ಮಧುರೈಯಲ್ಲಿರುವ ನಮ್ಮ ಮನೆಯ ಮುಂದೆ ಒಂದು ಬೀದಿ ದೀಪವಿದೆ. ಆ ದೀಪದ ಕೆಳಗೆ ನಾನು ನನ್ನ ಬದುಕಿನ ಅನೇಕ ಸ್ಮರಣೀಯ ಸಂಭಾಷಣೆಗಳನ್ನು ನಡೆಸಿದ್ದೇನೆ. ಆ ದೀಪದ ಕಂಬದೊಡನೆ ನನಗೆ ವಿಶೇಷ ಸಂಬಂಧವಿದೆ. ಹಲವು ವರ್ಷಗಳ ಕಾಲ, ನಾನು ಶಾಲೆ ಮುಗಿಸುವ ತನಕವೂ ನಮ್ಮ ಮನೆಗೆ ವಿದ್ಯುತ್‌ ಸಂಪರ್ಕವಿದ್ದಿರಲಿಲ್ಲ. 2006ರಲ್ಲಿ ನಮ್ಮ ಮನೆಗೆ ಕರೆಂಟ್‌ ಬಂದಿತಾದರೂ ನಾವು ಐದು ಜನರು 8X8 ಅಡಿಯ ಮನೆಯಲ್ಲಿದ್ದ ಕಾರಣ ನನಗೆ ಆ ಬೀದಿ ದೀಪವೇ ಆಪ್ತವಾಯಿತು.

ನನ್ನ ಬಾಲ್ಯದಲ್ಲಿ ನಾವು ಆಗಾಗ್ಗೆ ಮನೆಗಳನ್ನು ಬದಲಾಯಿಸುತ್ತಿದ್ದೆವು, ಗುಡಿಸಲಿನಿಂದ ಮಣ್ಣಿನ ಮನೆಗೆ, ಅಲ್ಲಿಂದ ಬಾಡಿಗೆ ಕೋಣೆಗೆ, ನಾವು ಈಗ ಇರುವ 20X20 ಅಡಿ  ಮನೆಗೆ ವಿದ್ಯುತ್‌ ಸಂಪರ್ಕವನ್ನೂ ಹೊಂದಿದ್ದೇವೆ. ನನ್ನ ಪೋಷಕರು 12 ವರ್ಷಗಳಲ್ಲಿ ಒಂದೊಂದೇ ಇಟ್ಟಿಗೆಯನ್ನು ಒಟ್ಟುಗೂಡಿಸಿ ಈ ಮನೆ ಕಟ್ಟಿಸಿದರು. ಹೌದು, ಅವರು ಮೇಸ್ತ್ರಿಯನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು ಆದರೆ ಅದರಲ್ಲಿ ತಮ್ಮದೇ ಆದ ಕಠಿಣ ಪರಿಶ್ರಮವನ್ನು ಸಹ ಸುರಿದಿದ್ದಾರೆ ಮತ್ತು ಅದು ಪೂರ್ತಿಗೊಳ್ಳುವ‌ ಮೊದಲೇ ನಾವು ಮನೆಯಲ್ಲಿ ಒಕ್ಕಲು ಮಾಡಿದ್ದೆವು. ನಮ್ಮ ಇದುವರೆಗಿನ ಎಲ್ಲಾ ಮನೆಗಳೂ ಆ ದಾರಿ ದೀಪದ ಹತ್ತಿರದಲ್ಲೇ ಇದ್ದವು. ನಾನು ಚೆ ಗುವಾರ, ನೆಪೋಲಿಯನ್, ಸುಜಾತಾ ಮತ್ತು ಇತರರ ಪುಸ್ತಕಗಳನ್ನು ಇದೇ ಬೆಳಕಿನ ಕೆಳಗೆ ಕುಳಿತು ಎದೆಗಿಳಿಸಿಕೊಂಡಿದ್ದೆ.

ಈಗಲೂ ಅದೇ ಬೀದಿ ದೀಪ ಈ ನನ್ನ ಬರವಣಿಗೆಗೆ ಸಾಕ್ಷಿಯಾಗುತ್ತಿದೆ.

*****

ಒಂದು ವಿಷಯದಲ್ಲಿ ನಾನು ಕೊರೋನಾಗೆ ತ್ಯಾಂಕ್ಸ್‌ ಹೇಳಬೇಕು. ಇದರ ಕಾರಣದಿಂದಾಗಿ ನನಗೆ ಬಹಳ ಸಮಯದ ನಂತರ ಮನೆಯಲ್ಲಿ ಅಮ್ಮನೊಡನೆ ಸಾಕಷ್ಟು ಸಮಯ ಕಳೆಯಲು ಸಾಧ್ಯವಾಯಿತು. 2013ರಲ್ಲಿ ನನ್ನ ಮೊದಲ ಕೆಮೆರಾ ಖರೀದಿಸಿದ ಸಮಯದಿಂದ ನಾನು ಮನೆಯಲ್ಲಿದ್ದಿದ್ದೇ ಕಡಿಮೆ. ಶಾಲಾ ದಿನಗಳಲ್ಲೂ ನಾನು ಬೇರೆಯದೇ ಮನಸ್ಥಿತಿಯಲ್ಲಿದ್ದೆ. ಕೆಮೆರಾ ಖರೀದಿಯ ನಂತರ ನನ್ನ ಮನಸ್ಥಿತಿ ಸಂಪೂರ್ಣ ಬದಲಾಗಿ ಹೋಯಿತು. ಆದರೆ ಈ ಕೋವಿಡ್‌ ಲಾಕ್‌ಡೌನ್‌ ಮತ್ತು ಸಾಂಕ್ರಾಮಿಕ ಪಿಡುಗು ನನ್ನೊಳಗನ್ನು ನೋಡಿಕೊಳ್ಳಲು ಸಮಯ ನೀಡಿತು. ಈ ಸಮಯದಲ್ಲಿ ನನ್ನಮ್ಮನ ಜೊತೆಯಲ್ಲಿ ಸಾಕಷ್ಟು ಸಮಯವನ್ನು ಕಳೆದೆ. ಇಷ್ಟು ದಿನಗಳ ತನಕ ಅವರೊಡನೆ ಸಮಯ ಕಳೆಯುವುದು ಸಾಧ್ಯವೇ ಆಗಿರಲಿಲ್ಲ.

My mother and her friend Malar waiting for a bus to go to the Madurai Karimedu fish market.
PHOTO • M. Palani Kumar
Sometimes my father fetches pond fish on his bicycle for my mother to sell
PHOTO • M. Palani Kumar

ಎಡ: ನನ್ನಮ್ಮ ಮತ್ತು ಅವರ ಸ್ನೇಹಿತೆ ಮಲರ್‌ ಅವರೊಡನೆ ಮಧುರೈ ಕರಿಮೇಡುವಿಗೆ ಹೋಗುವ ಬಸ್ಸಿಗಾಗಿ ಕಾಯುತ್ತಿರುವುದು. ಬಲ: ಕೆಲವೊಮ್ಮೆ ನನ್ನಪ್ಪ ಕೆರೆಯಲ್ಲಿ ಮೀನು ಹಿಡಿದು ಸೈಕಲ್ಲಿನಲ್ಲಿ ತಂದು ಅಮ್ಮನಿಗಗೆ ಮಾರುವುದಕ್ಕೆ ನೀಡುತ್ತಾರೆ

ಅಮ್ಮ ಇದುವರೆಗೂ ಒಂದೆಡೆ ಕುಳಿತಿದ್ದು ನೋಡಿಯೇ ಇರಲಿಲ್ಲ. ಅವರು ಸದಾ ಏನಾದರೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತಿದ್ದರು. ಆದರೆ ಅವರಿಗೆ ಸಂಧಿವಾತ ಕಾಣಿಸಿಕೊಂಢ ನಂತರ ಅವರ ಚಟುವಟಿಕೆಗಳೆಲ್ಲ ಬಹುತೇಕ ಸ್ಥಗಿತಗೊಂಡವು. ಅಮ್ಮನನ್ನು ನಾನು ಈ ಸ್ಥಿತಿಯಲ್ಲಿ ಕಲ್ಪಿಸಿಕೊಂಡಿರಲೂ ಇಲ್ಲ.

ಇದು ಅವರನ್ನೂ ಸಾಕಷ್ಟು ಕಂಗೆಡಿಸಿದೆ. “ಈ ವಯಸ್ಸಿನಲ್ಲಿ ನನ್ನ ಪಾಡು ನೋಡು. ಇನ್ನು ಮಕ್ಕಳನ್ನ ಯಾರು ನೋಡಿಕೊಳ್ತಾರೆ?” ಎಂದು ಬೇಸರದಿಂದ ಹೇಳುತ್ತಾರೆ. “ನನ್ನ ಕಾಲುಗಳನ್ನು ಮೊದಲಿನ ಹಾಗೆ ನಡೆದಾಡುವ ಹಾಗೆ ಮಾಡಿಸು ಕುಮಾರ್‌,” ಎಂದು ಅವರು ಹೇಳಿದಾಗಲೆಲ್ಲ, ಅವರನ್ನು ನಾನು ಸರಿಯಾಗಿ ಕಾಳಜಿ ಮಾಡಲಿಲ್ಲವೇನೋ ಎನ್ನುವ ಪಾಪಪ್ರಜ್ಞೆ ಕಾಡತೊಡಗುತ್ತದೆ.

ನನ್ನ ಕುರಿತು ಹೇಳಬೇಕಾದದ್ದು ಸಾಕಷ್ಟಿದೆ. ಇಂದು ನಾನೊಬ್ಬ ಫೋಟೊಗ್ರಾಫರ್‌ ಎನ್ನಿಸಿಕೊಂಡಿರುವುದಕ್ಕೆ, ನಾನು ಭೇಟಿಯಾಗುವ ಹಲವು ಜನರು, ನನ್ನ ಸಾಧನೆಗಳು - ಹೀಗೆ ಪ್ರತಿಯೊಂದರ ಹಿಂದೆಯೂ ನನ್ನ ಹೆತ್ತವರ ಅಪಾರ ಪರಿಶ್ರಮವಿದೆ. ವಿಶೇಷವಾಗಿ ನನ್ನ ಅಮ್ಮನದು; ಅವರ ಪಾಲು ಬಹಳ ದೊಡ್ಡದು.

ಅಮ್ಮ ಮುಂಜಾನೆ 3 ಗಂಟೆಗೆ ಎದ್ದು ಮೀನು ಮಾರಲು ಮನೆಯಿಂದ ಹೊರಡುತ್ತಿದ್ದರು. ಅವರು ಆ ಸವಿ ನಿದ್ದೆಯ ಸಮಯದಲ್ಲಿ ನನ್ನನ್ನು ಎಬ್ಬಿಸಿ ಓದಲು ಕೂರಿಸುತ್ತಿದ್ದರು. ಅದು ಅವರ ಪಾಲಿಗೆ ಬಹಳ ಕಠಿಣ ಕೆಲಸವಾಗಿತ್ತು. ನಾನು ಅವರು ಹೋಗುವವರೆಗೂ ಬೀದಿದೀಪದ ಕೆಳಗೆ ಕೂತು ಓದುತ್ತಿದ್ದೆ. ಒಮ್ಮೆ ಅವರು ಕಣ್ಮರೆಯಾದ ಕೂಡಲೇ, ನಾನು ಮತ್ತೆ ಮಲಗಲು ಹೋಗುತ್ತಿದ್ದೆ. ಅನೇಕ ಬಾರಿ, ಆ ಬೀದಿದೀಪ ನನ್ನ ಜೀವನದ ಇಂತಹ ಘಟನೆಗಳಿಗೆ ಸಾಕ್ಷಿಯಾಗಿದೆ.

My mother carrying a load of fish around the market to sell.
PHOTO • M. Palani Kumar
My mother selling fish by the roadside. Each time the government expands the road, she is forced to find a new vending place for herself
PHOTO • M. Palani Kumar

ಎಡ: ಅಮ್ಮ ಮೀನು ಮಾರಲು ಮಾರುಕಟ್ಟೆಯಲ್ಲಿ ಮೀನಿನ ಬುಟ್ಟಿ ಹೊತ್ತು ತಿರುಗುತ್ತಿರುವುದು. ಬಲ: ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುತ್ತಿರುವ ನನ್ನ ತಾಯಿ. ಸರ್ಕಾರ ರಸ್ತೆಯನ್ನು ವಿಸ್ತರಿಸಿದಾಗಲೆಲ್ಲಾ, ಹೊಸ ಮಾರಾಟ ಸ್ಥಳವೊಂದನ್ನು ಹುಡಕಬೇಕಾದ ಅನಿವಾರ್ಯತೆ ಅವರನ್ನು ಕಾಡುತ್ತದೆ

ಅಮ್ಮ ಒಟ್ಟು ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಹೀಗೆ ಮೂರೂ ಬಾರಿಯೂ ಸಾವಿನ ದವಡೆಯಿಂದ ಪಾರಾಗಿದ್ದು ಸಾಧಾರಣ ಸಂಗತಿಯಲ್ಲ.

ಇಲ್ಲಿ ನಾನು ಹಂಚಿಕೊಳ್ಳಲು ಬಯಸುವ ಒಂದು ಘಟನೆಯೊಂದಿದೆ. ನಾನು ಅಂಬೆಗಾಲಿಡುವ ಮಗುವಾಗಿದ್ದಾಗ, ನನ್ನ ತಾಯಿ ನೇಣು ಹಾಕಿಕೊಳ್ಳಲು ಪ್ರಯತ್ನಿಸಿದರು. ಅಷ್ಟರಲ್ಲಿ, ನಾನು ತುಂಬಾ ಜೋರಾಗಿ ಅಳುತ್ತಿದ್ದೆ. ನನ್ನ ಗೋಳಾಟ ಕೇಳಿ ನೆರೆಹೊರೆಯವರು ಏನಾಯಿತು ಎಂದು ನೋಡಲು ಓಡಿ ಬಂದರು. ನನ್ನ ತಾಯಿ ನೇಣಿನಲ್ಲಿ ನೇತಾಡುತ್ತಿರುವುದನ್ನು ಅವರು ಕಂಡು ರಕ್ಷಿಸಿದರು. ಕೆಲವರು ಆ ಸಮಯದಲ್ಲಿ ಅವರ ನಾಲಿಗೆ ಹೊರಚಾಚಿತ್ತು ಎಂದು ಹೇಳುತ್ತಾರೆ. "ಅಂದು ನೀನು ಅಳದೆ ಹೋಗಿದ್ದರೆ, ನನ್ನನ್ನು ಉಳಿಸಲು ಯಾರೂ ಬರುತ್ತಿರಲಿಲ್ಲ" ಎಂದು ಈಗಲೂ ಅಮ್ಮ ಹೇಳುತ್ತಾರೆ.

ನಾನು ಅನೇಕ ತಾಯಂದಿರ ಕಥೆಗಳನ್ನು ಕೇಳಿದ್ದೇನೆ – ನನ್ನ ತಾಯಿಂತೆಯೇ - ಅವರೂ ತಮ್ಮನ್ನು ಕೊಂದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೂ, ಹೇಗೋ, ಅವರು ಧೈರ್ಯ ಮಾಡಿಕೊಳ್ಳುತ್ತಾರೆ ಮತ್ತು ತಮ್ಮ ಮಕ್ಕಳ ಸಲುವಾಗಿ ಜೀವಂತವಾಗಿರುತ್ತಾರೆ. ನನ್ನ ತಾಯಿ ಈ ವಿಷಯದ ಬಗ್ಗೆ ಮಾತನಾಡಿದಾಗಲೆಲ್ಲಾ, ಅವರ ಕಣ್ಣಿನಲ್ಲಿ ನೀರು ತುಂಬಿರುತ್ತದೆ.

ಒಮ್ಮೆ, ಪಕ್ಕದ ಹಳ್ಳಿಯಲ್ಲಿ ಭತ್ತದ ನಾಟಿ ಮಾಡಲು ಹೋಗಿದ್ದರು. ಅಲ್ಲೇ ಹತ್ತಿರದ ಮರಕ್ಕೆ ಒಂದು ತೂಲಿಯನ್ನು (ಜೋಲಿ) ಕಟ್ಟಿ ಅದರಲ್ಲಿ ಮಲಗಿಸಿದ್ದರು. ನನ್ನ ತಂದೆ ಅಲ್ಲಿಗೆ ಬಂದು ನನ್ನ ತಾಯಿಯನ್ನು ಹೊಡೆದು ತೊಟ್ಟಿಲಿನಿಂದ ಎಸೆದರು. ನಾನು ಹಸಿರು ಹೊಲಗಳ ಕೆಸರು ತುಂಬಿದ ಗದ್ದೆಯ ಅಂಚಿನಿಂದ ಸ್ವಲ್ಪ ದೂರದಲ್ಲಿ ಬಿದ್ದೆ, ಮತ್ತು ನನ್ನ ಉಸಿರಾಟ ನಿಂತಂತೆ ಕಂಡಿತ್ತು.

ನನಗೆ ಪ್ರಜ್ಞೆಗೆ ಮರಳುವಂತೆ ಮಾಡಲು ನನ್ನ ತಾಯಿ ಸಾಧ್ಯವಾದಷ್ಟು ಪ್ರಯತ್ನಿಸಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ. ತಾಯಿಯ ತಂಗಿಯಾದ ನನ್ನ ಚಿ ತ್ತಿ ನನ್ನನ್ನು ತಲೆಕೆಳಗಾಗಿ ಹಿಡಿದು ನನ್ನ ಬೆನ್ನಿನ ಮೇಲೆ ಹೊಡೆದಳು. ತಕ್ಷಣ, ಅವರು ನನಗೆ ಹೇಳಿದ ಹಾಗೆ, ನಾನು ಉಸಿರಾಡಲು ಮತ್ತು ಅಳಲು ಪ್ರಾರಂಭಿಸಿದ್ದೆ. ಅಮ್ಮ ಈ ಘಟನೆಯನ್ನು ನೆನಪಿಸಿಕೊಂಡಾಗಲೆಲ್ಲಾ, ಅದು ಅವರ ಬೆನ್ನುಮೂಳೆಯಲ್ಲಿ ಛಳುಕೊಂದನ್ನು ಹುಟ್ಟಿಸುತ್ತದೆ. ಅಂದು ನಾನು ಅಕ್ಷರಶಃ ಸುತ್ತು ಹುಟ್ಟಿದ್ದಾಗಿ ಹೇಳುತ್ತಾರೆ ಅಮ್ಮ.

My mother spends sleepless nights going to the market to buy fish for the next day’s sale in an auto, and waiting there till early morning for fresh fish to arrive.
PHOTO • M. Palani Kumar
She doesn’t smile often. This is the only one rare and happy picture of my mother that I have.
PHOTO • M. Palani Kumar

ಎಡ: ಮರುದಿನ ಮಾರಾಟಕ್ಕೆ ಮೀನು ತರಲೆಂದು ರಾತ್ರಿ ನಿದ್ರೆ ಬಿಟ್ಟು ಮಾರುಕಟ್ಟೆಗೆ ಹೋಗಿ ಕಾಯ್ದು ಬೆಳಗಿನ ಜಾವಕ್ಕೆ ಬರುವ ತಾಜಾ ಮೀನನ್ನು ಕೊಂಡು ತರುತ್ತಾರೆ. ಬಲ: ಅಮ್ಮ ನಗುವುದು ಬಹಳ ಅಪರೂಪ. ನನ್ನ ಬಳಿಯಿರುವ ಅಮ್ಮ ನಗುತ್ತಿರುವ ಚಿತ್ರ ಇದೊಂದೆ

*****

ನಾನು ಎರಡು ವರ್ಷದವನಾಗಿದ್ದಾಗ, ನನ್ನ ತಾಯಿ ಹೊಲಗಳಲ್ಲಿ ದುಡಿಯುವುದನ್ನು ನಿಲ್ಲಿಸಿ ಮೀನು ಮಾರಾಟಮಾಡಲು ಆರಂಭಿಸಿದರು. ಅದು ಅಂದಿನಿಂದ ಅವರ ಮುಖ್ಯ ಆದಾಯದ ಮೂಲವಾಯಿತು ಮತ್ತು ಈಗಲೂ ಹಾಗೇ ಉಳಿದಿದೆ. ನಾನು ಕಳೆದ ಒಂದು ವರ್ಷದಿಂದಷ್ಟೇ ಕುಟುಂಬದಲ್ಲಿ ಸಂಪಾದಿಸುವ ಸದಸ್ಯನಾಗಿದ್ದೇನೆ. ಅಲ್ಲಿಯವರೆಗೆ, ನನ್ನ ತಾಯಿ ನಮ್ಮ ಮನೆಯ ಏಕೈಕ ಸಂಪಾದನೆದಾರರಾಗಿದ್ದರು. ಅವರು ಸಂಧಿವಾತದಿಂದ ಬಳಲುತ್ತಿದ್ದಾಗಲೂ, ಮಾತ್ರೆಗಳನ್ನು ನುಂಗಿ ನೋವು ಮರೆತು ಮೀನು ಮಾರಾಟವನ್ನು ಮುಂದುವರಿಸುತ್ತಿದ್ದರು. ಅವರು ಎಂದಿಗೂ ಶ್ರಮಜೀವಿಯೇ ಹೌದು.

ನನ್ನ ತಾಯಿಯ ಹೆಸರು ತಿರುಮಾಯಿ. ಗ್ರಾಮಸ್ಥರು ಅವರನ್ನು ಕುಪ್ಪಿ ಎಂದು ಕರೆಯುತ್ತಾರೆ. ನನ್ನನ್ನು ಸಾಮಾನ್ಯವಾಗಿ ಕುಪ್ಪಿಯ ಮಗ ಎಂದು ಕರೆಯಲಾಗುತ್ತದೆ. ಕಳೆ ತೆಗೆಯುವುದು, ಭತ್ತದ ಕೊಯ್ಲು ಮಾಡುವುದು, ಕಾಲುವೆಗಳನ್ನು ಅಗೆಯುವುದು: ಇದು ಅವರಿಗೆ ವರ್ಷಗಳ ಕಾಲ ಸಿಕ್ಕ ಕೆಲಸವಾಗಿತ್ತು. ನನ್ನ ಅಜ್ಜ ಒಂದು ತುಂಡು ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡಾಗ, ಏಕಾಂಗಿಯಾಗಿ ಅದರ ಮೇಲೆ ಗೊಬ್ಬರವನ್ನು ಹರಡುವ ಮೂಲಕ ಹೊಲವನ್ನು ಸಿದ್ಧಪಡಿಸಿದ್ದರು. ನನ್ನ ಅಮ್ಮನಂತೆ ಕಠಿಣ ಕೆಲಸವನ್ನು ಯಾರೂ ಮಾಡುವುದನ್ನು ನಾನು ಇಂದಿಗೂ ನೋಡಿಲ್ಲ. ನನ್ನ ಮಾ ಯಿ (ಅಜ್ಜಿ) ಕಠಿಣ ಪರಿಶ್ರಮವೆನ್ನುವುದು ಅಮ್ಮನಿಗೆ ಸಮಾನಾರ್ಥಕ ಪದವಾಗಿದೆ ಎಂದು ಪ್ರತಿಕ್ರಿಯಿಸುತ್ತಿದ್ದರು. ಯಾರಾದರೂ ಹೀಗೆ ಬೆನ್ನು ಮುರಿಯುವಂತೆ ದುಡಿಯುವುದು ಹೇಗೆ ಸಾಧ್ಯವೆಂದು ನನಗೆ ಆಶ್ಚರ್ಯವಾಗುತ್ತಿತ್ತು.

ಸಾಮಾನ್ಯವಾಗಿ, ದಿನಗೂಲಿ ಕಾರ್ಮಿಕರು ಮತ್ತು ಇತರ ಕಾರ್ಮಿಕರು ಸಾಕಷ್ಟು ಕೆಲಸ ಮಾಡುತ್ತಾರೆ - ವಿಶೇಷವಾಗಿ ಮಹಿಳೆಯರು. ನನ್ನ ಅಜ್ಜಿಗೆ ನನ್ನ ತಾಯಿ ಸೇರಿದಂತೆ 7 ಮಕ್ಕಳಿದ್ದರು - 5 ಹೆಣ್ಣು ಮತ್ತು 2 ಗಂಡು. ನನ್ನ ತಾಯಿ ಹಿರಿಯವರು. ನನ್ನ ಅಜ್ಜ ಕುಡುಕನಾಗಿದ್ದ, ತನ್ನ ಸ್ವಂತ ಮನೆಯನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಮದ್ಯಕ್ಕಾಗಿ ಖರ್ಚು ಮಾಡಿದ್ದ. ನನ್ನ ಅಜ್ಜಿ ಎಲ್ಲವನ್ನೂ ಮಾಡಿದರು: ಅವರು ಜೀವನವನ್ನು ಕಟ್ಟಿಕೊಂಡರು ತನ್ನ ಮಕ್ಕಳಿಗೆ ಮದುವೆ ಮಾಡಿದ್ದಲ್ಲದೆ ಮೊಮ್ಮಕ್ಕಳನ್ನೂ ನೋಡಿಕೊಂಡರು.

ನನ್ನ ತಾಯಿಯಲ್ಲಿಯೂ ಕೆಲಸದ ಕುರಿತು ಅದೇ ಸಮರ್ಪಣೆಯನ್ನು ನಾನು ನೋಡುತ್ತೇನೆ. ನನ್ನ ಚಿ ತ್ತಿ ತಾನು ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗಲು ಬಯಸಿದಾಗ, ಅಮ್ಮ ಧೈರ್ಯದಿಂದ ಮುಂದೆ ಹೋಗಿ ಮದುವೆಗೆ ಸಹಾಯ ಮಾಡಿದರು. ಒಂದು ಬಾರಿ, ನಾವು ಗುಡಿಸಲಿನಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ, ಅದು ಇದ್ದಕ್ಕಿದ್ದಂತೆ ಬೆಂಕಿಗೆ ಆಹುತಿಯಾಗಿತ್ತು, ನನ್ನ ತಾಯಿ ನನ್ನನ್ನು, ನನ್ನ ಕಿರಿಯ ಸಹೋದರ ಮತ್ತು ಸಹೋದರಿಯನ್ನು ಹಿಡಿದು ನಮ್ಮೆಲ್ಲರನ್ನು ರಕ್ಷಿಸಿದರು. ಅವರು ಯಾವಾಗಲೂ ನಿರ್ಭೀತರಾಗಿರುತ್ತಾರೆ. ತಾಯಂದಿರು ಮಾತ್ರವೇ ತಮ್ಮ ಸ್ವಂತ ಜೀವ ಅಪಾಯದಲ್ಲಿರುವಾಗಲೂ ಮೊದಲು ತಮ್ಮ ಮಕ್ಕಳ ಬಗ್ಗೆ ಯೋಚಿಸಬಲ್ಲರು.

Amma waits outside the fish market till early in the morning to make her purchase.
PHOTO • M. Palani Kumar
From my childhood days, we have always cooked on a firewood stove. An LPG connection came to us only in the last four years. Also, it is very hard now to collect firewood near where we live
PHOTO • M. Palani Kumar

ಎಡ: ಅಮ್ಮ ಬೆಳಗಿನ ಮೀನು ಖರೀದಿಗಾಗಿ ಮಾರುಕಟ್ಟೆಯ ಹೊರಗೆ ಕುಳಿತು ಕಾಯುತ್ತಿರುವುದು. ಬಲ: ನಮ್ಮ ಮನೆಯಲ್ಲಿ ಮೊದಲಿನಿಂದಲೂ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದೆವು. ಈಗ ನಾಲ್ಕು ವರ್ಷಗಳ ಹಿಂದೆಯಷ್ಟೇ ನಮ್ಮ ಮನೆಗೆ ಎಲ್‌ಪಿಜಿ ಗ್ಯಾಸ್‌ ಕನೆಕ್ಷನ್‌ ಪಡೆದೆವು. ಅಲ್ಲದೆ ಇತ್ತೀಚೆಗೆ ನಮ್ಮ ಮನೆಯ ಬಳಿ ಸೌದೆ ಹುಡುಕುವುದು ಕೂಡಾ ಬಹಳ ಕಷ್ಟದ ಕೆಲಸ

ಅವರು ಮನೆಯ ಹೊರಗೆ, ಉರುವಲು ಒಲೆಯ ಮೇಲೆ ಪನಿಯಾರಂ (ಸಿಹಿ ಅಥವಾ ಹುಳಿಯಾದ ರುಚಿಕರವಾದ ತಿನಿಸು) ಬೇಯಿಸುತ್ತಿದ್ದರು. ಜನರು ಸುತ್ತಲೂ ಅಲೆದಾಡುತ್ತಿದ್ದರು; ಮಕ್ಕಳು ತಿನ್ನಲು ಕೇಳುತ್ತಿದ್ದರು. "ಮೊದಲು ಎಲ್ಲರೊಂದಿಗೂ ಹಂಚಿಕೊಳ್ಳಿ", ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಮತ್ತು ನಾನು ನೆರೆಹೊರೆಯ ಮಕ್ಕಳಿಗೆ ಬೊಗಸೆ ತುಂಬಾ ನೀಡುತ್ತಿದ್ದೆ.

ಅವರಿಗಿದ್ದ ಇತರರ ಕುರಿತ ಕಾಳಜಿ ಹಲವು ಬಗೆಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ನಾನು ಪ್ರತಿ ಸಲ ಬೈಕ್‌ ತೆಗೆದುಕೊಂಡು ಹೊರಟಾಗಲೂ, ಅವರು ಹೇಳುತ್ತಿದ್ದರು; “ನಿನಗೆ ಪೆಟ್ಟಾದರೂ ಸರಿಯೇ, ದಯವಿಟ್ಟು ಬೇರೆಯವರಿಗೆ ಪೆಟ್ಟಾಗದ ಹಾಗೆ ನೋಡಿಕೋ...”

ಅವರು ಊಟ ಮಾಡಿದ್ದಾರೋ ಇಲ್ಲವೋ ಎಂದು ನನ್ನ ತಂದೆ ಒಮ್ಮೆಯೂ ಅವರನ್ನು ಕೇಳಿಲ್ಲ. ಅವರು ಎಂದಿಗೂ ಒಟ್ಟಿಗೆ ಸಿನೆಮಾ ನೋಡಲು ಹೋಗಿಲ್ಲ, ಅಥವಾ ದೇವಾಲಯಕ್ಕೆ ಹೋಗಿಲ್ಲ. ಅವರು ಯಾವಾಗಲೂ ದುಡಿಯುತ್ತಲೇ ಇದ್ದರು. ಮತ್ತು ನನಗೆ ಹೇಳುತ್ತಿದ್ದರು, "ನಿಮಗಾಗಿ ಇನ್ನೂ ಬದುಕಿದ್ದೇನೆ, ಇಲ್ಲದೆ ಹೋಗಿದ್ದರೆ ನಾನು ಬಹಳ ಹಿಂದೆಯೇ ಸಾಯುತ್ತಿದ್ದೆ."

ನಾನು ಕ್ಯಾಮೆರಾ ಖರೀದಿಸಿದ ನಂತರ, ಕಥೆಗಳನ್ನು ಹುಡುಕಲು ಹೋದಾಗ ನಾನು ಭೇಟಿಯಾಗುವ ಮಹಿಳೆಯರು ಯಾವಾಗಲೂ "ನಾನು ನನ್ನ ಮಕ್ಕಳಿಗಾಗಿ ಬದುಕುತ್ತಿದ್ದೇನೆ" ಎಂದು ಹೇಳುತ್ತಾರೆ. ನನ್ನ 30 ವರ್ಷಗಳ ಅನುಭವದಲ್ಲಿ ಹೇಳುವುದಾದರೆ ಇದು ನಿಜ.

*****

ನನ್ನ ತಾಯಿ ಮೀನು ಮಾರಾಟ ಮಾಡುತ್ತಿದ್ದ ಕುಟುಂಬಗಳು, ಆ ಕುಟುಂಬಗಳ ಮಕ್ಕಳು ಗೆದ್ದ ಕಪ್‌ಗಳು ಮತ್ತು ಪದಕಗಳು ಮನೆಯ ಶೋಕೇಸಿನಲ್ಲಿ ಇರುತ್ತಿದ್ದವು. ನನ್ನ ತಾಯಿ ತನ್ನ ಮಕ್ಕಳು ಸಹ ಮನೆಗೆ ಟ್ರೋಫಿಗಳನ್ನು ತರುವುದನ್ನು ನೋಡಬೇಕೆನ್ನುವ ಆಸೆಯಿರುವುದಾಗಿ ಹೇಳುತ್ತಿದ್ದರು. ಆದರೆ ಆಗ ನನ್ನ ಬಳಿ ಅವರಿಗೆ ತೋರಿಸಲು ಕೇವಲ ನನ್ನ ಇಂಗ್ಲಿಷ್ ಉತ್ತರ ಪತ್ರಿಕೆಯ 'ವೈಫಲ್ಯದ ಗುರುತುಗಳು' ಮಾತ್ರವೇ ಇದ್ದವು. ಆ ದಿನ ಅವರು ನನ್ನ ಬಗ್ಗೆ ಕೋಪಗೊಂಡಿದ್ದರು. "ನಾನು ಕಷ್ಟಪಟ್ಟು ಖಾಸಗಿ ಶಾಲೆಯ ಫೀಸು ಕಟ್ಟಿದರೆ ನೀನು ಫೇಲಾಗಿದ್ದೀಯ"ಎಂದು ಕೋಪದಿಂದ ಹೇಳಿದ್ದರು.

My mother waiting to buy pond fish.
PHOTO • M. Palani Kumar
Collecting her purchase in a large bag
PHOTO • M. Palani Kumar

ಎಡ: ಅಮ್ಮ ಕೆರೆ ಮೀನಿನ ಖರೀದಿಗಾಗಿ ಕಾಯುತ್ತಿರುವುದು. ಬಲ: ತಾನು ಕೊಂಡ ಮೀನನ್ನು ಚೀಲದಲ್ಲಿ ಹಾಕಿಸಿಕೊಳ್ಳುತ್ತಿರುವುದು

ಏನಾದರೂ ಸಾಧಿಸಿ ಯಶಸ್ವಿಯಾಗುವ ನನ್ನ ದೃಢ ನಿರ್ಧಾರಕ್ಕೆ ಅವರ ಕೋಪವು ಬೀಜವೂರಿತ್ತು. ಆ ಮೊದಲ ಪ್ರಗತಿಯು ಫುಟ್ಬಾಲ್ ಮೂಲಕ ಬಂದಿತು. ನಾನು ನಿಜವಾಗಿಯೂ ಪ್ರೀತಿಸುತ್ತಿದ್ದ ಕ್ರೀಡೆಯಲ್ಲಿ ಶಾಲಾ ತಂಡಕ್ಕೆ ಪ್ರವೇಶಿಸಲು ನಾನು ಎರಡು ವರ್ಷಗಳಿಂದ ಕಾಯುತ್ತಿದ್ದೆ. ಮತ್ತು ನಮ್ಮ ತಂಡದೊಂದಿಗಿನ ನನ್ನ ಮೊದಲ ಪಂದ್ಯದಲ್ಲಿ, ಪಂದ್ಯಾವಳಿಯಲ್ಲಿ ಕಪ್ ಗೆದ್ದಿದ್ದೆವು. ಆ ದಿನ, ತುಂಬಾ ಹೆಮ್ಮೆಯಿಂದ, ನಾನು ಮನೆಗೆ ಬಂದು ಲೋಟವನ್ನು ಅವರಿಗೆ ಹಸ್ತಾಂತರಿಸಿದೆ.

ಫುಟ್ಬಾಲ್ ನನ್ನ ಓದಿಗೂ ಸಹಾಯ ಮಾಡಿತು. ಕ್ರೀಡಾ ಕೋಟಾದಲ್ಲಿ ನಾನು ಹೊಸೂರಿನ ಎಂಜಿನಿಯರಿಂಗ್ ಕಾಲೇಜು ಸೇರಿ ಪದವಿ ಪಡೆದೆ. ಆದರೂ, ನಾನು ಫೋಟೊಗ್ರಫಿಗಾಗಿ ಎಂಜಿನಿಯರಿಂಗ್ ಅನ್ನು ತೊರೆದೆ. ಆದರೆ ಸರಳವಾಗಿ ಹೇಳುವುದಾದರೆ, ನಾನು ಇಂದು ಏನಾಗಿದ್ದೇನೆಯೋ ಅದಕ್ಕೆ ನನ್ನ ತಾಯಿಯೇ ಕಾರಣ.

ಅವರು ನನಗಾಗಿ ಖರೀದಿಸುತ್ತಿದ್ದ ಪರುತಿಪಾಲ್ ಪನಿಯಾರಾಮ್ (ಹತ್ತಿ ಬೀಜದ ಹಾಲು ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿ) ತಿನ್ನಲು ಹಂಬಲಿಸುತ್ತಾ ನಾನು ಬಾಲ್ಯದಲ್ಲಿ ಅವರೊಡನೆ ಮಾರುಕಟ್ಟೆಗೆ ಹೋಗುತ್ತಿದ್ದೆ.

ಸೊಳ್ಳೆ ಕಡಿತದಿಂದಾಗಿ ನಿದ್ರೆಯಿಲ್ಲದ ಆ ರಾತ್ರಿಗಳು, ರಸ್ತೆ ಬದಿಯ ಪ್ಲಾಟ್ ಫಾರ್ಮಿನಲ್ಲಿ ನಾವು ತಾಜಾ ಮೀನುಗಳು ಮಾರುಕಟ್ಟೆಗೆ ಬರುವವರೆಗೆ ಕಾಯುತ್ತಿದ್ದೆವು - ಮತ್ತು ಮೀನು ಖರೀದಿಸಲು ಮುಂಜಾನೆ ಬೇಗನೆ ಏಳುತ್ತಿದ್ದೆವು, ಈಗ ಆಶ್ಚರ್ಯಕರವಾಗಿ ತೋರುತ್ತದೆ. ಆದರೆ ಆ ಸಮಯದಲ್ಲಿ ಅದು ತೀರಾ ಸಾಮಾನ್ಯವಾಗಿತ್ತು. ಒಂದು ಸಣ್ಣ ಲಾಭವನ್ನು ಗಳಿಸಲು ನಾವು ಪ್ರತಿಯೊಂದು ಮೀನನ್ನೂ ಮಾರಾಟ ಮಾಡಬೇಕಾಗಿತ್ತು.

My father and mother selling fish at one of their old vending spots in 2008.
PHOTO • M. Palani Kumar
During the Covid-19 lockdown, we weren’t able to sell fish on the roadside but have now started again
PHOTO • M. Palani Kumar

ನನ್ನ ಅಪ್ಪ ಮತ್ತು ಅಮ್ಮ ತಮ್ಮ ಹಳೆಯ ಮೀನಿನಂಗಡಿಯಲ್ಲಿ ಮೀನು ಮಾರುತ್ತಿರುವುದು. ಇದು 2008ರ ಫೋಟೊ. ಬಲ: ಕೋವಿಡ್‌ - 19 ಸಮಯದಲ್ಲಿ ರಸ್ತೆ ಬದಿಯಲ್ಲಿ ಮೀನು ಮಾರಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಮಾರಾಟ ಪ್ರಾರಂಭಿಸಿದ್ದೇವೆ

ಮಧುರೈ ಕರಿಮೆಡು ಮೀನು ಮಾರುಕಟ್ಟೆಯಲ್ಲಿ ಅಮ್ಮ 5 ಕಿಲೋಗ್ರಾಂ ಮೀನು ಖರೀದಿಸುತ್ತಿದ್ದರು. ಅದರಲ್ಲಿ ಅದರ ಸುತ್ತಲೂ ಪ್ಯಾಕ್ ಮಾಡಲಾಗಿರುತ್ತಿದ್ದ ಮಂಜುಗಡ್ಡೆಯ ತೂಕವೂ ಸೇರಿತ್ತು. ಅದನ್ನು ಬುಟ್ಟಿಯಲ್ಲಿ ತಲೆಯ ಮೇಲೆ ಹೊತ್ತುಕೊಂಡು ಮಧುರೈನ ಬೀದಿಗಳಲ್ಲಿ ಚಿಲ್ಲರೆಯಾಗಿ ಮಾರುವುದರಲ್ಲಿ, ಮಂಜುಗಡ್ಡೆ ಕರಗುವುದರೊಂದಿಗೆ ಅದರ ತೂಕದಲ್ಲಿ 1 ಕಿಲೋ ನಷ್ಟವಾಗಿರುತ್ತಿತ್ತು.

ಅವಳು 25 ವರ್ಷಗಳ ಹಿಂದೆ ಈ ವ್ಯವಹಾರ ಪ್ರಾರಂಭಿಸಿದಾಗ, ದಿನಕ್ಕೆ 50 ರೂಪಾಯಿಗಳಿಗಿಂತ ಹೆಚ್ಚು ಗಳಿಸಲಾಗುತ್ತಿರಲಿಲ್ಲ. ನಂತರ ಅದು 200-300 ರೂಪಾಯಿಗಳಾಯಿತು. ಈ ಸಮಯದಲ್ಲಿ, ತಿರುಗಾಟ ಮಾಡಿ ಮಾರುವುದನ್ನು ಬಿಟ್ಟು ತನ್ನದೇ ಆದ ರಸ್ತೆಬದಿಯ ಮೀನು ಅಂಗಡಿ ಇಟ್ಟರು. ಈಗ, ಅವರ ಮಾಸಿಕ ಆದಾಯ ಸುಮಾರು 12,000 ರೂಪಾಯಿಗಳು - ಪ್ರತಿ ತಿಂಗಳ 30 ದಿನವೂ ಕೆಲಸ ಮಾಡುತ್ತಾರೆ.

ನಾನು ಸಾಕಷ್ಟು ದೊಡ್ಡವನಾಗಿದ್ದಾಗ, ವಾರದ ದಿನಗಳಲ್ಲಿ ಕರಿಮೇಡುವಿನಲ್ಲಿ ಮೀನುಗಳನ್ನು ಖರೀದಿಸಲು ದಿನಕ್ಕೆ 1,000 ರೂಪಾಯಿಗಳನ್ನು ತೊಡಗಿಸುತ್ತಿದ್ದಿದ್ದು ನೆನಪಿದೆ, ಆ ಮೊತ್ತಕ್ಕೆ ಏನು ತಂದರೂ. ವಾರಾಂತ್ಯದಲ್ಲಿ ಅತ್ಯುತ್ತಮ ರೀತಿಯಲ್ಲಿ ಮಾರಾಟಗೊಳ್ಳುತ್ತಿತ್ತು, ಹೀಗಾಗಿ ಅವರು 2,000 ರೂಪಾಯಿಗಳ ಹೂಡಿಕೆಯ ಅಪಾಯವನ್ನು ಮೈಮೇಲೆ ಎಳೇದುಕೊಳ್ಳುತ್ತಿದ್ದರು. ಈಗ, ಪ್ರತಿದಿನ 1,500 ರೂಪಾಯಿಗಳನ್ನು ಮತ್ತು ವಾರಾಂತ್ಯದಲ್ಲಿ 5-6,000 ರೂಪಾಯಿಗಳನ್ನು ಹೂಡಿಕೆ ಮಾಡುತ್ತಾರೆ. ಆದರೆ ಅಮ್ಮ ತುಂಬಾ ಉದಾರಿಯಾದ ಕಾರಣ ಸ್ವಲ್ಪವೇ ಲಾಭ ಗಳಿಸುತ್ತಾರೆ. ಅವಳು ಎಂದಿಗೂ ತೂಕದಲ್ಲಿ ಮೋಸ ಮಾಡುವುದಿಲ್ಲ ಮತ್ತು ತನ್ನ ಗ್ರಾಹಕರಿಗೆ ಒಂದಿಷ್ಟು ಹೆಚ್ಚೇ ನೀಡುತ್ತಾರೆ.

ನನ್ನ ತಾಯಿ ಕರಿಮೇಡುವಿನಲ್ಲಿ ಮೀನು ಖರೀದಿಸಲು ಖರ್ಚು ಮಾಡುವ ಹಣವು ಲೇವಾದೇವಿಗಾರರಿಂದ ಬರುತ್ತದೆ, ಅವರು ಅದನ್ನು ಮರುದಿನ ಮರುಪಾವತಿ ಮಾಡಬೇಕಾಗುತ್ತದೆ. ಪ್ರತಿ ವಾರದ ದಿನದಲ್ಲಿ 1,500 ರೂಪಾಯಿಗಳನ್ನು ಸಾಲವಾಗಿ ಪಡೆದರೆ, 24 ಗಂಟೆಗಳ ನಂತರ 1,600 ರೂಪಾಯಿಗಳನ್ನು ಮರುಪಾವತಿಸಬೇಕಾಗುತ್ತದೆ - ಅಂದರೆ: ದಿನಕ್ಕೆ 100 ರೂಪಾಯಿಗಳ ಫ್ಲಾಟ್ ಬಡ್ಡಿ ದರ. ಹೆಚ್ಚಿನ ವಹಿವಾಟುಗಳು ಒಂದೇ ವಾರದಲ್ಲಿ ಇತ್ಯರ್ಥವಾಗುವುದರಿಂದ, ವಾರ್ಷಿಕ ಪರಿಭಾಷೆಯಲ್ಲಿ, ಈ ಸಾಲದ ಮೇಲಿನ ಬಡ್ಡಿಯು 2,400 ಪ್ರತಿಶತವನ್ನು ಮೀರುತ್ತದೆ ಎಂಬ ಅಂಶವನ್ನು ಇದು ಮರೆಮಾಡುತ್ತದೆ.

These are the earliest photos that I took of my mother in 2008, when she was working hard with my father to build our new house. This photo is special to me since my journey in photography journey began here
PHOTO • M. Palani Kumar
PHOTO • M. Palani Kumar

2008ರಲ್ಲಿ ನನ್ನ ತಾಯಿ (ಎಡ) ಮತ್ತು ತಂದೆ (ಬಲ) ಇಬ್ಬರೂ ಸೇರಿ ನಮ್ಮ ಹೊಸ ಮನೆಯನ್ನು ನಿರ್ಮಿಸಲು ಶ್ರಮಿಸುತ್ತಿದ್ದಾಗ ನಾನು ತೆಗೆದ ಆರಂಭಿಕ ದಿನಗಳ ಫೋಟೋಗಳು ಇವು. ನನ್ನ ಬದುಕಿನ ಫೋಟೋಗ್ರಫಿ ಪ್ರಯಾಣದಲ್ಲಿ ಈ ಎರಡು ಫೋಟೋಗಳು ನನ್ನ ಪಾಲಿಗೆ ವಿಶೇಷವಾದುವು

ತನ್ನ ವಾರಾಂತ್ಯದ ಮೀನು ಖರೀದಿಗಾಗಿ ಅವನಿಂದ 5,000 ರೂಪಾಯಿಗಳನ್ನು ಸಾಲ ಪಡೆದರೆ, ಸೋಮವಾರ ಅವನಿಗೆ 5,200 ರೂಪಾಯಿಗಳನ್ನು ಹಿಂದಿರುಗಿಸಬೇಕು. ಎರಡೂ ಸಂದರ್ಭಗಳಲ್ಲಿ, ವಾರದ ದಿನ ಅಥವಾ ವಾರಾಂತ್ಯದ ಸಾಲ, ವಿಳಂಬವಾದಲ್ಲಿ ಪ್ರತಿ ಹೆಚ್ಚುವರಿ ದಿನವು ಅವಋ ಸಾಲದ ಹೊರೆಗೆ ಇನ್ನೂ 100 ರೂಪಾಯಿಗಳನ್ನು ಸೇರಿಸುತ್ತದೆ. ವಾರಾಂತ್ಯದ ಸಾಲವು ವಾರ್ಷಿಕ ಶೇಕಡಾ 730ರ ಬಡ್ಡಿ ದರದಲ್ಲಿ ಕಾರ್ಯನಿರ್ವಹಿಸುತ್ತದೆ.

ಮೀನು ಮಾರುಕಟ್ಟೆಗೆ ನನ್ನ ಭೇಟಿಗಳು ನನಗೆ ಸಾಕಷ್ಟು ಕಥೆಗಳನ್ನು ಕೇಳಲು ಅವಕಾಶವನ್ನು ನೀಡಿದೆ. ಕೆಲವರು ನನ್ನನ್ನು ಅಚ್ಚರಿಗೀಡುಮಾಡಿದರು. ಫುಟ್ಬಾಲ್ ಪಂದ್ಯಗಳಲ್ಲಿ ನಾನು ಕೇಳಿದ ಕಥೆಗಳು, ನೀರಾವರಿ ಕಾಲುವೆಗಳಲ್ಲಿ ಮೀನು ಹಿಡಿಯಲು ನನ್ನ ತಂದೆಯೊಂದಿಗೆ ಹೋದಾಗ ನಾನು ಕೇಳಿದ ಕಥೆಗಳು, ಈ ಎಲ್ಲಾ ಸಣ್ಣ ಪ್ರಯಾಣಗಳು  ನನ್ನೊಳಗೆ ಸಿನೆಮಾ ಮತ್ತು ದೃಶ್ಯದ ಬಗ್ಗೆ ಆಸಕ್ತಿಯನ್ನುಂಟುಮಾಡಿದವು. ವಾರದ ದಿನ ಅಮ್ಮ ಕೊಡುತ್ತಿದ್ದ ಹಣದಿಂದ ನಾನು ಚೆ ಗುವಾರ, ನೆಪೋಲಿಯನ್ ಮತ್ತು ಸುಜಾತಾ ಅವರ ಪುಸ್ತಕಗಳನ್ನು ಖರೀದಿಸಿದೆ, ಇವು ನನ್ನನ್ನು ಆ ಬೀದಿ ದೀಪದ ಹತ್ತಿರಕ್ಕೆ ಸೆಳೆದವು.

*****

ಒಂದು ಹಂತದಲ್ಲಿ, ನನ್ನ ತಂದೆ ಕೂಡ ಒಳ್ಳೆಯ ರೀತಿಯಲ್ಲಿ ಬದಲಾದರು ಮತ್ತು ಒಂದಿಷ್ಟು ಗಳಿಸಲು ಪ್ರಾರಂಭಿಸಿದರು. ವಿವಿಧ ದಿನಗೂಲಿ ಕೆಲಸಗಳನ್ನು ಮಾಡುತ್ತಿದ್ದ ಅವರು ಆಡುಗಳನ್ನು ಸಹ ಸಾಕಿದರು. ಈ ಮೊದಲು, ಅವರು ವಾರಕ್ಕೆ 500 ರೂಪಾಯಿಗಳನ್ನು ಗಳಿಸುತ್ತಿದ್ದರು. ನಂತರ ಅವರು ಹೋಟೆಲ್ಲಿಗಳು ಮತ್ತು ರೆಸ್ಟೋರೆಂಟುಗಳಲ್ಲಿ ಕೆಲಸಕ್ಕೆ ಹೋದರು. ಈಗ ಅವರು ದಿನಕ್ಕೆ ಸುಮಾರು 250 ರೂ. ಸಂಪಾದಿಸುತ್ತಾರೆ. 2008ರಲ್ಲಿ ಮುಖ್ಯಮಂತ್ರಿಗಳ ವಸತಿ ವಿಮಾ ಯೋಜನೆಯಡಿ ನನ್ನ ಪೋಷಕರು ಸಾಲ ಮಾಡಿ ಈಗ ನಾವು ವಾಸಿಸುತ್ತಿರುವ ಮನೆಯನ್ನು ನಿರ್ಮಿಸಲು ಪ್ರಾರಂಭಿಸಿದರು. ಇದು ಒಂದು ಕಾಲದಲ್ಲಿ ತಮಿಳುನಾಡಿನ ಮಧುರೈನ ಹೊರವಲಯವಾಗಿದ್ದ ಜವಾಹರಲಾಲ್ ಪುರಂನಲ್ಲಿದೆ, ಈಗ ವಿಸ್ತರಿಸುತ್ತಿರುವ ನಗರವು ನುಂಗಿಕೊಂಡಿರುವ ಉಪನಗರವಾಗಿದೆ.

ದಾರಿಯುದ್ದಕ್ಕೂ ಅನೇಕ ಸವಾಲುಗಳನ್ನು ಎದುರಿಸಿ, ನಮ್ಮ ಮನೆಯನ್ನು ನಿರ್ಮಿಸಲು ನನ್ನ ಹೆತ್ತವರಿಗೆ 12 ಸುದೀರ್ಘ ವರ್ಷಗಳು ಬೇಕಾಯಿತು. ನನ್ನ ತಂದೆ ಸ್ವಲ್ಪ ಸ್ವಲ್ಪವಾಗಿ ಉಳಿಸುತ್ತಿದ್ದರು, ಗಾರ್ಮೆಂಟ್ ಡೈಯಿಂಗ್ ಕಾರ್ಖಾನೆಗಳು, ಹೋಟೆಲ್ಲುಗಳು, ಜಾನುವಾರು ನೋಡಿಕೊಳ್ಳುವುದು ಮತ್ತು ಇತ್ಯಾದಿ ಕೆಲಸ ಮಾಡುತ್ತಿದ್ದರು. ತಮ್ಮ ಉಳಿತಾಯದ ಸಹಾಯದಿಂದ ಅವರು ನನ್ನನ್ನು ಮತ್ತು ನನ್ನ ಇಬ್ಬರು ಒಡಹುಟ್ಟಿದವರನ್ನು ಶಾಲೆಗೆ ಕಳುಹಿಸಿದರು ಮತ್ತು ಇಟ್ಟಿಗೆ ಇಟ್ಟಿಗೆಯನ್ನು ಸೇರಿಸಿ ಮನೆ ನಿರ್ಮಿಸಿದರು. ಅವರು ತುಂಬಾ ತ್ಯಾಗ ಮಾಡಿದ ನಮ್ಮ ಮನೆ, ಅವರ ಪರಿಶ್ರಮದ ಸಂಕೇತವಾಗಿದೆ.

The house into which my parents put their own hard labour came up right behind our old 8x8 foot house, where five of us lived till 2008.
PHOTO • M. Palani Kumar
PHOTO • M. Palani Kumar

ಎಡ: ನನ್ನ ತಂದೆ – ತಾಯಿಯ ಪರಿಶ್ರಮದ ಗುರುತಾಗಿ ನಿಂತಿರುವ ನಮ್ಮ ಈಗಿನ ಮನೆ. ಮನೆಯ ಮುಂದಿರುವ 8X8 ಅಡಿ ಅಳತೆಯ ಮನೆಯಲ್ಲೇ ನಾವು 2008ರ ತನಕ ವಾಸಿಸುತ್ತಿದ್ದೆವು. ಬಲ: ನನ್ನಮ್ಮ, ಅಜ್ಜಿ (ಎಡ) ಮತ್ತು ಚಿಕ್ಕಮ್ಮ (ಬಲ) ಹೊಸ ಮನೆಗೆ ಮಣ್ಣಿನ ಹೆಂಚನ್ನು ಹೊಂದಿಸುತ್ತಿರುವುದು. ಈ ಮನೆ ನಿರ್ಮಾಣದ ಹಂತದಲ್ಲಿರುವಾಗಲೇ ನಾವು ಒಕ್ಕಲು ಮಾಡಿದ್ದೆವು

ನನ್ನ ತಾಯಿಗೆ ಗರ್ಭಾಶಯದಲ್ಲಿ ಕೆಲವು ಸಮಸ್ಯೆಗಳು ಕಾಣಿಸಿಕೊಂಡಾಗ, ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಅದಕ್ಕೆ ನಮಗೆ 30 ಸಾವಿರ ರೂಪಾಯಿ ಅಗತ್ಯವಿತ್ತು. ನಾನು ಆಗಿನ್ನೂ ಪದವಿಪೂರ್ವ ವಿದ್ಯಾರ್ಥಿಯಾಗಿದ್ದೆ ಮತ್ತು ಅವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಅಮ್ಮನಿಗೆ ನಿಯೋಜಿಸಲಾದ ನರ್ಸ್ ಅವರನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ. ನನ್ನ ಕುಟುಂಬವು ಅವರನ್ನು ಒಳ್ಳೆಯ ಆಸ್ಪತ್ರೆಯಲ್ಲಿ ಸೇರಿಸಲು ಯೋಚಿಸಿದಾಗ, ನಾನು ಅವರನ್ನು ಬೆಂಬಲಿಸುವ ಸ್ಥಿತಿಯಲ್ಲಿರಲಿಲ್ಲ. ಆದರೆ ನಾನು ಪರಿಗೆ ಸೇರಿದ ಕ್ಷಣದಿಂದ ಆ ಪರಿಸ್ಥಿತಿ ಬದಲಾಗಲು ಪ್ರಾರಂಭಿಸಿತು.

ನನ್ನ ಸಹೋದರನ ಶಸ್ತ್ರಚಿಕಿತ್ಸೆಯ ವೆಚ್ಚದ ವಿಷಯದಲ್ಲೂ ಪರಿ ಸಹಾಯ ಮಾಡಿತು. ನನಗೆ ಸಿಕ್ಕ ಮಾಸಿಕ ಆದಾಯವನ್ನು ಅಮ್ಮನಿಗೆ ಸಂಬಳವಾಗಿ ಕೊಡಬಹುದಾಗಿತ್ತು. ವಿಕಟನ್ ಪ್ರಶಸ್ತಿಯಂತಹ ಅನೇಕ ಬಹುಮಾನಗಳು ನನಗೆ ದೊರೆತಾಗ, ತನ್ನ ಮಗ ಕೊನೆಗೂ ಏನೋ ಒಳ್ಳೆಯದನ್ನು ಸಾಧಿಸಿದ ಎಂದು ತಾಯಿಗೆ ಭರವಸೆ ನೀಡಿದವು. ನನ್ನ ತಂದೆ ಆಗಲೂ ನನ್ನ ಕಾಲನ್ನು ಎಳೆಯುತ್ತಿದ್ದರು: "ನೀನು ಪ್ರಶಸ್ತಿಗಳನ್ನು ಗೆಲ್ಲಬಹುದು, ಆದರೆ ಅದರಿಂದ ಒಂದಷ್ಟು ಹಣವನ್ನು ಸಂಪಾದಿಸಲು ಸಾಧ್ಯವೇ?"

ಅವರು ಹೇಳಿದ್ದು ಸರಿಯಿತ್ತು. ನಾನು ನನ್ನ ಚಿಕ್ಕಪ್ಪ ಮತ್ತು ಸ್ನೇಹಿತರಿಂದ ಎರವಲು ಪಡೆದ ಮೊಬೈಲ್ ಫೋನುಗಳನ್ನು ಬಳಸಿ 2008ರಲ್ಲಿ ಫೋಟೊಗ್ರಫಿ ಪ್ರಾರಂಭಿಸಿದರೂ, 2014ರ ನಂತರವೇ ಹಣಕಾಸಿನ ಬೆಂಬಲಕ್ಕಾಗಿ ನನ್ನ ಕುಟುಂಬವನ್ನು ಅವಲಂಬಿಸುವುದನ್ನು ನಿಲ್ಲಿಸಿದೆ. ಅಲ್ಲಿಯವರೆಗೆ ನಾನು ಹೋಟೆಲ್ಲುಗಳಲ್ಲಿ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು, ಮದುವೆಯ ಕಾರ್ಯಕ್ರಮಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ಆಹಾರವನ್ನು ಪೂರೈಸುವುದು ಇಂತಹ ಹಲವು ಕೆಲಸಗಳನ್ನು ಮಾಡಿದ್ದೆ.

ನನ್ನ ತಾಯಿಗೆ ಒಂದಿಷ್ಟು ಹಣವನ್ನು ದುಡಿದು ಕೊಡಲು ನನಗೆ ಹತ್ತು ವರ್ಷಗಳು ಬೇಕಾದವು. ಕಳೆದ ದಶಕದಲ್ಲಿ ನಾವು ಅನೇಕ ಸವಾಲುಗಳನ್ನು ಎದುರಿಸಿದ್ದೇವೆ. ನನ್ನ ತಂಗಿಕೂಡ ಅನಾರೋಗ್ಯಕ್ಕೆ ಒಳಗಾದಳು. ಅವಳು ಮತ್ತು ನನ್ನ ತಾಯಿ ಅನಾರೋಗ್ಯಕ್ಕೆ ಒಳಗಾಗುವುದರೊಂದಿಗೆ, ಆಸ್ಪತ್ರೆ ನಮ್ಮ ಎರಡನೇ ಮನೆಯಾಯಿತು. ಅಮ್ಮನ ಗರ್ಭಕೋಶಕ್ಕೆ ಇನ್ನೂ ಹೆಚ್ಚಿನ ಸಮಸ್ಯೆಯಾಗಿತ್ತು. ಆದರೆ ಇಂದು ಪರಿಸ್ಥಿತಿಗಳು ತುಂಬಾ ಉತ್ತಮವಾಗಿವೆ. ನನ್ನ ತಾಯಿ ಮತ್ತು ತಂದೆಗಾಗಿ ನಾನು ಏನನ್ನಾದರೂ ಮಾಡಬಲ್ಲೆ ಎನ್ನುವ ನಂಬಿಕೆ ಹುಟ್ಟಿದೆ. ಕಾರ್ಮಿಕ ವರ್ಗಗಳ ಬಗ್ಗೆ ಫೋಟೋಜರ್ನಲಿಸ್ಟ್ ಆಗಿ ನಾನು ದಾಖಲಿಸುವ ಕಥೆಗಳು – ಅವರ  ಜೀವನವನ್ನು ನೋಡುವ ಮತ್ತು ಹಂಚಿಕೊಳ್ಳುವ ಮೂಲಕ ಪ್ರೇರಿತವಾಗಿವೆ. ಅವರ ಪರಿಶ್ರಮವೇ ನನ್ನ ಕಲಿಕೆ. ಬೀದಿ ದೀಪವು ನನ್ನ ಬಾಳಿಗೆ ಬೆಳಕಾಗಿ ಉಳಿದಿದೆ.

