2020ರ ಮಾರ್ಚ್‌ 25ರಂದು ಹೇರಲಾದ ಮೊದಲ ಲಾಕ್‌ಡೌನ್‌ ಲಕ್ಷಾಂತರ ಜನರ ಬದುಕಿನಲ್ಲಿ ಸಂಕಷ್ಟಗಳನ್ನು ತಂದೊಡ್ಡಿತು.

“ನಾವು ಇದ್ದ ಹಣವನ್ನೆಲ್ಲ ಕಳೆದುಕೊಂಡು ಖಾಲಿ ಕೈಯಾದೆವು” ಎನ್ನುತ್ತಾರೆ ಜಮ್ಮುವಿನ ಕಟ್ಟಡ ಕಾರ್ಮಿಕರಾದ ಮೋಹನ್ ಲಾಲ್ ಮತ್ತು ಅವರ ಪತ್ನಿ ನರ್ಮದಾಬಾಯಿ. ಲಾಕ್‌ಡೌನ್‌ ಆರಂಭದಲ್ಲಿ ಅವರ ಬಳಿ ಎರಡು ಸಾವಿರ ರೂಪಾಯಿಗಳಷ್ಟೇ ಉಳಿದಿತ್ತು. ಅವರು ಪಡಿತರ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ತಮ್ಮ ಗುತ್ತಿಗೆದಾರರ ಬಳಿ ಸಾಲ ಮಾಡಬೇಕಾಯಿತು.

ಒಟ್ಟಾರೆಯಾಗಿ, ಭಾರತದಲ್ಲಿ ನಿರುದ್ಯೋಗ ದರವು 2020ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇಕಡಾ 23 ಕ್ಕೆ ಏರಿದೆ - ಇದು 2020ರ ಫೆಬ್ರವರಿಯಲ್ಲಿನ ದರಕ್ಕಿಂತ ಮೂರು ಪಟ್ಟು ಹೆಚ್ಚು (ಶೇಕಡಾ 7.3) ಎಂದು ಗ್ರಾಮೀಣ ಮತ್ತು ಕೃಷಿ ಭಾರತದ ಸ್ಥಿತಿ ವರದಿ 2020 ತಿಳಿಸಿದೆ. ಸಾಂಕ್ರಾಮಿಕ ಪಿಡುಗಿಗೆ ಮೊದಲು (2018-19), ಇದು ಶೇಕಡಾ 8.8 ರಷ್ಟಿತ್ತು.

PHOTO • Design courtesy: Siddhita Sonavane

ಲಾಕ್ಡೌನ್ನಿಂದಾಗಿ ಲಕ್ಷಾಂತರ ಕಾರ್ಮಿಕರು ರಾತ್ರೋರಾತ್ರಿ ಕೆಲಸ ಕಳೆದುಕೊಂಡರು; ವಲಸೆ ಕಾರ್ಮಿಕರು ಮನೆಗೆ ಮರಳುವಂತಾಯಿತು

"ಲಾಕ್ಡೌನ್ ಆದ ಒಂದು ತಿಂಗಳ ನಂತರ ನಾವು ಮನೆಗೆ ಮರಳಿದೆವು" ಎಂದು ಮಹಾರಾಷ್ಟ್ರದ ಬೀಡ್‌ನ ಅರ್ಚನಾ ಮಾಂಡ್ವೆ ನೆನಪಿಸಿಕೊಳ್ಳುತ್ತಾರೆ. ಕ್ಷೀಣಿಸುತ್ತಿರುವ ಉಳಿತಾಯ ಮತ್ತು ಆದಾಯ ಕೊರತೆಯ ಕಾರಣ , ಐದು ಸದಸ್ಯರ ಕುಟುಂಬಕ್ಕೆ ತಮ್ಮ ಗ್ರಾಮಕ್ಕೆ ಮರಳುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಪ್ರಯಾಣವನ್ನು ನಿಷೇಧಿಸಿದ್ದರಿಂದ, ಅವರು ರಾತ್ರಿಯಲ್ಲಿ ಮಾತ್ರ ಚಲಿಸಲು ಸಾಧ್ಯವಾಯಿತು – ಔರಂಗಾಬಾದ್‌ನಿಂದ ಒಂದೇ ಮೋಟಾರ್‌ ಸೈಕಲ್ಲಿನಲ್ಲಿ 200 ಕಿಲೋಮೀಟರ್ ಪ್ರಯಾಣಿಸಿದರು.

