ಮಾರ್ಚ್ 27ರಂದು ಮಧ್ಯರಾತ್ರಿ 1 ಗಂಟೆಗೆ ಹೀರಾ ಮುಕಾನೆ ಥಾಣೆ ಜಿಲ್ಲೆಯ ಶಹಾಪುರ ತಾಲೂಕಿನ ದಲ್ಖಾನ್ ಹಳ್ಳಿಯ ಹೊರವಲಯದಲ್ಲಿರುವ ಮನೆಗೆ ಆಗಮಿಸಿದರು. ಹೀರಾ ಅವರ ಮಗ ಮನೋಜ್ ಮತ್ತು ಸೊಸೆ ಶಾಲು 104 ಕಿಲೋಮೀಟರ್ ಪ್ರಯಾಣವನ್ನು ತಮ್ಮ ಕಾಲ್ನಡಿಗೆಯಲ್ಲಿ ಎಲ್ಲಿಯೂ ಸಣ್ಣ ವಿರಾಮ ಕೂಡ ತೆಗೆದುಕೊಳ್ಳದೆ ನಡೆದಿದ್ದರು. ಅವರು ಕೆಲಸಕ್ಕೆ ಹೋಗಿದ್ದ ಪಾಲ್ಘರ್ ಜಿಲ್ಲೆಯ ದಹನು ತಾಲೂಕಿನ ಗಂಜದ್ ಹಳ್ಳಿಯ ಬಳಿಯ ಇಟ್ಟಿಗೆ ಗೂಡಿನಿಂದ ವಾಪಸ್ ನಡೆದಿದ್ದರು.

“ಯಾವುದೂ ಗಾಡಿ ವ್ಯವಸ್ಥಾ ಇದ್ದಿರಲಿಲ್ರಿ, ಹಂಗಾಗಿ ನಾವು ಇಡೀ ದಿನಾನೂ ಹಂಗ ನಡಿದ್ವಿರ್ರಿ, ಯಾವಾಗ್ಲೂ ಸರ್ಕಾರಿ ಬಸ್ ಗಂಜದನಿಂದ ಶಹಾಪುರಕ್ಕ ಹೋಗುತ್ತ ರ್ರೀ" ಎಂದು 45 ವರ್ಷದ ಹೀರಾ ಎಲ್ಲವನ್ನು ವಿವರಿಸಿ ಹೇಳುತ್ತಿದ್ದರು. ಅವರು ಮಾರ್ಚ್ 26ರಂದು ಬೆಳಿಗ್ಗೆ 4 ಗಂಟೆಗೆ ಹೊರಟರು, ಹೀರಾ ಮತ್ತು ಶಾಲು ತಮ್ಮ ತಲೆಯ ಮೇಲೆ ಬಟ್ಟೆಯ ಮೂಟೆ ಮತ್ತು ಪಾತ್ರೆಗಳ ಚೀಲವನ್ನು ಹೊತ್ತುಕೊಂಡರು. ಮನೋಜ್ 21 ಗಂಟೆಗಳ ಪ್ರಯಾಣದಲ್ಲಿ 12 ಕಿಲೋ ಅಕ್ಕಿ ಚೀಲವನ್ನು ಮತ್ತು 8 ಕಿಲೋ ರಾಗಿ ಹಿಟ್ಟನ್ನು ಕೈಯಲ್ಲಿ ಇಟ್ಟುಕೊಂಡಿದ್ದರು. "ನಮಗ ಕಾಲು ನೋಯ್ಯುಂಗಿಲ್ಲ, ಯಾಕಂದ್ರ ನಮಗ ಸರ್ಕಾರಿ ಬಸ್ ಟೈಮಿಗೆ ಸರಿಯಾಗಿ ಬರದಿರುವುದರಿಂದ ಬಾಳ್ ದೂರದವರೆಗೆ ನಡೆದು ಅಭ್ಯಾಸ ಐತ್ರಿ. ಆದ್ರ ಏನೂ ಆದಾಯ ಇಲ್ಲದೇ ಇರೋದು ಈಗ ಬಾಳ್ ನೋವು ಆಗೇತ್ರಿ" ಎನ್ನುತ್ತಾ ಅವರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದರು.

ಹೀರಾ ಮಾರ್ಚ್ 2ರಂದು ಮನೆಯಿಂದ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡಲು  27 ವರ್ಷದ ಮನೋಜ್ 25 ವರ್ಷದ ಶಾಲು ಜೊತೆ ಹೊರಟಾಗ, ಅವರು ಈ ವರ್ಷ ಮೇ ತಿಂಗಳಲ್ಲಷ್ಟೇ ವಾಪಸ್ ಮರಳಲು ಯೋಜಿಸಿದ್ದರು. ಆದರೆ ಮಾರ್ಚ್ 24ರಂದು ಘೋಷಿಸಿದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಅವರ ವೇಳಾಪಟ್ಟಿ ಕಡಿತಗೊಂಡಿತು "ನಾವು , ಮಾರ್ಚಿಯಿಂದ  ಮೇ ತಿಂಗಳ ತನಕ ಕಡಿಮೆ ಅಂದ್ರು 50,000 ರೂ.ದುಡಿಬೇಕಂತ ಮಾಡಿದ್ವಿರ್ರಿ, ಆದ್ರ ನಮ್ಮ ಮಾಲಕ ಕೆಲಸ ಬಂದ್ ಮಾಡಿ, ನೀವು ವಾಪಸ್ ಮನಿಗೆ ಹೋಗ್ರಿ ಅಂತಾ ಹೇಳಿದ್ರು. ಮೂರು ವಾರ ದುಡಿದಿದ್ದಕ್ಕೆ ಅವರು ಬರಿ 8,000 ರೂ. ಕೊಟ್ಟಾರ್ರೀ” ಎಂದು ಹೀರಾ ಎಲ್ಲವನ್ನು ಕಥೆ ಮಾಡಿ ಪೋನ್ ಕರೆಯಲ್ಲಿ ವಿವರಿಸುತ್ತಿದ್ದರು.

ಹಾಗಾಗಿ ಮೂವರು ಮಾರ್ಚ್ ಅಂತ್ಯದಲ್ಲಿ ಅನಿರೀಕ್ಷಿತವಾಗಿ ದಲ್ಖಾನ್ ಗೆ ಹಿಂತಿರುಗಿದಾಗ, ಹೀರಾ ಅವರ ಪತಿ ವಿಠ್ಠಲ್ (52) ಮತ್ತು ಅವರ 15 ವರ್ಷದ ಮಗಳು ಸಂಗೀತಾ ಅವರನ್ನು ನೋಡಿ ಆಶ್ಚರ್ಯಚಕಿತರಾದರು. ಹೀರಾ ಅವರಿಗೆ ವಾಪಸ್ ಫೋನಿನಲ್ಲಿ ತಿಳಿಸಲು ಸಾಧ್ಯವಾಗಲಿಲ್ಲ. ಕುಡಗೋಲು-ಕಣ ರೋಗ (Sickle Cell Disease) ದಿಂದ ಬಳಲುತ್ತಿರುವ ಪತಿ ವಿಠ್ಠಲ್ ಅವರಿಗೆ ಯಾವುದೇ ದೈಹಿಕ ಶ್ರಮದ ಕೆಲಸ ಮಾಡಲು ಸಾಧ್ಯವಿಲ್ಲ, ಹೀಗಾಗಿ ಉಳಿದವರು ಗಂಜದಕ್ಕೆ ಹೋದಾಗ ಅವರು ಸಂಗೀತಾಳೊಂದಿಗೆ ಊರಲ್ಲೇ ಉಳಿದುಕೊಂಡಿದ್ದರು

ನಾನು ಜುಲೈ 2018ರಲ್ಲಿ ದಲ್ಖಾನಿನಲ್ಲಿ ಹೀರಾ ಅವರನ್ನು ಭೇಟಿಯಾಗಿದ್ದೆ, ಅವರು ಆ ರಾತ್ರಿ ತನ್ನ ಕುಟುಂಬಕ್ಕೆ ಭೋಜನವನ್ನು ತಯಾರಿಸಲು ಜಮೀನಿನಲ್ಲಿ ತರಕಾರಿಗಳನ್ನು ಕೀಳುತ್ತಿದ್ದರು. ಅವರು ಕಟ್ಕರಿ ಬುಡಕಟ್ಟು ಸಮುದಾಯಕ್ಕೆ ಸೇರಿದವರು, ಈ ಆದಿವಾಸಿ ಸಮುದಾಯವನ್ನು ಮಹಾರಾಷ್ಟ್ರದಲ್ಲಿ ವಿಶೇಷ ದುರ್ಬಲ ಬುಡಕಟ್ಟು ಗುಂಪಿನ ಪಟ್ಟಿಯಲ್ಲಿ ಸೇರಿಸಲಾಗಿದೆ.

Hira Mukane (with daughter Sangeeta; file photo) returned to Dalkhan village after just three weeks work at a brick kiln
PHOTO • Jyoti

ಹೀರಾ ಮುಕಾನೆ (ಮಗಳು ಸಂಗೀತಾ ಜೊತೆ; ಸಂಗ್ರಹ ಚಿತ್ರ ) ಇಟ್ಟಿಗೆ ಭಟ್ಟಿಯಲ್ಲಿ ಕೇವಲ ಮೂರು ವಾರಗಳ ಕೆಲಸದ ನಂತರ ದಲ್ಖಾನ್ ಗ್ರಾಮಕ್ಕೆ ಹಿಂತಿರುಗಿದರು

ಮನೆ ಬಿಟ್ಟು ಇಟ್ಟಿಗೆ ಗೂಡಿಗೆ ಹೋಗುವ ನಡೆ ಹೀರಾ ಕುಟುಂಬಕ್ಕೆ ಒಂದು ಮಹತ್ವದ ನಿರ್ಧಾರವಾಗಿತ್ತು -ಈ ಕೆಲಸದಲ್ಲಿ ಇದು ಅವರ ಮೊದಲ ಪ್ರಯತ್ನವಾಗಿತ್ತು. ಇತ್ತೀಚಿನವರೆಗೂ, ಅವರು ಭೂರಹಿತ ಕೃಷಿ ಕಾರ್ಮಿಕರಾಗಿ ತಮ್ಮ ಜೀವನವನ್ನು ಸಾಗಿಸಿದ್ದರು. ಆದರೆ ದಲ್ಖಾನ್‌ನ ಕೃಷಿ ಭೂಮಿ ಮಾಲೀಕರು ತಮ್ಮ ಭೂಮಿಯನ್ನು ಮುಂಬೈ-ನಾಗ್‌ಪುರ ಎಕ್ಸ್‌ಪ್ರೆಸ್‌ವೇಗಾಗಿ 2017ರಿಂದ 2019ರವರೆಗೆ ಮಾರಾಟ ಮಾಡಲು ಆರಂಭಿಸಿದಾಗ, ಇದು ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರಿತು.

"ನಮಗೂ ಒಂದ ವರ್ಷದಿಂದ ಹೊಲದಾಗ ಬಾಳ್ ಕೆಲಸ ಇಲ್ರಿ, ಹಂಗಾಗಿ ನಾವು ಇಟ್ಟಿಗೆಗೂಡಿಗೆ ಹೋಗಾಕ ನಿರ್ಧಾರ ಮಾಡಿದ್ವಿ, ಆದ್ರ ನಮ್ಮ ನಸೀಬ ಚೊಲೋ ಇಲ್ಲರ್ರಿ, ಯಾಕಂದ್ರ ಈ ಮಹಾಮಾರಿಯಿಂದ ನಾವು ಹೊಳ್ಳಿ ಬರಬೇಕಾಗಿ ಬಂತ್ ರ್ರೀ "ಎಂದು ಹೀರಾ ಹೇಳುತ್ತಿದ್ದರು.

ಹೀರಾ, ಮನೋಜ್ ಮತ್ತು ಶಾಲು ಕೃಷಿ ಕೂಲಿಯಿಂದ ಅವರ ಕುಟುಂಬದ ಜೀವನ ಸಾಗುತ್ತಿದೆ. ಜೊತೆಗೆ ಕೃಷಿ ಮತ್ತು ಸುಗ್ಗಿಯ ಕಾಲದಲ್ಲಿ ತಿಂಗಳಿಗೆ ಸರಿಸುಮಾರು 20 ದಿನಗಳವರೆಗೆ ದಿನಕ್ಕೆ 100 ರೂ. ಕೃಷಿ ಕೂಲಿ ಸಿಗುತ್ತದೆ. ಅವರ ಒಟ್ಟು ಗಳಿಕೆಯು ತಿಂಗಳಿಗೆ ಸರಿ ಸುಮಾರು 5,000-6,000 ರೂಪಾಯಿಗಳಷ್ಟು. ಮನೋಜ್ ಕಟಾವಿನ ನಂತರ ಥಾಣೆ, ಕಲ್ಯಾಣ್ ಅಥವಾ ಮುಂಬೈನಲ್ಲಿ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಎರಡು ತಿಂಗಳು ಕೆಲಸ ಮಾಡುವುದರಿಂದ ಸರಿಸುಮಾರು 6,000 ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಸಂಪಾದಿಸುತ್ತಾರೆ. "ನಾನು ಎರಡು ತಿಂಗಳ ಹೊಕ್ಕೆನ್ರಿ ಮತ್ತ ಜೂನ್ ತಿಂಗಳ ಅನ್ನೋವಷ್ಟರಲ್ಲಿ ಮತ್ತ ವಾಪಸ್ ಬರ್ತೆನ್ರಿ. ನನಗ ಸಿಮೆಂಟಿನ್ಯಾಗ್ ಕೆಲ್ಸಾ ಮಾಡುದಕ್ಕಿಂತ ಹೊಲದಾಗ ಕೆಲ್ಸಾ ಮಾಡಾಕ್ ಬಾಳ್ ಇಷ್ಟಾ” ಎಂದು ಅವರು ನನಗೆ 2018ರಲ್ಲಿ ಹೇಳಿದ್ದರು.

ಕುಟುಂಬವು ತನ್ನ ಆದಾಯವನ್ನು ಅಕ್ಕಿ, ಎಣ್ಣೆ ಮತ್ತು ಉಪ್ಪಿನಂತಹ ಅಗತ್ಯಗಳಿಗೆ ಖರ್ಚು ಮಾಡುತ್ತದೆ, ಜೊತೆಗೆ ವಿಠ್ಠಲ್‌ ಅವರ ವೈದ್ಯಕೀಯ ವೆಚ್ಚಗಳು ಮತ್ತು ತಮ್ಮ ಹುಲ್ಲಿನ ಛಾವಣಿಯ ಒಂದು ಕೊಠಡಿಯಿರುವ ಮಣ್ಣಿನ ಮನೆಯ ವಿದ್ಯುತ್ ಬಿಲ್ಲಿಗೆ ಖರ್ಚು ಮಾಡುತ್ತದೆ. ವಿಠ್ಠಲ್ ತಿಂಗಳಿಗೆ ಎರಡು ಬಾರಿ ಶಹಾಪುರ ಉಪ-ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತಪೂರಣ ಮತ್ತು ತಪಾಸಣೆಗೆ ಒಳಗಾಗಬೇಕು ಮತ್ತು ಆಸ್ಪತ್ರೆಯಲ್ಲಿ ಔಷಧಗಳು ಖಾಲಿಯಾದಾಗ ತಮ್ಮ ಮಾತ್ರೆಗಳನ್ನು ಖರೀದಿಸಲು 300-400 ರೂ.ಗಳನ್ನು ಅವರು ತಿಂಗಳಿಗೆ ವ್ಯಯ ಮಾಡಬೇಕು.

ಕೋವಿಡ್ -19 ಲಾಕ್‌ಡೌನ್ ಘೋಷಿಸಿದಾಗ ಮತ್ತು ಥಾಣೆ ಮತ್ತು ಪಾಲ್ಘರ್‌ನ ಇಟ್ಟಿಗೆ ಗೂಡುಗಳಲ್ಲಿ ಕೆಲಸವನ್ನು ಸ್ಥಗಿತಗೊಳಿಸಲಾಯಿತು, ಆಗ 38 ವರ್ಷದ ಸಖಿ ಮೈತ್ರೇಯ (ಮೇಲಿನ ಮುಖಚಿತ್ರದಲ್ಲಿರುವವರು) ಮತ್ತು ಅವರ ಕುಟುಂಬ ಕೂಡ ದಹನು ತಾಲೂಕಿನ ಚಿಂಚಾಲೆಯ ಗ್ರಾಮದ ರಂದೋಳಪದ ಕುಗ್ರಾಮಕ್ಕೆ ಮರಳಿತು. ಅವರು ಫೆಬ್ರವರಿಯಿಂದ ಕೆಲಸ ಮಾಡುತ್ತಿದ್ದ ಥಾಣೆ ಜಿಲ್ಲೆಯ ಭಿವಂಡಿ ತಾಲೂಕಿನ ಗಣೇಶಪುರಿ ಗ್ರಾಮದ ಬಳಿ ಇರುವ ಇಟ್ಟಿಗೆ ಗೂಡುಗಳಿಂದ ಸುಮಾರು 70 ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದ್ದರು.

ಸಖಿಯ ಪತಿ ರಿಷ್ಯ, 47, ಮಗಳು ಸಾರಿಕಾ, 17, ಮತ್ತು ಮಗ ಸುರೇಶ್, 14 ಸೇರಿದಂತೆ ನಾಲ್ವರ ಕುಟುಂಬವು ರಂದೋಳಪದದಲ್ಲಿ ವಾಸಿಸುತ್ತಿರುವ ವಾರ್ಲಿ ಆದಿವಾಸಿ ಬುಡಕಟ್ಟಿನ 20 ಕುಟುಂಬಗಳಲ್ಲಿ ಇದು ಕೂಡ ಒಂದು. ಥಾಣೆ ಮತ್ತು ಪಾಲ್ಘರ್‌ನ ಹಲವಾರು ಬುಡಕಟ್ಟು ಕುಟುಂಬಗಳಂತೆ, ಅವರು ಪ್ರತಿ ವರ್ಷ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲು ವಲಸೆ ಹೋಗುತ್ತಾರೆ.

Sakhi Maitreya and her family, of Randolpada hamlet, went to work at a brick kiln in February this year: 'Last year we couldn’t go because we feared that the earthquake would destroy our hut. So we stayed back to protect our home' (file photos)
PHOTO • Jyoti
Sakhi Maitreya and her family, of Randolpada hamlet, went to work at a brick kiln in February this year: 'Last year we couldn’t go because we feared that the earthquake would destroy our hut. So we stayed back to protect our home' (file photos)
PHOTO • Jyoti

ಸಖಿ ಮೈತ್ರೇಯ ಮತ್ತು ರಂದೋಳಪದ ಕುಗ್ರಾಮದಲ್ಲಿನ  ಅವರ ಕುಟುಂಬವು ಈ ವರ್ಷ ಫೆಬ್ರವರಿಯಲ್ಲಿ ಇಟ್ಟಿಗೆ ಗೂಡಿಗೆ ಕೆಲಸಕ್ಕೆ ಹೋಗಿದ್ದರು: 'ಹ್ವಾದ ವರ್ಷ ನಮಗ ಹೋಗಾಕ ಆಗಲಿಲ್ಲ, ಯಾಕಂದ್ರ ಭೂಕಂಪದಿಂದ ನಮ್ಮ ಗುಡಿಸಲು ಹಾಳ್ ಆಗತೈತಿ ಅಂತಾ ಅಂದು ನಾವು ಹೆದರಿದ್ವಿ. ಹಂಗಾಗಿ ನಮ್ಮ ಮನಿ ಉಳಿಸ್ಕೊಬೇಕು ಅಂತಾ ಅನ್ಕೊಂಡು ನಾವು ಮತ್ತ ಹಂಗ ಇಲ್ಲೇ ಉಳಕೊಂಡ್ವಿ' ಎಂದು ಹೇಳುತ್ತಿದ್ದರು. (ಸಂಗ್ರಹ ಚಿತ್ರಗಳು)

ಈ ಹಿಂದೆ ಪಾಲ್ಘರ್ 2014ರಲ್ಲಿ ಪ್ರತ್ಯೇಕ ಜಿಲ್ಲೆಯಾಗುವ ಮೊದಲು ಥಾಣೆ ಜಿಲ್ಲೆಯ ಒಂದು ಭಾಗವಾಗಿತ್ತು, ಒಟ್ಟು ಜಿಲ್ಲೆಯ ಪರಿಶಿಷ್ಟ ಪಂಗಡದ ಜನಸಂಖ್ಯೆಯು 1,542,451 -ಇದು ಒಟ್ಟು ಜನಸಂಖ್ಯೆಯ ಶೇಕಡಾ 13.95 ರಷ್ಟಿತ್ತು (2011 ರ ಜನಗಣತಿ). ಮಾ ಠಾಕೂರ್, ಕಟ್ಕರಿ, ವಾರ್ಲಿ, ಮಲ್ಹಾರ್ ಕೋಲಿ ಮತ್ತು ಇತರ ಬುಡಕಟ್ಟುಗಳು ಈ ಜಿಲ್ಲೆಗಳ ಕಾಡುಗಳಲ್ಲಿ ಮತ್ತು ಸುತ್ತಮುತ್ತ 330,000 ಹೆಕ್ಟೇರ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಪ್ರತಿ ವರ್ಷ, ಥಾಣೆ ಮತ್ತು ಪಾಲ್ಘರ್‌ನಿಂದ ಆದಿವಾಸಿ ಕೃಷಿ ಕಾರ್ಮಿಕರು ಮಳೆಗಾಲದಲ್ಲಿ ಕೃಷಿ ಮಾಲೀಕರು ಬೆಳೆದ ಬೆಳೆಗಳನ್ನು ಕಟಾವು ಮಾಡಿದ ನಂತರ ನವೆಂಬರ್‌ನಲ್ಲಿ ವಲಸೆ ಹೋಗುತ್ತಾರೆ. ಮುಂದಿನ ಮುಂಗಾರು ಬರುವವರೆಗೂ ಅವರಲ್ಲಿ ಹೆಚ್ಚಿನವರು ಇಟ್ಟಿಗೆ ಗೂಡುಗಳಿಗೆ ಹೋಗುತ್ತಾರೆ.

ಸಖಿಯ ಕುಟುಂಬ ಸಾಮಾನ್ಯವಾಗಿ ಗೂಡುಗಳಲ್ಲಿ ಇಟ್ಟಿಗೆಗಳನ್ನು ತಯಾರಿಸುವುದರ ಮೂಲಕ ವರ್ಷಕ್ಕೆ 60,000-70,000 ರೂ.ಸಂಪಾದನೆ ಮಾಡುತ್ತದೆ "ಹ್ವಾದ ವರ್ಷ ನಮಗ ಹೋಗಾಕ ಆಗಲಿಲ್ಲ, ಯಾಕಂದ್ರ ಭೂಕಂಪ ಆಗಿ ನಮ್ಮ ಗುಡಿಸಲು ನಾಶ ಆಗತೈತಿ ಅಂತಾ ಅಂದು ನಾವು ಹೆದರಿದ್ವಿ. ಹಂಗಾಗಿ ನಮ್ಮ ಮನಿ ಉಳಿಸ್ಕೊಬೇಕು ಅಂತಾ ಅನ್ಕೊಂಡು ನಾವು ಮತ್ತ ಹಂಗೆ ಇಲ್ಲೇ ಉಳಕೊಂಡ್ವಿ' ಎಂದು ಹೇಳುತ್ತಿದ್ದರು" ಎಂದು ಸಖಿ ನನಗೆ ಫೋನ್ ಮೂಲಕ ಹೇಳಿದರು.

ಮಾರ್ಚ್ 2019ರಲ್ಲಿ ನಾನು ಅವರನ್ನು ಭೇಟಿಯಾದಾಗ, ಅವರ ಕಲ್ನಾರಿನ ಛಾವಣಿಯ ಇಟ್ಟಿಗೆ ಮನೆಯ ಗೋಡೆಗಳು ಒಂದು ಸಣ್ಣ ಭೂಕಂಪದಿಂದಾಗಿ ಬಿರುಕು ಬಿಟ್ಟಿದ್ದವು. 1,000ಕ್ಕಿಂತ ಹೆಚ್ಚು ಬಾರಿ ಇಲ್ಲಿ ಇಂತಹ ಭೂಕಂಪನಗಳಾಗಿವೆ. ಇದು 2018ರ ನವೆಂಬರ್‌ನಿಂದ ಪಾಲ್ಘರ್‌ನ ದಹನು ಮತ್ತು ತಲಸಾರಿ ತಾಲೂಕುಗಳನ್ನು ತಲ್ಲಣಗೊಳಿಸುತ್ತಿತ್ತು. ರಿಕ್ಟರ್ ಮಾಪನದಲ್ಲಿ 4.3 ತೀವ್ರತೆಯ ಭೂಕಂಪವು ಅದುವರೆಗಿನ ಪ್ರಬಲ ಭೂಕಂಪವಾಗಿ ಆ ತಿಂಗಳು ದಹನುವಿಗೆ ಅಪ್ಪಳಿಸಿತ್ತು. ಆದ್ದರಿಂದ ರಂದೋಳಪದದಲ್ಲಿನ ವಾರ್ಲಿ ಕುಟುಂಬಗಳು 2019 ರಲ್ಲಿ ಇಟ್ಟಿಗೆ ಗೂಡುಗಳಲ್ಲಿನ ಕೆಲಸಕ್ಕೆ ಹೋಗಲಿಲ್ಲ ಮತ್ತು ತಮ್ಮ ಮನೆಗಳನ್ನು ನೋಡಿಕೊಳ್ಳಲು ಉಳಿದುಕೊಂಡರು.

ಈ ವರ್ಷ, ಸಖಿ ಮತ್ತು ಅವರ ಕುಟುಂಬವು ಫೆಬ್ರವರಿಯಲ್ಲಿ ಇಟ್ಟಿಗೆ ಗೂಡಿನ ಕೆಲಸಕ್ಕೆ ಹೋದರು, ಆದರೆ ಲಾಕ್‌ಡೌನ್ ಘೋಷಿಸಿದ ನಂತರ ಎರಡು ತಿಂಗಳೊಳಗೆ ಹಿಂದಿರುಗಬೇಕಾಯಿತು. ಮಾರ್ಚ್ 27ರಂದು ಸೂರ್ಯೋದಯಕ್ಕೂ ಮೊದಲು, ಅವರು ಗಣೇಶಪುರಿಯಿಂದ ತಮ್ಮ ಬಟ್ಟೆ, ಪಾತ್ರೆಗಳು ಮತ್ತು 10 ಕಿಲೋ ಅಕ್ಕಿ ಎಲ್ಲವನ್ನೂ ತಮ್ಮ ತಲೆಯ ಮೇಲೆ ಹೊತ್ತು ಪಯಣವನ್ನು ಆರಂಭಿಸಿದರು. “ಇಟ್ಟಿಗೆಗೂಡಿನ ಮಾಲಕರು ಭಟ್ಟಿ ಮುಚ್ಚಿದ್ರು, ಈಗ ಅವ್ರು ನಾವು ಕೆಲ್ಸಾ ಮಾಡಿದ ಏಳು ವಾರದ ಪಗಾರ ಕೊಟ್ಟಾರ ಆದ್ರ, ನಮಗ ಇನ್ನೂ ಜಾಸ್ತಿ ಬೇಕಾಗಿತ್ತು. ಹ್ವಾದ ವರ್ಷನೂ ಏನು ಗಳಿಸಿಲ್ಲ. ಇಡೀ ಒಂದ ವರ್ಷದ ಮಟ 20,000 ರೂ.ದಾಗ ಏನು ಮಾಡಾಕ್ ಆಗುತ್ತ ಹೇಳಿ " ಎಂದು ಸಖಿ ವಿವರಿಸುತ್ತಿದ್ದರು. ಇಟ್ಟಿಗೆಗೂಡು ಬಿಡಲು ಮಾಲಕರೇಕೆ ಹೇಳಿದ್ದು ಎನ್ನುವ ವಿಚಾರದ ಬಗ್ಗೆ ಆಕೆಗೆ ತಿಳಿದಿದೆಯೇ? ಎನ್ನುವ ಪ್ರಶ್ನೆ ಎದುರಾಗಿದ್ದಕ್ಕೆ ಅವರು "ಕೆಲವು ವೈರಸ್ ಇವೆ, ಆದ್ದರಿಂದ ಜನರು ಪರಸ್ಪರ ದೂರವಿರಬೇಕು"ಎಂದು ಹೇಳಿದರು.

Bala and Gauri Wagh outside their rain-damaged home in August 2019
PHOTO • Jyoti

ಬಾಲಾ ಮತ್ತು ಗೌರಿ ವಾಘ್ 2019ರ ಆಗಸ್ಟ್‌ನಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಯ ಮುಂದೆ ನಿಂತಿರುವುದು

ಮಳೆಗಾಲದಲ್ಲಿ ಕೃಷಿ ಮಾಲೀಕರು ಬೆಳೆದ ಬೆಳೆಗಳನ್ನು ಕೊಯ್ಲು ಮಾಡಿದ ನಂತರ, ಥಾಣೆ ಮತ್ತು ಪಾಲ್ಘರ್‌ನಿಂದ ಆದಿವಾಸಿ ಕೃಷಿ ಕಾರ್ಮಿಕರು ನವೆಂಬರ್‌ನಿಂದ ವಲಸೆ ಹೋಗುತ್ತಾರೆ. ಮುಂದಿನ ಮುಂಗಾರು ಬರುವವರೆಗೂ ಅವರಲ್ಲಿ ಹೆಚ್ಚಿನವರು ಇಟ್ಟಿಗೆ ಗೂಡುಗಳಿಗೆ ಹೋಗುತ್ತಾರೆ

ಪಾಲ್ಘರ್‌ನ ವಿಕ್ರಮಗಡ ತಾಲೂಕಿನಲ್ಲಿ, 48 ವರ್ಷದ ಬಾಲಾ ವಾಘ್, ಮತ್ತು ಅವರ ಕಟ್ಕರಿ ಬುಡಕಟ್ಟಿನ ಇತರ ಜನರು ಬೋರಂಡೆ ಗ್ರಾಮದಲ್ಲಿ ತಮ್ಮ ಮನೆಗಳನ್ನು ಪುನರ್ ನಿರ್ಮಿಸುವ ಆಶಯವನ್ನು ವ್ಯಕ್ತಪಡಿಸಿದ್ದರು, ಅದು ಆಗಸ್ಟ್ 2019 ರಲ್ಲಿ ಭಾರೀ ಮಳೆಯಿಂದಾಗಿ ಕುಸಿದಿದ್ದವು. ಪ್ರವಾಹದ ನಂತರ, ಬಾಲಾ ಅವರ ಆರು ಸದಸ್ಯರ ಕುಟುಂಬ-ಅವರ ಪತ್ನಿ 36 ವರ್ಷದ ಗೌರಿ, ಮೂರು ಹದಿಹರೆಯದ ಹೆಣ್ಣು ಮಕ್ಕಳು ಮತ್ತು ಒಂಬತ್ತು ವರ್ಷದ ಮಗ- ಪ್ಲಾಸ್ಟಿಕ್ ಟಾರ್ಪ್‌ಗಳ ತಾತ್ಕಾಲಿಕ ಛಾವಣಿಯೊಂದಿಗೆ ಹಾನಿಗೊಳಗಾದ ಮನೆಯಲ್ಲಿ ವಾಸಿಸುತ್ತಿದ್ದರು.

ಶಹಾಪುರ ತಾಲೂಕಿನ ತೆಂಭಾರೆ ಗ್ರಾಮದ ಬಳಿ ಇರುವ ಇಟ್ಟಿಗೆ ಭಟ್ಟಿಯಲ್ಲಿ ಕೆಲಸಕ್ಕೆ ಹೋದ ಅವರು, ತಮ್ಮ ಮನೆಯನ್ನು ಸರಿಪಡಿಸಲು ಸಾಕಷ್ಟು ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದರು. "ನಾವು ಮಾರ್ಚ್ 11ರಂದು ಅಲ್ಲಿಗೆ ಹೋದೆವು, ಮಾರ್ಚ್ 25ಕ್ಕೆ ವಾಪಾಸ್ ಮರಳಿದೆವು" ಎಂದು ಅವರು ನನಗೆ ಫೋನಿನಲ್ಲಿ ಹೇಳಿದರು. ಅವರು ಮನೆಗೆ ಮರಳಿ 58 ಕಿಲೋಮೀಟರ್ ದೂರ ನಡೆಯುವ ಸಮಯದಲ್ಲಿ, ಅವರ ಬಳಿ ಎರಡು ವಾರಗಳಲ್ಲಿ ಗಳಿಸಿದ್ದ 5000 ರೂ.ಗಳಿದ್ದವು.

“ಈಗ ಎಲ್ಲಾನೂ ಮುಗಿದು ಹೋಯ್ತು ನೋಡ್ರಿ" ಎಂದು ಹತಾಶೆಯಿಂದ ಹೇಳಿದ ಬಾಲಾ ತನ್ನ ಕುಟುಂಬದ ಬಗ್ಗೆ ಚಿಂತಾಕ್ರಾಂತರಾಗಿದ್ದರು. "ಆಶಾ ತಾಯ್ (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ) ಬಂದಿದ್ದರು ಮತ್ತು ಅವ್ರು ನಮಗ ಸೋಪಿನಿಂದ ಕೈ ತೊಳಿರಿ ಮತ್ತು ದೂರ ಇರಿ ಅಂತಾ ಹೇಳ್ತಿದ್ರು. ಆದ್ರ ನನ್ನ ಕುಟುಂಬಕ್ಕ ಸರಿಯಾಗಿ ಮನಿನ ಇಲ್ಲದಿರುವಾಗ ಅದು ಹೆಂಗ್ ಸಾಧ್ಯ ಹೇಳಿ? ಈಗ ನಾವ್ ಸಾಯುವುದು ಬಾಳ್ ಚೊಲೋ ಅನಸಾಕ್ ಕುಂತೈತಿ ನೋಡ್ರಿ" ಎಂದು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದರು.‌

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ನೇರ ಲಾಭ ವರ್ಗಾವಣೆಯಯನ್ನು ಕೋವಿಡ್ -19 ಪರಿಹಾರ ಪ್ಯಾಕೇಜ್‌ನ ಭಾಗವಾಗಿ ಹಣಕಾಸು ಸಚಿವರು ಮಾರ್ಚ್ 26 ರಂದು ಘೋಷಿಸಿದ್ದರು, ಇದು ಬಾಲಾ ಅವರಲ್ಲಿ ಸ್ವಲ್ಪ ಭರವಸೆಯನ್ನು ಹುಟ್ಟು ಹಾಕಿದೆ. "ನಮ್ಮ ಊರಾಗ ಯಾರೋ ಇದರ ಬಗ್ಗೆ ಹೇಳಿದ್ರ ರ್ರೀ, ಆದ್ರ ನಂಗ ಯಾವುದಾದರೂ ಹಣ ಸಿಗುತ್ತಾ? ಯಾಕಂದ್ರ ನನ್ನ ಕಡೆ ಬ್ಯಾಂಕ್ ಖಾತೇನss ಇಲ್ಲರ್ರಿ" ಎಂದು ಅವರು ಹೇಳುತ್ತಿದ್ದರು.

ಅನುವಾದ - ಎನ್. ಮಂಜುನಾಥ್

Jyoti is a Senior Reporter at the People’s Archive of Rural India; she has previously worked with news channels like ‘Mi Marathi’ and ‘Maharashtra1’.

Other stories by Jyoti
Translator : N. Manjunath