ಅದೊಂದು ದಿ ಬೆಸ್ಟ್ ಎನ್ನಬಹುದಾದ ಹೀರೋ ಎಂಟ್ರಿಯಾಗಿತ್ತು. ಅದುವರೆಗೆ ಆರು ಜನ ಗಂಡಸರು ಕುಳಿತು ಹಲಸಿನ ಕೆಲಸ ಹೆಂಗಸಿಗಲ್ಲ ಎಂದು ಠರಾವು ಹೊರಡಿಸುತ್ತಿದ್ದರು. ಅವರು ಅದರ ಸಾಗಾಟ, ಆ ಭಾರ ಎತ್ತುವಿಕೆ ಇತ್ಯಾದಿ ಕುರಿತು ಪರಿಪರಿಯಾಗಿ ಹೇಳುತ್ತಿದ್ದರು. ಆ ಹೊತ್ತಿಗೆ ಸರಿಯಾಗಿ ಹಳದಿ ಸೀರೆಯುಟ್ಟು, ಬೆಳ್ಳಿ ಕೂದಲನ್ನು ತುರುಬು ಕಟ್ಟಿ, ಮೂಗು ನತ್ತು ಮತ್ತು ಕಿವಿಯೋಲೆ ತೊಟ್ಟಿದ್ದ ಲಕ್ಷ್ಮಿ ಅಲ್ಲಿಗೆ ಬಂದರು. ಆಗ "ಅವರು ವ್ಯವಹಾರದಲ್ಲಿ ಪ್ರಮುಖ ವ್ಯಕ್ತಿ," ಎಂದು ಒಬ್ಬ ರೈತ ಗೌರವಯುತವಾಗಿ ಘೋಷಿಸಿದ.
"ನಮ್ಮಉತ್ಪನ್ನಗಳಿಗೆ ಬೆಲೆಯನ್ನು ನಿಗದಿಪಡಿಸುವವರು ಅವರೇ."
65 ವರ್ಷದ ಎ. ಲಕ್ಷ್ಮಿ, ಪನ್ರುಟ್ಟಿಯಯ ಏಕೈಕ ಮಹಿಳಾ ಹಲಸು ವ್ಯಾಪಾರಿ - ಇಂದು ಯಾವುದೇ ಕೃಷಿ ವ್ಯವಹಾರದಲ್ಲಿ ಇರಬಹುದಾದ ಕೆಲವೇ ಕೆಲವು ಹಿರಿಯ ಮಹಿಳಾ ವ್ಯಾಪಾರಿಗಳಲ್ಲಿ ಅವರೂ ಒಬ್ಬರು.
ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿರುವ ಪನ್ರುಟ್ಟಿ ಪಟ್ಟಣವು ಹಲಸಿನ ಬೆಳೆಗೆ ಹೆಸರುವಾಸಿಯಾಗಿದೆ. ಇಲ್ಲಿ ಈ ಹಣ್ಣಿನ ಋತುವಿನಲ್ಲಿ ಪ್ರತಿದಿನ ಟನ್ನುಗಟ್ಟಲೆ ಹಣ್ಣುಗಳನ್ನು ಖರೀದಿಸಿ ಮಾರಾಟ ಮಾಡಲಾಗುತ್ತದೆ. ಈವರ್ಷ, ಲಕ್ಷ್ಮಿ ಸಾವಿರಾರು ಕಿಲೋ ಹಣ್ಣುಗಳಿಗೆ ಬೆಲೆಯನ್ನು ನಿಗದಿಪಡಿಸುತ್ತಾರೆ, ಅದನ್ನು ಪಟ್ಟಣದ ಹಲಸಿನ ಮಂಡಿಗಳಾಗಿ ಕಾರ್ಯನಿರ್ವಹಿಸುವ 22 ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಅವರು ಒಂದು ಸಣ್ಣ ಕಮಿಷನ್ ಮೊತ್ತವನ್ನು ಇದಕ್ಕಾಗಿ ಗಳಿಸುತ್ತಾರೆ - ಪ್ರತಿ 1,000ಕ್ಕೆ 50 ರೂಪಾಯಿಗಳು - ಖರೀದಿದಾರರಿಂದ. ರೈತರು ಬಯಸಿದರೆ ಅವರಿಗೆ ಸ್ವಲ್ಪ ಹಣ ಕೊಡಬಹುದು. ಈ ಋತುವಿನಲ್ಲಿ ಅವರ ದೈನಂದಿನ ಆದಾಯವು 1,000ರಿಂದ 2,000 ರೂಪಾಯಿಗಳ ನಡುವೆ ಇರುತ್ತದೆನ್ನುವುದು ಅವರ ಅಂದಾಜು.
