’ಅಲ್ಲಿ ನೋಡಿ, ತರಕಾರಿಗಳು ಓಡಿಸುತ್ತಿರುವ ಮಾಂತ್ರಿಕ ಬೈಕ್!’. ಚಂದ್ರಾ ಮೆಳಕಾಡುವಿನಲ್ಲಿರುವ ತನ್ನ ತೋಟದ ಉತ್ಪನ್ನವನ್ನು ಹದಿನೈದು ಕಿಲೋಮೀಟರ್ ದೂರದ ಶಿವಗಂಗೈ ಮಾರುಕಟ್ಟೆಗೆ ತನ್ನ ಪುಟ್ಟ ಮೊಪೆಡ್ ನಲ್ಲಿ ತೆಗೆದುಕೊಂಡು ಹೋಗುವಾಗೆಲ್ಲಾ ಹಳ್ಳಿಯ ಹುಡುಗರು ರೇಗಿಸುವುದು ಹೀಗೆ. ’ಅದು ಯಾಕೆ ಅಂದ್ರೆ ಮೊಪೆಡ್ ನಲ್ಲಿ ನನ್ನ ಹಿಂದೆ, ಮುಂದೆ ನಾನು ಹೇಗೆ ಮೂಟೆಗಳನ್ನು ಪೇರಿಸಿರುತ್ತೇನೆ ಎಂದರೆ, ನೋಡುವವರಿಗೆ ಗಾಡಿ ಓಡಿಸುವವರು ಕಾಣಿಸುವುದೇ ಇಲ್ಲ’ ತಮಿಳುನಾಡಿನ ಈ ಪುಟ್ಟ ರೈತ ಮಹಿಳೆ ವಿವರಣೆ ಕೊಡುತ್ತಾರೆ.
ಚಂದ್ರಾ ಜೊತೆಯಲ್ಲಿರುವುದೆಂದರೆ ಅದೊಂದು ತರಹ ಆಹ್ಲಾದಕರ ಅನುಭವ. ನಗು ಸದಾ ಆಕೆಯ ತುಟಿಗಳ ಮೇಲಿರುತ್ತದೆ, ಹಲವು ಸಲ ತನ್ನನ್ನೇ ಹಾಸ್ಯ ಮಾಡಿಕೊಂಡು ನಗುತ್ತಿರುತ್ತಾರೆ. ಅವರ ನಗು ಬಾಲ್ಯದ ಬಡತನದ ದಿನಗಳ ನೆನಪುಗಳನ್ನು ಸಹ ಮೃದುವಾಗಿಸುತ್ತದೆ. ’ಒಂದು ರಾತ್ರಿ ಅಪ್ಪ ನಮ್ಮನ್ನೆಲ್ಲಾ ಎಬ್ಬಿಸಿದರು. ನನಗಾಗ ಹತ್ತು ವರ್ಷ ಸಹ ಆಗಿರಲಿಲ್ಲ. ಚಂದ್ರ ಹೊಳೆಯುತ್ತಿದ್ದಾನೆ, ಆ ಬೆಳಕಿನಲ್ಲಿ ನಾವೊಂದಿಷ್ಟು ವ್ಯವಸಾಯದ ಕೆಲಸಗಳನ್ನು ಮುಗಿಸಿಬಿದೋಣ ಎಂದು ಅಪ್ಪ ಹೇಳಿದ. ಆಗಲೇ ಬೆಳಗಿನ ಜಾವ ಆಗಿರಬೇಕು ಎಂದುಕೊಂಡು ನನ್ನ ಸೋದರ, ಸೋದರಿ, ನಾನು ಅಪ್ಪ ಅಮ್ಮನ ಜೊತೆ ಗದ್ದೆಗೆ ಹೋದೆವು. ಎಲ್ಲಾ ಬತ್ತದ ತೆನೆಗಳನ್ನೂ ಕಟಾವ್ ಮಾಡಲು ನಮಗೆ ಸುಮಾರು ನಾಲ್ಕು ಗಂಟೆಗಳಾಗಿರಬಹುದು. ಆಗ ಅಪ್ಪ, ಶಾಲೆಗೆ ಹೋಗುವ ಮೊದಲು ಬೇಕಾದರೆ ಸ್ವಲ್ಪ ಹೊತ್ತು ಮಲಗಿಕೊಳ್ಳಿ ಅಂದ. ನೋಡಿದರೆ ಆಗ ಸಮಯ ಇನ್ನೂ ಬೆಳಗಿನ ಜಾವ ಮೂರು ಗಂಟೆ! ಅಪ್ಪ ನಮ್ಮನ್ನು ರಾತ್ರಿ ಹನ್ನೊಂದು ಗಂಟೆಯಿಂದ ಗದ್ದೆಯಲ್ಲಿ ದುಡಿಸಿದ್ದ! ನಂಬ್ತೀರಾ ಇದನ್ನು?’
ಚಂದ್ರ ತನ್ನ ಮಕ್ಕಳಿಗೆ ಎಂದೂ ಆ ರೀತಿಯ ಕಷ್ಟ ಕೊಡಲಿಲ್ಲ. ಅವಳೊಬ್ಬ ಒಬ್ಬಂಟಿ ತಾಯಿ. ಎಂಟು ವರ್ಷದ ಮಗ ಧನುಶ್ ಕುಮಾರ್, ಐದು ವರ್ಷದ ಮಗಳು ಇನಿಯಾರನ್ನು ಚೆನ್ನಾಗಿ ಓದಿಸಬೇಕೆಂದು ನಿಶ್ಚಯ ಮಾಡಿದ್ದಾರೆ. ಹತ್ತಿರದಲ್ಲೇ ಇರುವ ಒಂದು ಖಾಸಗಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಆ ಮಕ್ಕಳು ಓದುತ್ತಿದ್ದಾರೆ. ಅವರನ್ನು ಚೆನ್ನಾಗಿ ಸಾಕಬೇಕು ಎನ್ನುವ ಕಾರಣಕ್ಕೆ ಚಂದ್ರ ರೈತ ಮಹಿಳೆ ಆದರು.
![Dhanush Kumar and Iniya on their way to school](/media/images/03-IMG_4234-AP_Small_farmer_big-heart_mira.max-1400x1120.jpg)
ಶಾಲೆಗೆ ಹೋಗುತ್ತಿರುವ ಧನುಷ್ ಕುಮಾರ್ ಮತ್ತು ಇನಿಯಾ
’ನನಗೆ ಹದಿನಾರು ವರ್ಷಗಳಾಗಿದ್ದಾಗ ನಮ್ಮ ಅತ್ತೆಯ ಮಗ ಸುಬ್ರಮಣ್ಯನ್ ಜೊತೆ ನನ್ನ ಮದುವೆ ಆಯಿತು. ನಾವಿಬ್ಬರೂ ತಿರುಪ್ಪೂರಿನಲ್ಲಿ ವಾಸವಾಗಿದ್ದೆವು. ಒಂದು ಹೊಸೈರಿ ಕಂಪನಿಯಲ್ಲಿ ಅವರು ಟೈಲರ್ ಆಗಿದ್ದರು. ನಾನೂ ಅಲ್ಲೇ ಕೆಲಸ ಮಾಡುತ್ತಿದ್ದೆ. ನಾಲ್ಕು ವರ್ಷಗಳ ಹಿಂದೆ ನನ್ನ ತಂದೆ ಒಂದು ರಸ್ತೆ ಅಪಘಾತದಲ್ಲಿ ತೀರಿಕೊಂಡರು. ಅದು ನನ್ನ ಗಂಡನನ್ನು ಇನ್ನಿಲ್ಲದಂತೆ ಹತಾಶೆಗೊಳಿಸಿತು. ನಲ್ವತ್ತು ದಿನಗಳ ನಂತರ ಅವರು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಅವರಿಗೆ ನಮ್ಮ ತಂದೆಯೇ ಎಲ್ಲಾ ಆಗಿದ್ದರು...’
ವಿಧವೆಯಾದ ನಂತರ ಚಂದ್ರಾ ತವರಿಗೆ ಹಿಂದಿರುಗುತ್ತಾರೆ. ಮುಂದೇನು ಎನ್ನುವ ಸಮಸ್ಯೆ. ಮತ್ತೆ ಟೇಲರಿಂಗ್ ಕೆಲಸಕ್ಕೆ ಹೋಗುವುದಾಗಲೀ, ನಿಲ್ಲಿಸಿದ್ದ ಓದನ್ನು ಮುಂದುವರಿಸುವುದಾಗಲೀ ಚಂದ್ರಾಗೆ ಇಷ್ಟ ಇರಲಿಲ್ಲ. ಎರಡೂ ಅಸಾಧ್ಯವೇ ಆಗಿತ್ತು ಎಂದು ಚಂದ್ರಾ ವಿವರಿಸುತ್ತಾರೆ. ಕೆಲಸ ಅಂದರೆ ದಿನದ ಹಲವಾರು ಗಂಟೆಗಳ ಕಾಲ ಮಕ್ಕಳಿಂದ ದೂರ ಇರಬೇಕು. ಹೋಗಲಿ ಮುಂದೆ ಓಡಿ ಡಿಗ್ರಿ ತೆಗೆದುಕೊಳ್ಳೋಣ ಎಂದರೆ ಅದಕ್ಕೆ ಮೊದಲು ಪಿಯೂಸಿ ಪರೀಕ್ಷೆ ಮುಗಿಸಬೇಕಿತ್ತು. ’ನಾನು ಗ್ರಾಜುಯೇಟ್ ಆಗುವವರೆಗೂ ನನ್ನ ಮಕ್ಕಳ ಜೊತೆ ಯಾರಿರುತ್ತಾರೆ? ನಮ್ಮಮ್ಮ ಏನೋ ನನಗೆ ಬೆಂಬಲವಾಗಿದ್ದರು, ಆದರೂ...’
ಅದಕ್ಕೊಂದು ಚಂದದ ಕಾರ್ಪೊರೇಟ್ ಹೆಸರಿಟ್ಟು flexi hours ಎಂದು ಹೇಳಲು ಬರದಿದ್ದರೂ ಚಂದ್ರಾಗೆ ಕೃಷಿ ಎಂದರೆ ಅದು ಆಯ್ದ ಗಂಟೆಗಳ ಕೆಲಸದಂತೆ ಕಂಡಿದೆ. ತನ್ನದೇ ಹಿತ್ತಲಿನಲ್ಲಿರುವ ಜಮೀನಿನಲ್ಲಿ ನೈಟಿ ಹಾಕಿಕೊಂಡು ಸಹ ಕೆಲಸ ಮಾಡಬಹುದು. ೫೫ ವರ್ಷಗಳ ಆಕೆಯ ತಾಯಿ ಚಿನ್ನಪೊಣ್ಣು ಆರ್ಮುಗಂ ಕುಟುಂಬಕ್ಕಿದ್ದ ೧೨ ಎಕರೆ ಜಮೀನನ್ನು ತನ್ನ ಗಂಡನ ಮರಣದ ತರುವಾಯ ತನ್ನ ಮಕ್ಕಳಿಗೆ ಸಮಾನವಾಗಿ ಹಂಚಿಕೊಟ್ಟಿದ್ದಾರೆ. ಈಗ ಅಮ್ಮ ಮಗಳಿಬ್ಬರೂ ಜಮೀನಿನಲ್ಲಿ ತರಕಾರಿ, ಬತ್ತ, ಕಬ್ಬು, ಜೋಳ ಬೆಳೆಯುತ್ತಾರೆ. ಕಳೆದ ವರ್ಷವಷ್ಟೇ ಚಿನ್ನಪೊಣ್ಣು ಚಂದ್ರಾ ಮತ್ತು ಮಕ್ಕಳಿಗಾಗಿ ಹೊಸಮನೆಯನ್ನು ಸಹ ಕಟ್ಟಿಸಿದ್ದಾರೆ. ಮನೆಯೊಳಗೆ ಶೌಚದ ವ್ಯವಸ್ಥೆ ಇಲ್ಲ ಎನ್ನುವುದನ್ನು ಬಿಟ್ಟರೆ ಅದು ಚಿಕ್ಕದಾದರೂ ಭದ್ರವಾದ ಮನೆ. ’ಇನಿಯಾ ದೊಡ್ಡವಳಾಗುವಷ್ಟರಲ್ಲಿ ಮನೆಯೊಳಗೆ ಶೌಚದ ಕೋಣೆಯನ್ನೂ ಕಟ್ಟಿಸಿಬಿಡುತ್ತೇನೆ’ ಚಂದ್ರ ಭರವಸೆ ಕೊಡುತ್ತಾರೆ.
