ತನ್ನ ಮಗಳ ದುರಂತ ಸಾವಿನ ನಂತರದ ಐದು ವರ್ಷಗಳಲ್ಲಿ ಕಾಂತ ಭಿಸೆಯ ಆಕ್ರೋಶವು ಮಾತಾಗಿ ಹೊರಹೊಮ್ಮಲು ನಿರ್ಧರಿಸಿದೆ."ನಮ್ಮ ಬಡತನದಿಂದಾಗಿ ನನ್ನ ಮಗು ಸತ್ತಿದೆ" ಎಂದು ಕಾಂತಾ ಹೇಳುತ್ತಾರೆ, ಅವರ ಮಗಳು ಮೋಹಿನಿ ಭಿಸೆ ಜನವರಿ 20, 2016ರಂದು ಆತ್ಮಹತ್ಯೆ ಮಾಡಿಕೊಂಡರು.

18 ವರ್ಷದ ಮೋಹಿನಿ ಮೃತಪಟ್ಟಾಗ ಆಕೆ 12 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದರು. "12ನೇ ತರಗತಿಯ ನಂತರ ಆಕೆಗೆ ಶಿಕ್ಷಣ ನೀಡಲು ನಮಗೆ ಸಾಧ್ಯವಾಗಲಿಲ್ಲ, ಹೀಗಾಗಿ ನಾವು ಅವಳಿಗೆ ಮದುವೆ ಮಾಡಿಸಲು ಸೂಕ್ತ ಗಂಡಿನ ಹುಡುಕಾಟದಲ್ಲಿ ತೊಡಗಿದ್ದೆವು" ಎಂದು ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಭೀಸೆವಘೋಲಿ ಗ್ರಾಮದ 42 ವರ್ಷದ ಕಾಂತಾ ಹೇಳುತ್ತಾರೆ.

ಮದುವೆ ಎಂದರೆ ಖರ್ಚಿನ ಕೆಲಸ ಇದ್ದ ಹಾಗೆ, ಹೀಗಾಗಿ ಕಾಂತಾ ಮತ್ತು ಅವರ 45 ವರ್ಷದ ಪತಿ ಪಾಂಡುರಂಗ ಚಿಂತಿತರಾಗಿದ್ದರು. “ನಾನು ಮತ್ತು ನನ್ನ ಪತಿ ಕೃಷಿ ಕೂಲಿ ಕೆಲಸ ಮಾಡುತ್ತಿದ್ದೇವೆ. ಮೋಹಿನಿಯ ಮದುವೆಗೆ ಬೇಕಾದ ಹಣವನ್ನು ಸಂಗ್ರಹಿಸುವುದು ಅಸಾಧ್ಯವೆಂದು ನಾವು ಭಾವಿಸಿದ್ದೆವು. ಆಗ ವರದಕ್ಷಿಣೆ ದರ ಸುಮಾರು 1 ಲಕ್ಷ ರೂಗಳಿಷ್ಟಿತ್ತು” ಎಂದು ಅವರು ಹೇಳುತ್ತಿದ್ದರು.

ದಂಪತಿಗಳು ಈಗಾಗಲೇ ಖಾಸಗಿ ಲೇವಾದೇವಿದಾರರಿಂದ ತಿಂಗಳಿಗೆ ಶೇ 5ರಷ್ಟು ಬಡ್ಡಿದರದಲ್ಲಿ 2.5 ಲಕ್ಷ ರೂ ಸಾಲವನ್ನು ತೆಗೆದುಕೊಂಡಿದ್ದಾರೆ. 2013ರಲ್ಲಿ ಅವರ ಹಿರಿಯ ಮಗಳು ಅಶ್ವಿನಿಯ ಮದುವೆಗಾಗಿ ಈ ಮೊತ್ತವನ್ನು ಸಾಲವಾಗಿ ಪಡೆಯಲಾಗಿತ್ತು. ಮೋಹಿನಿಯ ಮದುವೆಗೆ ತಂದಿದ್ದ 2 ಲಕ್ಷ ರೂ. ಸಾಲವನ್ನು ತೀರಿಸಲು ಈಗ ಅವರಿಗೆ ತಮ್ಮ ಜಮೀನು ಮಾರಾಟ ಮಾಡುವುದನ್ನು ಬಿಟ್ಟು ಬೇರೆ ಯಾವುದೇ ದಾರಿಯಿಲ್ಲ.