PHOTO • M. Palani Kumar

ನನ್ನಮ್ಮ ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಮೂರೂ ಬಾರಿ ಪಾರಾಗಿ ಜೀವ ಉಳಿಸಿಕೊಂಡಿದ್ದು ಸಾಮಾನ್ಯ ಸಂಗತಿಯಲ್ಲ


PHOTO • M. Palani Kumar

ಅಮ್ಮ ಒಂದೆಡೆ ಸುಮ್ಮನೆ ಕುಳಿತಿದ್ದನ್ನು ಇದುವರೆಗೂ ನೋಡಿಲ್ಲ. ಅವರು ಏನಾದರೂ ಒಂದು ಕೆಲಸ ಮಾಡುತ್ತಲೇ ಇರುತ್ತಿದ್ದರು. ಇಲ್ಲಿ ತನ್ನ ಕೆಲಸ ಮುಗಿಸಿ ಬಂದ ಅಮ್ಮ ನದಿಯಲ್ಲಿ ಪಾತ್ರೆ ತೊಳೆಯುತ್ತಿದ್ದಾರೆ


PHOTO • M. Palani Kumar

ಅಮ್ಮನಿ ತಾನೊಬ್ಬ ಕೃಷಿಕಳಾಗಬೇಕೆನ್ನುವ ಆಸೆಯಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ನಂತರ ಅವರು ಮೀನು ವ್ಯಾಪಾರಕ್ಕಿಳಿದರು. ಆದರೆ ಆದರೆ ಅವರ ಬೇಸಾಯದ ಬಯಕೆ ಹೋಗಲಿಲ್ಲ. ನಾವು ಮನೆಯ ಹಿಂದೆ ಹತ್ತು ಬಾಳೆ ಗಿಡಗಳನ್ನು ನೆಟ್ಟಿದ್ದೆವು. ಅವುಗಳಲ್ಲಿ ಒಂದು ಹೂ ಬಿಟ್ಟರೂ ಅಮ್ಮ ಆ ಸಂಭ್ರಮದ ಭಾಗವಾಗಿ ಸಿಹಿ ಪೊಂಗಲ್‌ ತಯಾರಿಸುತ್ತಿದ್ದರು


PHOTO • M. Palani Kumar

ಒಂದು ಹಂತದಲ್ಲಿ ಅಪ್ಪ ಆಡುಗಳನ್ನು ಸಾಕತೊಡಗಿದರು. ಆದರೆ ಅವುಗಳ ಕೊಟ್ಟಿಗೆಯನ್ನು ಅಮ್ಮನೇ ಸ್ವಚ್ಛಗೊಳಿಸುವುದು


PHOTO • M. Palani Kumar

ನನ್ನ ಅಪ್ಪನಿಗೆ ಪ್ರಾಣಿಗಳು ಮತ್ತು ಪಕ್ಷಿಗಳೆಂದರೆ ಪ್ರಾಣ. ನಾನು ಐದು ವರ್ಷದವನಿದ್ದಾಗ ಅವರು ಆಡುಗಳನ್ನು ಮೇಯಿಸುವ ಕೆಲಸ ಮಾಡುತ್ತಿದ್ದರು


PHOTO • M. Palani Kumar

ಅಮ್ಮನಿಗೆ ಸೈಕಲ್‌ ಮತ್ತು ಬೈಕ್‌ ಓಡಿಸಬೇಕೆನ್ನುವ ಆಸೆ ಆದರೆ ಹೇಗೆಂದು ಅವರಿಗೆ ತಿಳಿದಿಲ್ಲ


PHOTO • M. Palani Kumar

ಇದು ನಾನು, ಅಮ್ಮನಿಗೆ ವ್ಯಾಪಾರದಲ್ಲಿ ಸಹಾಯ ಮಾಡುತ್ತಿರುವುದು


PHOTO • M. Palani Kumar

ಸಂಧಿವಾತದ ಕಾರಣ ಅಮ್ಮನಿಂದ ಹೆಚ್ಚು ನಡೆಯಲು ಸಾಧ್ಯವಿಲ್ಲ. ಆದರೂ ಅವರು ಸೌದೆ ತರಲು ಹೋಗುತ್ತಾರೆ. ಈಗಿಗ ಸೌದೆಯ ಲಭ್ಯತೆ ಬಹಳ ಕಡಿಮೆಯಾಗಿದೆ


PHOTO • M. Palani Kumar

ಅಮ್ಮ ಪ್ರತಿ ತಿಂಗಳೂ ತಮ್ಮ ಸಂಧಿವಾತದ ಮಾತ್ರೆಗಾಗಿ ಸರಕಾರಿ ಆಸ್ಪತ್ರೆಗೆ ಹೋಗುತ್ತಾರೆ. ಅವುಗಳಿಂದಲೇ ಅಮ್ಮನಿಗೆ ಈಗಲೂ ನಡೆಯಲು ಸಾಧ್ಯವಾಗುತ್ತಿರುವದು. “ಕುಮಾರ್‌ ನನ್ನ ಕಾಲುಗಳನ್ನು ಮೊದಲಿನಂತೆ ಆಗುವ ಹಾಗೆ ಮಾಡಿಸೋ,” ಎಂದಾಗಲೆಲ್ಲ ನನ್ನೊಳಗೊಂದು ಪಾಪಪ್ರಜ್ಞೆ ಹುಟ್ಟಿಕೊಳ್ಳುತ್ತದೆ


PHOTO • M. Palani Kumar

ಅಪ್ಪನಿಗೆ ಸುಮಾರು 15 ವರ್ಷಗಳಿಂದ ಕಿಡ್ನಿ ಸಮಸ್ಯೆಯಿದೆ. ಆದರೆ ಆಪರೇಷನ್‌ ಮಾಡಿಸಲು ನಮ್ಮ ಬಳಿ ಹಣವಿದ್ದಿರಲಿಲ್ಲ. ನಾನು ʼ ಪರಿ ʼ ಗೆ ಸೇರಿದ ನಂತರವೇ ಆಪರೇಷನ್‌ ಮಾಡಿಸಲು ಸಾಧ್ಯವಾಗಿದ್ದು


PHOTO • M. Palani Kumar

ಅಪ್ಪನಿಗೆ ಸುಮಾರು 15 ವರ್ಷಗಳಿಂದ ಕಿಡ್ನಿ ಸಮಸ್ಯೆಯಿದೆ. ಆದರೆ ಆಪರೇಷನ್‌ ಮಾಡಿಸಲು ನಮ್ಮ ಬಳಿ ಹಣವಿದ್ದಿರಲಿಲ್ಲ. ನಾನು ʼ ಪರಿ ʼ ಗೆ ಸೇರಿದ ನಂತರವೇ ಆಪರೇಷನ್‌ ಮಾಡಿಸಲು ಸಾಧ್ಯವಾಗಿದ್ದು


PHOTO • M. Palani Kumar

ಅಮ್ಮ ತಾನು ಮೀನು ತೆಗೆದುಕೊಂಡು ಹೋಗುವ ಪಾತ್ರೆಯನ್ನು ತೊಳೆದುಕೊಂಡು ಮನೆಗೆ ಹೋಗುತ್ತಿರುವುದು. ನನಗೆ ಒಮ್ಮೊಮ್ಮೆ ಅಮ್ಮ ಆಕಾಶದಂತೆ ಕಾಣುತ್ತಾರೆ. ಸದಾ ಇನ್ನೊಬ್ಬರಿಗಾಗಿ ಯೋಚಿಸುತ್ತಾ ತನಗಾಗಿ ಏನನ್ನೂ ಬಯಸದ ಅಮ್ಮ ನನ್ನ ಪಾಲಿಗೆ ಸದಾ ಅಚ್ಚರಿ


ಅನುವಾದ : ಶಂಕರ . ಎನ್ . ಕೆಂಚನೂರು

M. Palani Kumar

M. Palani Kumar is Staff Photographer at People's Archive of Rural India. He is interested in documenting the lives of working-class women and marginalised people. Palani has received the Amplify grant in 2021, and Samyak Drishti and Photo South Asia Grant in 2020. He received the first Dayanita Singh-PARI Documentary Photography Award in 2022. Palani was also the cinematographer of ‘Kakoos' (Toilet), a Tamil-language documentary exposing the practice of manual scavenging in Tamil Nadu.

Other stories by M. Palani Kumar
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru