“ಜನರು ಈ ವರ್ಷದಲ್ಲಿ ಗಣೇಶನ ಮೂರ್ತಿಗಳನ್ನು ಕೊಳ್ಳುವರೆಂದು ನಿಮಗನಿಸುತ್ತದೆಯೇ? ದೇವರಲ್ಲಿ ನಂಬಿಕೆಯಿಟ್ಟು, ಪ್ರತಿ ವರ್ಷವೂ ಈ ಮೂರ್ತಿಗಳನ್ನು ರೂಪಿಸುತ್ತೇವೆ. ಆತನ ದಯೆಯಿಂದ ಸ್ವಲ್ಪಮಟ್ಟಿನ ಲಾಭವನ್ನೂ ಪಡೆದಿದ್ದೇವೆ. ಆದರೆ ಈ ವರ್ಷ ದೇವರೇ ಇದ್ದಂತಿಲ್ಲ. ಕೇವಲ ಲಾಕ್‌ಡೌನ್‌ ಮತ್ತು ವೈರಸ್‌ಗಳೇ” ಎನ್ನುತ್ತಾರೆ, ವಿಶಾಖಪಟ್ಟಣದ ಕುಮ್ಮಾರಿ ವೀಧಿಯ (ಕುಂಬಾರರ ಬೀದಿ) ನಿವಾಸಿ, ಗೌರಿ ಶಂಕರ್‌.

ಆಂಧ್ರಪ್ರದೇಶದ ಈ ಜಿಲ್ಲೆಯಲ್ಲಿ, 63ರ ವಯಸ್ಸಿನ ಶಂಕರ್‌, 43ರ ವಯಸ್ಸಿನ ತಮ್ಮ ಮಗ ವೀರಭದ್ರ ಮತ್ತು 36ರ ಸೊಸೆ ಮಾಧವಿಯೊಂದಿಗೆ, ಪ್ರತಿ ವರ್ಷವೂ ಏಪ್ರಿಲ್‌ ತಿಂಗಳಿನಲ್ಲಿ ಗಣೇಶನ ಮೂರ್ತಿಗಳನ್ನು ತಮ್ಮ ಮನೆಯಲ್ಲಿ, ತಯಾರಿಸಲು ಪ್ರಾರಂಭಿಸುತ್ತಾರೆ. ಆದರೆ, ಸರ್ವವ್ಯಾಪಿ ವ್ಯಾಧಿಯಿಂದಾಗಿ, ಈ ವರ್ಷ, ಮೂರ್ತಿಗಳನ್ನು ಪ್ರಾರಂಭಿಸಲು ಅವರಿಗೆ ಸಾಧ್ಯವಾದದ್ದು, ಜೂನ್‌ ಮಧ್ಯ ಭಾಗದಲ್ಲಿ ಮಾತ್ರವೇ.

ಸಾಮಾನ್ಯವಾಗಿ, ವಿನಾಯಕತಯ ಚತುರ್ಥಿ ಮತ್ತು ದೀಪಾವಳಿ ಸಂಬಂಧಿತ ಆರ್ಡರುಗಳ (order) ಪೂರೈಕೆಯಿಂದ ಜುಲೈನಿಂದ ಮತ್ತು ಅಕ್ಟೋಬರ್‌ ಅವಧಿಯಲ್ಲಿ (ಕುಂಬಾರರ ಹಬ್ಬದ ಕಾಲ) ಪ್ರತಿ ತಿಂಗಳು 20,000 - Rs. 23,000 ರೂ.ಗಳನ್ನು ಸಂಪಾದಿಸುತ್ತೇವೆಂದು ತಿಳಿಸುವ ಅವರಿಗೆ ಈ ವರ್ಷದಲ್ಲಿ, ವಿನಾಯಕ ಚತುರ್ಥಿಗೆ ಕೇವಲ 48 ಗಂಟೆಗಳ ಸಮಯ ಉಳಿದಿದ್ದಾಗ್ಯೂ, ಒಂದಾದರೂ ದೊಡ್ಡ ಪ್ರಮಾಣದ ಆರ್ಡರು ದೊರೆತಿರಲಿಲ್ಲ.

ಕೇವಲ ೧೫ ವರ್ಷಗಳ ಹಿಂದೆ, ಕುಂಬಾರರ ಬೀದಿಯು ಈ ಜೀವನೋಪಾಯದಲ್ಲಿ ಮಗ್ನರಾಗಿದ್ದ ೩೦ ಕುಂಬಾರರ ಪರಿವಾರಗಳ ಚಟುವಟಿಕೆಯಿಂದ ಗಿಜಿಗುಡುತ್ತಿತ್ತು. ಮಾರ್ಚ್‌ ತಿಂಗಳ ಕೊನೆಯ ವಾರದಲ್ಲಿ ಪ್ರಾರಂಭಗೊಂಡ ಲಾಕ್‌ಡೌನ್‌ನಿಂದಾಗಿ ಈ ಪರಿವಾರಗಳ ಪರಿಸ್ಥಿತಿಯು ಹದಗೆಟ್ಟಿದೆ.