ಭೀಸೆ ವಾಘೋಲಿಯಲ್ಲಿ ಅವರ ಒಂದು ಎಕರೆ ಜಮೀನು ಸಾಗುವಳಿಯಾಗುತ್ತಿಲ್ಲ. "ಇಲ್ಲಿ ನೀರಾವರಿ ವ್ಯವಸ್ಥೆಯಿಲ್ಲ ಮತ್ತು ನಮ್ಮ ಪ್ರದೇಶದಲ್ಲಿ ಯಾವಾಗಲೂ ಬರ ಇರುತ್ತದೆ" ಎಂದು ಕಾಂತಾ ವಿವರಿಸುತ್ತಾರೆ. 2016ರಲ್ಲಿ, ಅವರು ಬೇರೆಯವರ ಜಮೀನಿನಲ್ಲಿ ಕೆಲಸ ಮಾಡಿ ದಿನಕ್ಕೆ 150 ರೂ ದುಡಿಯುತ್ತಿದ್ದರೆ, ಪಾಂಡುರಂಗ ಅವರು 300 ರೂ. ಸಂಪಾದಿಸುತ್ತಿದ್ದರು.ಇಬ್ಬರೂ ಸೇರಿ ತಿಂಗಳಿಗೆ 2,000-2,400 ರೂ.ಗಳನ್ನು ಸಂಪಾದಿಸುತ್ತಿದ್ದರು.

ವಿಡಿಯೋ ನೋಡಿ: ' ನಮ್ಮ ಬಡತನ ನನ್ನ ಮಗುವನ್ನು ಕೊಂದಿತು '

ಒಂದು ರಾತ್ರಿ ಮೋಹಿನಿಗೆ ಕಾಂತಾ ಮತ್ತು ಪಾಂಡುರಂಗರ ನಡುವೆ ತಮ್ಮ ಜಮೀನು ಮಾರಾಟದ ಬಗ್ಗೆ ನಡೆಯುತ್ತಿರುವ ಮಾತು-ಕತೆ ಕೇಳಿಸಿತು. ಅದಾದ ಕೆಲವು ದಿನಗಳ ನಂತರ ಅವರು ಆತ್ಮಹತ್ಯೆಗೆ ಶರಣಾದರು. "ನಾವು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಮೋಹಿನಿ ಮನೆಯಲ್ಲಿ ನೇಣು ಹಾಕಿಕೊಂಡಿದ್ದಳು" ಎಂದು ಕಾಂತಾ ಹೇಳುತ್ತಾರೆ.

ತಾನು ಬಿಟ್ಟು ಹೋಗಿರುವ ಪತ್ರದಲ್ಲಿ ಮೋಹಿನಿ, ಸಾಲದ ಸುಳಿಯಲ್ಲಿ ಸಿಲುಕಿರುವ ತಂದೆಯನ್ನು ತನ್ನ ಮದುವೆಯ ವೆಚ್ಚದ ಹೊರೆಯಿಂದ ಮುಕ್ತಗೊಳಿಸಲು ಬಯಸುವುದಾಗಿ ಬರೆದಿದ್ದಳು.ಆಕೆ ವರದಕ್ಷಿಣೆ ಪದ್ಧತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಳು ಮತ್ತು ಅದರ ಅಂತ್ಯಕ್ಕಾಗಿ ಮನವಿ ಮಾಡಿದ್ದಳು.ಮೋಹಿನಿ ತನ್ನ ಅಂತ್ಯಕ್ರಿಯೆಗೆ ಖರ್ಚು ಮಾಡದಂತೆ ತನ್ನ ಹೆತ್ತವರನ್ನು ಕೇಳಿಕೊಂಡಿದ್ದಲ್ಲದೆ ಆಗ 7 ಮತ್ತು 9ನೇ ತರಗತಿಯಲ್ಲಿದ್ದ ನಿಕಿತಾ ಮತ್ತು ಅನಿಕೇತ್ ಅವರ ಶಿಕ್ಷಣಕ್ಕೆ ಹಣವನ್ನು ಬಳಸುವಂತೆ ಕೋರಿದ್ದಳು.

ಆಕೆಯ ಸಾವಿನ ನಂತರ, ಅನೇಕ ರಾಜಕೀಯ ಮುಖಂಡರು, ಸರ್ಕಾರಿ ಅಧಿಕಾರಿಗಳು, ಮಾಧ್ಯಮದವರು ಮತ್ತು ಗಣ್ಯರು ತಮ್ಮನ್ನು ಭೇಟಿ ಮಾಡಿದರು ಎಂದು ಕಾಂತಾ ಹೇಳುತ್ತಾರೆ. “ಅವರೆಲ್ಲರೂ ನಮ್ಮ ಮಕ್ಕಳ ಶಿಕ್ಷಣವನ್ನು ನೋಡಿಕೊಳ್ಳುವುದಾಗಿ ಎಂದು ನಮಗೆ ಭರವಸೆ ನೀಡಿದರು. ಸರ್ಕಾರಿ ಯೋಜನೆ (ಪ್ರಧಾನ ಮಂತ್ರಿ ಆವಾಸ್ ಯೋಜನೆ) ಅಡಿಯಲ್ಲಿ ನಮಗೆ ಶೀಘ್ರದಲ್ಲೇ ಮನೆ ಸಿಗಲಿದೆ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದರು. ಕೇವಲ ಪಕ್ಕಾ ಮನೆ ಮಾತ್ರವಲ್ಲ, ಅಧಿಕೃತ ಯೋಜನೆಗಳ ಮೂಲಕ ನಾವು ವಿದ್ಯುತ್ ಸಂಪರ್ಕ ಮತ್ತು ಎಲ್‌ಪಿಜಿ ಗ್ಯಾಸ್ ಸಂಪರ್ಕವನ್ನು ಪಡೆಯುತ್ತೇವೆ ಎಂದು ನಮಗೆ ತಿಳಿಸಲಾಗಿತ್ತು. ಆದರೆ ನಮಗೆ ಇಲ್ಲಿಯವರೆಗೆ ಇವುಗಳಲ್ಲಿ ಯಾವುದೂ ಸಿಕ್ಕಿಲ್ಲ” ಎಂದು ಪಾಂಡುರಂಗ್ ಹೇಳುತ್ತಾರೆ.

ಭೀಸೆ ವಾಘೋಲಿಯ ಹೊರವಲಯದಲ್ಲಿರುವ ಅವರ ಕಚ್ಚಾ ಮನೆಯು ಸಡಿಲವಾಗಿ ಜೋಡಿಸಲಾದ ಇಟ್ಟಿಗೆಗಳಿಂದ ಮಾಡಲ್ಪಟ್ಟಿದೆ. “ಸರಿಯಾದ ಸೂರಿಲ್ಲ, ಹಾವುಗಳು ಮತ್ತು ಊಸರವಳ್ಳಿಗಳು ಆಗಾಗ್ಗೆ ಮನೆಗೆ ನುಗ್ಗುತ್ತವೆ. ನಮ್ಮ ಮಕ್ಕಳು ನೆಮ್ಮದಿಯಿಂದ ಮಲಗಲೆಂದು ನಾವು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತೇವೆ,” ಎಂದು ಕಾಂತಾ ಹೇಳುತ್ತಾರೆ. “ನಮ್ಮನ್ನು ಭೇಟಿ ಮಾಡಿದ ಈ ಎಲ್ಲಾ ಜನರನ್ನು ನಾವು ಸಂಪರ್ಕಿಸಲು ಪ್ರಯತ್ನಿಸಿದಾಗ ಮತ್ತೆ ನಮ್ಮೊಂದಿಗೆ ಯಾವುದೇ ಮಾತನ್ನಾಡಲಿಲ್ಲ." ಎಂದು ಹೇಳುತ್ತಾರೆ.

