ಜಮ್ಮು ಮತ್ತು ಕಾಶ್ಮೀರದ ಎತ್ತರದ ಪರ್ವತಗಳಲ್ಲಿ ಬಕರ್‌ವಾಲ್‌ಗಳು ಒಂಟಿಯಾಗಿ ಕಾಣಿಸುವುದು ಅಪರೂಪ.
ಈ ಪಶುಪಾಲಕ ಸಮುದಾಯದ ಜನರು ತಮ್ಮ ಜಾನುವಾರುಗಳಿಗಾಗಿ ಮೇವು ಹುಡುಕುತ್ತಾ ಹಿಮಾಲಯದ ಎಲ್ಲೆಡೆ ದೊಡ್ಡ ಗುಂಪುಗಳಲ್ಲಿ ಚಲಿಸುತ್ತಿರುತ್ತಾರೆ. “ಮೂರ್ನಾಲ್ಕು ಜನ ಅಣ್ಣ ತಮ್ಮಂದಿರು ತಮ್ಮ ಕುಟುಂಬಗಳೊಡನೆ ಚಲಿಸುತ್ತಿರುತ್ತಾರೆ,” ಎಂದು ಮುಹಮ್ಮದ್ ಲತೀಫ್ ಹೇಳುತ್ತಾರೆ. ಅವರು ಪ್ರತಿ ವರ್ಷ ಎತ್ತದರ ಪ್ರದೇಶಗಳ ಹುಲ್ಲುಗಾವಲಿಗೆ ಅಥವಾ ಬಹಕ್‌ಗೆ ಹೋಗುತ್ತಿರುತ್ತಾರೆ. "ಆಡು ಮತ್ತು ಕುರಿಗಳನ್ನು ಒಟ್ಟುಗೂಡಿಸುವುದರಿಂದ ಹಿಂಡನ್ನು ನಿರ್ವಹಿಸುವುದು ಸುಲಭ" ಎಂದು ಅವರು ಹೇಳುತ್ತಾರೆ, ವಾರ್ಷಿಕವಾಗಿ ತಮ್ಮೊಂದಿಗೆ ಪ್ರಯಾಣಿಸುವ ಸುಮಾರು 5,000 ಕುರಿಗಳು, ಆಡುಗಳು, ಕುದುರೆಗಳು ಮತ್ತು ಒಂದೆರಡು ಸುಂದರ ನಾಯಿಗಳು ಅವರೊಡನೆ ಇರುತ್ತವೆ.
ಜಮ್ಮುವಿನ ಬಯಲು ಪ್ರದೇಶದಿಂದ ಪೀರ್ ಪಂಜಾಲ್ ಮತ್ತು ಇತರ ಹಿಮಾಲಯ ಶ್ರೇಣಿಗಳಲ್ಲಿನ ಎತ್ತರದ ಹುಲ್ಲುಗಾವಲುಗಳಿಗೆ ಬಕರ್‌ವಾಲ್ ಜನರ ಪ್ರಯಾಣವು ಕ್ರಮೇಣ ಸುಮಾರು 3,000 ಮೀಟರುಗಳಷ್ಟು ಎತ್ತರಕ್ಕೆ ಏರುವುದನ್ನು ಒಳಗೊಳ್ಳುತ್ತದೆ. ಬೇಸಿಗೆ ಪ್ರಾರಂಭವಾಗುವ ಮೊದಲು ಮಾರ್ಚ್ ಕೊನೆಯಲ್ಲಿ ಅವರು ಮೇಲಕ್ಕೆ ಏರತೊಡಗುತ್ತಾರೆ, ಮತ್ತು ಚಳಿಗಾಲವು ಪ್ರಾರಂಭವಾಗುವ ಮೊದಲು ಸೆಪ್ಟೆಂಬರ್ ತಿಂಗಳಿನಲ್ಲಿ ತಮ್ಮ ಮರು ಪ್ರಯಾಣವನ್ನು ಪ್ರಾರಂಭಿಸುತ್ತಾರೆ.
ಪ್ರತಿ ಪ್ರಯಾಣಕ್ಕೆ ಸುಮಾರು 6ರಿಂದ 8 ವಾರ ಹಿಡಿಯುತ್ತದೆ. ಮಹಿಳೆಯರು, ಮಕ್ಕಳು, ಮತ್ತು ಕೆಲವು ಗಂಡಸರು ಮೊದಲು ಹೋಗಿ ತಲುಪುತ್ತಾರೆ. “ಅವರು ಮುಂದೆ ಹೋಗಿ ಅಲ್ಲಿನ ಪ್ರಮುಖ ಹುಲ್ಲುಗಾವಲುಗಳನ್ನು ತಲುಪಿ, ಅಲ್ಲಿ ನಮಗಾಗಿ ಡೇರಾ [ಡೇರೆ] ಸಿದ್ಧಪಡಿಸುತ್ತಾರೆ,” ಎಂದು ಮುಹಮ್ಮದ್ ಲತೀಫ್ ಹೇಳುತ್ತಾರೆ. ಅವರ ಗುಂಪು ರಜೌರಿ ಬಳಿಯ ಬಯಲು ಪ್ರದೇಶದಿಂದ ಲಡಾಖ್‌ನ ಜೋಜಿಲಾ ಪಾಸ್ ಬಳಿಯಿರುವ ಮೀನಾಮಾರ್ಗಕ್ಕೆ ಪ್ರಯಾಣಿಸುತ್ತಿತ್ತು.


























