“ಸಾಮಾನ್ಯ ದಿನದಲ್ಲಿ ನಾನು ಬಕೆಟ್ ಮತ್ತು ಬಿಂದಿಗೆಗಳಂತಹ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಲು ಬೈಸಿಕಲ್ ಮೂಲಕ 40-50 ಕಿಲೋಮೀಟರ್ ಸವಾರಿ ಮಾಡುತ್ತೇನೆ" ಎಂದು ಶಿವಕುಮಾರ್ ಹೇಳುತ್ತಾರೆ. ನಾಗಪಟ್ಟಿಣಂ ಜಿಲ್ಲೆಯ ಆದಿವಾಸಿ ಕುಗ್ರಾಮವಾದ ಅರಸೂರಿನಲ್ಲಿರುವ 33 ವರ್ಷದ ಈ ಯುವಕನಿಗೆ, ಆ ದಿನ ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗುತ್ತದೆ. ಬಣ್ಣ ಬಣ್ಣದ ಪ್ಲಾಸ್ಟಿಕ್ ಸರಕುಗಳನ್ನು ಹೊಂದಿರುವ ನವೀಕೃತ ಬೈಸಿಕಲ್‌ನಲ್ಲಿ, ಅವರು ಜೀವನೋಪಾಯಕ್ಕಾಗಿ ಮಾರಾಟ ಮಾಡುತ್ತಾರೆ, ಅದರ ಎಲ್ಲಾ ಬದಿಗಳಲ್ಲಿ ಸರಕುಗಳನ್ನು ಕಟ್ಟಲಾಗಿರುತ್ತದೆ.ಸಾಮಾನ್ಯ ದಿನಗಳಲ್ಲಿ ಅವರು 300-400 ರೂ.ಗಳನ್ನು ಗಳಿಸುತ್ತಾರೆ, ಇದರಿಂದ ಅವರ ಆರು ಸದಸ್ಯರ ಕುಟುಂಬವನ್ನು ಪೋಷಿಸಲು ಸಾಕಾಗುತ್ತದೆ ಎಂದು ಹೇಳುತ್ತಾರೆ.

ಇವು ಈಗ ಸಾಮಾನ್ಯ ದಿನಗಳಲ್ಲ

ಈಗ ಲಾಕ್‌ಡೌನಿನಿಂದಾಗಿ ಜೀವನದ ಆ ಕಾರ್ಯ ಚಟುವಟಿಕೆ ಸ್ಥಗಿತಗೊಂಡಿದೆ, ಮತ್ತು ಅದೇ ಅವರ ಕುಟುಂಬದ ಇದುವರೆಗಿನ ಆದಾಯದ ಮೂಲವಾಗಿತ್ತು. ಆದರೆ ಇಂತಹ ಕೋವಿಡ್ -19 ಬಿಕ್ಕಟ್ಟಿನ ಕಾರ್ಮೋಡದ ನಡುವೆಯೂ ಶಿವಕುಮಾರ್ ಭರವಸೆಯ ಆಶಾಕಿರಣವನ್ನು ಎದುರು ನೋಡುತ್ತಿದ್ದಾರೆ. "ಒಂದು ವೇಳೆ ವಾನವಿಲ್ ಇಲ್ಲದೆ ಹೋಗಿದ್ದರೆ, ನಾವು ಹಸಿವಿನಿಂದ ಬಳಲುತ್ತಿದ್ದೆವು" ಎಂದು ಹೇಳುತ್ತಾರೆ.

ತಮಿಳಿನಲ್ಲಿ ವಾನವಿಲ್ ಎಂದರೆ ‘ಕಾಮನಬಿಲ್ಲು’ ಎಂದರ್ಥ. ಇದು ಈ ಜಿಲ್ಲೆಯ ನಾಗಪಟ್ಟಣಂ ಬ್ಲಾಕ್‌ನ ಸಿಕ್ಕಲ್ ಗ್ರಾಮದಲ್ಲಿರುವ ಒಂದು ಪ್ರಾಥಮಿಕ ಶಾಲೆಯ ಹೆಸರಾಗಿದೆ. ಏಪ್ರಿಲ್ 21ರವರೆಗೆ 44 ಜನರಿಗೆ ಕರೋನವೈರಸ್ ಇರುವುದು ಧೃಡಪಟ್ಟಿದೆ, ಜೊತೆಗೆ ನಾಗಪಟ್ಟಿಣಂ ಈಗಾಗಲೇ ತಮಿಳುನಾಡಿನ ಕೋವಿಡ್-19 ಹಾಟ್‌ಸ್ಪಾಟ್‌ ಪ್ರದೇಶಗಳಲ್ಲಿ ಒಂದು ಎಂದು ಗುರುತಿಸಲಾಗಿದೆ.

ಈ ಶಾಲೆಯು ಮುಖ್ಯವಾಗಿ ಅಲೆಮಾರಿ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತದೆ ಮತ್ತು ತರಗತಿಗಳು ಮುಚ್ಚಲ್ಪಟ್ಟಿದ್ದರೂ ಸಹ ಅರಸೂರ್ ಮತ್ತು ಇತರ ಹಳ್ಳಿಗಳಲ್ಲಿನ ಕುಟುಂಬಗಳಿಗೆ ದಿನಸಿ ವ್ಯವಸ್ಥೆ ಮಾಡುವುದರಲ್ಲಿ ಬಳಕೆಯಾಗುತ್ತಿದೆ. ಒಂದೆಡೆ ಲಾಕ್‌ಡೌನ್‌ನ ಪ್ರಭಾವವು ತೀವ್ರವಾಗುತ್ತಿದ್ದಂತೆ, ಶಾಲೆಯು ಸಹಾಯ ಮಾಡುತ್ತಿರುವ ಕುಟುಂಬಗಳ ಸಂಖ್ಯೆ ಈಗ 1,228ಕ್ಕೆ ಏರಿದೆ. ಅದರಲ್ಲಿ ಸುಮಾರು 1,000 ಕುಟುಂಬಗಳು ಬಡ ಶೋಷಿತ ಸಮುದಾಯಕ್ಕೆ ಸೇರಿವೆ. ಆ ಮೂಲಕ ಇಲ್ಲಿರುವ ಸಾವಿರಾರು ಬಡ ಜನರಿಗೆ, ಈ ಶಾಲೆ ಈಗ ಅವರ ಆಹಾರ ಭದ್ರತೆಯ ಪ್ರಮುಖ ಕೇಂದ್ರವಾಗಿದೆ.

Vanavil school's volunteers are delivering groceries to 1,228 families from extremely marginalised groups in Arasur hamlet and villages of Nagapattinam block
PHOTO • Vanavil
Vanavil school's volunteers are delivering groceries to 1,228 families from extremely marginalised groups in Arasur hamlet and villages of Nagapattinam block
PHOTO • Vanavil

ವಾನವಿಲ್ ಶಾಲೆಯ ಸ್ವಯಂಸೇವಕರು ಅರಸೂರ್ ಕುಗ್ರಾಮ ಮತ್ತು ನಾಗಪಟ್ಟಿನಂ ಬ್ಲಾಕ್ ನ ಹಳ್ಳಿಗಳಲ್ಲಿರುವ 1,228 ಬಡ ಶೋಷಿತ ಸಮುದಾಯದ ಕುಟುಂಬಗಳಿಗೆ ದಿನಸಿ ತಲುಪಿಸುತ್ತಿದ್ದಾರೆ .

ವಾನವಿಲ್ ಇದು ಅಲೆಮಾರಿ ಗುಂಪುಗಳಿಗೆ ಸಹಾಯ ಮಾಡುವುದರೊಂದಿಗೆ ಪ್ರಾರಂಭವಾಯಿತು. ಇತರರು ಕೂಡ ತೊಂದರೆಯಲ್ಲಿದ್ದಿದ್ದರಿಂದಾಗಿ “ನೆರೆಯ ತಿರುಚ್ಚಿ (ತಿರುಚಿರಾಪಳ್ಳಿ) ಜಿಲ್ಲೆಯ ಹಳ್ಳಿಗಳಿಂದಲೂ ಸಹಾಯಕ್ಕಾಗಿ ಮನವಿಗಳು ಬಂದವು” ಎಂದು ಶಾಲಾ ನಿರ್ದೇಶಕಿ ಮತ್ತು ವಾನವಿಲ್ ನ ವ್ಯವಸ್ಥಾಪಕ ಟ್ರಸ್ಟಿಯಾಗಿರುವ 43 ವರ್ಷದ ಪ್ರೇಮಾ ರೇವತಿ ಹೇಳುತ್ತಾರೆ. ಈ ಶಾಲೆಯ ಶಿಕ್ಷಣ ಚಟುವಟಿಕೆಗಳು ನಾಗಪಟ್ಟಿಣಂ ಮತ್ತು ತಿರುವರೂರು ಜಿಲ್ಲೆಗಳನ್ನು ಸಹ ಒಳಗೊಂಡಿದೆ.

ಮಾರ್ಚ್ 24ರಂದು ಲಾಕ್‌ಡೌನ್ ಘೋಷಿಸಿದಾಗ, ವಾನವಿಲ್‌ನ 20 ಜನರನ್ನು ಹೊರತುಪಡಿಸಿ, ತಮ್ಮ ಕುಟುಂಬಗಳೊಂದಿಗೆ ಚೆನ್ನಾಗಿರುತ್ತಾರೆ ಎನ್ನುವ ಭರವಸೆಯೊಂದಿಗೆ ಹೆಚ್ಚಿನ ಶಾಲಾ ಮಕ್ಕಳನ್ನು ತಮ್ಮ ಮನೆಗಳಿಗೆ ಕಳುಹಿಸಿತು. ಆಗ ಕ್ಯಾಂಪಸ್‌ನಲ್ಲಿ ಕೇವಲ ಐವರು ಸಿಬ್ಬಂದಿ ಮಾತ್ರ ಉಳಿದಿದ್ದರು. ಇನ್ನು ಲಾಕ್‌ಡೌನ್ ಮುಂದುವರೆದಂತೆ, ಮನೆಗೆ ಹಿಂದಿರುಗಿದ ಮಕ್ಕಳು ಆರೋಗ್ಯವಾಗಿರುವುದಿಲ್ಲ, ಈ ಸತ್ವ ಪರೀಕ್ಷೆ ಮುಗಿದ ನಂತರ ಶಾಲೆಗೇ ಹಿಂತಿರುಗುವುದಿಲ್ಲ ಎನ್ನುವುದು ಶಾಲಾ ಪದಾಧಿಕಾರಿಗಳಿಗೆ ಮನವರಿಕೆಯಾದ ನಂತರ, ಈಗ ಅವರು ಕೇವಲ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಷ್ಟೇ ಅಲ್ಲದೆ, ಇದರ ವಿಸ್ತರಣೆಯ ಭಾಗವಾಗಿ ತೀರಾ ಹಿಂದುಳಿದ ಸಮುದಾಯದ ಮೇಲೆಯೂ ಕೇಂದ್ರೀಕರಿಸಿದ್ದಾರೆ.

ವಾನವಿಲ್ ಯಾವಾಗಲೂ ತನ್ನ ಶಿಕ್ಷಣ ಕಾರ್ಯಚಟುವಟಿಕೆಯನ್ನು ಎರಡು ಪರಿಶಿಷ್ಟ ಪಂಗಡ ಸಮುದಾಯಗಳ ಮೇಲೆ ಕೇಂದ್ರಿಕರಿಸಿದೆ: ಅದಿಯನ್ನರು (ಅಥಿಯನ್ನರು ಎಂದೂ ಉಚ್ಚರಿಸಲಾಗುತ್ತದೆ) ಮತ್ತು ನಾರಿಕುರಾವರ್ ಗಳು. ಆದಿಯನ್ನರನ್ನು ಹೆಚ್ಚಾಗಿ ಬೂಮ್ ಬೂಮ್ ಮಾಟ್‌ಕ್ಕಾರಾರ್ ಎಂದು ಕರೆಯಲಾಗುತ್ತದೆ (ಬಿಬಿಎಂ; ‘ಬೂಮ್ ಬೂಮ್’ಎನ್ನುವ ಧ್ವನಿಯೂ ಮಾಟ್‌ಕ್ಕಾರರ್ ಅಥವಾ ದನಪಾಲಕನ 'ಉರುಮಿ (ಮರಳು ಗಡಿಯಾರದ ಆಕಾರವನ್ನು ಹೊಂದಿರುವ ದ್ವಿಮುಖದ ಡ್ರಮ್') ಯಿಂದ ಬಂದಿದೆ. ಆ ಹೆಸರಿನ ಮೂಲವು ಅಲಂಕೃತ ಕೋಲೆ ಬಸವನ ಮೂಲಕ ಕಣಿ ಹೇಳುವ ವೃತ್ತಿಯಿಂದ ಬಂದಿದೆ. ಅವರಲ್ಲಿ ಕೆಲವೇ ಜನರು ಮಾತ್ರ ಅದನ್ನು ಈಗಲೂ ಅನುಸರಿಸುತ್ತಿದ್ದಾರೆ.

ತಮಿಳುನಾಡಿನಲ್ಲಿ 2011ರ ಜನಗಣತಿಗೆ ಅನುಗುಣವಾಗಿ ಉಲ್ಲೇಖಿಸಿರುವ ಕುಟುಂಬಗಳಿಗಿಂತಲೂ ಅಧಿಕವಾಗಿವೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ 10,000ಕ್ಕೂ ಹೆಚ್ಚು ಜನರಿದ್ದಾರೆ ಎಂದು ಸಮುದಾಯ ಸಂಸ್ಥೆಗಳು ಹೇಳುತ್ತಿವೆ. ಹೆಚ್ಚಿನವರು ತಮ್ಮನ್ನು ಅಥಿಯನ್ನರು ಎಂದು ಕರೆದುಕೊಳ್ಳುತ್ತಾರೆ, ಆದರೆ ಅನೇಕರಿಗೆ ಯಾವುದೇ ರೀತಿಯ ಸಮುದಾಯ ಪ್ರಮಾಣಪತ್ರಗಳಿಲ್ಲ. ಶಿವಕುಮಾರ್ ಸೇರಿದಂತೆ ಅರಸೂರ್‌ನಲ್ಲಿ ಕನಿಷ್ಠ 100 ಬಿಬಿಎಂ ಕುಟುಂಬಗಳಿವೆ-ಮತ್ತು ಈ ಸಮುದಾಯವು ಇಂದು ವನವಿಲ್ ಸಹಾಯದಿಂದ ಬದುಕುತ್ತಿದೆ.

ನರಿಕುರಾವರ್ಗಳು ಮೂಲತಃ ಬೇಟೆಗಾರರಾಗಿದ್ದಾರೆ. ಇವರನ್ನು ಬಹಳ ಹಿಂದೆಯೇ ಅತಿ ಹೆಚ್ಚು ಹಿಂದುಳಿದ ಸಮುದಾಯವೆಂದು ಪಟ್ಟಿ ಮಾಡಲಾಗಿದೆ ಮತ್ತು ಅದನ್ನು 2016ರಲ್ಲಿ ಪರಿಶಿಷ್ಟ ಪಂಗಡವಾಗಿ ಗುರುತಿಸಲಾಗಿದೆ. ವಾನವಿಲ್ಲಿನಲ್ಲಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಬೂಮ್ ಬೂಮ್ ಮಾಟ್‌ಕಾರಾರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

Prema Revathi (left) with some of Vanavil's residents. Most of the school's students have been sent home, but a few remain on the campus (file photos)
PHOTO • M. Palani Kumar
Prema Revathi (left) with some of Vanavil's residents. Most of the school's students have been sent home, but a few remain on the campus (file photos)
PHOTO • M. Palani Kumar

ಪ್ರೇಮಾ ರೇವತಿ (ಎಡಕ್ಕೆ) ವನವಿಲ್ ನಲ್ಲಿನ ಕೆಲವು ನಿವಾಸಿಗಳೊಂದಿಗೆ. ಶಾಲೆಯಲ್ಲಿನ ಬಹುತೇಕ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ, ಆದರೆ ಕೆಲವರು ಕ್ಯಾಂಪಸ್‌ನಲ್ಲಿಯೇ ಉಳಿದಿದ್ದಾರೆ (ಸಂಗ್ರಹ ಚಿತ್ರಗಳು )

ವಾನವಿಲ್ ಟ್ರಸ್ಟ್ ತಮ್ಮ ಕ್ಯಾಂಪಸ್‌ನಲ್ಲಿ ಮಕ್ಕಳ ಮನೆಯನ್ನು ನಡೆಸುವ ಮೂಲಕ ಬಿಬಿಎಂ ಮಕ್ಕಳ ಭಿಕ್ಷಾಟನೆ ತಡೆಯುವ ಕೆಲಸವನ್ನು ಮಾಡುತ್ತಿದೆ. ”ಅನೇಕ ಅಲೆಮಾರಿ ಬುಡಕಟ್ಟು ಜನಾಂಗದವರಂತೆ, ದೀರ್ಘಕಾಲದ ಬಡತನ, ಆರಂಭಿಕ ವಿವಾಹಗಳು, ಬಹು ಗರ್ಭಧಾರಣೆಗಳು, ಆಹಾರ ಪದ್ಧತಿಯಂತಹ ಸಂಯೋಜಿತ ಕಾರಣಗಳಿಂದಾಗಿ ಮಕ್ಕಳು ದೀರ್ಘಕಾಲದ ಅಪೌಷ್ಟಿಕತೆಗೆ ಗುರಿಯಾಗುತ್ತಾರೆ. ಆದ್ದರಿಂದ ಈಗ ನಾವು ಅವರ ಆರೋಗ್ಯದ ಬಗ್ಗೆಯೂ ಕೂಡ ಗಮನ ಹರಿಸುತ್ತೇವೆ" ಎಂದು ರೇವತಿ ಹೇಳುತ್ತಾರೆ.

16 ವರ್ಷ ವಯಸ್ಸಿನ 11ನೇ ತರಗತಿ ವಿದ್ಯಾರ್ಥಿನಿಯಾಗಿರುವ ಎಂ.ಆರತಿಗೆ ವಾನವಿಲ್ ಹಾಸ್ಟೆಲ್ ಅವಳ ಮನೆಯಾಗಿದೆ. “ಇದಕ್ಕಿಂತ ಉತ್ತಮವಾಗಿ ಹೇಳಲು ಬೇರೆ ಮಾರ್ಗವಿಲ್ಲ” ಎಂದು ಅವರು ಹೇಳುತ್ತಾರೆ. ಆದರೆ 11ನೇ ತರಗತಿಯ ವಿದ್ಯಾರ್ಥಿನಿ ಪ್ರಾಥಮಿಕ ಶಾಲೆಯಲ್ಲಿ ಮಾಡುವುದಾದರೂ ಏನು? ವಾನವಿಲ್ಲಿನಲ್ಲಿ ಬೋಧನೆ-ಪರ್ಯಾಯ ಕಲಿಕೆ ಮೂಲಕ ಕಲಿಸುವುದು 5ನೇ ತರಗತಿಯವರೆಗೆ ಮಾತ್ರ, ಇದು ವಸತಿ ಶಾಲೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಮತ್ತು ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಅಧ್ಯಯನ ಮಾಡುವ ಅಲೆಮಾರಿ ಸಮುದಾಯಗಳ ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸುತ್ತದೆ.ಆರತಿ 5ನೇ ತರಗತಿಯವರೆಗೆ ವಾನವಿಲ್‌ನಲ್ಲಿ ಓದಿದ್ದಾರೆ. ಅವರು ಈಗ ಸರ್ಕಾರಿ ಶಾಲೆಗೆ ಹೋಗುತ್ತಿದ್ದಾರೆ. ಆದರೆ ಆಕೆ ಪ್ರತಿದಿನ ಮನೆಗೆ ಹಿಂದಿರುಗುವಷ್ಟರಲ್ಲಿ ಸಂಜೆಯಾಗಿರುತ್ತದೆ.

ಈ ಶಾಲೆಯು ಕೇವಲ 15 ವರ್ಷದಷ್ಟು ಹಳೆಯದಾಗಿದೆ, ಮತ್ತು ಈಗಾಗಲೇ ಆರತಿಯ ಸಮುದಾಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಇದಕ್ಕೂ ಮೊದಲು ಬಹುತೇಕ ಮಕ್ಕಳು ತಮ್ಮ ಶಿಕ್ಷಣವನ್ನು 5ನೇ ತರಗತಿಯೊಂದಿಗೆ ಸೀಮಿತಗೊಳಿಸುತ್ತಿದ್ದನ್ನು ನೋಡಿದಲ್ಲಿ, ಈಗ ಇಲ್ಲಿ ಪ್ರಾಥಮಿಕ ಹಂತವನ್ನು ಮುಗಿಸಿದ ನಾಲ್ವರು ಹೆಚ್ಚಿನ ಅಧ್ಯಯನವನ್ನು ಮಾಡಿದ್ದಾರೆ, ಪದವಿ ಪಡೆದಿದ್ದಾರೆ ಮತ್ತು ಕೆಲಸವನ್ನು ಮಾಡುತ್ತಿದ್ದಾರೆ. ಇನ್ನೂ ಮೂರು ವಿದ್ಯಾರ್ಥಿಗಳು ಚೆನ್ನೈನ ವಿವಿಧ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

"ನನ್ನ ಸಮುದಾಯದ ಇತರ ಅನೇಕ ಮಹಿಳೆಯರಂತೆ ನಾನು ಹಾಗೆಯೇ ಕಳೆದುಹೋಗುತ್ತಿದ್ದೆ, ಆದರೆ ವಾನವಿಲ್ ನನ್ನ ಜೀವನವನ್ನು ಬದಲಾಯಿಸಿತು" ಎಂದು ಪ್ರಸ್ತುತ ಚೆನ್ನೈ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರಿಂಗ್ ಪದವೀಧರರಾದ ಪಿ. ಸುಧಾ ಹೇಳುತ್ತಾರೆ. ತನ್ನ ಸಮುದಾಯದಿಂದ ಮೊದಲ ಬಾರಿಗೆ ಮಹಿಳಾ ಪದವೀಧರರಾದ ನಾಲ್ಕು ವನವಿಲ್ ಹಳೆಯ ವಿದ್ಯಾರ್ಥಿಗಳಲ್ಲಿ ಸುಧಾ ಒಬ್ಬಳು. "ನಾನು ಇಲ್ಲಿಗೆ ಬಂದಾಗ ನನಗೆ ಇಲ್ಲಿ ಸಿಕ್ಕಂತಹ ವೈಯಕ್ತಿಕ ಕಾಳಜಿಯಿಂದಾಗಿ ಈಗ ಅಸಾಧ್ಯವಾದದ್ದನ್ನು ಸಾಧಿಸಲು ಸಹಾಯವಾಗಿದೆ" ಎಂದು ಅವರು ಸ್ಮರಿಸಿಕೊಳ್ಳುತ್ತಾರೆ.

Left: A Vanavil student prepares for a play. Right: Most of them are from the Boom Boom Maattukkarar community: 'The worst affected are children because they have lost their mid-day meals' (file photos)
PHOTO • M. Palani Kumar
Left: A Vanavil student prepares for a play. Right: Most of them are from the Boom Boom Maattukkarar community: 'The worst affected are children because they have lost their mid-day meals' (file photos)
PHOTO • M. Palani Kumar

ಎಡಕ್ಕೆ: ವಾನವಿಲ್ ವಿದ್ಯಾರ್ಥಿಯೊಬ್ಬ ನಾಟಕಕ್ಕೆ ಸಿದ್ಧನಾಗುತ್ತಿರುವುದು. ಬಲಕ್ಕೆ: ಅವರಲ್ಲಿ ಹೆಚ್ಚಿನವರು ಬೂಮ್ ಬೂಮ್ ಮಾಟ್‌ಕಾರರ್ ಸಮುದಾಯಕ್ಕೆ ಸೇರಿದವರು: 'ಈಗ ಮಕ್ಕಳು ಮಧ್ಯಾಹ್ನದ ಬಿಸಿ ಊಟವನ್ನು ತಪ್ಪಿಸಿಕೊಂಡಿರುವುದರಿಂದಾಗಿ ಅವರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ’ (ಸಂಗ್ರಹ ಚಿತ್ರಗಳು ).

ಲಾಕ್‌ಡೌನ್ ಪೂರ್ವದಲ್ಲಿ, 45 ನಿವಾಸಿಗಳು ಸೇರಿದಂತೆ 81 ಮಕ್ಕಳು ಇಲ್ಲಿ ಅಧ್ಯಯನ ಮಾಡುತ್ತಿದ್ದರು. ಮತ್ತು 102 ಸರ್ಕಾರಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳು ಇಲ್ಲಿ ಉಳಿದುಕೊಂಡಿದ್ದರು. ಈಗ ಈ ಟ್ರಸ್ಟ್ ಹಳ್ಳಿಗಳಲ್ಲಿ ಶಾಲಾ-ನಂತರದ ಕಲಿಕೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಕಲಿಕಾ ಕೇಂದ್ರಗಳನ್ನು ಆರಂಭಿಸಿದೆ, ಇದು 500 ಕ್ಕೂ ಹೆಚ್ಚು ಮಕ್ಕಳಿಗೆ ನೆರವಾಗುತ್ತಿದೆ, ಇದರಿಂದಾಗಿ ಅವರಿಗೆ ಪ್ರತಿ ಸಂಜೆ ಪೌಷ್ಠಿಕಾಂಶದ ತಿಂಡಿ ದೊರೆಯುತ್ತದೆ. ಈಗ ದಿನಸಿ ಸಾಮಾಗ್ರಿಗಳನ್ನು ನೇರವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ತಲುಪಿಸುತ್ತಿರುವುದರಿಂದಾಗಿ ಈ ಕೇಂದ್ರಗಳನ್ನು ಮುಖ್ಯವಾಗಿ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಸಂಗ್ರಹಿಸಲು ಬಳಸಲಾಗುತ್ತಿದೆ.

“ಅನೇಕ ಹಳ್ಳಿಗಳಲ್ಲಿ ಜನರು ದಿನಕ್ಕೆ ಒಂದೇ ಹೊತ್ತು ಊಟ ಮಾಡುತ್ತಾರೆ. ಈಗ ಮಕ್ಕಳು ಮಧ್ಯಾಹ್ನದ ಬಿಸಿಯೂಟ ತಪ್ಪಿಸಿಕೊಂಡಿರುವುದರಿಂದ ಅವರ ಮೇಲೆ ಇದು ಹೆಚ್ಚಿನ ಪರಿಣಾಮವನ್ನು ಬೀರಿದೆ. ವನವಿಲ್ ನಲ್ಲಿ ಬಹುತೇಕರು ಮನೆಗೆ ಹೋಗಿರುವುದರಿಂದಾಗಿ ಅವರಿಗೆ ಇಲ್ಲಿ ಊಟ ನೀಡಲು ಸಾಧ್ಯವಿಲ್ಲ” ಎಂದು ರೇವತಿ ಹೇಳುತ್ತಾರೆ. ಆದ್ದರಿಂದ ಇದಕ್ಕಾಗಿ ಅವರು ತುರ್ತು ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ, ಆದರೆ ಇದೆಲ್ಲವನ್ನೂ ಒಂದೇ ಶಾಲೆ ನಿರ್ವಹಿಸುವುದು ನಿಜಕ್ಕೂ ಕಷ್ಟಕರವಾಗಿದೆ, ಈಗ ಇದರ ವ್ಯಾಪ್ತಿ ವೇಗವಾಗಿ ವಿಸ್ತರಿಸುತ್ತಿದೆ ಮತ್ತು ಬಡ ಶೋಷಿತ ಕುಟುಂಬದ ಅನೇಕ ಜನರು ಈಗ ದಿನಸಿ ವಸ್ತುಗಳನ್ನು ಸ್ವೀಕರಿಸುತ್ತಿದ್ದಾರೆ.

ಈಗ ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು, ನಾಗಪಟ್ಟಿಣಂ ಮತ್ತು ತಿರುವರೂರಿನ ಒಂಬತ್ತು ಹಳ್ಳಿಗಳಲ್ಲಿ ಮತ್ತು ತಂಜಾವೂರು ಜಿಲ್ಲೆಯ ಒಂದು ಹಳ್ಳಿಯಲ್ಲಿ ಮುಖ್ಯವಾಗಿ ಅಲೆಮಾರಿ ಕುಟುಂಬಗಳ 1,288 ಜನರ ಅಗತ್ಯಗಳನ್ನು ಪೂರೈಸಲು ವಾನವಿಲ್ ನಿಧಿಸಂಗ್ರಹವನ್ನು ಪ್ರಾರಂಭಿಸಿದೆ. ಈಗ, ಇದು ತಿರುಚ್ಚಿ ಜಿಲ್ಲೆಯ ಕೆಲವು ಕುಟುಂಬಗಳಿಗೂ ತಲುಪುತ್ತಿದೆ. ಅವರು ನಾಗಪಟ್ಟಿಣಂನಲ್ಲಿ 20 ಮಂಗಳಮುಖಿಯರಿಗೆ ಮತ್ತು ಆ ಪುರಸಭೆಯಲ್ಲಿನ 231 ಸಫಾಯಿ ಕಾರ್ಮಿಕರಿಗೆ ಆಹಾರವನ್ನು ಒದಗಿಸಲು ಪ್ರಯತ್ನಿಸುತ್ತಿದ್ದಾರೆ.

ಕೋಲೆ ಬಸವನ ಮೂಲಕ ಕಣಿ ಹೇಳುವ ಬೂಮ್ ಬೂಮ್ ಮಾಟ್ಟುಕಾರರ ಮೂಲವ‌ನ್ನು ಪುರಾಣದ ಕಟ್ಟುಕಥೆಯಿಂದ ಮರೆ ಮಾಚಲಾಗಿದೆ. ತಮಿಳುನಾಡು ಅಥಿಯಾನ್ ಬುಡಕಟ್ಟು ಜನರ ಕಲ್ಯಾಣ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ರಾಜು ಹೇಳುವಂತೆ "ನಮ್ಮ ಪೂರ್ವಜರು ಶತಮಾನಗಳ ಹಿಂದೆ ಊಳಿಗಮಾನ್ಯ ಭೂಮಾಲೀಕರಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದರು. ಬರಗಾಲದ ಸಮಯದಲ್ಲಿ ತಮ್ಮ ಮೇಲಿನ ಅವಲಂಬನೆಯನ್ನು ತಪ್ಪಿಸಿಕೊಳ್ಳಲು ಅವರು ಹಸುಗಳು ಮತ್ತು ಎತ್ತುಗಳನ್ನು ನೀಡಿದರು" ಎಂದು ವಿವರಿಸುತ್ತಾರೆ. ಆದರೂ, ಬೂಮ್ ಬೂಮ್ ಮಾಟ್ಟುಕಾರರು ಎಂದೂ ಕೃಷಿಕರಾಗಿರಲಿಲ್ಲ ಎಂದು ಉಳಿದವರು ಹೇಳುತ್ತಾರೆ.

“ನಾವು ಹೆಚ್ಚಾಗಿ ಪ್ಲಾಸ್ಟಿಕ್ ಸಾಮಾನುಗಳು, ಅಥವಾ ದೃಷ್ಟಿಗೊಂಬೆಗಳನ್ನು ಮಾರುತ್ತೇವೆ.ಅಥವಾ ಇನ್ನಿತರ ಸಣ್ಣಪುಟ್ಟ ಮನೆಗೆಲಸಗಳನ್ನು ಮಾಡುತ್ತೇವೆ, ಆದರೆ ಈಗ ನಾವು ಶಿಕ್ಷಣದತ್ತ ಗಮನ ಹರಿಸುತ್ತಿದ್ದೇವೆ" ಎಂದು ರಾಜು ಹೇಳುತ್ತಾರೆ, ಈ ವಿಚಾರದಲ್ಲಿ ತನ್ನ ಸಮುದಾಯಕ್ಕೆ ವಾನವಿಲ್ ನೀಡಿರುವ ಕೊಡುಗೆಯನ್ನು ಅವರು ಸ್ಮರಿಸುತ್ತಾರೆ.

More than half of the primary school's students stay on the campus; it is also 'home' to 102 children attending government schools around Sikkal village (file photos)
PHOTO • M. Palani Kumar
More than half of the primary school's students stay on the campus; it is also 'home' to 102 children attending government schools around Sikkal village (file photos)
PHOTO • M. Palani Kumar

ಪ್ರಾಥಮಿಕ ಶಾಲೆಯ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿಯೇ ಇರುತ್ತಾರೆ; ಸಿಕ್ಕಲ್ ಗ್ರಾಮದ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳಿಗೆ ಹಾಜರಾಗುವ 102 ಮಕ್ಕಳಿಗೆ ‘ಮನೆ’ಯಂತಾಗಿದೆ (ಸಂಗ್ರಹ ಚಿತ್ರಗಳು )

“ಹಲವಾರು ಹಳ್ಳಿಗಳಲ್ಲಿ ನಮ್ಮ ಜನರಿಗೆ ಸುಲಭವಾಗಿ ಸಮುದಾಯ ಪ್ರಮಾಣಪತ್ರಗಳನ್ನು ಪಡೆಯುವುದು ದೀರ್ಘಕಾಲದ ಹೋರಾಟವಾಗಿ ಮುಂದುವರೆದಿದೆ' ಎಂದು ರಾಜು ಹೇಳುತ್ತಾರೆ. “ಅವರು ಎಂತಹ ಪ್ರಮಾಣಪತ್ರಗಳನ್ನು ಪಡೆಯಬೇಕು ಎನ್ನುವುದು ಕಂದಾಯ ವಿಭಾಗೀಯ ಅಧಿಕಾರಿಯ ಇಚ್ಛೆಯನ್ನು ಅವಲಂಬಿಸಿರುತ್ತದೆ" ಎಂದು ಪ್ರೇಮಾ ರೇವತಿ ಹೇಳುತ್ತಾರೆ.

2004ರ ಸುನಾಮಿಯ ನಂತರ ಕೇವಲ ಒಂದು ವರ್ಷದ ನಂತರ ವಾನವಿಲ್ ಅನ್ನು ಸ್ಥಾಪಿಸಲಾಯಿತು, ಅಲೆಮಾರಿ ಜನರ ವಿರುದ್ಧ ಅನೇಕ ಪರಿಹಾರ ಕಾರ್ಯಗಳಲ್ಲಾದ ತಾರತಮ್ಯದ ನಡುವೆ ಇದು ಹುಟ್ಟಿಕೊಂಡಿತು.ಅಂತಹ ಹಿನ್ನಲೆಯೊಂದಿಗೆ ಈಗ ಇದು 2015 ರ ಚೆನ್ನೈ ಪ್ರವಾಹ ಮತ್ತು 2018 ರ ಗಾಜಾ ಚಂಡಮಾರುತದ ನಂತರದ ವಿಪತ್ತು ಪರಿಹಾರಗಳಂತಹ ಪ್ರಯತ್ನಗಳಲ್ಲಿ ಇದುವರೆಗೆ ತೊಡಗಿಸಿಕೊಂಡು ಬಂದಿದೆ.

ಇನ್ನು ನಾಗಪಟ್ಟಿಣಂನಲ್ಲಿ 25 ವರ್ಷದ ಕೆ.ಆಂಟನಿ ಅಪ್ಪರಕುಡಿ ಕುಗ್ರಾಮದಲ್ಲಿ ಅಪರೂಪದ, ವಿದ್ಯಾವಂತ ವ್ಯಕ್ತಿ, ಇವರು ಎಂಜಿನಿಯರಿಂಗ್ ಡಿಪ್ಲೊಮಾವನ್ನು ಮುಗಿಸಿ ಟೆಲಿಕಾಂ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಡೀ ಕುಗ್ರಾಮ ಹಸಿವಿನಿಂದ ಬಳಲಿ ಹೋಗಿರುತ್ತಿತ್ತು, ಆದರೆ ಅವರಿಗೆ ವಾನವಿಲ್ ಮೇಲೆ ಅಪಾರ ನಂಬಿಕೆಯಿತ್ತು. "ನಮ್ಮಲ್ಲಿ ಕೆಲವು ಸಂಗೀತಗಾರರು ನಾದಸ್ವರಂ ಮತ್ತು ಥವಿಲ್ (ತಾಳವಾದ್ಯ) ನುಡಿಸುತ್ತಾರೆ. ಆದರೆ ಅವರು ದಿನಗೂಲಿಗಾಗಿ ದುಡಿಯುವವರಷ್ಟೇ, ಆದ್ದರಿಂದ ಈ ಸಮಯದಲ್ಲಿ ನಮಗೆ ನಿಜವಾಗಿಯೂ ಕಷ್ಟವಾಗಿದೆ” ಆದರೆ ಶಾಲೆ ಅವರಿಗೆ ಆತ್ಮವಿಶ್ವಾಸವನ್ನು ತುಂಬಿದೆ ಎಂದು ಆಂಟನಿ ಹೇಳುತ್ತಾರೆ.

“ನಾನು 11ನೇ ತರಗತಿ ಪರೀಕ್ಷೆಗಳನ್ನು ಬರೆದಿದ್ದೇನೆ ಮತ್ತು ಉತ್ತೀರ್ಣಳಾಗುತ್ತೆಳೆಂದು ನನಗೆ ತಿಳಿದಿದೆ. ಈಗ ನಾನು ಶಾಲೆ ಮುಗಿಸಿ ಶಿಕ್ಷಕರ-ತರಬೇತಿ ಕೋರ್ಸ್ ಮಾಡಬೇಕು ಎಂದುಕೊಂಡಿದ್ದೇನೆ." ಎಂದು ಆರತಿ ಹೇಳುತ್ತಾರೆ. ಬಹುಶಃ ವಾನವಿಲ್ ಭವಿಷ್ಯದಲ್ಲಿ ತಮ್ಮ ಬೋಧನಾ ಸಿಬ್ಬಂಧಿಗೆ ಸೇರಿಸಲು ಎದುರು ನೋಡುತ್ತಿರಬಹುದು.

ಮುಖಪುಟ ಚಿತ್ರ: ಎಂ. ಪಳನಿ ಕುಮಾರ್

ಅನುವಾದ: ಎನ್.ಮಂಜುನಾಥ್

Kavitha Muralidharan

Kavitha Muralidharan is a Chennai-based independent journalist and translator. She was earlier the editor of 'India Today' (Tamil) and prior to that headed the reporting section of 'The Hindu' (Tamil). She is a PARI volunteer.

Other stories by Kavitha Muralidharan
Translator : N. Manjunath