ಈ ವರದಿಯು ಪರಿಸರ ವರದಿಯ ವಿಭಾಗದಲ್ಲಿ 2019ರ ವರ್ಷದ ರಾಮನಾಥ್ಗೋ ಯೆಂಕಾ ಪ್ರಶಸ್ತಿಯನ್ನು ಗೆದ್ದ ಪರಿಯ ಹವಾಮಾನ ಬದಲಾವಣೆ ಕುರಿತ ಸರಣಿಯ ಭಾಗವಾಗಿದೆ.
ಪಶ್ಚಿಮ ಕಮೆಂಗ್ ಜಿಲ್ಲೆಯ ಲಗಂ ಗ್ರಾಮದ ಅಲೆಮಾರಿ ಪಶುಪಾಲಕ 35 ರ ಸುರಿಂಗ್, "ಜೊ಼ಮೊಗಳು ನಮ್ಮಲ್ಲೀಗ ಬಹಳ ಜನಪ್ರಿಯವಾಗಿವೆ", ಎನ್ನುತ್ತಾರೆ.
ಜೊ಼ಮೊ? ಹಾಗಂದರೇನು? 9,000 ಅಡಿಗಳ ಈ ಎತ್ತರದಲ್ಲಿ ಹಾಗೂ ಅರುಣಾಚಲ ಪ್ರದೇಶದ ಎತ್ತರದ ಪರ್ವತಗಳಲ್ಲಿ ಇವು ಜನಪ್ರಿಯವಾಗಲು ಕಾರಣಗಳೇನು?
ಜೊ಼ಮೊಗಳು ಯಾಕ್ ಮತ್ತು ಕೊಟ್ ಜಾನುವಾರುಗಳ ಮಿಶ್ರ ತಳಿಯಾಗಿದ್ದು, ಎತ್ತರದ ಪ್ರದೇಶಗಳ ಜಾನುವಾರುಗಳಲ್ಲಿ ಇವೂ ಒಂದು. ಜೊ಼ ಎಂದು ಕರೆಯಲ್ಪಡುವ ಗಂಡು ಮಿಶ್ರತಳಿಗೆ ಸಂತಾನಶಕ್ತಿಯಿಲ್ಲದ ಕಾರಣ, ಪಶುಪಾಲಕರು ಜೊ಼ಮೊಗೆ ಪ್ರಾಶಸ್ತ್ಯವನ್ನು ನೀಡುತ್ತಾರೆ. ಇದು ನೂತನ ತಳಿಯಲ್ಲವಾದ್ದರಿಂದ, ಪೂರ್ವ ಹಿಮಾಲಯದಲ್ಲಿನ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ; ಜಾನುವಾರುಗಳನ್ನು ಸಾಕುವ ಬ್ರೊಕ್ಪ ಅರೆ-ಅಲೆಮಾರಿ ಸಮುದಾಯದವರು ಇತ್ತೀಚೆಗೆ ಈ ಪ್ರಾಣಿಗಳನ್ನು ತಮ್ಮ ಗುಂಪಿನಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ.
ತನ್ನ ಮಂದೆಯಲ್ಲಿನ 45 ಪ್ರಾಣಿಗಳಲ್ಲಿ ಯಾಕ್ ಮತ್ತು ಜೊ಼ಮೊಗಳನ್ನು ಸಹ ಹೊಂದಿರುವ 45 ರ ಪೆಂಪ, ಈ ಯಾಕ್-ಹಸುವಿನ ಮಿಶ್ರ ತಳಿಗಳು, "ಧಗೆಯನ್ನು ಸಹಿಸಬಲ್ಲವುಗಳಾಗಿದ್ದು, ಕಡಿಮೆ ಎತ್ತರ ಹಾಗೂ ತಾಪಮಾನದ ಹೆಚ್ಚಳಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತವೆ", ಎನ್ನುತ್ತಾರೆ.
ಈ ಹೆಚ್ಚು ಎತ್ತರದ ಹುಲ್ಲುಗಾವಲುಗಳಲ್ಲಿ, ಶಾಖ ಅಥವ ಧಗೆಯು ವಾಸ್ತವಿಕ ಹಾಗೂ ಸಾಪೇಕ್ಷ ಸಂಗತಿಗಳಾಗಿವೆ. ಇಲ್ಲಿ ಯಾವುದೇ ವರ್ಷದ ಯಾವ ದಿನದಲ್ಲೂ 32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುವುದಿಲ್ಲ. ಆದರೆ -35 ಡಿಗ್ರಿಯನ್ನು ಸಲೀಸಾಗಿ ತಾಳಿಕೊಳ್ಳಬಲ್ಲ ಯಾಕ್ಗಳು, ತಾಪಮಾನವು 12 ಅಥವ 13 ಡಿಗ್ರಿಗಳಿಗೆ ಏರಿಕೆಯಾದಲ್ಲಿ ಹೆಣಗಾಡುತ್ತವೆ.
ಮೊನ್ಪ ಎಂಬ ದೊಡ್ಡ ಬುಡಕಟ್ಟು ಗುಂಪಿನ ಅಲೆಮಾರಿ ಪಶುಪಾಲಕರಾದ ಬ್ರೊಕ್ಪ, (2011 ರ ಜನಗಣತಿಯನುಸಾರ ಇವರ ಸಂಖ್ಯೆ ಸುಮಾರು 60,000) ಶತಮಾನಗಳಿಂದಲೂ ಯಾಕ್ಗಳನ್ನು ಸಾಕುತ್ತಿದ್ದು, ಪರ್ವತಗಳ ಹುಲ್ಲುಗಾವಲುಗಳಲ್ಲಿ ಅವನ್ನು ಸುತ್ತಾಡಿಸಿ ಉಪಚರಿಸುತ್ತಾರೆ. ಚಳಿಗಾಲವು ತೀವ್ರವಾಗಿದ್ದಾಗ, ಅವರು ಕೆಳಗಿನ ಪ್ರದೇಶಗಳಲ್ಲಿ ವಾಸಿಸುತ್ತಾರಲ್ಲದೆ, ಬೇಸಿಗೆಯಲ್ಲಿ ಎತ್ತರದ ಪ್ರದೇಶಗಳಿಗೆ ವಲಸೆ ಹೋಗುತ್ತವೆ. 9,000 ಮತ್ತು 15,000 ಅಡಿಗಳಷ್ಟು ಎತ್ತರಕ್ಕೆ ಇವು ಚಲಿಸುತ್ತವೆ.
ಆದರೆ ಲಡಾಖ್ನ
ಛಾಂಗ್ಥಾಂಗ್ ಪ್ರದೇಶದ ಛಾಂಗ್ಪಗಳಂತೆ
, ಬ್ರೊಕ್ಪಗಳೂ ಸಹ ಅನಿಯಮಿತ ಹವಾಮಾನದಿಂದಾಗಿ ತೀವ್ರವಾದ ಪರಿಣಾಮಗಳಿಗೆ ಒಳಗಾಗಿದ್ದಾರೆ. ಶತಮಾನಗಳಿಂದಲೂ, ಅವರ ಸಮುದಾಯವು ಜೀವನೋಪಾಯಕ್ಕಾಗಿ, ಯಾಕ್, ಎಮ್ಮೆ ಕೋಣ, ಮೇಕೆ ಮತ್ತು ಕುರಿಗಳ ಸಾಕಾಣಿಕೆಯನ್ನು ಅವಲಂಬಿಸಿತ್ತು. ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ವಲಯಗಳಲ್ಲೂ ಅವರು ಯಾಕ್ಗಳನ್ನೇ ಬಹುತೇಕವಾಗಿ ಅವಲಂಬಿಸಿದ್ದರು. ಈಗ ಈ ಅನುಬಂಧವು ದುರ್ಬಲಗೊಳ್ಳುತ್ತಿದೆ.
"ತಾಪಮಾನದಿಂದಾಗಿ ಯಾಕ್ಗಳು ಫೆಬ್ರವರಿಯ ಅಂತಿಮ ಭಾಗವು ಪ್ರಾರಂಭಗೊಳ್ಳುತ್ತಿದ್ದಂತೆಯೇ ನಿತ್ರಾಣಗೊಳ್ಳುತ್ತವೆ", ಎನ್ನುತ್ತಾರೆ ಛಂದರ್ (ಸ್ಥಳೀಯವಾಗಿ ಇದನ್ನು ಛಂದೆರ್ ಎಂತಲೂ ಕರೆಯಲಾಗುತ್ತದೆ) ಗ್ರಾಮದ ಪಶುಪಾಲಕಿಯಾದ ಲೆಕಿ ಸುಜು಼ಕ್. ಪಶ್ವಿಮ ಕಮೆಂಗ್ನ ದಿರಂಗ್ ಬ್ಲಾಕ್ಗೆ ನಾನು ಭೇಟಿಯಿತ್ತಾಗ, ಆಕೆಯ ಕುಟುಂಬದೊಂದಿಗೆ ನೆಲೆಸಿದ್ದೆ. "ಕಳೆದ ಹಲವು ವರ್ಷಗಳಿಂದಲೂ ಬೇಸಿಗೆಯು ದೀರ್ಘವಾಗುತ್ತಿದ್ದು, ತಾಪಮಾನವು ಏರುತ್ತಿದೆ. ಯಾಕ್ಗಳು ಶಕ್ತಿಗುಂದಿವೆ", ಎನ್ನುತ್ತಾರೆ 40ರ ಅಂಚಿನಲ್ಲಿರುವ ಲೆಕಿ.
![](/media/images/02-Ritayan-02-RM-The_happy_days_are_now_just_.width-1440.jpg)
ಜೊ಼ಮೊಗಳು; ಯಾಕ್ ಮತ್ತು ಕೊಟ್ ಜಾನುವಾರುಗಳ ಮಿಶ್ರ ತಳಿಯಾಗಿದ್ದು, ಎತ್ತರದ ಪ್ರದೇಶಗಳ ಜಾನುವಾರುಗಳಲ್ಲಿ ಇವೂ ಒಂದು. ಪೂರ್ವ ಹಿಮಾಲಯದಲ್ಲಿನ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ, ಜಾನುವಾರುಗಳನ್ನು ಸಾಕುವ ಬ್ರೊಕ್ಪ ಅರೆ-ಅಲೆಮಾರಿ ಸಮುದಾಯದವರು, ಇತ್ತೀಚೆಗೆ ಈ ಪ್ರಾಣಿಗಳನ್ನು ತಮ್ಮ ಗುಂಪಿನಲ್ಲಿ ಹೆಚ್ಚಾಗಿ ಸೇರಿಸಿಕೊಳ್ಳುತ್ತಿದ್ದಾರೆ.
ತಾಪಮಾನವಷ್ಟೇ ಅಲ್ಲದೆ; ಚೀನ, ಭೂತಾನ್ ಮತ್ತು ಮಯನ್ಮಾರ್ಗಳ ಟಿಬೆಟ್ ಸ್ವಾಯತ್ತ ಪ್ರದೇಶದ ಗಡಿಯಲ್ಲಿರುವ ಅರುಣಾಚಲ ಪ್ರದೇಶದ ಪರ್ವತಗಳಲ್ಲಿ ಕಳೆದೆರಡು ದಶಕಗಳಿಂದಲೂ ಹವಾಮಾನದ ಸ್ವರೂಪವು ಊಹೆಗೆ ನಿಲುಕದಂತಾಗಿದೆ ಎನ್ನುತ್ತಾರೆ ಬ್ರೊಕ್ಪ.
"ಎಲ್ಲವೂ ನಿಧಾನಗತಿಯಲ್ಲಿದೆ. ಬೇಸಿಗೆಯ ಆರಂಭವು ವಿಳಂಬವಾಗುತ್ತಿದೆ. ಹಿಮಪಾತ ಹಾಗೂ ಋತು ಆಧಾರಿತ ವಲಸೆಯು ಸಹ ತಡವಾಗುತ್ತಿದೆ. ಬ್ರೊಕ್ಪಗಳು ಎತ್ತರದ ಹುಲ್ಲುಗಾವಲಿಗೆ ತೆರಳಿದಾಗ ಅವಿನ್ನೂ ಮಂಜಿನಿಂದ ಆಚ್ಛಾದಿತವಾಗಿರುತ್ತವೆ. ಅಂದರೆ, ಹಿಮದ ಕರಗುವಿಕೆಯೂ ನಿಧಾನವಾಗುತ್ತಿದೆ", ಎನ್ನುತ್ತಾರೆ ಪೆಮ ವಂಗೆ. ಥೆಮ್ಬಂಗ್ ಗ್ರಾಮದ 30 ರ ಅಂಚಿನ ಪೆಮ, ಬ್ರೊಕ್ಪ ಅಲ್ಲವಾದರೂ, ಮೊನ್ಪ ಬುಡಕಟ್ಟಿಗೆ ಸೇರಿದ ಅವರು, ಪರಿಸರ ಸಂರಕ್ಷಕರಾಗಿದ್ದು ವಿಶ್ವ ವನ್ಯಜೀವಿ ನಿಧಿಗಾಗಿ (world wildlife fund) ಶ್ರಮಿಸುತ್ತಿದ್ದಾರೆ.
ಈ ಬಾರಿ ನಾನು ಅವರೊಂದಿಗೆ ದೂರವಾಣಿಯಲ್ಲಿ ಸಂಭಾಷಿಸಿದೆ. ನಾನು ಸಾಮಾನ್ಯವಾಗಿ ಪ್ರಯಾಣಿಸುವ ಪ್ರದೇಶಗಳು ಭಾರಿ ಮಳೆಯಿಂದಾಗಿ ತಲುಪಲಾರದಂತಾಗಿವೆ. ಈ ವರ್ಷದ ಮೇ ತಿಂಗಳಿನಲ್ಲಿ ನಾನು ಅಲ್ಲಿಗೆ ತೆರಳಿ, ಛಂದರ್ ಜಿಲ್ಲೆಯ ನಗುಲಿ ತ್ಸೊಪ ಎಂಬ ಯಾಕ್ ಪಾಲಕನೊಂದಿಗೆ ಕಮರಿಯೊಂದರ ಮೇಲೆ ನಿಂತು, ಕೆಳಗೆ ಪಶ್ಚಿಮ ಕಮೆಂಗ್ ಜಿಲ್ಲೆಯ ದಟ್ಟ ಕಾಡುಗಳನ್ನು ವೀಕ್ಷಿಸಿದ್ದೆ. ಆತನ ಸಮುದಾಯದ ಬಹುಪಾಲು ಜನರು ಇಲ್ಲಿ ಹಾಗೂ ತ್ವಾಂಗ್ ಜಿಲ್ಲೆಯಲ್ಲಿ ಒಟ್ಟಾಗಿ ನೆಲೆಸಿದ್ದಾರೆ.
ಬೇಸಿಗೆಯಲ್ಲಿನ ನಮ್ಮ ಹುಲ್ಲುಗಾವಲಾದ ಮಗೊ ಅನ್ನು ತಲುಪಲು ಪ್ರಯಾಣದ ದಾರಿ ದೀರ್ಘವಾಗಿರುತ್ತದೆ. ಅಲ್ಲಿಗೆ ತಲುಪಲು, ಕಾಡಿನಲ್ಲಿ 3-4 ರಾತ್ರಿ ಕಾಲ್ನಡಿಗೆಯಲ್ಲಿ ಸಾಗುತ್ತೇವೆ. ಇದಕ್ಕೂ ಹಿಂದೆ (10-15 ವರ್ಷಗಳಿಗೂ ಮೊದಲು), ಮೇ ಅಥವ ಜೂನ್ನಲ್ಲಿ ನಾವು ಈ ಪ್ರಯಾಣವನ್ನು ಕೈಗೊಳ್ಳುತ್ತಿದ್ದೆವು (ಉತ್ತರಾಭಿಮುಖ ವಲಸೆ). ಆದರೀಗ ಫೆಬ್ರವರಿ ಅಥವ ಮಾರ್ಚ್ ತಿಂಗಳಿನಲ್ಲಿಯೇ ಪ್ರಯಾಣವನ್ನು ಕೈಗೊಳ್ಳಬೇಕಿದ್ದು, ಹಿಂದಿರುಗುವುದು ಸಹ 2-3 ತಿಂಗಳು ತಡವಾಗುತ್ತಿದೆಯೆನ್ನುತ್ತಾರೆ 40 ರ ಅಂಚಿನ ನಗುಲಿ.
ಬಿದಿರಿನ ಸಂಗ್ರಹಕ್ಕೆ ಹಿಮಚ್ಛಾದಿತ ಕಾಡುಗಳೆಡೆಗೆ ದೀರ್ಘ ಪ್ರಯಾಣ ಹೊರಟಿದ್ದ ನಗುಲಿ ಅವರೊಂದಿಗೆ ನಾನೂ ಜೊತೆಯಾದೆ. ಈ ಭಾಗಗಳಲ್ಲಿ ಅತ್ಯುತ್ತಮ ಬಿದಿರು ಬೆಳೆಯುತ್ತದೆ. "ಬೇಸಿಗೆಯು ದೀರ್ಘವಾಗಿರುವ ಕಾರಣ, ಯಾಕ್ ಗಳ ಚಿಕಿತ್ಸೆಗೆಂದು ನಾವು ಬಳಸುತ್ತಿದ್ದ ಕೆಲವು ಸ್ಥಳೀಯ ಔಷಧೀಯ ಸಸ್ಯಗಳು ಈಗ ಬೆಳೆಯುತ್ತಿಲ್ಲ. ನಾವು ಯಾಕ್ಗಳ ಖಾಯಿಲೆಯನ್ನು ಉಪಚರಿಸುವುದಾದರೂ ಹೇಗೆ?", ಮುಂತಾಗಿ ತಮ್ಮ ಅನೇಕ ಸಮಸ್ಯೆಗಳನ್ನು ನಗುಲಿ ನನಗೆ ತಿಳಿಸಿದರು.
ಅರುಣಾಚಲವು ಸಾಮಾನ್ಯವಾಗಿ ಹೆಚ್ಚು ಮಳೆ ಬೀಳುವ ರಾಜ್ಯವಾಗಿದೆ. ವರ್ಷಂಪ್ರತಿ ಇಲ್ಲಿ ಸರಾಸರಿ 3,000 ಮಿ.ಮೀ. ಮಳೆಯಾಗುತ್ತದೆ. ಆದರೆ ಕಳೆದ ದಶಕದ ಅನೇಕ ವರ್ಷಗಳಲ್ಲಿ ಮಳೆಯ ಕೊರತೆ ಕಾಣಿಸಿಕೊಂಡಿದೆ. ಭಾರತದ ಪವನಶಾಸ್ತ್ರ ಇಲಾಖೆಯ ಮಾಹಿತಿಯನುಸಾರ, ಈ ಕೊರತೆಯ ಪ್ರಮಾಣ ಶೇ. 25 ರಿಂದ 30 ರಷ್ಟಿದೆ. ಆದಾಗ್ಯೂ, ಕಳೆದ ಜುಲೈನಲ್ಲಿ ಸುರಿದ ಪ್ರಚಂಡ ಮಳೆಯಲ್ಲಿ ಕೆಲವು ರಸ್ತೆಗಳು ಮುಳುಗಿಹೋದವು ಅಥವ ಕೊಚ್ಚಿಹೋದವು.
ಈ ಏರುಪೇರುಗಳ ನಡುವೆ, ಪರ್ವತಗಳಲ್ಲಿನ ತಾಪಮಾನವು ಎಡೆಬಿಡದಂತೆ ಹೆಚ್ಚುತ್ತಲೇ ಇದೆ.
![](/media/images/03-Ritayan-03-RM-The_happy_days_are_now_just_.width-1440.jpg)
"ಬೇಸಿಗೆಯು ದೀರ್ಘವಾಗಿರುವ ಕಾರಣ, ಯಾಕ್ಗಳ ಚಿಕಿತ್ಸೆಗೆ ನಾವು ಬಳಸುವ ಸ್ಥಳೀಯ ಔಷಧೀಯ ಸಸ್ಯಗಳು ಈಗ ಬೆಳೆಯುತ್ತಲೇ ಇಲ್ಲ. ನಾವು ಅವುಗಳ ಖಾಯಿಲೆಯನ್ನು ಉಪಚರಿಸುವುದಾದರೂ ಹೇಗೆ?", ಎನ್ನುತ್ತಾರೆ, ಪಶ್ಚಿಮ ಕಮೆಂಗ್ ಜಿಲ್ಲೆಯ ಎತ್ತರದ ಹುಲ್ಲುಗಾವಲಿನಲ್ಲಿ ತನ್ನ ಜಾನುವಾರುಗಳನ್ನು ಮೇಯಿಸುವುದರ ಮಧ್ಯೆ ಬಿಡುವಿನ ಸಮಯದಲ್ಲಿ ಚಹಾ ಸೇವಿಸುವುದರಲ್ಲಿ ಮಗ್ನರಾಗಿರುವ ನಗುಲಿ ಸೊಪ.
2014 ರಲ್ಲಿ, ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯವು ಕೈಗೊಂಡ ಅಧ್ಯಯನದಲ್ಲಿ, ಪೂರ್ವ ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿನ (ಅರುಣಾಚಲ ಪ್ರದೇಶದ ಬೃಹತ್ ಭೌಗೋಳಿಕ ವಲಯ) ತಾಪಮಾನದಲ್ಲಿನ ಬದಲಾವಣೆಗಳನ್ನು ದಾಖಲಿಸಲಾಗಿದೆ. ದಿನನಿತ್ಯದ ಕಡಿಮೆ ತಾಪಮಾನವು ಕಳೆದ 24 ವರ್ಷಗಳಲ್ಲಿ ಗಮನಾರ್ಹವಾಗಿ ಏರಿಕೆಯಾಗಿದೆ (1984 ರಿಂದ 2008 ರ ನಡುವೆ). ದಿನನಿತ್ಯದ ಹೆಚ್ಚಿನ ತಾಪಮಾನವು 100 ವರ್ಷಗಳಲ್ಲಿ 5 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯನ್ನು ಕಂಡಿದೆ.
"ಅನಿಯಮಿತ ಹವಾಮಾನವನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ವಲಸೆಯ ಅವಧಿಯನ್ನು ಎರಡರಿಂದ ಮೂರು ತಿಂಗಳುಗಳಿಗೆ ವಿಸ್ತರಿಸಿದ್ದೇವೆ. ಹುಲ್ಲುಗಾವಲನ್ನು ಹೆಚ್ಚು ವೈಜ್ಞಾನಿಕವಾಗಿ ಬಳಸುತ್ತಿದ್ದೇವೆ. ಅಂದರೆ, ಹುಲ್ಲುಗಾವಲುಗಳ ಯಾದೃಚ್ಛಿತ (random) ಬಳಕೆಗೆ ಬದಲಾಗಿ, ನಿರ್ದಿಷ್ಟ ಕ್ರಮವೊಂದನ್ನು ಅನುಸರಿಸುತ್ತಿದ್ದೇವೆ ಎನ್ನುತ್ತಾರೆ", 30 ರ ಹರೆಯದ ಮತ್ತೊಬ್ಬ ಪಶುಪಾಲಕ ಸೆರಿಂಗ್ ದೊಂಡುಪ್.
ಈತನಂತೆಯೇ ಬಹುತೇಕ ಬ್ರೊಕ್ಪಗಳು, ಹವಾಮಾನ ಬದಲಾವಣೆಯ ಬಗ್ಗೆ ಅರಿವುಳ್ಳವರಾಗಿದ್ದಾರೆ. ಏಕೆ ಹೀಗಾಗುತ್ತಿದೆಯೆಂಬ ಬಗ್ಗೆ ಅವರು ಹೆಚ್ಚು ಮಾತನಾಡದಿದ್ದಾಗ್ಯೂ ಅದರಿಂದ ಉಂಟಾಗುತ್ತಿರುವ ನಷ್ಟವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಕೆಲವೊಂದು ಉತ್ತೇಜನಕಾರಿ ವಿದ್ಯಮಾನಗಳೂ ಕಂಡುಬರುತ್ತಿವೆ. ಅನೇಕ ಸಂಶೋಧಕರು; ಈ ಬದಲಾವಣೆಗಳನ್ನು ನಿಭಾಯಿಸುವ ಅನೇಕ ಕಾರ್ಯನೀತಿಗಳನ್ನು (strategy) ಹುಡುಕುತ್ತಿದ್ದಾರೆಂಬುದಾಗಿ ತಿಳಿಸುತ್ತಾರೆ. ಈ ಸಮುದಾಯದ ಸಮೀಕ್ಷೆ ನಡೆಸಿದ ಒಂದು ಗುಂಪು; 2014 ರಲ್ಲಿ, ಇಂಡಿಯನ್ ಜರ್ನಲ್ ಆಫ್ ಟ್ರಡಿಶನಲ್ ನಾಲೆಡ್ಜ್ ಎಂಬ ಪತ್ರಿಕೆಯಲ್ಲಿ ಈ ವಿಷಯವನ್ನು ಅರುಹಿದೆ. ಪಶ್ವಿಮ ಕಮೆಂಗ್ನ ಶೇ. 78.3 ಮತ್ತು ತವಂಗ್ನಲ್ಲಿ ಶೇ. 85 ರಷ್ಟು ಬ್ರೊಕ್ಪಗಳು ಅಂದರೆ, ಅರುಣಾಚಲ ಪ್ರದೇಶದ ಶೇ. 81.6 ರಷ್ಟು ಅಲೆಮಾರಿ ಸಮುದಾಯಕ್ಕೆ, ಹವಾಮಾನ ಬದಲಾವಣೆಯ ಘಟನಾವಳಿಗಳ ಬಗ್ಗೆ ಅರಿವಿದೆ. ಇವರಲ್ಲಿನ ಶೇ. 75 ರಷ್ಟು ಜನರು ಈ ಬದಲಾವಣೆಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಕನಿಷ್ಟ ಒಂದು ಕಾರ್ಯನೀತಿಯನ್ನು ಅಳವಡಿಸಿಕೊಂಡಿದ್ದೇವೆಂದು ತಿಳಿಸುತ್ತಾರೆ.
ಸಂಶೋಧಕರು ತಿಳಿಸುವ ಇತರೆ ಕಾರ್ಯನೀತಿಗಳು ಹೀಗಿವೆ: ಪಶುಪಾಲನೆಯನ್ನು ವಿಭಿನ್ನ ರೀತಿಯಲ್ಲಿ ಕೈಗೊಳ್ಳುವುದು, ಎತ್ತರದ ಪ್ರದೇಶಗಳಿಗೆ ವಲಸೆ ಹಾಗೂ ವಲಸೆಯ ಸಮಯಾವಳಿಯಲ್ಲಿನ ಬದಲಾವಣೆ. ಹವಾಮಾನ ಬದಲಾವಣೆಯ ನಕಾರಾತ್ಮಕ ಪರಿಣಾಮಗಳನ್ನು ನಿಭಾಯಿಸುವ ನಿಟ್ಟಿನ "10 ಕಾರ್ಯನೀತಿಗಳನ್ನು" ಅವರು ತಿಳಿಸುತ್ತಾರೆ. ಹುಲ್ಲುಗಾವಲಿನ ಬಳಕೆಯಲ್ಲಿನ ಬದಲಾವಣೆಗಳು, ಎತ್ತರದ ಪ್ರದೇಶಗಳಲ್ಲಿನ ಕಳಪೆ ಹುಲ್ಲುಗಾವಲು ಪ್ರದೇಶಗಳ ಪುನಶ್ಚೇತನ, ಪಶುಪಾಲನಾ ಪದ್ಧತಿಗಳ ಪರಿಷ್ಕರಣೆ ಮತ್ತು ಹಸು-ಯಾಕ್ಗಳ ಮಿಶ್ರತಳಿಗಳು ಇತರೆ ಕಾರ್ಯನೀತಿಗಳಾಗಿವೆ. ಅಲ್ಲದೆ, ಹುಲ್ಲಿನ ಅಭಾವವಿರುವಲ್ಲಿ, ಬದಲಿ ಮೇವಿನ ವ್ಯವಸ್ಥೆ, ಜಾನುವಾರುಗಳ ನೂತನ ಸ್ವಾಸ್ಥ್ಯ ಸೇವೆಗಳ ಅಳವಡಿಕೆ ಮತ್ತು ಹೆಚ್ಚುವರಿ ಆದಾಯದ ಮೂಲಗಳನ್ನು ಅಂದರೆ, ರಸ್ತೆ ನಿರ್ಮಾಣ, ಕೂಲಿ, ಸಣ್ಣ ಪುಟ್ಟ ಉದ್ಯಮಗಳು, ಹಣ್ಣುಗಳ ಸಂಗ್ರಹ ಮುಂತಾದ ಇತರೆ ಕಾರ್ಯನೀತಿಗಳನ್ನು ಸಹ ಅನುಸರಿಸಲಾಗುತ್ತಿದೆ.
ಇವೆಲ್ಲವೂ ಕಾರ್ಯಸಾಧುವೇ ಅಥವ ಸುದೀರ್ಘ ಪ್ರಕ್ರಿಯೆಗಳಿಂದಾಗಿ ಅಸಾಧ್ಯವೆನಿಸುತ್ತವೆಯೇ ಎಂಬುದನ್ನು ತಿಳಿಯುವ ಯಾವುದೇ ಮಾರ್ಗವಿಲ್ಲ. ಆದರೆ ಅವರು ಪ್ರಯತ್ನಗಳನ್ನಂತೂ ನಡೆಸುತ್ತಿದ್ದಾರೆ. ಅದು ಅವಶ್ಯವೂ ಹೌದು. ಯಾಕ್ ಅರ್ಥವ್ಯವಸ್ಥೆಯ ಕುಸಿತದಿಂದಾಗಿ ತಮ್ಮ ಕುಟುಂಬದ ಶೇ 20 ರಿಂದ 30 ರಷ್ಟು ಆದಾಯವು ಕುಂಠಿತಗೊಂಡಿದೆಯೆಂದು ಪಶುಪಾಲಕರು ತಿಳಿಸುತ್ತಾರೆ. ದೊರೆಯುವ ಹಾಲಿನ ಪ್ರಮಾಣವು ಕಡಿಮೆಯಾದಲ್ಲಿ; ಮನೆಯಲ್ಲಿ ತಯಾರಿಸಲ್ಪಡುವ ತುಪ್ಪ ಹಾಗೂ ಛುರ್ಪಿಗಳ (ಹುದುಗು ಬರಿಸಿದ ಯಾಕ್ ಹಾಲಿನಿಂದ ತಯಾರಿಸಿದ ಚೀಜ಼್) ಪ್ರಮಾಣವೂ ಕಡಿಮೆಯಾಗುತ್ತದೆ. ಜೊ಼ಮೊಗಳು ಗಟ್ಟಿಮುಟ್ಟಾಗಿರುತ್ತವಾದರೂ, ಯಾಕ್ನ ಹಾಲು ಹಾಗೂ ಚೀಜ಼್ನ ಗುಣಮಟ್ಟ ಮತ್ತು ಧಾರ್ಮಿಕ ಮಹತ್ವವನ್ನು ಸರಿಗಟ್ಟುವುದಿಲ್ಲ.
ಮೇ ತಿಂಗಳ ಪ್ರವಾಸದಲ್ಲಿ, ಪೆಮ ವಂಗೆ ಹೀಗೆನ್ನುತ್ತಾರೆ: "ಯಾಕ್ ಸಂತತಿಯು ಕಡಿಮೆಯಾಗುತ್ತಿದೆಯಲ್ಲದೆ ಕಳಪೆಯತ್ತ ಸಾಗುತ್ತಿರುವುದರಿಂದ ಬ್ರೊಕ್ಪಗಳ ಆದಾಯವೂ ಕ್ಷೀಣಿಸುತ್ತಿದೆ. ಈಗ ವಾಣಿಜ್ಯೀಕೃತವಾಗಿ ಸಂಸ್ಕರಿಸಲ್ಪಟ್ಟ ಚೀಜ಼್ ಸ್ಥಳೀಯ ಮಾರುಕಟ್ಟೆಗಳಲ್ಲಿ ಸುಲಭವಾಗಿ ದೊರೆಯುತ್ತಿದ್ದು; ಛುರ್ಪಿಯ ಮಾರಾಟ ಕಡಿಮೆಯಾಗುತ್ತಿದೆ. ಬ್ರೊಕ್ಪಗಳು ಎರಡೂ ಕಡೆಗಳಿಂದ ಹಾನಿಗೊಳಗಾಗುತ್ತಿದ್ದಾರೆ."
ನಾನು ಮನೆಗೆ ತೆರಳುವುದಕ್ಕೂ ಸ್ವಲ್ಪ ಮೊದಲು, ಬ್ರೊಕ್ಪಗಳು ವಲಸೆ ಹೋಗುವ ಮಾರ್ಗದಲ್ಲಿನ ಏಕಾಂತ ಕೊಪ್ಪಲೊಂದರಲ್ಲಿ ತನ್ನ ಜಾನುವಾರುಗಳ ಹಿಂಡಿನೊಂದಿಗಿದ್ದ 11 ರ ನೊರ್ಬು ಥುಪ್ಟೆನ್ ಅನ್ನು ಭೇಟಿಯಾದೆ. ತನ್ನ ಹಿರಿಯರ ಮಾತುಗಳನ್ನೇ ಅನುಕರಿಸುತ್ತ ಆತನು, "ನನ್ನ ತಾತನ ಕಾಲವೇ ಚೆನ್ನಾಗಿತ್ತು. ಹುಲ್ಲುಗಾವಲುಗಳು ಆಗ ಹೆಚ್ಚಾಗಿದ್ದವು. ಜನಸಂಖ್ಯೆ ಕಡಿಮೆಯಿತ್ತು. ಗಡಿಯ ನಿರ್ಬಂಧವಾಗಲಿ, ಹವಾಗುಣದ ಸಮಸ್ಯೆಗಳಾಗಲಿ ಇರಲಿಲ್ಲ. ಆದರೆ ಸಂತೋಷದ ದಿನಗಳು ಈಗ ಕೇವಲ ನೆನಪುಗಳಷ್ಟೇ", ಎಂದು ತಿಳಿಸಿದ.
![](/media/images/04-Ritayan-01-RM-The_happy_days_are_now_just_.width-1440.jpg)
ಅರುಣಾಚಲ ಪ್ರದೇಶದ ಪಶ್ವಿಮ ಕಮೆಂಗ್ ಮತ್ತು ತವಂಗ್ ಜಿಲ್ಲೆಯ ಮೊನ್ಪ ಬುಡಕಟ್ಟಿನ ವಿರಕ್ತ ಬ್ರೊಕ್ಪ ಪಶುಪಾಲಕ ಸಮುದಾಯವು 9,000ದಿಂದ 15,000 ಅಡಿಗಳೆತ್ತರದ ಪರ್ವತಗಳಲ್ಲಿ ವಾಸಿಸುತ್ತದೆ. ಊಹಿಸಲಸಾಧ್ಯವಾದ ಹವಾಗುಣದ ಬದಲಾವಣೆಗಳಿಂದಾಗಿ ಅವರ ವಲಸೆಯ ವಿಧಾನಗಳೂ ಬದಲಾಗುತ್ತಿವೆ ಎಂದು ಅವರು ತಿಳಿಸುತ್ತಾರೆ.
![](/media/images/05-Ritayan-05-RM-The_happy_days_are_now_just_.width-1440.jpg)
ಹಿರಿಯ ಪಶುಪಾಲಕರು ವಲಸೆಗೆ ತಯಾರಾಗುತ್ತಿದ್ದಂತೆಯೇ ತರುಣರ ತಂಡವು ದಿನಸಿಯ ಮೂಟೆಗಳನ್ನು ಸಜ್ಜುಗೊಳಿಸುತ್ತಿದೆ. "ಎಲ್ಲವೂ ತಡವಾಗುತ್ತಿದೆ. ಬೇಸಿಗೆಯ ಪ್ರಾರಂಭವು ವಿಳಂಬವಾಗುತ್ತಿದೆ. ಹಿಮಪಾತದ ಪ್ರಾರಂಭವೂ ವಿಳಂಬಗೊಳ್ಳುತ್ತಿದೆ. ಋತುಕಾಲಿಕ ವಲಸೆಯೂ ಸಹ ತಡವಾಗುತ್ತಿದೆ", ಎನ್ನುತ್ತಾರೆ ಪೆಮ ವಂಗೆ.
![](/media/images/06-Ritayan-06-RM-The_happy_days_are_now_just_.width-1440.jpg)
ಛಂದರ್ ಹಳ್ಳಿಯ ಹೊರಗೆ, ಬ್ರೊಕ್ಪಗಳ ಗುಂಪೊಂದು ವಲಸೆಯ ಮಾರ್ಗದ ಕುರಿತು ಚರ್ಚಿಸುತ್ತಿದೆ. ಎತ್ತರದ ಪ್ರದೇಶಗಳಲ್ಲಿನ ಹಿಮವು ಕರಗುವುದು ನಿಧಾನವಾಗುತ್ತಿರುವುದರಿಂದ ಇವರು ಆಗಾಗ್ಗೆ ತಮ್ಮ ಮಾರ್ಗವನ್ನು ಬದಲಿಸಿಕೊಳ್ಳತಕ್ಕದ್ದು ಅಥವ ಮಾರ್ಗದಲ್ಲಿ ತಮ್ಮ ಹಿಂಡಿನೊಂದಿಗೆ ಹಿಮವು ಕರಗುವವರೆಗೂ ಕಾಯುವುದು ಅನಿವಾರ್ಯ.
![](/media/images/07-Ritayan-07-RM-The_happy_days_are_now_just_.width-1440.jpg)
ಮೂರು ಎತ್ತರದ ಪ್ರದೇಶಗಳ ಕಣಿವೆಯನ್ನು ಹಾದುಹೋಗುವ ಮಾರ್ಗದಲ್ಲಿನ ಮಗೊ ಎಂಬಲ್ಲಿನ ಹುಲ್ಲುಗಾವಲಿಗೆ ತೆರಳುತ್ತಿರುವ ಬ್ರೊಕ್ಪ ಪಶುಪಾಲಕರ ಗುಂಪು: ‘ಈ ಹಿಂದೆ, ಮೇ ಅಥವ ಜೂನ್ನಲ್ಲಿ ಹೊರಡುತ್ತಿದ್ದೆವು. ಈಗ ನಾವು ಇದಕ್ಕೂ ಮೊದಲೇ ಫೆಬ್ರವರಿ ಅಥವ ಮಾರ್ಚ್ನಲ್ಲಿ ಪ್ರಯಾಣವನ್ನು ಪ್ರಾರಂಭಿಸಿ, ನಂತರ 2-3 ತಿಂಗಳು ತಡವಾಗಿ ವಾಪಸ್ಸಾಗಬೇಕಿದೆ.’
![](/media/images/08-Ritayan-10-RM-The_happy_days_are_now_just_.width-1440.jpg)
ಲಗಂ ಹಳ್ಳಿಯಲ್ಲಿ ಜೊ಼ಮೊನ ಹಾಲು ಕರೆಯುತ್ತಿರುವ ತಶಿ ಸೆರಿಂಗ್. ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳಬಲ್ಲ ಜೊ಼ಮೊ, ಕೆಳಗಿನ ಪ್ರದೇಶಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆಯಾದರೂ, ಯಾಕ್ನ ಹಾಲು ಹಾಗೂ ಚೀಜ಼್ನ ಗುಣಮಟ್ಟ ಮತ್ತು ಧಾರ್ಮಿಕ ಮಹತ್ವವನ್ನು ಸರಿಗಟ್ಟಲಾರದು. ಇವು ಚಿಕ್ಕವೂ ಹೌದು. ಹೆಚ್ಚು ಬಾರಿ ಖಾಯಿಲೆಗಳಿಗೆ ತುತ್ತಾಗುತ್ತವೆ. ಹೀಗಾಗಿ ಬ್ರೊಕ್ಪಗಳ ಆರ್ಥಿಕ ಪರಿಸ್ಥಿತಿಯನ್ನೂ ಇದು ಪ್ರಭಾವಿಸುತ್ತಿದೆ.
![](/media/images/09-Ritayan-16-RM-The_happy_days_are_now_just_.width-1440.jpg)
ಕಾಡಿನಲ್ಲಿ ಹಣ್ಣುಗಳ ಸಂಗ್ರಹದ ನಂತರ ವಾಪಸ್ಸಾಗುತ್ತಿರುವ ಬ್ರೊಕ್ಪಗಳು: ಬದಲಾವಣೆಗೆ ಹೊಂದಿಕೊಳ್ಳಲು ಇವರು, ರಸ್ತೆಯ ನಿರ್ಮಾಣ, ಕೂಲಿ, ಸಣ್ಣ ಪುಟ್ಟ ಉದ್ಯಮಗಳು ಹಾಗೂ ಹಣ್ಣುಗಳ ಸಂಗ್ರಹದಂತಹ ಇತರೆ ಮೂಲಗಳನ್ನು ಅವಲಂಬಿಸತೊಡಗಿದ್ದು; ಇದರಿಂದಾಗಿ ಅವರು ಮಣ್ಣಿನ ರಸ್ತೆಯಲ್ಲಿ ಹೆಚ್ಚು ಗಂಟೆಗಳ ಕಾಲ ನಡೆದಾಡುವುದು ಅನಿವಾರ್ಯವಾಗಿದೆ.
![](/media/images/10-Ritayan-17-RM-The_happy_days_are_now_just_.width-1440.jpg)
ಕಾಡಿನಲ್ಲಿ ಬಿದಿರನ್ನು ಸಂಗ್ರಹಿಸಿದ ನಂತರ ವಾಪಸ್ಸಾಗುತ್ತಿರುವ ಬ್ರೊಕ್ಪಗಳು: ಬಿದಿರು, ಬ್ರೊಕ್ಪಗಳ ದಿನನಿತ್ಯದ ಜೀವನಕ್ಕೆ ಅತ್ಯವಶ್ಯಕ. ಅಡಿಗೆ ಕೋಣೆಯ ತಾತ್ಕಾಲಿಕ ವ್ಯವಸ್ಥೆ ಹಾಗೂ ಗೃಹೋಪಯೋಗಿ ಸಾಮಗ್ರಿಗಳಿಗೆ ಇದನ್ನು ಬಳಸಲಾಗುತ್ತದೆ. ಆದರೆ ಲಯಬದ್ಧತೆಗಳೆಲ್ಲವೂ ನಿಧಾನವಾಗಿ ಬದಲಾಗುತ್ತಿವೆ.
![](/media/images/11-Ritayan-12-RM-The_happy_days_are_now_just_.width-1440.jpg)
ಪರ್ವತಗಳನ್ನು ಇಳಿಯುವಾಗ ಮೃತಪಟ್ಟ ಜೊ಼ಮೊದೊಂದಿಗೆ ಬ್ರೊಕ್ಪ. ಆಹಾರದ ಅಭಾವದಿಂದಾಗಿ ಈ ಎತ್ತರದ ಪ್ರದೇಶದ ಹಳ್ಳಿಗಳಲ್ಲಿ ಏನನ್ನೂ ವ್ಯರ್ಥಗೊಳಿಸುವುದಿಲ್ಲ.
![](/media/images/12-Ritayan-08-RM-The_happy_days_are_now_just_.width-1440.jpg)
ಬ್ರೊಕ್ಪ ಅಡುಗೆ ಕೋಣೆಯಲ್ಲಿ ಯಾವಾಗಲೂ ಬೆಂಕಿ ಉರಿಯುತ್ತಿರುತ್ತದೆ. ಕೊರೆಯುವ ಚಳಿಯಲ್ಲಿ, ಅವರು ಹಾಗೂ ಅವರ ಜಾನುವಾರುಗಳನ್ನು ಬೆಚ್ಚಗಿಡಲು ಇದು ಸಹಾಯ ಮಾಡುತ್ತದೆ. 2014 ರ ಅಧ್ಯಯನದ ಪ್ರಕಾರ, ಈ ಪ್ರದೇಶದ ದಿನನಿತ್ಯದ ಕಡಿಮೆ ತಾಪಮಾನವು 1984 ರಿಂದ 2008 ರ ನಡುವೆ ‘ಗಮನಾರ್ಹವಾಗಿ ಹೆಚ್ಚಾಗುತ್ತಿದ್ದು, 100 ವರ್ಷಗಳಲ್ಲಿನ ದಿನನಿತ್ಯದ ಗರಿಷ್ಟ ತಾಪಮಾನವು 5 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗಿದೆ.’
![](/media/images/13-Ritayan-13-RM-The_happy_days_are_now_just_.width-1440.jpg)
ಸಾಂಪ್ರದಾಯಿಕ ಛುರ್ಪಿ ಚೀಜ಼್ನೊಂದಿಗೆ ತನ್ನ ಮನೆಯಲ್ಲಿರುವ ನಗುಲಿ ಸೊಪ. ಯಾಕ್ ಗಳ ಸಂಖ್ಯೆಯು ಕಡಿಮೆಯಾಗುತ್ತಿರುವ ಕಾರಣದಿಂದ ಮತ್ತು ಚೀಜ಼್ ಪೊಟ್ಟಣಗಳು ಹತ್ತಿರದ ಮಾರುಕಟ್ಟೆಯಲ್ಲಿ ದೊರೆಯುತ್ತಿರುವುದರಿಂದ ಬ್ರೊಕ್ಪಗಳ ಈ ಪ್ರಮುಖ ಆದಾಯದ ಮೂಲವು ಕ್ಷೀಣಿಸುತ್ತಿದೆ.
![](/media/images/14-Ritayan-11-RM-The_happy_days_are_now_just_.width-1440.jpg)
ಲೆಕಿ ಸುಜು಼ಕ್ ಮತ್ತು ನಗುಲಿ ಸೊಪ ಛಂದರ್ನಲ್ಲಿನ ತಮ್ಮ ಮನೆಯಲ್ಲಿ. ಬ್ರೊಕ್ಪ ಜೋಡಿಗಳು ಒಟ್ಟಾಗಿ ನೆಲೆಸಿದಾಗ, ತಮ್ಮ ಜಾನುವಾರುಗಳ ಹಿಂಡನ್ನು ಒಟ್ಟುಗೂಡಿಸಿ ಮೇವಿನ ಮೂಲಗಳ ಗರಿಷ್ಟ ಪ್ರಯೋಜನವನ್ನು ಪಡೆಯುತ್ತಾರೆ.
![](/media/images/15-Ritayan-14-RM-The_happy_days_are_now_just_.width-1440.jpg)
ಲೆಕಿ ನೊರ್ಬು ಮತ್ತು ನಗುಲಿ ಸೊಪ ಅವರ ಕಿರಿಯ ಪುತ್ರ, ಪುಟ್ಟ ನೊರ್ಬು, ಹೊಯ್ಗಾಳಿಯಲ್ಲಿ ಛತ್ರಿಯೊಂದಿಗೆ ಹೆಣಗುತ್ತಿದ್ದಾನೆ.
ದೇಶಾದ್ಯಂತ ಪರಿಸರದಲ್ಲಿ ಬದಲಾವಣೆಗಳಾಗುತ್ತಿವೆ. ಯುಎನ್ಡಿಪಿ ಆಶ್ರಯದಲ್ಲಿ ಪರಿಯ ವತಿಯಿಂದ ಅವನ್ನು ವರದಿಸುವ ಯೋಜನೆಯನ್ನು ಕೈಗೊಳ್ಳಲಾಗುತ್ತಿದ್ದು, ಸದರಿ ವಿಷಯವನ್ನು ಕುರಿತಂತೆ ಸಾಮಾನ್ಯ ಜನರ ಅನುಭವ ಮತ್ತು ಹೇಳಿಕೆಗಳನ್ನು ಗ್ರಹಿಸಿ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ.
ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ಗಳನ್ನು ಸಂಪರ್ಕಿಸಿ:
[email protected]
with a cc to
[email protected]
.
ಅನುವಾದ: ಶೈಲಜ ಜಿ. ಪಿ.