Mohini Bhise was only 18 when she died by suicide
PHOTO • Ira Deulgaonkar

ಮೋಹಿನಿ ಭಿಸೆ ಆತ್ಮಹತ್ಯೆ ಮಾಡಿಕೊಂಡಾಗ ಆಕೆಗೆ ಕೇವಲ 18 ವರ್ಷ ವಯಸ್ಸಾಗಿತ್ತು

ತಾನು ಬಿಟ್ಟು ಹೋಗಿರುವ ಪತ್ರದಲ್ಲಿ ಮೋಹಿನಿ ಸಾಲದ ಸುಳಿಯಲ್ಲಿ ಸಿಲುಕಿರುವ ತನ್ನ ತಂದೆಯನ್ನು ಮದುವೆಯ ವೆಚ್ಚದ ಹೊರೆಯಿಂದ ಮುಕ್ತಗೊಳಿಸಲು ಬಯಸುವುದಾಗಿ ಬರೆದಿದ್ದಾರೆ. ಅವರು ವರದಕ್ಷಿಣೆ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಅದರ ಅಂತ್ಯಕ್ಕಾಗಿ ಮನವಿ ಮಾಡಿದ್ದರು

ಹಾಗಾಗಿ ಅವರ ದೈನಂದಿನ ಜೀವನ ಒಂದು ರೀತಿ ಹೋರಾಟವಾಗಿಯೇ ಉಳಿದಿದೆ. "ನಮ್ಮ ಪ್ರತಿದಿನದ ದುಃಖವನ್ನು ನಾನು ವಿವರಿಸಲು ಸಾಧ್ಯವಿಲ್ಲ. ನಾವು ಎಲ್ಲಾ ರೀತಿಯಲ್ಲಿ ಸಂಕಷ್ಟದಲ್ಲಿದ್ದೇವೆ,” ಎಂದು ಕಾಂತಾ ಹೇಳುತ್ತಾರೆ. 2016 ರಿಂದ ಬರಗಾಲದಿಂದಾಗಿ ಊರಿನಲ್ಲಿ ಕೆಲಸ ಸಿಗುತ್ತಿಲ್ಲ. "2014ರಿಂದ ದಿನಗೂಲಿ ದರವು ಒಂದೇ ರೀತಿಯಿದೆ, ಆದರೆ ಅಗತ್ಯ ವಸ್ತುಗಳ ವೆಚ್ಚಗಳು ಅಷ್ಟೇ ಇದೆಯೇ?" ಎಂದು ಅವರು ಪ್ರಶ್ನಿಸುತ್ತಾರೆ.

ತಾವು ಗಳಿಸುವ ಅಲ್ಪಸ್ವಲ್ಪದ ದುಡಿಮೆಯಲ್ಲಿ ಕಾಂತಾ ತನ್ನ ಮಧುಮೇಹದ ಔಷಧಿಗಾಗಿ ತಿಂಗಳಿಗೆ 600 ರೂ. ಪ್ರತ್ಯೇಕವಾಗಿ ಮೀಸಲಿಡಬೇಕು. ಅವರು ಮತ್ತು ಪಾಂಡುರಂಗ ಇಬ್ಬರೂ ಕೂಡ 2017ರಿಂದ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ. "ಸರ್ಕಾರ ಯಾಕ್ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡಲ್ಲ?” ಎಂದು ಕಾಂತಾ ಆಕ್ರೋಶದಿಂದ ಪ್ರಶ್ನಿಸುತ್ತಾರೆ. “ಕೇವಲ ಜ್ವರಕ್ಕೆ ಔಷಧಿಯ ಬೆಲೆ 90 ರೂ.ಗಿಂತ ಕಡಿಮೆಯಿಲ್ಲ. ನಮ್ಮಂತಹವರಿಗೆ ಸ್ವಲ್ಪ ರಿಯಾಯಿತಿಯಾದರೂ ಕೊಡಬೇಕು ಅಲ್ಲವೇ?” ಎಂದು ಅವರು ಹೇಳುತ್ತಿದ್ದರು.

ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಅವರಿಗೆ ಸಿಗುವ ರೇಷನ್ ಕೂಡ ಕಳಪೆ ಮಟ್ಟದ್ದಾಗಿದೆ ಎಂದು ಅವರು ಹೇಳುತ್ತಾರೆ.“ರೇಷನ್ ಕಾರ್ಡ್ ಹೊಂದಿರುವ ನಮ್ಮೆಲ್ಲರಿಗೂ ಸಿಗುವ ಗೋದಿ ಮತ್ತು ಅಕ್ಕಿ ತುಂಬಾ ಕಳಪೆ ಮಟ್ಟದ್ದಾಗಿದೆ. ಬಹಳಷ್ಟು ಜನರು ಅದನ್ನೇ ಮತ್ತೆ ಮಾರುಕಟ್ಟೆಯಲ್ಲಿ ಖರೀದಿಸುತ್ತಾರೆ. ಆದರೆ ಅವುಗಳನ್ನು ಪಡೆಯಲು ಸಾಧ್ಯವಾಗದ ನಮ್ಮಂತವರ ಕಥೆ ಏನು?” ಕಲ್ಯಾಣ ಯೋಜನೆಗಳು ಕೈಗೆಟುಕುವುದಿಲ್ಲ, ಅಥವಾ ಒಂದು ವೇಳೆ ಸಿಕ್ಕರೂ ಸಹಿತ ಅವು ಅಷ್ಟಾಗಿ ಜನರಿಗೆ ಅನುಕೂಲವಾಗುವುದಿಲ್ಲ ಎಂದು ಅವರು ಹೇಳಿದರು.

ಆದರೆ ಬರಪೀಡಿತ ಮರಾಠವಾಡ ಪ್ರದೇಶದ ಲಾತೂರ್‌ನ ಜನರಿಗೆ ಎಲ್ಲಾ ಸಹಾಯದ ಅಗತ್ಯವಿದೆ. ಈ ಪ್ರದೇಶದಲ್ಲಿನ ಕೃಷಿ ಸಂಕಟವು ಅದರ ಜನರನ್ನು ಬಡತನ ಮತ್ತು ಸಾಲಕ್ಕೆ ತಳ್ಳಿದೆ.ಪರಿಹಾರ ಕ್ರಮಗಳು ಅವರ ಕಷ್ಟಗಳನ್ನು ನಿವಾರಿಸಲು ಸಾಧ್ಯವಾಗಿಲ್ಲ, ಇದರಿಂದಾಗಿ ಅನೇಕ ರೈತರು ಆತ್ಮಹತ್ಯೆಯಿಂದ ಸಾಯುತ್ತಾರೆ. 2015ರಲ್ಲಿ, ಮೋಹಿನಿ ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ವರ್ಷ 1,133 ರೈತರು ಮರಾಠವಾಡದಲ್ಲಿ ಆತ್ಯಹತ್ಯೆಗೆ ಶರಣಾಗಿದ್ದರು ಮತ್ತು 2020ರಲ್ಲಿ, ಅಂತಹ 693 ಸಾವುಗಳು ದಾಖಲಾಗಿವೆ.

ಭವಿಷ್ಯದ ಬಗೆಗಿನ ಹತಾಶೆ ಮತ್ತು ನಿರಾಶೆ ಕಾಂತಾ ಅವರ ಹೇಳಿಕೆಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ, “ನಮ್ಮ ಮಗಳು ತನ್ನ ಸಾವು ನಮ್ಮ ಜೀವನವನ್ನು ಸುಲಭಗೊಳಿಸುತ್ತದೆ ಎಂದು ಭಾವಿಸಿ ಸತ್ತಳು. ʼನಾವು ಮರಾಠವಾಡದ ರೈತರು, ನಮ್ಮ ಬದುಕಿನಲ್ಲಿ ಯಾವುದೂ ಸರಿಯಾಗುವುದಿಲ್ಲʼ ಎಂದು ನಾನು ಅವಳಿಗೆ ಹೇಗೆ ಹೇಳಲಿ.”

ಅನುವಾದ: ಎನ್.ಮಂಜುನಾಥ್

Ira Deulgaonkar

Ira Deulgaonkar is a 2020 PARI intern. She is a Bachelor of Economics student at Symbiosis School of Economics, Pune.

Other stories by Ira Deulgaonkar
Translator : N. Manjunath