ಸಕಾಲದಲ್ಲಿ ರೋಗವನ್ನು ಪತ್ತೆಹಚ್ಚಿದ್ದಲ್ಲಿ, “ಅವರ ಈ ಭಾವಚಿತ್ರವು ಗೋಡೆಯ ಮೇಲಿರುತ್ತಿರಲಿಲ್ಲ. ಅವರು ಇಲ್ಲಿ ನಮ್ಮೊಂದಿಗಿರುತ್ತಿದ್ದರು” ಎಂದರು ಶೀಲ ತಾರೆ.

ಆಕೆಯ ಪತಿ, ಅಶೋಕ್‌ ಅವರ ನೀಲಿ ವರ್ಣದ ಹಿನ್ನೆಲೆಯಿದ್ದ ಭಾವಚಿತ್ರದ ಕೆಳಗೆ ಮರಾಠಿಯಲ್ಲಿ “ಮರಣ: ೩೦.೫.೨೦೨೦ ಎಂದು ಬರೆಯಲಾಗಿತ್ತು.”

ಪಶ್ಚಿಮ ಮುಂಬೈನ ಬಾಂದ್ರಾದಲ್ಲಿನ ಕೆ.ಬಿ. ಭಾಭಾ ಆಸ್ಪತ್ರೆಯಲ್ಲಿ ಅಶೋಕ್‌ ಕೊನೆಯುಸಿರೆಳೆದರು. ಕೋವಿಡ್‌ 19 ಸೋಂಕಿನಿಂದಾಗಿ ಅವರು ಮೃತಪಟ್ಟಿರಬಹುದೆಂದು ‘ಊಹಿಸಲಾಯಿತು.ʼ 46 ವರ್ಷದ ಇವರು, ಗ್ರೇಟರ್‌ ಮುಂಬೈ ಮುನಿಸಿಪಲ್‌ ಕಾರ್ಪರೇಷನ್ನಿನ (ಬಿ.ಎಂ.ಸಿ) ಸಫಾಯಿ ಕರ್ಮಚಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

40ರ ವಯಸ್ಸಿನ ಶೀಲಾ, ತಮ್ಮ ಕಣ್ಣೀರನ್ನು ತಡೆಯುವ ಪ್ರಯತ್ನದಲ್ಲಿದ್ದರು. ಪೂರ್ವ ಮುಂಬೈನ ಚೆಂಬೂರಿನಲ್ಲಿನ ಕೊಳೆಗೇರಿ ಪುನರ್ವಸತಿ ಪ್ರಾಧಿಕಾರದ ಕಟ್ಟಡದಲ್ಲಿ ಬಾಡಿಗೆಗೆ ಪಡೆದ 269 ಚದರಡಿಯ  ಮನೆಯಲ್ಲಿ ಮೌನ ನೆಲೆಸಿತ್ತು. ಆಕೆಯ ಪುತ್ರರಾದ ನಿಕೇಶ್‌, ಸ್ವಪ್ನಿಲ್‌ ಹಾಗೂ ಮಗಳು ಮನಿಷ, ತಾಯಿಯು ಮಾತನಾಡುವುದನ್ನೇ ಕಾಯುತ್ತಿದ್ದರು.

“ಏಪ್ರಿಲ್‌ 8 ಮತ್ತು 10ರ ಮಧ್ಯ ಭಾಗದಲ್ಲಿ, ಭಾಂಡುಪ್‌ನಲ್ಲಿನ ಇವರ ಚೌಕಿಯ ಮುಕದಮ್‌, ಕೋವಿಡ್‌-೧೯ ಸೋಂಕಿತರಾಗಿದ್ದು ತಿಳಿದುಬಂದಿತು, ಅವರು ಆ ಚೌಕಿಯನ್ನು ಮುಚ್ಚಿ, ಎಲ್ಲ ನೌಕರರಿಗೂ ನಹುರ್‌ ಚೌಕಿಯಲ್ಲಿ (ನಗರದ ಎಸ್‌ ವಿಭಾಗದಲ್ಲಿರುವ ಅದೇ ಪ್ರದೇಶ) ಕೆಲಸಕ್ಕೆ ಹಾಜರಾಗುವಂತೆ ತಿಳಿಸಿದರು. ಒಂದು ವಾರದ ನಂತರ ಉಸಿರಾಡಲು ತೊಂದರೆಯಾಗುತ್ತಿರುವುದಾಗಿ ಅಶೋಕ್‌ ತಿಳಿಸಿದರು.”

ಭಾಂಡುಪ್‌ನಲ್ಲಿನ ಅನೇಕ ಜಾಗಗಳಿಂದ ಕಸವನ್ನು ಸಂಗ್ರಹಿಸುವ ಟ್ರಕ್ ಕೆಲಸಗಾರರ ತಂಡದೊಂದಿಗೆ ಅಶೋಕ್‌ ಸಹ ಕೆಲಸವನ್ನು ನಿರ್ವಹಿಸುತ್ತಿದ್ದರು. ಅವರು ಯಾವುದೇ ಸುರಕ್ಷಾ ಸಾಧನಗಳನ್ನೂ ಧರಿಸುತ್ತಿರಲಿಲ್ಲ. ಅಲ್ಲದೆ ಅವರಿಗೆ ಸಕ್ಕರೆ ಖಾಯಿಲೆಯೂ ಇತ್ತು. ತಮ್ಮ ಖಾಯಿಲೆಯ ಲಕ್ಷಣಗಳ ಬಗ್ಗೆ ಮುಖ್ಯ ಮೇಲ್ವಿಚಾರಕರ ಗಮನಸೆಳೆಯಲು ಅವರು ಪ್ರಯತ್ನಿಸಿದರು. ಅನಾರೋಗ್ಯದ ರಜೆ ಹಾಗೂ ವೈದ್ಯಕೀಯ ತಪಾಸಣೆಗಾಗಿ ಅವರು ಮಾಡಿದ ಮನವಿಗಳನ್ನು ಉಪೇಕ್ಷಿಸಲಾಯಿತು. ತಾನು ಅಶೋಕ್‌ ಅವರ ಜೊತೆ ನಹುರ್‌ ಚೌಕಿಗೆ ತೆರಳಿದ ದಿನವನ್ನು ಶೀಲ ನೆನೆಸಿಕೊಳ್ಳುತ್ತಾರೆ.

“ಐದು ದಿನಗಳ ರಜೆಯನ್ನು ಮಂಜೂರುಮಾಡಬೇಕೆಂದು ಸಾಹೇಬರನ್ನು ಯಾಚಿಸಲು ನಾನು ಅವರೊಂದಿಗೆ ಹೋಗಿದ್ದೆ. ನಗದೀಕರಿಸಬಹುದಾದ ೨೧ ದಿನಗಳ ರಜೆಯೂ ಸಹ ಬಾಕಿಯಿತ್ತು. ಕುರ್ಚಿಯಲ್ಲಿ ಕುಳಿತಿದ್ದ ಸಾಹೇಬರು, ಪ್ರತಿಯೊಬ್ಬರೂ ರಜೆಯ ಮೇಲೆ ತೆರಳಿದರೆ, ಈ ಪರಿಸ್ಥಿತಿಯಲ್ಲಿ ಕೆಲಸ ಮಾಡುವವರು ತಾನೇ ಯಾರು?” ಎಂದರು.

ಹೀಗಾಗಿ, ಏಪ್ರಿಲ್‌ ಮತ್ತು ಮೇವರೆಗೂ ಅಶೋಕ್‌ ಕೆಲಸವನ್ನು ಮುಂದುವರಿಸಿದರು. ಇವರ ಸಹೋದ್ಯೋಗಿ, ಸಚಿನ್‌ ಬಂಕರ್‌ (ಅವರ ಕೋರಿಕೆಯ ಮೇರೆಗೆ ಹೆಸರನ್ನು ಬದಲಿಸಲಾಗಿದೆ.), ಕೆಲಸ ಮಾಡಲು ಅವರಿಗೆ ಕಷ್ಟವಾಗುತ್ತಿತ್ತು ಎಂದು ತಿಳಿಸಿದರು.

Sunita Taare (here with her son Nikesh) is still trying to get compensation for her husband Ashok's death due to a 'suspected' Covid-19 infection
PHOTO • Jyoti
Sunita Taare (here with her son Nikesh) is still trying to get compensation for her husband Ashok's death due to a 'suspected' Covid-19 infection
PHOTO • Jyoti

ತನ್ನ ಮಗ, ನಿಕೇಶ್‌ನೊಂದಿಗಿರುವ ಶೀಲ ತಾರೆ, ಕೋವಿಡ್‌-೧೯ನಿಂದ ಉಂಟಾದ ಸಾವು ಎಂದು ʼಊಹಿಸಲಾದʼ ತನ್ನ ಪತಿಯ ಸಾವಿನ ನಂತರದ ಪರಿಹಾರಕ್ಕಾಗಿ ಈಗಲೂ ಪ್ರಯತ್ನಿಸುತ್ತಿದ್ದಾರೆ.

“ಅಶೋಕ್‌ ಬಹಳ ಬೇಗ ಆಯಾಸಗೊಳ್ಳುತ್ತಿದ್ದರು. ಅವರಿಗೆ ಉಸಿರಾಡಲು ಕಷ್ಟವಾಗುತ್ತಿತ್ತು. ಆದರೆ ಸಾಹೇಬರು ನಮ್ಮ ಮಾತನ್ನು ಕೇಳದಿದ್ದರೆ ನಾವು ತಾನೇ ಏನು ಮಾಡಬಲ್ಲೆವು? ನಮ್ಮ ಚೌಕಿಯಲ್ಲಿನ ಗುತ್ತಿಗೆ ಕೆಲಸಗಾರರಾಗಲಿ, ಖಾಯಂ ನೌಕರರಾಗಲಿ ಯಾರಿಗೂ ಕೋವಿಡ್‌-೧೯ ತಪಾಸಣೆ ನಡೆಸಲಿಲ್ಲ. ಮುಕದಮ್‌ ಅವರ ತಪಾಸಣೆಯಲ್ಲಿ ಪಾಸಿಟಿವ್‌ ಎಂದು ತಿಳಿದುಬಂದಾಗ, ಈ ಯಾರಿಗಾದರೂ ಸೋಂಕಿನ ಲಕ್ಷಣಗಳಿರಬಹುದೇ ಎಂಬ ಬಗ್ಗೆ ಯಾರೂ ವಿಚಾರಿಸಲಿಲ್ಲ. ಬೇರೊಂದು ಚೌಕಿಯಲ್ಲಿ ಕೆಲಸಕ್ಕೆ ಹಾಜರಾಗುವಂತೆ  ನಮಗೆ ತಿಳಿಸಲಾಯಿತಷ್ಟೇ” ಎಂಬುದಾಗಿ ಸಚಿನ್‌, ದೂರವಾಣಿಯಲ್ಲಿ ನನಗೆ ತಿಳಿಸಿದರು (ಸಚಿನ್‌ ಹಾಗೂ ಇತರೆ ಕೆಲಸಗಾರರ ನೆರವಿನಿಂದ ಮುಕದಮ್‌ ಅವರ ಆರೋಗ್ಯವನ್ನು ಕುರಿತು ವಿಚಾರಿಸುವ ಸಲುವಾಗಿ, ಅವರನ್ನು ಸಂಪರ್ಕಿಸುವ ಈ ವರದಿಗಾರ್ತಿಯ ಪ್ರಯತ್ನಗಳು ಯಶಸ್ವಿಯಾಗಲಿಲ್ಲ.)

ಜುಲೈ ಕೊನೆಯ ವಾರದಲ್ಲಿ ಸಚಿನ್‌ ಹಾಗೂ ಆತನ ಸಹೋದ್ಯೋಗಿಗಳು ತಾವು ಕೆಲಸವನ್ನು ನಿರ್ವಹಿಸುವ ಪ್ರದೇಶದಲ್ಲಿನ ಬಿ.ಎಂ.ಸಿ. ಚಾಲಿತ ಶಿಬಿರದಲ್ಲಿ ಕೋವಿಡ್‌-19 ತಪಾಸಣೆಗೆ ಒಳಪಟ್ಟರು.”ನನಗೆ ಯಾವುದೇ ಲಕ್ಷಣಗಳಾಗಲಿ, ಖಾಯಿಲೆಯಾಗಲಿ ಇಲ್ಲ. ಆದರೆ, ಪರಿಸ್ಥಿತಿಯು ಗಂಭೀರವಾಗಿದ್ದ ಮಾರ್ಚ್‌-ಏಪ್ರಿಲ್‌ ತಿಂಗಳಲ್ಲಿ ನಮ್ಮನ್ನು ತಪಾಸಣೆಗೆ ಒಳಪಡಿಸಬೇಕಿತ್ತು” ಎಂದರು ಸಚಿನ್‌.

ಏಪ್ರಿಲ್‌ 5ರ ಹೊತ್ತಿಗೆ, ಎಸ್‌ ವಿಭಾಗದಲ್ಲಿ 12 ಕೋವಿಡ್‌ ಪಾಸಿಟಿವ್‌ ರೋಗಿಗಳಿದ್ದರು. ಏಪ್ರಿಲ್‌ 22ರ ವೇಳೆಗೆ ಈ ಸಂಖ್ಯೆ 103ಕ್ಕೇರಿತು. ಜೂನ್‌ 1ರಂದು ಅಶೋಕ್‌ ಸಾವಿಗೀಡಾದ ಮರುದಿನ, ವಿಭಾಗದಲ್ಲಿನ ರೋಗಿಗಳ ಸಂಖ್ಯೆ 1,705. ಜೂನ್‌ 16ರ ಹೊತ್ತಿಗೆ ಈ ಸಂಖ್ಯೆಯು 3,166ಕ್ಕೇರಿತು ಎಂಬುದಾಗಿ ಬಿ.ಎಂ.ಸಿ. ಆರೋಗ್ಯಾಧಿಕಾರಿಯೊಬ್ಬರು ಈ ವರದಿಗಾರ್ತಿಗೆ ತಿಳಿಸಿದರು.

ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದ ಕಾರಣ, ಮುಂಬೈನ ಎಲ್ಲ ವಿಭಾಗಗಳಲ್ಲೂ ಈ ಸಂಬಂಧಿತ ತ್ಯಾಜ್ಯವೂ ಸಹ ಹೆಚ್ಚುತ್ತಿತ್ತು. ಬಿ.ಎಂ.ಸಿ. ಘನ ತ್ಯಾಜ್ಯ ನಿರ್ವಹಣಾ ಇಲಾಖೆಯ ದತ್ತಾಂಶವು, ಮಾರ್ಚ್‌ 19ರಿಂದ 31ರವರೆಗೆ ಮುಂಬೈನಲ್ಲಿ 6414 ಕಿಲೋಗ್ರಾಂ ತೂಕದಷ್ಟು ಕೋವಿಡ್‌-19 ತ್ಯಾಜ್ಯವು ಸೃಷ್ಟಿಯಾಯಿತೆಂದು ತಿಳಿಸುತ್ತದೆ.

ಪ್ರತ್ಯೇಕಗೊಳಿಸದ ಈ ಕಸವು, ಮುಂಬೈನಲ್ಲಿ ಉತ್ಪಾದಿತಗೊಳ್ಳುವ ಭಾರಿ ಪ್ರಮಾಣದ ಟನ್ನುಗಟ್ಟಲೆಯ ಇತರೆ ತ್ಯಾಜ್ಯದೊಂದಿಗೆ ಬೆರೆತಿದ್ದು, ನಗರದಲ್ಲಿ ಕಸವನ್ನು ಸಾಗಿಸುವ ಸಫಾಯಿ ಕರ್ಮಚಾರಿಗಳ ಜವಾಬ್ದಾರಿಯೆನಿಸಿದೆ. “ಪ್ರತಿದಿನವೂ ನಮಗೆ ಕಸವನ್ನು ಸಂಗ್ರಹಿಸುವ ಜಾಗಗಳಲ್ಲಿ ಮುಖಗವಸು, ಕೈಗವಸು, ವಿಸರ್ಜಿತ ಹೀರುಹಾಳೆಗಳು  ಬೃಹತ್‌ ಪ್ರಮಾಣದಲ್ಲಿ ದೊರೆಯುತ್ತಿವೆ” ಎನ್ನುತ್ತಾರೆ ಸಚಿನ್‌.

ಅನೇಕ ಸಫಾಯಿ ಕರ್ಮಚಾರಿಗಳು ತಮ್ಮ ಆರೋಗ್ಯದ ನಿರಂತರ ಕಾಳಜಿಯ ನಿಟ್ಟಿನಲ್ಲಿ, ನಿಯತ ಆರೋಗ್ಯ ತಪಾಸಣೆಗಳು ಹಾಗೂ ಇದಕ್ಕೆಂದೇ ಮೀಸಲಾದ ಆಸ್ಪತ್ರೆಗಳಿಗೆ ಆಗ್ರಹಿಸುತ್ತಾರೆ. (ನೋಡಿ: ಅತ್ಯವಶ್ಯಕ ಸೇವೆಗಳು, ರಕ್ಷಣಾರ್ಹವಲ್ಲದ ಜೀವಗಳು ). ಆದರೆ, ಬಿ.ಎಂ.ಸಿ.ಯಲ್ಲಿನ 29,000 ಖಾಯುಂ ನೌಕರರು ಮತ್ತು ಕೆಲವು ದಸ್ತಾವೇಜುಗಳಲ್ಲಿ, ಕೋವಿಡ್‌ ಯೋಧರೆಂದು ಕರೆಯಲಾಗಿರುವ 6,500 ಗುತ್ತಿಗೆಯಾಧಾರಿತ ನೌಕರರನ್ನು ರಕ್ಷಣಾ ಸಾಧನಗಳು ಹಾಗೂ ವೈದ್ಯಕೀಯ ಸೌಲಭ್ಯಗಳಿಗೆ ಅರ್ಹರೆಂಬುದಾಗಿ ಪರಿಗಣಿಸಲಾಗಿಲ್ಲ.

'If he [Ashok] was diagnosed in time, he would have been here', says Sunita, with her kids Manisha (left), Nikesh and Swapnil
PHOTO • Jyoti

‘ಸಮಯಕ್ಕೆ ಸರಿಯಾಗಿ ಅವರ (ಅಶೋಕ್‌) ವೈದ್ಯಕೀಯ ತಪಾಸಣೆ ನಡೆಸಿದ್ದಲ್ಲಿ, ಅವರು ಇಲ್ಲಿರುತ್ತಿದ್ದರು’ ಎನ್ನುತ್ತಾರೆ, ತಮ್ಮ ಮಕ್ಕಳಾದ ಮನಿಷ (ಎಡಕ್ಕೆ), ನಿಕೇಶ್‌ ಮತ್ತು ಸ್ವಪ್ನಿಲ್‌ ಜೊತೆಗಿರುವ ಶೀಲ.

“ನಮ್ಮ ಬೇಡಿಕೆಗಳನ್ನೆಂದಿಗೂ ಪೂರೈಸಲಿಲ್ಲ. ಎಲ್ಲ ತೀತಿಯ ಮುನ್ನೆಚ್ಚರಿಕೆ ಹಾಗೂ ಕಾಳಜಿಗಳು ಅಮಿತಾಭ್‌ ಬಚ್ಚನ್‌ ಅಂತಹವರ ಕುಟುಂಬಗಳಿಗಷ್ಟೇ ಲಭ್ಯ. ಮಾಧ್ಯಮ ಹಾಗೂ ಸರ್ಕಾರದಿಂದ ಅವರಿಗೆ ಸಾಕಷ್ಟು ಕಾಳಜಿ ದೊರೆಯಿತು. ನಾವು ಕೇವಲ ಸಫಾಯಿ ಕರ್ಮಚಾರಿಗಳಷ್ಟೇ” ಎನ್ನುತ್ತಾರೆ ಎಂ ಪಶ್ಚಿಮ ವಿಭಾಗದ ಕಸದ ಲಾರಿಯಲ್ಲಿ ಕೆಲಸವನ್ನು ನಿರ್ವಹಿಸುವ 45ರ ವಯಸ್ಸಿನ ದಾದಾರಾವ್‌ ಪಾಟೇಕರ್‌.

“ನಮಗೆ ಮಾರ್ಚ್‌-ಏಪ್ರಿಲ್‌ನಲ್ಲಿ ಯಾವುದೇ ಮುಖಗವಸು, ಕೈಗವಸು ಅಥವ ಸ್ಯಾನಿಟೈಜ಼ರ್‌ ದೊರೆಯಲಿಲ್ಲ” ಎಂದರು ಸಚಿನ್‌. ತನ್ನ ಚೌಕಿಯ ಸಫಾಯಿ ಕರ್ಮಚಾರಿಗಳಿಗೆ ಎನ್‌95 ಮುಖಗವಸುಗಳು ದೊರೆತದ್ದು, ಮಾರ್ಚ್‌ ಕೊನೆಯ ವಾರದಲ್ಲಷ್ಟೇ. “ಇವು ಎಲ್ಲರಿಗೂ ದೊರೆಯಲಿಲ್ಲ. 55 ಜನ ನೌಕರರಲ್ಲಿ (ಎಸ್‌ ವಿಭಾಗದ; ಎಸ್‌ ನಹುರ್‌ ಚೌಕಿ) ಕೇವಲ 20-25 ಜನರಿಗೆ ಮಾತ್ರ ಮುಖಗವಸು, ಕೈಗವಸು ಮತ್ತು ನಾಲ್ಕೈದು ದಿನಗಳಲ್ಲೇ ಮುಗಿದು ಹೋಗುವ ೫೦ ಮಿಲಿಲೀಟರ್‌ನ ಸ್ಯಾನಿಟೈಜ಼ರ್‌ ಶೀಷೆ ದೊರೆಯಿತು. ನನ್ನನ್ನೂ ಒಳಗೊಂಡಂತೆ ಇತರೆ ನೌಕರರಿಗೆ ಮುಖಗವಸುಗಳು ದೊರೆತದ್ದು ಜೂನ್‌ನಲ್ಲಿ. ನಾವು ಮುಖಗವಸುಗಳನ್ನು ಒಗೆದು ಮರುಬಳಕೆ ಮಾಡುತ್ತೇವೆ. ಮುಖಗವಸು ಹಾಗೂ ಕೈಗವಸುಗಳು ಹರಿದಾಗ, ನಮ್ಮ ಮೇಲ್ವಿಚಾರಕರು, ಹೊಸ ಪೂರೈಕೆಗಾಗಿ 2-3 ವಾರಗಳವರೆಗೂ ಕಾಯುವಂತೆ ತಿಳಿಸುತ್ತಾರೆ” ಎಂದು ಸಹ ಅವರು ತಿಳಿಸಿದರು.

“ಸಫಾಯಿ ಕರ್ಮಚಾರಿಗಳು ಕೋವಿಡ್‌ ಯೋಧರು ಎಂದು ಜಪಿಸಿದರಷ್ಟೇ ಸಾಲದು. ಅವರಿಗೆ ರಕ್ಷಣೆ ಹಾಗೂ ಕಾಳಜಿ ದೊರೆಯುತ್ತಿದೆಯೇ? ಅವರು ಕೈಗವಸು ಮತ್ತು ಎನ್‌95 ಮುಖಗವಸಿಲ್ಲದೆಯೇ ಕೆಲಸ ನಿರ್ವಹಿಸುತ್ತಿದ್ದರು. ಸಫಾಯಿ ಕರ್ಮಚಾರಿಗಳ ಮರಣಾನಂತರ  ಅವರ ಕುಟುಂಬಗಳ ಜೀವನ ನಿರ್ವಹಣೆಯ ಬಗ್ಗೆ ಯಾರಿಗಾದರೂ ಕಾಳಜಿಯಿದೆಯೇ? ಎಂದು ಪ್ರಶ್ನಿಸುತ್ತಾರೆ ಶೀಲ. ತಾರೆ ಕುಟುಂಬವು ನವ್‌ ಬುದ್ಧ (Neo Buddist) ಸಮುದಾಯಕ್ಕೆ ಸೇರಿದೆ.

“ಮೇ ಕೊನೆಯ ವಾರದ ಹೊತ್ತಿಗೆ, ಅಶೋಕ್‌ ಅವರ ಪರಿಸ್ಥಿತಿ ಬಿಗಡಾಯಿಸಿತು. “ಆ ಹೊತ್ತಿಗೆ, ಅವರಿಗೆ ಜ್ವರವೂ ಕಾಣಿಸಿತು. 2-3 ದಿನಗಳ ಅಂತರದಲ್ಲಿ, ನಮ್ಮೆಲ್ಲರಿಗೂ ಜ್ವರ ಕಾಣಿಸಿಕೊಂಡಿತು. ಸ್ಥಳೀಯ (ಖಾಸಗಿ) ವೈದ್ಯರು, ಇದು ಸಾಮಾನ್ಯ ಜ್ವರವೆಂದು ತಿಳಿಸಿದರು. ಔಷಧಿಯಿಂದ ನಾವೆಲ್ಲರೂ ಗುಣಮುಖರಾದೆವಾದರೂ ಪಾಪಾ, ಇನ್ನೂ ಅಸ್ವಸ್ಥರಾಗಿಯೇ ಇದ್ದರು” ಎನ್ನುತ್ತಾರೆ ಪೂರ್ವ ಘಾಟ್ಕೋಪರ್‌ನ ಕಾಲೇಜೊಂದರಲ್ಲಿ ಬಿ.ಕಾಂ ವ್ಯಾಸಂಗದಲ್ಲಿ ನಿರತರಾಗಿರುವ 20ರ ವಯಸ್ಸಿನ ಮನಿಷ. ಕುಟುಂಬದವರಿಗೆ ಇದು ಕೋವಿಡ್‌ ಇರಬಹುದೆಂಬ ಸಂಶಯವಿತ್ತಾದರೂ, ಆ ಸಮಯದಲ್ಲಿ ಅನಿವಾರ್ಯವಾಗಿದ್ದ ವೈದ್ಯರ ಶಿಫಾರಸ್ಸಿನ ಹೊರತಾಗಿ, ಅಶೋಕ್‌, ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೊಳಗಾಗುವುದು ಸಾಧ್ಯವಿರಲಿಲ್ಲ.

ಮೇ 28ರ ಹೊತ್ತಿಗೆ ಜ್ವರವು ತಹಬಂದಿಗೆ ಬಂದಿದ್ದು, ದಣಿದಿದ್ದ ಅಶೋಕ್‌ ಮುಂಜಾನೆ 6ರಿಂದ ಮಧ್ಯಾಹ್ನ 2ರವರೆಗಿನ ತಮ್ಮ ಕೆಲಸದ ಪಾಳಿಯನ್ನು ಮುಗಿಸಿ ವಾಪಸ್ಸಾದರು. ಊಟ ಮಾಡಿ ಮಲಗಿ, ರಾತ್ರಿ 9ಕ್ಕೆ ಎದ್ದಾಗ ವಾಂತಿಯಾಗತೊಡಗಿದ ಅವರಿಗೆ “ಜ್ವರವು ಬಾಧಿಸುತ್ತಿದ್ದು, ತಲೆಸುತ್ತಿದಂತಾಗುತ್ತಿತ್ತು. ವೈದ್ಯರನ್ನು ಭೇಟಿಯಾಗಲು ನಿರಾಕರಿಸಿದ ಅಶೋಕ್‌, ನಿದ್ದೆಗೆ ಜಾರಿದರು” ಎಂಬುದಾಗಿ ಶೀಲ ಮಾಹಿತಿಯಿತ್ತರು.

ಮಾರನೆ ಬೆಳಿಗ್ಗೆ, ಮೇ 29ರಂದು, ಶೀಲ, ನಿಕೇಶ್‌, ಮನಿಷ ಮತ್ತು ಸ್ವಪ್ನಿಲ್‌, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. 10 ಗಂಟೆಯಿಂದ 1 ಗಂಟೆಯವರೆಗೂ ಇವರು ತಮ್ಮ ಮನೆಯಿಂದ ಹೆಚ್ಚು ದೂರವಿಲ್ಲದ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿದರು. “ನಾವು ಎರಡು ರಿಕ್ಷಾಗಳನ್ನು ಹಿಡಿದು, ಒಂದರಲ್ಲಿ ಪಾಪಾ ಮತ್ತು ಆಯಿ, ಮತ್ತೊಂದರಲ್ಲಿ ನಾವು ಮೂವರೂ ಪ್ರಯಾಣಿಸಿದೆವು” ಎಂದರು ಚೆಂಬೂರಿನ ಕಾಲೇಜೊಂದರಲ್ಲಿ ಬಿ.ಎಸ್‌ಸಿ. ಪದವಿ ವ್ಯಾಸಂಗದಲ್ಲಿ ನಿರತರಾಗಿರುವ 18 ವರ್ಷದ ಸ್ವಪ್ನಿಲ್‌.

Since June, the Taare family has been making rounds –first of the hospital, to get the cause of death in writing, then of the BMC offices for the insurance cover
PHOTO • Jyoti
Since June, the Taare family has been making rounds –first of the hospital, to get the cause of death in writing, then of the BMC offices for the insurance cover
PHOTO • Jyoti

ಜೂನ್‌ ತಿಂಗಳಿನಿಂದಲೂ ತಾರೆಯವರ ಕುಟುಂಬವು, ಸಾವಿಗೆ ಕಾರಣವನ್ನು ಲಿಖಿತದಲ್ಲಿ ಪಡೆಯಲು ಮೊದಲು ಆಸ್ಪತ್ರೆಗೆ, ನಂತರ ವಿಮಾ ಸೌಲಭ್ಯಕ್ಕಾಗಿ ಬಿ.ಎಂ.ಸಿ. ಕಛೇರಿಗೆ ಎಡತಾಕುತ್ತಲೇ ಇದೆ.

“ಪ್ರತಿಯೊಂದು ಆಸ್ಪತ್ರೆಯಲ್ಲೂ ಹಾಸಿಗೆಗಳು ಲಭ್ಯವಿಲ್ಲ ಎನ್ನುತ್ತಿದ್ದರು. ನಾವು ರಾಜವಾಡಿ ಆಸ್ಪತ್ರೆ, ಜಾಯ್‌ ಆಸ್ಪತ್ರೆ ಮತ್ತು ಕೆ.ಜೆ. ಸೋಮಯ್ಯ ಆಸ್ಪತ್ರೆಗಳಿಗೆ ತೆರಳಿದೆವು. ಕೆ. ಜೆ. ಸೋಮಯ್ಯ ಆಸ್ಪತ್ರೆಯಲ್ಲಿ, ಅಗತ್ಯ ಬಿದ್ದಲ್ಲಿ ತಾವು ನೆಲದ ಮೇಲೆ ಮಲಗುವುದಾಗಿ ತಿಳಿಸಿದ ನಮ್ಮ ತಂದೆ, ತಮಗೆ ಚಿಕಿತ್ಸೆ ನೀಡಬೇಕಾಗಿ ವಿನಂತಿಸಿದರು. ತಾವು ಬಿ.ಎಂ.ಸಿ. ನೌಕರನೆಂಬುದಕ್ಕೆ  ಪ್ರತಿ ಆಸ್ಪತ್ರೆಯಲ್ಲಿ ಗುರುತಿನ ಚೀಟಿಯನ್ನು ಸಹ ತೋರಿಸಿ ತೋರಿಸಿದರು. ಆದರೆ ಇದಾವುದೂ ಸಹಾಯಕ್ಕೆ ಬರಲಿಲ್ಲ” ಎಂದರು ಎರಡು ವರ್ಷದ ಹಿಂದೆ ಬಿ.ಎಸ್‌ಸಿ. ಪದವಿಯನ್ನು ಮುಗಿಸಿ, ನೌಕರಿಗಾಗಿ ಕಾಯುತ್ತಿರುವ 21 ವರ್ಷದ ನಿಕೇಶ್‌.

ಕೊನೆಗೆ, ಬಾಂದ್ರಾದಲ್ಲಿನ ಭಾಭಾ ಆಸ್ಪತ್ರೆಯಲ್ಲಿ, ವೈದ್ಯರು ಅಶೋಕ್‌ ಅವರ ತಪಾಸಣೆ ನಡೆಸಿ, ಹೀರುಮೆತ್ತೆಯಲ್ಲಿ ಒತ್ತಿ ತೆಗೆದ ಸ್ರಾವದ ಮಾದರಿಯನ್ನು (swab) ತೆಗೆದುಕೊಂಡರು. “ನಂತರ ಅವರನ್ನು ಕೋವಿಡ್‌-19ಗೆಂದು ನಿಗದಿಪಡಿಸಿದ್ದ ಪ್ರತ್ಯೇಕ ಕೋಣೆಗೆ ಕರೆದೊಯ್ದರು” ಎಂದರು ಸ್ವಪ್ನಿಲ್‌.

ಅಶೋಕ್‌ ಅವರ ಬಟ್ಟೆ, ಹಲ್ಲುಜ್ಜುವ ಬ್ರಶ್‌ ಹಾಗೂ ಪೇಸ್ಟ್‌ಗಳಿದ್ದ  ಚೀಲವನ್ನು ನೀಡಲು ಮನೀಷ ಆ ಕೋಣೆಗೆ ಹೋದಾಗ, “ಓಣಿಯಲ್ಲಿ ಮೂತ್ರದ ಕಟು ವಾಸನೆಯಿತ್ತು. ಊಟಕ್ಕೆ ಬಳಸಿದ ತಟ್ಟೆಗಳು ನೆಲದ ಮೇಲೆ ಬಿದ್ದಿದ್ದವು. ಕೋಣೆಯ ಹೊರಗೆ ಯಾವುದೇ ಸಿಬ್ಬಂದಿಯಿರಲಿಲ್ಲ. ನಾನು ಒಳಗೆ ಇಣುಕಿ, ಚೀಲವನ್ನು ತೆಗೆದುಕೊಳ್ಳುವಂತೆ ತಂದೆಯನ್ನು ಕೂಗಿ ಕರೆದೆ. ಅವರು ತಮ್ಮ ಆಮ್ಲಜನಕದ ಮುಖಗವಸನ್ನು ತೆಗೆದು, ಬಾಗಿಲಿಗೆ ಬಂದು ನನ್ನಿಂದ ಚೀಲವನ್ನು ತೆಗೆದುಕೊಂಡರು.” ಎಂಬುದಾಗಿ ಮನಿಷ ನೆನಪಿಸಿಕೊಳ್ಳುತ್ತಾರೆ.

ಅಶೋಕ್‌ ಅವರ ತಪಾಸಣೆಯ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದ್ದು, ಅವರ ಆರೋಗ್ಯವನ್ನು ತಾವು ಗಮನಿಸುತ್ತಿರುವುದಾಗಿ ತಿಳಿಸಿದ ವೈದ್ಯರು, ತಾರೆಯವರ ಕುಟುಂಬದವರನ್ನು ಅಲ್ಲಿಂದ ತೆರಳುವಂತೆ ಹೇಳಿದರು. ಅಂದು ರಾತ್ರಿ 10 ಗಂಟೆಗೆ ಶೀಲ, ದೂರವಾಣಿಯಲ್ಲಿ ಪತಿಯೊಂದಿಗೆ ಮಾತನಾಡಿದರು. “ಅವರ ಧ್ವನಿಯನ್ನು ಕೇಳುತ್ತಿರುವುದು ಅದೇ ಕೊನೆಯ ಬಾರಿ ಎಂದು ನನಗೆ ತಿಳಿದಿರಲಿಲ್ಲ. ನನಗೀಗ ಆರಾಮವೆನಿಸುತ್ತಿದೆ ಎಂದು ಅವರು ತಿಳಿಸಿದ್ದರು” ಎಂದರು ಶೀಲ.

ಮಾರನೆಯ ದಿನ ಮುಂಜಾನೆ, ಮೇ 30ರಂದು ಶೀಲ ಹಾಗೂ ಮನಿಷ ಮತ್ತೆ ಆಸ್ಪತ್ರೆಗೆ ತೆರಳಿದರು. “ವೈದ್ಯರು, ನಿಮ್ಮ ರೋಗಿಯು ಹಿಂದಿನ ರಾತ್ರಿ 1.15ರ ವೇಳೆಗೆ ಕೊನೆಯುಸಿರೆಳೆದರೆಂದು ತಿಳಿಸಿದರು. ಆದರೆ ಅವರೊಂದಿಗೆ ಹಿಂದಿನ ರಾತ್ರಿಯಷ್ಟೇ ಮಾತನಾಡಿದ್ದೆ” ಎಂದರು ಶೀಲ.

ದುಃಖವು ಮಡುಗಟ್ಟಿದ್ದ ತಾರೆ ಕುಟುಂಬವು ಅಶೋಕ್‌ ಅವರ ಸಾವಿನ ಕಾರಣವನ್ನು ವಿಚಾರಿಸಲು ಸಾಧ್ಯವಾಗಲಿಲ್ಲ. ನಮ್ಮ ಬುದ್ಧಿಯು ಸ್ಥಿಮಿತ ಕಳೆದುಕೊಂಡಂತಿತ್ತು. ದೇಹವನ್ನು ಸುಪರ್ದಿಗೆ ಪಡೆಯಲು ಕಾಗದ ಪತ್ರಗಳ ಕೆಲಸಗಳು, ಅಂಬುಲೆನ್ಸ್‌ ಹಾಗೂ ದುಡ್ಡಿನ ವ್ಯವಸ್ಥೆ, ಅಮ್ಮನನ್ನು ಸಾಂತ್ವನಗೊಳಿಸುವುದು ಈ ಎಲ್ಲವುಗಳಲ್ಲಿ ನಿರತರಾಗಿದ್ದ ನಮಗೆ ಪಾಪಾ ಸಾವಿನ ಬಗ್ಗೆ ಪ್ರಶ್ನಿಸಲು ಸಾಧ್ಯವಾಗಲಿಲ್ಲ” ಎಂದರು ನಿಕೇಶ್‌.

ಅಶೋಕ್‌ ಅವರ ಅಂತ್ಯಸಂಸ್ಕಾರದ ಎರಡು ದಿನಗಳ ತರುವಾಯ, ತಾರೆ ಕುಟುಂಬದ ಸದಸ್ಯರು, ಭಾಭಾ ಆಸ್ಪತ್ರೆಗೆ ಮತ್ತೊಮ್ಮೆ ತೆರಳಿ ಸಾವಿನ ಕಾರಣವನ್ನು ಲಿಖಿತದಲ್ಲಿ ನೀಡುವಂತೆ ಕೋರಿದರು. “ಜೂನ್‌ ತಿಂಗಳಲ್ಲಿ ಹದಿನೈದು ದಿನಗಳವರೆಗೂ ಆಸ್ಪತ್ರೆಗೆ ಮತ್ತೆ ಮತ್ತೆ ಎಡತಾಕುತ್ತಲೇ ಇದ್ದೆವು. ವೈದ್ಯರು, ವರದಿಯು ಅನಿರ್ಣಾಯಕವಾಗಿದೆ ಎನ್ನುತ್ತಿದ್ದರು. ಅಶೋಕ್‌ ಅವರ ಮರಣ ಪ್ರಮಾಣ ಪತ್ರವನ್ನು ನೀವೇ ಓದಿ ನೋಡಿ” ಎಂದರು 22 ವರ್ಷದ ಅಶೋಕ್‌ ಅವರ ಸೋದರಳಿಯ ವಸಂತ್‌ ಮಗರೆ.

Left: 'We recovered with medication, but Papa was still unwell', recalls Manisha. Right: 'The doctor would say the report was inconclusive...' says Vasant Magare, Ashok’s nephew
PHOTO • Jyoti
Left: 'We recovered with medication, but Papa was still unwell', recalls Manisha. Right: 'The doctor would say the report was inconclusive...' says Vasant Magare, Ashok’s nephew
PHOTO • Jyoti

ಎಡಕ್ಕೆ: ‘ನಾವು ಗುಣಮುಖರಾದೆವಾದರೂ, ಪಾಪಾ ಎನ್ನೂ ಅಸ್ವಸ್ಥರಾಗೇ ಇದ್ದರು’ ಎಂಬುದಾಗಿ ಮನಿಷ ನೆನಪಿಸಿಕೊಳ್ಳುತ್ತಾರೆ. ಬಲಕ್ಕೆ: ‘ವೈದ್ಯರು, ವರದಿಯು ಅನಿರ್ಣಾಯಕವಾಗಿದೆ… ಎನ್ನುತ್ತಿದ್ದರು’ ಎಂದರು ಅಶೋಕ್‌ ಅವರ ಸೋದರಳಿಯ ವಸಂತ್‌.

ಜೂನ್‌ 24ರಂದು, ಅಶೋಕ್‌ ಅವರು ನೌಕರರೆಂಬುದಾಗಿ ದಾಖಲಾಗಿದ್ದ ಮುಲುಂಡ್‌ನ ಟಿ ವಿಭಾಗದ ಬಿ.ಎಂ.ಸಿ ನೌಕರರು, ಸಾವಿನ ಕಾರಣವನ್ನು ಕೇಳಿ ಆಸ್ಪತ್ರೆಗೆ ಪತ್ರವೊಂದನ್ನು ಬರೆದ ನಂತರ ಆಸ್ಪತ್ರೆಯ ಆಡಳಿತವು, ಸಾವಿನ ಕಾರಣವನ್ನು ‘ಕೋವಿಡ್‌-19 ಶಂಕಿತ’ ಎಂಬುದಾಗಿ ಲಿಖಿತದಲ್ಲಿ ನೀಡಿತು. ಪತ್ರದಲ್ಲಿ, ಆಸ್ಪತ್ರೆಗೆ ದಾಖಲಾದ ನಂತರ ಅಶೋಕ್‌ ಅವರ ಆರೋಗ್ಯವು ಕ್ಷೀಣಿಸಿತೆಂದು ತಿಳಿಸಿದೆ. “ಮೇ 30ರಂದು, ಸಂಜೆ 8.11ಕ್ಕೆ ಪ್ರಯೋಗಾಲಯವು, ಹೀರುಮೆತ್ತೆಯಲ್ಲಿ ಒತ್ತಿ ತೆಗೆದ ಸ್ರಾವವು ಅಗತ್ಯ ಪ್ರಮಾಣದಲ್ಲಿಲ್ಲದ ಕಾರಣ, ಮತ್ತೊಮ್ಮೆ ಅದನ್ನು ತಪಾಸಣೆಗಾಗಿ ರವಾನಿಸಬೇಕೆಂಬುದಾಗಿ ಇಮೇಲ್‌ ಕಳಿಸಿದೆ. ಆದರೆ ರೋಗಿಯು ಈಗಾಲೇ ಸಾವಿಗೀಡಾದ ಕಾರಣ, ಅದನ್ನು ಮತ್ತೆ ರವಾನಿಸಲು ಸಾಧ್ಯವಿಲ್ಲ. ಆದ್ದರಿಂದ, ಸಾವಿನ ಕಾರಣವನ್ನು ‘ಕೋವಿಡ್‌-19 ಶಂಕಿತ’ ಎನ್ನಲಾಗಿದೆ.”

ಭಾಭಾ ಆಸ್ಪತ್ರೆಯಲ್ಲಿ ಅಶೋಕ್‌ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರನ್ನು ಸಂಪರ್ಕಿಸಲು ಈ ವರದಿಗಾರ್ತಿಯು ಅನೇಕ ಸಲ ಪ್ರಯತ್ನಿಸಿದರಾದರೂ, ಆ ವೈದ್ಯರು ಕರೆಗಳಿಗಾಗಲಿ, ಸಂದೇಶಗಳಿಗಾಗಲಿ ಉತ್ತರಿಸಲಿಲ್ಲ.

ಅಶೋಕ್‌ ಅವರಂತಹ ಕೋವಿಡ್-19 ಸೇನಾನಿಗಳಿಗೆ ಆರ್ಥಿಕ ಸಹಾಯವನ್ನೊದಗಿಸಲು, ‘ಕೋವಿಡ್‌-19 ಸರ್ವವ್ಯಾಪಿ ವ್ಯಾಧಿಯ ಸರ್ವೇಕ್ಷಣೆ, ಗುರುತಿಸುವಿಕೆ, ಗುರುತಿನ ಅನುಸರಣೆ, ತಪಾಸಣೆ, ಪ್ರತಿಬಂಧ, ಚಿಕಿತ್ಸೆ ಮತ್ತು ಪರಿಹಾರಗಳನ್ನೊಳಗೊಂಡ ಸಕ್ರಿಯ ಚಟುವಟಿಕೆಗಳಲ್ಲಿ ನಿರತರಾದ ಎಲ್ಲ ನೌಕರರಿಗೆ 50 ಲಕ್ಷ ರೂ.ಗಳ ಸಮಗ್ರ ವೈಯಕ್ತಿಕ ಅಪಘಾತಗಳ ವಿಮಾ ರಕ್ಷಣೆಯನ್ನು ಒದಗಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೊರಡಿಸಿದ ಆದೇಶವನ್ನು ಅನುಸರಿಸಿ, ಮಹಾರಾಷ್ಟ್ರ ಸರ್ಕಾರವು 2020ರ ಮೇ 29ರಂದು ಗೊತ್ತುವಳಿಯೊಂದನ್ನು ಅಂಗೀಕರಿಸಿತು.

೨೦೨೦ರ ಜೂನ್‌ ೮ರಂದು ಬಿ.ಎಂ.ಸಿ., ಈ ಗೊತ್ತುವಳಿಯನ್ನು ಕಾರ್ಯಾನ್ವಯಗೊಳಿಸಲು ಸುತ್ತೋಲೆಯೊಂದನ್ನು ಹೊರಡಿಸಿತು. ಯಾವುದೇ ಗುತ್ತಿಗೆ/ಹೊರಗುತ್ತಿಗೆ/ದಿನಗೂಲಿ/ಸಮ್ಮಾನಿತ ನೌಕರನು ಕೋವಿಡ್-೧೯ ಸಂಬಂಧಿತ ಕರ್ತವ್ಯಗಳಲ್ಲಿ ತೊಡಗಿದ್ದಾಗ ಸಾವಿಗೀಡಾದಲ್ಲಿ, ಆತನ ಕುಟುಂಬವು ಕೆಲವು ಷರತ್ತುಗಳಿಗೊಳಪಟ್ಟು, ೫೦ ಲಕ್ಷ ರೂ.ಗಳನ್ನು ಪಡೆಯಹುದಾಗಿದೆ ಎಂಬುದಾಗಿ ಸದರಿ ಸುತ್ತೋಲೆಯಲ್ಲಿ ಪ್ರಕಟಿಸಲಾಗಿದೆ.

ಅಶೋಕ್‌ ಅವರಂತೆ, ಆಸ್ಪತ್ರೆಗೆ ದಾಖಲಾದ ಅಥವಾ ಸಾವಿಗೀಡಾದ 14 ದಿನಗಳಿಗೂ ಮೊದಲು ನೌಕರನು ಕರ್ತವ್ಯನಿರತನಾಗಿರುವುದು ಅವಶ್ಯವೆಂಬ ಅಂಶವನ್ನೂ ಈ ಷರತ್ತುಗಳು ಒಳಗೊಂಡಿವೆ. ಕೋವಿಡ್-19ನ ಸೂಕ್ತ ತಪಾಸಣೆ ನಡೆಸದಿದ್ದಲ್ಲಿ, ಅಥವ ಈ ಕುರಿತ ಖಚಿತ ನಿರ್ಧಾರವಿಲ್ಲದಿದ್ದಲ್ಲಿ, ಕೋವಿಡ್‌-19ನಿಂದ ಸಾವು ಸಂಭವಿಸಿರಬಹುದಾದ ಸಾಧ್ಯತೆಯ ನಿಟ್ಟಿನಲ್ಲಿ, ಬಿ.ಎಂ.ಸಿ. ನೌಕರರುಗಳ ಸಮಿತಿಯೊಂದನ್ನು ರಚಿಸಿ, ವ್ಯಕ್ತಿಯ ವೃತ್ತಾಂತ ಹಾಗೂ ವೈದ್ಯಕೀಯ ಕಾಗದ ಪತ್ರಗಳ ತಪಾಸಣೆಯನ್ನು ಕೈಗೊಳ್ಳಬೇಕೆಂದು ಸಹ ಇದರಲ್ಲಿ ತಿಳಿಸಲಾಗಿದೆ.

ಬಿ.ಎಂ.ಸಿ ಘನ ತ್ಯಾಜ್ಯ ನಿರ್ವಹಣಾ ಇಲಾಖೆಯ ಕಾರ್ಮಿಕ ಅಧಿಕಾರಿಯು ಒದಗಿಸಿದ ಮಾಹಿತಿಯಂತೆ, ಆಗಸ್ಟ್‌ 31ರ ಹೊತ್ತಿಗೆ, ಒಟ್ಟಾರೆ 29,000 ಖಾಯಂ ನೌಕರರಲ್ಲಿ 210 ಜನರು ಕೋವಿಡ್‌ ಪಾಸಿಟಿವ್‌ ಎಂದು ತಿಳಿದುಬಂದಿದ್ದು, ಸಾವಿಗೀಡಾದವರ ಸಂಖ್ಯೆ 37. 166 ಜನರು ಗುಣಮುಖರಾಗಿ, ಕರ್ತವ್ಯಕ್ಕೆ ಹಾಜರಾಗಿದ್ದಾರೆ. ವೈರಸ್‌ನಿಂದ ಬಾಧಿತರಾದ ಗುತ್ತಿಗೆ ಸಫಾಯಿ ಕರ್ಮಚಾರಿಗಳ ದಾಖಲೆಯಿಲ್ಲವೆಂಬುದಾಗಿ ಅಲ್ಲಿನ ಸಿಬ್ಬಂದಿಯಿಂದ ತಿಳಿದುಬಂದಿರುತ್ತದೆ.

ಸಾವಿಗೀಡಾದ 37 ಸಫಾಯಿ ಕರ್ಮಚಾರಿಗಳಲ್ಲಿ, 14 ಕುಟುಂಬಗಳು 50 ಲಕ್ಷ ರೂ.ಗಳ ಪರಿಹಾರ ಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆಗಸ್ಟ್‌ 31ರ ಹೊತ್ತಿಗೆ 2 ಕುಟುಂಬಗಳಿಗೆ ವಿಮೆಯ ಹಣವು ದೊರೆತಿರುತ್ತದೆ.

Ashok went from being a contractual to ‘permanent’ sanitation worker in 2016. 'We were able to progress step by step', says Sheela
PHOTO • Manisha Taare
Ashok went from being a contractual to ‘permanent’ sanitation worker in 2016. 'We were able to progress step by step', says Sheela
PHOTO • Jyoti

ಗುತ್ತಿಗೆ ಕಾರ್ಮಿಕರಾಗಿದ್ದ ಅಶೋಕ್‌, 2016ರಲ್ಲಿ ‘ಖಾಯಂ’ ನೌಕರರೆನಿಸಿದರು. ‘ಕ್ರಮೇಣ ನಮ್ಮ ಜೀವನಮಟ್ಟವೂ ಸುಧಾರಿಸಿತು’ ಎಂದರು ಶೀಲ.

ಅಶೋಕ್‌ ಅವರ ಸಾವಿಗೆ ಕಾರಣವನ್ನು ತಿಳಿಸುವ ಲಿಖಿತ ದಾಖಲೆಯನ್ನು ಪಡೆದುಕೊಂಡ ನಂತರ, ತಾರೆ ಕುಟುಂಬವು, 50 ಲಕ್ಷ ರೂ.ಗಳ ವಿಮಾ ಪರಿಹಾರಕ್ಕಾಗಿ ಬಿ.ಎಂ.ಸಿ.ಯಲ್ಲಿನ ಟಿ ವಿಭಾಗದ ಕಛೇರಿಗೆ ಎಡತಾಕಲಾರಂಭಿಸಿತು. ನೋಟರಿ ಶುಲ್ಕ, ಛಾಯಾಪ್ರತಿಗಳು (photocopies), ಆಟೋರಿಕ್ಷಾ ಮತ್ತಿತರ ಬಾಬ್ತುಗಳಿಗಾಗಿ ಇದುವರೆವಿಗೂ 8,000 ರೂ.ಗಳಿಗಿಂತಲೂ ಹೆಚ್ಚಿನ ಹಣವನ್ನು ಖರ್ಚುಮಾಡಲಾಗಿದೆ.

ಅಶೋಕ್‌ ಅವರ ಬ್ಯಾಂಕ್‌ ಖಾತೆಯನ್ನು ನಿರ್ವಹಿಸಲು ಸಾಧ್ಯವಾಗದ ಶೀಲ, ಅರ್ಧ ತೊಲದ ಕಿವಿಯೋಲೆಯನ್ನು 9,೦೦೦ ರೂ.ಗಳಿಗೆ ಗಿರವಿಯಿಟ್ಟಿದ್ದಾರೆ. ಎಲ್ಲ ಕಡತಗಳು ಹಾಗೂ ಕಾಗದ ಪತ್ರಗಳನ್ನು ನನಗೆ ತೋರಿಸುತ್ತಾ, “ಪ್ರತಿ ಬಾರಿ ನೋಟರಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಕಛೇರಿಯ ಸಿಬ್ಬಂದಿಯು ಒಂದಲ್ಲ ಒಂದು ಬದಲಾವಣೆಯನ್ನು ಹೇಳುತ್ತಲೇ ಇರುತ್ತಾರೆ. 50 ಲಕ್ಷ ರೂ.ಗಳಿಲ್ಲದಿದ್ದಲ್ಲಿ, ರೂಢಿಯಂತೆ, ನನ್ನ ಹಿರಿಯ ಮಗನಿಗೆ ಆತನ ತಂದೆಯ ಬದಲಿಗೆ ನೌಕರಿಯನ್ನು ನೀಡಲಿ” ಎಂದರು ಶೀಲ.

ಈ ವರದಿಗಾರ್ತಿಯು ಟಿ ವಿಭಾಗದ ಸಹಾಯಕ ಆಯುಕ್ತರ ಕಛೇರಿಯಲ್ಲಿ ಈ ಬಗ್ಗೆ ವಿಚಾರಿಸಿದಾಗ, “ಹೌದು, ಅವರು ನಮ್ಮ ನೌಕರರಾಗಿದ್ದರು. ಪರಿಹಾರ ಧನಕ್ಕಾಗಿ ನಾವು ಅವರ ಕಡತವನ್ನು ನಿರ್ವಹಿಸಿದ್ದೇವೆ. ಬಿ.ಎಂ.ಸಿ. ನೌಕರರ ತಪಾಸಣಾ ಸಮಿತಿಯನ್ನು ರಚಿಸುವ ನಿರ್ಣಯವನ್ನು ನಿರೀಕ್ಷಿಸಲಾಗಿದ್ದು, ಈ ಕುರಿತಂತೆ ಬಿ.ಎಂ.ಸಿ., ಕಾರ್ಯಪ್ರವೃತ್ತವಾಗಿದೆ” ಎಂಬ ಉತ್ತರವು ದೊರೆಯಿತು.

ಅಶೋಕ್‌ ಅವರ ಸಂಪಾದನೆಯಿಂದ ಕುಟುಂಬವನ್ನು ನಿರ್ವಹಿಸಲಾಗುತ್ತಿತ್ತು. ಜೂನ್‌ನಿಂದ ಶೀಲ, ಹತ್ತಿರದ ಕಟ್ಟಡಗಳಲ್ಲಿನ ಎರಡು ಮನೆಗಳಲ್ಲಿ ಅಡುಗೆಯ ಕೆಲಸಕ್ಕೆ ಸೇರಿದ್ದು, ಅವರ ಸಂಪಾದನೆ ಕೇವಲ 4,೦೦೦ ರೂ.ಗಳಷ್ಟೇ. “ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ನಾನೆಂದೂ ಕೆಲಸಕ್ಕೆ ಹೋದವಳಲ್ಲ. ಆದರೆ ಈಗ ಅದು ಅನಿವಾರ್ಯ. ನನ್ನ ಇಬ್ಬರು ಮಕ್ಕಳಿನ್ನೂ ಓದುತ್ತಿದ್ದಾರೆ” ಎಂದರವರು. ನವಿ ಮುಂಬೈ ಮುನಿಸಿಪಲ್‌ ಕಾರ್ಪೊರೇಷನ್ನಿನಲ್ಲಿ ಗುತ್ತಿಗೆ ಸಫಾಯಿ ಕರ್ಮಚಾರಿಗಳಾಗಿರುವ ಇವರ ಹಿರಿಯ ಸಹೋದರ, 48ರ ವಯಸ್ಸಿನ ಭಗ್‌ವಾನ್‌ ಮಗರೆ, ಬಾಕಿಯಿದ್ದ 12,೦೦೦ ರೂ.ಗಳ ವಾಸದ ಕೋಣೆಯ ಬಾಡಿಗೆಯನ್ನು ಪಾವತಿಸಲು ನೆರವಾದರು.

ಅಶೋಕ್‌ ಖಾಯಂ ನೌಕರರಾಗಿದ್ದು 2016ರಲ್ಲಿ. ಗುತ್ತಿಗೆ ಕಾರ್ಮಿಕರಾಗಿ ಅವರು ಗಳಿಸುತ್ತಿದ್ದ 10,೦೦೦ ರೂ.ಗಳ ಬದಲಿಗೆ ಅಂದಿನಿಂದ ಮಾಹೆಯಾನ ಅವರಿಗೆ 24,೦೦೦ ರೂ.ಗಳ ವೇತನವು ದೊರೆಯತೊಡಗಿತು. “ಇವರು ಹೆಚ್ಚಿನ ಹಣವನ್ನು ಸಂಪಾದಿಸತೊಡಗಿದಾಗ, ಮುಲುಂಡ್‌ನಲ್ಲಿನ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದ ನಾವು, ಈ ಎಸ್‌.ಆರ್‌.ಎ ಕಟ್ಟಡಕ್ಕೆ ಸ್ಥಳಾಂತರಗೊಂಡೆವು. ಕ್ರಮೇಣ ನಮ್ಮ ಜೀವನವು ಸುಧಾರಿಸತೊಡಗಿತು” ಎಂದರು ಶೀಲ.

ಅಶೋಕ್‌ ಅವರ ಸಾವಿನೊಂದಿಗೆ, ತಾರೆ ಕುಟುಂಬದ ಪ್ರಗತಿಯೂ ಸ್ಥಗಿತಗೊಂಡಿತು. “ಸರ್ಕಾರವು ನಾವು ಹೇಳುವುದನ್ನು ಕೇಳಿಸಿಕೊಳ್ಳಬೇಕು. ಅವರಿಗೆ ರಜೆಯನ್ನೇಕೆ ನಿರಾಕರಿಸಲಾಯಿತು? ಅವರು ಹಾಗೂ ಇತರೆ ನೌಕರರನ್ನು ತಕ್ಷಣವೇ ತಪಾಸಣೆಗೆ ಒಳಪಡಿಸಲಿಲ್ಲವೇಕೆ? ಎಂಬುದಾಗಿ ಶೀಲ ಪ್ರಶ್ನಿಸುತ್ತಾರೆ. ತನ್ನ ದಾಖಲಾತಿಗಾಗಿ ಆಸ್ಪತ್ರೆಗಳಲ್ಲಿ ಅವರು ಬೇಡಿಕೊಳ್ಳುವಂತಾಗಿದ್ದೇಕೆ? ಅವರ ಸಾವಿಗೆ ನಿಜವಾಗಿಯೂ ಕಾರಣರಾರು?”

ಅನುವಾದ: ಶೈಲಜ ಜಿ. ಪಿ.

Jyoti is a Senior Reporter at the People’s Archive of Rural India; she has previously worked with news channels like ‘Mi Marathi’ and ‘Maharashtra1’.

Other stories by Jyoti
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.