ಪರಿ ಭಾರತದಲ್ಲಿ ಕಾರ್ಮಿಕರ ಮೇಲೆ ಕೊವಿಡ್‌ - 19 ಬೀರಿದ ಪರಿಣಾಮಗಳ ಕುರಿತು 200ಕ್ಕೂ ಹೆಚ್ಚು ವರದಿಗಳನ್ನು ಮಾಡಿದೆ. ಪರಿ ಲೈಬ್ರರಿ ತನ್ನ ಕೊವಿಡ್‌ - 19 ಮತ್ತು ಕಾರ್ಮಿಕರು ವಿಭಾಗದಲ್ಲಿ ಈ ವರದಿಗಳಲ್ಲಿನ ಅಂಕಿ – ಅಂಶಗಳಿಗೆ ಪೂರಕವಾಗಿರುವ ಆಕರ ವರದಿಗಳನ್ನು ಹೊಂದಿದೆ. ಈ ವರದಿಗಳಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರಗಳಿವೆ. ಈ ವರದಿಗಳಲ್ಲಿ ಸರ್ಕಾರ, ಸ್ವತಂತ್ರ ಸಂಸ್ಥೆಗಳು ಮತ್ತು ಯುಎನ್ ಏಜೆನ್ಸಿಗಳ ಪ್ರಕಟಣೆಗಳು ಸೇರಿವೆ.

PHOTO • Design courtesy: Siddhita Sonavane
PHOTO • Design courtesy: Siddhita Sonavane

ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (ಐಎಲ್ಒ) ಜಾಗತಿಕ ವೇತನ ವರದಿ 2020-21 , ವಿಶ್ವದಾದ್ಯಂತ ಸಾಟಿಯಿಲ್ಲದ ಮಟ್ಟದ ನಿರುದ್ಯೋಗವನ್ನು ದಾಖಲಿಸಿದೆ. ಕೋವಿಡ್ -19 ಪ್ರೇರಿತ ಕೆಲಸದ ಸಮಯದ ಕುಸಿತವು 345 ಮಿಲಿಯನ್ ಪೂರ್ಣ ಸಮಯದ ಉದ್ಯೋಗಗಳಿಗೆ ಸಮನಾಗಿದೆ ಎಂದು ಅದು ಹೇಳುತ್ತದೆ. ಇದರ ಪರಿಣಾಮವಾಗಿ ವಿಶ್ವಾದ್ಯಂತ ಕಾರ್ಮಿಕರ ಆದಾಯದಲ್ಲಿ ಶೇಕಡಾ 10.7 ರಷ್ಟು ಕುಸಿತ ಕಂಡುಬಂದಿದೆ

ಏತನ್ಮಧ್ಯೆ, ಮಾರ್ಚ್ ಮತ್ತು ಡಿಸೆಂಬರ್ ನಡುವೆ ಕೋಟ್ಯಧಿಪತಿಗಳ ಸಂಪತ್ತು ಒಟ್ಟು 3.9 ಟ್ರಿಲಿಯನ್ ಡಾಲರುಗಳಷ್ಟು ಹೆಚ್ಚಾಗಿದೆ ಎಂದು ಆಕ್ಸ್‌ಫಾಮ್‌ ಸಂಸ್ಥೆಯ 2021ರ ವರದಿ ದಿ ಇನ್‌ ಈಕ್ವಾಲಿಟಿ ವೈರಸ್ ಹೇಳುತ್ತದೆ. ಐಎಲ್ಒ ವರದಿಯು 2020ರಲ್ಲಿ ಅಸಂಘಟಿತ ಕಾರ್ಮಿಕರ ಆದಾಯವು ಐದನೇ ಒಂದು ಭಾಗದಷ್ಟು (22.6 ಪ್ರತಿಶತ) ಕುಸಿದಿದೆ ಎಂದು ತೋರಿಸುತ್ತದೆ.

