಿ ಸಂಗ್ರಹಿಸಿಡುತ್ತಾರೆ. ಮುಂಜಾನೆಗೂ ಮೊದಲು, ಅವರು ಜಲೇಬಿಯನ್ನು ಕೂಡ ತಯಾರಿಸುತ್ತಾರೆ - ಅದನ್ನು ತಾಜಾ ಇರುವಾಗಲೇ ಮಾರಬೇಕು. ನಂತರ ನೊಸುಮುದ್ದೀನ್ ಎರಡೂ ವಸ್ತುಗಳನ್ನು ಸಿದ್ಧಪಡಿಸಿ, ಅವುಗಳನ್ನು ಮನೆ-ಮನೆಗೆ ಅಥವಾ ಹಳ್ಳಿಯ ಚಹಾ ಅಂಗಡಿಗಳಲ್ಲಿ ಮಾರಿ, ಮಧ್ಯಾಹ್ನ 2 ಗಂಟೆಗೆ ಮನೆಗೆ ಮರಳುತ್ತಾರೆ.

ಮಾರ್ಚ್ 2020ರಲ್ಲಿ ಆರಂಭವಾದ ಕೋವಿಡ್ -19 ಕಾರಣದಿಂದಾಗಿ ಅವರ ಸಣ್ಣ (ಮತ್ತು ಸಿಹಿ) ಜಗತ್ತು ರಾಷ್ಟ್ರವ್ಯಾಪಿ ಲಾಕ್‌ಡೌನ್‌ನೊಂದಿಗೆ ಇದ್ದಕ್ಕಿದ್ದಂತೆ ಸ್ಥಬ್ಧಗೊಂಡಿತು. ಮುಂದಿನ ಕೆಲವು ವಾರಗಳು ಕುಟುಂಬಕ್ಕೆ ಕಷ್ಟಕರವಾಗಿತ್ತು. ಅವರು ತಮ್ಮ ಸಂಗ್ರಹದಲ್ಲಿದ್ದ ಅತ್ಯಲ್ಪ ಅಕ್ಕಿ, ಬೇಳೆ, ಒಣ ಮೀನು ಮತ್ತು ಕೆಂಪು ಮೆಣಸಿನ ಪುಡಿಯನ್ನು ಬಳಸಿ ದಿನಗಳನ್ನು ಕಳೆದರು. ಅವರ ಮನೆ ಮಾಲಿಕರು ಅಕ್ಕಿ ಮತ್ತು ತರಕಾರಿಗಳನ್ನು ಮತ್ತಷ್ಟು ದಾಸ್ತಾನು ಮಾಡಲು ಸಹಾಯ ಮಾಡಿದರು. (ನೊಸುಮುದ್ದೀನ್ ಮಹೇಂದ್ರಗಂಜ್‌ನಲ್ಲಿ ವಲಸೆ ಕಾರ್ಮಿಕರಾಗಿರುವುದರಿಂದ, ಸರ್ಕಾರದಿಂದ ಒದಗಿಸಲಾದ ಪರಿಹಾರವನ್ನು ಪಡೆಯಲು ಅವರು ಇಲ್ಲಿ ತನ್ನ ಪಡಿತರ ಚೀಟಿಯನ್ನು ಬಳಸಲಾಗುವುದಿಲ್ಲ.)

ಕೆಲವು ದಿನಗಳ ನಂತರ, ಅವರು ಸುಮ್ಮನೆ ಮನೆಯಲ್ಲಿರುವುದಕ್ಕೆ ಬೇಸರಗೊಂಡು ನೆರೆಹೊರೆಯವರಿಗೆ ರಸಗುಲ್ಲ ಮಾರಾಟ ಮಾಡುವಲ್ಲಿ ಯಶಸ್ವಿಯಾದರು ಮತ್ತು ಸುಮಾರು ರೂ. 800ರಷ್ಟು ಆದಾಯ ಗಳಿಸಿದರು. ಇದರ ಹೊರತಾಗಿ ಅವರಿಗೆ ಯಾವುದೇ ಆದಾಯವಿರಲಿಲ್ಲ.

Nosumuddin's income is irregular during the pandemic period: 'Life has become harder. But still not as hard as my childhood...'
PHOTO • Anjuman Ara Begum
Nosumuddin's income is irregular during the pandemic period: 'Life has become harder. But still not as hard as my childhood...'
PHOTO • Anjuman Ara Begum

ಸಾಂಕ್ರಾಮಿಕ ಪಿಡುಗಿನ ಅವಧಿಯಲ್ಲಿ ನೊಸುಮುದ್ದೀನ್ ಆದಾಯವು ಅನಿಯಮಿತವಾಗಿದೆ: ʼಜೀವನ ನಡೆಸುವುದು ಕಷ್ಟಕರವಾಗಿದೆ. ಆದರೆ ನನ್ನ ಬಾಲ್ಯದಲ್ಲಿ ಕಷ್ಟದಂತಹ ಕಷ್ಟವೇನಲ್ಲ ʼ

ಒಂದು ತಿಂಗಳ ಲಾಕ್‌ಡೌನ್ ಕಳೆಯಿತು. ಒಂದು ಮಧ್ಯಾಹ್ನ, ಅವರ ಮನೆ ಮಾಲಿಕರು ಜಲೇಬಿಯನ್ನು ತಿನ್ನಲು ಬಯಸಿದರು. ನೊಸುಮುದ್ದೀನ್ ಅವರು ಸಾಧ್ಯವಿರುವ ಪದಾರ್ಥಗಳನ್ನು ಒಟ್ಟುಗೂಡಿಸಿದರು. ಸ್ವಲ್ಪ ಸಮಯದ ನಂತರ ನೆರೆಹೊರೆಯವರು ಕೂಡ ಜಲೇಬಿಗಳನ್ನು ಕೇಳಲು ಆರಂಭಿಸಿದರು. ನೊಸುಮುದ್ದೀನ್ ಸಾಲದ ಮೇಲೆ, ಹತ್ತಿರದಲ್ಲಿ ವಾಸಿಸುವ ಸಗಟು ಕಿರಾಣಿ ವ್ಯಾಪಾರಿಗಳಿಂದ ಸ್ವಲ್ಪ ಹಿಟ್ಟು, ಸಕ್ಕರೆ ಮತ್ತು ತಾಳೆ ಎಣ್ಣೆಯನ್ನು ಸಂಗ್ರಹಿಸಿದರು. ಅವರು ಪ್ರತಿ ಮಧ್ಯಾಹ್ನ ಜಲೇಬಿಯನ್ನು ತಯಾರಿಸಲು ಪ್ರಾರಂಭಿಸಿದರು ಮತ್ತು ದಿನಕ್ಕೆ 400-500 ರೂ. ಗಳಿಸತೊಡಗಿದರು.

ಏಪ್ರಿಲ್‌ನಲ್ಲಿ ರಂಜಾನ್ ತಿಂಗಳು ಆರಂಭವಾದಾಗ, ಅವರ ಜಲೇಬಿಗೆ ಬೇಡಿಕೆ ಹೆಚ್ಚಾಯಿತು. ಲಾಕ್‌ಡೌನ್ ಸಮಯದಲ್ಲಿ ಪೊಲೀಸ್ ಚೆಕ್‌ಪೋಸ್ಟ್‌ಗಳ ಹೊರತಾಗಿಯೂ, ಅವರು ವಾರಕ್ಕೊಮ್ಮೆ ಅಥವಾ ಎರಡು ಬಾರಿ, ಹಳ್ಳಿಯಲ್ಲಿ ಕೆಲವನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾದರು - ಎಲ್ಲಾ ಸಮಯದಲ್ಲೂ ಎಚ್ಚರಿಕೆಯಿಂದ ಮಾಸ್ಕ್ ಮತ್ತು ಸ್ಯಾನಿಟೈಝರ್‌ ಬಳಸುತ್ತಿದ್ದೆ ಎಂದು ಅವರು ಹೇಳುತ್ತಾರೆ. ಇದೆಲ್ಲವೂ ಅವರ ಆರಂಭಿಕ ಲಾಕ್‌ಡೌನ್ ಸಮಯದ ನಷ್ಟ ಮತ್ತು ಸಾಲವನ್ನು ತುಂಬಿಕೊಳ್ಳಲು ಸಹಾಯ ಮಾಡಿತು.

ಲಾಕ್‌ಡೌನ್ ಸಡಿಲಗೊಂಡ ನಂತರ, ಅವರು ತಮ್ಮ ನಿಯಮಿತ ವ್ಯಾಪಾರವಾದ ರಸಗುಲ್ಲ ಮತ್ತು ಜಲೇಬಿ ತಯಾರಿಕೆಯನ್ನು ಪುನರಾರಂಭಿಸಿದರು. ಅದಾಗ್ಯೂ, ಅವರು ಹೇಳುತ್ತಾರೆ, ಅವರ ಆದಾಯದ ಬಹಳಷ್ಟು, ಬಹಳ ದಿನಗಳಿಂದ ಅವರ ತಂದೆ, ಪತ್ನಿ ಮತ್ತು ಮಗಳು ಎದುರಿಸುತ್ತಿರುವ ಗಂಭೀರವಲ್ಲದ ಆದರೆ ನಿರಂತರ ಆರೋಗ್ಯ ಸಮಸ್ಯೆಗಳಿಗೆ  ಖರ್ಚಾಗುತ್ತಿತ್ತು.

2020 ರ ಅಂತ್ಯದ ವೇಳೆಗೆ, ನೊಸುಮುದ್ದೀನ್ ತನ್ನ ಕುಟುಂಬದ ಅಸ್ಸಾಂನ ಹಳ್ಳಿಯಾದ ಉರಾರ್‌ಬುಯಿಯಲ್ಲಿ ತನ್ನ ಸ್ವಂತ ಮನೆಯನ್ನು ಕಟ್ಟಲು ಆರಂಭಿಸಿದರು. ಇದು ಅವರ ಉಳಿತಾಯದ ಒಂದು ಭಾಗವನ್ನು ಖರ್ಚು ಮಾಡಿಸಿತು.

ನಂತರ 2021ರಲ್ಲಿ ಮತ್ತೆ ಲಾಕ್‌ಡೌನ್ ಬಂದಿತು. ನೊಸುಮುದ್ದೀನ್ ಅವರ ತಂದೆ ಅಸ್ವಸ್ಥರಾಗಿದ್ದರು (ಮತ್ತು ಜುಲೈನಲ್ಲಿ ನಿಧನರಾದರು). ಅವರ ವ್ಯಾಪಾರ ಈಗ ಹೆಚ್ಚಾಗಿ ಸ್ಥಗಿತಗೊಳ್ಳುತ್ತದೆ. “ಈ [ಸಾಂಕ್ರಾಮಿಕ ಪಿಡುಗು] ಅವಧಿಯಲ್ಲಿ ನನ್ನ ಆದಾಯವು ನಿಯಮಿತವಾಗಿರುವುದಿಲ್ಲ” ಎಂದು ಅವರು ಹೇಳುತ್ತಾರೆ. “ನಾನು ಮಾರಾಟ ಮಾಡಲು ಹತ್ತಿರದ ಹಳ್ಳಿಗಳಿಗೆ ನಡೆದು ಹೋಗುತ್ತೇನೆ, ಕೆಲವೊಮ್ಮೆ ನಾನು ಸುಮಾರು 20-25 ಕಿಲೋಮೀಟರ್‌ಗಳಷ್ಟು ದೂರ 20-25 ಕಿಲೋ ತೂಕದ ಸಿಹಿತಿಂಡಿಗಳನ್ನು ಹೊತ್ತು ನಡೆಯುತ್ತೇನೆ ಮತ್ತು ಈಗ 6-7 ದಿನಗಳ ಬದಲು ವಾರದಲ್ಲಿ 2-3 ದಿನ ಮಾತ್ರ ವ್ಯಾಪಾರ ಮಾಡುತ್ತಿದ್ದೇನೆ. ನನಗೆ ದಣಿವಾಗಿದೆ. ಈ ಸಮಯದಲ್ಲಿ ಜೀವನವು ಕಷ್ಟಕರವಾಗಿದೆ. ಆದರೆ ಈಗ ನನ್ನ ಬಾಲ್ಯದಷ್ಟು ಕಷ್ಟವಿಲ್ಲ. ಆ ದಿನಗಳ ನೆನಪು ಈಗಲೂ ಕಣ್ಣೀರು ತರುತ್ತದೆ.”

ವರದಿಗಾರರ ಟಿಪ್ಪಣಿ : ನೊಸುಮುದ್ದೀನ್ ಶೇಖ್, ತನ್ನ ಕುಟುಂಬದೊಂದಿಗೆ, ಮಹೇಂದರಗಂಜ್‌ನಲ್ಲಿರುವ ನನ್ನ ಪೋಷಕರ ಹಳೆಯ ಮನೆಯಲ್ಲಿ 2015ರಿಂದ ಬಾಡಿಗೆದಾರನಾಗಿ ನೆಲೆಸಿದ್ದಾರೆ. ಸದಾ ಮಂದಸ್ಮಿತರಾಗಿರುವ ಅವರು ನನ್ನ ಹೆತ್ತವರಿಗೆ ಸಹಾಯ ಮಾಡುತ್ತಾರೆ ಮತ್ತು ಕೆಲವೊಮ್ಮೆ ನಮ್ಮ ಹಿತ್ತಲಿನ ಕೈತೋಟವನ್ನೂ ನೋಡಿಕೊಳ್ಳುತ್ತಾರೆ.

ಅನುವಾದ: ಶಂಕರ ಎನ್. ಕೆಂಚನೂರು

Anjuman Ara Begum

Anjuman Ara Begum is a human rights researcher and freelance journalist based in Guwahati, Assam.

Other stories by Anjuman Ara Begum
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru