ಶ್ರೀಕಾಕುಳಂ ಪರದೇಸಂ ಅವರು ಈ ದೀಪಾವಳಿಗೆ ಸುಮಾರು 10,000-12,000 ದೀಪಗಳನ್ನು ತಯಾರಿಸಿರುವುದಾಗಿ ಹೇಳುತ್ತಾರೆ. 92 ವರ್ಷದ ಈ ವ್ಯಕ್ತಿ ಈ ವಾರ ಆಚರಿಸಲಾಗುತ್ತಿರುವ ಹಬ್ಬಕ್ಕೆ ಒಂದು ತಿಂಗಳ ಮೊದಲು ತಮ್ಮ ಕೆಲಸ ಪ್ರಾರಂಭಿಸಿದರು. ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಒಂದು ಕಪ್ ಚಹಾದ ನಂತರ ಕೆಲಸ ಮಾಡಲು ಪ್ರಾರಂಭಿಸಿ ಸಂಜೆಯವರೆಗೆ ಕೇವಲ ಒಂದೆರಡು ವಿರಾಮಗಳೊಂದಿಗೆ ಕೆಲಸದಲ್ಲಿ ಮುಂದುವರಿಯುತ್ತಿದ್ದರು.
ಕೆಲವು ವಾರಗಳ ಹಿಂದೆ, ಅಕ್ಟೋಬರ್ ತಿಂಗಳ ಆರಂಭದಲ್ಲಿ ಪರದೇಸಂ ಸಣ್ಣ ಸ್ಟ್ಯಾಂಡ್ ಹೊಂದಿರುವ ದೀಪಗಳನ್ನು ತಯಾರಿಸಲು ಪ್ರಯತ್ನಿಸಿದರು. “ಇಂತಹ ದೀಪಗಳನ್ನು ಮಾಡಲು ಒಂದಿಷ್ಟು ಶ್ರಮ ಬೇಕು. ಸ್ಟ್ಯಾಂಡಿನ ದಪ್ಪ ಸಮನಾಗಿರಬೇಕು,” ಎಂದು ಅವರು ಹೇಳುತ್ತಾರೆ. ಈ ಸ್ಟ್ಯಾಂಡ್ ದೀಪದಿಂದ ಎಣ್ಣೆಯು ತುಳಕದಂತೆ ತಡೆಯುತ್ತದೆ ಮತ್ತು ಬತ್ತಿಯು ಬಾರದಂತೆ ತಡೆಯುತ್ತದೆ. ಸಾಮನ್ಯ ದೀಪ ತಯಾರಿಸಲು ಎರಡು ನಿಮಿಷ ತೆಗೆದುಕೊಳ್ಳುವ ಅವರು, ಈ ವಿಶೇಷ ದೀಪಗಳಿಗೆ ಐದು ನಿಮಿಷ ಬೇಕಾಗುತ್ತದೆ. ಆದರೂ ಅವರು ಗ್ರಾಹಕರನ್ನು ಕಳೆದುಕೊಳ್ಳಬಾರದೆನ್ನುವ ಕಾರಣಕ್ಕೆ ಮಾಮೂಲಿ ದೀಪಕ್ಕಿಂತಲೂ ಒಂದು ರೂಪಾಯಿಯನ್ನಷ್ಟೇ ಹೆಚ್ಚಿಗೆ ಇರಿಸಿದ್ದಾರೆ. ಎಂದರೆ ಸಾಧಾರಣ ದೀಪಕ್ಕೆ 3 ರೂಪಾಯಿಯಾದರೆ ಇದಕ್ಕೆ ಒಂದು ರೂಪಾಯಿ ಹೆಚ್ಚು.
ಪರದೇಸಂ ಅವರ ಉತ್ಸಾಹ ಮತ್ತು ಅವರ ಕರಕುಶಲತೆಯ ಮೇಲಿನ ಒಲವು ವಿಶಾಖಪಟ್ಟಣಂನ ಕುಮ್ಮಾರಿ ವೀಧಿ (ಕುಂಬಾರರ ಬೀದಿ)ಯಲ್ಲಿರುವ ಅವರ ಮನೆಯಲ್ಲಿ ಎಂಟು ದಶಕಗಳಿಗೂ ಹೆಚ್ಚು ಕಾಲ ಕುಂಬಾರಿಕೆಯ ಚಕ್ರವನ್ನು ತಿರುಗಿಸುತ್ತಿದೆ. ಈ ಸಮಯದಲ್ಲಿ ಅವರು ದೀಪಾವಳಿಯನ್ನು ಆಚರಿಸುವ ಮನೆಗಳನ್ನು ಬೆಳಗಿಸುವ ಲಕ್ಷಾಂತರ ದೀಪಗಳನ್ನು ತಯಾರಿಸಿದ್ದಾರೆ. "ಆಕಾರವಿಲ್ಲದ ಮಣ್ಣು ಕೇವಲ ನಮ್ಮ ಕೈಗಳು, ಶಕ್ತಿ ಮತ್ತು ಚಕ್ರವನ್ನು ಬಳಸಿಕೊಂಡು ವಸ್ತುವಾಗಿ ಬದಲಾಗುತ್ತದೆ. ಇದು ಒಂದು ಕಲಾ, [ಒಂದು ಕಲೆ]" ಎನ್ನುವ ಈ ಹಿರಿಯರಿಗೆ ಈಗ ಕಿವಿ ಅಷ್ಟು ಸರಿಯಾಗಿ ಕೇಳಿಸುವುದಿಲ್ಲ, ಮತ್ತು ಹೆಚ್ಚು ಓಡಾಡಲು ಕೂಡಾ ಸಾಧ್ಯವಾಗುತ್ತಿಲ್ಲ.
ಕುಮ್ಮಾರಿ ವೀಧಿ ವಿಶಾಖಪಟ್ಟಣಂ ನಗರದ ಅಕ್ಕಯ್ಯ ಪಾಲೆಮ್ ಏರಿಯಾದ ಜನನಿಬಿಡ ಮಾರುಕಟ್ಟೆ ಪ್ರದೇಶಕ್ಕೆ ಹತ್ತಿರವಿರುವ ಕಿರಿದಾದ ರಸ್ತೆಯಾಗಿದೆ. ಬೀದಿಯಲ್ಲಿರುವ ಹೆಚ್ಚಿನ ನಿವಾಸಿಗಳು ಕುಮ್ಮಾರ ಸಮುದಾಯದವರು. ಇದು ಸಾಂಪ್ರದಾಯಿಕವಾಗಿ ವಿಗ್ರಹಗಳು ಸೇರಿದಂತೆ ಜೇಡಿಮಣ್ಣಿನ ವಸ್ತುಗಳ ತಯಾರಿಕೆಯಲ್ಲಿ ತೊಡಗಿರುವ ಕುಂಬಾರ ಸಮುದಾಯವಾಗಿದೆ. ಪರದೇಸಂ ಅವರ ಅಜ್ಜ ವಿಶಾಖಪಟ್ಟಣಂ ಜಿಲ್ಲೆಯ ಪದ್ಮನಾಭನ್ ಮಂಡಲದ ಪೊಟ್ನೂರು ಗ್ರಾಮದಿಂದ ಕೆಲಸ ಹುಡುಕಿಕೊಂಡು ನಗರಕ್ಕೆ ವಲಸೆ ಬಂದರು. ಅವರು ಚಿಕ್ಕವರಾಗಿದ್ದಾಗ ಮತ್ತು ಈ ಕುಂಬಾರ ಬೀದಿಯಲ್ಲಿನ 30 ಕುಮ್ಮಾರ ಕುಟುಂಬಗಳು ದೀಪಗಳು, ಹೂ ಕುಂಡ, ʼಹುಂಡಿ', ಮಣ್ಣಿನ ಜಾಡಿಗಳು, ಲೋಟಗಳು ಮತ್ತು ವಿಗ್ರಹಗಳು ಸೇರಿದಂತೆ ಇತರ ಜೇಡಿಮಣ್ಣಿನ ವಸ್ತುಗಳನ್ನು ತಯಾರಿಸುತ್ತಿದ್ದ ಸಮಯವನ್ನು ಅವರು ನೆನಪಿಸಿಕೊಳ್ಳುತ್ತಾರೆ.
ಇಂದು, ವಿಶಾಖಪಟ್ಟಣದಲ್ಲಿ ದೀಪಗಳನ್ನು ತಯಾರಿಸುವ ಏಕೈಕ ಕುಂಬಾರರ ಮನೆಯ ಕೊನೆಯ ಕುಶಲಕರ್ಮಿ ಪರದೇಸಂ. ಇಲ್ಲಿನ ಇತರ ಕುಂಬಾರ ಕುಟುಂಬಗಳು ವಿಗ್ರಹಗಳು ಮತ್ತು ಇತರ ಜೇಡಿಮಣ್ಣಿನ ವಸ್ತುಗಳನ್ನು ಮಾತ್ರ ತಯಾರಿಸುತ್ತಿವೆ ಅಥವಾ ಕರಕುಶಲತೆಯನ್ನು ಸಂಪೂರ್ಣವಾಗಿ ತೊರೆದಿವೆ. ಒಂದು ದಶಕದ ಹಿಂದಿನವರೆಗೆ, ಅವರು ಸಹ ಹಬ್ಬಗಳಿಗಾಗಿ ವಿಗ್ರಹಗಳನ್ನು ತಯಾರಿಸುತ್ತಿದ್ದರು ಆದರೆ ನಿಧಾನವಾಗಿ ನಿಲ್ಲಿಸಿದರು: ವಿಗ್ರಹ ತಯಾರಿಕೆಯು ದೈಹಿಕವಾಗಿ ಹೆಚ್ಚು ಪ್ರಯಾಸಕರ ಕೆಲಸವಾಗಿದೆ ಮತ್ತು ಅವರಿಗೆ ಗಂಟೆಗಳ ಕಾಲ ನೆಲದ ಮೇಲೆ ಕುಳಿತುಕೊಳ್ಳಲು ಕಷ್ಟವಾಗುತ್ತದೆ ಎಂದು ಅವರು ಹೇಳುತ್ತಾರೆ.













