ಜಾನು ವಾಘೆ ಮತ್ತು ಇತರ 15 ಕತ್ಕರಿ ಆದಿವಾಸಿಗಳ ಗುಡಿಸಲುಗಳು - ಮಹಾರಾಷ್ಟ್ರದಲ್ಲಿ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು ಎಂದು ಪಟ್ಟಿ ಮಾಡಲ್ಪಟ್ಟಿವೆ - ಸದ್ಯದಲ್ಲೇ ಸಮೃದ್ಧಿಯಿಂದ ತುಂಬಿಹೋಗಲಿವೆ.  ಆದರೆ ಆ ಸಮೃದ್ಧಿ ಅವರದಾಗಿರುವುದಿಲ್ಲ. ಥಾಣೆ ಜಿಲ್ಲೆಯಲ್ಲಿರುವ ಅವರ ಸಣ್ಣ ಕುಗ್ರಾಮವನ್ನು ಶೀಘ್ರದಲ್ಲೇ ರಾಜ್ಯ ಸರ್ಕಾರದ ಸಮೃದ್ಧಿ ಮಹಾಮಾರ್ಗ್ ನೆಲಸಮಗೊಳಿಸಬಹುದು.

"ಇದು ನನ್ನ ಮನೆ. ನಾನು ನನ್ನ ಇಡೀ ಬದುಕನ್ನು ಇಲ್ಲಿಯೇ ಕಳೆದಿದ್ದೇನೆ. ನನ್ನ ತಂದೆ ಮತ್ತು ಅಜ್ಜ ಇಲ್ಲಿ ವಾಸಿಸುತ್ತಿದ್ದರು. ಈಗ ಅವರು (ಮಹಾರಾಷ್ಟ್ರ ಸರ್ಕಾರ) ಈ ಸ್ಥಳವನ್ನು ತೊರೆಯುವಂತೆ ಕೇಳುತ್ತಿದ್ದಾರೆ. ನಮಗೆ ಯಾವುದೇ [ಲಿಖಿತ] ನೋಟಿಸ್ ಸಹ ನೀಡಿಲ್ಲ," ಎಂದು 42 ವರ್ಷದ ಜಾನು ಹೇಳುತ್ತಾರೆ. "ಇಲ್ಲಿಂದ ನಾವು ಎಲ್ಲಿಗೆ ಹೋಗಬೇಕು? ನಾವು ನಮ್ಮ ಮನೆಯನ್ನು ಎಲ್ಲಿ ಕಟ್ಟಿಕೊಳ್ಳುವುದು?"

ಅವರ ಗುಡಿಸಲು ಭಿವಂಡಿ ತಾಲ್ಲೂಕಿನ ಚಿರಾಡ್ಪಾಡಾ ಗ್ರಾಮದಿಂದ ಅರ್ಧ ಕಿಲೋಮೀಟರ್ ದೂರದಲ್ಲಿದೆ. ಇದು ನಡುವೆ ಒಂದು ಬಿದಿರಿನ ಗೋಡೆಯಿರುವ ಒಂದು ಸಣ್ಣ ಕೋಣೆಯಾಗಿದೆ, ಮತ್ತು ಇನ್ನೊಂದು ಬದಿಯಲ್ಲಿ ಮಣ್ಣಿನ ಒಲೆಯೊಂದಿಗೆ ಅಡುಗೆ ಪ್ರದೇಶವಿದೆ. ನೆಲವನ್ನು ಸಗಣಿಯಿಂದ ಸಾರಿಸಲಾಗಿದೆ, ಹುಲ್ಲಿನ ಗೋಡೆಗಳು ಮರದ ಕಂಬಗಳ ಆಧಾರದಲ್ಲಿ ನಿಂತಿವೆ.

ಜಾನು ಪ್ರತಿ ಎರಡು ದಿನಗಳಿಗೊಮ್ಮೆ ಭಟ್ಸಾ ನದಿಯಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ ಮೀನು ಹಿಡಿಯುತ್ತಾರೆ. ಅವರ ಪತ್ನಿ ವಾಸಂತಿ 5-6 ಕೆಜಿ ತೂಕದ ಮೀನಿನ ಬುಟ್ಟಿಯನ್ನು ತಲೆಯ ಮೇಲೆ ಹೊತ್ತುಕೊಂಡು ಪಾಡ್ವಾ ಮಾರುಕಟ್ಟೆಗೆ ಆರು ಕಿಲೋಮೀಟರ್ ದೂರದ ಕಿರಿದಾದ ಕಚ್ಚಾ ರಸ್ತೆಯಲ್ಲಿ ಸಾಗುತ್ತಾರೆ. ಅವರ ನಾಲ್ಕು ಜನರ ಕುಟುಂಬ ಇದರಿಂದ ತಿಂಗಳ ಹದಿನೈದು ದಿನಗಳ ಕಾಲ 400 ರೂ.ಗಳನ್ನು ಸಂಪಾದಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಜಾನು ಮತ್ತು ವಾಸಂತಿ ಅಲ್ಲಿನ ರೈತರ ಹೊಲಗಳಲ್ಲಿ ಸೌತೆಕಾಯಿ, ಬದನೆ, ಮೆಣಸಿನಕಾಯಿ ಮುಂತಾದ ತರಕಾರಿಗಳನ್ನು ಕೀಳುವ ಮೂಲಕ ದಿನಗೂಲಿಯಾಗಿ ದಿನವೊಂದಕ್ಕೆ 250 ರೂ.ಗಳನ್ನು ಸಂಪಾದಿಸುತ್ತಾರೆ.

Family standing outside their hut
PHOTO • Jyoti Shinoli
Hut
PHOTO • Jyoti Shinoli

ಎಡ: ಜಾನು ವಾಘೆ, ವಾಸಂತಿ ಮತ್ತು ಅವರ ಮಕ್ಕಳು. ಬಲ: ಚಿರಡಾಪಾಡದ ನಾಲ್ಕು ಗುಡಿಸಲುಗಳಲ್ಲಿ ಒಂದು. 'ಇಲ್ಲಿಂದ ನಾವು ಎಲ್ಲಿಗೆ ಹೋಗಬೇಕು?ʼ ಎನ್ನುವುದು ಜಾನು ಅವರ ಪ್ರಶ್ನೆ

ಈ ಸಣ್ಣ ಊರಿನಲ್ಲಿರುವ ನಾಲ್ಕು ಗುಡಿಸಲುಗಳನ್ನು ಲೋಕೋಪಯೋಗಿ ಇಲಾಖೆಯು ಸರ್ವೇ ನಂಬರ್ 210/85ರಲ್ಲಿದೆ ಎಂದು ಪಟ್ಟಿ ಮಾಡಿದೆ. ಆದರೆ ಈ ಸಾಧಾರಣ ಮನೆಗಳು ನಿಂತಿರುವ ಭೂಮಿಯನ್ನು ಶೀಘ್ರದಲ್ಲೇ 60 ಮೀಟರ್ ಅಗಲದ ವಯಾಡಕ್ಟ್ ನಿರ್ಮಿಸಲು ಸ್ವಾಧೀನಪಡಿಸಿಕೊಳ್ಳಲಾಗುವುದು. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಎಂಎಸ್ಆರ್ಡಿಸಿ) ಜೂನ್ 2018 ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ವರದಿಯಿಂದ ಇದು ಸ್ಪಷ್ಟವಾಗಿದೆ.

400 ಮೀಟರ್ ಉದ್ದದ ವಯಾಡಕ್ಟ್ ಚಿರಾಡಪಾಡಾವನ್ನು ದಾಟಿ ಭಟ್ಸಾ ನದಿಯ ಪೂರ್ವಕ್ಕೆ ಮುಂದುವರಿಯುತ್ತದೆ. ಇದು ಜಾನು ಮತ್ತು ಅವರ ನೆರೆಹೊರೆಯವರ ಮನೆಗಳನ್ನು ಮಾತ್ರವಲ್ಲದೆ, ಅವರ ಸಾಂಪ್ರದಾಯಿಕ ಜೀವನೋಪಾಯವಾದ ಮೀನುಗಾರಿಕೆಯನ್ನು ಸಹ ಕಸಿದುಕೊಳ್ಳುತ್ತದೆ.

2018ರಲ್ಲಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಸಮೀಕ್ಷೆಗಾಗಿ ಇಲ್ಲಿಗೆ ಬಂದಾಗ, ನಾಲ್ಕು ಕುಟುಂಬಗಳು 700 ಕಿಲೋಮೀಟರ್ ಉದ್ದದ ಮಹಾಮಾರ್ಗಕ್ಕೆ ದಾರಿ ಮಾಡಿಕೊಡಲು ಸ್ಥಳಾಂತರಗೊಳ್ಳಬೇಕಾಗುತ್ತದೆ ಎಂದು ಮೌಖಿಕವಾಗಿ ಹೇಳಿದರು. ಕುಟುಂಬಗಳಿಗೆ ಇದುವರೆಗೆ ಯಾವುದೇ ಲಿಖಿತ ನೋಟಿಸ್ ಬಂದಿಲ್ಲ. 'ಸಮೃದ್ಧಿ' ಹೆದ್ದಾರಿಯು 26 ತಾಲ್ಲೂಕುಗಳ 392 ಹಳ್ಳಿಗಳನ್ನು ಸಂಪರ್ಕಿಸುತ್ತದೆ ಎಂದು ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್ ವೆಬ್ಸೈಟ್ ಹೇಳುತ್ತದೆ ಮತ್ತು ಇದಕ್ಕೆ ಸುಮಾರು 25,000 ಎಕರೆ ಭೂಮಿಯ ಅಗತ್ಯವಿದೆ.

ಇದು ಥಾಣೆ ಜಿಲ್ಲೆಯ 41 ಹಳ್ಳಿಗಳಲ್ಲಿ 778 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಭೂಮಿಯನ್ನು ಒಳಗೊಂಡಿದೆ, ಹಾಗೂ 3,706 ರೈತರ ಮೇಲೆ ಪರಿಣಾಮ ಬೀರುತ್ತದೆ ಎಂದು ಸಮೃದ್ಧಿ ಯೋಜನೆಯ ಅಕ್ಟೋಬರ್ 2018 ರ 'ಜಂಟಿ ಮಾಪನ ಸಮೀಕ್ಷೆ / ಭೂ ಸಂಗ್ರಹಣೆ' ದಾಖಲೆಯು ಹೇಳುತ್ತದೆ.

ಭೂ ಸ್ವಾಧೀನ ಪ್ರಕ್ರಿಯೆಗೆ ಸಹಾಯ ಮಾಡಲು, ರಾಜ್ಯವು ಮಹಾರಾಷ್ಟ್ರ ಹೆದ್ದಾರಿ ಕಾಯ್ದೆ, 1955ಕ್ಕೆ ತಿದ್ದುಪಡಿಗಳನ್ನು ಮಾಡಿದೆ ಮತ್ತು ಭೂ ಸ್ವಾಧೀನ, ಪುನರ್ವಸತಿ ಮತ್ತು ಮರುವಸತಿಯಲ್ಲಿ ನ್ಯಾಯೋಚಿತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಕಾಯ್ದೆ, 2013ಕ್ಕೆ ರಾಜ್ಯ-ನಿರ್ದಿಷ್ಟ ತಿದ್ದುಪಡಿಗಳನ್ನು ಸೇರಿಸಿದೆ. ಅದರಲ್ಲಿನ ಅತ್ಯಂತ ಪ್ರಮುಖ ಬದಲಾವಣೆಗಳಲ್ಲಿ ಒಂದು ಸಾಮಾಜಿಕ ಪರಿಣಾಮದ ಮೌಲ್ಯಮಾಪನವನ್ನು ತೆಗೆದುಹಾಕುವುದು.

ವೀಡಿಯೊ ನೋಡಿ: 'ನಾವು ನಮ್ಮ ಮನೆಗಳನ್ನು ಕಳೆದುಕೊಳ್ಳಲಿದ್ದೇವೆ. ನಾವು ಎಲ್ಲಿಗೆ ಹೋಗಬೇಕು?'

ಇದರ ಪರಿಣಾಮವಾಗಿ, ಭೂರಹಿತ ಕಾರ್ಮಿಕರ ಪುನರ್ವಸತಿಯನ್ನು ನಿರ್ಲಕ್ಷಿಸಲಾಗಿದೆ, ಮತ್ತು ಜಾನು ಮತ್ತು ಅವರ ನೆರೆಹೊರೆಯವರಿಗೆ ಯಾವುದೇ ಪರಿಹಾರವನ್ನು ಕೊಡುವ ಕುರಿತು ಇನ್ನೂ ನಿರ್ಧರಿಸಲಾಗುತ್ತಿದೆ. ಎಂಎಸ್ಆರ್ಡಿಸಿಯ ಡೆಪ್ಯುಟಿ ಕಲೆಕ್ಟರ್ ರೇವತಿ ಗಾಯ್ಕರ್ ಅವರು ದೂರವಾಣಿ ಸಂದರ್ಶನವೊಂದರಲ್ಲಿ ನನಗೆ ತಿಳಿಸಿದಂತೆ: "ಮಹಾರಾಷ್ಟ್ರ ಹೆದ್ದಾರಿ ಕಾಯ್ದೆಯ ಪ್ರಕಾರ ನಾವು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದೇವೆ. ನಾವು ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಸಾಧ್ಯವಿಲ್ಲ, ಆದರೆ ಅವರ ನಷ್ಟಕ್ಕೆ ಪರಿಹಾರ ನೀಡಲಾಗುವುದು," ಎಂದು ಅವರು ಹೇಳಿದರು.

ಆದರೆ ವಾಸಂತಿಯವರಿಗೆ ಈ ಕುರಿತು ಸಂದೇಹವಿದೆ. "ಅವರು [ಸರ್ಕಾರ] ನಮ್ಮ ಮನೆಯನ್ನು ಕಸಿದುಕೊಳ್ಳಲು ನಮಗೆ ಹಣವನ್ನು ನೀಡಿದರೂ, ನಾವು ಹೊಸ ಊರಿನಲ್ಲಿ ಹೇಗೆ ನೆಲೆಸುವುದು,?" ಎಂದು ಅವರು ಕೇಳುತ್ತಾರೆ. "ನಾವು ಅಲ್ಲಿನ ಜನರನ್ನು ಪರಿಚಯ ಮಾಡಿಕೊಳ್ಳಬೇಕು, ಆಗ ಮಾತ್ರ ಅವರು ನಮಗೆ ಅವರ ಹೊಲಗಳಲ್ಲಿ ಕೆಲಸ ನೀಡುತ್ತಾರೆ. ಇದು ಸುಲಭವೇ? ನಾವು ಮೀನುಗಾರಿಕೆಯನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ನಾವು ಬದುಕುವುದು ಹೇಗೆ?"

ವಾಸಂತಿಯವರಿಗೆ ಪ್ರತಿ ತಿಂಗಳು, ಪ್ರತಿ ಕಿಲೋಗೆ 3 ರೂ.ನಂತೆ 20 ಕೆಜಿ ಅಕ್ಕಿ ಮತ್ತು 2 ರೂ.ಗೆ 5 ಕಿಲೋ ಗೋಧಿಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಪಡಿತರ ಚೀಟಿಯಡಿಯಲ್ಲಿ ನೀಡಲಾಗುತ್ತದೆ. "ನಮ್ಮಿಂದ ಬೇಳೆ ಖರೀದಿಸಲು ಸಾಧ್ಯವಿಲ್ಲ, ನಾವು ಅನ್ನವನ್ನು ಮೀನು ಸಾರಿನೊಡನೆ ತಿನ್ನುತ್ತೇವೆ. ಕೆಲವೊಮ್ಮೆ, ನಾವು ಕೆಲಸವನ್ನು ಮುಗಿಸಿದ ನಂತರ ತೋಟದ ಮಾಲೀಕರು ನಮಗೆ ಒಂದಷ್ಟು ತರಕಾರಿಗಳನ್ನು ನೀಡುತ್ತಾರೆ," ಎಂದು ಅವರು ಹೇಳುತ್ತಾರೆ.  "ನಾವು ಇಲ್ಲಿಂದ ಹೋದರೆ, ಮೀನುಗಾರಿಕೆಯನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ," ಎಂದು ಜಾನು ಹೇಳುತ್ತಾರೆ. "ಈ ಮೀನುಗಾರಿಕೆಯ ಸಂಪ್ರದಾಯವನ್ನು ನಮ್ಮ ಪೂರ್ವಜರು ನಮಗೆ ಹಸ್ತಾಂತರಿಸಿದ್ದಾರೆ."

ಅವರ ನೆರೆಯ 65 ವರ್ಷದ ಕಾಶಿನಾಥ್ ಬಾಮ್ನೆ, 2018 ರಲ್ಲಿ ಥಾಣೆ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಚಿರಾಡ್ಪಾಡಾ ಮತ್ತು ಸುತ್ತಮುತ್ತಲಿನ ಭೂಮಿಯನ್ನು ಸಮೀಕ್ಷೆ ಮಾಡಿದ ದಿನವನ್ನು (ಅವರ ನೆನಪಿನಂತೆ ಅದು ಮಾರ್ಚ್ ಅಥವಾ ಏಪ್ರಿಲ್ ತಿಂಗಳಿರಬಹುದು) ನೆನಪಿಸಿಕೊಳ್ಳುತ್ತಾರೆ. "ನಾನು ಬಾಗಿಲಲ್ಲಿ ಕುಳಿತಿದ್ದೆ. 20-30 ಅಧಿಕಾರಿಗಳು ಕೈಯಲ್ಲಿ ಕಡತಗಳನ್ನು ಹಿಡಿದಿದ್ದರು. ಪೊಲೀಸರಿರುವುದನ್ನು [ಅವರಲ್ಲಿ ಕೆಲವರು] ನೋಡಿ ನಾವು ಭಯಭೀತರಾದೆವು. ನಾವು ಅವರನ್ನು ಏನನ್ನೂ ಕೇಳಲು ಸಾಧ್ಯವಾಗಲಿಲ್ಲ. ಅವರು ನಮ್ಮ ಮನೆಯನ್ನು ಅಳೆದರು ಮತ್ತು ನಾವು ಖಾಲಿ ಮಾಡಬೇಕಾಗುತ್ತದೆ ಎಂದು ಹೇಳಿದರು. ನಂತರ ಅವರು ಹೊರಟುಹೋದರು. ನಾವು ಇಲ್ಲಿಂದ ಎಲ್ಲಿಗೆ ಹೋಗಬೇಕು ಎಂಬುದರ ಬಗ್ಗೆ ಅವರು ನಮಗೆ ಏನನ್ನೂ ಹೇಳಲಿಲ್ಲ."

Old couple sitting on ground, looking at documents
PHOTO • Jyoti Shinoli
Old lady selling fishes
PHOTO • Jyoti Shinoli

ಕಾಶಿನಾಥ್ ಮತ್ತು ಧ್ರುಪದ ವಾಘೆ (ಎಡಗಡೆ) ತಮ್ಮ ಮನೆಯಲ್ಲಿ ಮತ್ತು ಧ್ರುಪದ ಪಡಗಾ ಪಟ್ಟಣದ ಮಾರುಕಟ್ಟೆಯಲ್ಲಿ ಮೀನು (ಬಲಕ್ಕೆ) ಮಾರಾಟ ಮಾಡುತ್ತಾರೆ

ಡಿಸೆಂಬರ್ 2018ರಲ್ಲಿ, ಕಾಶಿನಾಥ್ ಥಾಣೆ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು, ಶಹಾಪುರ ತಾಲ್ಲೂಕಿನ ದಲ್ಖಾನ್ ಗ್ರಾಮದ 15 ರೈತರು ಮತ್ತು ಥಾಣೆ ಜಿಲ್ಲೆಯ ಕಲ್ಯಾಣ್ ತಾಲ್ಲೂಕಿನ ಉಶಿದ್ ಮತ್ತು ಫಲೇಗಾಂವ್ ಗ್ರಾಮಗಳ 15 ರೈತರೊಂದಿಗೆ ಭಾಗವಹಿಸಿದ್ದರು. "15 ದಿನಗಳಲ್ಲಿ ಸಮಸ್ಯೆಯನ್ನು ಪರಿಹರಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು. ಆದರೆ ಏನೂ ಆಗಲಿಲ್ಲ," ಎಂದು ಕಾಶಿನಾಥ್ ಹೇಳುತ್ತಾರೆ. ಅವರು ಇನ್ನೂ ಲಿಖಿತ ಸೂಚನೆಗಾಗಿ ಕಾಯುತ್ತಿದ್ದಾರೆ ಮತ್ತು ಇದಾದ ನಂತರ ಅವರಿಗೆ ಪರಿಹಾರವಾಗಿ ಪಡೆಯುವ ಮೊತ್ತದ ಕುರಿತು ಸಣ್ಣ ಕಲ್ಪನೆ ಸಿಗಬಹುದು.

ಕಾಶಿನಾಥ್ ಮತ್ತು ಅವರ ಪತ್ನಿ ಧ್ರುಪದ ಕೂಡ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಅವರ ಮೂವರು ಮಕ್ಕಳಿಗೆ ಮದುವೆಯಾಗಿದೆ - ಇಬ್ಬರು ಹೆಣ್ಣುಮಕ್ಕಳು ಬೇರೆ ಊರುಗಳಲ್ಲಿ ವಾಸಿಸುತ್ತಿದ್ದಾರೆ, ಅವರ ಮಗ ತನ್ನ ಕುಟುಂಬದೊಂದಿಗೆ ಮುಖ್ಯ ಚಿರಾಡಪಾಡಾ ಗ್ರಾಮದಲ್ಲಿ ವಾಸಿಸುತ್ತಾರೆ. ಅವರ ಪಾಳುಬಿದ್ದ ಗುಡಿಸಲನ್ನು ನೋಡುತ್ತಾ, ಧ್ರುಪದ ಹೇಳುತ್ತಾರೆ, "ನಾವು ಅದನ್ನು ರಿಪೇರಿ ಮಾಡಲು ಸಾಕಾಗುವಷ್ಟು ಸಂಪಾದಿಸಲಿಲ್ಲ, ನಮ್ಮ ಹೊಟ್ಟೆಯನ್ನು ತುಂಬುವಷ್ಟು ಮಾತ್ರ ದುಡಿಯುತ್ತೇವೆ. ನದಿಯು ಹತ್ತಿರದಲ್ಲಿದೆ, ಆದ್ದರಿಂದ ಮಳೆಗಾಲದಲ್ಲಿ ಮನೆ ಪ್ರವಾಹಕ್ಕೆ ಒಳಗಾಗುತ್ತದೆ. ಆದರೆ ಅದು ಏನೇ ಇರಲಿ, ಕನಿಷ್ಠ ನಮ್ಮ ತಲೆಯ ಮೇಲೆ ಒಂದು ಸೂರಿದೆ." ಇಲ್ಲಿನ ಕುಟುಂಬಗಳು ವಾರ್ಷಿಕ 258 ರಿಂದ 350 ರೂ.ಗಳ ನಡುವಿನ ಮನೆ ತೆರಿಗೆಯನ್ನು ಗ್ರಾಮ ಪಂಚಾಯಿತಿಗೆ (ಗ್ರಾಮ ಆಡಳಿತ ಮಂಡಳಿ) ಪಾವತಿಸುವ ರಸೀದಿಗಳನ್ನು ಅವರು ನನಗೆ ತೋರಿಸಿದರು. "ಈ ಘರ್ ಪಟ್ಟಿ, ಲೈಟ್ ಬಿಲ್... ನಾವು ಇದನ್ನು ನಿಯಮಿತವಾಗಿ ಪಾವತಿಸುತ್ತಿದ್ದೇವೆ. ಆದರೂ ಇನ್ನೊಂದು ಮನೆಯನ್ನು ಪಡೆಯಲು ನಾವು ಅರ್ಹರಲ್ಲವೇ?"

ಸುಮಾರು 1,325 ಜನರಿರುವ ಚಿರಾಡಪಾಡಾ ಗ್ರಾಮವು ಏಪ್ರಿಲ್ 2017ರ ಗ್ರಾಮಸಭೆಯಲ್ಲಿ ನಿರ್ಣಯದಲ್ಲಿ ಮಹಾಮಾರ್ಗವನ್ನು ವಿರೋಧಿಸಿತ್ತು.  ಆದರೆ ಆ ವರ್ಷ, ಮಹಾರಾಷ್ಟ್ರದ ರಾಜ್ಯಪಾಲರು ಅಧಿಸೂಚನೆಯನ್ನು ಹೊರಡಿಸಿ, ಪ್ರಮುಖ ಯೋಜನೆಗಳಿಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಗ್ರಾಮ ಸಭೆಯ ನಿರ್ಣಯದ ಅಗತ್ಯವಿಲ್ಲ ಎಂದು ಹೇಳಿದರು.

ರೈತರು ಮತ್ತು ಕಾರ್ಯಕರ್ತರು ಈ ಕ್ರಮವನ್ನು ವ್ಯಾಪಕವಾಗಿ ಟೀಕಿಸಿದ್ದಾರೆ. ಥಾಣೆ ಜಿಲ್ಲೆಯ 41 ಹಳ್ಳಿಗಳಲ್ಲಿ ಗ್ರಾಮಸಭೆಗಳು ಈ ಯೋಜನೆಯನ್ನು ವಿರೋಧಿಸಿದವು. ಸರ್ಕಾರವು ಭೂ ಸ್ವಾಧೀನ ಕಾಯ್ದೆಯನ್ನು ತಿದ್ದುಪಡಿ ಮಾಡಿತು ಮತ್ತು ಗ್ರಾಮಸಭೆಯ ಅನುಮತಿಯ ಅಗತ್ಯವನ್ನು ಇಲ್ಲವಾಗಿಸಿತು, ಇದು ರೈತರ ಮತ್ತು ಬುಡಕಟ್ಟು ಹಕ್ಕುಗಳಿಗೆ ವಿರುದ್ಧವಾಗಿದೆ," ಎಂದು ಥಾಣೆ ಮೂಲದ ಕಾರ್ಯಕರ್ತ ಮತ್ತು ಸಮೃದ್ಧಿ ಮಹಾಮಾರ್ಗ್ ಶೇತ್ಕರಿ ಸಂಘರ್ಷ ಸಮಿತಿಯ ಸಂಚಾಲಕ ಬಾಬನ್ ಹರ್ನೆ ಹೇಳುತ್ತಾರೆ. "ರಾಜ್ಯವು ಪುನರ್ವಸತಿ ಪ್ರಕ್ರಿಯೆಯನ್ನು ಬದಿಗಿಟ್ಟಿದೆ ಮತ್ತು 'ಈ ಹಣವನ್ನು ತೆಗೆದುಕೊಳ್ಳಿ ಮತ್ತು ಸ್ಥಳ ಬಿಟ್ಟುಬಿಡಿ,” ಎಂಬ ವಿಧಾನವನ್ನು ಬಳಸುತ್ತಿದೆ.

A family with their children in their house
PHOTO • Jyoti Shinoli
A man showing his house tax receipt
PHOTO • Jyoti Shinoli

ವಿಠ್ಠಲ್ ವಾಘೆ ತನ್ನ ಕುಟುಂಬದೊಂದಿಗೆ ಮತ್ತು ಮನೆ ತೆರಿಗೆ ರಶೀದಿಯನ್ನು (ಬಲಕ್ಕೆ) ಕೈಯಲ್ಲಿ ಹಿಡಿದಿದ್ದಾರೆ, ಅದು ಮುಂದೆ ಸ್ಥಳಾಂತರದ ಸಂದರ್ಭದಲ್ಲಿ ತನ್ನ ಅನುಕೂಲಕ್ಕೆ ಬರಬಹುದೆನ್ನುವುದು ಅವರ ನಂಬಿಕೆ

ಚಿರಾಡಪಾಡಾ ಗ್ರಾಮದಲ್ಲಿ, ಹೆದ್ದಾರಿಗಾಗಿ 14 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ ಎಂದು ಇಐಎ ವರದಿ ತಿಳಿಸಿದೆ. ಇದಕ್ಕೆ ಪ್ರತಿಯಾಗಿ, ಭೂಮಾಲೀಕರಿಗೆ ಪ್ರತಿ ಹೆಕ್ಟೇರಿಗೆ 1.98 ಕೋಟಿ ರೂ.ಗಳನ್ನು ನೀಡಲಾಗುವುದು (1 ಹೆಕ್ಟೇರ್ 2.47 ಎಕರೆ).  ಇದು ಮಾರುಕಟ್ಟೆ ಬೆಲೆಯ ಐದು ಪಟ್ಟು ಪರಿಹಾರ ಸೂತ್ರವಾಗಿದೆ ಎಂದು ಎಂಎಸ್ಆರ್‌ಡಿಸಿಯ ರೇವತಿ ಗಾಯ್ಕರ್ ಹೇಳುತ್ತಾರೆ. ಆದರೆ ತಮ್ಮ ಭೂಮಿಯನ್ನು ನೀಡಲು ನಿರಾಕರಿಸುವ ರೈತರು ಕೃಷಿ ಭೂಮಿಗೆ ಶೇಕಡಾ 25ರಷ್ಟು ಕಡಿಮೆ ಪಡೆಯುತ್ತಾರೆ ಎಂದು ಅವರು ಹೇಳುತ್ತಾರೆ.

"ರೈತರು ತಮ್ಮ ಭೂಮಿಯನ್ನು ಬಿಟ್ಟುಕೊಡುವಂತೆ ಒತ್ತಾಯಿಸುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿತು. ಆದರೆ ಕೆಲವು ಸಂದರ್ಭಗಳಲ್ಲಿ ಅವರು ಪ್ರತಿರೋಧಿಸಿದರೆ ಕಡಿಮೆ ಪರಿಹಾರ ನೀಡುವುದಾಗಿ ಅವರು ಬೆದರಿಕೆ ಹಾಕಿದೆ, ಇತರ ಸಂದರ್ಭಗಳಲ್ಲಿ ಹೆಚ್ಚಿನ ಮೊತ್ತದೊಂದಿಗೆ ಅವರನ್ನು ಪ್ರಚೋದಿಸುತ್ತಾರೆ," ಎಂದು ಕಪಿಲ್ ಧಮ್ನೆ ಹೇಳುತ್ತಾರೆ, ಅವರು ತಮ್ಮ ಎರಡು ಎಕರೆ ಕೃಷಿಭೂಮಿ ಮತ್ತು ಎರಡು ಅಂತಸ್ತಿನ ಮನೆಯನ್ನು ಕಳೆದುಕೊಳ್ಳುತ್ತಾರೆ. "ನನ್ನ ವಿಷಯದಲ್ಲಿ, ಭೂ ಸ್ವಾಧೀನ ಅಧಿಕಾರಿ ಮೊದಲು ನಿಮ್ಮ ಕೃಷಿ ಭೂಮಿಯನ್ನು ನೀಡಿ, ಆಗ ಮಾತ್ರ ನೀವು ನಿಮ್ಮ ಮನೆಗೆ ಹಣವನ್ನು ಪಡೆಯುತ್ತೀರಿ ಎಂದು ಹೇಳಿದರು. ಆದರೆ ನಾನು ನನ್ನ ಭೂಮಿಯನ್ನು ನೀಡಲು ನಿರಾಕರಿಸಿದೆ ಮತ್ತು ಈಗ ಅವರು ಅದನ್ನು ಬಲವಂತವಾಗಿ (ಅಂದರೆ, ಅನುಮತಿಯಿಲ್ಲದೆ) ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ."  2019ರ ಜನವರಿಯಲ್ಲಿ, ಜಿಲ್ಲಾಧಿಕಾರಿಗಳ ಕಚೇರಿಗೆ ಎರಡು ವರ್ಷಗಳ ಭೇಟಿಗಳು ಮತ್ತು ಹಲವಾರು ಅರ್ಜಿಗಳ ನಂತರ, ಧಮ್ನೆ ತಮ್ಮ ಮನೆಗೆ ಪರಿಹಾರವಾಗಿ 90 ಲಕ್ಷ ರೂ.ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ತನ್ನ ಕೃಷಿ ಭೂಮಿಗೆ ಅವರು ಎಷ್ಟು ಪರಿಹಾರವನ್ನು ಪಡೆಯಲಿದ್ದಾರೆ ಎನ್ನುವುದು ಅನಿಶ್ಚಿತವಾಗಿದೆ.

ಚಿರಾಡಪಾಡಾದ ಇನ್ನೊಬ್ಬ ರೈತ ಹರಿಭಾವು ಧಮ್ನೆ ಹೇಳುತ್ತಾರೆ, ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಕ್ಷೇಪಣೆಯನ್ನು ಸಲ್ಲಿಸಿದರು ಮತ್ತು ತಮ್ಮ ಕೃಷಿ ಭೂಮಿಯನ್ನು ಬಿಟ್ಟುಕೊಡಲು ನಿರಾಕರಿಸಿದರು. "ನಮ್ಮ 7/12ರಲ್ಲಿ 10ಕ್ಕೂ ಹೆಚ್ಚು ಹೆಸರುಗಳಿವೆ [ಸಾತ್ /ಬಾರಾ ದಾಖಲೆಯು ಕಂದಾಯ ಇಲಾಖೆಯ ಭೂ ರಿಜಿಸ್ಟರ್‌ನಿಂದ ಆಯ್ದ ಭಾಗವಾಗಿದೆ]. ಆದರೆ ಸ್ವಾಧೀನಾಧಿಕಾರಿಯು ಎರಡು-ಮೂರು ಸದಸ್ಯರ ಒಪ್ಪಿಗೆಯನ್ನು ಪಡೆದು ಮಾರಾಟ ಪತ್ರವನ್ನು [ಎಮ್‌ಎಸ್‌ಆರ್‌ಡಿಸಿ ಗೆ] ಪೂರ್ಣಗೊಳಿಸಿದರು. ಇದು ರೈತರಿಗೆ ಮೋಸ ಮಾಡುತ್ತಿದೆ,” ಎಂದು ಆರೋಪಿಸಿದರು.

A man in a boat, catching fishes
PHOTO • Jyoti Shinoli
Lady
PHOTO • Jyoti Shinoli

ಅಂಕುಶ್ ಮತ್ತು ಹೀರಾಬಾಯಿ ವಾಘೆ: 'ಮೀನುಗಳು ಹೇಗೆ ಬದುಕುತ್ತವೆ? ನದಿ ನಮ್ಮ ತಾಯಿ. ಅದು ನಮಗೆ ಆಹಾರ ನೀಡಿದೆ'

ಏತನ್ಮಧ್ಯೆ, ಚಿರಾಡಪಾಡಾದ ಮೀನುಗಾರಿಕಾ ಕುಗ್ರಾಮದಲ್ಲಿ, 45 ವರ್ಷದ ಅಂಕುಶ್ ವಾಘೆ, ಮೀನುಗಾರಿಕೆಗಾಗಿ ತನ್ನ ದೋಣಿಯನ್ನು ಸಿದ್ಧಪಡಿಸಲು ತನ್ನ ಗುಡಿಸಲಿನ ಪಕ್ಕದಲ್ಲಿ ಇಳಿಜಾರಿನ ಹಾದಿಯಲ್ಲಿ ನದಿಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. "ನನ್ನ ತಂದೆ ನದಿಯ ಕಡೆಗೆ ನಡೆದು ಹೋಗುತ್ತಿದ್ದ ರೀತಿಯೂ ಇದೇ ರೀತಿಯಿತ್ತು. ರಸ್ತೆ [ಹೆದ್ದಾರಿ] ಬಂದ ನಂತರ ಇದು ನಿಲ್ಲುತ್ತದೆ. ಮತ್ತು ಆ ಸಿಮೆಂಟ್, ಯಂತ್ರಗಳು ಇತ್ಯಾದಿ ನಮ್ಮ ನದಿಯನ್ನು ಕಲುಷಿತಗೊಳಿಸುತ್ತವೆ. ಇದು ಗದ್ದಲವನ್ನು ಸೃಷ್ಟಿಸುತ್ತದೆ. ಮೀನುಗಳು ಹೇಗೆ ಬದುಕುಳಿಯುತ್ತವೆ? ನದಿ ನಮ್ಮ ತಾಯಿ. ಇದು ನಮಗೆ ಆಹಾರ ನೀಡಿದೆ."

ಅಂಕುಶ್ ಅವರ ಭಯ ಪರಿಸರ ಪರಿಣಾಮ ಮೌಲ್ಯಮಾಪನ ವರದಿಯಲ್ಲಿ ಪ್ರತಿಬಿಂಬಿತವಾಗಿವೆ. ವಯಾಡಕ್ಟ್ ನಿರ್ಮಾಣಕ್ಕೆ "ನೀರಿನ ನಡುವೆ ಅಡಿಪಾಯದ ಕೆಲಸಗಳ ಅಗತ್ಯವಿದೆ, ಇದರಲ್ಲಿ ಉತ್ಖನನ, ಕೊರೆಯುವಿಕೆ ಮತ್ತು ಪೈಲಿಂಗ್ ಕೆಲಸಗಳು ಸೇರಿವೆ... ಬ್ರಿಡ್ಜ್ ಅಡಿಪಾಯದ ಕೆಲಸಗಳು ಕೆಲವು ಪ್ರಮಾಣದ ಅವಶೇಷಗಳ ಉಳಿಕೆಗೆ ಕಾರಣವಾಗಬಹುದು... ನೀರಿನಲ್ಲಿ ರಾಡಿ ತಾತ್ಕಾಲಿಕ ಹೆಚ್ಚಳವಾಗಿ, ತನ್ಮೂಲಕ ನೀರು ಕಲುಷಿತಗೊಳ್ಳುವುದು... ಉದ್ದೇಶಿತ ಜೋಡಣೆಯ ಆಗ್ನೇಯ ಭಾಗದಲ್ಲಿರುವ ಭಟ್ಸಾ ಜಲಾಶಯವು ಹೂಳಿನಿಂದ ತುಂಬುವುದರಿಂದ ಅದರ ಮೇಲೂ ಗಣನೀಯವಾಗಿ ಪರಿಣಾಮ ಬೀರುತ್ತದೆ."

"ನಾವೇನು ಮಾಡೋಣ,?" ಅಂಕುಶ್ ಅವರ ಪತ್ನಿ ಹೀರಾಬಾಯಿ ಪ್ರಶ್ನಿಸುತ್ತಾರೆ. ಅವರ ಹಿರಿಯ ಮಗ 27 ವರ್ಷದ ವಿಠ್ಠಲ್ ಕೂಡ ತನ್ನ ಗುಡಿಸಲನ್ನು ಕಳೆದುಕೊಳ್ಳುತ್ತಾರೆ - ನಾಲ್ಕು ಗುಡಿಸಲುಗಳ ಗುಂಪಿನಲ್ಲಿ ಅದೂ ಒಂದಾಗಿದೆ - ಹೆದ್ದಾರಿಗೆ. ಅವರು ಸುಮಾರು 6-7 ಕಿಲೋಮೀಟರ್ ದೂರದಲ್ಲಿರುವ ಸವಾದ್ ಗ್ರಾಮದ ಬಳಿಯ ಕಲ್ಲಿನ ಕ್ವಾರಿಯಲ್ಲಿ ಕೆಲಸ ಮಾಡುತ್ತಾರೆ ಮತ್ತು ಟ್ರಕ್ಕುಗಳಿಗೆ ಕಲ್ಲುಗಳನ್ನು ಒಡೆದು ಲೋಡ್ ಮಾಡುವ ಮೂಲಕ ದಿನಕ್ಕೆ 100 ರೂ.ಗಳನ್ನು ಸಂಪಾದಿಸುತ್ತಾರೆ. "ನಾವೆಲ್ಲರೂ ಭಿವಂಡಿಯ ಲೋಕೋಪಯೋಗಿ ಇಲಾಖೆಗೆ [ನವೆಂಬರ್ 2018 ರಲ್ಲಿ] ಹೋದೆವು." ವಿಠ್ಠಲ್ ಹೇಳುತ್ತಾರೆ. "ಅವರು ನಮ್ಮನ್ನು ಒಕ್ಕಲೆಬ್ಬಿಸಲು ನೀಡಿದ ನೋಟಿಸ್ ಇದೆಯೇ ಎಂದು ಕೇಳಿದರು (ಅದು ಅವರಿಗೆ ಇನ್ನೂ ಸಿಕ್ಕಿಲ್ಲ). ನಮ್ಮಲ್ಲಿ ಯಾರೂ ಸುಶಿಕ್ಷಿತರಲ್ಲ. ನಮಗೆ ಏನೂ ಗೊತ್ತಿಲ್ಲ. ನಾವು ಪರ್ಯಾಯ ಭೂಮಿಯನ್ನು ಪಡೆಯಬೇಕು. ನಾಳೆ ಅವರು ನಮ್ಮನ್ನು ಹೊರಡಲು ಹೇಳಿದರೆ, ನಾವು ಎಲ್ಲಿಗೆ ಹೋಗುವುದು?"

ನದಿ ನಾಶ, ಸಮುದಾಯಗಳ ಸ್ಥಳಾಂತರ, ಪುನರ್ವಸತಿ - ಇವು ಮತ್ತು ಇತರ ಕಾಳಜಿಗಳನ್ನು ಡಿಸೆಂಬರ್ 2017ರಲ್ಲಿ ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಥಾಣೆ ಜಿಲ್ಲೆಯ ವಶಾಲಾ ಕೆಎಚ್ ಗ್ರಾಮದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯಲ್ಲಿ ಧ್ವನಿ ಎತ್ತಲಾಯಿತು. ಕಾಳಜಿಗಳನ್ನು ನಿರ್ಲಕ್ಷಿಸಲಾಯಿತು.

ಸಂಜೆ 4 ಗಂಟೆಯ ಹೊತ್ತಿಗೆ, ಧ್ರುಪದರ ಮಗ ತಿಲಾಪಿಯಾ ಮೀನು ತುಂಬಿದ ಪ್ಲಾಸ್ಟಿಕ್ ಬುಟ್ಟಿಯೊಂದಿಗೆ ಹಿಂದಿರುಗಿದರು. ಧ್ರುಪದ ಪಾಡಾದಲ್ಲಿನ ಮಾರುಕಟ್ಟೆಗೆ ಹೊರಡಲು ಸಿದ್ಧರಾದರು. "ಮೀನು ಮಾರುವ ಮೂಲಕ ನನ್ನ ಜೀವನ ಸಾಗಿದೆ. ಅವರು ನಮ್ಮ ಬಾಯಿಯಿಂದ ಈ ತುತ್ತನ್ನು ಏಕೆ ಕಸಿದುಕೊಳ್ಳುತ್ತಿದ್ದಾರೆ? ಮೊದಲು ಈ ಧೂಳಿನ ಹಾದಿಯನ್ನು ರಿಪೇರಿ ಮಾಡಿ. ನಾವು ಮಾರುಕಟ್ಟೆಗೆ ಬಹಳ ದೂರ ನಡೆಯಬೇಕಾಗಿದೆ," ಎಂದು ಬುಟ್ಟಿಯಲ್ಲಿ ಹಾರಾಡುವ ಮೀನಿನ ಮೇಲೆ ನೀರನ್ನು ಚಿಮುಕಿಸುತ್ತ ಅವರು ಹೇಳುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Jyoti Shinoli is a Senior Reporter at the People’s Archive of Rural India; she has previously worked with news channels like ‘Mi Marathi’ and ‘Maharashtra1’.

Other stories by Jyoti Shinoli
Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected]

Other stories by Shankar N. Kenchanuru