![Chandra’s new house (left) and the fields behind](/media/images/04-IMG_4706--4761-AP_Small_farmer_big-hear.max-1400x1120.jpg)
ಚಂದ್ರಾ ಹೊಸ ಮನೆ (ಎಡ ಚಿತ್ರ) ತರಕಾರಿ ತೋಟ
ಆಮೇಲೆ ತೋಟಕ್ಕೆ ಹೋಗಿ ಬದನೆ, ಬೆಂಡೆ, ಹೀರೆಕಾಯಿಗಳನ್ನು ಬಿಡಿಸುತ್ತಾರೆ. ನಂತರ ಮಕ್ಕಳನ್ನು ರೆಡಿಮಾಡಿ ಶಾಲೆಗೆ ಕರೆದುಕೊಂಡು ಹೋಗುತ್ತಾರೆ. ’ಶಾಲೆಗೆ ಮಕ್ಕಳನ್ನು ಬಿಡಲು ಬರುವ ಪೋಷಕರು ಸರಿಯಾಗಿ ಬಟ್ಟೆ ಧರಿಸಬೇಕು ಎಂದು ರೂಲ್ಸು, ಅದಕ್ಕೇ ನಾನು ಈ ನೈಟಿಯ ಮೇಲೆ ಒಂದು ಸೀರೆ ಸುತ್ತಿಕೊಂಡು ಓಡುತ್ತೇನೆ,’ ಚಂದ್ರ ನಗುತ್ತಾರೆ. ಮನೆಗೆ ವಾಪಸ್ಸು ಬಂದ ಮೇಲೆ ಮಧ್ಯಾಹ್ನದ ಊಟದ ಸಮಯದವರೆಗೂ ಜಮೀನಿನಲ್ಲಿ ಕೆಲಸ. ’ಆಮೇಲೆ ಒಂದರ್ಧ ಗಂಟೆ ಮಲಗುತ್ತೇನೆ. ಆದರೆ ಯಾವಾಗಲೂ ಜಮೀನಿನಲ್ಲಿ ಏನಾದರೂ ಕೆಲಸ ಇದ್ದೆ ಇರುತ್ತದೆ, ಯಾವಾಗಲೂ...’
ಸಂತೆಯ ದಿವಸ ಚಂದ್ರ ತರಕಾರಿ ಮೂಟೆಗಳನ್ನು ಮೊಪೆಡ್ ನಲ್ಲಿ ಹೇರಿಕೊಂಡು ಶಿವಗಂಗೈಗೆ ಹೋಗುತ್ತಾರೆ. ’ನಾನು ಚಿಕ್ಕವಳಿದ್ದಾಗ ಎಲ್ಲಿಗೂ ಒಬ್ಬಳೇ ಹೋದದ್ದೇ ಇಲ್ಲ, ಬಹಳ ಹೆದರಿಕೆ ಆಗುತ್ತಿತ್ತು. ಈಗ ಬಿಡಿ ದಿನಕ್ಕೆ ನಾಲ್ಕು ಸಲ ಟೌನ್ ಗೆ ಹೋಗುತ್ತೇನೆ’.
![](/media/images/05-F86A1049CROP--F86A1084-AP_Small_farmer_.max-1400x1120.jpg)
ಕೆಲಸಗಾರರ ಸಹಾಯದಿಂದ ಚೀಲಗಳಿಗೆ ತರಕಾರಿ ತುಂಬುತ್ತಿರುವ ಚಂದ್ರಾ (ಎಡ ಚಿತ್ರ) ಬೈಕ್ ಗೆ ಮೂಟೆಗಳನ್ನು ಏರಿಸಲು ಅವಳ ತಾಯಿ ಚಿನ್ನಪೊನ್ನುವಿನದ್ದೇ ನೆರವು
ಚಂದ್ರ ಶಿವಗಂಗೈ ಇಂದಲೇ ಜಮೀನಿಗೆ ಬೀಜ, ಗೊಬ್ಬರ, ಕ್ರಿಮಿನಾಶಕ ಎಲ್ಲಾ ಖರೀದಿಸುತ್ತಾರೆ. ’ನಿನ್ನೆ ಇನಿಯಾ ಸ್ಕೂಲಿನ ಕ್ರಿಸ್ಮಸ್ ಸಮಾರಂಭಕ್ಕೆ ಹೊಸ ಬಟ್ಟೆ ಬೇಕು ಅಂತ ಕೇಳಿದಳು. ಅವಳು ಹಾಗೆ, ಬೇಕು ಅಂದರೆ ಈಗಲೇ ಬೇಕು’ ನಗುವ ಚಂದ್ರಾ ಮುಖದಲ್ಲಿ ಪ್ರೀತಿ ತುಂಬಿರುತ್ತದೆ. ಜಮೀನಿಗೆ ಕೆಲಸಕ್ಕೆ ಬರುವ ಆಳುಗಳ ಸಂಬಳ, ದೈನಂದಿನ ಖರ್ಚು ಎಲ್ಲದ್ದಕ್ಕೂ ತರಕಾರಿಗಳಿಂದ ಬರುವ ಹಣವೇ ಮೂಲ. ’ಒಮ್ಮೊಮ್ಮೆ ವಾರಕ್ಕೆ ನಾಲ್ಕು ಸಾವಿರ ಸಂಪಾದಿಸುತ್ತೇನೆ, ಮತ್ತೆ ಕೆಲವೊಮ್ಮೆ ಬೆಲೆಗಳು ಕುಸಿದರೆ ಅದರಲ್ಲಿ ಅರ್ಧ ಕೂಡ ಸಿಗುವುದಿಲ್ಲ.” ತಾನು ಬೆಳೆದ ಉತ್ಪನ್ನಗಳನ್ನು ಈ ರೈತ ಮಹಿಳೆ ತಾನೇ ಗಂಟೆಗಟ್ಟಲೆ ಕೂತು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಅದರಿಂದ ಸಗಟು ವ್ಯಾಪಾರಿಗಳಿಗೆ ಮಾರುವ ಬೆಲೆಗಿಂತ ಕೆಜಿಗೆ ೨೦ ರೂ ಹೆಚ್ಚಿಗೆ ಸಿಗುತ್ತದೆ.
![The Sivagangai market (left); Chandra retailing vegetables](/media/images/06-F86A1098--F86A1109-AP_Small_farmer_big-.max-1400x1120.jpg)
ಶಿವಗಂಗೈ ಮಾರುಕಟ್ಟೆ (ಎಡಚಿತ್ರ) ತರಕಾರಿ ಮಾರುತ್ತಿರುವ ಚಂದ್ರಾ,
ಸಾಧಾರಣವಾಗಿ ಸಂಜೆಗೂ ಮೊದಲು ಅಂದರೆ ಮಕ್ಕಳು ಶಾಲೆಯಿಂದ ಬರುವುದಕ್ಕೆ ಮೊದಲು ಆಕೆ ಮನೆಯಲ್ಲಿರುತ್ತಾರೆ. ಆಕೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರೆ ಮಕ್ಕಳು ಸ್ವಲ್ಪ ಹೊತ್ತು ಅಲ್ಲೇ ಆಡುತ್ತಿದ್ದು ನಂತರ ಆಕೆಯ ಜೊತೆಗೇ ಮನೆಗೆ ಹೋಗುತ್ತಾರೆ. ಆಮೇಲೆ ಧನುಶ್ ಮತ್ತು ಇನಿಯಾ ಹೋಂವರ್ಕ್ ಮಾಡಿ, ಸ್ವಲ್ಪ ಹೊತ್ತು ಟೀವಿ ನೋಡುವುದೋ ನಾಯಿಮರಿಗಳ ಜೊತೆ, ಗಿನಿಯಿಲಿಗಳ ಜೊತೆ ಆಡುವುದೋ ಮಾಡುತ್ತಾರೆ. ’ಅಮ್ಮನಿಗೆ ಗಿನಿಯಿಲಿಗಳನ್ನು ಕಂಡರೆ ತಾತ್ಸಾರ, ಮೇಕೆ ಸಾಕುವುದು ಬಿಟ್ಟು ಅದನ್ನು ಸಾಕುತ್ತೇನೆ ಎಂದು ನನ್ನನ್ನು ಬೈಯುತ್ತಾಳೆ,’ ಅಲ್ಲೇ ಗೂಡಿನಲ್ಲಿದ್ದ ಒಂದು ದುಂಡು ದುಂಡು ಮರಿಯನ್ನೆತ್ತಿಕೊಂಡು ಮುದ್ದು ಮಾಡುತ್ತಾ ಚಂದ್ರ ನಗುತ್ತಾರೆ. ’ಆದರೆ ಹೋದವಾರ ನಾನು ಸಂತೆಯಲ್ಲಿ ಅವುಗಳಿಗಾಗಿ ಕ್ಯಾರೆಟ್ ಕೊಳ್ಳುತ್ತಿದ್ದಾಗ ಯಾರೋ ಅವು ಮಾರಾಟಕ್ಕಿದೆಯಾ ಎಂದು ಕೇಳಿದರು’ ಮುಂದೆ ಅವುಗಳನ್ನು ಲಾಭಕ್ಕೆ ಮಾರಬಹುದು ಎಂದು ಯೋಚಿಸುತ್ತಾರೆ.
![Iniya walks behind, as her mother carries home a sack of produce](/media/images/07-F86A1039-AP_Small_farmer_big-heart_mira.max-1400x1120.jpg)
ತಾಯಿಯ ಬೆನ್ನು ಹತ್ತಿರುವ ಮಗ ಇನಿಯಾ
ಚಂದ್ರ ಯೋಚಿಸುವುದು ಹಾಗೆ, ಒಂದು ಕೆಟ್ಟ ಪರಿಸ್ಥಿತಿಯಲ್ಲೂ ಒಳ್ಳೆಯದೇನನ್ನೋ ಹುಡುಕುತ್ತಾರೆ ಆಕೆ. ಹಾಗೆ ಹುಡುಕುವಾಗ ಲಘುವಾಗಿ ನಗುತ್ತಿದ್ದರೂ ಆಕೆಯ ಬುದ್ಧಿವಂತಿಕೆ ಪ್ರಖರವಾಗಿರುತ್ತದೆ. ಅಲ್ಲೇ ಇದ್ದ ತೆಂಗಿನ ಮರಗಳನ್ನು ಹಾದುಹೋಗುವಾಗ ಆಕೆ ಬೇಸರದಿಂದ ಈಗೀಗ ತೆಂಗಿನಮರ ಹತ್ತುವುದನ್ನು ಬಿಟ್ಟಿದ್ದೇನೆ ಎಂದರು ’ಹೇಗೆ ಹತ್ತಲಿ, ನಾನೀಗ ಎಂತು ವರ್ಷದ ಮಗನ ತಾಯಿ’ ಎಂದು ಆಡುತ್ತಲೇ ಮರುಕ್ಷಣದಲ್ಲಿ ಆಕೆ ಬೇರೆ ರಾಜ್ಯಗಳಿಂದ ಬಂದ ವಲಸೆಗಾರರು, ಚೆನ್ನೈನ ಪ್ರವಾಹ, ರೈತರನ್ನು ಕಂಡರೆ ಇರುವ ತಾತ್ಸಾರ ಎಲ್ಲದರ ಬಗ್ಗೆ ಮಾತನಾಡುತ್ತಾ ಹೋಗುತ್ತಾರೆ. ’ಯಾವುದಾದರೂ ಆಫೀಸಿಗೋ, ಬ್ಯಾಂಕಿಗೋ ಏನಾದರೂ ಕೆಲಸದ ಮೇಲೆ ಹೋದರೆ ನನ್ನನ್ನು ಮೂಲೆಯಲ್ಲಿ ನಿಂತು ಕಾಯಲು ಹೇಳುತ್ತಾರೆ. ಅನ್ನ ಬೆಳೆಯುವ ರೈತರಿಗೆ ಅಲ್ಲಿರುವ ಕುರ್ಜಿಗಳು ಸಿಕ್ಕುವುದಿಲ್ಲ,’ ಚಂದ್ರ ನಗುನಗುತ್ತಾ ಮಾತನಾಡುತ್ತಲೇ ವಾಸ್ತವವನ್ನು ನಮ್ಮೆದುರಿಗೆ ನಿಲ್ಲಿಸುತ್ತಾರೆ..
ಅನುವಾದ : ಎನ್ ಸಂಧ್ಯಾರಾಣಿ ಅವರು ಕನ್ನಡದ ಲೇಖಕ/ವಿಮರ್ಶಕರು. 'ಅವಧಿ' ಅಂತರ್ಜಾಲ ಪತ್ರಿಕೆಯ ಉಪ ಸಂಪಾದಕಿ. 'ಯಾಕೆ ಕಾಡುತಿದೆ ಸುಮ್ಮನೆ ನನ್ನನು..' ಇವರ ಕೃತಿ .