"ಅವರು ಮಗು ಗರ್ಭದಲ್ಲಿಯೇ ತೀರಿಕೊಂಡಿದೆಯೆಂದು ಹೇಳಿದರು. ನಮಗೆ ಭಯವಾಯಿತು. ಅದರ ನಂತರ ನಮ್ಮನ್ನು ಬೇರೆ ಕಡೆಗೆ ಹೋಗುವಂತೆ ಹೇಳಿದರು. ಹಾಗಾಗಿ ನಾನು ನನ್ನ ಸೊಸೆಯನ್ನು ಪಟ್ಟಣದ ಖಾಸಗಿ ವೈದ್ಯರ ಬಳಿ ಕರೆದುಕೊಂಡು ಹೋಗಲು ನಿರ್ಧರಿಸಿದೆ." ಸುಖಿಯಾ ದೇವಿ ತನ್ನ ಸೊಸೆ ಕುಸುಮ್ ಜೊತೆ ವೈಶಾಲಿ ಜಿಲ್ಲಾ ಕೇಂದ್ರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದಾಗ ಅಲ್ಲಿನ ಸಿಬ್ಬಂದಿ ತಮ್ಮೊಂದಿಗೆ ಹೇಗೆ ವರ್ತಿಸಿದರು ಎಂಬುದನ್ನು ನೆನಪಿಸಿಕೊಳ್ಳುತ್ತಾ ಹೇಳುತ್ತಾರೆ.
ಅರವತ್ತೆರಡು ವರ್ಷದ ಕೃಷಿ ಕಾರ್ಮಿಕರಾದ ಅವರು ಬೆಳಗಿನ 10 ಗಂಟೆ ಸಮಯದಲ್ಲಿ, ಲಸಿಕೆ ಹಾಕಿಸಲೆಂದು ತನ್ನ ಒಂದು ದಿನದ ಮೊಮ್ಮಗಳನ್ನು ಎತ್ತಿಕೊಂಡು ಕಾಯುತ್ತಿದ್ದರು.
ಅವರ 28 ವರ್ಷದ ಸೊಸೆಗೆ ಹೆರಿಗೆ ನೋವು ಪ್ರಾರಂಭವಾದಾಗ, ಸುಖಿಯಾ ಅವರನ್ನು ವೈಶಾಲಿಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಮಗು ಹೊಟ್ಟೆಯಲ್ಲಿ ಸತ್ತಿದೆ ಎಂದು ಅಲ್ಲಿದ್ದ ಅಟೆಂಡೆಂಟ್ ಹೇಳಿದರು. ಇದರಿಂದ ಆಘಾತಕ್ಕೊಳಗಾದ ಸುಖಿಯಾ ತನ್ನ ಸೊಸೆ ಕುಸುಮ್ ಅವರನ್ನು ಕರೆದುಕೊಂಡು ಆಟೋದಲ್ಲಿ ಸುಮಾರು 15 ಕಿ.ಮೀ ದೂರದಲ್ಲಿರುವ ತಮ್ಮ ಊರಿಗೆ (ಹೆಸರು ಹೇಳದಂತೆ ವಿನಂತಿಸಿದರು) ಹೊರಟರು. "ನಾವು ನಮ್ಮ ಮನೆಗೆ ಹೋದೆವು." ಎಂದರು ಸುಖಿಯಾ. "ನಾವು ಕಾರು ಬಾಡಿಗೆಗೆ ತೆಗೆದುಕೊಂಡು ಮಹಿಳಾ ವೈದ್ಯರ (ಸ್ತ್ರೀರೋಗ ತಜ್ಞೆ) ಬಳಿಗೆ ಹೋಗುವುದೆಂದು ತೀರ್ಮಾನಿಸಿದೆ. ಆಗಿದ್ದ ಪರಿಸ್ಥಿತಿಯಲ್ಲಿ ಕಾರಿನ ಬಾಡಿಗೆ ಎಷ್ಟಾಗುತ್ತದೆಯೆಂದು ಸಹ ತಿಳಿಯಲು ಬಯಸಲಿಲ್ಲ. ನನಗೆ ಹೆರಿಗೆಯದ್ದೇ ಚಿಂತೆಯಾಗಿತ್ತು. ನಮ್ಮ ನೆರೆಹೊರೆಯ ಜನರ ಸಹಾಯದಿಂದ ನಾನು ನನ್ನ ಸೊಸೆಯನ್ನು ಗಾಡಿಯಲ್ಲಿ ಕುಳ್ಳಿರಿಸಿ ಕ್ಲಿನಿಕ್ಕಿಗೆ ಹೊರಟೆ."
ಅವರು ಒಂದಿಷ್ಟು ದೂರ ಹೋಗುತ್ತಿದ್ದಂತೆ ʼಗರ್ಭದಲ್ಲೇ ಸತ್ತು ಹೋಗಿದೆ ಎನ್ನಲಾಗಿದ್ದ ಮಗುʼ ಕಾರಿನಲ್ಲಿ ಜೀವಂತ ಜನಿಸಿತು.
"ಅವಳು ಗಾಡಿಯಲ್ಲೇ ಹುಟ್ಟಿದಳು" ಎಂದು ಸುಖಿಯಾ ಹೇಳುತ್ತಾರೆ. ಹೆರಿಗೆ ಸಾಕಷ್ಟು ಸರಾಗವಾಗಿ ನಡೆಯಿತೆಂದು ಅವರು ಹೇಳುತ್ತಾರೆ. ಅವರು ಮೊದಲೇ ಒಂದು ಸೀರೆ ತಂದಿದ್ದರು, ಅದನ್ನು ಅವರು ಹಾಸಲು ಬಳಸಿದರು, ಸ್ಥಳೀಯ ಮೆಡಿಕಲ್ ಶಾಪ್ ಮಾಲೀಕರು (ಅವರ ಜೊತೆಗಿದ್ದವರು) ವಾಹನದಲ್ಲಿ ಸ್ವಲ್ಪ ನೀರು ಇಟ್ಟುಕೊಂಡಿದ್ದರು. "ಆದರೆ ಇದೆಲ್ಲವೂ ಮುಗಿಯಲು ಬಹಳಷ್ಟು ಸಮಯ ತೆಗೆದುಕೊಂಡಿತು ..." ಸುಖಿಯಾ ಹೇಳುತ್ತಾರೆ.
ಜೊತೆಗೆ ಇದಕ್ಕೆ ಸಾಕಷ್ಟು ಹಣವೂ ಖರ್ಚಾಯಿತು. ಹೆಚ್ಚು ದೂರ ಸಾಗದೆಯೂ, ಕಾರ್ ಮಾಲೀಕರು ಕುಟುಂಬಕ್ಕೆ ಪ್ರಯಾಣಕ್ಕಾಗಿ 3,000 ರೂಪಾಯಿಗಳು- ಮತ್ತು ವಾಹನವನ್ನು ಯಾರಿಂದಲಾದರೂ ಕ್ಲೀನ್ ಮಾಡಿಸಲೆಂದು 1,000 ರೂಪಾಯಿಗಳ ಶುಲ್ಕವನ್ನು ವಿಧಿಸಿದರು.