“ಆಂಧ್ರ ಪ್ರದೇಶದ ಶ್ರೀಕಾಕುಳಂನವರಾದ ಮಾಧವಿ ಹೀಗೆನ್ನುತ್ತಾರೆ: “ಮೂರ್ತಿಗಳನ್ನು ವಿತರಿಸುವ ವ್ಯಾಪಾರಿಗಳಿಂದ ನಾವು ದೊಡ್ಡ ಪ್ರಮಾಣದ ಆರ್ಡರುಗಳನ್ನು ಪಡೆಯುತ್ತೇವೆ. ಆದರೆ, ಈ ವರ್ಷ ನಮಗೆ ಯಾವುದೇ ಆರ್ಡರುಗಳು ಸಿಗಲಿಲ್ಲ.” ಈಕೆಯ ಪತಿಯ ಪೋಷಕರು ವಿಜಿ಼ಯನಗರಂ ಜಿಲ್ಲೆಯ ಹಳ್ಳಿಯೊಂದರಿಂದ ಬಂದವರು.

U. Gauri Shankar's family – including his daughter-in-law Madhavi – has not received a single bulk order for idols this Ganesh Chathurthi
PHOTO • Amrutha Kosuru
U. Gauri Shankar's family – including his daughter-in-law Madhavi – has not received a single bulk order for idols this Ganesh Chathurthi
PHOTO • Amrutha Kosuru

ತನ್ನ ಸೊಸೆ ಮಾಧವಿಯನ್ನೊಳಗೊಂಡಂತೆ, ಯು, ಗೌರಿಶಂಕರ್‌ ಅವರ ಪರಿವಾರಕ್ಕೆ, ಈ ಗಣೇಶನ ಹಬ್ಬದ ಸಮಯದಲ್ಲಿ, ಮೂರ್ತಿಗಳಿಗಾಗಿ ಒಂದಾದರೂ ದೊಡ್ಡ ಪ್ರಮಾಣದ ಆರ್ಡರು ದೊರೆಯಲಿಲ್ಲ

ಅವರ ಮನೆಯಲ್ಲಿನ ಗಣೇಶನ ಚಿಕ್ಕ ಮೂರ್ತಿಗಳಿಗೆ, ಆಕಾರಕ್ಕೆ ತಕ್ಕಂತೆ 15ರಿಂದ 30 ರೂ.ಗಳ ಬೆಲೆಯಿದೆ. ಕಳೆದ 4-5 ವರ್ಷಗಳಿಂದ ಈ ಹಬ್ಬದ ಕಾಲದಲ್ಲಿ ಕೇವಲ ಗಣೇಶನ ಮೂರ್ತಿಗಳ ಮಾರಾಟದಿಂದ ಈ ಕುಟುಂಬವು ಮಾಹೆಯಾನ 7,000-Rs. 8,000 ರೂ.ಗಳ ಲಾಭವನ್ನು ಗಳಿಸುತ್ತಿತ್ತು.

ಕುಟುಂಬದವರು ಒಟ್ಟಾಗಿ ಸೇರಿ, ದಿನಂಪ್ರತಿ ಇಂತಹ 100 ಮೂರ್ತಿಗಳನ್ನು ರೂಪಿಸುತ್ತಾರೆ. “ಇವುಗಳಲ್ಲಿ 60ರಿಂದ 70 ಮೂರ್ತಿಗಳು ಉತ್ತಮವಾಗಿ ರೂಪುಗೊಳ್ಳುತ್ತವೆ. ಇನ್ನು ಕೆಲವು ಬಣ್ಣ ಬಳಿಯುವಾಗ ಮುರಿದುಹೋಗುತ್ತವೆ” ಎನ್ನುತ್ತಾರೆ ಶಂಕರ್‌. ಮಾಧವಿಯು ತೋಳು ಮುರಿದಿದ್ದ ಮೂರ್ತಿಯೊಂದನ್ನು ತೋರಿಸುತ್ತಾ, “ಮುರಿದು ಹೋದ ಮೂರ್ತಿಗಳನ್ನು ಮತ್ತೆ ಜೋಡಿಸಲಾಗದು. ಅವು ನಮ್ಮ ಶ್ರಮವು ವ್ಯರ್ಥವಾಯಿತೆಂಬುದನ್ನು ಸೂಚಿಸುತ್ತವೆ” ಎಂದರು. ಅವರ ಮನೆಯ ಹೊರಗೆ ಅರ್ಧಂಬರ್ಧ ಬಣ್ಣ ಬಳಿದ, ಮುರಿದುಹೋದ ದುರ್ಗೆಯ ಮೂರು ಮೂರ್ತಿಗಳು ಸಹ ಇದ್ದವು.

ಮಡಕೆ, ʼದುಡ್ಡಿನ ಡಬ್ಬಿʼ, ಮಣ್ಣಿನ ಜಾಡಿ, ಲೋಟ ಮತ್ತು ಜೇಡಿಮಣ್ಣಿನ ಕಲಾಕೃತಿಗಳನ್ನು ಸಹ ಇವರು ತಯಾರಿಸುತ್ತಾರೆ.  ಮನೆಯ ಹೊರಗೆ, ಇಂತಹ ವಿವಿಧ ವಸ್ತುಗಳನ್ನು ಒಂದರಮೇಲೊಂದರಂತೆ ಅನಿಯಮಿತವಾಗಿ ರಾಶಿ ಹಾಕಲಾಗಿದೆ. ಪ್ರತಿಯೊಂದಕ್ಕೂ 10 ರೂ.ಗಳಿಂದ 300 ರೂ.ಗಳ ಬೆಲೆಯಿದೆ. “ಈಗ ಇವನ್ನು ಕೊಳ್ಳುವ ಜನರು ಕಡಿಮೆ. ಪ್ರತಿಯೊಬ್ಬರೂ ಸ್ಟೀಲ್‌ ಅಥವಾ ತಾಮ್ರದ ವಸ್ತುಗಳನ್ನು ಖರೀದಿಸುತ್ತಾರೆ” ಎಂದರು ಮಾಧವಿ.

ಶಂಕರ್‌, “ಇವುಗಳಿಂದ ಮಾಹೆಯಾನ 700ರಿಂದ 800 ರೂ.ಗಳಿಗಿಂತ ಹೆಚ್ಚಿನ ಆದಾಯವೇನಿಲ್ಲ. ಗಣೇಶ ಚತುರ್ಥಿ ಮತ್ತು ದೀಪಾವಳಿಯ ಗಳಿಕಯಿಂದ ಜೀವನ ಸಾಗಿಸುತ್ತೇವೆ” ಎಂದು ತಿಳಿಸಿದರು. ಇದು ವಿಫಲವಾದಲ್ಲಿ, ಇವರು ಹೆಚ್ಚಿನ ತೊಂದರೆಗೆ ಸಿಲುಕುತ್ತಾರೆ.

“ಏಳೆಂಟು ವರ್ಷಗಳ ಹಿಂದೆ, ಪ್ರತಿ ಆರು ತಿಂಗಳಿಗೊಮ್ಮೆ ಸುಮಾರು 500 ಮಟ್ಕಗಳನ್ನು (ಮಡಕೆ) ನಾವು ತಯಾರಿಸುತ್ತಿದ್ದೆವು. ಆದರೀಗ, 100-150 ಮಟ್ಕಗಳನ್ನು ಮಾತ್ರವೇ ತಯಾರಿಸುತ್ತಿದ್ದೇವೆ” ಎಂದರವರು. ಹಿಂದಿನ ವರ್ಷ, ಈ ಪರಿವಾರವು, 500 ಮಡಕೆ, 200 ಹೂವಿನ ಕುಂಡ ಮತ್ತು ಕೆಲವು ಮಣ್ಣಿನ ವಸ್ತುಗಳನ್ನು ಮಾರಾಟಮಾಡಿತು. ಶಂಕರ್‌ ಅವರ ಅಂದಾಜಿನಂತೆ, 2019ರಲ್ಲಿ ಇದರಿಂದ ದೊರೆತ ಆದಾಯ, 11,000 - 13,000 ರೂ.ಗಳು. ಈ ವರ್ಷ ಅವರು ಕೇವಲ 200 ಮಟ್ಕಗಳನ್ನು ಮತ್ತು 150 ಹೂವಿನ ಕುಂಡಗಳನ್ನಷ್ಟೇ ಮಾರಾಟಮಾಡಿದ್ದಾರೆ. ಇವುಗಳಲ್ಲಿನ ಬಹುತೇಕ ಸರಕುಗಳು ಲಾಕ್‌ಡೌನ್‌ಗಿಂತಲೂ ಮೊದಲು ಮಾರಾಟವಾದವುಗಳು.

'We put our faith in god and create these idols every year', Shankar says. 'But this year, there seems to be no god, only lockdown and viruses'
PHOTO • Amrutha Kosuru
'We put our faith in god and create these idols every year', Shankar says. 'But this year, there seems to be no god, only lockdown and viruses'
PHOTO • Amrutha Kosuru

‘ದೇವರಲ್ಲಿ ನಂಬಿಕೆಯಿಟ್ಟು, ಪ್ರತಿ ವರ್ಷವೂ ಈ ವಿಗ್ರಹಗಳನ್ನು ರೂಪಿಸುತ್ತೇವೆ. ಆದರೆ, ಈ ವರ್ಷ ದೇವರಿದ್ದಂತೆ ಕಾಣುತ್ತಿಲ್ಲ. ಕೇವಲ ಲಾಕ್‌ಡೌನ್‌ ಮತ್ತು ವೈರಸ್‌ಗಳೇ’

ಮಾಧವಿ, ತನ್ನ ಇಬ್ಬರು ಮಕ್ಕಳ ಕುರಿತು ಚಿಂತೆಗೀಡಾಗಿದ್ದಾರೆ. ಜೇಡಿಮಣ್ಣನ್ನು ಮುದ್ದೆ ಮಾಡುತ್ತ ಅವರು ಹೀಗೆಂದರು: “ಈ ಆನ್‌ಲೈನ್‌ ತರಗತಿಗಳು ಅವರಿಗೆ ಸಾಕಷ್ಟು ಜ್ಞಾನವನ್ನು ಒದಗಿಸುವುದಿಲ್ಲ.” ಆಕೆಯ ಮಕ್ಕಳು ಓದುತ್ತಿರುವ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಯು ಲಾಕ್‌ಡೌನ್‌ ಸಮಯದಲ್ಲಿ ಎರಡು ತಿಂಗಳವರೆಗೆ ಮುಚ್ಚಿದ್ದರೂ ಸಹ ಮಾಸಿಕ ಶುಲ್ಕವನ್ನು ಪಾವತಿಸಬೇಕೆಂದು ಪದೇ ಪದೇ ಒತ್ತಾಯಿಸಿತು. “ಆದರೆ ನಮಗೆ ಪಾವತಿಸಲು ಸಾಧ್ಯವಾಗಲಿಲ್ಲ” ಎಂದರು ಮಾಧವಿ.

ಅವರಿಗೆ ಹೇಗೆ ತಾನೇ ಸಾಧ್ಯ? 7ನೇ ತರಗತಿಯಲ್ಲಿರುವ 13 ವರ್ಷದ ಗೋಪಿನಾರಾಯಣನ್‌ ಹಾಗೂ 3ನೇ ತರಗತಿಯಲ್ಲಿನ 8ರ ವಯಸ್ಸಿನ ಶ್ರವಣ ಕುಮಾರ್‌ ಅವರುಗಳ 8,೦೦೦ ಹಾಗೂ 4,5೦೦ ರೂ.ಗಳ ಶುಲ್ಕವನ್ನೊಳಗೊಂಡಂತೆ, ಇಬ್ಬರು ಗಂಡುಮಕ್ಕಳ ವಾರ್ಷಿಕ ಶುಲ್ಕ 1.5 ಲಕ್ಷ ರೂ.ಗಳು..

“ಬಹುತೇಕ ಪ್ರತಿ ವರ್ಷವೂ ನನ್ನ ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸುಮಾರು 70,000-80,000 ರೂ.ಗಳ ಸಾಲವನ್ನು ಪಡೆಯುತ್ತೇವೆ” ಎನ್ನುತ್ತಾರೆ ಶಂಕರ್‌. ಸಾಮಾನ್ಯವಾಗಿ, ಬಡ್ಡಿಯ ಪಾವತಿಯನ್ನು ತಪ್ಪಿಸಲು, ಸಂಬಂಧಿಕರು ಅಥವಾ ಸ್ನೇಹಿತರಿಂದ ಇವರು ಸಾಲವನ್ನು ಪಡೆಯುತ್ತಾರೆ.

5-6 ಅಡಿಗಳ ಎತ್ತರವಿದ್ದು, 10,000 - 12,000 ರೂ. ಬೆಲೆಯ ಜೇಡಿಮಣ್ಣಿನ ಬೃಹತ್‌ ವಿಗ್ರಹಗಳನ್ನು ಸಹ ಶಂಕರ್‌ ಮತ್ತು ಅವರ ಪರಿವಾರದವರು ತಯಾರಿಸುತ್ತಾರೆ. “ಪೊಲೀಸರು ಬೃಹತ್‌ ವಿಗ್ರಹಗಳನ್ನು ಹೊರಭಾಗದಲ್ಲಿ ಇಡಬಾರದೆಂದು ತಿಳಿಸಿದ್ದಾರೆ. ಹೀಗಾಗಿ, ಅವುಗಳಿಗೂ ಬೇಡಿಕೆಯಿಲ್ಲ. ಬೃಹತ್‌ ವಿಗ್ರಹಗಳು ನಮಗೆ ಉತ್ತಮ ಲಾಭವನ್ನು ತರುತ್ತವೆ” ಎಂದ ಅವರು ವಿಷಾದದ ನಗೆ ಬೀರಿದರು.

ಮುಖ್ಯ ರಸ್ತೆಯಿಂದ ಪ್ರತ್ಯೇಕಗೊಂಡಿರುವ ಕುಂಬಾರರ ಬೀದಿಯು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಗಮನಸೆಳೆದಿಲ್ಲವಷ್ಟೇ ಅಲ್ಲ, ಅಲ್ಲಿಗೆ ಭೇಟಿ ನೀಡುವವರೂ ಕಡಿಮೆ.

ಕುಂಬಾರರ ಬೀದಿಯ ಬಹುತೇಕ ಪ್ರದೇಶವನ್ನು ಸಕ್ರಿಯ ಕೊರೊನಾ ವೈರಸ್‌ ನಿಯಂತ್ರಿತ ವಲಯವೆಂದು ಘೋಷಿಸಲ್ಪಟ್ಟಾಗಿನಿಂದ ಇತ್ತೀಚಿನವರೆಗೆ, ಶಂಕರ್‌ ಅವರ ಹೊಸ ಭೇಟಿಗಾರರೆಂದರೆ, ಪೊಲೀಸರು ಮಾತ್ರ.

The potters in Kummari Veedhi make small and big Ganesha idols, and other items. But the four Kummara families in this lane – which had 30 potters' families 15 years ago – have seen their situation worsen through the lockdown
PHOTO • Amrutha Kosuru

ಕುಮ್ಮಾರಿ ಬೀದಿಯ ಕುಂಬಾರರು ಚಿಕ್ಕ ಹಾಗೂ ದೊಡ್ಡ ಗಾತ್ರದ ಗಣೇಶನ ಮೂರ್ತಿಗಳು ಮತ್ತು ಇತರೆ ವಸ್ತುಗಳನ್ನು ತಯಾರಿಸುತ್ತಾರೆ. 15 ವರ್ಷಗಳ ಹಿಂದೆ ಈ ಬೀದಿಯಲ್ಲಿ ಕುಂಬಾರರ 30 ಕುಟುಂಬಗಳಿದ್ದು, ಈಗ ಇಲ್ಲಿ ನೆಲೆಗೊಂಡಿರುವ ನಾಲ್ಕು ಪರಿವಾರಗಳ ಪರಿಸ್ಥಿತಿಯು ಲಾಕ್‌ಡೌನ್‌ ದೆಸೆಯಿಂದಾಗಿ ಬಿಗಡಾಯಿಸುತ್ತಿದೆ

“ಕೆಲವು ದಿನಗಳ ಹಿಂದೆ, ಮಡಕೆ ಹಾಗೂ ಮಣ್ಣಿನ ಇತರೆ ವಸ್ತುಗಳ ಮಾರಾಟವನ್ನು ನಿಲ್ಲಿಸುವಂತೆ ಅವರು ನನಗೆ ತಿಳಿಸಿದರು. ಇದು ಹಾಸ್ಯಾಸ್ಪದ. ಏಕೆಂದರೆ, ನನಗೆ ಗ್ರಾಹಕರೇ ಇಲ್ಲ. ವಾರದಲ್ಲಿ ಒಬ್ಬ ಗ್ರಾಹಕರು ದೊರೆಯಬಹುದು. ಆದರೆ ಅದೂ ಖಾತರಿಯಿಲ್ಲ” ಎನ್ನುತ್ತಾರೆ ಈತ. ಅಕ್ಕಯಪಲಂ ಮುಖ್ಯ ರಸ್ತೆಯಲ್ಲಿ, ಹಲವಾರು ಸಣ್ಣಪುಟ್ಟ ವರ್ಣರಂಜಿತ ಹಾಗೂ ಅಲಂಕೃತ ವಸ್ತುಗಳು ಮತ್ತು ದೀಪಗಳನ್ನು ಹರಡಿದ ಕೈಗಾಡಿಯೇ ಇವರ ‘ಅಂಗಡಿ.ʼ ದೊಡ್ಡ ಗಾತ್ರದ, ಜೇಡಿಮಣ್ಣಿನ ಅಲಂಕಾರಿಕ ವಸ್ತುಗಳನ್ನು ಇವರ ಮನೆಯ ಹೊರಭಾಗದ ಅಟ್ಟಣಿಗೆಗಳಲ್ಲಿ ಪೇರಿಸಲಾಗಿದೆ.

“ಆದರೀಗ ಪೊಲೀಸರು ಇವನ್ನು ಸಹ ಒಳಭಾಗದಲ್ಲಿಡುವಂತೆ ಹೇಳಿದ್ದಾರೆ. ಆದರೆ ಇವನ್ನು ಇಡುವುದಾದರೂ ಎಲ್ಲಿ?” ಎನ್ನುತ್ತಾರೆ ಶಂಕರ್‌.

“ಅನೇಕರಿಗೆ ಕುಂಬಾರಿಕೆಯು ನಿಕೃಷ್ಟವಾಗಿ ಕಾಣುತ್ತದೆ. ಆದರೆ ನಾವು ಅದರ ಮೇಲೆ ಭಾರಿ ಮೊತ್ತವನ್ನು ತೊಡಗಿಸಬೇಕು” ಎಂಬ ಶಂಕರ್‌ ಅವರ ಮಾತಿಗೆ, ಇದೊಂದು ರೀತಿಯ ಜೂಜಿನಂತೆ” ಎನ್ನುತ್ತಾ ಮಾಧವಿ ದನಿಗೂಡಿಸಿದರು.

ಕುಮ್ಮಾರಿ ಬೀದಿಯ ಕುಂಬಾರರು, ಪ್ರತಿ ವರ್ಷವೂ, ಒಂದು ಲಾರಿಯಷ್ಟು ಮಣ್ಣನ್ನು (ಸುಮಾರು 4-5 ಟನ್ನುಗಳು), 15,000 ರೂ.ಗಳಿಗೆ ಕೊಳ್ಳುತ್ತಾರೆ. ಈ ಜೇಡಿಮಣ್ಣು ಹಾಗೂ ಇತರೆ ಪದಾರ್ಥಗಳಿಗಾಗಿ ಶಂಕರ್‌, ಸ್ಥಳೀಯ ಸಾಲದಾತರಿಂದ ವಾರ್ಷಿಕ 26% ಬಡ್ಡಿಗೆ ಹಣವನ್ನು ತರುತ್ತಾರೆ. ಗಣೇಶ ಚತುರ್ಥಿ ಮತ್ತು ದೀಪಾವಳಿಯ ಕೊನೆಗೆ, ವಿಗ್ರಹಗಳು ಮತ್ತು ದೀಪಗಳ ಮಾರಾಟದ ಸಂಪಾದನೆಯಿಂದ ಈ ಹಣವನ್ನು ಹಿಂದಿರುಗಿಸುತ್ತಾರೆ. “ಈ ಕಾಲದಲ್ಲಿ ನಾನು ಸಾಕಷ್ಟು ಮಾರಾಟಮಾಡದಿದ್ದಲ್ಲಿ, ನನಗೆ ಹಣವನ್ನು ಹಿಂದಿರುಗಿಸಲಾಗುವುದಿಲ್ಲ” ಎಂದು ಅವರು ಚಿಂತಾಕ್ರಾಂತರಾಗಿ ನುಡಿದರು.

ಮಣ್ಣಿಗೆ ನೀರನ್ನು ಬೆರೆಸಿ, ತಮ್ಮ ಕಾಲುಗಳಿಂದ ತುಳಿಯುವ ಮೊದಲು ಅವರು ಅದನ್ನು 2-3 ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸುತ್ತಾರೆ. ಸಾಮಾನ್ಯವಾಗಿ, ಮಾಧವಿಯವರು ತುಳಿಯುವ ಕೆಲಸವನ್ನು ನಿರ್ವಹಿಸುತ್ತಾರೆ. “ಆ ಕೆಲಸವು ಗಂಟೆಗಟ್ಟಲೆ ಹಿಡಿಯುತ್ತದೆ. ಇದರ ನಂತರ, ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಅಚ್ಚುಗಳಿಂದ ವಿಗ್ರಹಗಳಿಗೆ ಆಕಾರವನ್ನು ನೀಡಲಾಗುತ್ತದೆ. ಮೊದಲಿಗೆ, ಅಚ್ಚುಗಳು 2-4 ವರ್ಷಗಳವರೆಗೆ ಬಾಳಿಕೆ ಬರುತ್ತಿದ್ದವು. ಆದರೀಗ ಅವುಗಳ ಗುಣಮಟ್ಟ ಕಳಪೆಯಾಗಿದ್ದು, ಪ್ರತಿ ವರ್ಷವೂ ಅವನ್ನು ಬದಲಿಸಬೇಕಾಗುತ್ತದೆ. ಪ್ರತಿ ಅಚ್ಚಿನ ಬೆಲೆ ಸುಮಾರು 1,000 ರೂ.ಗಳು” ಎಂದು ಆಕೆ ವಿವರಿಸಿದರು.

S. Srinivasa Rao’s house is filled with unpainted Ganesha idols. 'Pottery is our kula vruthi [caste occupation]...' says his wife S. Satyawati
PHOTO • Amrutha Kosuru
S. Srinivasa Rao’s house is filled with unpainted Ganesha idols. 'Pottery is our kula vruthi [caste occupation]...' says his wife S. Satyawati
PHOTO • Amrutha Kosuru

ಎಸ್‌, ಶ್ರೀನಿವಾಸರಾವ್‌ ಅವರ ಮನೆಯು ಬಣ್ಣ ಬಳಿಯದ ಗಣೇಶನ ಮೂರ್ತಿಗಳಿಂದ ತುಂಬಿಹೋಗಿದೆ. ʼಕುಂಬಾರಿಕೆಯು ನಮ್ಮ ಕುಲ ಕಸುಬುʼ ಎನ್ನುತ್ತಾರೆ ಅವರ ಪತ್ನಿ, ಎಸ್‌. ಸತ್ಯವತಿ

ಆಕಾರವನ್ನು ನೀಡಿದ ನಂತರ, ಒಂದು ವಾರದವರೆಗೆ ವಿಗ್ರಹಗಳನ್ನು ಒಣಗಿಸಿ, ಒಣಗಿದ ನಂತರ ಅವಕ್ಕೆ ಬಣ್ಣ ಬಳಿಯಲಾಗುತ್ತದೆ. “ಅವಶ್ಯವಿರುವ (ಹಬ್ಬದ ಕಾಲದಲ್ಲಿ) ಬಣ್ಣ ಹಾಗೂ ಇತರೆ ವಸ್ತುಗಳನ್ನು ಕೊಳ್ಳಲು ಸುಮಾರು 13,000-15,000 ರೂ.ಗಳನ್ನು ವ್ಯಯಿಸಬೇಕಾಗುತ್ತದೆ”

“ಸಾಮಾನ್ಯವಾಗಿ, ಜನರು ವಿಗ್ರಹಗಳಿಗಾಗಿ ಜೂನ್‌ನಿಂದಲೇ ಹಣವನ್ನು ಪಾವತಿಸತೊಡಗುತ್ತಾರೆ. ಆದರೆ ಏಪ್ರಿಲ್‌ನಿಂದಲೂ ನಮಗೆ ಆದಾಯವೇ ಇರಲಿಲ್ಲ. ಮಡಕೆ, ಹಾಗೂ ಇನ್ನಿತರೆ ವಸ್ತುಗಳಿಂದ ದೊರೆಯುವ ಸಣ್ಣಪುಟ್ಟ ಸಂಪಾದನೆಯೂ ಇಲ್ಲದಂತಾಗಿತ್ತು” ಎನ್ನುತ್ತಾರೆ ಶಂಕರ್‌.

ಕೆಲವು ಮನೆಗಳಾಚೆಗೆ ಎಸ್‌. ಶ್ರೀನಿವಾಸ ರಾವ್‌ ಅವರ ಮೂರು ಕೊಠಡಿಗಳ ಮನೆಯಿದೆ. ಈಗ, ಅದರ ಬಹುತೇಕ ಭಾಗವು, ಬಣ್ಣ ಬಳಿಯದ ಗಣೇಶನ ಮೂರ್ತಿಗಳಿಂದ ತುಂಬಿಹೋಗಿದೆ. ಕುಂಬಾರಿಕೆಯೊಂದಿಗೆ, 46ರ ವಯಸ್ಸಿನ ಶ್ರೀನಿವಾಸ ರಾವ್‌ ಅವರು 10-12 ವರ್ಷಗಳ ಹಿಂದೆ, ಹತ್ತಿರದ ಖಾಸಗಿ ಕಾಲೇಜೊಂದರಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು.

38 ವರ್ಷದ ಅವರ ಪತ್ನಿ ಎಸ್‌. ಸತ್ಯವತಿಯವರು, ಕುಂಬಾರಿಕೆಗೆ ಒತ್ತು ನೀಡಿದರು. “ಕುಂಬಾರಿಕೆಯು ನಮ್ಮ ಕುಲ ಕಸುಬು. ಅಲ್ಪಸ್ವಲ್ಪ ಸಂಪಾದನೆಯನ್ನಾದರೂ ಅದು ಒದಗಿಸುತ್ತಿದೆ. ನನಗೆ ವಿದ್ಯಾಭ್ಯಾಸವಿಲ್ಲ. ಮಡಕೆ, ದೀಪ ಹಾಗೂ ವಿಗ್ರಹಗಳನ್ನು ಮಾಡುವುದನ್ನು ಮಾತ್ರ ನಾನು ಕಲಿತಿದ್ದೇನೆ. ನನ್ನ 3 ಹೆಣ್ಣುಮಕ್ಕಳನ್ನೊಳಗೊಂಡಂತೆ, ನಮ್ಮದು 9 ಜನರ ಕುಟುಂಬ. ನಾವು ಕೇವಲ ಅವರ ಸಂಪಾದನೆಯನ್ನು ಅವಲಂಬಿಸುವಂತಿಲ್ಲ” ಎಂದರವರು.

ಚಿಕ್ಕ ಗಣೇಶನ ಮೂರ್ತಿಗಳನ್ನು ಮಾತ್ರವೇ ತಯಾರಿಸುತ್ತಿರುವ ಸತ್ಯವತಿಯವರು, ತಲಾ 30 ರೂ.ಗಳಿಗೆ ಅವನ್ನು ಮಾರುತ್ತಾರೆ. “ನಾವು ಭೇಟಿಯಾಗುವುದಕ್ಕೂ ಮೊದಲು, ಜುಲೈ ಮಧ್ಯಭಾಗದ 10 ದಿನಗಳಲ್ಲಿ ಅವರು 40 ಮೂರ್ತಿಗಳನ್ನು ತಯಾರಿಸಿದ್ದರು. ಸಾಮಾನ್ಯವಾಗಿ, ಹಬ್ಬದ ಕಾಲದಲ್ಲಿ ಇವುಗಳ ಮಾರಾಟದಿಂದ ಅವರಿಗೆ 3,000ರಿಂದ 4,000 ರೂ.ಗಳ ಲಾಭವು ದೊರೆಯುತ್ತದೆ.”

Along with pottery, Srinivasa Rao took a job as a clerk in a nearby private college 10-12 years ago
PHOTO • Amrutha Kosuru
Along with pottery, Srinivasa Rao took a job as a clerk in a nearby private college 10-12 years ago
PHOTO • Amrutha Kosuru

ಕುಂಬಾರಿಕೆಯ ಜೊತೆಗೆ, 10-12 ವರ್ಷಗಳ ಹಿಂದೆ ಶ್ರೀನಿವಾಸ ರಾವ್‌ ಅವರು ಹತ್ತಿರದ ಕಾಲೇಜೊಂದರಲ್ಲಿ, ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು

ಮೇ ತಿಂಗಳಿನಿಂದಲೂ ಅವರಿಗೆ 8,000 ರೂ.ಗಳ ತಮ್ಮ ಸಂಬಳವು ದೊರೆತಿರುವುದಿಲ್ಲ. ಜೂನ್‌ನಿಂದ ಅವರು ಕೆಲಸಕ್ಕೆ ತೆರಳುತ್ತಿದ್ದು, “ಈ ತಿಂಗಳು ನನ್ನ ಸಂಬಳವು ದೊರೆಯುತ್ತದೆಂಬ ಭರವಸೆಯಲ್ಲಿದ್ದೇನೆ” ಎಂದು ತಿಳಿಸಿದರು.

ತಮ್ಮ ಬಿಡುವಿನ ವೇಳೆಯಲ್ಲಿ ಅವರು, ವಿಗ್ರಹಗಳ ತಯಾರಿಕೆಯಲ್ಲಿ ತಮ್ಮ ಪತ್ನಿಗೆ ನೆರವಾಗುತ್ತಾರೆ. “ವಿಗ್ರಹಗಳು ಹೆಚ್ಚಿದ್ದಷ್ಟೂ, ಸಂಪಾದನೆಯು ಹೆಚ್ಚಾಗಿರುತ್ತದೆ” ಎನ್ನುವ ಅವರು, ವಿಗ್ರಹಗಳಿಗೆ ಬೇಡಿಕೆ(order)ಯಿಲ್ಲದಾಗ್ಯೂ, ಈ ವರ್ಷ ವಿಗ್ರಹಗಳನ್ನು ಮಾರುತ್ತೇವೆಂಬ ಭರವಸೆಯಲ್ಲಿದ್ದಾರೆ. “ಈಗ ಕೆಟ್ಟ ಕಾಲ. ಹೀಗಾಗಿ, ಅನೇಕರು ದೇವರನ್ನು ಪ್ರಾರ್ಥಿಸಿ, ಧಾರ್ಮಿಕ ವಿಧಿಗಳನ್ನು ನಡೆಸಬೇಕೆಂದಿದ್ದಾರೆ” ಎಂದು ತಿಳಿಸಿದರು.

ಸತ್ಯವತಿಯವರು 15 ಹಾಗೂ 16 ವರ್ಷದ ತಮ್ಮ ಹಿರಿಯ ಹೆಣ್ಣುಮಕ್ಕಳ ಬಗ್ಗೆ ಚಿಂತೆಗೀಡಾಗಿದ್ದಾರೆ. “ಅವರಿಬ್ಬರೂ 10ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈಗ ಕೇವಲ ಆನ್‌ಲೈನ್‌ ತರಗತಿಗಳಿದ್ದಾಗ್ಯೂ, ಅನೇಕ ಪದವಿ ಪೂರ್ವ ಕಾಲೇಜುಗಳು ಪ್ರತಿಯೊಬ್ಬರಿಗೂ ಸುಮಾರು 45,000 ರೂ.ಗಳ ಎಂದಿನ ವಾರ್ಷಿಕ ಶುಲ್ಕವನ್ನೇ ಆಗ್ರಹಿಸುತ್ತಿವೆ. ನಾವಿನ್ನೂ ಅವರನ್ನು ಎಲ್ಲಿಯೂ ದಾಖಲುಮಾಡಿಲ್ಲ. ಶುಲ್ಕವು ಕಡಿಮೆಯಾಗಬಹುದೆಂದು ಆಶಿಸುತ್ತಿದ್ದೇವೆ” ಎಂದು ಅವರು ಅಲವತ್ತುಕೊಂಡರು. 4ನೇ ತರಗತಿಯಲ್ಲಿರುವ 10 ವರ್ಷದ ತಮ್ಮ ಕಿರಿಯ ಮಗಳನ್ನು ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗೆ ಕಳುಹಿಸಲು ಇವರಿಗೆ ಒಂದು ವರ್ಷಕ್ಕೆ 25,000 ರೂ.ಗಳ ಖರ್ಚು ತಗುಲುತ್ತದೆ.

ಗಣೇಶ ಚತುರ್ಥಿ ಮತ್ತು ದೀಪಾವಳಿಯು ಇನ್ನೇನು ಪ್ರಾರಂಭವಾಗಲಿದೆ ಎನ್ನುವಾಗಿನ ಕುಮ್ಮಾರಿ ವೀಧಿಯ ಸಂತೋಷಭರಿತ ದಿನಗಳನ್ನು ಆಕೆ ನೆನಪಿಸಿಕೊಳ್ಳುತ್ತಾರೆ: “ಈ ಬೀದಿಯು ಉಲ್ಲಾಸದ ಸಡಗರ ಹಾಗೂ ಒದ್ದೆ ಮಣ್ಣಿನ ಘಮದಿಂದ ತುಂಬಿರುತ್ತಿತ್ತು. ಆದರೀಗ, ಕುಂಬಾರಿಕೆಯನ್ನು ನಡೆಸುತ್ತಿರುವ ಕೇವಲ ನಾಲ್ಕು ಕುಟುಂಬಗಳಷ್ಟೇ ಉಳಿದಿವೆ.”

ಹಬ್ಬದ ಈ ದಿನಗಳಲ್ಲಿ ಈ ಕುಟುಂಬಗಳು ಸಾಲದಲ್ಲಿ ಮುಳುಗುತ್ತವೆಯೇ ಹೊರತು, ಮುಳುಗುವುದು ಗಣೇಶನಲ್ಲ.

ಅನುವಾದ: ಶೈಲಜಾ ಜಿ.ಪಿ.

Amrutha Kosuru

Amrutha Kosuru is a 2022 PARI Fellow. She is a graduate of the Asian College of Journalism and lives in Visakhapatnam.

Other stories by Amrutha Kosuru
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.