ಈ ಮೊತ್ತವನ್ನು ಗಳಿಸಲು ಅವರು ದಿನವೊಂದಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರು ಬೆಳಗಿನ ಜಾವ ಒಂದು ಗಂಟೆಗೆದ್ದು ಕೆಲಸ ಆರಂಭಿಸುತ್ತಾರೆ. "ಸಾಕಷ್ಟು ಸರಕ್ಕು (ಸರಕುಗಳು) ಇದ್ದರೆ, ವ್ಯಾಪಾರಿಗಳು ನನ್ನನ್ನು ಕರೆತರಲು ಮುಂಚಿತವಾಗಿ ಮನೆಗೆ ಬರುತ್ತಾರೆ," ಎಂದು ಲಕ್ಷ್ಮಿ ವಿವರಿಸುತ್ತಾರೆ. ಇತ್ತೀಚೆಗೆ ಅವರು ಬೇಗ ಹೋಗಿದ್ದೆಂದರೆ ಬೆಳಗಿನ ಜಾವ ಮೂರಕ್ಕೆ. ಅವರ ʼದಿನʼದ ಕೆಲಸ ಮಧ್ಯಾಹ್ನ ಒಂದು ಗಂಟೆಯ ತನಕ ಸಾಗುತ್ತದೆ. ಮಧ್ಯಾಹ್ನ ಮನೆಗೆ ಬಂದವರು ಮಲಗಿದರೆ ಮತ್ತೆ ಮಾರುಕಟ್ಟೆಗೆ ಹೋಗುವ ತನಕ ವಿರಾಮ ಪಡೆಯುತ್ತಾರೆ…
"ಹಲಸನ್ನು ಬೆಳೆಯುವ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ," ಎಂದು ಅವರು ಹೇಳುತ್ತಾರೆ, ಅವರ ಧ್ವನಿ ಗಂಟೆಗಟ್ಟಲೆ ಮಾತನಾಡುವುದು ಮತ್ತು ಕೂಗುವುದನ್ನು ಮಾಡಿ ಒಡಕಲಾಗಿತ್ತು. "ಆದರೆ ನನಗೆ ಮಾರಾಟದ ಬಗ್ಗೆ ಸ್ವಲ್ಪ ತಿಳಿದಿದೆ." ಲಕ್ಷ್ಮಿ ವಿನಯದಿಂದ ಹೇಳುತ್ತಾರೆ. ಅಷ್ಟಕ್ಕೂ, ಅವರು ಮೂರು ದಶಕಗಳಿಂದ ವ್ಯಾಪಾರಿಯಾಗಿ ಈ ಉದ್ಯೋಗ ಮಾಡುತ್ತಿದ್ದಾರೆ, ಮತ್ತು ಅದಕ್ಕೂ ಮೊದಲು, 20 ವರ್ಷಗಳವರೆಗೆ, ಅವರು ಚಲಿಸುವ ರೈಲುಗಳಲ್ಲಿ ಹಣ್ಣನ್ನು ಮಾರಾಟ ಮಾಡುತ್ತಿದ್ದರು.















