ಚಮ್ನೀ ಮೀನಾ ಎಂಬ ಈ ಮಹಿಳೆಗೆ ತನ್ನ ವಯಸ್ಸಿನ ಬಗ್ಗೆ ನಿಖರವಾಗಿ ತಿಳಿದಂತಿಲ್ಲ. ಆದರೆ ತನ್ನ ಯೌವನದ ದಿನಗಳಲ್ಲಿ ಆಹಾರವೆಂಬುದು ಇಂದಿಗಿಂತ ಎಷ್ಟು ರುಚಿಕರವಾಗಿತ್ತುಎಂಬುದು ಅವಳಿಗೆ ಚೆನ್ನಾಗಿ ನೆನಪಿದೆ. ಆ ಕಾಲದ ಭೋಜನದ ಸವಿಯನ್ನು ನೆನಪಿಸುತ್ತಾ, ``ಈಗಿನ ಆಹಾರಗಳಲ್ಲಿ ಅಸಲಿ ರುಚಿಯು ಕಳೆದುಹೋಗಿ ಬೇರೆಯೇ ರುಚಿಯೊಂದು ಬಂದುಬಿಟ್ಟಿದೆ. ಮೊದಲಿನ ಸುವಾಸನೆಯೂಈಗಿಲ್ಲ. `ದೇಸಿ' ಎಂದು ಕರೆಯಲ್ಪಡುವ ಸ್ಥಳೀಯ ತಳಿಯ ಬೀಜಗಳೇ ಈಗ ಇಲ್ಲವಾಗಿವೆ. ಬಗೆಬಗೆಯ ಸ್ಥಳೀಯ ಬೀಜತಳಿಗಳು ಸಿಗುವುದೇ ಕಷ್ಟವೆಂಬ ಪರಿಸ್ಥಿತಿಯುಂಟಾಗಿದೆ'' ಎನ್ನುತ್ತಾರೆ ಈಕೆ.
ರಾಜಸ್ಥಾನದ ಉದಯಪುರ ಪಟ್ಟಣದ ಆಚೆಗಿರುವ `ಘಾಟಿ' ಎಂಬ ಹಳ್ಳಿಯಲ್ಲಿ ನೆಲೆಸಿರುವ ಚಮ್ನೀ ಬಾಯಿಗೆ ಎಂಭತ್ತರ ಪ್ರಾಯ ಎಂಬುದು ಅವರದ್ದೇ ಅಂದಾಜು. ಚಮ್ನೀಬಾಯಿ ಬಾಲ್ಯದಿಂದಲೂ ಬಗೆಬಗೆಯ ಸ್ಥಳೀಯ ತಳಿಯ ಬೀಜಗಳನ್ನು ಸಂಗ್ರಹಿಸುವ ಮತ್ತು ಸಂರಕ್ಷಿಸುವ ಅಭ್ಯಾಸವಿಟ್ಟುಕೊಂಡು ಬೆಳೆದವರು. ಬದುಕು ಕಟ್ಟಿಕೊಳ್ಳಲು ಗಂಡನೊಂದಿಗೆ ತನ್ನ ಮನೆ ಮತ್ತು ಜಮೀನಿಗಾಗಿ ಪಟ್ಟ ಪಾಡು ಆಕೆಗೆ ಇನ್ನೂ ನೆನಪಿದೆ. ಆದರೂ ಬದುಕು ಮತ್ತು ಆಹಾರಗಳು ಆ ಕಾಲದಲ್ಲೇ ಚೆನ್ನಾಗಿದ್ದವು ಎಂದು ಆಕೆ ಹೇಳುತ್ತಾರೆ.













