ಇಲ್ಲಿ ನೀವು ಹತ್ತಿರದಲ್ಲಿ ಆರೋಗ್ಯ ಸೇವೆಯನ್ನು ಪಡೆಯಬೇಕೆಂದರೆ ಅಣೆಕಟ್ಟೆಯ ನೀರಿನಲ್ಲಿ ತೇಲುವ ದೋಣಿಯಲ್ಲಿ ಕುಳಿತು ಎರಡು ಗಂಟೆಗಳ ಪ್ರಯಾಣ ಮಾಡಬೇಕು. ಅದು ಬೇಡವೆಂದರೆ ಅರೆ-ನಿರ್ಮಿತ ರಸ್ತೆಗಳಿರುವ ಪರ್ವತಗಳ ಗುಂಟ ಗಂಟೆಗಳ ಕಾಲ ಪ್ರಯಾಣಿಸಬೇಕು.
ಮತ್ತು ಪ್ರಭಾ ಗೊಲೋರಿ ಒಂಬತ್ತು ತಿಂಗಳ ತುಂಬು ಗರ್ಭಿಣಿ ಮತ್ತು ಯಾವುದೇ ಸಮಯದಲ್ಲಿ ಅವರಿಗೆ ಹೆರಿಗೆಯಾಗಬಹುದಿತ್ತು.
ನಾನು ಕೋಟಗುಡ ಹಾಡಿ ತಲುಪಿದಾಗ ಮಧ್ಯಾಹ್ನದ ಎರಡು ಗಂಟೆಯಾಗಿತ್ತು. ಪ್ರಭಾರ ಗುಡಿಸಲಿನ ಸುತ್ತಲೂ ನೆರೆ-ಹೊರೆಯ ಹೆಂಗಸರು ನೆರೆದಿದ್ದರು. ಮಗು ಉಳಿಯುವ ಕುರಿತು ಅವರಿಗೆ ಭರವಸೆ ಇದ್ದಿರಲಿಲ್ಲ.
35 ವರ್ಷದ ಪ್ರಬಾ ಅವರ ಮೊದಲ ಮಗ ಮೂರು ತಿಂಗಳ ವಯಸ್ಸಿನಲ್ಲಿ ತೀರಿಕೊಂಡಿದ್ದ. ಅವರ ಮಗಳಿಗೆ ಈಗ ಆರು ವರ್ಷ. ಹಳ್ಳಿಯಲ್ಲಿರುವ ಶುಶ್ರೂಷಕಿಯರ ಸಹಾಯದಿಂದ, ಆಕೆಯ ಎರಡೂ ಹೆರಿಗೆಗಳು ಮನೆಯಲ್ಲಿ ಹೆಚ್ಚು ತೊಂದರೆಯಿಲ್ಲದೆ ನಡೆದಿದ್ದವು. ಆದರೆ ಸೂಲಗಿತ್ತಿ ಈ ಬಾರಿ ಸ್ವಲ್ಪ ಆತಂಕಗೊಂಡಿದ್ದರು. ಈ ಬಾರಿಯ ಹೆರಿಗೆ ಸುಲಭವಿಲ್ಲವೆಂದು ಅವರಿಗೆ ಎನ್ನಿಸಿತ್ತು.
ಆ ದಿನ ಮಧ್ಯಾಹ್ನ ಫೋನ್ ಕರೆ ಬಂದ ಸಮಯದಲ್ಲಿ ನಾನು ವರದಿಯೊಂದರ ಸಲುವಾಗಿ ಹತ್ತಿರದ ಹಳ್ಳಿಯಲ್ಲಿದ್ದೆ. ನಂತರ ಅಲ್ಲಿಂದ ಸ್ನೇಹಿತರೊಬ್ಬರ ಮೋಟಾರುಬೈಕನ್ನು ತೆಗೆದುಕೊಂಡು (ನನ್ನ ಸಾಮಾನ್ಯ ಸ್ಕೂಟಿಗೆ ಈ ಗುಡ್ಡಗಾಡು ರಸ್ತೆಗಳನ್ನು ಏರಿಳಿಯುವುದು ಸಾಧ್ಯವಿಲ್ಲ), ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯ ಕೇವಲ 60 ಜನರ ಹಾಡಿಯಾದ ಕೋಟಗುಡಕ್ಕೆ ಧಾವಿಸಿದೆ.
ಚಿತ್ರಕೊಂಡ ತಾಲ್ಲೂಕಿನ ಈ ಊರನ್ನು ತಲುಪುವುದು ಕಷ್ಟವೆನ್ನುವುದು ಒಂದು ಕಡೆಯಾದರೆ. ಇನ್ನೊಂದೆಡೆ, ಮಧ್ಯ ಭಾರತದ ಬುಡಕಟ್ಟು ಪಟ್ಟಿಯ ಇತರ ಹಳ್ಳಿಗಳಂತೆ, ಇಲ್ಲಿಯೂ ಸರ್ಕಾರದ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಿರಂತರ ಯುದ್ಧ ನಡೆಯುತ್ತಿರುತ್ತದೆ. ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳು ಅನೇಕ ಸ್ಥಳಗಳಲ್ಲಿ ಅಸಮರ್ಪಕ ಮತ್ತು ವಿರಳವಾಗಿವೆ.