ದೆಹಲಿಯಲ್ಲಿ ಕುಂಬಾರಿಕೆ ಮಾಡುವ ಶೀಲಾ ದೇವಿ ಅವರ ಕುಟುಂಬದ ಸಂಪಾದನೆಯು ಸಾಂಕ್ರಾಮಿಕ ಪಿಡುಗಿನ ಆರಂಭಿಕ ತಿಂಗಳುಗಳಲ್ಲಿ (ಹಬ್ಬಗಳ ಸಮಯದಲ್ಲಿ) 10,000 ರೂ.ಗಳಿಂದ 20,000 ರೂ.ಗಳ ತನಕ ಇರುತ್ತಿದ್ದ ಆದಾಯ ಕೇವಲ 3,0000ರಿಂದ 4,000 ರೂ.ಗೆ ಕುಸಿದಿದೆ. ಗುಜರಾತಿನ ಕಛ್‌ ಜಿಲ್ಲೆಯಲ್ಲಿ ಕುಂಬಾರ ಕೆಲಸ ಮಾಡುವ ಕುಂಬಾರ ಇಸ್ಮಾಯಿಲ್ ಹುಸೇನ್ 2020ರ ಏಪ್ರಿಲ್-ಜೂನ್‌ ತಿಂಗಳಿನಲ್ಲ ಯಾವುದೇ ವ್ಯಾಪಾರವಿಲ್ಲದೆ ಖಾಲಿ ಕುಳಿತಿದ್ದರು.

"ಸದ್ಯಕ್ಕೆ, ನನ್ನ ಇಬ್ಬರು ಮಕ್ಕಳು ಮತ್ತು ನಾನು ಪಡಿತರ ಅಕ್ಕಿ ಮತ್ತು ಬೇಳೆಕಾಳುಗಳಿಂದ ಬದುಕುತ್ತಿದ್ದೇವೆ. ಆದರೆ ನಾವು ಎಷ್ಟು ದಿನ ಹೀಗೆ ಮುಂದುವರಿಯಬಹುದು ಎಂದು ನನಗೆ ತಿಳಿದಿಲ್ಲ" ಎಂದು ತಮಿಳುನಾಡಿನ ಮಧುರೈನ ಕರಗಾಟ್ಟಂ ಪ್ರದರ್ಶಕಿ ಎಂ ನಲ್ಲುತಾಯ್ ಹೇಳಿದರು, ಸಾಂಕ್ರಾಮಿಕ ಪಿಡುಗು ಅವರ ಕೆಲಸ ಮತ್ತು ಆದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

PHOTO • Design courtesy: Siddhita Sonavane
PHOTO • Design courtesy: Siddhita Sonavane

ದೆಹಲಿಯ ಮಹಿಳಾ ಮನೆಕೆಲಸಗಾರರ ಮೇಲೆ ಕೋವಿಡ್ 19 ರಾಷ್ಟ್ರೀಯ ಲಾಕ್ಡೌನ್ ಪರಿಣಾಮ ದ ಕುರಿತು 2020ರ ಮೇ ತಿಂಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡಾ 83ರಷ್ಟು ಮನೆಕೆಲಸಗಾರರು ಲಾಕ್ಡೌನ್ ಸಮಯದಲ್ಲಿ ಆರ್ಥಿಕ ತೊಂದರೆಗಳನ್ನು ಅನುಭವಿಸಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 14 ಪ್ರತಿಶತದಷ್ಟು ಜನರಿಗೆ ತಮ್ಮ ಮನೆಯ ಖರ್ಚುಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ ಮತ್ತು ಸಂಬಂಧಿಕರು ಮತ್ತು ನೆರೆಹೊರೆಯವರಿಂದ ಹಣವನ್ನುಸಾಲ ಪಡೆಯಬೇಕಾಯಿತು.

ಪುಣೆಯಲ್ಲಿ ಮನೆಕೆಲಸದವರು ಸಹ ಅದೇ ದೋಣಿಯ ಪಯಣಿಗರಾಗಿದ್ದರು. "ನಮಗೆ ಕೈಗೆ ಬಂದ ಹಣ ಬಾಯಿಗೆ ತುಂಬಿಸಲು ಖಾಲಿಯಾಗಿ ಬಿಡುತ್ತದೆ. ನಾವು ಮನೆಗೆಲಸ ಮಾಡುವ ಮೂಲಕ ಹೊಟ್ಟೆ ಹೊರೆದುಕೊಳ್ಳುವವರ. ಕೆಲಸವಿಲ್ಲದೆ ಹೋದರೆ ಹಣ ಎಲ್ಲಿಂದ ಬರಬೇಕು?" ಎಂದು ಅಬೋಲಿ ಕಾಂಬ್ಳೆ ಹೇಳಿದರು.

ಕೋವಿಡ್ -19ರ ಮೊದಲು ಭಾರತದ ಉದ್ಯೋಗಿಗಳಲ್ಲಿ ಶೇಕಡಾ 20ರಷ್ಟು ಮಹಿಳೆಯರು ಇದ್ದರು ಮತ್ತು ಸಾಂಕ್ರಾಮಿಕ-ಪ್ರೇರಿತ ಉದ್ಯೋಗ ನಷ್ಟ ಹೊಂದಿದವರಲ್ಲಿ ಶೇಕಡಾ 23ರಷ್ಟಿದ್ದರು ಎಂದು ಆಕ್ಸ್‌ಫಾಮ್‌ ವರದಿ ಪವರ್‌, ಪ್ರಾಫಿಟ್ಸ್‌ ಎಂಡ್‌ ದಿ ಪ್ಯಾಂಡೆಮಿಕ್‌ ಹೇಳುತ್ತದೆ. ಕೊರೋನಾ ಸಮಯದಲ್ಲಿ ಅವರು 'ಅಗತ್ಯ' ಕಾರ್ಯಪಡೆಯ ಅಮೂಲ್ಯ ಭಾಗವಾಗಿದ್ದರು.

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ ಅಥವಾ ಆಶಾ ಕಾರ್ಯಕರ್ತೆ ಶಹಬಾಯಿ ಘರತ್ ಅವರು ಕೋವಿಡ್ -19 ಪ್ರಕರಣಗಳನ್ನು ಪತ್ತೆಹಚ್ಚುವುದರ ಜೊತೆಗೆ ತಮ್ಮ ಸಾಮಾನ್ಯ ಕರ್ತವ್ಯಗಳನ್ನು ನಿರ್ವಹಿಸಲು ಮನೆ ಮನೆಗೆ ಹೋದರು. ಅವರ ಕುಟುಂಬ ಸದಸ್ಯರು ಕೊವಿಡ್‌ ಪಾಸಿಟಿವ್‌ ಆದಾಗ, ಅವರ ಚಿಕಿತ್ಸೆಯ ವೆಚ್ಚವನ್ನು ಪಾವತಿಸಲು ಅವರು ತಮ್ಮ ಕೃಷಿ ಭೂಮಿ ಮತ್ತು ಆಭರಣಗಳನ್ನು ಮಾರಾಟ ಮಾಡಬೇಕಾಯಿತು. ಅವರ ನಿರಂತರ ಕಠಿಣ ಪರಿಶ್ರಮಕ್ಕಾಗಿ ಅವರು ಪಡೆದ ಏಕೈಕ ನೆರವು (ಮಾರ್ಚ್ 2020 ಮತ್ತು ಆಗಸ್ಟ್ 2021ರ ನಡುವೆ) 22 ಬಳಸಿ ಬಿಸಾಡಬಹುದಾದ ಮಾಸ್ಕುಗಳು ಮತ್ತು ಐದು ಎನ್ 95 ಮಾಸ್ಕುಗಳು . "ಅಪಾಯವನ್ನು ಪರಿಗಣಿಸಿದಾಗ ನಮ್ಮ ಕೆಲಸಕ್ಕೆ ಸಿಗುವ ಸಂಬಳ ನ್ಯಾಯೋಚಿತವಾಗಿದೆ ಎಂದು ನೀವು ಭಾವಿಸುತ್ತೀರಾ?"

PHOTO • Design courtesy: Siddhita Sonavane

ಸಾಂಕ್ರಾಮಿಕ ಪಿಡುಗು ಪ್ರಾರಂಭವಾದ ಒಂದು ವರ್ಷದ ನಂತರ ಕಾರ್ಮಿಕರ ಸ್ಥಿತಿ ದುರ್ಬಲವಾಗಿಯೇ ಉಳಿದಿದೆ. ಕೋವಿಡ್ -19 ಸಾಂಕ್ರಾಮಿಕ ಪಿಡುಗಿನ ನಂತರ ಶೇಕಡಾ 73ರಷ್ಟು ಕಾರ್ಮಿಕರು ಉದ್ಯೋಗವನ್ನು ಪಡೆಯಲು ಕಷ್ಟಪಡುತ್ತಿದ್ದಾರೆ ಎಂದು ಕೋವಿಡ್ -19ರ ಒಂದು ವರ್ಷದ ವರದಿ ಮಾಡಿದೆ. ಮತ್ತು 36 ಪ್ರತಿಶತದಷ್ಟು ಜನರು ಕಡಿಮೆ ವೇತನವನ್ನು ವರದಿ ಮಾಡಿದ್ದಾರೆ

ಸಂಘಟಿತ ಅಥವಾ ಅಸಂಘಟಿತ ಅಥವಾ ಇತರ ಯಾವುದೇ ಕ್ಷೇತ್ರಗಳಲ್ಲಿನ ಎಲ್ಲಾ ಉದ್ಯೋಗಿಗಳು ಮತ್ತು ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ವಿಸ್ತರಿಸುವ ಗುರಿಯೊಂದಿಗೆ ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ಕಾನೂನುಗಳನ್ನು ತಿದ್ದುಪಡಿ ಮತ್ತು ಕ್ರೋಢೀಕರಿಸುವ ಉದ್ದೇಶದಿಂದ ಸಂಸತ್ತು ಸಾಮಾಜಿಕ ಭದ್ರತೆ ಸಂಹಿತೆ, 2020 ಕಾಯಿದೆಯನ್ನು ಅಂಗೀಕರಿಸಿತು. ಆದಾಗ್ಯೂ, ಭಾರತದಾದ್ಯಂತದ ಕಾರ್ಮಿಕರು ಮೂಲಭೂತ ಸೌಕರ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

ಪರಿ ಲೈಬ್ರರಿ ವಾಸ್ತವ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಸರ್ಕಾರದ ನೀತಿಗಳ ಅನುಷ್ಠಾನದಲ್ಲಿನ ಅಂತರಗಳನ್ನು ಪರಿಶೀಲಿಸಲು ಇರುವ ಸ್ಥಳವಾಗಿದೆ.

ಕವರ್ ಡಿಸೈನ್: ಸ್ವದೇಶ ಶರ್ಮಾ

ಅನುವಾದ: ಶಂಕರ. ಎನ್. ಕೆಂಚನೂರು

Swadesha Sharma

Swadesha Sharma is a researcher and Content Editor at the People's Archive of Rural India. She also works with volunteers to curate resources for the PARI Library.

Other stories by Swadesha Sharma
Editor : PARI Library Team

The PARI Library team of Dipanjali Singh, Swadesha Sharma and Siddhita Sonavane curate documents relevant to PARI's mandate of creating a people's resource archive of everyday lives.

Other stories by PARI Library Team
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru