ಅಂದು ಬೆಳಗಿನ ಸುಮಾರು ಒಂಬತ್ತು ಗಂಟೆಯ ಹೊತ್ತಾಗಿತ್ತು. ಬೆಳಗು ಮೆಲ್ಲನೆ ಕಣ್ಣು ತೆರೆಯುತ್ತಿತ್ತು ಸುತ್ತಮುತ್ತಲಿನ ಜನರು ಉತ್ತರ ಮುಂಬೈನ ಉಪನಗರದಲ್ಲಿರುವ ಬೋರಿವಲಿ ನಿಲ್ದಾಣವನ್ನು ತಲುಪಲು ಜನರು ತರಾತುರಿಯಲ್ಲಿ ತಮ್ಮ ನಡುವೆ ಪೈಪೋಟಿ ನಡೆಸುತ್ತಿರುವುದು ಕಂಡುಬರುತ್ತಿತ್ತು. ಅಂಗಡಿಗಳ ಮಾಲಿಕರು ಆಗಷ್ಟೇ ತಮ್ಮ ಅಂಗಡಿಯ ಶಟರ್‌ಗಳನ್ನು ಮೇಲೆತ್ತಲು ಆರಂಭಿಸಿದ್ದರು. 24 ವರ್ಷದ ಲಕ್ಷ್ಮಣ ಕಾಟಪ್ಪನಿಗೂ ಅದು ಆ ದಿನದ ಕೆಲಸ ಆರಂಭಿಸುವ ಹೊತ್ತಾಗಿತ್ತು.

ಕಾಟಪ್ಪ ಭುಜಕ್ಕೆ ಕಪ್ಪು ಚೀಲವನ್ನು ನೇತುಹಾಕಿಕೊಂಡು, ಹೆಂಡತಿ ಮತ್ತು ತಮ್ಮ 13 ವರ್ಷದ ಎಲ್ಲಪ್ಪನೊಡನೆ ಬರಿಗಾಲಿನಲ್ಲಿ ನಡೆಯುತ್ತ ಅಲ್ಲಿದ್ದ ಮುಚ್ಚಿದ ಅಂಗಡಿಯೊಂದರ ಬಳಿ ನಿಂತರು. ಅಲ್ಲಿ ತಮ್ಮ ಚೀಲವನ್ನು ತೆರೆದು ಉದ್ದನೆಯ ಹಸಿರು ಘಾಗ್ರಾ ರೀತಿಯ ಉಡುಪು, ಹೇರ್‌ ಬ್ಯಾಂಡ್‌, ಭಂಡಾರ, ಮತ್ತು ಕೆಂಪು ಕುಂಕುಮದ ಸಣ್ಣ ಪೆಟ್ಟಿಗೆ, ಮಣಿಸರಗಳು, ಸಣ್ಣ ಕನ್ನಡಿ, ಚಾವಟಿ ಮತ್ತು ಕಾಲಿನ ಗೆಜ್ಜೆಗಳನ್ನು ಹೊರತೆಗೆದರು.

ಮುಚ್ಚಿದ ಅಂಗಡಿಯೆದುರು ನಿಂತು ಮೊದಲಿಗೆ ಲಕ್ಷ್ಮಣ್‌ ಹಸಿರು ಲಂಗವನ್ನು ತೊಟ್ಟು, ಪ್ಯಾಂಟ್‌ ಮತ್ತು ಅಂಗಿಯನ್ನು ಕಳಚಿದರು. ನಂತರ ತನ್ನ ತೆರೆದ ಎದೆಗೆ ಮತ್ತು ಮುಖಕ್ಕೆ ಕೆಂಪು ಮತ್ತು ಅರಶಿನ ಬಣ್ಣ ಬಳಿದುಕೊಳ್ಳತೊಡಗಿದರು. ಇದು ಮುಗಿದ ನಂತರ ಆಭರಣಗಳನ್ನು ತೊಟ್ಟುಕೊಂಡರು. ಎಲ್ಲಪ್ಪ ಕೂಡಾ ಇದೆಲ್ಲವನ್ನೂ ಮಾಡಿಕೊಂಡ ನಂತರ ಇಬ್ಬರೂ ಲಂಗಕ್ಕೆದೊಡ್ಡ ಗಂಟೆಗಳಿರುವ ಸೊಂಟದ ಪಟ್ಟಿಯನ್ನು ಕಟ್ಟಿಕೊಂಡು, ಕಾಲಿಗೆ ಗೆಜ್ಜೆಯನ್ನೂ ಧರಿಸಿದರು. ರೇಖಾ ಡೋಲು ಹಿಡಿದು ಅವರ ಪಕ್ಕದಲ್ಲಿ ಕುಳಿತರು.

ತಯಾರಿಗಳೆಲ್ಲ ಮುಗಿದ ನಂತರ ಪ್ರದರ್ಶನ ಆರಂಭಗೊಳ್ಳುತ್ತದೆ. ಇದೆಲ್ಲವೂ ನಡೆದಿದ್ದು ಮಾರ್ಚ್‌ 2020ರಲ್ಲಿ, ಆಗಿನ್ನೂ ಲಾಕ್‌ಡೌನ್‌ ಆರಂಭಗೊಂಡಿರಲಿಲ್ಲ.

PHOTO • Aakanksha

ಲಕ್ಷ್ಮಣ್ (ಮಧ್ಯದಲ್ಲಿ) ಮತ್ತು ಎಲ್ಲಪ್ಪ ಅವರು ಲಾಕ್‌ಡೌನ್‌ ಆರಂಭಗೊಳ್ಳುವ ಮೊದಲು ಒಂದು ಮುಂಜಾನೆ ತಮ್ಮ ದೈನಂದಿನ ಪ್ರದರ್ಶನಕ್ಕೆ ತಯಾರಾಗುತ್ತಿರುವಾಗ ಲಕ್ಷ್ಮಣ್ ಅವರ ಪತ್ನಿ ರೇಖಾ ರೇಖಾ ಡೋಲು ಹಿಡಿದು ಅವರಿಗಾಗಿ ಕಾಯುತ್ತಿದ್ದಾರೆ

22 ವರ್ಷದ ರೇಖಾ ಕೋಲು ಬಳಸಿ ಡೋಲು ಹೊಡೆಯಲು ಆರಂಭಿಸಿದ ತಕ್ಷಣ ಲಕ್ಷ್ಮಣ ಮತ್ತು ಎಲ್ಲಪ್ಪ ಇಬ್ಬರೂ ಕಾಲನ್ನು ನೆಲಕ್ಕೆ ಕುಕ್ಕಿ ಗೆಜ್ಜೆ ಸದ್ದ ಮಾಡುತ್ತಾ ಡೋಲಿನ ನಾದಕ್ಕೆ ನರ್ತಿಸತೊಡಗುತ್ತಾರೆ. ನಂತ ಲಕ್ಷ್ಮಣ ಚಾವಟಿ ಹೊರತೆಗೆದು ಅದರಿಂದ ತನ್ನ ಬೆನ್ನಿಗೆ ಹೊಡೆದುಕೊಳ್ಳತೊಡುತ್ತಾರೆ. ಇದರಿಂದ ತೀಕ್ಷ್ಣ ಶಬ್ದ ಬರತೊಡಗುತ್ತದೆ. ಆದರೆ ಅವರ ತಮ್ಮ ಇನ್ನೂ ಈ ಕಲೆಗೆ ಹೊಸಬನಾಗಿರುವುದರಿಂದಾಗಿ ಆ ರೀತಿ ಸದ್ದು ಮಾಡಲು ಸಾಧ್ಯವಿಲ್ಲ.

"ಏಕ್ ರುಪಾಯ್, ದೋ ರುಪಾಯ್ ದೇ ದೇ, ಭಗವಾನ್ ಕಷ್ಟ್‌ ದೂರ್‌ ರಖೇಗಾ [ನಮಗೆ ಒಂದು ರೂಪಾಯಿ, ಎರಡು ರೂಪಾಯಿ ಕೊಡಿ, ದೇವರು ನಿಮ್ಮನ್ನು ಎಲ್ಲಾ ತೊಂದರೆಗಳಿಂದ ಪಾರು ಮಾಡುತ್ತಾನೆ] ಎಂದು ಜನರನ್ನು ಕೇಳುತ್ತಾ ಅವರು ಮುಂದುವರಿಯುತ್ತಾರೆ." ಜನರು ಹತ್ತಿರಕ್ಕೆ ಬರಲು ಹಿಂಜರಿಯುತ್ತಾರೆ, ಕೆಲವರು ನೋಡದೆ ನಡೆಯುತ್ತಾರೆ, ಕೆಲವರು ಪ್ರದರ್ಶನಕಾರರತ್ತ ನಾಣ್ಯಗಳು ಅಥವಾ ನೋಟುಗಳನ್ನು ಎಸೆಯುತ್ತಾರೆ, ಕೆಲವು ಮಕ್ಕಳು ಭಯದಿಂದ ಓಡಿಹೋಗುತ್ತಾರೆ.

ಲಕ್ಷ್ಮಣ್ ಮತ್ತು ಎಲ್ಲಪ್ಪ ಅಂಗಡಿಯವರು ಮತ್ತು ತರಕಾರಿ ಮಾರಾಟಗಾರರ ಬಳಿ ಬಿಕ್ಷೆ ಕೇಳುತ್ತಾರೆ. ಕೆಲವರು ಅವರಿಗೆ ಆಹಾರವನ್ನು ನೀಡುತ್ತಾರೆ. ರೇಖಾರಿಗೆ ಅಂಗಡಿಯವರೊಬ್ಬರು ಚಹಾ ಕೊಡುವುದಾಗಿ ಹೇಳಿದರು. "ಕೆಲವರು ನಮಗೆ ಆಹಾರವನ್ನು ನೀಡುತ್ತಾರೆ ಆದರೆ ನಾನು ದೇವರಿಗಾಗಿ ಪ್ರದರ್ಶನ ನೀಡುವಾಗ ನಾನು ತಿನ್ನಲು ಸಾಧ್ಯವಿಲ್ಲ" ಎಂದು ಲಕ್ಷ್ಮಣ್ ಹೇಳುತ್ತಾರೆ. "ನಾವು ಮನೆಗೆ ಹಿಂದಿರುಗುವವರೆಗೆ ಊಟ ಮಾಡುವುದಿಲ್ಲ." ಅವರು ಸಂಜೆ 5 ಗಂಟೆಯ ಹೊತ್ತಿಗೆ ಮನೆಯನ್ನು ತಲುಪುತ್ತಾರೆ.

ಈ ಬೀದಿ ಬದಿಯ ಪ್ರದರ್ಶನಗಳನ್ನು ನೀಡುವ ಲಕ್ಷ್ಮಣ್ ಮತ್ತು ಇತರರನ್ನು ಪೋತ್ರಾಜ್ (ಪೋತುರಾಜು ಸಹ) ಅಥವಾ ಕಡಕ್ ಲಕ್ಷ್ಮಿ (ಮಾರಿಯಮ್ಮ ಎಂದೂ ಕರೆಯಲಾಗುತ್ತದೆ) ಎಂದು ಕರೆಯಲಾಗುತ್ತದೆ. ತನ್ನ ಸಮುದಾಯದ ಇತರರಂತೆ, ತಮ್ಮ ದೇವತೆಗೆ ಗುಣಪಡಿಸುವ ಶಕ್ತಿಗಳಿವೆ ಮತ್ತು ಕೆಟ್ಟದ್ದನ್ನು ದೂರವಿಡುತ್ತದೆ ಎಂದು ಲಕ್ಷ್ಮಣ ನಂಬುತ್ತಾರೆ.

ಈ ಕುಟುಂಬದ ಗ್ರಾಮವಾದ ಕೋಡಂಬಲ್ ಕರ್ನಾಟಕದ ಬೀದರ್ ಜಿಲ್ಲೆಯ ಹುಮ್ನಾಬಾದ್ ಬ್ಲಾಕ್‌ನಲ್ಲಿದೆ, ಮತ್ತು ಅವರು ಪರಿಶಿಷ್ಟ ಜಾತಿಯಾದ ಧೇಗು ಮೇಗು ಸಮುದಾಯಕ್ಕೆ ಸೇರಿದವರು. ಹೆಂಗಸರು ಡೋಲುಗಳನ್ನು ಬಾರಿಸುವಾಗ ಅಥವಾ ದೇವಿಯ ವಿಗ್ರಹವನ್ನು ಅಥವಾ ಫೋಟೋವನ್ನು ತಮ್ಮ ಕೈಗಳಲ್ಲಿ ಅಥವಾ ಸ್ಟೀಲ್ ಅಥವಾ ಅಲ್ಯೂಮಿನಿಯಂ ತಟ್ಟೆಯಲ್ಲಿ ಹಿಡಿದುಕೊಂಡಿರುವಾಗ ಪುರುಷರು ನೃತ್ಯ ಮಾಡುತ್ತಾರೆ. ಕೆಲವೊಮ್ಮೆ, ಅವರು ವಿಗ್ರಹವನ್ನು ಸಣ್ಣ ಮರದ ಪೆಟ್ಟಿಗೆಯಲ್ಲಿ ಅಥವಾ ಮರದ ಹಲಗೆಯ ಮೇಲೆ ಇರಿಸಿಕೊಂಡು ತಮ್ಮ ತಲೆಯ ಮೇಲೆ ಒಯ್ಯುತ್ತಾರೆ.

ವಿಡಿಯೋ ನೋಡಿ: ಮುಂಬೈಯ ಬೀದಿಗಳಲ್ಲಿ ಚಾಟಿಯಿಂದ ಬಡಿದುಕೊಂಡು ಜೀವನ ಸಾಗಿಸುವವರು

ಸರ್ವವ್ಯಾಪಿ ರೋಗ ಪ್ರಾರಂಭವಾಗುವ ಮೊದಲೇ, ಅವರ ಕಲೆಯು ಅಳಿವಿನಂಚಿನಲ್ಲಿತ್ತು. "ಮೊದಲು, ನನ್ನ ಅಜ್ಜಂದಿರು ಜನರ ಅನಾರೋಗ್ಯ ಅಥವಾ ಪಾಪಗಳನ್ನು ತೊಡೆದುಹಾಕಲು ಪ್ರದರ್ಶನ ನೀಡುತ್ತಿದ್ದರು, ಆದರೆ ಇಂದು ನಾವು ನಮ್ಮ ಹೊಟ್ಟೆಯನ್ನು ಪೋಷಿಸಲು ಇದನ್ನು ಮಾಡುತ್ತೇವೆ" ಎಂದು ಲಾಕ್‌ಡೌನ್‌ ಘೋಷಣೆಗೂ ಮೊದಲು ನಾವು ಭೇಟಿಯಾದಾಗ ಲಕ್ಷ್ಮಣ್ ಅವರ ತಾಯಿ ಎಲ್ಲಮ್ಮ ಹೇಳಿದ್ದರು. ಲಕ್ಷ್ಮಣ್, "ನನ್ನ ಮುತ್ತಜ್ಜ ಮತ್ತು ಅವರ ತಂದೆ ಪ್ರದರ್ಶನ ನೀಡಲು ಅಲೆದಾಡಿದರು. ಮಾರಿಯಮ್ಮ ನಮ್ಮನ್ನು ನೃತ್ಯ ಮಾಡಿಸುತ್ತಾಳೆ, ಅವಳೇ ನಮ್ಮನ್ನು ನೋಡಿಕೊಳ್ಳುತ್ತಿದ್ದಾಳೆ" ಎಂದು ಹೇಳಿದರು.

ಲಕ್ಷ್ಮಣ್ ಆರು ವರ್ಷದವರಾಗಿದ್ದಾಗ ಮುಂಬೈಯ ಬೀದಿಗಳಲ್ಲಿ ತಮ್ಮ ತಂದೆಯೊಂದಿಗೆ ಪ್ರದರ್ಶನ ನೀಡಲು ಪ್ರಾರಂಭಿಸಿದರು. ಅವರ ತಾಯಿ ಹಲಗೆಯ ಮೇಲಿರಿಸಿದ ಮಾರಿಯಮ್ಮನ ವಿಗ್ರಹವನ್ನು ತಲೆಯ ಮೇಲೆ ಇಟ್ಟುಕೊಂಡು ಬ್ಯಾಲೆನ್ಸ್‌ ಮಾಡುತ್ತಿದ್ದರು. "ನಾನು ಚಾವಟಿಯನ್ನು ಬಳಸಲು ಮತ್ತು ದರಿಂದ ಹೊಡೆದುಕೊಳ್ಳಲು ತುಂಬಾ ಹೆದರುತ್ತಿದ್ದೆ. ಶಬ್ದ ಮಾಡಲು ನಾನು ಅದನ್ನು ನೆಲದ ಮೇಲೆ ಹೊಡೆಯುತ್ತಿದ್ದೆ" ಎಂದು ಅವರು ಹೇಳಿದರು. "ನಾವು ನಮ್ಮ ಬೆನ್ನಿಗೆ ಏನನ್ನೂ ಹಚ್ಚುವುದಿಲ್ಲ ಏಕೆಂದರೆ ಆ ನೋವು ನಮ್ಮ ದೇವರಿಗೆ. ಕೆಲವೊಮ್ಮೆ ನನ್ನ ಬೆನ್ನು ಊದಿಕೊಳ್ಳುತ್ತಿತ್ತು, ಆದರೆ ಮಾರಿಯಮ್ಮನನ್ನು ನಾವು ನಂಬುತ್ತೇವೆ, ಅವಳು ನಮ್ಮನ್ನು ರಕ್ಷಿಸುತ್ತಿದ್ದಾಳೆ ಎಂದು. ಕೆಲಸ ಆರಂಭಿಸಿದ ನಂತರ ಪ್ರತಿ ದಿನವೂ ನಾನು ಉತ್ತಮಗೊಳ್ಳಲು ಪ್ರಾರಂಭಿಸಿದೆ. ಈಗ ಮೊದಲಿನಂತೆ ನೋವು ಕಾಡುವುದಿಲ್ಲ."

ಲಾಕ್‌ಡೌನ್‌ ಆರಂಭಗೊಳ್ಳುವ ಮೊದಲು, ಕುಟುಂಬವು ಉತ್ತರ ಮುಂಬೈನ ಬಾಂದ್ರಾ ಟರ್ಮಿನಸ್ ಎದುರು ವಾಸಿಸುತ್ತಿತ್ತು. ಒಂದೇ ಗ್ರಾಮ ಮತ್ತು ಸಮುದಾಯದ ಸುಮಾರು 50 ಕುಟುಂಬಗಳು ಈ ಬಸ್ತಿಯಲ್ಲಿ ವಾಸಿಸುತ್ತಿದ್ದವು, ಎಲ್ಲರೂ ಅದೇ ಕೆಲಸವನ್ನು ಮಾಡುತ್ತಿದ್ದರು. ನಗರದ ಇತರ ಭಾಗಗಳಿಂದ ಹೊರಹಾಕಲ್ಪಟ್ಟ ನಂತರ ಅವರು ಸುಮಾರು ಎಂಟು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದರು.

ಅವರ ಆಶ್ರಯ ತಾಣಗಳನ್ನು (ಸರ್ವವ್ಯಾಪಿ ರೋಗದಿಂದಾಗಿ ತ್ಯಜಿಸಿದ ಅಥವಾ ಮುಚ್ಚಿದ ನಂತರ) ಟಾರ್ಪಾಲಿನ್, ಪ್ಲಾಸ್ಟಿಕ್ ಅಥವಾ ಬಿದಿರು ಅಥವಾ ಬಟ್ಟೆಯ ಶೀಟುಗಳಿಂದ ತಯಾರಿಸಲಾಗುತ್ತದೆ. ಒಳಗೆ ಮಲಗಲು ಒಂದು ಶೀಟ್, ಕೆಲವು ಪಾತ್ರೆಗಳು ಮತ್ತು ಬಟ್ಟೆಗಳು ಇದ್ದವು. ಚಾವಟಿ ಮತ್ತು ಡೋಲನ್ನು ಒಂದು ಮೂಲೆಯಲ್ಲಿ ಇಡಲಾಗಿತ್ತು. ಲಕ್ಷ್ಮಣ, ರೇಖಾ ಮತ್ತು ಅವರ ಮೂವರು ಮಕ್ಕಳು ಒಂದು ಡೇರೆಯಲ್ಲಿ ವಾಸಿಸುತ್ತಿದ್ದರು, ಮತ್ತು ಅದರ ಹತ್ತಿರದಲ್ಲಿ ಅವರ ಹೆತ್ತವರು ಮತ್ತು ತಮ್ಮಂದಿರಾದ ಎಲ್ಲಪ್ಪ ಮತ್ತು ಹನುಮಂತನಿಗೆ ಮತ್ತೊಂದು ಡೇರೆ ಇತ್ತು.

2019 ರ ಡಿಸೆಂಬರ್‌ನಲ್ಲಿ ನಾವು ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ, ರೇಖಾ ಎಂಟು ತಿಂಗಳ ಗರ್ಭಿಣಿಯಾಗಿದ್ದರು ಮತ್ತು ಬರಿಗಾಲಿನಲ್ಲಿ ಬಹಳ ದೂರ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಸ್ವಲ್ಪ ಹೊತ್ತು ವಿಶ್ರಾಂತಿಗಾಗಿ ಕುಳಿತುಕೊಳ್ಳುತ್ತಿದ್ದರು. ಅವರು ಹೇಳುತ್ತಾರೆ, “ನನಗೆ ಇದು ಕಷ್ಟ ಎನ್ನಿಸುತ್ತಿಲ್ಲ, ಆದರೆ ಕೆಲವೊಮ್ಮೆ ಆಯಾಸವಾಗುತ್ತದೆ. ಇದು ನನ್ನ ಮೂರನೇ ಮಗು. ಈ ಕೆಲಸಕ್ಕೆ ಒಗ್ಗಿಕೊಂಡಿದ್ದೇನೆ. ನಾನು ಮನೆಯಲ್ಲಿ ಕುಳಿತರೆ, ನನ್ನ ಮಗುವಿಗೆ ಯಾರು ಆಹಾರವನ್ನು ನೀಡುತ್ತಾರೆ?"

PHOTO • Aakanksha

ಮುಂಬಯಿಯಲ್ಲಿದ್ದಾಗ, ಲಕ್ಷ್ಮಣ್ ಮತ್ತು ಅವರ ಸಮುದಾಯದ ಇತರ ಕುಟುಂಬಗಳು ಬಾಂದ್ರಾ ಟರ್ಮಿನಸ್ ಬಳಿಯ ಈ ಬಸ್ತಿಯಲ್ಲಿ ವಾಸಿಸುತ್ತವೆ

ಕುಟುಂಬದ ಸಂಪಾದನೆ ಊಹೆಗೂ ನಿಲುಕದಂತಿರುತ್ತದೆ. ಮುಖ್ಯವಾಗಿ ಜನ್ಮಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ ಹಬ್ಬಗಳ ಸಮಯದಲ್ಲಿ ಜನರು ದೇವರ ಹೆಸರಿನಲ್ಲಿ ಒಂದು ಪೂರ್ಣ ದಿನದ ಪ್ರದರ್ಶನಕ್ಕಾಗಿ ಧಾರಾಳವಾಗಿ ನೀಡಿದಾಗ, ಕುಟುಂಬವು ಕೆಲವೊಮ್ಮೆ 1,000 ರೂ.ಗಳನ್ನು (ಲಾಕ್‌ಡೌನ್‌ಗೂ ಮೊದಲು) ಗಳಿಸಬಹುದು. ಇತರ ದಿನಗಳಲ್ಲಿ, ಈ ಶ್ರೇಣಿಯು ರೂ. 150ರಿಂದ ರೂ. 400ರಷ್ಟಿರುತ್ತದೆ.

ಕೆಲವೊಮ್ಮೆ, ಲಕ್ಷ್ಮಣ ಮತ್ತು ಅವರ ಕುಟುಂಬವು ದಿನಗೂಲಿ ಕೆಲಸ ಮಾಡುತ್ತಿದ್ದರು. "ಮುಕಡಮ್‌ಗೆ ಕಾರ್ಮಿಕರ ಅಗತ್ಯವಿದ್ದಾಗ - ಕಸವನ್ನು ತೆರವುಗೊಳಿಸಲು, ನಿರ್ಮಾಣ ಕೆಲಸಗಳನ್ನು ಮಾಡಲು - ನಮ್ಮಂತಹ ಜನರು ಸಿದ್ಧವಿರುತ್ತಾರೆನ್ನುವುದು ಎಂದು ಅವರಿಗೆ ತಿಳಿದಿದೆ, ಅವರು ನಮ್ಮನ್ನು ಕರೆಯುತ್ತಾರೆ" ಎಂದು ಅವರು ನನಗೆ ಹೇಳಿದ್ದರು. "ನಾವು ದಿನಕ್ಕೆ 200-400 ರೂಪಾಯಿಗಳನ್ನು ಗಳಿಸುತ್ತೇವೆ" ಎಂದು ಹನುಮಂತ ಹೇಳಿದರು, "ನಾವು ಕೆಲಸ ಮಾಡುವ ಗಂಟೆಗಳ ಸಂಖ್ಯೆಯನ್ನು ಅವಲಂಬಿಸಿ. ನಾವು ಈ ಕೆಲಸವಿರುವ ತನಕ ಇದನ್ನೇ ಮಾಡುತ್ತೇವೆ, ಕೆಲಸ ಇಲ್ಲವಾದಾಗ ಪ್ರದರ್ಶನಕ್ಕೆ ಮರಳುತ್ತೇವೆ."

ಲಕ್ಷ್ಮಣ ಅವರ ಕುಟುಂಬದ ಬಳಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳಿಲ್ಲದ ಕಾರಣ ಅಕ್ಕಪಕ್ಕದ ದಿನಸಿ ಅಂಗಡಿಯಿಂದ ಆಹಾರ ಧಾನ್ಯ ಖರೀದಿಸಬೇಕಾಗಿದೆ. ಅವರ ವಸಾಹತುಗಳಲ್ಲಿ ಸಾಕಷ್ಟು ನೀರಿನ ಸಮಸ್ಯೆಯೂ ಇತ್ತು. ಕುಡಿಯುವ ನೀರಿಗಾಗಿ ಕುಟುಂಬಗಳು ಟರ್ಮಿನಸ್‌ನ ನಲ್ಲಿಗಳಿಗೆ ಹೋಗಬೇಕಾಗಿತ್ತು. ಆ ನಲ್ಲಿಗಳೂ ಬೆಳಗ್ಗೆ 5ರಿಂದ 9ರವರೆಗೆ ಮಾತ್ರ ತೆರೆಯುತ್ತಿದ್ದವು. ನಿಲ್ದಾಣದ ಶೌಚಾಲಯವನ್ನು ಬಳಸುವ ಈ ಜನರು, ಪ್ರತಿ ಭೇಟಿಗೆ ಒಂದು ರೂಪಾಯಿ, ಸ್ನಾನ ಮಾಡಲು ಅಥವಾ ಬಟ್ಟೆಗಳನ್ನು ಒಗೆಯಲು ಐದು ರೂಪಾಯಿಗಳನ್ನು ಪಾವತಿಸುತ್ತಿದ್ದರು. ರಾತ್ರಿಯಲ್ಲಿ, ಅವರು ಹತ್ತಿರದ ತೆರೆದ ಸ್ಥಳಗಳನ್ನು ಬಳಸುತ್ತಿದ್ದರು.

ಅವರ ಗುಡಿಸಲುಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ತಮ್ಮ ಫೋನ್ ಗಳನ್ನು ಚಾರ್ಜ್ ಮಾಡಲು ಅವರು ಹತ್ತಿರದ ಅಂಗಡಿಗಳಲ್ಲಿ ಒಂದು ಬಾರಿಗೆ ಹತ್ತು ರೂಪಾಯಿ ನೀಡಿ ಚಾರ್ಜ್‌ ಮಾಡಿಸುತ್ತಿದ್ದರು. ಪ್ರತಿ ವರ್ಷ ಜನವರಿಯಲ್ಲಿ, ಬಾಂದ್ರಾ ಟರ್ಮಿನಸ್ ಬಳಿ ವಾಸಿಸುವ ಧೇಗು ಮೇಗು ಕುಟುಂಬಗಳಲ್ಲಿ ಹೆಚ್ಚಿನವರು ತಮ್ಮ ಹಳ್ಳಿಗೆ ಮರಳುತ್ತಿದ್ದರು. ಆ ಸಮಯದಲ್ಲಿ ಅವರು ಉಳಿದುಕೊಂಡಿದ್ದ ಓಣಿಗಳು ಖಾಲಿಯಿರುತ್ತವೆ, ಕೆಲವು ಬಟ್ಟೆಗಳು ಮಾತ್ರ ಗೋಡೆಯ ಮೇಲೆ ನೇತಾಡುತ್ತಿರುತ್ತವೆ.

PHOTO • Aakanksha

ಕುಟುಂಬದ ಭಾವಚಿತ್ರ (ಎಡದಿಂದ ಬಲಕ್ಕೆ): ಕಾಟಪ್ಪ (ಲಕ್ಷ್ಮಣರ ತಂದೆ), ಎಲ್ಲಪ್ಪ, ರೇಖಾ, ಮಗಳು ರೇಷ್ಮಾ, ಲಕ್ಷ್ಮಣ್, ಮಗ ರಾಹುಲ್ (ಮತ್ತು ಬಸ್ತಿಯ ಇನ್ನಿಬ್ಬರು ಮಕ್ಕಳು)

ಲಾಕ್‌ಡೌನ್ ಸಮಯದಲ್ಲಿ, ಲಕ್ಷ್ಮಣರ ಕುಟುಂಬ ಮತ್ತು ಅವರ ಬಸ್ತಿಯಲ್ಲಿರುವ ಅನೇಕರು ಕೆಲಸದ ಕೊರತೆ ಮತ್ತು ಜೀವನೋಪಾಯದ ಬಿಕ್ಕಟ್ಟಿನಿಂದ ಮತ್ತೊಮ್ಮೆ ತಮ್ಮ ಹಳ್ಳಿಗಳಿಗೆ ಮರಳಿದರು. ಅವರು ಸಾಂದರ್ಭಿಕವಾಗಿ ಅಲ್ಲಿಯೂ ಪ್ರದರ್ಶನ ನೀಡುತ್ತಾರೆ, ಆದರೆ ಅಲ್ಲಿ ಕೇವಲ 50 ಅಥವಾ 100 ರೂ ಗಳಿಸುತ್ತಾರೆ ಮತ್ತು ಲಾಕ್‌ಡೌನ್ ಸಮಯದಲ್ಲಿ ಹಸಿವಿನಿಂದ ಮಲಗಬೇಕಾಯಿತು ಎಂದು ಸಮುದಾಯದ ಸದಸ್ಯರೊಬ್ಬರು ನನಗೆ ಹೇಳಿದರು. ಅಂದಿನಿಂದ, ಕೆಲವು ಕುಟುಂಬಗಳು ಈಗ ಬಾಂದ್ರಾ ಟರ್ಮಿನಸ್‌ಗೆ ಸಮೀಪವಿರುವ ಬಸ್ತಿಗೆ ಹಿಂತಿರುಗಿವೆ. ಆದಾಗ್ಯೂ, ಲಕ್ಷ್ಮಣ ಮತ್ತು ಅವರ ಕುಟುಂಬ ಇನ್ನೂ ಹಳ್ಳಿಯಲ್ಲಿದ್ದು, ಮಾರ್ಚ್ ಅಂತ್ಯದ ವೇಳೆಗೆ ಅವರು ಮುಂಬೈಗೆ ಮರಳುವ ಸಾಧ್ಯತೆಯಿದೆ.

ಲಕ್ಷ್ಮಣ ತನ್ನ ಮಕ್ಕಳು ಹಳ್ಳಿಯಲ್ಲಿ ಓದಬೇಕೆಂದು ಬಯಸುತ್ತಾರೆ. ಅವರು ಹೇಳುತ್ತಾರೆ, "ನನ್ನ ಮಗ ಓದುತ್ತಾನೆ ಮತ್ತು ಶಾಲೆಯಿಂದ ಓಡಿಹೋಗದಿದ್ದರೆ, ಅವನ ಜೀವನವು ಸ್ವಲ್ಪ ಉತ್ತಮವಾಗಿರುತ್ತದೆ," ಎಂದು ಶಾಲೆಯಿಂದ ಓಡಿ ಮನೆಗೆ ಬರುತ್ತಿದ್ದ ತನ್ನ ಕಿರಿಯ ಸಹೋದರ ಹನುಮಂತನನ್ನು ಉಲ್ಲೇಖಿಸುತ್ತಾ ಹೇಳುತ್ತಾರೆ. ಕೇವಲ ಒಬ್ಬರೇ ಶಿಕ್ಷಕರಿರುವುದರಿಂದ ಮತ್ತು ತರಗತಿಗಳು ನಿಯಮಿತವಾಗಿ ನಡೆಯದ ಕಾರಣ ಸಮುದಾಯದ ಅನೇಕ ಮಕ್ಕಳು ಗ್ರಾಮದ ಶಾಲೆಯನ್ನು ತೊರೆದಿದ್ದಾರೆ. ರೇಖಾ ಹೇಳುತ್ತಾರೆ, “ನನ್ನ ಮಕ್ಕಳನ್ನು ಹಳ್ಳಿಯ ಶಾಲೆಗೆ ಕಳುಹಿಸಲು ನಾನು ಬಯಸುತ್ತೇನೆ ಇದರಿಂದ ಅವರು ದೊಡ್ಡವರಾದ ನಂತರ ಅವರು ತಮ್ಮದೇ ಆದ ಅಂಗಡಿಯನ್ನು ತೆರೆಯಬಹುದು ಅಥವಾ ಕಾಲ್ ಸೆಂಟರ್‌ಗಳಲ್ಲಿ ಕೆಲಸ ಮಾಡಬಹುದು. ಮುಂಬೈಯಲ್ಲಿ ಪೋಲೀಸರ ಒತ್ತಡಕ್ಕೆ ಮಣಿದು ನಾವು ದಿನವೂ ನಮ್ಮ ಸ್ಥಳವನ್ನು ಬದಲಾಯಿಸಬೇಕಾಗಿದೆ, ಹೀಗಿರುವಾಗ ನಾವು ನಮ್ಮ ಮಕ್ಕಳಿಗೆ ಇಲ್ಲಿ ಶಿಕ್ಷಣವನ್ನು ಎಲ್ಲೆಂದು ನೀಡುವುದು?

ಲಕ್ಷ್ಮಣ ಮತ್ತು ರೇಖಾ ಅವರ ಮಗಳು ರೇಷ್ಮಾಗೆ ಈಗ ಐದು ವರ್ಷ, ರಾಹುಲ್‌ಗೆ ಮೂರು ವರ್ಷ ಮತ್ತು ಜನವರಿ 2020ರಲ್ಲಿ ಜನಿಸಿದ ಅವರ ಕಿರಿಯ ಮಗ ಇನ್ನೂ ಅವರ ಮಡಿಲಿನಲ್ಲಿದ್ದಾನೆ. ಮಕ್ಕಳನ್ನು ಇನ್ನೂ ಯಾವುದೇ ಶಾಲೆಗೆ ಸೇರಿಸಿಲ್ಲ. ರೇಖಾ ಯಾವತ್ತೂ ಶಾಲೆಗೆ ಹೋಗಿರಲಿಲ್ಲ, ಲಕ್ಷ್ಮಣ್ ವಿಷಯವೂ ಹಾಗೆಯೇ. ಅವರ ಕಿರಿಯ ಸಹೋದರ ಎಲ್ಲಪ್ಪ ಕೂಡ ಆಗಾಗ ಮುಂಬೈಗೆ ಬಂದು ಕುಟುಂಬ ಸಮೇತ ಚಮತ್ಕಾರ ತೋರಿಸುತ್ತಾನೆ. ಎಲ್ಲಪ್ಪ ಹೇಳುತ್ತಾನೆ, "ಹೇಗೆಂದು ಗೊತ್ತಿಲ್ಲ, ಆದರೆ ನಾನು ದೊಡ್ಡವನಾದ ಮೇಲೆ ದೊಡ್ಡ ಮನುಷ್ಯನಾಗುತ್ತೇನೆ."

ಅವರ ಊರಾದ ಕೋಡಂಬಲದಲ್ಲಿ, ಚಿಕ್ಕ ಮಕ್ಕಳು ಪ್ರದರ್ಶನ ಆರಂಭಿಸುವ ಮೊದಲು ಅಲ್ಲಿನ ಕುಟುಂಬಗಳು ದೇವಿಯನ್ನು ಪೂಜಿಸಿ ಆಕೆಯ ಆಶೀರ್ವಾದವನ್ನು ಬೇಡುತ್ತಾರೆ. ಇದು ಒಂದು ಜಾತ್ರೆಯಂತೆ ನಡೆಯುತ್ತದೆ. ಈ ಸಂಭ್ರಮದಲ್ಲಿ ಮೇಕೆಯನ್ನು ಬಲಿ ನೀಡಲಾಗುತ್ತದೆಂದು ಅವರು ಹೇಳುತ್ತಾರೆ. “ಮತ್ತು ನಾವು ಮುಂಬೈಯಲ್ಲಿ ಬದುಕು ನಡೆಸಲಿದ್ದೇವೆ, ಅಲ್ಲಿಯೂ ಒಳಿತನ್ನು ನೀಡು ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇವೆ,” ಎಂದು ಲಕ್ಷ್ಮಣ್‌ ಹೇಳುತ್ತಾರೆ. “ಆಕೆ ಕಾಪಾಡುತ್ತಾಳೆನ್ನುವ ಭರವಸೆ ಮತ್ತು ನಂಬಿಕೆಯೊಂದಿಗೆ ನಾವು ಮುಂಬಯಿಗೆ ಮರಳುತ್ತೇವೆ.”

ಅವರು ಮತ್ತು ಅವರ ಕುಟುಂಬವು ಈಗಲೂ ಹಳ್ಳಿಯಲ್ಲಿದೆ, ಮತ್ತು ಬಹುಶಃ ಮಾರ್ಚ್ ಅಂತ್ಯದ ವೇಳೆಗೆ ನಗರಕ್ಕೆ ಮರಳಬಹುದು

PHOTO • Aakanksha

ಕಪ್ಪು ಹತ್ತಿಯ ಚೀಲವನ್ನು ಹೆಗ ಲಿಗೆ ಹಾಕಿಕೊಂಡು , ತನ್ನ ಪತ್ನಿ ರೇಖಾ ಮತ್ತು ತಮ್ಮ ಎಲ್ಲಪ್ಪ ಅವರೊಂದಿಗೆ 24 ವರ್ಷದ ಲಕ್ಷ್ಮಣ್ ಬರಿಗಾಲಿನಲ್ಲಿ ನಡೆದುಕೊಂಡು, ಮುಚ್ಚಿದ ಅಂಗಡಿಯ ಮುಂದೆ ನಿಲ್ಲುತ್ತಾ ರೆ . ಅವ ರು ಚೀಲವನ್ನು ತೆರೆ ದು ಅಂದಿನ ದಿನದ ದಿನದ ಕೆಲಸಕ್ಕೆ ಸಿದ್ಧ ರಾ ಗಲು ಪ್ರಾರಂಭಿಸುತ್ತಾ ರೆ , ಮೊದಲು ಹಳದಿ ಮತ್ತು ಕೆಂಪು ಬಣ್ಣದ ಪೇಸ್ಟನ್ನು ತನ್ನ ಬೆತ್ತಲೆ ಎದೆ ಮತ್ತು ಮುಖಕ್ಕೆ ಬಳಿದುಕೊಳ್ಳುತ್ತಾರೆ

PHOTO • Aakanksha

ನಂತರ ಗೆಜ್ಜೆಗಳನ್ನು ಕಟ್ಟಿಕೊಳ್ಳುತ್ತಾರೆ

PHOTO • Aakanksha

13 ವರ್ಷದ ಎಲ್ಲಪ್ಪ ಕೂಡಾ ಬಣ್ಣ ಹಚ್ಚಿಕೊಳ್ಳುವುದು, ಗೆಜ್ಜೆ ಕಟ್ಟಿಕೊಳ್ಳುವುದು, ಘಾಗ್ರ ತೊಡುವುದು ಇವೆಲ್ಲವನ್ನೂ ಮಾಡುತ್ತಾರೆ

PHOTO • Aakanksha

ಈಗ ಪ್ರದರ್ಶನದ ಸಮಯ: ಕಲಾವಿದರು ತಯಾರಾಗಿದ್ದಾರೆ, ಮತ್ತು ರೇಖಾ ಇನ್ನೇನು ಡೋಲು ಎತ್ತಿಕೊಂಡು ಬಾರಿಸಲು ಆರಂಭಿಸುತ್ತಾರೆ

PHOTO • Aakanksha

2019 ರಲ್ಲಿ 8 ತಿಂಗಳ ಗರ್ಭಿಣಿಯಾಗಿದ್ದ ರೇಖಾ ಆಗ ಹೇಳಿದ್ದರು: ʼ ಕೆಲವೊಮ್ಮೆ ನನಗೆ ಸುಸ್ತೆನಿಸುತ್ತದೆ, ಇದು ನನ್ನ ಮೂರನೇ ಮಗು. ಇದು ಕೆಲಸ ನನಗೆ ಅಭ್ಯಾಸವಾಗಿ ಹೋಗಿದೆ, ಈಗ ಕೆಲಸ ಮಾಡದಿದ್ದರೆ ಮಕ್ಕಳಿಗೆ ತಿನ್ನಿಸಲು ಆಹಾರ ಹೇಗೆ ತರುವುದು

PHOTO • Aakanksha

ಎಲ್ಲಪ್ಪ ಈ ಕಲೆಗೆ ಹೊಸಬ, ಅವನು ತನ್ನ ಚಾವಟಿಯನ್ನು ನೆಲಕ್ಕೆ ಹೊಡೆಯುತ್ತಾನೆ, ಆಗ ಚಾವಟಿಯಿಂದ ಪಟ್‌ ಎಂದು ಶಬ್ದ ಬರುತ್ತದೆ

PHOTO • Aakanksha

ಕುಟುಕುವ ಶಬ್ದದೊಂದಿಗೆ ಬೆನ್ನಿಗೆ ಹೊಡೆದುಕೊಳ್ಳುವ ಮೊದಲು ಲಕ್ಷ್ಮಣ್ ಚಾವಟಿಯನ್ನು ಬೀಸುತ್ತಾರೆ. ಅವರು ಹೇಳುತ್ತಾರೆ, “ ನಮ್ಮ ಗಾಯಗಳಿಗೆ ನಾವು ಯಾವುದೇ ಚಿಕಿತ್ಸೆಯನ್ನು ಮಾಡುವುದಿಲ್ಲ, ಏಕೆಂದರೆ ನಾವು ನಮ್ಮ ದೇವತೆಗಾಗಿ ಈ ನೋವನ್ನು ಸಹಿಸುತ್ತೇವೆ. ಕೆಲವೊಮ್ಮೆ ನಮ್ಮ ಬೆನ್ನು ಊದಿಕೊಂಡರೂ ಮಾರಿಯಮ್ಮ ದೇವಿಯ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ಈ ನೋವಿನಿಂದ ನಮ್ಮನ್ನು ಕಾಪಾಡುತ್ತಾಳೆ. ನಿಧಾನವಾಗಿ ಈ ಗಾಯಕ್ಕೆ ಒಗ್ಗಿಕೊಳ್ಳುತ್ತಿದ್ದೇನೆ. ಈಗ ನನಗೆ ಹೆಚ್ಚು ನೋವು ಇಲ್ಲ'

PHOTO • Aakanksha

ಏಕ್‌ ರುಪಿಯಾ, ದೋ ರುಪಿಯಾ ದೇದೇ, ಭಗವಾನಾ ಕಷ್ಟ್‌ ಸೇ ದೂರ್‌ ರಖೇಗಾ ʼ [ ಒಂದು ರೂಪಾಯಿ, ಎರಡು ರೂಪಾಯಿ ಕೊಡಿ, ದೇವರು ನಿಮ್ಮನ್ನು ತೊಂದರೆಯಿಂದ ದೂರವಿಡುತ್ತಾನೆ] ಎಂದು ಜನರ ಬಳಿ ಹಣ ಕೇಳುತ್ತಿದ್ದಾರೆ

PHOTO • Aakanksha

ಲಕ್ಷ್ಮಣ್ ಮತ್ತು ಎಲ್ಲಪ್ಪ ಹತ್ತಿರದ ಅಂಗಡಿಯವರು ಮತ್ತು ತರಕಾರಿ ಮಾರಾಟಗಾರರಿಂದ ಭಿಕ್ಷೆ ಬೇಡುತ್ತಿದ್ದಾರೆ. ಲಕ್ಷ್ಮಣ ಹೇಳುತ್ತಾರೆ, ʼ ಕೆಲವರು ನಮಗೆ ಆಹಾರ ನೀಡಲು ಮುಂದಾದರು, ಆದರೆ ಭಗವಂತನಿಗೆ ನೃತ್ಯ ಮಾಡುವಾಗ ನಾನು ತಿನ್ನಲು ಸಾಧ್ಯವಿಲ್ಲ. ಮನೆಗೆ ಮರಳಿದ ನಂತರವೇ ಆಹಾರ ಸೇವಿಸುತ್ತೇವೆʼ

PHOTO • Aakanksha

ಜನರು ಅವರನ್ನು ನೋಡಿ ಸ್ವಲ್ಪ ಸಮಯ ನಿಲ್ಲುತ್ತಾರೆ, ಆದರೆ ಅವರ ಹತ್ತಿರ ಬರಲು ಹಿಂಜರಿಯುತ್ತಾರೆ. ಕೆಲವರು ಅವರನ್ನು ನಿರ್ಲಕ್ಷಿಸಿ ಮುಂದೆ ಹೋಗುತ್ತಾರೆ, ಕೆಲವರು ದೂರದಿಂದ ಅವರ ಕಡೆಗೆ ನಾಣ್ಯಗಳು ಅಥವಾ ನೋಟುಗಳನ್ನು ಎಸೆಯುತ್ತಾರೆ. ಸುತ್ತಮುತ್ತಲಿನ ಕೆಲವು ಮಕ್ಕಳು ಅವರನ್ನು ನೋಡಿ ಹೆದರಿ ಅಲ್ಲಿಂದ ಓಡಿ ಹೋಗುತ್ತಾರೆ

PHOTO • Aakanksha

ಎಂಟು ತಿಂಗಳ ಗರ್ಭಿಣಿ ರೇಖಾ ಅಂಗಡಿಯವನೊಬ್ಬನ ನೀಡಿದ ಚಹಾವನ್ನು ಕುಡಿಯುತ್ತಿರುವುದು

PHOTO • Aakanksha

ಲಕ್ಷ್ಮಣ್ ಹೇಳುತ್ತಾರೆ, ' ನನ್ನ ಅಜ್ಜ ಮತ್ತು ಅವರ ಪೂರ್ವಜರು ತಿರುಗಾಡಿ ಚಮತ್ಕಾರ ಮಾಡುವ ಕೆಲಸ ಮಾಡುತ್ತಿದ್ದರು. ಮಾ ರಿಯಮ್ಮನ ಅಪ್ಪಣೆ ಯಂತೆ ನಾವು ಕುಣಿದಾಡುತ್ತೇವೆ, ಏಕೆಂದರೆ ಅವಳು ನಮ್ಮೆಲ್ಲರನ್ನು ನೋಡಿಕೊಳ್ಳುತ್ತಾಳೆʼ

PHOTO • Aakanksha

ಅವರ ದೈನಂದಿನ ಗಳಿಕೆಯ ಬಗ್ಗೆ ಖಚಿತವಾಗಿ ಏನನ್ನೂ ಹೇಳಲಾಗದಿದ್ದರೂ, ದಿನದ ಅವಶ್ಯಕತೆಗಳನ್ನು ಪೂರೈಸುವಷ್ಟು ಸಂಪಾದಿಸುವವರೆಗೂ ಅವರ ರಸ್ತೆಬದಿಯ ಚಮತ್ಕಾರ ಮುಂದುವರಿಯುತ್ತದೆ. ದೊಡ್ಡ ಹಬ್ಬಗಳ ಸಮಯದಲ್ಲಿ ಜನರು ದೇವರು ಮತ್ತು ಧರ್ಮದ ಹೆಸರಿನಲ್ಲಿ ದಾನ ಮಾಡಲು ಉತ್ಸುಕರಾಗಿರುತ್ತಾರೆ. ಆ ದಿನಗಳಲ್ಲಿ, ಒಂದು ದಿನದ ಚಮತ್ಕಾರದ ನಂತರ, ಇಡೀ ಕುಟುಂಬವು ರೂ 1,000 ವರೆಗೆ (ಲಾಕ್‌ಡೌನ್‌ಗೆ ಮೊದಲು) ಗಳಿಸುತ್ತಿತ್ತು. ಇಲ್ಲದಿದ್ದರೆ ಸಾಮಾನ್ಯ ದಿನಗಳಲ್ಲಿ 150 ರಿಂದ 400 ರೂ. ಗಳಿಸುತ್ತದೆ

PHOTO • Aakanksha

ಇಡೀ ದಿನ ದೇವಿ ಗಾಗಿ ನೃತ್ಯ ಮಾಡಿದ ನಂತರ, ಲಕ್ಷ್ಮಣ ತನ್ನ ಮುಖದ ಬಣ್ಣವನ್ನು ಒರೆಸು ತ್ತಿರುವುದು

PHOTO • Aakanksha

ಸಂಜೆಯ ವೇಳೆಗೆ ಕುಟುಂಬವು ಬಾಂದ್ರಾ ಟರ್ಮಿನಸ್‌ಗೆ ಸಮೀಪದಲ್ಲಿರುವ ಅವರ ಕೊಳೆಗೇರಿಗೆ ಮರಳುತ್ತದೆ. ಅವರ ಸಮುದಾಯದ ಸುಮಾರು 50 ಕುಟುಂಬಗಳು ಇಲ್ಲಿ ಬಿದಿರು, ಟಾರ್ಪಾಲಿನ್ ಮತ್ತು ಪ್ಲಾಸ್ಟಿಕ್‌ನಿಂದ ನಿರ್ಮಿಸಲಾದ ತಾತ್ಕಾಲಿಕ ಕೊಳೆಗೇರಿಗಳಲ್ಲಿ ವಾಸಿಸುತ್ತವೆ

PHOTO • Aakanksha

ಇತರ ಮೂಲಭೂತ ಅಗತ್ಯಗಳಂತೆ, ಈ ಬಡಾವಣೆಯಲ್ಲಿ ನೀರಿನ ತೀವ್ರ ಕೊರತೆಯಿದೆ. ಇಲ್ಲಿ ನೆಲೆಸಿರುವ ಕುಟುಂಬಗಳು ಕುಡಿಯುವ ನೀರಿಗಾಗಿ ಸಮೀಪದ ಬೀದಿಯ ಏಕೈಕ ನಲ್ಲಿ ಮತ್ತು ಟರ್ಮಿನಸ್‌ನ ನಲ್ಲಿಗಳನ್ನು ಅವಲಂಬಿಸಿವೆ, ಇವುಗಳಿಂದ ಬೆಳಿಗ್ಗೆ 5 ರಿಂದ ಬೆಳಿಗ್ಗೆ 9 ರವರೆಗೆ ಮಾತ್ರ ನೀರು ಸರಬರಾಜು ಮಾಡಲಾಗುತ್ತದೆ. ಅವರ ಕೊಳೆಗೇರಿಗಳಲ್ಲಿ ವಿದ್ಯುತ್ ಇಲ್ಲ. ಅವರು ತಮ್ಮ ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಲು ನೆರೆಹೊರೆಯ ಅಂಗಡಿಯವರಿಗೆ ಪಾವತಿಸಬೇಕಾಗುತ್ತದೆ

PHOTO • Aakanksha

ರೇಖಾ, ಅವರ ಮಗಳು ರೇಷ್ಮಾ, ಅತ್ತೆ ಎಲ್ಲಮ್ಮ ಮತ್ತು ರೇಖಾ ಅವರ ಮಗ ರಾಹುಲ್. ಈ ಮಕ್ಕಳನ್ನು ಇನ್ನೂ ಯಾವುದೇ ಶಾಲೆಗೆ ಸೇರಿಸಲಾಗಿಲ್ಲ, ಆದರೆ ಅವರ ಪೋಷಕರು ತಮ್ಮ ಮಕ್ಕಳನ್ನು ಓದಬೇಕೆಂದು ಬಯಸುತ್ತಾರೆ. ‘ಅವರು ನಮ್ಮ ಹಳ್ಳಿಯ ಶಾಲೆಯಲ್ಲಿ ಓದಬೇಕು’ ಎಂದು ರೇಖಾ ಹಾರೈಸುತ್ತಾರೆ. ‘ನನ್ನ ಮಗ ಓದು ಬರಹ ಕಲಿತರೆ ಉತ್ತಮ ಜೀವನ ನಡೆಸಬಲ್ಲ’ ಎಂದು ಲಕ್ಷ್ಮಣ್ ಕೂಡ ಪತ್ನಿಯ ಮಾತನ್ನು ಒಪ್ಪುತ್ತಾರೆ

ಅನುವಾದ : ಶಂಕರ . ಎನ್ . ಕೆಂಚನೂರು

Aakanksha

Aakanksha is a reporter and photographer with the People’s Archive of Rural India. A Content Editor with the Education Team, she trains students in rural areas to document things around them.

Other stories by Aakanksha
Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru